Wednesday, May 06, 2009

ಬೆಂಗಳೂರ್ ಹೋಯ್ತು ಬಫೆಲೋ ಬಂತು - ಡುಂ! ಡುಂ!

’ಲೋ, ಒಳ್ಳೇ ನಾಯ್ಕನನ್ನೇ ಆರ್ಸಿಕೊಂಡಿದ್ದೀರಿ ಕಣ್ರೋ!’ ಎಂದಿದ್ದು ಇನ್ಯಾರು ಅಲ್ಲ - ನಮ್ ಸುಬ್ಬ.
ಸುಮ್ನೇ ಕುಶಾಲಕ್ಕೆ ’ಹೆಂಗಿದ್ಯೋ?’ ಅಂತ ಫೋನ್ ಕಾಲ್ ಮಾಡಿದ್ರೆ ತಗಳಾಪ್ಪಾ ಪೂರ್ತಿ ರಾಮಾಯ್ಣನೇ ಶುರು ಹಚ್ಚಿಕೊಂಬಿಟ್ನಲ್ಲಾ!

ಮತ್ತೆ ಮುಂದುವರೆಸುತ್ತಾ, ’...ಬೆಂಗ್ಳೂರಿಗೂ ಬಫೆಲೋಗೂ ಎಲ್ಲಿಯ ಹೋಲಿಕೆ ಹೊಂದಾಣಿಕೆ, ಏನೋ ಕರಿಯರ ನಾಯ್ಕ ಅಂತ ಸುಮ್ನೇ ಇದ್ದಿದ್ದಕ್ಕೆ ಸಪೋರ್ಟ್ ಮಾಡಿದ್ದಕ್ಕೆ ತಂದ್ನಲ್ಲಪ್ಪಾ ಕಾಣಿ. ಒಂದಿಷ್ಟ್ ಜನ ಅವ್ನನ್ನ ಮುಸ್ಲಿಮ್ ಅಂತಾರೆ, ಒಂದಿಷ್ಟ್ ಜನ ಅವನನ್ನ ಬಿಳಿಯ ಅಂತಾರೆ, ಒಂದಿಷ್ಟು ಜನ ಅವನೇ ದೇವ್ರು ಅಂತ ಕೊಂಡಾಡ್ತಾರೆ, ಒಳ್ಳೇ ಬ್ರೂಸ್ ಆಲ್‌ಮೈಟ್ ಕಥೆ ಆಯ್ತು ನೋಡು!’ ಎಂದು ಸುಮ್ಮನಾದ.

’ಯಾರೋ ಮುಸ್ಲೀಮ್, ಅವನೋ ಚರ್ಚಿಗೆ ಹೋಗೋ ಒಳ್ಳೇ ಕ್ರಿಶ್ಚಿಯನ್ನ್ ಅಲ್ವೇ?’ ಎನ್ನೋ ಪ್ರಶ್ನೆಯನ್ನ ತಾಳಲಾರದೆ ತಾಳಿಕೊಂಡು,
’ಲೋ, ಹುಸೇನ್ ಅಂತ ಮಿಡ್ಲ್ ನೇಮ್ ಇಟ್ಟುಕೊಂಡು ಮಿಡ್ಲ್ ಈಸ್ಟ್ ನಲ್ಲಿ ಪಾಪ್ಯುಲ್ಲರ್ ಅಗೀರೊ ಬರಾಕ್ ಅಂದ್ರೆ ಏನ್ ಅಂತ ತಿಳುಕೊಂಡಿದೀಯಾ? ಬರಾಕ್‍ಗೆ ಬಹು ಪರಾಕ್! ಹಹ್ಹಹ್ಹ...’ ಎಂದು ದೊಡ್ಡದಾಗಿ ನಗಾಡಿದ.

’ಹ್ಞೂ, ಅದಿರ್ಲಿ, ಬೆಂಗ್ಳೂರಿನವರು ಏನಂತಾರೆ?’

’ಬೆಂಗ್ಳೂರಿಗೂ ಬಫೆಲ್ಲೋಗೂ ಏನು ತಾಳೆ ಗುರುವೇ? ವರ್ಷದ ಆರು ತಿಂಗಳು ಆರು ಅಡಿ ಸ್ನೋನಲ್ಲಿ ಮುಚ್ಚಿರೋ ನಗರಕ್ಕೂ ಸೌತ್ ಇಂಡಿಯನ್ ಸ್ವರ್ಗಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಈ ನನ್ ಮಕ್ಳು ನಮ್ಮಲ್ಲಿನ ರಸವನ್ನೆಲ್ಲ ಹೀರಿಕೊಂಡು ಈಗ ಸಿಪ್ಪೆ ಬಿಸಾಡಿದ ಹಾಗಾಯ್ತು. ನನ್ ಕೇಳಿದ್ರೆ ಔಟ್‌ಸೋರ್ಸಿಂಗ್ ವಿರುದ್ಧ ತಿರುಗಿ ಬಿದ್ದಿರೋ ಅಮೇರಿಕನ್ಸ್ ನೀತಿ ವಿರೋಧಿಸಿ ದೊಡ್ಡ ರ್ಯಾಲಿ ಆಗಬೇಕು. ಏನ್ ಆದ್ರೆ ಏನಂತೆ, ಇವೆಲ್ಲ ಕ್ವಾಣನ ಮುಂದೆ ಕಿನ್ನರಿ ಬಾರಿಸಿದಂಗೇ ಸೈ’.

’ಅಂದ ಹಾಗೆ, ನ್ಯೂ ಯಾರ್ಕ್ ರಾಜ್ಯದ ಬಫೆಲ್ಲೋಗೂ ಕಾಡು ಎಮ್ಮೆಗೂ ವ್ಯತ್ಯಾಸವಿದೆ ಗೊತ್ತಲ್ವಾ? ನಮ್ ನ್ಯೂಸ್ ಪೇಪರ್ರ್‌ಗಳು ಎಮ್ಮೆ-ಕ್ವಾಣ ಅಂತ ಬರೆಯೋಕ್ ಮುನ್ನ ಸ್ವಲ್ಪ ಯೋಚಿಸ್ಲಿ ಅಂತ ಹೇಳ್ದೆ ಅಷ್ಟೇ...’

’ಏನಾದ್ರೂ ಹಾಳಾಗ್ ಹೋಗ್ಲಿ ಬಿಡು, ಈಗಿನ ಕಾಲ್ದಲ್ಲಿ ನ್ಯೂಸ್ ಪೇಪರ್ ಓದೋರ್ ಯಾರು? ಎಲ್ಲರೂ ದಿವಾಳಿ ಆಗ್ಲಿ, ಅಡ್ವರ್‌ಟೈಸ್ ರೆವಿನ್ಯೂ ನಂಬಿಕೊಂಡಿರೋ ನ್ಯೂ ಯಾರ್ಕ್ ಟೈಮ್ಸ್ ಬಂಡವಾಳವೇ ಅಲುಗಾಡ್ತಾ ಇರುವಾಗ ಇನ್ನು ರೀಜನಲ್ಲ್ ನ್ಯೂಸ್ ಪ್ರಿಂಟ್‌ಗಳ ಕಥೆ ದೇವ್ರೆ ಕಾಪಾಡ್‌ಬೇಕು.’

’ಮತ್ತೇನಾದ್ರೂ ಇದೆಯಾ? I got to go' ಎಂದೆ.

’ಏನೂ ಇಲ್ಲ, ಬೆಂಗ್ಳೂರ್ ಹೋಯ್ತು, ಬಫೆಲ್ಲೋ ಬಂತು, ಡುಂ, ಡುಂ!’ ಎಂದ, ಕಾಲ್ ಕತ್ತರಿಸಿದೆ.

Thursday, April 30, 2009

ವರ್ಚುವಲ್ಲ್ ಪ್ರಪಂಚದ ಲೀಲೆ

ನನಗೆ ಅವಾಗಾವಾಗ ’ನೀವು ಆರ್ಕುಟ್‌ನಲ್ಲಿದ್ದೀರಾ?’, ’ಟ್ವಿಟ್ಟರ್ರ್ ನಲ್ಲಿದ್ದೀರಾ?’ ಮುಂತಾಗಿ ಪ್ರಶ್ನೆಗಳು ಬರ್ತಾನೇ ಇರ್ತವೆ. ನಾನು ಅಂತಹ ಪ್ರಶ್ನೆಗಳಿಗೆ ’ಟು ಡು ವಾಟ್?’ ಅನ್ನೋ ಮತ್ತೊಂದು ಪ್ರಶ್ನೆ ಎಸೆದು ಉತ್ರ ಕೊಡ್ತೀನಿ. ನನಗೆ ಸಿಗೋ ಎಲ್ಲ ಉತ್ತರ ಅಥವಾ ಸಮಜಾಯಿಷಿಗಳೂ ಇವೆಲ್ಲಾ ಸೋಷಿಯಲ್ಲ್ ನೆಟ್‌ವರ್ಕಿಂಗ್ ಸೈಟ್‌ಗಳು, ಅಲ್ಲಿಗೆ ಬಂದೂ ಹೋಗಿ ಮಾಡೋದ್ರಿಂದ ನಿಮ್ಮ ನಿಮ್ಮ ನೆಟ್‌ವರ್ಕ್ ಅಭಿವೃದ್ಧಿ ಆಗುತ್ತೆ ಅನ್ನೋ ರೀತಿ ಇರುತ್ವೆ. ನಾನಂತೀನಿ, ’ನಮ್ಮ ಸುತ್ ಮುತ್ಲು ಇರೋರ ಜೊತೆ ಬೆರೆತುಕೊಂಡಿರೋದೇ ದೊಡ್ಡ ಸವಾಲಾಗಿದೆ ಇನ್ನು ಈ ವರ್ಚುವಲ್ ಪ್ರಪಂಚದವರ ಜೊತೆ ಏಗೋದು ಯಾರೂ ಅಂತ?’

ನೀವೇ ಯೋಚ್ನೆ ಮಾಡಿ, ಎಷ್ಟೊಂದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಿವೆ ಅಂತಾ - ಆರ್ಕುಟ್ಟು, ಫೇಸ್‌ಬುಕ್, ಮೈಸ್ಪೇಸ್, ಟ್ವಿಟ್ಟರ್ ಮುಂತಾಗಿ. ಇವುಗಳಿಗೆಲ್ಲ ಒಂದೊಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡಿರಬೇಕು, ಅವಕ್ಕೆಲ್ಲ ಒಂದೊಂದು ಯೂಸರ್ ಐಡಿ ಪಾಸ್‌ವರ್ಡ್. ಜೊತೆಗೆ ಅಲ್ಲಿ ಬಂದು ಹೋಗೋರ ಜೊತೆಯಲ್ಲ ಸಂಭಾಷಣೆ ಮಾಡುತ್ತಾ ಇರೋದಕ್ಕೆ ಟೈಮಾದ್ರೂ ಯಾರ ಹತ್ರ ಇದೆ ಅನ್ಸೋಲ್ವ? ನಾನು ತಮಾಷೆಯಾಗಿ ಹೇಳೋದೇನು ಅಂದ್ರೆ, ಒಂದಲ್ಲ ಒಂದು ದಿನ ಈ ಸೈಟುಗಳೆಲ್ಲ ಗೂಗಲ್ಲೋ, ಮೈಕ್ರೋಸಾಫ್ಟ್‌ನವರೋ ಮರ್ಜ್ ಮಾಡೋ ಕಾಲ ಬರುತ್ತೆ, ಆಗ ನಾನು ಒಂದೇ ಒಂದು ಅಕೌಂಟ್ ಓಪನ್ ಮಾಡಿಕೊಂಡಿರ್ತೀನಿ ಅಂತ.

ಇನ್ನೂ ಮುವತ್ತರ ಹರೆಯದಲ್ಲಿದ್ದುಕೊಂಡೇ ನಾನು ಇಷ್ಟೊಂದು ಔಟ್‌ಡೇಟೆಡ್ ಆಗಿ ಹೋದ್ತಾ ಅನ್ನೋ ಹೆದರಿಕೆ ಒಂದು ಕಡೆ. ಛೇ, ಪ್ರಪಂಚದ ಆರು ಬಿಲಿಯನ್ ಜನರಲ್ಲಿ ಕನಿಷ್ಠ ಮೂರು ಬಿಲಿಯನ್ನ್ ಜನರಾದ್ರೂ ಇನ್ನೂ ಫೋನಿನ ಡಯಲ್ ಟೋನ್ ಕೇಳದೇ ಇರೋ ಪರಿಸ್ಥಿತಿ ಇರೋವಂತ ಸಮಯದಲ್ಲಿ ನನ್ನಂಥವರು ಔಟ್‌ಡೇಟೆಡ್ ಅಗೋದಾದ್ರೂ ಹೇಗೆ ಅನ್ನೋ ಸಮಾಧಾನ ಜೊತೆಗೆ. ಇ-ಮೇಲ್, ಫೋನ್ ಹಾಗೂ ಮುಖತಃ ಭೇಟಿ ಮಾಡುವ ಸಂದರ್ಭಗಳಲ್ಲಿ ನಾವು ನಮ್ಮನ್ನು ಚೆನ್ನಾಗಿ ತೊಡಗಿಸಿಕೊಂಡ್ರೆ ಸಾಕು ಸಂಬಂಧಗಳು ಬೆಳೆಯೋದಕ್ಕೆ, ಇವಿಷ್ಟರ ಜೊತೆಗೆ ಅಲ್ಲಿ-ಇಲ್ಲಿ ವೆಬ್ ಸೈಟ್‌ಗಳಲ್ಲಿ ಹೋಗಿ ’ಇಂದು ನಾನು ಇಂಥಾ ತಿಂಡಿ ತಿಂದೆ’, ’ಅವನು ಅಲ್ಲಿ ಅಷ್ಟೊಂದು ರನ್ ಹೊಡೆದ’ ಅಂತೆಲ್ಲ ’ವಾಲ್’ ಮೇಲೆ ಬರೆದುಕೊಳ್ಳೋದ್ರಿಂದ ಏನ್ ಪ್ರಯೋಜನ ಅಂತ ನನಗಿನ್ನೂ ಕನ್ವಿನ್ಸ್ ಆಗಿಲ್ಲ ನೋಡಿ.

ನಾನು ಹಳೇ ಕಾಲದವನು ಆಗೋ ಕಾಲ ಹತ್ರ ಬರ್ತಾ ಇದೆ, ಅಂತ ನೀವೆಲ್ಲ ನಗಬಹುದು. ನನ್ನ ಪ್ರಕಾರ, ಕೈಯಲ್ಲಿರೋ ಐದು ಸಾವಿರ ಡಾಲರ್ ವಾಚಾಗ್ಲಿ ಅಥ್ವಾ ಬೆಂಗಳೂರಿನಲ್ಲಿ ಐವತ್ತು ರೂಪಾಯಿಗೆ ಸಿಗೋ ವಾಚಾಗ್ಲಿ ಮುಖ್ಯವಲ್ಲ್ - ಸಮಯವನ್ನ ಚೆನ್ನಾಗಿ ಬಳಸೋರು, ಅವರ ಕೈಯಲ್ಲಿ ಯಾವ ವಾಚ್ ಇದ್ರೂ ಇಲ್ದೇ ಇದ್ರೂ, ಸಮಯದ ಉಪಯೋಗವನ್ನು ಚೆನ್ನಾಗಿ ಮಾಡಿಕೊಳ್ತಾರೆ. ಅದೂ ಅಲ್ದೇ, ಈ ಸಂಬಂಧಗಳು ಅನ್ನೋದೆಲ್ಲ, ತೋಟದಲ್ಲಿ ಒಂದು ಗಿಡ ನೆಟ್ಟ ಹಾಗೆ, ಅವುಗಳನ್ನು ಚೆನ್ನಾಗಿ ಬೆಳೆಸಿ, ಪೋಷಿಸದೇ ಹೋದ್ರೇ ಸತ್ತೇ ಹೋಗ್ತಾವೆ. ಹಾಗಿರಬೇಕಾದ್ರೆ, ನನ್ನ ಸುತ್ತು ಮುತ್ಲೂ ಇರೋ ಸಂಬಂಧಗಳನ್ನು ನಾನು ಆತುಕೊಳ್ಳಲೋ ಅಥ್ವಾ ಜೊತೆಗೆ ಒಂದಿಷ್ಟು ವರ್ಚುವಲ್ಲ್ ಪ್ರಪಂಚದ ಲಿಂಕುಗಳನ್ನೂ ಪೋಣಿಸಿಕೊಳ್ಳಲೋ? ಅನ್ನೋ ಸಂಧಿಗ್ಧ ಬೇರೆ.

ಇಂಟರ್‌ನೆಟ್ ಈಗ ತಾನೆ ಕಣ್ಣು ತೆರೀತಾ ಇದೆ, ಕೇವಲ ಒಂದೂವರೆ ದಶಕದಷ್ಟು ಹಳೆಯದಾದ ಈ ತಂತ್ರಜ್ಞಾನಕ್ಕೆ ಇನ್ನೂ ದೊಡ್ಡ ಭವಿಷ್ಯವಿದೆ. ಈ ಇಂಟರ್‌ನೆಂಟ್ ಸೈಟ್‌ಗಳು ನಮ್ಮೂರಿನ ಪಬ್ಲಿಕ್ ಲೈಬ್ರರಿಗಳಾಗೋ ಮುನ್ನ ಬಹಳಷ್ಟು ಬೆಳವಣಿಗೆ ಖಂಡಿತ ಇದೆ. ನಾವೆಲ್ಲ ಮುದುಕರಾಗೋಷ್ಟೋತ್ತಿಗೆ ಇನ್ನೂ ಏನೇನು ಬದಲಾವಣೆಗಳು ಬಂದು ಹೋಗ್ತಾವೋ ಕಾಣೆ. ನಮ್ಮ ಸುತ್ತು ಮುತ್ಲೂ ಇರೋ ಖಾಲಿ ಜಾಗಗಳ್ಳಲ್ಲಿ - ಅಂದ್ರೆ ಅದು ರೆಫ್ರಿಜರೇಟರ್ರಿನ ಸೈಡ್ ಆಗಿರಬಹುದು, ಆಥವಾ ಅಟ್ಟದ ಮೇಲಿನಿಂದ ಇಳಿಯುವಾಗ ಸಿಗೋ ಗೋಡೆ ಮೇಲಿನ ಖಾಲಿ ಜಾಗವಾಗಬಹುದು, ಅಥವಾ ಕಾರಿನ ವಿಂಡ್‌ಶೀಲ್ಡ್ ಇನ್ನು ಮುಂತಾದ ಫ್ಲಾಟ್ ಜಾಗಗಳು ಫ್ಲಾಟ್‌ಸ್ಕ್ರೀನ್ ಆಗಿ ಮಾರ್ಪಾಡಾಗೋ ಕಾಲ ದೂರವಿಲ್ಲ. ವರ್ಚುವಲ್ಲ್ ಆಗಲಿ ರಿಯಲ್ ಆಗಲಿ ಈ ಪ್ರಪಂಚ ಇಷ್ಟೇ, ಯಾವಾಗ್ಲೂ ಬೆಳಿತಾನೇ ಇರುತ್ತೆ. ಇವುಗಳಿಗೆಲ್ಲ ಸ್ಪಂದಿಸೋದಕ್ಕೆ, ಇವುಗಳ ಜೊತೆ ಏಗೋದಕ್ಕೆ ಸಮಯ ಮಾತ್ರ ಸಿಗೋದಿಲ್ಲ ಅಷ್ಟೇ.

Monday, April 13, 2009

ನಿಂತ ಮೇಲೆ ಹಾಸ್ಯ!

ಹತ್ತನೇ ಕ್ಲಾಸ್ ವರೆಗೆ ಕನ್ನಡ ಮೀಡಿಯಮ್‌ನಲ್ಲಿ ಓದಿರೋ ನನ್ನಂಥವರಿಗೆ Stand-up comedy ಅನ್ನೋದನ್ನ ಕನ್ನಡಕ್ಕೆ ಭಾಷಾಂತರ ಮಾಡಿ ಅಂದ್ರೆ, ಅದನ್ನ ’ನಿಂತ-ಮೇಲೆ ಹಾಸ್ಯ!’ ಅಂತ ಮಾಡಿಬಿಡ್ತೀನೇನೋ ಅನ್ನೋದು ನನ್ನ ಹೆದರಿಕೆ. ಉದಯ ಟಿವಿಯಲ್ಲಿ ಬರ್ತಾ ಇದ್ದ ನಗೆ ಸಖತ್ ಸವಾಲನ್ನು ನೋಡಿದಾಗಲೆಲ್ಲ ನಮ್ಮ ಜನರಿಗೆ ಹಾಸ್ಯದ ಚುರುಕು ಇತ್ತೀಚೆಗೆ ಬಹಳ ತಾಗಿದೆ ಅನ್ನಿಸ್ತಾ ಇತ್ತು, ಆದ್ರೆ ಜೊತೆಯಲ್ಲಿ ಇನ್ನೂ ಅವರಿವರು ಬಾವಿಗಳಲ್ಲಿ ಬೀಳಿಸ್ಕೊಂಡಿರೋ ವಾಚ್‌ಗಳಿಗೆ ಕೀಲಿ ಕೊಡೋದರಲ್ಲೇ ನಮ್ಮ ಜೋಕ್ ಮಾರರು ತಮ್ಮ ಸರ್ವಸ್ವವನ್ನೂ ಪಣಕ್ಕೆ ಇಟ್ಟ ಹಾಗೆ ಕಾಣಿಸ್ತಾನೂ ಇತ್ತು.

ಕಾಮಿಡಿ-ಹಾಸ್ಯ-ತಮಾಷೆ-ನಗೆ ಅಂತ ಹುಡುಕ್ತಾ ಹೋದ್ರೆ ಎಷ್ಟು ಜನ ತಮ್ಮ ಒರಿಜಿನಲ್ ಕಂಟೆಂಟ್ ಅನ್ನ ತಮ್ಮ ಒರಿಜಿನಲ್ ಶೈಲಿಯಲ್ಲಿ ಪ್ರದರ್ಶನ ನೀಡಿ ಪ್ರಖ್ಯಾತರಾಗಿದ್ದಾರೆ, ಅದರಲ್ಲಿ ಕನ್ನಡಿಗರ ಪಾಲು ಎಷ್ಟು ಅಂತ ಅನ್ನೋದು ದೊಡ್ಡ ಸವಾಲೇ ಸರಿ. ನನ್ನ ಮಟ್ಟಿಗೆ ಅಮೇರಿಕದ ಜಾರ್ಜ್ ಕಾರ್ಲಿನ್ ಕಾಮಿಡಿ ಬಹಳ ಹೆಚ್ಚಿನ ಮಟ್ಟದ್ದು ಅನ್ನಿಸ್ತು. ನನ್ನ ಸಹೋದ್ಯೋಗಿಯೊಬ್ಬನನ್ನ ನಿನಗ್ಯಾವ ಕಾಮಿಕ್ಕುಗಳು ಇಷ್ಟ ಅಂತ ಪ್ರಶ್ನೆ ಕೇಳಿದ್ರೆ ಜೆರ್ರಿ ಸೈನ್‌ಫೆಲ್ಡ್ ಅಂದ. ಯಾಕೆ ಅಂದ್ರೆ, ಸೈನ್‌ಫೆಲ್ಡ್ ಜನರ ಬದುಕಿನ ಸೂಕ್ಷ್ಮಗಳನ್ನು ಹಾಸ್ಯವಾಗಿ ಜನರ ಜೊತೆಗೆ ಅಶ್ಲೀಲತೆಯ ಸೋಗಿಲ್ಲದೆ ಹಂಚಿಕೊಂಡವರಲ್ಲಿ ನಿಸ್ಸೀಮ ಎಂದು ತನ್ನ ನಿಲುವನ್ನ ನನ್ನ ಸಹೋದ್ಯೋಗಿ ಹಂಚಿಕೊಂಡ. ನನಗೆ ಆಗ್ಲೇ ಅನ್ಸಿದ್ದು, ಕಾಮಿಡಿ ಅಂದ್ರೆ, ಹೊಲಸು ಭಾಷೆಯ ಬಳಕೆ ಅಥವಾ ದುರ್ಬಳಕೆ ಇರ್ಲೇ ಬೇಕು ಅಂತೇನು ಇಲ್ಲ ಅಂತ.

