Thursday, July 31, 2008

ನಾವು ಮತ್ತು ನಮ್ಮ ಕೆಲಸ (ಅದರ ಮೇಲಿನ ಪ್ರೀತಿ)

ಎಲ್ರೂ ಮಾಡೋದ್ ಹಾಗೇ, ಯಾವ್ದೋ ಒಂದ್ ಕಂಪ್ನಿಗೋ, ಗವರ್ನಮೆಂಟ್ ಕೆಲ್ಸಕ್ಕೋ ಜೀವಾ ತೇದೋದು ನಾಳೆ ಬದುಕಬೇಕಲ್ಲ ಅನ್ನೋ ಒಂದೇ ನೆವಕ್ಕೆ... ಅಂತ ಅನ್ಸಿದ್ದು ಈ ವಾರದ ಕೊನೇಲಿ ನಿವೃತ್ತನಾಗ್ತಿರೋ ನನ್ನ ಸಹೋದ್ಯೋಗಿಯೊಡನೆ ಅಪ್ತವಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಇದ್ದಾಗ.

ಅವ್ನಿಗೆ ನಾನು ವಿಷ್ ಮಾಡ್ದೆ, ನನಗುತ್ತರವಾಗಿ ಅವನು ’Have fun at work!' ಎಂದು ನಕ್ಕ.

ನಾನು ತಕ್ಷಣ TOFLE ಪ್ರಶ್ನೆಗಳ ಮಾದರಿಯಲ್ಲಿ What do/did you mean? ಎಂದು ಕೇಳೋಣವೆನ್ನಿಸಿದರೂ ಕೇಳದೇ ಸುಮ್ಮನಾದೆ.

ಕೆಲ್ಸ ಹಾಗೂ ಸಹೋದ್ಯೋಗಿಗಳನ್ನು ಬಿಟ್ಟು ಹೋಗ್ತಿದೀನಿ ಅನ್ನೋ ದುಗುಡವಾಗ್ಲೀ ದುಮ್ಮಾನವಾಗ್ಲೀ ನನಗೇನೂ ಅವನ ಮುಖದ ಮೇಲೆ ಕಾಣ್ಲಿಲ್ಲ, ಜೊತೆಗೆ ಮುಂದೆ ಅದೆಲ್ಲೆಲ್ಲೋ ಗಾಲ್ಫ್ ಆಡೋದಕ್ಕೆ ಹೋಗ್ತೀನಿ, ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ ಅನ್ನೋ ಹುರುಪು ಎದ್ದು ಕಾಣ್ತಿತ್ತು.