***

ಯಾರಾದ್ರೂ ಹೊಸದಾಗಿ ಪರಿಚಯವಾದವರು ನನ್ನನ್ನ ಕೇಳೋ ಹಾಗೆ, ’...ಎಲ್ಲಾ ಸೆಟ್ಲ್ ಆಗಿರಬೇಕು ನೀವು ಹಾಗಾದ್ರೆ...’ ಇಲ್ಲಿ ಬಂದು ಇಷ್ಟು ವರ್ಷ ಅದ್ರೂ ಎಲ್ಲೂ ನಾವು ನೆಲೆ ನಿಂತೇ ಇಲ್ಲಾ - ಇನ್ನು ನಿಲ್ಲದ ಮೇಲೆ ಎಲ್ಲಿ ಹಾಸ್ಯ ಅಂತ ಅನ್ನೋ ಪ್ರಶ್ನೆ ಸಹಜವಾಗಿ ಬರುತ್ತೆ. ಅದಕ್ಕೆ ವಿರುದ್ಧವಾಗಿ ಕವಿವಾಣಿ ಬೇರೆ ಅದೇಶ ಕೊಟ್ಟಿದೆ - ’...ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು...’ಎಂದು...ಹೀಗೆ ತಿರುಗಾಡ್ತಾ ಇರೋ ಜೀವನಕ್ಕೇನೇ ಹೆಚ್ಚು ಹೆಚ್ಚು ಐಡಿಯಾಗಳು ಬರೋದು (ಹಾಸ್ಯದ ರೂಪದಲ್ಲಿ) ಅಂತ ಕಾಣ್ಸುತ್ತೆ, ಉದಾಹರಣೆಗೆ ಏರ್‌ಪೋರ್ಟಿನಲ್ಲಿ TSA (Transportation Security Administration) ಅವರನ್ನು Thousands Standing Around! ಅಲ್ಲಿ ಲೈನಿನಲ್ಲಿ ನಿಂತಿರುವ ಜನಸಮೂಹ ಕಿಚಾಯಿಸಬಹುದು.

***

ಹಾಸ್ಯದ ಮೇಲೆ ಮತ್ತೆ ತಮಾಷೆಯಾಗಿ ಬರೀತಾನೇ ಇರ್ತೀನಿ, ಕೊನೇಪಕ್ಷ ’ಅಂತರಂಗ’ ಅಂದ್ರೆ ಅಳುಮುಂಜಿ ಐಡಿಯಾಗಳ ಆಗರ ಮುಖ ಮುದುಡಿಕೊಳ್ಳುವವರನ್ನ ಸಂತೈಸೋಕಾದ್ರೂ. ಇನ್ನು ಕೆಲವರಿಗೆ ಬ್ಲಾಗ್‌ ನಿಂದ ಜೀವನ ದರ್ಶನ ಸಿಗಬೇಕು ಅಂತ ಸಂಕಲ್ಪ ಇದ್ರೆ ಅವರು ತಮ್ಮ ಬಿಸಿನೆಸ್ಸನ್ನ ಬೇರೆ ಎಲ್ಲಾದ್ರೂ ತೊಗೊಂಡು ಹೋಗ್ಲಿ, ಏನಂತೀರಿ?

Sunday, April 05, 2009

ಸಗಣಿಯೊಳಗಿನ ಹುಳಗಳೂ ಬಾವಿ ಕಪ್ಪೆಗಳೂ...



























ಮಾರ್ಚ್ ೨೯ ರ ವಿ.ಕ.ದಲ್ಲಿ ’ಜನಗಳ ಮನ’ದಲ್ಲಿ ರವಿ ರೆಡ್ಡಿ ಹಾಗೂ ಜಗದೀಶ್ ರಾವ್ ಕಲ್ಮನೆಯವರ ಬಗ್ಗೆ ಓದಿ ಹೀಗನಿಸಿದ್ದು ನಿಜ.

ಹ್ಞೂ, ’ಇಂಥವರ ಬಗ್ಗೆ ಎರಡು ಸಾಲು ಬರೆದರೂ ಜಾಗ ವೇಷ್ಟು’ ಎಂದಿದ್ದಾರಲ್ಲವೇ? ಜೊತೆಗೆ, ’...ಬೆಂಗಳೂರು ಸುಧಾರಣೆಯಾಗಬೇಕಿದೆ.’ ಎನ್ನುವ ಕುಹಕ ಅಲ್ಲ, ನಿಜ ಸ್ಥಿತಿ ಬೇರೆ ಕೇಡಿಗೆ.

***

’ನಾವು ಭಾರತೀಯರೂ, ಒಹೋಯ್!’ ಎಂದು ಮೊನ್ನೆ ಮೊನ್ನೆ ತಾನೆ ಅಶ್ವಥ್ ಕೂಗಿ ಹೋಗಿದ್ದರಲ್ಲವೇ? ಸಗಣಿಯೊಳಗಿನ ಹುಳುಗಳಿಗೆ ಅದೇ ಪ್ರಪಂಚ, ಒಂದು ವೇಳೆ ಅವುಗಳನ್ನೇನಾದರೂ ಯಾರಾದರೂ ಎತ್ತಿ ಹೊರಗೆ ಬಿಟ್ಟರೂ ಮತ್ತೆ ಸಗಣಿಯೊಳಗೆ ಸಿಗುವ ಸುಖಕ್ಕೆ ಜೋತು ಬೀಳುವ ಜಾತಿ. ಹಾಗೇ ಬಾವಿ ಕಪ್ಪೆಗಳೂ ಕೂಡ, ತಮ್ಮದೇ ಪ್ರಪಂಚದಲ್ಲಿ ತಾವೇ ದೊಡ್ಡವರು ಎಂದುಕೊಂಡ ಹಾಗೆ.

ಇವೇ ಅತಿರಥ-ಮಹಾರಥರು ಅಮೇರಿಕದ ಸಮ್ಮೇಳನಗಳಿಗೆ ಬಂದಾಗ ಬಾಲ ಮುದುರಿಕೊಂಡು ತಮಗೆ ತೋಚಿದ್ದನ್ನ ಬರೀತಾರೇ ವಿನಾ ಯಾರೊಬ್ಬರ ಹೆಸರಿಗೂ ಮಸಿ ಬಳಿಯುವ ಕಾಯಕಕ್ಕಂತೂ ಕೈಗೂಡಿದ್ದನ್ನ ನಾನು ನೋಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಅಮೇರಿಕದಲ್ಲಿ ಇನ್ನೂ ಮುಗಿಯದೇ ಇದ್ದ ’ಬಾಲ್ಟಿಮೋರ್ ಸಮ್ಮೇಳನ’ವನ್ನು ಈಗಾಗಲೇ ಮುಗಿದು ಹೋಯಿತು ಎಂದು ವರದಿಯನ್ನು ಹೊರಗೆ ಹಾಕಿದ್ದಕ್ಕೂ ಒಂದು ಅಪಾಲಜಿ ಇವುಗಳ ಮುಸುಡಿಯಿಂದ ಹೊರಡಲ್ಲ. ಇದ್ದ ಬದ್ದ ಸುದ್ದಿಗೆ ಒಂದಿಷ್ಟು ಕಣ್ಣೊರೆಸುವ ಚಾಕಚಕ್ಯತೆಯನ್ನು ಮುಟ್ಟಿಸಿ ಸುಳ್ಳಿನ ಮೇಲೆ ನೂರೆಂಟು ಸುಳ್ಳನ್ನು ಹೇಳೋ ಪದ್ಧತಿಯೂ ಇನ್ನೂ ನಿಂತ ಹಾಗಿಲ್ಲ.

***

’ಮೌಲ್ಯ’ವೆಂದರೇನು ಎಂದು ತಿಳಿದು ಅದನ್ನು ಪಚನ ಮಾಡಿಕೊಳ್ಳಲು ಇನ್ನೂ ಒಂದೈದು ಸಾವಿರ ವರ್ಷಗಳಾಗಬೇಕು ನಮಗೆ. ಇನ್ನು ಮೌಲ್ಯವನ್ನು ಆಧರಿಸಿದ ರಾಜಕಾರಣವೆಂದರೇನದು? ನಾವೆಲ್ಲ ಕುರಿಗಳು ಎಂದು ಕವಿಗಳು ಆಡಿ ಅಣಗಿಸಲಿಲ್ಲವೇ? ಅಂಥ ಕುರಿಗಳ ಮಂದೆಗೆ ಅಮೇರಿಕದೊಂದಿಷ್ಟು ಜನ ಪಾಪ ಏನೋ ಸಹಾಯವಾಗಲಿ ಎಂದು ಮನೆ-ಮಠ ಬಿಟ್ಟು, ಇರುವ ರಜಾ ವಜಾ ಮಾಡಿಕೊಂಡು, ಕೈಯಲ್ಲಿನ ಕಾಸು ಕರಗುವ ವರೆಗೂ ಪ್ರಯತ್ನ ಮಾಡುವ ಗೋಜಿಗಾದರೂ ಹೋಗುತ್ತಾರಲ್ಲ ಅದೇ ಮುಖ್ಯ.

ಐವತ್ತು ವರ್ಷಗಳಿಂದ ಚಲಾವಣೆಯಲ್ಲಿದ್ದ ಸಂವಿಧಾನ ಬದ್ಧ ’ಬಾವುಟ ಹಾರಿಸುವ ಕಾಯಿದೆ’ಯನ್ನು ಮುರಿದು ನಮ್ಮ ದೇಶದ ಬಾವುಟವನ್ನು ನಾವು ನಮ್ಮ ಮನೆ ಮುಂದೆ ಹಾರಿಸಿದರೆ ತಪ್ಪೇ? ಎಂದು ಸಾಧಿಸಿಕೊಂಡಿದ್ದು ನಮ್ಮಂಥ ಒಬ್ಬ ಅನಿವಾಸಿಯೇ.
ಅಮೇರಿಕದಲ್ಲಿ ಓದಿಕೊಂಡು, ಸದನದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಮುಂದೆ ಒಬ್ಬ ಪ್ರತಿಭಾವಂತ ಮುಖ್ಯಮಂತ್ರಿ ಎಂದು ಎಸ್. ಎಮ್. ಕೃಷ್ಣ ಹೆಸರು ತೆಗೆದುಕೊಳ್ಳಲಿಲ್ಲವೇ?

***

ಇಂಥವರ ಬಗ್ಗೆ ಬರೀ ಬೇಡ್ರಿ, ನಿಮ್ಮ ಮೂರುಕಾಸ್ ಪತ್ರಿಕೆಯಲ್ಲಿ, ಯಾರ್ ಕೇರ್ ಮಾಡ್ತಾರೆ? ಹಾಗೆ ಬರೆಯದೇ ಉಳಿದ ಜಾಗೆಯಲ್ಲಿ ಅವೇ-ಅವೇ ಪ್ರಭೃತಿಗಳ ದರ್ಶನ ಮಾಡಿಸಿಕೊಂಡು ಸುಖವಾಗಿರಿ. ಲಂಚ, ಭ್ರಷ್ಟಾಚಾರ ಅನ್ನೋದು ಹಾಡು ಹಗಲಿನ ದಂದೆಯಾಗಿದ್ದರೂ ಅದನ್ನು ಇದ್ದ ಹಾಗೆ ಬರೆದು ವರ್ಷಕ್ಕೊಬ್ಬ ಪುಂಡು ರಾಜಕಾರಣಿಯನ್ನಾದರೂ ಜೈಲಿಗೆ ಸೇರಿಸಿದ್ದೇ ನಿಜವಾಗಿದ್ದರೆ ಪತ್ರಿಕೆ ಪಾವನವಾಗುತ್ತಿತ್ತು, ಹಾಗಾಗೋದಿಲ್ಲ ಎಂದ ಮೇಲೆ ತಿಪ್ಪೇ ಸಾರಿಸಿಕೊಂಡೇ ಬಿದ್ದಿರಿ.

ಹೆಂಡ-ಸೀರೆ ಹಂಚಿ ಮತ ತೆಗೆದುಕೊಳ್ಳೋ ನಿಮ್ಮ ದೊರೆಗಳ ಪಾದ ನೆಕ್ಕೊಂಡು ಬಿದ್ದಿರಿ, ಇವತ್ತಲ್ಲ ನಾಳೆ ನಿಮಗೂ ಬೆಳಕಿನ ದರ್ಶನವಾದೀತು. ಬಡವರನ್ನ ದೋಚಿ ಸುಲಿಗೆ ಮಾಡಿ ಜಾತಿ ರಾಜಕಾರಣ ಮಾಡೋರು ನಿಮಗೆಲ್ಲ ಆದರ್ಶವಾಗಲಿ.

ದೇಶ ಬಿಟ್ಟು ಭಾಷೆ ಬಿಟ್ಟು, ಎಲ್ಲರಿಗಿಂತ ಹೆಚ್ಚು ಕೊರಗಿಕೊಂಡು, ಮನಸಲ್ಲಿ ಅಪ್ಪಟ ಮಾನವನಾಗಿ ಬೆಳೆಯೋ ಆಲೋಚನೆಗಳಿಗೆ ದಿನೇದಿನೇ ನೀರು ಕುಡಿಸುತ್ತಾ ಒಂದು ಕಡೆ ಬೇಡವೆಂದರೂ ದೂರ ಹೋಗುವ ಭಾರತೀಯತೆಯನ್ನು ಮತ್ತೊಂದು ಕಡೆ ಗಟ್ಟಿಯಾಗಿ ಅಪ್ಪಿಕೊಂಡೇ ನಾವು ನಿಟ್ಟುಸಿರು ಬಿಡ್ತೀವಿ, ಅವು ನಿಮಗೆಲ್ಲ ಖಂಡಿತ (ಈ ಜನುಮದಲ್ಲಿ) ಅರ್ಥ ಆಗಲ್ಲ ಬಿಡಿ.

Sunday, March 22, 2009

ಸ್ಪ್ರಿಂಗ್ ಬಂತು ಸ್ಪ್ರಿಂಗು

ಮೊನ್ನೆ ಇಲ್ಲೆಲ್ಲಾ ಸ್ಪ್ರಿಂಗ್ ಆರಂಭವಾದ ದಿನ. ಇವತ್ತಾದರೂ ಪರಿಸ್ಥಿತಿ ಹೇಗಿದೆ ನೋಡೋಣ ಎಂದು ಪ್ಯಾಟಿಯೋದಿಂದ ಹೊರಗೆ ನೋಡಿದರೆ ಅಂತಾ ಏನೂ ವಿಶೇಷ ಕಾಣಿಸ್ಲಿಲ್ಲ. ಮರ-ಗಿಡಗಳೆಲ್ಲ ಅವೇ ಗ್ರೇ ಸ್ಕೇಲ್ ಪೇಂಟಿಂಗ್‌ನಲ್ಲಿ ನಿಂತ ಹಾಗೆ ಒಂದಿನಿತೂ ಅಲುಗಾಡದೆ ನಿಂತಿದ್ದವು. ಡೆಕ್ ಮೇಲೆ ಅಮ್ಮ ಚಪಾತಿ ಮಣೆಯ ಮೇಲೆ ಹಿಟ್ಟು ಸವರಿಕೊಳ್ಳೋ ಹಾಗೆ ಒಂದು ಪದರು ಸ್ನೋ ಬಿದ್ದಿತ್ತು. ಹೊರಗಡೆ ಇರೋ ಥರ್ಮಾ ಮೀಟರ್‌ನ ಮುಳ್ಳು ಕೆಟ್ಟು ಹೋಗಿರುವ ಗಡಿಯಾರದಲ್ಲಿ ಮುಳ್ಳುಗಳು ನಿರ್ಜೀವವಾಗಿ ಬಿದ್ದ ಹಾಗೆ ಮುವತ್ತು ಡಿಗ್ರಿಯ (ಫ್ಯಾರನ್‌ಹೈಟ್) ಬಲಮಗ್ಗುಲಿಗೆ ಸತ್ತು ಬಿದ್ದ ಹಾಗಿತ್ತು.

ಈ ಸ್ಪ್ರಿಂಗ್ ನದೇ ವಿಶೇಷ, ಇಲ್ಲಿ ಅದೆಷ್ಟು ವರ್ಷ ಇದ್ದರೂ ನಮಗಿನ್ನೂ ಚರ್ಮದಿಂದ ಕೆಳಗೆ ಇಳಿಯೋದೇ ಇಲ್ಲ. ಸ್ಪ್ರಿಂಗ್‌ಗೆ ಕನ್ನಡದಲ್ಲಿ ಏನಂತಾರೆ ಎಂದು ಡಿಕ್ಷನರಿಯನ್ನು ನೋಡಿದರೆ ಅಲ್ಲೂ ನಿರಾಶೆ ಕಾದಿತ್ತು. ಇವರೋ ವರ್ಷವನ್ನು ಸಮನಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ಪ್ರಿಂಗು, ಸಮ್ಮರ್ರು, ಫಾಲ್ ಹಾಗೂ ವಿಂಟರ್ ಎಂದು ಕರೆದರು. ಆದರೆ ನಮ್ಮ ಚೈತ್ರ, ವೈಶಾಖ ಮಾಸಗಳಾಗಲೀ ವಸಂತ ಋತುವಾಗಲಿ ವರ್ಷವನ್ನು ನೋಡುವ ರೀತಿಯೇ ಬೇರೆ. ಅಲ್ಲದೆ ನಮ್ಮ ಕಡೆಗೆಲ್ಲ ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ಎಂದು ಮಾತನಾಡಿಕೊಂಡಿದ್ದನ್ನು ಕೇಳಿದ್ದೆನೆಯೇ ವಿನಾ ಈ ಸ್ಪ್ರಿಂಗ್ ಬಗ್ಗೆ ಕೇಳಿಲ್ಲ. ಇದನ್ನು ಸುಗ್ಗಿ ಅನ್ನೋಣವೇ, ಸಂಕ್ರಮಣ ಅನ್ನೋಣವೇ, ಯುಗಾದಿ ಅನ್ನೋಣವೇ, ಅಥವಾ ಬಾಯ್ತುಂಬ ಸ್ಪ್ರಿಂಗ್ ಎಂದು ಸುಮ್ಮನಿದ್ದು ಬಿಡೋಣವೆ.

ಇಲ್ಲಿ ಮಂಜಿನ ಹನಿಗಳದೊಂದು ಮತ್ತೊಂದು ವಿಶೇಷ, ಹಗುರವಾಗಿ ನೆಲದ ಮೇಲೆಲ್ಲಾ ಹರಡಿ ಹೂ-ಎಲೆಗಳನ್ನು ಸ್ಪರ್ಶಿಸಿ ಅವುಗಳನ್ನು ತೇವವಾಗಿಡುವುದರ ಬದಲು ಇಳಿಯುವ ಉಷ್ಣತೆಯ ದೋಸ್ತಿಗೆ ಕಟ್ಟುಬಿದ್ದು ಅವೂ ಘನೀಭವಿಸತೊಡಗಿವೆ. ಡಿಸೆಂಬರ್ ಇಪ್ಪತ್ತೊಂದರಿಂದಲೇ ಮೆಜಾರಿಟಿಗೆ ಬಂದ ಸೂರ್ಯನ ಕಿರಣಗಳು ಈಗಾಗಲೇ ತಮ್ಮ ಮಧ್ಯ ವಯಸ್ಸನ್ನು ತಲುಪಿ ಮುದುಕರಂತೆ ಕಂಡು ಬರುತ್ತಿವೆ, ಇನ್ನೇನು ಜೂನ್ ಇಪ್ಪತ್ತೊಂದು ಬರುವಷ್ಟರೊಳಗೆ ಸತ್ತೇ ಹೋದಾವೇನೋ ಎನ್ನೋ ಹಾಗೆ.

ಛಳಿಯಲ್ಲಿ ಇದ್ದು ಬಂದವರಿಗೆ ಬೇಸಿಗೆಯ ಆಸೆ, ಬೇಸಿಗೆಯಲ್ಲಿ ಒಂದೇ ಒಂದಿಷ್ಟು ಬಿಸಿಲಲ್ಲಿ ಬಸವಳಿದು ಹೋದರೂ ತಂಪಾಗಿರಬಾರದೇ ಎನ್ನುವ ತವಕ. ಏನೇ ಅಂದರೂ ಶೇಕ್ಸ್‌ಪಿಯರ್ ಅಂಥವರು - shall I compare thee to a summers day! ಎಂದು ಏಕೆ ಬರೆದರು ಎಂದು ಅನುಭವಿಸಲು ಅಂತಹ ವಾತಾವರಣದಲ್ಲೇ ಇರಬೇಕು ಎನ್ನುವುದು ನನ್ನ ಅಭಿಮತ. ಮಳೆಯಲ್ಲಿ ನೆಂದವರ ಬವಣೆಯನ್ನು ಅರಿಯಲು ಓದುಗರು ಮಳೆಯಲ್ಲಿ ನೆನೆದು ನೋಡಬೇಕಾಗೇನೂ ಇಲ್ಲ, ಆದರೆ ವರ್ಷದ ಎಂಟು ತಿಂಗಳು ಶೀತ ವಾತಾವರಣವನ್ನು ಅನುಭವಿಸಿ ಇರುವ ಒಂದೋ ಎರಡೋ ತಿಂಗಳ ಬೇಸಿಗೆಯ ಸುಖದಲ್ಲಿ ಚಿಗುರುವ ಕವಿಯ ಕಲ್ಪನೆಗಳು ನಮ್ಮ ದಕ್ಷಿಣ ಭಾರತದ ಸುಡು ಬಿಸಿಲಿನಲ್ಲಿ ಹುಟ್ಟಿ ಬೆಳೆದು ಓದಿದವರಿಗೇನು ಗೊತ್ತು?

ನಮಗಿಲ್ಲಿ ಕ್ಯಾಲೆಂಡರಿನಲ್ಲಿ ಹೇಳಿ ಕೊಟ್ಟಂತೆ ಸ್ಪ್ರಿಂಗ್ ಬರುತ್ತದೆ. ಅವಾಗಾವಾಗ ಅಮ್ಮ ನೆನಪಿಸುತ್ತಲೇ ಇರುತ್ತಾಳೆ, ಈ ತಿಂಗಳು ಇಪ್ಪತ್ತೇಳಕ್ಕೆ ಯುಗಾದಿ ಹಬ್ಬ ಇದೆ, ನೀವೂ ಮಾಡಿ ಎಂದು. ನಮಗಿಲ್ಲಿ ಎಳ್ಳೂ-ಬೆಲ್ಲ ಬರಲಿಲ್ಲ, ಮುಂದೆ ಬೇವೂ-ಬೆಲ್ಲವೂ ಇರೋದಿಲ್ಲ. ಇಲ್ಲಿ ನಮಗೆ ಹೊಂಗೆ ಹೂವ ತೊಂಗಲು ಕಣ್ಣಿಗೆ ಕಾಣೋದಿಲ್ಲ, ಯಾವುದೋ ಭಾಷೆಯಲ್ಲಿ ಅದೇನೆಂದೋ ಕರೆಯುವ ಒಂದಿಷ್ಟು ಮರಗಿಡಗಳು ದಾರಿ ಉದ್ದಕ್ಕೂ ಕಾಣ ಸಿಗುತ್ತವೆ, ತಮ್ಮ ಸುತ್ತ ಮುತ್ತಲೂ ಬಣ್ಣದೋಕುಳಿಯನ್ನು ಹರಡಿಕೊಳ್ಳುತ್ತವೆ. ಮಾವಿನೆಲೆಗಳಾಗಲೀ, ಚಿಗುರುಗಳಾಗಲೀ ನೋಡದೇ ಎಷ್ಟೋ ವರ್ಷಗಳೇ ಕಳೆದವೇನೋ, ಅವುಗಳ ಬದಲಿಗೆ ನಮ್ಮ ಮನೆಯ ಬಾಗಿಲಿಗೆ ಯಾವತ್ತೂ ಹಸಿರನ್ನು ತರುವ ಪ್ಲಾಸ್ಟಿಕ್ ಎಲೆಗಳನ್ನು ಪೋಣಿಸಿದ ಸರವೊಂದನ್ನು ನೇತು ಹಾಕಿದ್ದಾಗಿದೆ. ಸಂವತ್ಸರಗಳು ಕೆಲವೇ ಕೆಲವು ನೆನಪಿವೆ. ಆರು ಋತುಗಳನ್ನು ನೆನಪಿಸಿಕೊಳ್ಳಲು ಕನಿಷ್ಠ ಆರು ನಿಮಿಷವಾದರೂ ಬೇಕು, ಚೈತ್ರ-ವೈಶಾಖರನ್ನು ಎಡಬಿಡದೆ ಕಲಿತದ್ದರಿಂದಾಗಿ ಇನ್ನೂ ಸ್ಮೃತಿಪಠಲದಲ್ಲೇ ಇವೆ. ಅಶ್ವಿನಿ-ಭರಣಿ-ಕೃತ್ತಿಕಾ-ರೋಹಿಣಿಯರು ಒಮ್ಮೊಮ್ಮೆ ಪೂರ್ಣ ನೆನಪಿಗೆ ಬರುತ್ತಾರೆ, ಮತ್ತೆ ಇಲ್ಲ. ಯಾವ ಮಳೆ ನಕ್ಷತ್ರ ಯಾವ ತಿಂಗಳಲ್ಲಿ ಎನ್ನುವುದು ನೆನಪಿಗೆ ಗುಡ್ ಬೈ ಹೇಳಿ ಬಹಳ ವರ್ಷಗಳೇ ಆಗಿವೆ. ಯಾವ ಹುಣ್ಣಿಮೆಗೆ ಏನೇನು ವಿಶೇಷ ಎನ್ನುವುದು ಈಗ ಇತಿಹಾಸವಷ್ಟೇ.