***

ಹೆಚ್ಚು ಜನ ಬೆಳಗ್ಗೆ ಎದ್ದ ಕೂಡ್ಲೆ ’ಓಹ್, ಇವತ್ತು ಕೆಲ್ಸಕ್ಕೆ ಹೋಗ್ಬೇಕಲ್ಲ!’ ಎಂದು ಉಲ್ಲಸಿತರಾಗೇನೂ ಇರೋದಿಲ್ಲ (ನನ್ನ ಅನಿಸಿಕೆ). ಈ ಹಾಳಾದ್ ಕೆಲ್ಸಕ್ಕೆ ಹೋಗ್ಬೇಕಲ್ಲ ಅನ್ನೋರೂ ಇದಾರೆ ಅಂತನೂ ಗೊತ್ತು. ಹಾಗಾದ್ರೆ ಜನಗಳು ತಮ್ಮ ಬದುಕನ್ನು ರೂಢಿಸೋ ಕೆಲಸವನ್ನ, ತಮಗೆ ಅನ್ನ ನೀಡೋ ಅನ್ನದಾತರನ್ನ ಅಷ್ಟೊಂದಾಗಿ ದ್ವೇಷಿಸದೆ ಇದ್ರೂ ಮನಸ್ಸಿಟ್ಟು ಪ್ರೀತಿಸೋದಂತೂ ನನಗೆ ಮನವರಿಕೆ ಆಗ್ಲಿಲ್ಲ. ನಾವೆಲ್ಲ ಶಾಲೆ-ಕಾಲೇಜುಗಳಲ್ಲಿರುವಾಗ ’ಹಾಗ್ ಆಗ್ತೀನಿ, ಹೀಗ್ ಆಗ್ತೀನಿ’ ಅನ್ನೋ ಕನಸುಗಳು ಎಲ್ರಿಗೂ ಇರುತ್ತೆ. ನಮ್ಮ ಆಫೀಸಿನಲ್ಲಿ ತೆರೆದ ಕಣ್ಣಿನ ಈಗಷ್ಟೇ ಕಾಲೇಜು ಮುಗಿಸಿ ಬಂದ ಇಂಟರ್ನುಗಳ ಸ್ಪಿರಿಟ್ಟು ಈಗಾಗಲೇ ನೆಲೆ ಊರಿದ ನಮ್ಮಂತಹವರ ಕೆಲಸದ ವಿವರಗಳನ್ನು ಅರಿಯುತ್ತಿದ್ದಂತೆ ಅವರ ದವಡೆ ಕೆಳಗೆ ಬೀಳೋದನ್ನು ನಾನೇ ನೋಡಿದ್ದೇನೆ, ಮೊದಮೊದಲು ಏನೂ ಗೊತ್ತಿರದೇ ಇದ್ರೂ, ಮಾಡೋಕ್ ಏನೂ ಹೆಚ್ಚ್ ಕೆಲ್ಸ ಇರ್ದಿದ್ರು ಎಂಟು ಘಂಟೆ ಕಾಲ ಖುರ್ಚಿಗೆ ತಮ್ಮನ್ನು ತಾವು ಗಂಟು ಹಾಕಿಕೊಳ್ಳೋ ಹೋರಾಟವನ್ನು ನೋಡಿ ಬೇಸ್ತು ಬಿದ್ದಿದ್ದೇನೆ. ಹೊಸದಾಗಿ ಸೇರಿಕೊಂಡವರಿಗೆ ನನ್ನಂತಹವರು ದಿನಕ್ಕೆ ನಾಲ್ಕೈದು ಘಂಟೆಗಳ ಕಾಲ ಫೋನ್ ಹೆಡ್‌ಸೆಟ್ ಅನ್ನು ತಲೆಗೆ ಸಿಕ್ಕಿಸಿಕೊಂಡಿರುವುದನ್ನು ನೋಡೇ ಸುಸ್ತಾಗಿ ಹೋಗುವುದನ್ನು ಮನವರಿಕೆ ಮಾಡಿಕೊಂಡಿದ್ದೇನೆ.

ಅಲ್ಲಿಂದ ಆರಂಭವಾದ ವೃತ್ತಿ ಜೀವನ ಎನ್ನುವ ಬದುಕು ರಿಟೈರ್‌ಮೆಂಟ್ ಹಂತ ತಲುಪುವವರೆಗೆ ಕೆಲವರಿಗೆ ಹಲವು ಕಂಪನಿಗಳ ಫ್ಲೇವರ್‌ಗಳನ್ನು ನೀಡಿದರೆ ಇನ್ನು ಕೆಲವರಿಗೆ ಒಂದೇ ಕಂಪನಿಯ ಔತಣವಾಗುತ್ತದೆ. ಅಲ್ಲಿ ಪ್ರೊಮೋಷನ್ನು-ಡಿಮೋಷನ್ನು ಮೊದಲಾದ ಬ್ಲಡ್ ಪ್ರಷರ್ ಏರಿಸಿ-ಇಳಿಸುವ ಹಂತ/ಮಟ್ಟ ಬಂದು ಹೋದರೂ ಇರುವಲ್ಲಿಂದ ತಲೆ ಎತ್ತಿ ನೋಡುವುದು ಎಲ್ಲಿ ಹೋದರೂ ತಪ್ಪೋದಿಲ್ಲ. ಒಂದಲ್ಲ ಒಂದು ಚಾಲೆಂಜುಗಳನ್ನು ಹಿಡಿದು ಸಂಬಾಳಿಸೋದೇ ವೃತ್ತಿಯಾಗುತ್ತದೆ. ಇಂಜಿನಿಯರುಗಳಿಗೆ ಡಾಕ್ಟರು, ಡಾಕ್ಟರುಗಳಿಗೆ ಮತ್ತಿನ್ಯಾರೋ ಕೆಲಸ ಇಷ್ಟವಾಗುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹೆಚ್ಚಿನವರು ’I love my job' ಅಥವಾ ’I love what I do for a living' ಎಂದು ಮನ ಬಿಚ್ಚಿ ಹೇಳಿದ್ದನ್ನು ನಾನು ಕೇಳಿಲ್ಲ.