ನಮಗಲ್ಲಾದರೆ ಯುಗಾದಿ ಒಂದು ಸಮೂಹದಾಚರಣೆಯಾಗುತ್ತಿತ್ತು. ಒಂದೆರಡು ಬೇವು-ಮಾವಿನ ಮರಗಳನ್ನು ಹತ್ತಿಳಿದು ಎಲೆಗಳನ್ನು ಕಿತ್ತು ತರುತ್ತಿದ್ದೆವು. ಅದೇ ದಿನ ಸಂಜೆಯೋ ಮರುದಿನವೋ ಕಂಡೂ ಕಾಣದ ಚಂದ್ರನ ಗೆರೆಯನ್ನು ತವಕದಿಂದ ಹುಡುಕುತ್ತಿದ್ದೆವು. ನಾವು ತಿಂದು ಹಂಚುವ ಬೇವು-ಬೆಲ್ಲದ ಪ್ರತೀಕ ಬಹಳ ದೊಡ್ಡದಿತ್ತು. ಇಲ್ಲಿ ಸ್ಪ್ರಿಂಗ್ ಬಂದರೆ it's just another day, ಅದೇ ರೀತಿ ಉಳಿದ ದಿನಗಳೂ ಬಂದು ಹೋಗುತ್ತವೆ. ಹಾಗೆ ಬಂದು ಹೋಗುವ ಕಾಲ(ಮಾನ)ಕ್ಕೆ ನಾವು ಒಂದಿಷ್ಟು ಪ್ರತಿರೋಧ ಒಡ್ಡಿದಂತೆ ಮಾಡುತ್ತೇವಾದರೂ ಅಂತಹ ಪ್ರತಿರೋಧದ ಧ್ವನಿಯೂ ನಮ್ಮಲ್ಲೇ ಹುಟ್ಟಿ ಅಲ್ಲೇ ಮುದುರಿಕೊಳ್ಳುವುದು ಈ ಸ್ಪ್ರಿಂಗ್ ಬಂದು ಹೋದಷ್ಟೇ ಸಹಜವಾಗಿ ಹೋಗುತ್ತದೆ.

Friday, March 20, 2009

ನಮ್ಮೂರ ರಸ್ತೆ ಹಾಗೂ ಜನರ ಮನಸ್ಥಿತಿ

"Roads are horrible in India...don't know why people don't realize that and do something about it..." ಎನ್ನೋ ಕಾಮೆಂಟ್ ಅನ್ನು ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಹೇಳೋದನ್ನ ಕೇಳಿದ್ದೇನೆ. ನಮ್ಮ ಭಾರತದ ರಸ್ತೆಗಳೇ ಹಾಗೆ...which ever the road you take it is always a treacherous journey! ಶ್ರೀಮಂತ ದೇಶದ ಜನರಿಗೆ ತೃತೀಯ ಜಗತ್ತಿನ ಅರಿವಾಗುವುದು ಕಷ್ಟ ಸಾಧ್ಯವೂ ಹೌದು. ಅಲ್ಲಿ ಸಾಮಾನ್ಯವಾಗಿ ಕಂಡು ಬರುವ ಲಂಚ, ವಂಚನೆ, ಭ್ರಷ್ಟಾಚಾರ, ಹಿಂಸೆ, ಅನಕ್ಷರತೆ ಮೊದಲಾದವುಗಳನ್ನು ಬೇಕಾದಷ್ಟು ರೀತಿಯಲ್ಲಿ ಪ್ರಶ್ನಿಸಿಕೊಳ್ಳಬಹುದು.

ಒಂದು ದೇಶದ ಉನ್ನತಿ ಆ ದೇಶದಲ್ಲಿ ದೊರೆಯುವ ಸಂಪನ್ಮೂಲ ಹಾಗೂ ಆ ದೇಶದ ಜನರ ಅರಿವಿನ ಮೇಲೆ ಅವಲಂಭಿತವಾಗಿರುತ್ತದೆ. ಹೀಗೆ ಮಾಡಬಹುದು ಅನ್ನೋ ತಂತ್ರಜ್ಞಾನಕ್ಕೂ ಸಹ ಸರಿಯಾದ ಸಲಕರಣೆ ಪರಿಕರಗಳು ಇದ್ದರೆ ಮಾತ್ರ ಆ ತಂತ್ರಜ್ಞಾನವನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಂದು ದೇಶದ ಹವಾಮಾನ ಕೂಡ ಅಲ್ಲಿನ ರಸ್ತೆಗಳ ವಿನ್ಯಾಸ, ಅಗಲ ಹಾಗೂ ಕ್ವಾಲಿಟಿಗಳನ್ನು ನಿರ್ಧರಿಸಬಲ್ಲದು ಎನ್ನುವ ವಿಷಯ ಇತ್ತೀಚೆಗಷ್ಟೇ ಮನಸಿಗೆ ಬಂದಿದ್ದು. ಭೂ ವಿಸ್ತಾರದಲ್ಲಿ ಹೆಚ್ಚಾಗಿಯೂ ಜನ ಸಂಖ್ಯೆಯಲ್ಲಿ ಕಡಿಮೆಯೂ ಇರುವ ದೇಶಗಳ ಸವಾಲಿಗೂ ಅಧಿಕ ಜನಸಂಖ್ಯೆಯ ಸಣ್ಣ ದೇಶಗಳ ಸವಾಲಿಗೂ ಬಹಳ ವ್ಯತ್ಯಾಸವಿದೆ.

ಇಲ್ಲಿ ನಾವಿರುವ ರಾಜ್ಯವನ್ನೇ ತೆಗೆದುಕೊಳ್ಳೋಣ, ನ್ಯೂ ಜೆರ್ಸಿ ಹೆಚ್ಚು ಜನ ಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಛಳಿಗಾಲದಲ್ಲಿ ಒಮ್ಮೊಮ್ಮೆ ಒಂದು ಅಡಿಗಿಂತಲೂ ಹೆಚ್ಚು ಸ್ನೋ ಬೀಳುವುದೂ, ವರ್ಷದಲ್ಲಿ ಕೊನೇ ಪಕ್ಷ ನಾಲ್ಕು ತಿಂಗಳಾದರೂ ಭಯಂಕರ ಛಳಿಯ ವಾತಾವರಣ ಇರೋದು ನಿಜ. ಸ್ನೋ ಬಿದ್ದಾಗ ಅಥವಾ ಛಳಿಯಲ್ಲಿ ಹೆಪ್ಪುಗಟ್ಟಿದ ಹಿಮವನ್ನು ರಸ್ತೆಯ ಬದಿಗೊತ್ತಿ ವಾಹನಾಳಿಗೆ ದಾರಿ ಮಾಡಿಕೊಡಲು ರಾಜ್ಯ/ಪಟ್ಟಣಗಳ ಬೊಕ್ಕಸದಿಂದ ವರ್ಷಕ್ಕಿಷ್ಟು ಎಂದು ಹಣ ತೆಗೆದಿಡಲಾಗುತ್ತದೆ. ದೊಡ್ಡ ಹೈವೆಗಳಲ್ಲಿ ರಸ್ತೆಯ ಪಕ್ಕಕ್ಕೆ ಒಂದು ಲೇನ್ ಅಗಲಕ್ಕಿಂತಲೂ ಹೆಚ್ಚು ಅಗಲವಾದ ಶೋಲ್ಡರುಗಳಿರುತ್ತವೆ. ಇನ್ನು ಅಷ್ಟು ಅಗಲವಲ್ಲದ ಶೋಲ್ಡರ್ ಇರುವ ಎರಡು ಲೇನ್ ರಸ್ತೆಗಳು ವಿಂಟರ್‌ನಲ್ಲಿ ಒಂದು ಲೇನ್ ರಸ್ತೆಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಜನರ ಹಾಗೂ ಅವರ ಅಟೋಮೊಬೈಲುಗಳ ಸಂಬಂಧ ಅಧಿಕ. ಇಲ್ಲಿ ತಲಾ ಒಂದೊಂದು ಕಾರು ಎನ್ನುವುದು ನಿತ್ಯೋಪಯೋಗಿ ವಸ್ತುವೇ ಹೊರತು ಲಕ್ಷುರಿಯಂತೂ ಅಲ್ಲ. ಪ್ರತಿಯೊಬ್ಬರೂ ಸಣ್ಣ ಪುಟ್ಟ ದೂರಗಳಿಂದ ಹಿಡಿದು ನೂರಾರು ಮೈಲುಗಳ ಪ್ರಯಾಣಕ್ಕೂ ತಮ್ಮ ಕಾರುಗಳನ್ನೇ ನಂಬಿರುವ ಪರಿಸ್ಥಿತಿ. ಹೀಗಿರುವಾಗ ಕೆಟ್ಟ ರಸ್ತೆಗಳು ಹೇಗೆ ತಾನೇ ಹುಟ್ಟ ಬಲ್ಲವು. ಒಂದು ವೇಳೆ ಒಳ್ಳೆಯ ರಸ್ತೆ ಕೆಟ್ಟ ರಸ್ತೆಯಾಗಿ ಪರಿವರ್ತನೆಗೊಂಡರೂ (ಹೊಂಡ, ಗುಂಡಿ, ಬಿರುಕು, ಗಲೀಜು ಮುಂತಾದವುಗಳಿಂದ) ಇಲ್ಲಿನ ಜನರು ಸ್ಥಳೀಯ ಆಡಳಿತವನ್ನು ಕೇಳುವ ವ್ಯವಸ್ಥೆ ಇದೆ, ಅದಕ್ಕಿಂತ ಮೊದಲು ಹಾಗಿರುವ ರಸ್ತೆಗಳನ್ನು ತುರಂತ ರಿಪೇರಿ ಮಾಡುವ ವ್ಯವಸ್ಥೆ ಇದೆ, ಅಲ್ಲದೆ ಪ್ರತಿಯೊಂದು ರಸ್ತೆಯನ್ನು ಮೇಂಟೈನ್ ಮಾಡುವ ಪದ್ಧತಿ ಅಥವಾ ವ್ಯವಸ್ಥೆ ಇದೆ. ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ತಮ್ಮ ನೆರೆಹೊರೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಡುವಲ್ಲಿ ಶ್ರಮಿಸುತ್ತವೆ.

ಭಾರತದಲ್ಲಿ ಹೈವೇಗಳಿಂದ ಹಿಡಿದು ಸ್ಥಳೀಯ ರಸ್ತೆಗಳಲ್ಲಿ ಲೇನ್‌ಗಳು ಹೊಸತು. ರಸ್ತೆಯ ಮೇಲೆ ಬಿಳಿಯ ಪಟ್ಟೆಗಳನ್ನು ಉದ್ದಾನುದ್ದ ಎಳೆದು ಅವನ್ನು ಮೇಂಟೇನ್ ಮಾಡುವುದಕ್ಕೆ ತೊಡಗಿಸಬೇಕಾದ ಹಣ, ಹಾಗೆ ಮಾಡುವುದರ ಹಿಂದಿನ ಟೆಕ್ನಾಲಜಿ, ಜನರ ತಿಳುವಳಿಕೆ ಮೊದಲಾದವುಗಳು ಇನ್ನೂ ಹೊಸತು. ಎಲ್ಲದಕ್ಕಿಂತ ಮುಖ್ಯವಾಗಿ ಜನರಿಗೆ ಅರಿವು ಅಥವಾ ತಿಳುವಳಿಕೆ ಇಲ್ಲದಿರುವುದು ಗೊತ್ತಾಗುತ್ತದೆ. ನಾನು ನೋಡಿದ ಕನ್ನಡ ಸಿನಿಮಾಗಳಲ್ಲಿ ತೋರಿಸುವ ಈ ರಸ್ತೆಗಳಲ್ಲಿ ಜನರು ಕಾರು/ಜೀಪು ಓಡಿಸಿಕೊಂಡು ಹೋಗುವುದನ್ನು ನೋಡಿದರೆ ಅಲ್ಲಿ ಯಾರೂ ತೆಪ್ಪಗೆ ತಮ್ಮ ಲೇನ್ ನಲ್ಲಿ ಹೋಗೋದಿಲ್ಲ. ಜನನಿಬಿಡ ರಸ್ತೆಗಳಿಂದ ಹಿಡಿದು ಖಾಲೀ ರಸ್ತೆಗಳವರೆಗೆ ಎರೆಡೆರೆಡು ಲೇನ್‌ಗಳ ನಡುವೆ ಕಾರು ಓಡಿಸಿಕೊಂಡು ಹೋಗುವುದು ಒಂದು ರೀತಿಯ ಶೋಕಿ ಅಥವಾ ಅಜ್ಞಾನ. ಜೊತೆಗೆ ಪಾರ್ಕಿಂಗ್ ಮಾಡುವಲ್ಲಿಯೂ ಸಹ ಎರೆಡೆರಡು ಕಾರು ಪಾರ್ಕ್ ಮಾಡಬಹುದಾದ ಸ್ಥಳಗಳಲ್ಲಿ ಒಂದು ಕಾರನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಿ ಹೋಗುವುದಾಗಲೀ, ಟ್ರಾಫಿಕ್ ನಿಯಮ ಹಾಗೂ ಉಲ್ಲಂಘಿಸುವುದನ್ನೆಲ್ಲ ಆದರ್ಶವಾಗಿ ತೋರಿಸುವ ವ್ಯವಸ್ಥೆ ಇದೆ. ತಪ್ಪು ಮಾಡೋದು ಸಹಜ ಎಂದು ಒಪ್ಪೋ ಮನಸ್ಸಿಗೆ ಅದಕ್ಕೆ ತಕ್ಕ ಶಿಕ್ಷೆಯೂ ಸಹಜ ಎಂದು ಏಕೆ ಹೊಳೆಯೋದಿಲ್ಲ ಎನ್ನುವ ಪ್ರಶ್ನೆ ಹುಟ್ಟುತ್ತದೆ. ವಿದ್ಯಾಭ್ಯಾಸ ಹಾಗೂ ಅರಿವು ಹೆಚ್ಚಿದಂತೆ ಜನರ ನಡವಳಿಕೆಗಳಲ್ಲಿ ಬದಲಾಗುತ್ತದೆ ಎನ್ನುವುದನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗಾಗುತ್ತದೆ.

ಸಂಪನ್ಮೂಲಗಳು ಇರಲಿ ಇಲ್ಲದಿರಲಿ, ಇದ್ದುದ್ದನ್ನು ಚೆನ್ನಾಗಿ ನೋಡಿಕೊಂಡು ಹೋಗುವ ಮನಸ್ಥಿತಿ ಮುಖ್ಯ. ಬಡದೇಶಗಳಲ್ಲಿ ಹಾಗೂ ಮುಂದುವರೆಯುತ್ತಿರುವ ದೇಶಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಅದನ್ನು ಉಳಿಸಿಕೊಂಡು ಹೋಗಲು ಕಷ್ಟವಾಗಬಹುದು, ಆದರೆ ಎಲ್ಲಿಯವರೆಗೂ ಜನರು ಹಾಗೂ ಜನರ ಅರಿವು ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಕೇವಲ ಸಂಪನ್ಮೂಲಗಳೊಂದೇ ಏನೂ ಮಾಡಲಾರವು. ಸಾವಿರಾರು ವರ್ಷಗಳಲ್ಲಿ ಬದಲಾಗದ ಜನರ ಅರಿವು ಇನ್ನು ನೂರಿನ್ನೂರು ವರ್ಷಗಳಲ್ಲಿ ಬದಲಾದೀತು ಎನ್ನುವುದಕ್ಕೇನು ಆಧಾರ ಅಥವಾ ಗ್ಯಾರಂಟಿ?

Thursday, March 19, 2009

ಮೂರುಗಾಲಿ ಆಟಿಕೆ

ನಮ್ಮ ಊರುಗಳಲ್ಲಿ ಒಂದೆರೆಡು ವರ್ಷದ ಮಕ್ಕಳಿಗೆ ಆಡಿಕೊಳ್ಳಲು ಮರದಲ್ಲಿ ಮಾಡಿದ ಮೂರುಗಾಲಿಯ ಆಟದ ಸಾಮಾನು ಸಿಗುತ್ತಿತ್ತು. ಬಹಳ ಸರಳವಾಗಿ ಜೋಡಿಸಲ್ಪಟ್ಟ ಈ ಆಟಿಕೆ ಅಂಬೆ ಹರಿಯುವ ಮಕ್ಕಳಿಗೆ ಓಡಾಡಲು ಅನುಕೂಲ ಮಾಡಿಕೊಡುತ್ತಿತ್ತು. ಈ ಆಟದ ಸಾಮಾನು ಈಗಲೂ ಅಲ್ಲಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ, ಈಗೆಲ್ಲ ನಮ್ಮೂರುಗಳಲ್ಲೂ ಮೆಟ್ಟೆಲ್, ಫಿಷರ್ ಪ್ರೈಸ್ ಆಟಿಕೆಗಳು (made in china) ದ ಹಾವಳಿ!

ಇಲ್ಲಿ ನನ್ನ ಹತ್ತು ತಿಂಗಳ ಮಗನಿಗೆ ನಾನೂ ಒಂದು ಹಾಗಿರುವ ಆಟಿಕೆಯೊಂದನ್ನು ಮಾಡಬಾರದೇಕೆ ಎಂಬ ಆಲೋಚನೆ ಬಂದಿದ್ದೇ ತಡ, ಸಣ್ಣದೊಂದು ಸ್ಕೆಚ್ ಹಾಕಿಕೊಂಡೆ. ಇಲ್ಲಿನ ಹೋಮ್ ಡಿಪೋ, ಲೋವ್‌ಸ್ ಅಂಗಡಿಗಳಲ್ಲಿ ಮರ-ಮುಗ್ಗಟ್ಟು ಬಹಳ ಅಗ್ಗವಾಗಿ ಸಿಗುವುದರ ಜೊತೆಗೆ ಅವರು ನಿಮಗೆ ಯಾವ ರೀತಿ ಬೇಕೋ ಹಾಗೆ ಅದನ್ನು ಕತ್ತರಿಸಿಯೂ ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ರೀತಿಯ ಸೈಜುಗಳೆಲ್ಲ (ರೀಪೀಸ್) ಒಂದೇ ಸೂರಿನಡಿ ಸಿಗುತ್ತವೆಂದರೆ ಮತ್ತಿನ್ನೇನು ಬೇಕು. ಸರಿ ಮರದ ರೀಪುಗಳೇನೋ ಸಿಗುತ್ತವೆ, ಈ ಗಾಲಿಗಳನ್ನು ಎಲ್ಲಿಂದ ತರುವುದು? ಹಾಗೆ ಅಂದುಕೊಂಡ ಬೆನ್ನ ಹಿಂದೇ ಅದೇ ಅಂಗಡಿಯಲ್ಲಿ ಗಾಲಿಗಳೂ ಸಿಗಬಾರದೇಕೆ ಎನ್ನಿಸಿ ಒಮ್ಮೆ ಹೋಗಿ ನೋಡಿದ್ದೂ ಆಯಿತು. ಇನ್ನೇನು ಮರದ ತುಂಡುಗಳನ್ನು ತಂದು ಹಂತ-ಹಂತವಾಗಿ ಜೋಡಿಸಿ ಒಂದು ವೀಕ್ ಎಂಡಿನ ಅರ್ಧ ದಿನವೊಂದರಲ್ಲಿ ಜೋಡಿಸಿ ನಾನೂ ಒಂದು ಆಟದ ಸಾಮಾನನ್ನು ತಯಾರಿಸಬಾರದು ಎಂದುಕೊಂಡು ಸುಮ್ಮನಾಗಿದ್ದರೆ ಚೆನ್ನಾಗಿತ್ತು, ಆದರೆ ಆಗಿದ್ದೇ ಬೇರೆ.

ನಾನು ಯಾವತ್ತೂ ಕೆಲಸವಾಗುವುದಕ್ಕಿಂತ ಮೊದಲೇ ಅದರ ಬಗ್ಗೆ ಕೊಚ್ಚಿಕೊಳ್ಳೋದು ಹೆಚ್ಚು ಎಂದು ತೋರುತ್ತೆ. ಈ ಆಟಿಕೆಯನ್ನು ಕುರಿತು ನನ್ನ ಹೆಂಡತಿಯ ಜೊತೆ ಹೇಳಿಕೊಂಡಾಗ ಆಕೆ ಪಕಪಕನೆ ನಗಲಾರಂಭಿಸಿದಳು. ಜೊತೆಗೆ ಗಾಯಕ್ಕೆ ಉಪ್ಪು ಸವರುವ ಮಾದರಿಯಲ್ಲಿ ವಾಲ್‌ಮಾರ್ಟ್‌ನಲ್ಲಿ ಇದೇ ರೀತಿಯ ಆಟದ ಸಾಮಾನೊಂದನ್ನು ನೋಡಿದ್ದೇನೆ, ಅದನ್ನು ತರಬಾರದೇಕೆ ಎಂದಳು. ಈ ಅಲ್ಪನ ಕೈಚಳಕಕ್ಕೂ ಆ ವಾಲ್‌ಮಾರ್ಟಿನ ಸಾಧ್ಯತೆ-ಬಾಧ್ಯತೆಗಳಿಗೂ ಎಲ್ಲಿಯ ಸಮ? ಸರಿ ಸುಮಾರು ಅದೇ ದಿನ ಅಥವಾ ಮರುದಿನ ಆಕೆ ಹೋಗಿ ಬಹಳ ಮುದ್ದಾದ ಫಿಷರ್ ಪ್ರೈಸ್ ಆಟದ ಸಾಮಾನೊಂದನ್ನು ತಂದೇ ಬಿಟ್ಟಳು. ಅದರ ಮೂಲ ಬೆಲೆ ಹತ್ತೊಂಭತ್ತು ಡಾಲರ್ ಅಂತೆ, ಅದು ಏಳು ಡಾಲರ್‌ನಲ್ಲಿ ಸೇಲ್‌ ಇದ್ದುದಾಗಿಯೂ ತಿಳಿಸಿದಳು. ನಾನೇ ಅದರ ಪೆಟ್ಟಿಗೆಯನ್ನು ತೆರೆದು ಜೋಡಿಸಿದಾಗ ಒಂದೆರಡು ನಿಮಿಷದಲ್ಲಿ ನಡೆದಾಡುವ ನಾಲ್ಕು ಗಾಲಿಯ, ತನ್ನ ಮೈ ತುಂಬಾ ಸುಂದರವಾದ ಚಿತ್ರವುಳ್ಳ, ಅಲ್ಲಲ್ಲಿ ಅನೇಕ ಆಟದ ಸವಲತ್ತನ್ನು ಒದಗಿಸುವ ಬಣ್ಣಬಣ್ಣದ ಆಟಿಕೆ ತಯಾರಾಯಿತು. ಈ ಕಡೆ ನನ್ನ ಸ್ಕೆಚ್ಚು, ಪೆಚ್ಚು ಮೋರೆಯೂ ಎರಡೂ ಆ ಆಟಿಕೆಯ ಸ್ಟರ್ಡಿ ಕನ್ಸ್‌ಟ್ರಕ್ಷನ್ನನ್ನು ನೋಡಿ ಚಕಿತಗೊಂಡವು. ನಾನು ಮೊಳೆ ಅಥವಾ ಸ್ಕ್ರೂ ಹೊಡೆದು ಮಾಡಬೇಕೆಂದಿದ್ದ ಮರದ ಆಟದ ಸಾಮಾನು ಇಲ್ಲಿ ಮೊಳೆಯೇ ಇಲ್ಲ ಚೈಲ್ಡ್ ಪ್ರೂಫ್ ಪ್ಲಾಸ್ಟಿಕ್ ಆಟಿಕೆಯ ಮುಂದೆ ಯಾವ ತುಲನೆಗೂ ನಿಲುಕದಾಯಿತು.

ನನ್ನ ಮನದಲ್ಲಿ ನೆಲೆನಿಂತಿರುವ ಆ ಮರದ ಮೂರುಗಾಲಿಯ ಆಟಿಕೆ ಇಂದಿಗೆ ಇಲ್ಲದಿರಬಹುದು, ಅದರ ಸಂತತಿ ಕ್ಷೀಣಿಸಿರಬಹುದು ಅಥವಾ ಇಂದಿನ ಪ್ಲಾಸ್ಟಿಕ್ ಗ್ಲೋಬಲ್ ಯುಗದಲ್ಲಿ ನಿರ್ನಾಮವಾಗಿರಬಹುದು. ಆದರೆ ನಾನೇ ಸ್ವತಃ ಸ್ಕೆಚ್ ಹಾಕಿ ಮರವನ್ನು ಜೋಡಿಸಿ ತಯಾರಿಸಿದ ಆಟಿಕೆಯಷ್ಟು ತೃಪ್ತಿ ಈ ಹೊಸ ಫ್ಯಾನ್ಸಿ ಆಟಿಕೆ ನನಗಂತೂ ಕೊಡಲಾರದು. ಆದರೆ ನನ್ನ ಹತ್ತು ತಿಂಗಳ ಮಗನಿಗೆ ಇವು ಯಾವದರ ಪರಿವೆಯೂ ಇಲ್ಲದೆ ತನ್ನ ಹೊಸ ಆಟಿಕೆಯ ಜೊತೆ ಆಟವಾಡುತ್ತಾನೆ, ಜೊತೆಗೆ ಅದು ಮಾಡುವ ಸದ್ದಿಗೆ ಹಾಗೂ ಅದರ ಬಣ್ಣಗಳ ಮೋಡಿಗೆ ಮಾರು ಹೋಗಿದ್ದಾನೆ.

Tuesday, March 17, 2009

ಅವೇ ಆಲೋಚನೆಗಳು...

ಆಲೋಚನೆಗಳೇ ಹಾಗೆ ನಿಲ್ಲೋದೇ ಇಲ್ಲ, ಅವುಗಳ ಒರತೆ ಬತ್ತೋದಂತೂ ಖಂಡಿತ ಇಲ್ಲ. ನೀವು ಜನನಿಬಿಡ ಮರಳುಗಾಡಿನಲ್ಲೇ ಇರಲಿ ಅಥವಾ ಯಾವ ಕಾಡಿನ ಯಾವ ಮೂಲೆಯಲ್ಲಿದ್ದರೂ ಆಲೋಚನೆಗಳ ಸರಣಿ ನಿರಂತರವಾಗಿ ನಡೆಯುತ್ತಲೇ ಇರುತ್ತೆ. ನಾನು ಇತ್ತೀಚೆಗೆ ಖರೀದಿ ಮಾಡಿದ ಉಗುರಿನಷ್ಟು ದೊಡ್ಡ ಸೆಮಿಕಂಡಕ್ಟರ್ ಸ್ಟೋರೇಜ್ ಡಿವೈಸಿನಲ್ಲಿ ಹದಿನಾರು ಗಿಗಾಬೈಟುಗಳಷ್ಟು ಮಾಹಿತಿಯನ್ನು ಸ್ಟೋರ್ ಮಾಡಬಹುದು ಎನ್ನುವುದು ನನ್ನಂತಹವನ ಕಣ್ಣಿಗೆ ದೊಡ್ಡ ಅಚೀವ್‌ಮೆಂಟ್ ಆಗಿ ಕಾಣಬಹುದು. ಹಾಗೆ ಕಂಡ ಮರುಘಳಿಗೆಯಲ್ಲಿಯೇ ಈ ಸೃಷ್ಟಿಯ ಸ್ಟೋರೇಜಿನ ಮುಂದೆ ಇವೆಲ್ಲಾ ಯಾವ ಲೆಕ್ಕ ಎನ್ನಿಸಲೂ ಬಹುದು. ನಮ್ಮ ಮಿದುಳು ಸಂಸ್ಕರಿಸಿ, ಪೋಷಿಸುವ ಅದೆಷ್ಟೋ ಆಡಿಯೋ ವಿಡಿಯೋ, ಡೇಟಾ ಮತ್ತಿತರ ಅಂಶಗಳನ್ನೆಲ್ಲ ಪೋಣಿಸಿ ಗಿಗಾಬೈಟುಗಳಲ್ಲಿ ಎಣಿಸಿದ್ದೇ ಆದರೆ ಇಂದಿನ ಟೆರಾಬೈಟ್ ಮಾನದಂಡವೂ ಅದರ ಮುಂದೆ ಸೆಪ್ಪೆ ಅನಿಸೋದಿಲ್ಲವೇ? ಈ ಸೃಷ್ಟಿಯ ಅದ್ಯಾವ ತಂತ್ರಜ್ಞಾನ ಅದು ಹೇಗೆ ನರಮಂಡಲದ ವ್ಯೂಹವಾಗಿ ಬೆಳೆದುಬಂದಿದ್ದಿರಬಹುದು ಎಂದು ಸೋಜಿಗೊಂಡಿದ್ದೇನೆ.

ಇಂತಹ ಸೋಜಿಗಗಳಿಂದ ದಿಢೀರ್ ಮತ್ತೊಂದು ಆಲೋಚನೆ: ನಮ್ಮಲ್ಲಿ ನಿಕ್ ನೇಮ್ ಗಳನ್ನು ಬಳಸುವ ಬಗ್ಗೆ. ಭಾರತದಲ್ಲಿ ’ಕೃಷ್ಣಮೂರ್ತಿ’ ಎನ್ನುವ ಅಫಿಷಿಯಲ್ ನೇಮ್ ಮನೆಯಲ್ಲಿ ’ಕಿಟ್ಟಿ’ ಆಗಿ ರೂಪಗೊಳ್ಳಬಹುದು, ಅದೇ ಅಮೇರಿಕದಲ್ಲಿ ’ವಿಲಿಯಮ್’ ಎನ್ನುವ ಅಫಿಷಿಯಲ್ ನೇಮ್ ’ಬಿಲ್’ ಉಪಯೋಗಕ್ಕೊಳಗಾಗಬಹುದು. ಇದರಲ್ಲಿ ಒಂದು ವ್ಯತ್ಯಾಸವಂತೂ ಇದೆ - ನಮ್ಮ ನಿಕ್ ನೇಮ್‌ಗಳು ಖಾಸಗಿ ಆದರೆ ಇಲ್ಲಿಯವರ ನಿಕ್ ನೇಮ್‌ಗಳು ಎಲ್ಲರ ಬಳಕೆಗೂ ಸಿಗುತ್ತವೆ, ಅದು ಎಷ್ಟರ ಮಟ್ಟಿಗೆ ಪ್ರಭಾವಿ ಎಂದರೆ ಪ್ರೆಸಿಡೆಂಟುಗಳಿಂದ ಹಿಡಿದು ಸಾಮಾನ್ಯ ’ಜೋ’ ವರೆಗೂ ಅವರ ನಿಕ್‌ನೇಮ್ ಗಳೇ ಮುಖ್ಯನಾಮ. ಅಫಿಷಿಯಲ್ ನೇಮ್ ಏನಿದ್ದರೂ ಪುಸ್ತಕಕ್ಕೆ ಮಾತ್ರ.

ಈ ಆಲೋಚನೆಯಿಂದ ಹೊರಬರುವ ಹೊತ್ತಿಗೆ, ಭಾರತಕ್ಕೆ ಒಂದು ಫೋನು ಮಾಡಬಾರದೇಕೆ ಎನ್ನಿಸಿ, ತಕ್ಷಣ ಸೆಲ್ ಫೋನಿನಲ್ಲಿ ಕುಕ್ಕ ತೊಡಗಿದೆ. ೮೦೦ ನಂಬರ್ ಅನ್ನು ಹೊಡೆದು ಇನ್ನೊಂದೆರೆಡು ಕ್ಷಣಗಳಲ್ಲಿ ಎಲೆಕ್ಟ್ರಾನಿಕ್ ಚೆಲುವೆಯ (ಧ್ವನಿ) ಕೃಪೆಯಿಂದ ನನ್ನ ಅಣ್ಣನ ಮೊಬೈಲ್ ನಂಬರನ್ನು ಒತ್ತತೊಡಗಿದೆ. ಎರಡು ರಿಂಗುಗಳ ನಂತರ ಆತ ಫೋನ್ ಎತ್ತಿಕೊಂಡ, ಉಭಯ ಕುಶಲೋಪರಿಯ ಜೊತೆಗೆ ಎಲ್ಲಿದ್ದೀಯಾ? ಆಫೀಸಿಗೆ ಹೊರಟಿದ್ದೀಯಾ? ಏನು ತಿಂಡಿ? ಎಂದು ಕೇಳುವ ಅವನ ಪ್ರಶ್ನೆಗಳಿಗೆ ಡ್ರೈವ್ ಮಾಡುತ್ತಿದ್ದೇನೆ, ಇನ್ನೇನು ಆಫೀಸು ಹತ್ತಿರ ಬಂತು. ’ತಿಂಡಿ ಮಾಮೂಲಿ - ಅದೇ ಬ್ರೆಡ್ಡು, ಬಾಳೆಹಣ್ಣು, ಜ್ಯೂಸ್, ಕಾಫಿ’, ಎಂದೆ. ನಾನು ಹೀಗೆ ಹೇಳಿದಾಗಲೆಲ್ಲ ಆ ಕಡೆಯಿಂದ ಮಾಮೂಲಿ ಮೌನ. ಮತ್ತೆ ನಾನೇ ಅದೂ-ಇದೂ ಕೇಳಿದಂತೆ ಸಂಭಾಷಣೆ ವಿಷಯನ್ನು ಆಧರಿಸಿ ಎರಡು ನಿಮಿಷದಿಂದ ಹಿಡಿದು ಇಪ್ಪತ್ತು ನಿಮಿಷದ ವರೆಗೂ ನಡೆಯುತ್ತೆ.

ನಾನೆಂದೆ, ’ಹೌದು, ನೀನು ಇತ್ತೀಚೆಗೆ ಅಡುಗೆ ಮಾಡಿದ್ದು ಯಾವತ್ತು?’
ಅವನೆಂದ, ’ನಾನು ಆಡುಗೆ ಮಾಡಿ ಅದ್ಯಾವ ಕಾಲವೋ ಆಗಿದೆ.’
’ನೀನು, ಮನೆಯನ್ನು ಸ್ವಚ್ಛ ಮಾಡಲು ಸಹಾಯ ಮಾಡ್ತೀಯೋ, ಇಲ್ವೋ?’
’ಖಂಡಿತ, ಇಲ್ಲ - ನಾನು ಶಾಲೆಗೆ ಹೋಗಿ ಬರೋ ಹೊತ್ತಿಗೆ ಸಾಕಾಗಿರುತ್ತೆ, ಮತ್ತೇನೂ ಮಾಡೋದಿಲ್ಲ’

ಹೀಗೆ ನಾನು ಹುಡುಕಿ-ಹುಡುಕಿ ಕೇಳಿದ ಪ್ರಶ್ನೆಗಳು ನಾನು ಇಲ್ಲಿ ಆಗಾಗ್ಗೆ (ನಿತ್ಯ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ) ಮಾಡೋ ಕೆಲಸಗಳನ್ನು ಕುರಿತವಾಗಿದ್ದವು (ಉದಾಹರಣೆಗೆ ಬಟ್ಟೆ ಒಗೆದು ಒಣಗಿಸಿ ಮಡಚಿಡುವುದು). ಆದರೆ ಅವನು ಮನೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೂ ಒಂದೇ ನಮ್ಮ ಅತ್ತಿಗೆಯ ಹೆಸರನ್ನೋ ಅಥವಾ ಆಳುಗಳು ಮಾಡುವ ಕೆಲಸವೆಂದೋ ಹೇಳುತ್ತಿದ್ದ.

ಅವನಿಗೆ ’ಬೈ’ ಹೇಳಿ ಫೋನ್ ಇಟ್ಟ ಹೊತ್ತಿಗೆಲ್ಲ ಕುಡಿಯುತ್ತಿದ್ದ ಸುಡುಸುಡು ಕಾಫಿ ಇತ್ತೀಚೆಗಷ್ಟೇ ಎಲೆಕ್ಷನ್ನು ಗೆದ್ದು ಅಸೆಂಬ್ಲಿ ಸೇರಿದ ರೆಪ್ರೆಸೆಂಟಿವ್‌ನ ಥರ ನರಮಂಡಲದ ಮೇಲೆ ತನ್ನ ಪ್ರಭಾವವನ್ನು ಬೀರುತ್ತ ಕೆಲಸವನ್ನು ಆರಂಭಿಸಿತ್ತು. ಥೂ, ಈ ಅಮೇರಿಕದಲ್ಲಿ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಿಕೊಂಡು ಜೀವಿಸೋದರಲ್ಲೇ ಕಾಲ ಕಳೆದು ಹೋಗುತ್ತೆ. ಎಷ್ಟು ದುಡ್ಡಾಗಲಿ ಏನು ಕೆಲಸವಾಗಲಿ ಇದ್ದರೆ ಏನು ಬಂತು - ದಿನಾ ನಮ್ಮ ದುಗುಡ ಇದ್ದದ್ದೇ. ಬನೀನ್ ಎಲ್ಲಿದೆ? ಪ್ಯಾಂಟಿಗೆ ಮ್ಯಾಚ್ ಆಗುವ ಕಾಲುಚೀಲ ಸಿಗುತ್ತಿಲ್ಲ (ಬೆಳಗ್ಗೆ ಅದೂ ಚಿಮುಚಿಮು ಬೆಳಕಿನಲ್ಲಿ)! ಕಾಫಿ ಮಾಡಿಕೋ ಬೇಕು, ತಿಂಡಿಗೆ ಅವೇ ಬ್ರೆಡ್ಡು ಸ್ಲೈಸುಗಳು, ಅವೇ ಜ್ಯೂಸಿನ ಬಾಟಲುಗಳು. ವಾರಾಂತ್ಯದಲ್ಲಿ ಅಪರೂಪಕ್ಕೆ ಬ್ರೇಕ್‌ಫಾಸ್ಟ್‌ಗೆಂದು ತಿನ್ನುವ ದೋಸೆ-ಇಡ್ಲಿಗಳು ಹೆಚ್ಚಾಗಿ ಮಧ್ಯಾಹ್ನ ಲಂಚ್ ಸೇರದ ಅಥವಾ ರುಚಿಸದ ಅನುಭವ. ಮಿಸ್ಟರ್ ಕಾಫಿಯಿಂದ ಇಳಿದ ಲಾರ್ಜ್ ಕಾಫಿಯ ಗುಲಾಮಗಿರಿಯನ್ನು ಒಪ್ಪಿಕೊಂಡ ನರಮಂಡಲ ಚಿಕ್ಕ ಲೋಟಾದಲ್ಲಿ ಕುಡಿಯುವ ಕಾಫಿಯನ್ನು ’ಚಿಕ್ಕ ಸೈಜ್’ ಎಂದು ಪರಿಗಣಿಸುವ ಅನುಭೂತಿ. ಕಾಫಿಯ ಸ್ಟಿಮ್ಯುಲೇಶನ್ನಿಂದ ಹುಟ್ಟಿ ಕಾಫಿಯ ವಿರುದ್ಧವೇ ತಿರುಗುವ ಆಲೋಚನೆಗಳ ಪಾಪಪ್ರಜ್ಞೆ!

ಇಷ್ಟು ಹೊತ್ತಿಗೆ ಆಫೀಸಿನ ವಾತಾವರಣ ಹತ್ತಿರ ಬರುತ್ತಿದ್ದ ಹಾಗೆ - Oh! there is a 8 am meeting today! ಎನ್ನುವ ಅಮೇರಿಕನ್ ಉದ್ಗಾರ ನನ್ನಲ್ಲಿಯ ಕನ್ನಡತನವನ್ನು ಇನ್ನು ಹತ್ತು ಘಂಟೆಗಳ ಮಟ್ಟಿಗೆ ಅದುಮಿಕೊಳ್ಳುವ ಹಾಗೆ ಸೆಡ್ಡು ಹೊಡೆಯುವ ಅಟ್ಟಹಾಸದ ಆಲೋಚನೆ. ಆಫೀಸ್ ಬಂದೇ ಬಿಡ್ತು, ಇಲ್ಲ ನಾನೇ ಅದರ ಹತ್ತಿರ ಹೋಗ್ತಾ ಇದ್ದೇನೆ. ದೂರದ ಇಂಡಿಯಾಕ್ಕೆ ಕಾಲ್ ಮಾಡಿ ಸಂಭಾಷಣೆಯಿಂದ ಸೋತ ಸೆಲ್ ಫೋನ್ ಪಕ್ಕದಲ್ಲಿ ಬಿದ್ದುಕೊಂಡಿದೆ, ಅದರ ಗಂಟಲನ್ನೂ ಹಿಚುಕಿ (ವೈಬ್ರೇಷನ್ನ್ ಮೋಡ್‌ಗೆ ಹಾಕಿ) ಕೋಟಿನ ಜೇಬಿನಲ್ಲಿ ತುರುಕಿ ಲಂಚ್ ಪ್ಯಾಕ್ (ಅದೇ ಅನ್ನ, ಸಾರು, ಮೊಸರು, ಕೆಲವೊಮ್ಮೆ ಪಲ್ಯ) ಅನ್ನು ಕೈಯಲ್ಲಿ ಹಿಡಿದುಕೊಂಡು ಲಗುಬಗೆಯಿಂದ (ಇನ್ನೇನು ಆಫೀಸು ಎಲ್ಲಿಯಾದರೂ ಓಡಿ ಹೋದೀತೋ ಎನ್ನುವಂತೆ) ಹೆಜ್ಜೆ ಹಾಕತೊಡಗುತ್ತೇನೆ.

ಆಲೋಚನೆಗಳು ಇನ್ನೂ ಮುಂದುವರೆಯುತ್ತಲೇ ಇವೆ...

Sunday, March 08, 2009

ಹೊಸವರ್ಷ ಹೊಸತನ್ನು ತರಲಿ!

ಎಲ್ಲಾ ಇಂಡೆಕ್ಸುಗಳೂ ಮಾರ್ಕೆಟ್ ಇಂಡಿಕೇಟರುಗಳು ಇಳಿಮುಖ ಹಿಡಿಯುತ್ತಿದ್ದಂತೆ ದಿನಕ್ಕೊಮ್ಮೆ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ನಮ್ಮ ನಮ್ಮ ಪೊಸಿಷನ್ನುಗಳನ್ನು ಪ್ರಶ್ನಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯವಾಗಲಾರದು. ಸೆಕ್ಯುರಿಟೀಸ್‌ಗಳ ಮೇಜರ್ ಇಂಡಿಕೇಟರುಗಳು ಅಮೇರಿಕದಲ್ಲಿ ಹನ್ನೆರಡು ಹದಿಮೂರು ವರ್ಷದ ಕೆಳಗಿನ ಮಟ್ಟಕ್ಕೆ ಕುಸಿದಿರುವಾಗ ಈ ಹನ್ನೆರಡು ವರ್ಷಗಳಿಂದ ನಾವಿಲ್ಲಿ ದುಡಿದು ಉಳಿಸಿ ಬೆಳೆಸಿದ್ದು ಎಲ್ಲವೂ ಮರೀಚಿಕೆಯಂತಾಗಿ ಹೋಗಿದೆ ಅನ್ನೋದು ನನ್ನ ತಲೆಮಾರಿನವರ ತಳಮಳ. ಹೆಚ್ಚಿನ ಎಕ್ಸ್‌ಪರ್ಟ್‌ಗಳು ಹೇಳೋ ಹಾಗೆ ನಿಮ್ಮ ಎಮರ್ಜನ್ಸಿ ಫಂಡ್ ಅನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ಪೊಸಿಷನ್ ಹೀಗೇ ಇರಲಿ, ಇವತ್ತಲ್ಲ ಮುಂದೆ ಮಾರ್ಕೆಟ್ ಮೇಲೆ ಬಂದೇ ಬರುತ್ತದೆ ಎನ್ನುವುದೆಲ್ಲ ಸುಳ್ಳಿನ ಪ್ರಣಾಳಿಕೆಗಳಾಗಿ ಕಂಡುಬರುತ್ತಿವೆ.

ಇಲ್ಲಿ ನಮಗೆ ನಾವೇ ದಿಕ್ಕು ದೆಸೆಗಳಾಗಿ ಬದುಕುತ್ತಿರುವ ಅನಿವಾಸಿಗಳಿಗೆ ಈ ಏರಿಳಿತದಿಂದ ದೊಡ್ಡ ಹೊಡೆತ ಬಿದ್ದೇ ಬೀಳುತ್ತದೆ. ನಾವು ಇರುವ ರೆಸಿಡೆನ್ಸ್ ಅನ್ನು ಹೊರತುಪಡಿಸಿ ಇರುವುದೆಲ್ಲವೂ ನಮ್ಮ ನೆಟ್‌ವರ್ತ್‌ನಲ್ಲಿ ಸೇರಿಕೊಳ್ಳುವ ಅಸ್ಸೆಟ್ ಎಂದು ಪರಿಗಣಿಸಿಕೊಂಡರೆ ಎಲ್ಲ ಕಡೆಯೂ ಹೊಡೆತವೆ. ರಿಟೈರ್‌ಮೆಂಟ್ ಉಳಿತಾಯದಿಂದ ಹಿಡಿದು ಇನ್ವೆಸ್ಟ್‌ಮೆಂಟಿನವರೆಗೆ ನಮ್ಮದು ಎನ್ನುವ ಎಲ್ಲವೂ ಕುಸಿದು ಹೋದ ಹಾಗಿನ ಅನುಭವ ಒಂದು ರೀತಿ ಸಮುದ್ರದ ತೆರೆಗಳು ನಮ್ಮ ಕಾಲಿನ ಕೆಳಗಿನ ಮರಳನ್ನು ಸಡಿಲಗೊಳಿಸುತ್ತಾ ಕ್ರಮೇಣ ನೀರಿನಲ್ಲಿ ಹೂತುಹೋಗುವ ಹಾಗೆ.

***

ಈ ಇಳಿತ ಎಲ್ಲರಿಗೂ ಆಗುತ್ತಿರುವುದೇ ಆದ್ದರಿಂದ ಅದರ ಬಗ್ಗೆ ಹಾಡಿದ್ದೇ ಹಾಡಿದಲ್ಲಿ ಏನೂ ಪ್ರಯೋಜನವಂತೂ ಇಲ್ಲ. ಇನ್ನು ಮುಂದೆ ಹೇಗೆ ಎಂದು ಏನಾದರೂ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟರೂ ಅವುಗಳು ಹೆದರಿಸುವುದು ಸಾಮಾನ್ಯ. ಇನ್ನು ಈ ಮಾರ್ಚ್ ತಿಂಗಳು ಕಳೆಯುತ್ತಿದ್ದ ಹಾಗೆ ಏಪ್ರಿಲ್ ಮೊದಲ ದಿನಗಳಲ್ಲಿ ಪ್ರಥಮ ಕ್ವಾರ್ಟರ್ ನಂಬರುಗಳು ಎಲ್ಲ ಕಡೆಯಿಂದ ಬರತೊಡಗಿ ಮತ್ತೆ ಮಾರುಕಟ್ಟೆ ಕುಸಿಯುವಂತೆ ಆದರೂ ಆಗಬಹುದು, ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮ ಕ್ವಾರ್ಟರ್ ನಂತರ ಕಂಪನಿಗಳು ಕಡಿಮೆ ಮಾಡುವ ಎಕ್ಸ್‌ಪೆನ್ಸ್ ನಿಂದಾಗಿ ಜನರ ಕೆಲಸ ಹೋಗುವ ಸಾಧ್ಯತೆಯೂ ಹೆಚ್ಚು. ನಮ್ಮ ಟೀಮುಗಳಲ್ಲಂತೂ ವರ್ಷದೆಲ್ಲದ ಲೆಕ್ಕವನ್ನು ಇನ್ನೊಂದೆರಡು ವಾರಗಳಲ್ಲಿ ಮುಗಿಸಿ ಕೊನೆಗೆ ಅದರಲ್ಲಿ ಮೇಲಿನವರ ಆದೇಶದಂತೆ ಕಡಿತಗೊಳಿಸುತ್ತಾ ಬರುವುದು ಪದ್ಧತಿ, ಅದಕ್ಕೆ ಈ ವರ್ಷ ಭಿನ್ನವೇನೂ ಆಗೋದಿಲ್ಲ.

ಈ ಕೆಟ್ಟ ನ್ಯೂಸ್/ವಿಚಾರಗಳ ಸಂಘವೇ ಬೇಡ ಎಂದು ರೆಡಿಯೋ/ಇಂಟರ್ನೆಟ್ ಮೊದಲಾದವನ್ನು ಮುಚ್ಚಿ ಇಟ್ಟರೂ ಒಂದಲ್ಲ ಒಂದು ರೀತಿಯಿಂದ ಕೆಟ್ಟ ವಿಚಾರಗಳು ಮಿದುಳನ್ನು ಹೊಕ್ಕೇ ತೀರುತ್ತವೆ ಎಂದು ಪ್ರತಿಜ್ಞೆ ಮಾಡಿದವರ ಹಾಗೆ ಮುತ್ತಿಕೊಳ್ಳುತ್ತವೆ. ಈಗಾಗಲೇ ಇರುವ ಸ್ಟ್ರೆಸ್ ಕಡಿಮೆ ಎನ್ನುವ ಹಾಗೆ ಇನ್ನೂ ಏನೇನೋ ಕೆಟ್ಟ ಆಲೋಚನೆಗಳನ್ನು ವಿಜೃಂಬಿಸಿ ಬರೆಯುವವರ ವರದಿಗಳೂ ಸಿಗತೊಡಗುತ್ತವೆ. ಹೇಗಾದರೂ ಮಾಡಿ ಕೆಟ್ಟ ವಿಚಾರಗಳು ಯಾವುವೂ ನಮ್ಮನ್ನು ಹಿಂಸಿಸದಿರುವಂತೆ ಮಾಡುವುದು ಅಸಾಧ್ಯವೆನಿಸತೊಡಗುತ್ತದೆ. ಅವೇ ಹಳಸಲು ಅಂಕಿ-ಅಂಶಗಳು, ಅವೇ ವಿಚಾರಗಳು, ಎಲ್ಲ ಕಡೆ ಕೋಲಾಹಲ -- ಇಷ್ಟೇ.