***

Why do we have to work? ಅನ್ನೋ ಪ್ರಶ್ನೆ ಈ ಬ್ಲಾಗಿನ ಬರಹಕ್ಕಿಂತ ದೊಡ್ಡದು. ಆದರೆ ನಮ್ಮ ನಮ್ಮ ಕೆಲಸಗಳನ್ನೇಕೆ ನಾವು ಪ್ರೀತಿಯಿಂದ ನೋಡೋದಿಲ್ಲ ಅನ್ನೋದು ಈ ಹೊತ್ತಿನ ಪ್ರಶ್ನೆ. ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಮಾಡೇ ಮಾಡುತ್ತೇವೆ - ಆದರೆ ಆ ಕೆಲಸಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆಯೇ? ಎಲ್ಲೋ ಕಲಿತು ಬಂದ ವಿದ್ಯೆ, ಸ್ಕಿಲ್ಸ್‌ಗಳಿಂದ ಈಗಿರುವ ಕೆಲಸವನ್ನು ಗಳಿಸಿಕೊಂಡಿದ್ದಾಯಿತು, ಇನ್ನು ಇಲ್ಲಿಂದ ಮುಂದೆ ಹೋಗಲು ಅಥವಾ ಬೇರೆ ಕಡೆಗೆ ಹಾರಿಹೋಗಲು ಇನ್ಯಾವುದನ್ನಾದರೂ ಪ್ರಯೋಗಿಸಿದ್ದೇವೆಯೇ? ಪ್ರಯತ್ನಿಸಿದ್ದೇವೆಯೇ? ಸರಿ, ಒಂದು ಮುವತ್ತು ವರ್ಷಗಳ ನಂತರ ಕೆಲಸ ಮಾಡಿ ಮುಂದೆ ನಿವೃತ್ತರಾದ ಮೇಲೆ ಏನು ಮಾಡೋದು? ಅಷ್ಟೊಂದು ವರ್ಷಗಳು ಕೆಲಸ ಮಾಡುವುದೇ ಖಾಯಂ ಆದಾಗ ನಾವು ಮಾಡುವ ಹುದ್ದೆಯನ್ನೇಕೆ ಪ್ರೀತಿಸೋದಿಲ್ಲ ಅಥವಾ ನಾವು ಪ್ರೀತಿಸುವ ಹುದ್ದೆಯನ್ನೇಕೆ ಮಾಡುವುದಿಲ್ಲ? ಅಥವಾ ಕೆಲಸ ಹಾಗೂ ಕೆಲಸದ ಮೇಲಿನ ಪ್ರೇಮ ಇವರೆಡೂ ಒಂದಕ್ಕೊಂದು ಎಣ್ಣೆ-ನೀರಿನ ಸಂಬಂಧವನ್ನು ಪಡೆದುಕೊಂಡುಬಿಟ್ಟಿವೆಯೇ?