ಕೊರೆಯುವ ಕೆಟ್ಟ ಛಳಿಯ ಮಾರನೇ ದಿನ ಬೆಚ್ಚಗಿನ ಬಿಸಿಲಿನ ಹಾಗೆ ಹೊಸ ವರ್ಷದ ದಿನಗಳಾದರೂ ಶುಭವನ್ನು ತರಲಿ, ಮುಂದಿನ ಯುಗಾದಿ ಹೊಸ ಸಂವತ್ಸರಗಳು ಹೊಸತನ್ನು ಹಾರೈಸಲಿ!

Tuesday, February 17, 2009

ನಾನು ಮತ್ತು ನನ್ನ ದೇವರುಗಳು - ಭಾಗ ೧

ಶಾಲಾ ಕಾಲೇಜು ದಿನಗಳಲ್ಲಿ ದೇವರನ್ನು ಕುರಿತು ಅದೆಷ್ಟೋ ವಾದ-ವಿವಾದಗಳನ್ನು ನಡೆಸಿಕೊಂಡು ಬಂದು, ’ದೇವಸ್ಥಾನಕ್ಕೆ ಏಕೆ ಹೋಗಬೇಕು?’, ’ದೇವರೆಲ್ಲಿದ್ದಾನೆ?’ ಎನ್ನುವ ಅರ್ಥ ಕೊಡುವ ಇನ್ನೂ ಹಲವಾರು ಪ್ರಶ್ನೆಗಳಿಗೆ ನಮ್ಮದೇ ಆದ ಉತ್ತರಗಳನ್ನು ಕಂಡುಕೊಂಡು ನಾವು ಸಮಾಧಾನ ಪಟ್ಟಿದ್ದಿದೆ. ಕೊನೆಗೆ ದೇವರ ಪೂಜೆಯನ್ನು ಮಾಡದೇ, ಹಬ್ಬ-ಹರಿದಿನಗಳಿಗೆ ಮನೆಯಲ್ಲಿ ಅಬ್ಸೆಂಟ್ ಆಗುತ್ತಾ ಬಂದು ಒಂದು ರೀತಿಯ ರೆಬೆಲ್ ಜೀವನವನ್ನು ಸಾಗಿಸಿದ ನನ್ನಂತಹವರು ಈಗ ಮೇಲೇರಿದ ಏಣಿ ಗೋಡೆಗೆ ಹೆಚ್ಚು ಒರಗುವಂತಾಗುವ ಹಾಗೆ ದಿನವೂ ದೇವರ ನಾಮ ಸ್ಮರಣೆಯಿಲ್ಲದೇ ದಿನವನ್ನು ಆರಂಭಿಸೋದು ಕಡಿಮೆ. ದೇವರು ಎನ್ನುವ ಕಾನ್ಸೆಪ್ಟಿಗೂ ಮೂರ್ತಿ ಪೂಜೆ (ವಿಗ್ರಹಾರಾಧನೆ) ಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ದೇವರು ಎನ್ನುವ ಪ್ರತಿಮೆ ಒಬ್ಬ ವ್ಯಕ್ತಿ (ಪರಿವಾರ) ಕ್ಕೆ ಸೀಮಿತಗೊಳ್ಳಬಹುದು, ಅಥವಾ ಅದು ನಿಸರ್ಗದ ಮತ್ತೊಂದು ವಸ್ತು/ಜೀವಿಗೆ ನಾವು ನಮ್ಮ ಮನದಲ್ಲಿ ಕೊಡಬಹುದಾದ ಉನ್ನತ ಪರಿಭಾಷೆ ಇರಬಹುದು. ದೇವರು ಎನ್ನುವುದು ಇಂದಿಗೆ ಪ್ರಸ್ತುತವಾದ ಅಂಶವಿರಬಹುದು ಅಥವಾ ಸಾವಿರಾರು ವರ್ಷಗಳ ಹಿಂದಿನ ಯಾವುದೋ ಒಂದು ಉಲ್ಲೇಖಕ್ಕೆ ಸಂಬಂಧಪಟ್ಟಿರಬಹುದು. ಹೀಗೆ ದೇವರು ಎನ್ನುವ ಎಂದೂ ಮುಗಿಯದ ವಿಚಾರಗಳ ಖಜಾನೆಯನ್ನು ಶೋಧಿಸಿದಂತೆಲ್ಲ ಅವರವರ ಪರಿಮಿತಿಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಒಂದಲ್ಲ ಒಂದು ರೂಪ/ಆಕೃತಿ ಅದರಿಂದ ಹೊರ ಹೊಮ್ಮುತ್ತಲೇ ಇರುತ್ತೆ ಎನ್ನುವುದು ನನ್ನ ಅಂಬೋಣ.

ಉದಾಹರಣೆಗೆ, ನಮ್ಮ ಇಂದಿನ ಅನಿವಾಸಿ ಬದುಕಿನ ಒಂದು ದಿನವನ್ನು ಅವಲೋಕಿಸಿಕೊಳ್ಳೋಣ: ಇಲ್ಲಿ ನಾವು ಬೇಡವೆಂದರೂ ಘಂಟೆಗಳ ನಿನಾದ ನಮ್ಮ ಕಿವಿಗೆ ಬೀಳುವ ಗಲ್ಲಿಗಳ ದೇವಸ್ಥಾನಗಳ ಗೊಂದಲವಿಲ್ಲ. ’ಲಾ ಇಲಾಹ ಇಲ್ಲಲ್ಲ...’ ಎನ್ನುವ ಮುಂಜಾನೆ ಐದೂವರೆಗೆ ಮಸೀದಿಯಿಂದ ಕೂಗುವ ಮುಲ್ಲಾನ ಸ್ವರವಿಲ್ಲ. ಮೊದಲು ವೇಣುವಾದನದಲ್ಲಿ (ಮೋಹನರಾಗ) ಆರಂಭಗೊಂಡು ಶಹನಾಯಿವಾದನದ ಮೂಲಕ ನಮ್ಮನ್ನು ಎದ್ದೇಳಿಸುವ ಬಾನುಲಿಗಳಿಲ್ಲ (ರೆಡಿಯೋ ಸ್ಟೇಷನ್‌). ಅಪರಿಮಿತವಾಗಿ ನಮ್ಮ ಇಂದ್ರಿಯಗಳಿಗೆ ದೊರೆಯುವ ಒಂದಲ್ಲ ಒಂದು ರೀತಿಯ ದೇವರ ಉಲ್ಲೇಖಗಳಿಲ್ಲ. ಹೀಗೆಲ್ಲ ಇದ್ದಾಗ್ಯೂ ನಾನು ಕಂಡ ಅನೇಕಾನೇಕ ಅನಿವಾಸಿಗಳ ಮನೆಗಳ ಮೂಲೆಗಳಲ್ಲಿ ಕಾರಿನ ಮೂಲೆಗಳಲ್ಲಿ ದೇವರಿಗೆ ಸ್ಥಾನವಿದೆ, ಜೊತೆಗೆ ಅವರವರ ಅನುಕೂಲಕ್ಕೆ ತಕ್ಕಂತೆ ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಈ ದೇವರುಗಳ ದರ್ಶನ ಮಾಡುವ ರೂಢಿಯಿದೆ. ಭಾರತದಲ್ಲಿ ಎಲ್ಲವೂ ಇದ್ದು ಅಲ್ಲಿ ನಮಗಿಲ್ಲದ ದೇವರುಗಳ ಜೊತೆ/ಸಾಂಗತ್ಯಕ್ಕೆ ಇಲ್ಲಿ ಹೆಚ್ಚಿನ ಅಗತ್ಯ ಕಂಡುಬರುತ್ತೆ.

ಜನವರಿ-ಫೆಬ್ರುವರಿ ದಿನಗಳಲ್ಲಿ ನಾನು ಆಫೀಸಿಗೆ ಹೋಗೋ ಹೊತ್ತಿಗೆಲ್ಲಾ ಸೂರ್ಯೋದಯದ ಸಮಯ. ದಿನಕ್ಕೊಂದು ಬಗೆಬಗೆಯ ಚಿತ್ತಾರವನ್ನು ಆಕಾಶದಲ್ಲಿ ಸೃಷ್ಟಿಸಿರೋ ಆ ಮೋಡಿಗೆ ಮಾರುಹೋಗದೇ ಇರಲು ಯಾರಿಗಾದರೂ ಹೇಗೆ ಸಾಧ್ಯ? ಅದೇ ಸಮಯಕ್ಕೆ ನಾನು ’ಓ ದಿನಕರ ಶುಭಕರ ಧರೆಗೆ ಬಾ ಎಂದು ಹಾಡುತ್ತೇನೆ’, ಅಥವಾ ’ಓ ಮಿತ್ರಾಯ ನಮಃ’ ಎನ್ನುತ್ತೇನೆ, ಅಥವಾ ತೈತ್ರೇಯ ಉಪನಿಷತ್ತೋ ಅಥವಾ ಮತ್ತಿನ್ನೆಲ್ಲೋ ಉಲ್ಲೇಖಗೊಂಡ ’ನಿನ್ನ ಹೊನ್ನ ಕಿರಣಗಳಿಂದ ನಮ್ಮನ್ನು ಪಾವನಗೊಳಿಸು’ ಎಂದು ಬೇಡಿಕೊಳ್ಳುತ್ತೇನೆ. ನಾನು ಹೀಗೆ ಮಾಡದಿದ್ದರೂ (ಅಥವಾ ಸೂರ್ಯನನ್ನು ನೋಡದೇ ಇದ್ದರೂ) ಸೂರ್ಯನ ದಿನಚರಿಯಲ್ಲಿ ಏನೂ ಬದಲಾಗೋದಿಲ್ಲ. ಹಾಗೆಂದಾಕ್ಷಣ ಎರಡು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುತ್ತವೆ: ೧) ನಿಯಮಿತವಾಗಿ ನಡೆಯುವ ಪ್ರಕೃತಿಯ ಕ್ರಿಯೆಗೆ ನಾನು ಪ್ರತಿಕ್ರಿಯಿಸಿದರೆಷ್ಟು ಬಿಟ್ಟರೆಷ್ಟು? ೨) ಈ ಪ್ರಕೃತಿಯ ಬದಲಾವಣೆಯ ಉಲ್ಲೇಖಕ್ಕೂ ದೇವರಿಗೂ ಏನು ಸಂಬಂಧ?

ಬಹಳ ಸುಲಭವಾಗಿ ದೇವರನ್ನು ಹೀಗೆ ಪರಿಕಲ್ಪಿಸಿಕೊಳ್ಳಬಹುದು: ನಮ್ಮ ಪ್ರಕೃತಿಯೇ ದೇವರು. ಅದರಲ್ಲಿ ಸೂರ್ಯ-ಚಂದ್ರರಿದ್ದಾರೆ, ನದಿ-ಸಾಗರಗಳಿವೆ, ಹಾವು-ಮುಂಗುಸಿ-ಹಂದಿ-ಕಪ್ಪೆ ಇತ್ಯಾದಿಗಳಿದ್ದಾವೆ, ಪಕ್ಷಿಗಳಿವೆ, ಎಲ್ಲವೂ ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸರಪಳಿ ಇದೆ. ಯಾವ ವಿಜ್ಞಾನಿಯೂ ಬರೆದಿಡದ ತತ್ವದ ಪ್ರಕಾರ ನಡೆಯುವ ಅದೆಷ್ಟೋ ಅನನ್ಯವಾದ ಚಕ್ರಗಳಿವೆ, ಕೋಟ್ಯಾನುಕೋಟಿ ಜೀವರಾಶಿ ಇದೆ, ಇನ್ನೂ ಏನೇನೋ ಇದೆ. ನನಗೆ ಮುಂಜಾನೆ ಸೂರ್ಯ ದೇವರಾಗಿ ಕಂಡು ಬಂದರೆ ಒಬ್ಬ ರೈತನಿಗೆ ಅವನ ಬೆಳೆಯನ್ನು ಕಾಡುವ ಇಲಿಗಳಿಂದ ರಕ್ಷಣೆಕೊಡುವ ಹಾವು ದೇವರಾಗಿ ಕಂಡುಬರಬಹುದು, ಇನ್ನೊಬ್ಬರಿಗೆ ಅನ್ನವನ್ನು ಕೊಡುವ ಭೂತಾಯಿ ದೇವರಾಗಬಹುದು. ನೀರೆ ಒಂದು ದೊಡ್ಡ ಸಿದ್ಧಾಂತವಾಗಬಹುದು. ಗಾಳಿ, ಮಳೆ, ಬೆಂಕಿ ಮಣ್ಣು, ಮತ್ತೊಂದು ಎಲ್ಲವೂ ಅವರವರ ದೇವರಾಗಬಹುದು. ಈ ಸೃಷ್ಟಿಯ ಅಗಾಧತೆ ಹಾಗೂ ಅದರಲ್ಲಿನ ಶಕ್ತಿ ಎಲ್ಲಗಿಂತ ಮಿಗಿಲಾಗಿರಬಹುದು - ಸಣ್ಣದಾಗಿ ದೇವರ ಮುಂದೆ ಉರಿಯುವ ನಂದಾದೀಪದ ಬೆಂಕಿಗೂ ಇತ್ತೀಚೆಗಷ್ಟೇ ಆಷ್ಟ್ರೇಲಿಯದಲ್ಲಿ ಸಾವಿರಾರು ಮೈಲನ್ನು ಕಬಳಿಸಿದ ಕಾಡ್ಗಿಚ್ಚಿಗೂ ನಂಟಿದೆ. ಈ ಭೂಮಿಯನ್ನು ಸುಮಾರು ಎಂಭತ್ತು ಭಾಗ ಆವರಿಸಿಕೊಂಡ ನೀರಿನ ಅವತಾರಗಳಿಗೆ ಅಪರಿಮಿತ ಶಕ್ತಿ ಇದೆ.

ಈ ಮೇಲೆ ಉಲ್ಲೇಖಿಸಿದ ದೇವರಿನ ಪರಿಕಲ್ಪನೆಗೆ ಜಾತಿಗಳಿಲ್ಲ, ಪ್ರವಾದಿಗಳಿಲ್ಲ, ಮತಗಳಿಲ್ಲ ಹಾಗೇ ಇವು ಎಲ್ಲವೂ ಎಲ್ಲ ಕಡೆಯೂ ಇವೆ. ಅದೇ ಸರ್ವಾಂತರ್ಯಾಮಿ. ಅದೇ ಸರ್ವಶಕ್ತ. ಅದೇ ಭಗವಂತ.

***
’ಓ ಶ್ರೀ ಗಣೇಶಾಯ ನಮಃ’ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡುತ್ತೇವೆ. ಅಪರೂಪಕ್ಕೊಮ್ಮೆ ದೇವಸ್ಥಾನದಲ್ಲಿ ಕಾಲು ನೋಯಿಸಿಕೊಂಡು ವಿಷ್ಣು ಸಹಸ್ರನಾಮ ಓದಿ ಬರುತ್ತೇವೆ. ಧರ್ಮಸ್ಥಳದಲ್ಲಿ ಕೊಟ್ಟ ಶಿವಸಹಸ್ರ ನಾಮಾರ್ಚನೆಯ ಪುಸ್ತಕದಲ್ಲಿ ಕೊನೆಯ ಪಕ್ಷ ಒಂದು ನೂರು ನಾಮವನ್ನಾದರೂ ಬಾಯಿ ಪಾಠ ಮಾಡಿಕೊಂಡಿದ್ದೇವೆ. ಹಬ್ಬ-ಹರಿದಿನಗಳಿಗೆ ನಮ್ಮದೇ ಒಂದು ವರ್ಶನ್ನನ್ನು ಅನ್ನು ಸೃಷ್ಟಿಸಿಕೊಂಡಿದ್ದೇವೆ. ದಿನವನ್ನು ಆರಂಭಿಸುವ ಮೊದಲು ದೇವರ ಮುಂದೆ ದೀಪ ಹಚ್ಚುತ್ತೇವೆ, ಅಪರೂಪಕ್ಕೊಮ್ಮೆ ಸ್ಮೋಕ್ ಡಿಟೆಕ್ಟರುಗಳಿಗೆ ಹೆದರಿಕೊಂಡೇ ಊದುಬತ್ತಿಯನ್ನು ಉರಿಸುತ್ತೇವೆ. ಹಬ್ಬ ಹರಿದಿನಗಳೇನಾರೂ ವಾರಾಂತ್ಯಕ್ಕೆ ಒದಗಿ ಬಂದರೆ ದೇವಸ್ಥಾನಗಳ ಕಡೆಗೆ ಮುಖ ತಿರುಗಿಸುತ್ತೇವೆ.

ಈ ದೇವಸ್ಥಾನ ಎನ್ನುವುದು ನಮ್ಮ ಸಮುದಾಯ. ಭಾರತದಲ್ಲಿ ವಿಷ್ಣು ದೇವರ ಮುಂದೆ ಹಾಗೂ ಆಜೂ-ಬಾಜಿನಲ್ಲಿ ಹೆಚ್ಚು ದೇವರುಗಳನ್ನು ನಾವು ಸೃಷ್ಟಿಸಿಕೊಳ್ಳೋದಿಲ್ಲ, ಆದರೆ ನಮ್ಮ ಅನಿವಾಸಿ ಬದುಕಿನಲ್ಲಿ ನಾವು ಎಡೆತಾಕುವ ದೇವಸ್ಥಾನಗಳ ಹೆಸರುಗಳು ಏನೇ ಇದ್ದರೂ ಅದರಲ್ಲಿ ಎಲ್ಲವೂ ಇವೆ. ಗಣೇಶ (ಅದರಲ್ಲೂ ಹಲವಾರು ವಿಧ, ಭಂಗಿ, ಗಾತ್ರ - ಒಂದೇ ದೇವಸ್ಥಾನದ ಹಲವು ಕಡೆ), ಶಿವ, ಅಂಬಿಕೆ, ಸತ್ಯನಾರಾಯಣ ಸ್ವಾಮಿ (ಪರಿವಾರ), ರಾಮ (ಪರಿವಾರ), ಭೂಮಿ, ದುರ್ಗೆ, ಲಕ್ಷ್ಮಿ, ಸರಸ್ವತಿ, ಪಾರ್ವತಿ (ಪರಿವಾರ), ಶ್ರೀಕೃಷ್ಣ (ಪರಿವಾರ), ಆಂಜನೇಯ, ನವಗ್ರಹಗಳು, ಇತ್ಯಾದಿ - ಜೊತೆಗೆ ಮುಖ್ಯ ದೇವತೆ (ದೇವಸ್ಥಾನದ ಹೆಸರಿಗೆ ತಕ್ಕಂತೆ). ದೊಡ್ಡ ಬಾಲಾಜಿಯು ವಿಗ್ರಹದ ಕೆಳಗೆ ಸಣ್ಣದೊಂದಿದೆ, ಅದಕ್ಕೂ ಚಿಕ್ಕದಾಗಿ ಮತ್ತೊಂದು ಗಣೇಶ ಮೂರ್ತಿ ಇದೆ. ಪ್ರದಕ್ಷಿಣೆ ಹಾಕುವಾಗ ಅಲ್ಲಲ್ಲಿ ಬೇಕಾದಷ್ಟು ಸಣ್ಣ-ಪುಟ್ಟ ಗಣೇಶ-ಶಿವರು ಕಂಡುಬರುತ್ತಾರೆ.

ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಅನಿವಾಸಿಗಳು ಸೃಷ್ಟಿಸಿಕೊಂಡ ದೇವಸ್ಥಾನಗಳು ದೇವಸ್ಥಾನಗಳೇ ಅಲ್ಲ ಎನ್ನಬಹುದು. ಇಲ್ಲಿನ ಮಳೆ-ಛಳಿ-ವ್ಯವಸ್ಥೆಗೆ ತಕ್ಕಂತೆ ಬನಿಯನ್-ಕಾಲುಚೀಲ ಧರಿಸಿ ಪೂಜೆ ನಡೆಸಿಕೊಡುವ ಅರ್ಚಕರಿದ್ದಾರೆ. ಆ ಮೂಲ ವಿನೀತ ಭಾವನೆಯಿಂದ ದೇವರಿಗೆ ನಮ್ಮ ಪ್ರಾರ್ಥನೆಯನ್ನು ಅರ್ಪಿಸಿಕೊಳ್ಳುವ (ನಮ್ಮಲ್ಲಿ) ಮನೋಭಾವನೆಯಲ್ಲಿ ಬಹಳಷ್ಟು ಬದಲಾವಣೆ ಇದೆ/ಆಗಿದೆ. ಬೇಸಿಗೆ ಸಮಯದಲ್ಲಿ ಹೊರಗಡೆ ಜೀನ್ಸ್ ಚೆಡ್ಡಿ(ಬರ್ಮುಡಾ) ವನ್ನು ಧರಿಸಿಕೊಂಡು ಓಡಾಡುವ ನಮಗೆ ದೇವಸ್ಥಾನಗಳಲ್ಲಿ ’ಶಿಸ್ತಾಗಿ ಬನ್ನಿ’ ಎನ್ನುವ ವಿನಂತಿ/ಆದೇಶವಿದೆ. ಶೂಗಳನ್ನು ಯಾವಾಗಲೂ ರ್ಯಾಕ್‌ನಲ್ಲೇ ಇಡಿ ಎಂದು ಅದ್ಯಾವುದೇ ಭಾಷೆಯಲ್ಲಿ ಅದೆಷ್ಟೇ ಬೋರ್ಡುಗಳನ್ನು ಬರೆಸಿಹಾಕಿದ್ದರೂ ಅದನ್ನೆಲ್ಲ ಧಿಕ್ಕರಿಸಿ ಬಾಗಿಲ ಬಳಿಯೇ ಚಪ್ಪಲಿ/ಶೂ ರಾಶಿ ಪೇರಿಸುವ ’ಅದು ನಮಗಲ್ಲ’ ಎಂದು ಕೊಡಗಿಕೊಳ್ಳುವ ಮನೋಭಾವನೆ ಇದೆ (ಇದೇ ಒಂದು ಅಂಶ ಸಾಕು ನಾವು, ಭಾರತೀಯರು ರೂಲ್ಸ್, ರೆಗ್ಯುಲೇಶನ್ನ್ ಹಾಗೂ ಕಾನೂನನ್ನು ಹೇಗೆ ಪರಿಪಾಲಿಸುತ್ತೇವೆ ಎಂದು ಸಾಧಿಸಲು).

ಹೀಗೆ ನಮ್ಮ ಮನೆ, ಮನ, ಕಾರುಗಳಲ್ಲಿರುವುದು ದೇವರೋ ಅಥವಾ ಈ ದೇವಸ್ಥಾನವೆಂದು ಹೆಸರಿಟ್ಟುಕೊಂಡ ಸಮುದಾಯಗಳಲ್ಲಿರುವುದು ದೇವರೋ ಅಥವಾ ನಮ್ಮ ಊರು/ಪರಂಪರೆಯಲ್ಲಿರುವುದು ದೇವರೋ ಎನ್ನುವ ಪ್ರಶ್ನೆ ಬಹುಷಃ ಎಲ್ಲರಿಗೂ ಬಂದಿರಬಹುದು. ಇಷ್ಟೆಲ್ಲಾ ದೇವರಿನ ಪರಿಕಲ್ಪನೆ ಸಾಲದು ಎಂದು ನಮ್ಮ ನಮ್ಮ ಕಲ್ಪನೆಯ ಮಠಗಳನ್ನು ಹುಟ್ಟು ಹಾಕಿಕೊಂಡಿದ್ದೇವೆ. ಸಂಕಟಕ್ಕೆ ತಿರುಪತಿಯ ವೆಂಕಟರಮಣನಿದ್ದಾನೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯಿದೆ (ಒಂದು ಆಬ್ಜೆಕ್ಟ್ ಪರಿಕಲ್ಪನೆ ಗಮನಿಸಿ), ಮಂತ್ರಾಲಯವಿದೆ, ಹೊರನಾಡಿದೆ, ಶೃಂಗೇರಿಯಿದೆ. ನಮ್ಮ ಊರಿನ ಕೈಟಭೇಶ್ವರನಿದ್ದಾನೆ, ಸರ್ಕಲ್ಲಿನ ಚೌಡಮ್ಮಳಿದ್ದಾಳೆ, ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ಇದ್ದಾನೆ, ಸುಬ್ರಹ್ಮಣ್ಯ ಸ್ವಾಮಿಯ ಸಾನಿಧ್ಯವಿದೆ. ನಮ್ಮ ಹಿಂದೂ ಪರಿಕಲ್ಪನೆಯೇ ಎಷ್ಟು ವಿಸ್ತಾರವಾದುದೆಂದು ನಾನು ಸೋಜಿಗಗೊಂಡಿದ್ದೇನೆ - ಅವರವರ ಅನುಕೂಲಕ್ಕೆ ತಕ್ಕಂತೆ ಯಾರು/ಏನನ್ನು ಬೇಕಾದರೂ ಮೆಚ್ಚಿ/ಹಚ್ಚಿಕೊಳ್ಳುವ ಸ್ವಾತಂತ್ರ್ಯವಿದೆ.