ಸೋಮವಾರ ಶುರು ಮಾಡೋ ಕೆಲಸದಂದು ಮುಂಬರುವ ಶುಕ್ರವಾರದ ನಿರೀಕ್ಷೆ ಇದ್ದು ’ಈ ಕೆಲಸವನ್ನು ಯಾರು ಮಾಡುತ್ತಾರಪ್ಪಾ’ ಎನ್ನೋ ನಿಟ್ಟುಸಿರು ಆಗಾಗ್ಗೆ ಬರುತ್ತಿದ್ದರೆ ಆ ಕೆಲಸದಲ್ಲಾಗಲೀ ಕಂಪನಿಯಲ್ಲಾಗಲೀ ಕೊರತೆ ಇರದೆ ಕೆಲಸಗಾರನ ಮನದಲ್ಲೇನಿದೆ ಎಂದು ಆಲೋಚಿಸಿಕೊಳ್ಳಬೇಕಾಗುತ್ತದೆ. ನಾನಂತೂ ನನ್ನ ಕೆಲಸವನ್ನು ಅನ್ನದಾತನೆಂಬಂತೆ ಗೌರವಿಸುತ್ತೇನೆ, ಇದೇ ಪ್ರಪಂಚದ ಮಹಾ ಕೆಲಸಗಳಲ್ಲೊಂದಲ್ಲದಿದ್ದರೂ ಸದ್ಯಕ್ಕೆ ನನಗೆ ಅನ್ನ-ನೀರು ಕೊಡುತ್ತದೆಯೆಲ್ಲ ಎನ್ನುವ ರೀತಿಯಿಂದಲಾದರೂ ನನಗೆ ಅದರ ಮೇಲೆ ಮೋಹವಿದೆ ಪ್ರೀತಿಯಿದೆ. ಒಮ್ಮೊಮ್ಮೆ ’ಇದು ಯಾವನಿಗೆ ಬೇಕು, ಈ ಹಾಳು ಕೆಲಸವನ್ನು ಮಾಡೋದೇ ನನ್ನ ಬದುಕೇ...’ ಎಂದು ಅನ್ನಿಸಿದ್ದರೂ ಈ ಕೆಲಸವನ್ನು ಹುಡುಕಿಕೊಂಡು ಬಂದಿದ್ದು ನಾನೇ ಹೊರತು ಆ ಕೆಲಸ ನನ್ನನ್ನಲ್ಲ ಎನ್ನುವ ಸಾಮಾನ್ಯ ತಿಳುವಳಿಕೆ ನನ್ನನ್ನು ಸುಮ್ಮನಿರಿಸಿದೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸ ಬೇಕು, ಆದರೆ ಅವರವರು ನಿವೃತ್ತರಾಗುವುದಕ್ಕೆ ಮೊದಲು (ಸಾಧ್ಯವಾದರೆ) ಅವರ ಇಷ್ಟ ಪಡುವ ಕೆಲಸವನ್ನು ಸ್ವಲ್ಪ ದಿನ/ತಿಂಗಳುಗಳಾದರೂ ಮಾಡುವಂತಿದ್ದರೆ ಎಷ್ಟೋ ಚೆನ್ನಾಗಿರುತ್ತೆ, ಅಲ್ವೇ?

Saturday, July 19, 2008

ಕಗ್ಗಂಟನ್ನು ಬಿಡಿಸುವ ಬಗೆ ಹೇಗೆ?

ಚಿತ್ರವನ್ನು ಸುಮ್ಮನೇ ಬ್ಲಾಗ್‌ನಲ್ಲಿ ಹಾಕಿದರೆ ಅದೇ ಒಂದು ಬರಹ - ಬೇರೆ ಏನೂ ಹೇಳೋದೇ ಬೇಡ!

(ಚಿತ್ರ ಕೃಪೆ: http://discussions.virtualdr.com)