***

ಸೃಷ್ಟಿ, ಪ್ರಕೃತಿ ಹಾಗೂ ಮೂರ್ತಿ ಪೂಜೆಯ ಆಧಾರದಲ್ಲಿ ಈ ಎಲ್ಲ ಉಲ್ಲೇಖಗಳನ್ನು ಮಂಡಿಸಿದಂತೆ ಒಂದು ಅಂಶ ಪ್ರಸ್ತುತವಾಗುತ್ತದೆ - ಅದೇ ನಮ್ಮ ಸಮುದಾಯ. ಭಾರತದಲ್ಲಿ ನಾವು ಬೆಳೆದುಬಂದಂತೆ ಒಂದು (ಮೆಜಾರಿಟಿ) ವ್ಯವಸ್ಥೆಯ ಅಂಗವಾಗಿದ್ದೆವು, ಆ ವ್ಯವಸ್ಥೆ ಇಲ್ಲಿ ಇರದಿದ್ದ ಮಾತ್ರಕ್ಕೆ ಅದನ್ನು ನಾವು-ನಾವೇ ಹುಟ್ಟುಹಾಕಿಕೊಂಡಿರೋದು (ಪ್ರಯತ್ನ). ಸಂಘಜೀವ ಪ್ರತಿಯೊಬ್ಬರಿಗೂ ಬೇಕಾದ ಹಾಗೇ ಒಂದಲ್ಲ ಒಂದು ಗೋಡೆಗೆ ನಾವು ಒರಗಿಕೊಳ್ಳಲೇ ಬೇಕಾಗುತ್ತದೆ. ನಮ್ಮ ಮನ-ಕಾರು-ಮನೆಗಳಲ್ಲಿನ ದೇವರುಗಳನ್ನು ಒಂದು ಸ್ವಲ್ಪ ದಿನಗಳ ಮಟ್ಟಿಗೆ ತೆಗೆದುಹಾಕಿ ನೋಡಿದಾಗ (ಸಾಧ್ಯವಿದ್ದರೆ) ಅಲ್ಲಿ ಒಂದು ನಿರ್ವಾತ (ವ್ಯಾಕ್ಯೂಮ್) ಹುಟ್ಟತ್ತದೆ, ಈ ನಿರ್ವಾತದ ವಿಶೇಷವೆಂದರೆ ಅದನ್ನು ಮತ್ತೊಂದರಿಂದ ತುಂಬಲೇ ಬೇಕಾಗುತ್ತದೆ. ಒಂದು ರೀತಿಯ ಪೆಂಡುಲಮ್ ಗುಂಡು ಇದ್ದ ಹಾಗೆ, ನೀವು ಒಂದು ಎಕ್ಸ್‌ಟ್ರೀಮ್‌ಗೆ ತೆಗೆದುಕೊಂಡು ಹೋದಂತೆಲ್ಲ ಅದು ಅಷ್ಟೇ ವಿರುದ್ಧ ದಿಕ್ಕಿಗೆ ಚಲಿಸುವ ಸಹಜತೆ ಇರುವ ಹಾಗೆ.

ಪ್ರತಿಯೊಬ್ಬರಿಗೂ ಅವರವರ ಬೇಡಿಕೆಗಳಿವೆ ಹಾಗೂ ಅಗತ್ಯಗಳಿವೆ, ಅದಕ್ಕೆ ತಕ್ಕಂತೆ ಅವರವರ ಮನಸ್ಸಿನಲ್ಲಿ ಎಲ್ಲೋ ಮೂಲೆಯಲ್ಲಿ ದೇವರ ಪರಿಕಲ್ಪನೆ ಇದೆ. ದೇವರು ಇಲ್ಲ ಎನ್ನುವ ವಾದವೂ, ದೇವರ ಮೇಲಿನ ಸೇಡೂ, ವಿರೋಧಾಲೋಚನೆಗಳು ಎಲ್ಲವೂ ಆ ದೇವರ ಕೃಪೆಯೇ ಎಂದುಕೊಂಡರೆ ಎಲ್ಲವೂ ದೇವರ ಮಯ. ದೇವರು ಎನ್ನುವ ಭಾವನೆ ಅಥವಾ ಆ ಭಾವನೆ ಇಲ್ಲದಿರುವ ಭಾವನೆಯೇ ದಿವ್ಯವಾದುದು, ಅಷ್ಟೇ!

Monday, February 16, 2009

ಈಗಿನ ಹುಡ್ರು ಕಥೆ

ಪಾಪ, ಈಗಿನ ಹುಡ್ರು ತಮ್ ತಮ್ ಒಳಗೆ ಹಿಂಗೂ ಮಾತಾಡ್‌ಕೊಂತರೆ ನೋಡಿ, ಕರ್ರಗಿದ್ದೋರನ್ನ ಕರಿಯಾ ಅನ್ನೋದರಲ್ಲಿ ಅಫೆನ್ಸ್ ಏನಿದೆ? ದಿನಕ್ಕೆ ಐವತ್ತು ಸೆಂಟ್ಸ್ ಕೊಟ್ಟು ವಾರಕ್ಕೊಂದು ಸರ್ತಿ ಉದಯಾ ಟಿವಿ ನೋಡೋ ಭಾಗ್ಯದ ದೆಸೆಯಿಂದ ಈ ಹಾಡು ಕಿವಿಗೆ ಬಿದ್ದು ಹೀಗೆ ಬರೀಬೇಕಾಯ್ತು ನೋಡಿ.

ಕರಿಯಾ ಐ ಲವ್ ಯೂ
ಕರುನಾಡ ಮೇಲ್ ಆಣೆ
ಬೆಳ್ಳಿ ಐ ಲವ್ ಯೂ
ಬಿಳಿ ಮೋಡದಾ ಮೇಲ್ ಆಣೆ

ಭಾಳಾ ಹಿಂದಕೆ ಏನಿಲ್ಲ ಪ್ರೇಮಿಗಳೆಲ್ಲ ಇನ್ನೂ ಏನೇನನ್ನೋ ಇಟ್ಟು ಆಣೆ ಮಾಡಿಕೊಂತಿದ್ರು ಇಂದಿನ್ ಕಾಲ್ದಲ್ಲಿ ಅವೆಲ್ಲಾ ಶಾನೆ ಬದ್ಲಾಗಿರಂಗಿದೆ ಬಿಡಿ, ಏನ್ ಮಾಡಣ. ಇವತ್ತಿನ್ ಹುಡ್ರೆಲ್ಲಾ ಟೈಪ್‌ರೈಟರ್ ಕುಟ್ಟಿ ನೋಡಿಲ್ಲ, ರೆಕಾರ್ಡ್ ಪ್ಲೇಯುರ್ ತಟ್ಟೇನೆಲ್ಲ ಕಂಡೇ ಇಲ್ಲ. ನಮ್ ಕಾಲ್ದ ರೆಕಾರ್ಡ್ ತಟ್ಟೆಗಳ ಮೇಲ್ ಧೂಳೂ ಪಾಳೂ ಕುಂತಿದ್ದೇ ಆದ್ರೆ ಬರೀ ಹೇಳಿದ್ದೇ ಹೇಳ್ತಿತ್ತು, ಅದೇ ಈಗಿನ ಕಾಲ್ದ ತಟ್ಟೆಗಳೋ ಕೆಲ್ಸಾ ಮಾಡೋದೇ ನಿಲ್ಲಿಸ್ತವೆ. ಹೇಳಿದ್ದೇ ಹೇಳೋದ್ ಬೆಷ್ಟೋ ಅಥ್ವಾ ಕೆಲ್ಸಾ ನಿಲ್ಸೋದ್ ಬೆಷ್ಟೋ ನಿಮ್ ನಿಮ್ಗೇ ಬಿಟ್ಟಿದ್ದು. ಕೆಲವಂದ್ ಸರ್ತಿ ಹೇಳಿದ್ದೇ ಹೇಳೋ ಕಿಸ್‌ಬಾಯ್ ದಾಸ್ರೇ ಸರಿ, ಸುಮ್ಕಿರ್ ಮಂಗ್ಯಾನ್ ಮಕ್ಳೀಗ್ ಹೋಲ್ಸಿ ನೋಡಿದ್ರೆ ಅನ್ಸಲ್ಲಾ?

ನಿನಗೊಂದು ಪ್ರೇಮದ ಪತ್ರಾ
ಬರೆಯೋದು ನನಗಾಸೆ
ನಾನೆ ಇರುವೇ ಹತ್ರ
ಬಿಡು ಆಸೆ ಓ ಕೂಸೇ


ಆಯ್ತಲ್ಲಾ ಕಥೇ, ಪ್ರೇಮದ ಪತ್ರಾ ಇರ್ಲಿ, ಪತ್ರದ ಗೋಜಿಗೇ ಹೋಗಂಗಿಲ್ಲ ಈಗಿನ ಹುಡ್ರೂ ಅಂತೀನಿ. ಎಲ್ಲೋ ಇ-ಮೇಲೂ ಪಾಮೇಲೂ ಅಂತ ಕುಟ್ಟಿಗಂಡು ಬದುಕ್ಯಂಡಿದ್ದ್ ಬಡ್ಡಿ ಹೈಕ್ಳು ಈಗೀಗ ಎಸ್‌ಎಮ್ಮೆಸ್ ದಾರಿ ಹಿಡಕಂಡು ಒಂಥರಾ ಕಾಡುಕುದ್ರೆ ದಾರಿ ಹಿಡಿದವೆ ಇವರ ಕಮ್ಮ್ಯೂನಿಕೇಷನ್ನು. ಜೊತೆಗೆ ಸೆಂಟ್ರಲೈಜ್ಡ್ ಪೋಸ್ಟ್ ಆಫೀಸ್ ಕಥೆ ಏನ್ ಹೇಳಾಣ, ಅವರ ಪತ್ರಗಳ ಎಣಿಕೆ ಕಡಿಮೆ ಆದಂತೆ ಅವರ ಕಮ್ಮೀ ಆದ ಆದಾಯ ನೋಡಿ ಇಂದಿನ ಪೋಸ್ಟ್ ಮಾಸ್ಟರ್ ಜನರಲ್ಲುಗಳಿಗೆ ರಾತ್ರಿ ನಿದ್ದೇನೇ ಬರಂಗಿಲ್ಲಂತೆ ನಿಜವೇ? ಇವತ್ತಿನ ಮೊಬೈಲ್ ಫೋನ್ ಜಮಾನಾದಾಗೆ ಜನಗಳು ಲೆಟ್ರು ಬರೆಯೋದಿರ್ಲಿ ಮಾತೇ ಆಡೇ ಬರೀ ಫಿಂಗರ್ರುಗಳ ಮಸಲ್ಲುಗಳನ್ನು ಬೆಳೆಸ್ತಾ ಇದಾರಂತೆ ಹಿಂಗೇ ನಡೆದ್ರೆ ಇನ್ನು ಮುಂದಿನ ಪೀಳಿಗೆಗಳಿಗೆ ಒಂದೊಂದು ಬೆರಳು ಹೆಚ್ಚು ಹುಟ್ಟುತ್ತೋ ಏನೋ - ವಿಕಾಸವಾದದ ದೊರೆಗಳ್ನೇ ಕೇಳ್ಬೇಕು. ಬ್ಲ್ಯಾಕ್‌ಬೆರಿ ಅಂತಂದು ಜೀವನದುದ್ದಕ್ಕೂ ಯಾವ್ದೇ ಬೆರ್ರಿನ್ನೂ ಚೆರ್ರಿನ್ನೂ ನೋಡ್ದೇ ಇರೋರಿಗೆ ಕಮ್ಮ್ಯೂನಿಕೇಷನ್ನ್ ಫಿವರ್ರ್ ಹುಟ್ಟಿಸಿರೋರನ್ನ ಜೈಲಿಗೆ ಹಾಕ್ಬೇಕು, ಮತ್ತೇನು. ಇಷ್ಟೆಲ್ಲಾ ಮಾಧ್ಯಮಾ, ಕಮ್ಮ್ಯೂನಿಕೇಷನ್ನೂ ಅಂತಾ ಇದ್ರೂ ಜನಗಳ ನಡ್ವೆ ಸಂಬಂಧಗಳ ಅಪಸ್ವರ ಹೆಚ್ತಾನೇ ಇರೋದು ಇನ್ಯಾವ ವಾದದ ಮಾತೂ ಅಂತೀನಿ.

ಇವತ್ತಿನ ಕಾಯಂಗಿಲ್ಲ, ಕೆನೆ ಕಟ್ಟಂಗಿಲ್ಲ. ನೋಡಿಕ್ಯಂತಿರಿ ಇವತ್ತಲ್ಲ ನಾಳೆ ಒಂದು ನಿಮಿಷದೊಳಗೆ ಹಾಲು ಕೆನೆಕಟ್ಟೋ ಯಂತ್ರ ಕಂಡ್ ಹಿಡಿತಾರೋ ಇಲ್ಲಾ ಅಂತ. ಮೊಸರಿಗೆ ಇಡೋವಾಗ ಹಾಲನ್ನು ಬಿಸಿ ಮಾಡಿ ಆಮೇಲೆ ತಣ್ಣಗೆ ಮಾಡಿ ಅದರ ಮೇಲೆ ಹೆಪ್ಪು ಯಾಕ್ ಹಾಕಬೇಕು, ಯಾರ್ ಮಾಡಿದ್ರಪ್ಪಾ ಆ ನೀತೀನ.

Monday, February 09, 2009

ಅವರವರ ಹಾಡು ಅವರದು...

ಕೆಳಗಿನ ಮೂರು ವಾರದಿಂದ ಭರ್ಜರಿ ಕೆಲಸ. ಜನವರಿ ಬಂತೋ ಬಂತು ಬಹಳಷ್ಟು ಬದಲಾವಣೆಗಳನ್ನ ತಂದಿತು, ಅದರಲ್ಲಿ ನನ್ನ ಬದಲಾದ ಬಾಸು ಅದರ ಜೊತೆಗೆ ಬಂದ ಪ್ರಾಜೆಕ್ಟು ಇವೆಲ್ಲ ಉಳಿದವನ್ನೆಲ್ಲ ನಗಣ್ಯ ಮಾಡಿವೆ ಎಂದರೆ ತಪ್ಪೇ ಇಲ್ಲ. ಸಿನಿಮಾದಲ್ಲಿ ಆಗೋ ಹಾಗೆ ನಮ್ಮ ಆಫೀಸಿನಲ್ಲಿ ಕಳೆದ ಐದು ವಾರಗಳಲ್ಲಿ ಅದೆಷ್ಟೋ ಬದಲಾವಣೆಗಳು ನಡೆದು ಹೋದವು, ಇದ್ದುದರಲ್ಲಿ ಸ್ಟೇಬಲ್ಲ್ ಆಗಿರೋ ವಿಡಿಯೋ ಡಿವಿಜನ್ನಲ್ಲಿ ಹೀಗಾದರೆ ಇನ್ನುಳಿದ ಕಡೆ ಹೇಗೆ ಎಂದು ಯಾರೂ ಊಹಿಸಿಕೊಳ್ಳಬಹುದು, ಅದೂ ಇನ್ನುಳಿದ ಕಂಪನಿಗಳಲ್ಲಿ ಅದರಲ್ಲೂ ಫೈನಾನ್ಸಿಯಲ್ ಇಂಡಸ್ಟ್ರಿಯಲ್ಲಂತೂ ಭರ್ಜರಿ ಕಷ್ಟವಂತೆ.

ನನ್ನ ಇನ್ ಬಾಕ್ಸುಗಳಲ್ಲಿ ಈಗಾಗಲೇ ಕೆಲಸ ಕಳೆದುಕೊಂಡ ಹಲವರ ರೆಸ್ಯುಮೆ ಬಂದು ಹೋಗಿವೆ. ಅವರಿಗೆ ಇಂತಲ್ಲಿ ಕೆಲಸ ಹುಡುಕಿ ಎನ್ನುವುದಾಗಲೀ ಅಥವಾ ಹೀಗೆ ಮಾಡಿ ಎಂದು ಹೇಳುವುದಾಗಲೀ ಈಗ ಮೊದಲಿನಷ್ಟು ಸುಲಭವಂತೂ ಅಲ್ಲ. ಜನವರಿ ಒಂದರಲ್ಲೇ ಅಮೇರಿಕದಲ್ಲಿ ಸುಮಾರು 600 ಸಾವಿರ ಜನ (ನಾನ್ ಫಾರ್ಮ್) ಪೇರೋಲ್ ನಿಂದ ಹೊರಗೆ ಬಂದರಂತೆ, ಇನ್ನು ಇದೇ ಗತಿ ಇನ್ನೊಂದೆರಡು ತಿಂಗಳು ಅಥವಾ ವರ್ಸ್ಟ್ ಎಂದರೆ ಇನ್ನೊಂದರೆ ಕ್ವಾರ್ಟರು ಮುಂದುವರೆದದ್ದೇ ಆದರೆ ಒಬ್ಬೊರನೊಬ್ಬರು ಕಿತ್ತು ತಿನ್ನೋ ಪರಿಸ್ಥಿತಿ ಬರೋದಂತೂ ನಿಜ. ಯಾವಾಗಲೂ ಸೊನ್ನೆಯಿಂದ ಕೆಳಗೆ ಕೊರೆಯುತ್ತಿರುವ ಛಳಿ ಇರುವ ನಮ್ಮೂರಿನಲ್ಲಿ ನಿನ್ನೆ ಮರ್ಕ್ಯುರಿ ಅರವತ್ತು ಡಿಗ್ರಿ (ಫ್ಯಾರನ್‌ಹೈಟ್) ದಾಟಿ ಮುಂದು ಹೋಯಿತೆಂದುಕೊಂಡು ನಾನು ಜನರೆಲ್ಲ ಶಾಪ್ಪಿಂಗ್ ಮಾಲ್‌ಗಳಲ್ಲಿ ತುಂಬಿರುತ್ತಾರೆ ಎಂದುಕೊಂಡದ್ದು ತಪ್ಪಾಗಿ ಹೋಯಿತು. ವಾಲ್‌ಮಾರ್ಟ್ ಮುಂದಿನ ಪಾರ್ಕಿಂಗ್ ಲಾಟ್‌ಗಳೂ ಖಾಲಿ ಇದ್ದುದು ಇಂತಹ ದಿನಗಳಲ್ಲಿ ದೊಡ್ಡ ಆಶ್ಚರ್ಯವೇ ಸರಿ. ಇವೆಲ್ಲ ಅತಿಕಷ್ಟದ ಫೈನಾನ್ಸಿಯಲ್ ಸಮಯ, ಇಂತಹ ಸಮಯದಲ್ಲಿ ನಾವೆಲ್ಲ ಸರ್ವೈವಲ್ ಮೋಡ್‌ಗೆ ಹೋಗಿಬಿಟ್ಟಿರೋದು ಸಹಜವೇ.

ಈ ಕಷ್ಟದ ಆರ್ಥಿಕ ದಿನಗಳಲ್ಲಿ ಒಬ್ಬರಿಗೊಬ್ಬರಿಗೆ ಫ್ಯಾಮಿಲಿ ಸಪೋರ್ಟ್ ಖಂಡಿತ ಬೇಕೇ ಬೇಕಾಗುತ್ತದೆ. ಬೇಕಾದಷ್ಟು ಇದ್ದು, ತಿಂದು-ತೇಗಿ, ದುಂದು ವೆಚ್ಚ ಮಾಡುವ ದಿನಗಳಿಗಿಂತ ಕಠಿಣ ಆರ್ಥಿಕ ಪರಿಸ್ಥಿತಿ ಇರುವ ದಿನಗಳಲ್ಲೇ ಫ್ಯಾಮಿಲಿಗಳು ಒಬ್ಬರಿಗೊಬ್ಬರು ಕಷ್ಟಕ್ಕಾಗುವುದು ಎನ್ನುವುದು ನನ್ನ ಥಿಯರಿ. ಈ ದಿನಗಳಲ್ಲಿ ಎಷ್ಟೇ ಕಷ್ಟ ಬಂದರೂ ನಾವು ಒಬ್ಬೊರಿಗೊಬ್ಬರು ಆಗಿಯೇ ತೀರುತ್ತೇವೆ ಎನ್ನೋದು ಒಂದು ಕುಟುಂಬದ ಮೂಲ ಮಂತ್ರವಾಗಿ, ಜನರೆಲ್ಲ ದಿನ-ವಾರ-ತಿಂಗಳುಗಳನ್ನು ನಿಧಾನವಾಗಿ ತಳ್ಳುತ್ತಲಿರುವಾಗ ಜಗಳ-ವೈಮನಸ್ಯ-ವಿಚ್ಛೇದನಗಳಿಗೆ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಎಂತಲೇ ಹೇಳಬೇಕಾಗುತ್ತದೆ. ಜೊತೆಗೆ ಪ್ರತಿಯೊಂದನ್ನು ಒಟ್ಟಿಗಿಡುವುದಕ್ಕೆ ಎಷ್ಟು ದುಡ್ಡು ತೆರಬೇಕಾಗುತ್ತದೆಯೋ ಅದನ್ನೆಲ್ಲ ವಿಭಜಿಸೋದಕ್ಕೂ ಹೆಚ್ಚೂಕಡಿಮೆ ಅಷ್ಟೇ ಖರ್ಚಾಗುತ್ತದೆ ಎಂದರೂ ತಪ್ಪಲ್ಲ.

ನಮ್ಮ ಇನ್‌ವೆಷ್ಟ್‌ಮೆಂಟ್ ಪೋರ್ಟ್‌ಫೋಲಿಯೋ ಆಗಲೀ, ನಮ್ಮ ಉಳಿತಾಯವನ್ನಾಗಲೀ ನೋಡಿದರೆ ಕಣ್ಣಲ್ಲಿ ನೀರೇ ಬರುತ್ತೆ. ಕಳೆದ ವರ್ಷ ಪ್ರತಿಶತ ನಲವತ್ತರಷ್ಟು ಮೌಲ್ಯದಲ್ಲಿ ಕುಸಿದಿದ್ದ ನಂಬರುಗಳಿಗೆ ಈ ವರ್ಷದ ಜನವರಿಯಲ್ಲಿ ಮತ್ತೂ ಹತ್ತು ಪರ್ಸೆಂಟ್ ಕಡಿತ. ಇವೆಲ್ಲ ಇಳಿಮುಖದಿಂದಾಗಿ ನನ್ನಂತಹವರಿಗೆ ಸುಮಾರು ಆರೇಳು ವರ್ಷಗಳಲ್ಲಿ ದುಡಿದು-ಕೂಡಿಹಾಕಿದ್ದು ಏನೇನೂ ಇಲ್ಲ ಎನ್ನುವಂಥ ಪೆಚ್ಚು ಅನುಭವ. ಹ್ಞೂ, ಇವತ್ತಲ್ಲ ನಾಳೆ ಮುಂದೆ ಬಂದೇ ಬರುತ್ತೆ ಆದರೆ ನಮ್ಮ ನಂಬರುಗಳೆಲ್ಲ ಈಗ ಏಳು ವರ್ಷದ ಕೆಳಗೆ ಹೋಗಿವೆ, ಇದು ಇನ್ನು ಮೇಲೆ ಬರಲು ಮೂರು ವರ್ಷಗಳಾದರೂ ಬೇಕು, ಅಲ್ಲಿಗೆ ಈ ಹತ್ತು ವರ್ಷಗಳಲ್ಲಿ ನಾವು ಕಡಿದ್ದು ಹಾಕಿದ್ದು ಶೂನ್ಯ, ಅಷ್ಟೇ. ಈ ನಂಬರುಗಳಿಗೆಲ್ಲ ನನ್ನ ಧಿಕ್ಕಾರವಿರಲಿ, ಅದರ ಬದಲಿಗೆ ಚಿರಾಸ್ತಿ (immovable assett), ಅನ್ನೋದನ್ನೇನಾದರೂ ಗಳಿಸಿದ್ದರೆ ಅದು ಇಷ್ಟರ ಮಟ್ಟಿಗೆ ಕುಸಿಯುತ್ತಿರಲಿಲ್ಲ. ಉದಾಹರಣೆಗೆ ಹತ್ತು ವರ್ಷದ ಹಿಂದೆ ಒಂದೈದು ಎಕರೆ ತೋಟ ಮಾಡಬಹುದಾದ ಭೂಮಿಯನ್ನು ಖರೀದಿಸಿ ಅದರಲ್ಲಿ ಥರಥರನ ವಾಣಿಜ್ಯ ಬೆಳೆಯನ್ನು ಆರಂಭಿಸಿದ್ದರೆ ಇವತ್ತಿಗೆ ಒಂದು ಗಂಜಿ ಕಾಸಿನ ಆದಾಯವಾದರೂ ಬರುತ್ತಿತ್ತು.