ನಮ್ಮ ಕಂಪನಿಯಲ್ಲಿ ಈಗಾಗಲೇ ಕೆಲಸಗಾರರ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ನೆಗೋಷಿಯೇಷನ್ನಲ್ಲಿ ತೊಡಗಿರುವ ಮ್ಯಾನೇಜ್‌ಮೆಂಟಿನವರು ಮುಂದೆ ಒಂದುವೇಳೆ ಯೂನಿಯನ್ ಜೊತೆಗೆ ಕಾಂಟ್ರ್ಯಾಕ್ಟ್ ಸರಿಹೊಂದದಿದ್ದಲ್ಲಿ ಅವರೇನಾದರೂ ಮುಷ್ಕರ ಹೂಡಿದರೆಂದರೆ ಕೆಲಸ ಕಾರ್ಯಗಳು ನಿಲ್ಲದಿರಲಿ ಎಂದು ಮ್ಯಾನೇಜ್‌ಮೆಂಟಿನ ಎಲ್ಲರಿಗೂ ಯೂನಿಯನ್‌ನವರ ಕೆಲಸಗಳಲ್ಲಿ ತರಬೇತಿಯನ್ನು ಕೊಡುವುದು ಮಾಮೂಲಿ. ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ರಿಪೀಟ್ ಆಗುವಂತಹ ವ್ಯವಸ್ಥೆ. ಅದರಂತೆ ಈ ವರ್ಷ ನನಗೆ ಟೆಲಿಫೋನ್ ಲೈನ್‌ಗಳನ್ನು ಇನ್ಸ್ಟಾಲ್ ಹಾಗೂ ದುರಸ್ತಿ ಮಾಡುವ ಟ್ರೈನಿಂಗ್ ಕೊಡುತ್ತಿದ್ದಾರೆ. ಹಾಗೆ ನಾನು ಆ ತರಬೇತಿಗೆ ಹೋದ ಮೊದಲನೇ ದಿನ ಅಲ್ಲಿನ ಬಿಳಿ ಬೋರ್ಡಿನಲ್ಲಿ ಈ ಚಿತ್ರದ ಕಪ್ಪು-ಬಿಳಿ ಆವೃತ್ತಿಯೊಂದನ್ನು ತೂಗು ಹಾಕಿದ್ದರು. ನಾನು ಇದು ಎಲ್ಲಿಯದು ಎಂದು ಹತ್ತಿರ ಹೋಗಿ ನೋಡಲಾಗಿ ಅದು ಭಾರತದ್ದು ಎಂದು ತಿಳಿಯಿತು. ನಮ್ಮ ಕ್ಲಾಸಿನಲ್ಲಿ ನಾನೊಬ್ಬನೇ ಭಾರತೀಯ, ಈ ಚಿತ್ರವನ್ನು ನೋಡಿದ ಹೆಚ್ಚಿನವರು - ಭಾರತದಲ್ಲಿ (ಹೀಗೂ) ಹೀಗಿದೆಯೇ ಎಂದು ನನ್ನನ್ನು ಪ್ರಶ್ನಿಸುವವರಂತೆ ಮುಖ ಮುಖ ನೋಡಿಕೊಳ್ಳುತ್ತಿರಲು ನಾನೂ ಈ ಕ್ರಿಸ್‌ಕ್ರಾಸ್ ಆದ ಲೈನುಗಳು, ಅದರ ಹಿಂದಿನ ವ್ಯವಸ್ಥೆಯ ಬಗ್ಗೆ ತುಸು ಯೋಚಿಸಿಕೊಂಡೆ.