ನಾವು ಮೊದಲೆಲ್ಲ - ’ಅಮೇರಿಕಕ್ಕೆ ಏಕೆ ಬಂದಿರಿ?’ ಎನ್ನುವ ಪ್ರಶ್ನೆಯನ್ನು ಕಠಿಣವಾದ ಪ್ರಶ್ನೆ ಎಂದುಕೊಳ್ಳುತ್ತಿದ್ದೆವು, ಈಗ ’ಭಾರತಕ್ಕೆ ಏಕೆ ಹಿಂತಿರುಗಿ ಹೋಗಬೇಕು?’ ಎನ್ನುವುದು ಅದಕ್ಕಿಂತ ಕಠಿಣ ಪ್ರಶ್ನೆಯಾಗಿ ತೋರುತ್ತಿದೆ. ಮೊದಲೆಲ್ಲ ಹಿಂತಿರುಗಿ ಹೋಗೋದಾದರೂ ಒಂದು ಆಫ್ಷನ್ನ್ ಆಗಿತ್ತೋ ಏನೋ, ಈಗಂತೂ - ಥ್ಯಾಂಕ್ಸ್ ಟು ಹತ್ತು ವರ್ಷದ ಹಿಂದಿನ ನಂಬರ್ಸ್ - ನಾವು ಹಿಂತಿರುಗಿ ಹೋಗೋದು ಸಾಧ್ಯವೇ? ಎಲ್ಲಿಗೆ, ಹೇಗೆ, ಯಾವ ಕೆಲಸಕ್ಕೆ, ಯಾವ ಊರಿಗೆ, ಎಂದು - ಮೊದಲಾದ ಪ್ರಶ್ನೆಗಳಿಗೆ ಯಾವ ಉತ್ತರವಂತೂ ತೋರೋದಿಲ್ಲ. ಅಮೇರಿಕದ ವ್ಯವಸ್ಥೆಯನ್ನು ಆಧರಿಸಿ ಉಳಿದ ವ್ಯವಸ್ಥೆಗಳು, ಉಳಿದವನ್ನು ಆಧರಿಸಿ ಆಮೇರಿಕದ್ದು ಎನ್ನುವಲ್ಲಿ ಇಲ್ಲಿನ ಕಷ್ಟ ಎಲ್ಲಾ ಕಡೆಗಿದೆ - ಬೆಂಗಳೂರಿನಿಂದ ಹಿಡಿದು ಬೀಜಿಂಗ್‌ನವರೆಗೆ ಎಲ್ಲರಿಗೂ ಬಿಸಿ ಈಗಾಗಲೇ ತಟ್ಟಿದೆ. ಕೆಲಸ ಕಳೆದುಕೊಳ್ಳುವವರ ಲೆಕ್ಕ ಮುಗಿಲು ಮುಟ್ಟಿದೆ ಹಾಗೇ ಕಂಪನಿಗಳೂ ಸಹ ಸರ್ವೈವಲ್ಲ್ ಮೋಡಿಗೆ ಹೋಗಿ ಬಿಟ್ಟಿವೆ, ಅನಗತ್ಯ ಖರ್ಚು ವೆರ್ಚಗಳು ಈಗಾಗಲೇ ನಿಂತು ಹೋಗಿವೆ. ನಮ್ಮ ಕಂಪನಿಯಲ್ಲಿ ಮೊದಲೆಲ್ಲ ಟೀಮ್ ಲಂಚ್ ಅನ್ನೋದನ್ನು ನನ್ನಂಥವರು ಎಷ್ಟು ಸಾರಿ ಬೇಕಾದರೂ ಸುಲಭವಾಗಿ ಹೊಂದಿಸಿಕೊಳ್ಳಬಹುದಾಗಿತ್ತು, ಈಗ ಅವೆಲ್ಲಕ್ಕೂ ಎಕ್ಸಿಕ್ಯೂಟಿವ್ ಪರ್ಮಿಷನ್ನ್ ಬೇಕಾಗಿದೆ. ನಮ್ಮ ಆಫೀಸಿನ ಉಳಿದೆಲ್ಲ ಡಾಕ್ಯುಮೆಂಟುಗಳಿಗೆ ಹೋಲಿಸಿದಾಗ spreadsheet rules! ಇಲ್ಲಿರುವ ನಂಬರುಗಳೇ ಪ್ರತಿಯೊಂದನ್ನು ನಿರ್ಧರಿಸೋದು, ಇಲ್ಲಿರುವ ನಂಬರುಗಳಿಗಿಂತ ಹೊರತಾಗಿ ಇನ್ನೇನೂ ಇಲ್ಲ.

1930 ರ ದಶಕದ ಡಿಪ್ರೆಷ್ಷನ್ನಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಚೀನಾ ದೇಶದಲ್ಲಿ ಎಷ್ಟೋ ಜನ ತಮ್ಮ ಮನೆ-ಜಮೀನುಗಳನ್ನು ಮಾರಿ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೆಚ್ಚಿನ ಉತ್ಪನ್ನಕ್ಕೆಂದು ಹಣ ತೊಡಗಿಸಿದ್ದರಂತೆ, ಅವರದ್ದೆಲ್ಲ ಪರಿಸ್ಥಿತಿ ಈಗ ಹೇಗಿದ್ದಿರಬಹುದು? ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನ ಮಾರ್ಕೆಟ್ಟಿನಲ್ಲಿ ತಮ್ಮ ಹಣವನ್ನು ತೊಡಗಿಸಿ ಶಾರ್ಟ್ ಮತ್ತು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳಾಗಿದ್ದಾಗ, ಈಗಿನ ರಿಸೆಷನ್ನುಗಳು ಹೆಚ್ಚು ಜನರನ್ನು ತೊಂದರೆಗೀಡು ಮಾಡುತ್ತವೆ ಎನ್ನುವುದು ನನ್ನ ಲೆಕ್ಕ. ಸರ್ಕಾರಿ ಹಾಗೂ ಖಾಸಗಿ ನೌಕರರ ಸಂಖ್ಯೆಯಲ್ಲೂ ಬಹಳಷ್ಟು ವ್ಯತ್ಯಾಸವಾಗಿದೆ. ಮೊದಲೆಲ್ಲ ಸರ್ಕಾರದ ಕೆಲಸವೇ ಉನ್ನತ ಕೆಲಸ ಎನ್ನುವ ದಕ್ಷಿಣ ಭಾರತದಲ್ಲಿ ಇಂದು ಬೇಕಾದಷ್ಟು ಖಾಸಗಿ ಕೆಲಸಗಳು ಹುಟ್ಟಿಕೊಂಡಿವೆ (ಎಂಭತ್ತು, ತೊಂಭತ್ತರ ದಶಕದಲ್ಲಿ ಬದಲಾದ ಅಂಕಿಅಂಶಗಳ ಸಹಾಯದಿಂದ). ಬೆಂಗಳೂರು, ಮೈಸೂರು ಎನ್ನುವ ನಮ್ಮ ನೆರೆ ಊರುಗಳಲ್ಲಿ ಮಾರ್ಟ್‌ಗೇಜ್‌ನಲ್ಲಿ ಮನೆ ತೆಗೆದುಕೊಂಡವರ ಸಂಖ್ಯೆ ಹೆಚ್ಚಿದೆ. ನಾವು ಸಾಲವಿಲ್ಲದ ಕುಟುಂಬ ಎನ್ನುವಲ್ಲಿ, ಸಾಲದ ಮೇಲೇ ನಾವು ನಿಂತಿರೋದು ಎನ್ನುವ ಪ್ರಸಂಗ ಬಂದಿದೆ. ಹಾಗಿರುವಲ್ಲಿಯೇ ನಮ್ಮ-ನಿಮ್ಮ ಡಿಪೆಂಡೆನ್ಸಿ ಗ್ಲೋಬಲ್ ಮಾರ್ಕೆಟ್ ಮೇಲೆ ಹೆಚ್ಚಿರೋದು. ಹಳ್ಳಿಯ/ಪಟ್ಟಣದ ವರ್ಷದ ಕಂದಾಯವನ್ನು ಕಟ್ಟಿಕೊಂಡು ಪೆನ್ಷನ್ ಹಣದಲ್ಲಿ ಜೀವನ ಸಾಗಿಸುತ್ತಿರುವ ಪೋಷಕರಿಗೂ ತಾವು ಕೆಲಸ ಮಾಡುತ್ತಿರುವ ಕಾರ್ಪೋರೇಷನ್ನುಗಳ ಹಾಗೇ ಎಲ್ಲವೂ ಸಾಲದ ಮೇಲೆ ನಿಂತು ತಿಂಗಳು-ತಿಂಗಳಿಗೆ ಕಂತು ಕಟ್ಟುವ ಮುಂದಿನ ಜನರೇಷನ್ನಿಗೂ ಬಹಳಷ್ಟು ವ್ಯತ್ಯಾಸವಿದೆ. ಜೊತೆಗೆ ಒಂದಿಷ್ಟು ಜನರ ಜೀವನ ಶೈಲಿ ದಿಢೀರ್ ಬದಲಾಗಿ ಹೋಗಿದ್ದೂ ಇದಕ್ಕೆಲ್ಲ ಪುಷ್ಟಿ ತಂದಿದೆ, ಅಲ್ಲಲ್ಲಿ ನಾಯಿಕೊಡೆಗಳ ಹಾಗೆ ಹುಟ್ಟಿದ ಕಂಪನಿಗಳಲ್ಲಿ ಕೆಲಸ ಮಾಡುತ್ತ ನಮ್ಮೂರಿನ ಹುಡುಗ-ಹುಡುಗಿಯರು ವರ್ಷಕ್ಕೆ ಲಕ್ಷಾಂತರ ಎಣಿಸೋದಕ್ಕೆ ಶುರು ಮಾಡಿದ ಮೇಲೆ ಆರ್ಥಿಕ ಅವಲಂಭನೆಗೆ ಹೊಸದೊಂದು ಅರ್ಥ ಹುಟ್ಟಿದೆ.

ಕಾದುಕೊಂಡು ಕುಳಿತಿರೋದನ್ನು ಬಿಟ್ಟು ಇನ್ನೇನನ್ನು ಮಾಡಲು ಸಾಧ್ಯ ಎಂದು ಯೋಚಿಸಿದರೆ ಹೆಚ್ಚು ಆಪ್ಷನ್ನುಗಳೇನು ತೋಚುತ್ತಿಲ್ಲ. ಡ್ರಾಸ್ಟಿಕ್ ಬದಲಾವಣೆಗಳನ್ನು ಮಾಡುವ ಮೊದಲು ಬೇಕಾದಷ್ಟು ಆಲೋಚಿಸಿದರೂ ಯಾವ ದಾರಿಯನ್ನು ಆಯ್ದುಕೊಂಡರೂ ಹೊಡೆತ ಬೀಳುವುದಂತೂ ಗ್ಯಾರಂಟಿ ಆಗಿದೆ. ನೀರಿನಲ್ಲಿ ಮುಳುಗಿದೋರಿಗೆ ಛಳಿಯೇನು ಮಳೆಯೇನು ಅಂತಾರಲ್ಲ ಹಾಗೆ ಸುಮ್ಮನಿರಬೇಕು, ಅಷ್ಟೇ.

***

An executive in my company..."I don't mind the change (move), thank god I have a job, it is good to be busy!'

Saturday, January 24, 2009

ಆಹಾ, ಜನವರಿ!

ಓಹ್, ಈ ಜನವರಿಯಲ್ಲಿ ಅದೇನೇನೆಲ್ಲಾ ಆಗ್ತಾ ಇದೆ! ಓಬಾಮಾ ಪಬಾಮಾ ಪ್ರೆಸಿಡೆಂಟ್ ಆಗಿರೋ ಬಗ್ಗೆ ಬೇರೆ ಎಲ್ರೂ ಬರೀತಾ ಇರೋವಾಗ ನಾನೂ ಅದನ್ನೇ ಬರೆದ್ರೆ ಏನ್ ಪ್ರಯೋಜನ? ಈ ಜನವರಿಯ ಇಪ್ಪತ್ತನಾಲ್ಕು ದಿನಗಳಲ್ಲಿ ಆಗ್ಲೇ ಹನ್ನೊಂದು ಹನ್ನೆರಡು ಪರ್ಸೆಂಟ್ ಡೌನ್ ಆಗಿರೋ ನನ್ನ ಪೋರ್ಟ್‌ಫೋಲಿಯೋ ಬಗ್ಗೆ ಚಿಂತಿಸ್ಲೋ ಅಥವಾ ಇತ್ತೀಚೆಗೆ ನನ್ನ ಜೊತೆಯಾದ ಹೊಸ ಬಾಸ್ ಹಾಗೂ ಹೊಸ ಕೆಲಸಗಳ ಬಗ್ಗೆ ಕೊರೆದರೆ ಹೇಗೆ?

ಈ ಇಂಗ್ಲೀಷ್ ಕ್ಯಾಲೆಂಡರಿನ ಜನವರಿ ಅದೆಷ್ಟು ಹೊಸದನ್ನು ತಂದಿದೆ ಈ ವರ್ಷ - ಅಮೇರಿಕದ ಹೊಸ ಪ್ರೆಸಿಡೆಂಟ್ ಓಬಾಮ ಸಿಂಹಾಸನವನ್ನೇರಿದ್ದು, ಆ ಸಮಾರಂಭದಲ್ಲಿ ಸುಮಾರು ಇಪ್ಪತ್ತು ಲಕ್ಷ ಜನ ಸೇರಿದ್ರಂತಲ್ಲಪ್ಪ! ಅಬ್ಬಾ, ಅದೆಂತಾ ಪವರ್ ಇದ್ದಿರಬಹುದು?

’ಲೋ, ಸುಮ್ನಿರಯ್ಯಾ. ನಮ್ಮ್ ದೇವೇಗೌಡ್ರು ಮುಖ್ಯಮಂತ್ರಿ ಆದ ದಿನ ಇದಕ್ಕಿಂತ ಹೆಚ್ಚು ಜನಗಳನ್ನ ಸೇರಿಸಿರ್‌ಲಿಲ್ವಾ? ದಾವಣಗೆರೇಲಿ ಬಂಗಾರಪ್ಪ ಒಂದೇ ಸಮಾವೇಶಕ್ಕೆ ಹತ್ತು ಲಕ್ಷ ಜನ ಸೇರ್ಸಿದ್ ಮುಂದೆ ಅಮೇರಿಕದ ಮಿಲಿಯನ್ನು ಯಾವ ಲೆಕ್ಕ?’ ಎಂದು ಎಲ್ಲಿಂದಲೋ ಯಾವ್ದೋ ಧ್ವನಿ ಕೇಳಿದ ಹಾಗಾಯ್ತು, ಒಡನೇ ಸುಬ್ಬನ ಕಾಲ್ ಸ್ಪೀಕರ್ ಫೋನಿನಲ್ಲಿ ಬಂದ ಅನುಭವ, ಆದ್ರೆ ಇವೆಲ್ಲ ನನ್ನ ಭ್ರಮೆ ಅಂದ್‌ಕೊಂಡು ಮುಂದೆ ಯೋಚಿಸ್ತಾ ಹೋದೆ. ಆ ಪಾಟಿ ಜನ ವೋಟ್ ಹಾಕಿದ್ರಂತಲ್ಲ ಈ ಸರ್ತಿ, ಪಾಪ ಕರಿಯ ಮೇಲ್ ಬಂದವನೇ, ಮೊದಲ್ನೇ ಸರ್ತಿ ದಾಖಲೆ ನಿರ್ಮಿಸ್ಲಿ ಅಂತ ಇದ್ದಿರಬಹುದೋ ಏನೋ.

’ಯಾರ್ ಪ್ರೆಸಿಡೆಂಟ್ ಆದ್ರೆ ನಮಗೇನ್ ಸ್ವಾಮೀ? ದುಡಿಯೋ ಹೆಸರಿಗೆ ಬಂದ ಬಡ್ಡೀ ಹೈಕ್ಳು ನಾವು, ಅದೇ ನಮ್ ಕಾಯ್ಕ ನೋಡಿ!’ ಅಂತ ಮತ್ತೊಂದು ಧ್ವನಿ ಕೇಳಿಸ್ತು, ಈ ಸರ್ತಿ ನಿಜವಾಗ್ಲೂ ಯಾರೋ ನನ್ನ ತಲೆ ಒಳಗೆ ಸೇರಿಕೊಂಡು ನುಡಿದ ಅನುಭವ.

ಜನಗಳು ಅಂದ್ಕೊಂಡವರೆ, ಪ್ರೆಸಿಡೆಂಟ್ ಬದಲಾದ ಕೂಡ್ಲೆ ಎಲ್ಲವೂ ದಿಢೀರನೆ ಬದಲಾಗುತ್ತೆ ಅಂತ. ಡಿಸೆಂಬರ್ ಮುವತ್ತೊಂದರಿಂದ ಜನವರಿ ಒಂದರೊಳಗೆ ಏನೂ ಬದಲಾಗೋದಿಲ್ಲ, ಕ್ಯಾಲೆಂಡರ್ ಒಂದನ್ನು ಬಿಟ್ಟು. (ಅದೇ ಚೈತ್ರ ಮಾಸ ಶುರುವಾಗಲಿ ನೋಡಿ ಬೇಕಾದಷ್ಟು ಬದಲಾವಣೆಗಳು ನಿಮಗೆ ಅರಿವಿಗೆ ಬಂದೋ ಬರದೆಯೋ ನಡೆದೇ ಇರತ್ತೆ.)

ಸಾವಿರಾರು ಜನಗಳು ಕೆಲ್ಸ ಕಳೆದುಕೊಂಡ್ರು. ಭಾರತದಲ್ಲಿ ನಂಬರ್ ಮೂರನೇ ಕಂಪನಿಯ ಗುರುವಾಗಿದ್ದವರು ಶಾಪವಾದವರು. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗವನ್ನು ಮೆರೆದವರು ಇಂದು ಇತಿಹಾಸವಾಗಿ ಹೋದರು. ಎಂಟು ವರ್ಷ ಆಳ್ವಿಕೆ ಮಾಡಿ ಹೊರಗೆ ಹೋದ ಬುಷ್ ಸರ್ಕಾರದ ಲೆಕ್ಕಾಚಾರವನ್ನು ಯಾರೂ ಯಾಕೆ ಮಾಡುತ್ತಿಲ್ಲ? ಅಂದು ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಕೊಚ್ಚಿಕೊಂಡದ್ದರ ಲೆಕ್ಕವನ್ನು ಯಾರೂ ಯಾಕೆ ಕೇಳುತ್ತಿಲ್ಲ?

ಇನ್ನೇನು ಜನವರಿ ಮುಗಿಯುತ್ತಾ ಬಂದರೂ ಆರ್ಥಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸವೇನೂ ಆಗಿಲ್ಲ. ಈಗ ಬಂದು ಹಾಗೆ ಹೋಗೋ ೨೦೦೯ ಇಸ್ವಿ ೨೦೦೮ ಕ್ಕಿಂತ ಕೆಟ್ಟದಾಗಿರುತ್ತೆ ನೋಡ್ತಾ ಇರಿ, ಅಂತ ಎಷ್ಟೋ ಜನ ಈಗಾಗ್ಲೇ ಹೆದರ್ಸಿರೋದ್ರಿಂದ್ಲೇ ಬಹಳಷ್ಟು ಜನ ಕನ್ಸರ್‌ವೇಟೀವ್ ಆಗಿ ಆಲೋಚಿಸ್ತಾ ಇರೋದು. ನೋಡೋಣ ಇನ್ನೇನು ಕಾದಿದೆ ಈ ವರ್ಷ ಅಂತ.

Thursday, January 01, 2009

ಹೊಸತು ಹಳೆಯದರ ನಡುವೆ

2008 ಅನ್ನೋದು ಈಗ ಇತಿಹಾಸ, ಇಷ್ಟೊತ್ತಿಗಾಗಲೇ ವಿಶ್ವದೆಲ್ಲಾಕಡೆ ಗಡಿಯಾರಗಳು ೨೦೦೯ ನ್ನು ತೋರಿಸ್ತಿರೋ ಹೊತ್ತಿನಲ್ಲಿ ಒಬ್ಬರೊನ್ನೊಬ್ಬರು ಕರೆ ಮಾಡಿ ’ಹೊಸ ವರ್ಷದ ಹಾರ್ಧಿಕ ಶುಭಾಶಯಗಳು’ ಎಂದು ವಿಶ್ ಮಾಡೋದು ನಿಂತು ಹೋಗಿರಬಹುದು. ಈ ಹಿಂದೆ ಹಲವಾರು ಸಾರಿ ಬರೆದ ಹಾಗೆ ನಾವು ನಮ್ಮನ್ನು ಇಂಗ್ಲೀಷ್ ಕ್ಯಾಲೆಂಡರಿಗೆ ಸಮರ್ಪಿಸಿಕೊಂಡಿದ್ದೇವೆ. ನಮ್ಮ ಮಾರ್ಚ್-ಏಪ್ರಿಲ್ ತಿಂಗಳ ನಡುವೆ ಎಲ್ಲೋ ಬರುವ ಚಂದ್ರಮಾನ ಯುಗಾದಿ, ಚೈತ್ರ ಮಾಸ ವಸಂತ ಋತು ಉತ್ತರಾಯಣ ಪುಣ್ಯಕಾಲಾರಂಭ ಇವೆಲ್ಲವೂ ನಿಧಾನವಾಗಿ ಮರೆಯಾಗುತ್ತಿವೆ. ಇದೇ ಹಾಡನ್ನು ಸ್ವಲ್ಪ ಜೋರಾಗಿ ಹಾಡಿದರೆ ’ಹಿಂದೂ ಮೂಲಭೂತವಾದಿ’ಯಾಗಿ ಬಿಡಬಹುದಾದ ಸಾಧ್ಯತೆಗಳೂ ಇವೆ, ಹಾಡನ್ನು ಹಾಡದೇ ಸುಮ್ಮನಿದ್ದರೆ ನಮ್ಮತನವನ್ನು ಕಳೆದುಕೊಂಡ ಅನುಭವಾಗುವುದೂ ನಿಜವೇ ಹೌದು.

ನಿನ್ನೆ ರಾತ್ರಿಯ ಇಪ್ಪತ್ತರ ಡಿಗ್ರಿ ಫ್ಯಾರನ್‌ಹೈಟ್ ಛಳಿಯಲ್ಲಾಗಲೀ ಇಂದು ಹೊಸ ವರ್ಷದ ದಿನದಲ್ಲಾಗಲೀ ಹೆಚ್ಚಿನ ಬದಲಾವಣೆಯೇನೂ ಇಲ್ಲ. ಬೇವುಗಳು ಇನ್ನೂ ಚಿಗುರಿಲ್ಲ, ಬೆಲ್ಲ ಮಾಡುವ ಸೀಜನ್ನೂ ಅಲ್ಲ. ಮರಗಳೆಲ್ಲ ಮರಗಟ್ಟಿ ಹೋಗೀ ನಿತ್ಯ ಹರಿದ್ವರ್ಣಿಗಳ ಮೇಲಿನ ಹಸಿರನ್ನು ಹೊರತುಪಡಿಸಿದರೆ ಮತ್ತೆಲ್ಲಾ ಛಳಿಯ ಬಣ್ಣವನ್ನು ಹೊದ್ದಿರುವ ಹೊರಗಿನ ವಾತಾವರಣ. ಅಲ್ಲಲ್ಲಿ ಬಿದ್ದ ಹಿಮ, ಮತ್ತೆ ಅದೇ ಅದರ ಛಳಿಗೆ ಹರಳುಗಟ್ಟಿ ಘನೀಭವಿಸಿ ಮತ್ತಿನ್ನಷ್ಟು ಶೀತಲತೆಯನ್ನು ಮುಖದ ಮೇಲೆ ತಂದುಕೊಂಡು ನೋಡೋಕೆ ಪುಡಿಯಂತೆ ಕಂಡುಬಂದರೂ ಒಳಗೆ ಗಟ್ಟಿಪದರವನ್ನು ಕಟ್ಟಿಕೊಂಡು ತನ್ನ ಮೈ ಶಾಖದಲ್ಲಿ ತಾನು ಯಾವುದೋ ಪ್ರಪಂಚವನ್ನು ಸೃಷ್ಟಿಸಿಕೊಂಡಿರುವ ಹೆಮ್ಮೆಯಿಂದ ಬೀಗುತ್ತಿರುವ ಹಾಗೆ ಕಂಡುಬಂತು. ಬೇಕಾದಷ್ಟು ಬೀಸುತ್ತಿರುವ ಗಾಳಿಗೆ ತಲೆ ತೂಗೀ ತೂಗೀ ಕಂಗಾಲಾದ ಮರಗಳು ಯಾವುದೋ ದಿಕ್ಕಿನಲ್ಲಿ ಅವಿತುಕೊಂಡ ವಾಯು-ವರುಣರಿಗೆ ಚಪ್ಪೆ ಮುಖವನ್ನು ತೋರಿಸುವಷ್ಟು ದೀನರಾಗಿ ಹೋಗಿದ್ದರೆ, ಕಪ್ಪಾದ ರಸ್ತೆಯ ಮೇಲ್ಮೈ ಸಹ ಇಂದು ಬೀಳದ ಬಿಸಿಲಿಗೆ ಶಪಿಸುತ್ತಾ ತಮ್ಮ ಕಳೆದುಕೊಂಡ ಕಾವಿಗೆ ಚಡಪಡಿಸಿ ತಮ್ಮ ಮೈ ಮೇಲೆ ತೆಳ್ಳಗೆ ಸವರಿದ ಬಿಳಿಯ ಮಂಜಿನ ಪುಡಿಗೆ ಹೆದರಿಕೊಂಡಿದ್ದವು. ನಿನ್ನೆ-ಇಂದಿಗೆ ಹೆಚ್ಚು ವ್ಯತ್ಯಾಸ ಕಂಡು ಬರದ ನನ್ನ ಹಾಗಿನ ಉಳಿದವೆಲ್ಲವೂ ಇದೊಂದು ದಿನ ಮತ್ತೊಂದು ದಿನ ಎಂದುಕೊಂಡು ಸುಮ್ಮನಿದ್ದವು.