***

ಈ ಚಿತ್ರವನ್ನು ಬೇಕಾದಷ್ಟು ರೀತಿಯಲ್ಲಿ ವ್ಯಾಖ್ಯಾನಿಸಬಹುದು - ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಉತ್ತರಿಸಬಹುದು:
- ಹೀಗೆ ಗಂಟು-ಗಂಟಾದ ಫೋನ್, ಕೇಬಲ್, ಎಲೆಕ್ಟ್ರಿಕ್ ಲೈನ್‌ಗಳು ಇರುವುದೇ ಹೀಗೋ ಅಥವಾ ಯಾವುದೋ ದೊಡ್ಡ ಬಿರುಗಾಳಿಯ ನಂತರ ಹುಟ್ಟಿದ ಸ್ಥಿತಿಯೋ?
- ಇವುಗಳನ್ನು ರಿಪೇರಿ ಮಾಡುವ ಬಗೆ ಹೇಗೆ?
- ಈ ರೀತಿ ಹಾಸು ಹೊಕ್ಕಾದ ಲೈನುಗಳಲ್ಲಿ ಯಾರದ್ದು ಯಾವುದು ಎಂದು ಹೇಗೆ ಕಂಡು ಹಿಡಿಯಲಾಗುತ್ತದೆ?
- ಈ ಲೈನುಗಳಲ್ಲಿ ಯಾವುದೋ ಒಂದು ಕೆಟ್ಟು ಹೋದರೆ ಅದನು ದುರಸ್ತಿ ಹೇಗೆ ಮಾಡುತ್ತಾರೆ, ಮಾಡುವವರು ಯಾರು?
- ಇದು ಎಲ್ಲೋ ಬಾಂಬೆಯದೋ ಉತ್ತರ ಭಾರತದ್ದೋ ಚಿತ್ರವಿದ್ದಿರಬಹುದು, ಇದೇ ಚಿತ್ರವನ್ನು ಇಡೀ ಭಾರತದಾದ್ಯಂತ ಹೀಗೇ ಎಂದು ಜೆನರಲೈಸ್ ಮಾಡಲಾಗುತ್ತದೆಯೇ?
- ಅಷ್ಟೊಂದು ಜನರಿರುವ ವ್ಯವಸ್ಥೆಯಲ್ಲಿ ಒಂದು ಫೋನ್ ಲೈನ್‌ಗಳಿಗಾಗಲೀ, ಕೇಬಲ್, ಎಲೆಕ್ಟ್ರಿಕ್ ತಂತಿಗಳಿಗೆ ಸರಿಯಾದ ನೆಲೆ ಏಕಿಲ್ಲ?
- ಈ ವ್ಯವಸ್ಥೆಯ ವಿರುದ್ಧ ಅಥವಾ ಪರವಾಗಿ ನಿಮ್ಮ ಹೋರಾಟಗಳಿದ್ದಲ್ಲಿ ಎಲ್ಲಿಂದ ಆರಂಭಿಸುವಿರಿ?
- ನಿಮ್ಮ ಉದ್ಯಮ ಅಥವಾ ಮನೆಯ ಮುಖ್ಯ ಸಂಪರ್ಕ ವಾಹಿನಿಗಳು ಇದೇ ರೀತಿಯ ಕಗ್ಗಂಟಿನಲ್ಲಿ ಹಾದು ಹೋಗುವುದಾದರೆ ನಿಮ್ಮ ಪ್ರಾಸೆಸ್ಸುಗಳು ಹಾಗೂ ಅವುಗಳ ನಿಖರತೆ, ರಕ್ಷಣೆ ಮೊದಲಾದವುಗಳ ಮೇಲೆ ಎಷ್ಟರ ಮಟ್ಟಿನ ನಂಬಿಕೆ ಇಡಬಹುದು?
- ಈ ಲೈನುಗಳ ಮೇಲೆ ಹೊಸದನ್ನು ಹೇಗೆ ಇನ್ಸ್ತಾಲ್ ಮಾಡಲಾಗುತ್ತದೆ, ಹಳೆಯದನ್ನು ಹೇಗೆ ದುರಸ್ತಿ ಮಾಡಲಾಗುತ್ತದೆ?