ಹಳೆಯ ವರ್ಷ ಗೆದ್ದವರು ಬಿದ್ದವರೆದ್ದೆಲ್ಲವನ್ನು ಟಿವಿ ಪರದೆ ತಾನು ತೋರಿಸಿಯೇ ತೀರುತ್ತೇನೆ ಎಂದು ಸೆಡ್ಡು ಹೊಡೆದುಕೊಂಡು ನಿಂತಿತ್ತು. ಈ ವರ್ಷದ ಆರಂಭದ ಕ್ಷಣಗಣನೆ ಮುಗಿದು ಘಂಟೆಗಳೇ ಕಳೆದಿದ್ದರೂ ಹೊಸತಕ್ಕೆ ಈಗಾಗಲೇ ಹೋದವರಿಗಿಂತಲೂ ಹಳೆಯದ್ದಕ್ಕೆ ಅಂಟಿಕೊಂಡವರಿಗಿಂತಲೂ ಇನ್ನೂ ಹಳೆಯದು-ಹೊಸತರ ನಡುವೆ ಓಲಾಡುತ್ತಿರುವವರು ಓಲಾಡುತ್ತಲೇ ಇರುವವರ ಹಾಗೆ ಕೆಲವು ಚಿತ್ರಗಳಲ್ಲಿ ಕಂಡುಬಂತು. ಕ್ಯಾಲೆಂಡರಿನ ದಿನ ಬದಲಾದಂತೆ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ತೊಲಗಿ ಹೋದವು ಎಂದುಕೊಂಡು ಬೀಗಿ ನಿಂತವರು ಈ ಮೊದಲು ಹೇಳಿದ ಯಾವುದೇ ಗುಂಪಿನಲ್ಲಿ ಸೇರದೇ ತಮ್ಮದೇ ಒಂದು ಪಂಥವನ್ನು ಕಟ್ಟಿಕೊಂಡವರಂತೆ ಕಂಡುಬಂದರು. ’ಹಾಗಾದರೆ ನಮ್ಮೆಲ್ಲ ಕಷ್ಟಗಳೆಲ್ಲ ತೊಲಗಿದವೇನು ಇಂದಿಗೆ?’ ಎಂದು ನಾನೆಸೆದ ಪ್ರಶ್ನೆಯೊಂದಕ್ಕೆ ನಮ್ಮ ಬ್ಯಾಂಕಿನ ಮ್ಯಾನೇಜರಿಣಿ ’ಇದು ಕೇವಲ ಐಸ್‌ಬರ್ಗಿನ ತುದಿ ಮಾತ್ರ!’ ಎಂದು ಈಗಾಗಲೇ ಕುಸಿದ ವ್ಯವಸ್ಥೆ ಮತ್ತಿನ್ನಷ್ಟು ಕುಸಿದು ಹೋಗುವ ಮುನ್ಸೂಚನೆಯನ್ನು ನೀಡಿದಳು. ಅದೇ ಐಸ್‌ಬರ್ಗ್ - ಅದೆಷ್ಟೋ ವರ್ಷಗಳಿಂದ ಹರಳುಕಟ್ಟಿದ ಹಿಮ, ನೀರಿನ ಒಳಗೇ ತನ್ನದೊಂದು ಪುಟ್ಟ ಪ್ರಪಂಚದ ವಾಸ್ತ್ಯವ್ಯವನ್ನು ಸ್ಥಾಪಿಸಿಕೊಂಡಿರುವ ಅದು ಅಷ್ಟು ಸುಲಭವಾಗಿ ಕರಗಲಾರದು, ಅದು ಪುಡಿಯಾಗಿ-ಕರಗುವ ಮೊದಲು ಅದೆನ್ನೆಷ್ಟು ಟೈಟಾನಿಕ್ ವ್ಯವಸ್ಥೆಗಳನ್ನು ಬಲಿತೆಗೆದುಕೊಳ್ಳಬೇಕೋ ಬಲ್ಲವರಾರು?

ನಿನ್ನೆಗೆ ಕೊರಗಬಾರದು, ನಾಳೆಗೆ ನರಳಬಾರದು, ಇಂದಿನದನ್ನು ಇಂದೇ ನೋಡಿ ಅನುಭವಿಸಿ ತೀರುವ ಪುಟ್ಟದೊಂದು ತಂತ್ರ. ಆ ತಂತ್ರದಲ್ಲಿನ ಸೂತ್ರದಾರನ ಬೆನ್ನಿಗೆ ಎಲ್ಲೆಲ್ಲಿಂದಲೋ ಹೊತ್ತು ತಂದ ಈವರೆಗೆ ಶೇಖರಿಸಿಕೊಂಡ ಒಂದಿಷ್ಟು ಬ್ಯಾಗುಗಳು. ನಾಗಾಲೋಟದ ಮನಸು, ಅದಕೆ ವ್ಯತಿರಿಕ್ತವಾಗಿ ಗಟ್ಟಿಯಾದ ಭೂಮಿಗೆ ಅಂಟಿಕೊಂಡು ಅದರಲ್ಲಿನ ಘರ್ಷಣೆ ಅದರ ಮೇಲ್ಮೈ ಎತ್ತಿ ಕೊಡುವ ವಿರುದ್ಧ ಬಲದ ಸಹಾಯದಿಂದ ನಿಧಾನವಾಗಿ ಚಲಿಸುವ ಕಾಲುಗಳು, ಹೊಟ್ಟೆಗಾಗಿ ಏನೇನೋ ಮಾಡೋ ಜೀವದ ಸಂತೃಪ್ತಿಗೆ ಮತ್ತೆ ಅದೇ ನೆಲದಲ್ಲಿ ಸಿಕ್ಕ ಅಂಶಗಳಿಂದ ಪೋಷಣೆ. ಮತ್ತೆ ಎಲ್ಲರಿಗೂ ಇದ್ದು ಯಾರಿಗೂ ಸಿಗದಿರುವ ಪಂಚಭೂತಗಳು. ಈ ತಂತ್ರಗಾರಿಕೆಯ ವ್ಯವಸ್ಥೆಯನ್ನು ಚಲಾಯಿಸೋದಕ್ಕೆ ಅವರವರ ದುಡ್ಡೂ-ಕಾಸು, ಅದಕ್ಕೆ ತಕ್ಕನಾದ ಮೋಜು-ಮಸ್ತಿ. ಮನೆಯಲ್ಲಿದ್ದರೆ ಕೆಲಸದ ಬಗ್ಗೆ, ಕೆಲಸದಲ್ಲಿದ್ದರೆ ಮನೆಯ ಬಗ್ಗೆ ಚಿಂತಿಸುವ ಕೊರಗು. ಅದ್ಯಾರೋ ದೊಡ್ಡ ಮನುಷ್ಯರು ಹೇಳಿದ ಹಾಗೆ ಇರೋದನ್ನೆಲ್ಲ ಬಿಟ್ಟು ಇರುದುದರೆಡೆಗೆ ತುಡಿವ ಮರುಗು.

ಈ ಆಸೆಯದ್ದೇ ವಿಶೇಷ - ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವ ಹೋಪ್ ಬಹಳ ಪ್ರಭಲವಾದದ್ದು. ಮಾರುಕಟ್ಟೆಗೆ ಸಂಬಂಧ ಪಟ್ಟಂತೆ ಹಲವಾರು ವರ್ಷಗಳಲ್ಲಿ ಬಿದ್ದ ದಿನಗಳಿಗಿಂತಲೂ ಮೇಲೆ ಎದ್ದ ದಿನಗಳೇ ಹೆಚ್ಚಾದರೂ ಕಳೆದುಕೊಳ್ಳುವವರಿಗೆ ಕಳೆದುಕೊಂಡವರಿಗೇನೂ ಕಡಿಮೆ ಇಲ್ಲ. ಒಬ್ಬರು ಕಳೆದುಕೊಂಡರೆ ತಾನೇ ಮತ್ತೊಬ್ಬರು ಗಳಿಸೋದು - ಆದರೆ ಅದು ಯಾವ ನ್ಯಾಯ? ಹಾಗಾದರೆ ಈ ಪ್ರಪಂಚದಲ್ಲಿ ಕೂಡುವವರು ಇದ್ದಾರೆಂದರೆ ಕಳೆಯುವವರೂ ಇದ್ದಾರೆ ಎಂತಲೇ ಅರ್ಥವೇ? ಇದೆಲ್ಲದರ ಒಟ್ಟು ಮೊತ್ತ ಯಾವಾಗಲೂ ಶೂನ್ಯವೇ? ಹಾಗಿದ್ದ ಮೇಲೆ ಕೊಡು ಕೊಳ್ಳುವ ವ್ಯವಹಾರವಾದರೂ ಏಕೆ ಬೇಕು? ಕೂಡುವುದು ನಿಜವಾದ ಮೇಲೆ, ಅದರ ಜೊತೆಗೆ ಕಳೆದುಕೊಳ್ಳುವುದೂ ನಿಜವೆಂದ ಮೇಲೆ ಶ್ರೀ ಕೃಷ್ಣ ಉಪದೇಶ ಮಾಡಿದ ಸ್ಥಿತಪ್ರಜ್ಞ ಸ್ಥಿತಿಯನ್ನು ಜನರು ಅದೇಕೆ ತಲುಪೋದಿಲ್ಲ? ಸಾಕು ಎನ್ನುವುದು ಹೆಚ್ಚು ಕೇಳಿ ಬರದಿರುವಾಗ ಬೇಕು ಎನ್ನುವುದು ಪ್ರಭಲವಾಗಿ ಕಂಡರೆ ಅದೊಂದೇ ಅನನ್ಯವಾದರೆ, ಅದೇ ಸ್ಥಿತಿ ಎಲ್ಲರಲ್ಲೂ ಸೇರಿಕೊಂಡರೆ, ಬೇಕು ಎನ್ನುವುದೇ ಬದುಕಾದರೆ...ಬೇಕು ಎನ್ನುವ ಆಸೆಗೆ ಕೂಡುವುದು ಇದೇ ಜೊತೆಗೆ ಕಳೆಯುವುದೂ ಇದೆ ಎಂದ ಮೇಲೆ ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವುದು ಎಷ್ಟರ ಮಟ್ಟಿಗೆ ಸರಿ; ಜೊತೆಗೆ ಒಬ್ಬರ ಒಳಿತು ಇನ್ನೊಬ್ಬರ ಒಳಿತಾಗಬೇಕೆಂದೇನೂ ಇಲ್ಲ ಎಂದು ಯೋಚಿಸಿಕೊಂಡಾಗ ಅದೇ ಶೂನ್ಯದ ಸಂಭ್ರಮ, ಎಲ್ಲವನ್ನೂ ತನ್ನ ಹೊಟ್ಟೆಯೊಳಗೆ ತುಂಬಿಕೊಂಡ ಶುಷ್ಕ ನಗೆ.

Tuesday, December 30, 2008

ಛಳಿಗಾಲದ ಕುರುಕು

ಡಿಸೆಂಬರ್ ೨೧ ಬಂತು ಅಂದ್ರೆ ಛಳಿಗಾಲದ ಆರಂಭ ಅಂತ ಕೊರಗೋದು ಒಂದು ರೀತಿ, ಅದರ ಬದಲಿಗೆ ಅದೇ ದಿನವನ್ನ ವರ್ಷದ ಲಾಂಗೆಷ್ಟ್ ನೈಟ್ ಎಂದುಕೊಂಡರೆ ಇನ್ನೊಂದು ವಿಚಾರವೂ ಸಿಗುತ್ತೆ, ಅದೇ ನಂತರದ ದಿನಗಳಲ್ಲಿ ದಿನೇದಿನೇ ಹೆಚ್ಚುವ ಡೇ ಲೈಟ್ ಸಮಯ, ಹಾಗೂ ಜೂನ್ ೨೧ ರ ವರೆಗೆ ದಿನೇದಿನೇ ಹೆಚ್ಚುವ ಡೇ ಲೈಟ್ ಸಮಯ ಛಳಿಗೆ ಅಷ್ಟೊಂದು ಹೊಂದಿಕೊಂಡಿರದ ನಮ್ಮನ್ನು ಕೊನೇಪಕ್ಷ ರಾತ್ರಿ ಒಂಭತ್ತರ ವರೆಗೆ ಬೆಳಕಿರುವ ದಿನಗಳಲ್ಲಿ ಹೊರಗೆ ಕಳೆಯುವಂತೆ ಮಾಡುವ ಸಿಗುವ ಅವಕಾಶಗಳು.

ನಾವೆಲ್ಲ ಶಾಲೆಗೆ ಹೋಗಿ ಬರುತ್ತಿದ್ದ ಕಾಲದಲ್ಲಿ ಹೇಮಂತ ಋತುವಿನಲ್ಲಿ ಶನಿವಾರ ಬೆಳಗ್ಗೆ ಎಂಟು ಘಂಟೆಗೆ ಎಳೆಬಿಸಿಲಿನಲ್ಲಿ ಹೋಗಿ ನಿಲ್ಲುವ ಮನಸ್ಸಾಗುತ್ತಿತ್ತು. ನಮ್ಮ ಮೇಷ್ಟ್ರು ಪಿ.ಟಿ. ತರಗತಿಗಳನ್ನು ಬಯಲಿನಲ್ಲಿ ನಡೆಸುತ್ತಿದ್ದು ಮುಂಜಾವಿನ ಛಳಿಯಲ್ಲಿ ಅದು ಬಹಳ ಹಿತವನ್ನು ನೀಡುತ್ತಿತ್ತು. ನಾವು ಭಾರತದಲ್ಲಿ ಬಲ್ಲ ಹಾಗೆ ಶಿವಮೊಗ್ಗದ ಹತ್ತರಿಂದ ಹನ್ನೆರಡು ಡಿಗ್ರಿ ಡಿಸೆಂಬರ್ ಛಳಿ ದೊಡ್ದದು - ಜಮ್ಮು-ಕಾಶ್ಮೀರದ ಹಿಮಾವೃತ ದೃಶ್ಯಗಳನ್ನು ಟಿವಿಯಲ್ಲಿ ನೋಡಿದರೆ ಛಳಿಯ ಅನುಭವವೇನೂ ಆಗುತ್ತಿರಲಿಲ್ಲ!

ಇಲ್ಲಿಗೆ ಬಂದ ಮೇಲೆ ಫಾಲ್ ಮತ್ತು ವಿಂಟರ್ ಸೀಸನ್‌ಗಳನ್ನು ವಿಶೇಷವಾಗಿ ನೋಡುವ ಭಾಗ್ಯ ಒದಗಿ ಬಂದಿದ್ದು. ಉದಾಹರಣೆಗೆ ಈ ವರ್ಷವನ್ನೇ ತೆಗೆದುಕೊಳ್ಳೋಣ, ಲೇಟ್ ಫಾಲ್‌ನಲ್ಲಿ, ಅಂದರೆ ನವಂಬರ್ ಕೊನೆ ಮತ್ತು ಡಿಸೆಂಬರ್ ಮೊದಲೆರಡು ವಾರಗಳಲ್ಲಿ ವಿಪರೀತ ಛಳಿ. ನೂರಾ ಹದಿಮೂರು ವರ್ಷದ ಇತಿಹಾಸದಲ್ಲಿ ಈ ವರ್ಷಾ ಹ್ಯಾಲೋವಿನ್ (ಅಕ್ಟೋಬರ್ ೩೧) ಮೊದಲು ನಾವು ಎಂಟು ಇಂಚು ಸ್ನೋ ನೋಡಿದ್ದೂ ಆಯಿತು. ಫಾಲ್‌ನಲ್ಲೇ ಪೂರ್ತಿ ಛಳಿಗಾಲವನ್ನು ಅನುಭವಿಸುವ ಸುಖ ಸಿಕ್ಕಮೇಲೆ ಇನ್ನು ನಿಜವಾದ ಛಳಿಗಾಲಕ್ಕೇನು ಬೆಲೆ ಕೊಡೋಣ ಹೇಳಿ? ಒಂದು ರೀತಿ ನೀರಿನಲ್ಲಿ ಮುಳುಗಿದೋನಿಗೆ ಛಳಿಯೇನು ಮಳೆಯೇನು ಅಂದಹಾಗೆ ಈ ಫಾಲ್ ವಾತಾವರಣವೇ ನನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡಿರುವಾಗ ಇನ್ನು ವಿಂಟರ್‌ಗೆ ಹೆದರುವುದಾದರೂ ಏಕೆ?

ನಾವೆಲ್ಲ ಸೂರ್ಯವಂಶದವರು, (ಅಂದರೆ ಸೂರ್ಯ ಹುಟ್ಟಿದ ಮೇಲೆ ಎದ್ದೇಳುವವರು ಅಂತಲ್ಲ), ಬೆಳಗಿನ ಎಳೆ ಬಿಸಿಲಿನಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿಕೊಂಡು ಕೈಯಲ್ಲಿ ಕಾಫೀ ಮಗ್ಗ್ ಅನ್ನು ಹಿಡಿದುಕೊಂಡು ಆಫೀಸಿಗೆ ಹೊರಡುವ ಉತ್ಸಾಹವೇ ಬೇರೆ. ಅದರ ಬದಲಿಗೆ ಫಾಲ್‌ನಲ್ಲಿ ಕತ್ತಲೋ ಕತ್ತಲು. ಮುಂಜಾನೆ ಎಂಟರಿಂದ ಸಂಜೆ ಐದರವರೆಗೆ ಮಾತ್ರ ಸೂರ್ಯ ಕಿರಣಗಳು ನೋಡೋಕೆ ಸಿಕ್ಕರೆ ಪುಣ್ಯ. ನಮ್ಮನ್ನು ಹೈರಾಣಾಗಿಸಲೆಂದೇ ಇಲ್ಲಿಯವರು ವರ್ಷಕ್ಕೆರಡು ಸಲ ಟೈಮ್ ಛೇಂಜ್ ಮಾಡೋದು - ಡೇ ಲೈಟ್ ಸೇವಿಂಗ್ ನೆಪದಲ್ಲಿ. ಈ ಅಮೇರಿಕದಲ್ಲಿ ನೆಟ್ಟಗೆ ನಡೆಯುತ್ತಿರುವ ಗಡಿಯಾರವೂ ತನ್ನನ್ನು ತಾನು ವರ್ಷಕ್ಕೆ ಎರಡು ಸಲ ತಿದ್ದಿಕೊಳ್ಳಬೇಕು - ಔಟ್ ಡೇಟೆಡ್ ಆಗದೇ ಇರಲು!

ನಿನ್ನೆ ವೆದರ್ ಚಾನೆಲ್‌ನಲ್ಲಿ ಅರವತ್ತು ವರ್ಷಗಳ ಹಿಂದೆ ಡಿಫ್ಟೀರಿಯಾ ವ್ಯಾಕ್ಸೀನ್ ಅನ್ನು ಅಲಾಸ್ಕಾದ ಹಿಮಾವೃತ ಪ್ರದೇಶದ ಪಟ್ಟಣಗಳಿಗೆ ತಲುಪಿಸಲು ಸಬ್ ಝೀರೋ ಟೆಂಪರೇಚರ್‌ನಲ್ಲಿ ಜನರು ಕಷ್ಟಪಟ್ಟದ್ದನ್ನು ನೋಡಿದಂದಿನಿಂದ ನಮ್ಮಲ್ಲಿನ ೩೦ ರ ಆಸುಪಾಸಿನ (ಫ್ಯಾರನ್‌ಹೈಟ್ ಸ್ಕೇಲಿನಲ್ಲಿ) ಛಳಿ ಏನು ಮಹಾ ದೊಡ್ಡದು ಎನ್ನಿಸಿದೆ. ಅದಕ್ಕೇ ಈ ಉಷ್ಣ-ಛಳಿ ಮನೋಭಾವನೆ ಎಲ್ಲ ರಿಲೇಟಿವ್ ಅನ್ನೋದು - ಮೈನಸ್ ಐವತ್ತರ ಹತ್ತಿರದ ಉಷ್ಣತೆಯನ್ನು ಬಲ್ಲವರಿಗೆ ಸೊನ್ನೆಯ ಹತ್ತಿರದ ಛಳಿ ಛಳಿಯೇ ಅಲ್ಲ!

ಈ ಯೂನಿಟ್‌ಗಳು ಮತ್ತು ಅವುಗಳ ಬಳಕೆಯನ್ನು ಕುರಿತು ಈ ಕೆಳಗಿನ ಅಂಶವನ್ನು ಗಮನಿಸಿ:
- ಅಮೇರಿಕದಲ್ಲಿ ಪೌಂಡು-ಮೈಲು-ಇಂಚುಗಳನ್ನು ಬಳಸುವ ವ್ಯವಸ್ಥೆಯಲ್ಲಿ ಕ್ಯಾಮೆರಾದ ಲೆನ್ಸ್‌ ವಿಚಾರಕ್ಕೆ ಬಂದಾಗ ಮಿಲಿ ಮೀಟರ್ ಅನ್ನೇ ಜನರು ಬಳಸೋದು, ಜೊತೆಗೆ ಟೆಂಪರೇಚರ್ ಸ್ಕೇಲ್ (ಫ್ಯಾರನ್‌ಹೈಟ್) ಬಳಕೆ ಇಲ್ಲಿಯ ಉಷ್ಣತೆಯ ವೇರಿಯೇಷನ್ನಿಗೆ ಸೂಕ್ತವಾಗೇ ಇದೆ.
- ಭಾರತದಲ್ಲಿ ಕೆಜಿ-ಕಿಲೋಮೀಟರು-ಸೆಂಟಿಮೀಟರ್‌ಗಳನ್ನು ಬಳಸುವ ವ್ಯವಸ್ಥೆಯಲ್ಲಿ ಉಳಿದೆಲ್ಲ ಟೆಂಪರೇಚರ್ರ್‌ಗೆ ಸೆಲ್ಸಿಯಸ್ ಸ್ಕೇಲು ಬಳಸಿದರೂ ಮನುಷ್ಯನ ದೇಹದ ಉಷ್ಣತೆಯನ್ನು ಫ್ಯಾರನ್‌ಹೈಟ್ ಸ್ಕೇಲಿನಲ್ಲೇ ಬಳಸೋದು.

ಈ ವೆದರ್ರು, ಟೆಂಪರೇಚರ್ರು ಇವೆಲ್ಲ ಜನರಲ್ ವಿಷಯ - there is nothing you can do about it! ಅನ್ನೋದು ಒಂದು ವಿಚಾರ. ಮಳೆ ಬರುತ್ತೆ ಅಂತ ಫೋರ್‌ಕಾಸ್ಟ್ ನೋಡಿಕೊಂಡು ಛತ್ರಿ/ರೈನ್ ಕೋಟ್ ತೆಗೆದುಕೊಂಡು ಹೋಗೋದು ಬಿಡೋದು ಅವರವರ ಡಿಸಿಷನ್ನಿಗೆ ಸೇರಿದ್ದು ಅನ್ನೋದು ಮತ್ತೊಂದು ವಿಚಾರ.