***

ಬನಾರಸ್ಸಿನಲ್ಲಿ ನಾನಿದ್ದಷ್ಟು ದಿನಗಳಲ್ಲಿ ಅಲ್ಲಿಯ ಉತ್ತಮೋತ್ತಮ ಪ್ರೊಫೆಸರುಗಳ ಮನೆಗಳಲ್ಲಿ ಪ್ರತಿನಿತ್ಯವೂ ಸಂಜೆಯಾಗುತ್ತಿದ್ದಂತೆ ಮನೆಯ ಪಕ್ಕದ ಎಲೆಕ್ಟ್ರಿಕ್ ತಂತಿಗಳಿಗೆ ಅವರ ಮಹಡಿಯಿಂದ ಕೋಲಿನ ಸಹಾಯದಿಂದ ತಮ್ಮ ಮನೆಯ ತಂತಿಗಳನ್ನು ಸಿಕ್ಕಿಸಿ ಕರೆಂಟನ್ನು ಕದಿಯುವುದನ್ನು ಮೊಟ್ಟ ಮೊದಲು ನೋಡಿದಾಕ್ಷಣ ಅಂದೇ ನನಗೆ ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ಒಂದು ರೀತಿಯ ರೋಷ ಬಂದಿತ್ತು. ನಮ್ಮೂರಿನ ಹಳ್ಳಿಗಳಲ್ಲಿ ಎಷ್ಟೋ ಜನ ಹೀಗೆ ಕರೆಂಟ್ ಕದಿಯುವುದನ್ನು ನಾನು ಕೇಳಿದ್ದೇನೆಯೇ ವಿನಾ ಪ್ರತಿದಿನವೂ ಹಾಡಹಗಲಿನಲ್ಲಿ ಒಬ್ಬ ಉನ್ನತ ಹುದ್ದೆಯ ಪ್ರೊಫೆಸರ್ ಹೀಗೆ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿಕೊಂಡಿರಲಿಲ್ಲ. ಬನಾರಸ್ಸಿನಿಂದ ಹಾಗೇ ಬಿಹಾರದ ಕೆಲವು ಊರುಗಳಲ್ಲಿ ಸುತ್ತಿ ಬರಲಾಗಿ ನನ್ನ ಕಲ್ಪನೆಯ ಭಾರತದ ಚಿತ್ರ ಸಂಪೂರ್ಣ ಬದಲಾಗಿ ಹೋಗಿತ್ತು ಎಂದರೆ ತಪ್ಪೇನೂ ಇಲ್ಲ. ನಾವು ದಕ್ಷಿಣದವರು ಆಲೋಚಿಸುವ ರೀತಿ ಒಂದು ಥರವಾದರೆ ಉತ್ತರ ಭಾರತದವರ ಗುಂಗೇ ಮತ್ತೊಂದು ಬಗೆ. ದಕ್ಷಿಣ ಭಾರತವನ್ನು ನೋಡಿ ಅದೇ ಭಾರತ ಎಂದು ಹೇಳಲಾಗದು, ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಎಲ್ಲ ದಿಕ್ಕುಗಳಲ್ಲೂ ಸಾಕಷ್ಟು ಅಲೆದಾಡಿ ನೋಡಿದಾಗ ಭಾರತದ ಒಂದು ಸ್ವರೂಪ ಸಿಕ್ಕಬಹುದು.

Single point of failure - ಎನ್ನುವ ಒಂದು ಹೊಸ ಅನಾಲಿಸ್ಸೀಸ್ ಅನ್ನು ಮುಗಿಸಿ ನಮ್ಮ ಕಂಪನಿಯ ನೆಟ್‌ವರ್ಕ್‌ನಲ್ಲಿ ಎಲ್ಲಿ ತೊಂದರೆ ಇದೆ, ಯಾವುದು ವೀಕೆಷ್ಟ್ ಲಿಂಕ್ ಎನ್ನುವ ವರದಿಯೊಂದನ್ನು ಕಳೆದ ವರ್ಷ ಪ್ರಸ್ತುತ ಪಡಿಸಿದ್ದೆ. ಅದರಿಂದಾಗಿ ಎಲ್ಲೆಲ್ಲಿ ಕೊರತೆಗಳಿವೆಯೋ ಅವುಗಳನ್ನು ನೀಗಿಸಲು ಹಲವಾರು ಸಣ್ಣ ಯೋಜನೆಗಳನ್ನು ಜಾರಿಗೊಳಿಸಲಾಯಿತು, ಕಳೆದ ವರ್ಷದ ಈ ಚಟುವಟಿಕೆಗಳ ಫಲವಾಗಿ ಈ ವರ್ಷ ನಮ್ಮಲ್ಲಿ ದೊಡ್ಡ ತೊಂದರೆಗಳು ಕಡಿಮೆಯೇ ಎನ್ನಬಹುದು. ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ (end-to-end) ಯಾವುದೇ ವ್ಯವಸ್ಥೆಯನ್ನು ನೋಡಿದರೆ ಅದರಲ್ಲಿ ವೀಕೆಷ್ಟ್ ಲಿಂಕ್‌ನ ಸ್ಟ್ರೆಂತ್ ಏನಿದೆ ಅದೇ ಆ ನೆಟ್‌ವರ್ಕ್‌ನ ಸ್ಟ್ರೆಂತ್ ಆಗುತ್ತದೆ. ಉದಾಹರಣೆಗೆ ಈ ಚಿತ್ರದಲ್ಲಿ ತೋರಿಸಿದ ತಂತಿಗಳ ಮೂಲಕ ನಿಮ್ಮ ಸಂಪರ್ಕ, ಕೇಬಲ್, ಎಲೆಕ್ಟ್ರಿಸಿಟಿ ಹಾದು ಬರುತ್ತಿದೆಯೆಂದಾರೆ, ಅದರಲ್ಲಿನ ಕೊರತೆಯೇ ನಿಮ್ಮ ಕೊರತೆಯಾಗುತ್ತದೆ - ಯೋಚಿಸಿ ನೋಡಿ.

ನಿಜ ಜೀವನದಲ್ಲಿ ನಿಮ್ಮೆದುರಿಗೆ ಹೀಗೆ ದುತ್ತನೆ ಎದುರಾಗುವ ಸಮಸ್ಯೆಯ ಕಗ್ಗಂಟನ್ನು ಎಲ್ಲಿಂದ ಬಿಡಿಸಲು ಆರಂಭಿಸುತ್ತೀರಿ? ಯಾರನ್ನು ಕಾಣುತ್ತೀರಿ? ಯಾರಿಗೆ ಉತ್ತರ ಹೇಳುತ್ತೀರಿ?

Sunday, July 06, 2008

ಕರಿಹೈದನ ಬರ್ಡನ್ನು

’ಏ, ಸೇರ್ಸಿಕೊಳ್ಳೋಲ್ಲ ಹೋಗೋ’
ಎಂದು ಕಂದು ತಂಡದವರು ಬೈದು ತಳ್ಳಿದಾಗಲೇ ಕರಿಹೈದನಿಗೆ ತಾನು ತನ್ನ ಹಳೆಯ ತಂಡವನ್ನು ಬಿಟ್ಟು ಬಂದು ಪೇಚಿಗೆ ಸಿಕ್ಕಿಕೊಂಡಿದ್ದು ತನ್ನ ಮೇಲೆಯೇ ಅಸಹ್ಯವನ್ನು ಮೂಡಿಸತೊಡಗಿತು.

’ಇಲ್ರೋ ನಾನು ಅದೇನೇನೋ ಹೊಸ ಹೊಸ ವರಸೆಗಳನ್ನ ಕಲಿತಿದೀನಿ, ನನ್ನನ್ನೂ ಆಟಕ್ಕ್ ಸೇರಿಸ್‌ಕೊಂಡು ನೋಡ್ರಿ, ಒಂದು ಚಾನ್ಸ್ ಕೊಡ್ರಿ...’ ಎಂದಿದ್ದನ್ನ ಕಂದು ತಂಡದವರು ಯಾರೂ ಅಷ್ಟೊಂದು ಹಚ್ಚಿಕೊಂಡಂತೆ ಅನ್ನಿಸಲೇ ಇಲ್ಲ, ಜೊತೆಗೆ ಕಂದು ತಂಡದಲ್ಲಿ ಇತ್ತೀಚೆಗೆ ಸೇರಿಸಿಕೊಂಡ ಹೊಸ ಹುರುಪಿನ ಆಟಗಾರರೆಲ್ಲ ಒಳ್ಳೇ ತರಬೇತಿ ಪಡೆದು ಕರಿಹೈದ ಆ ತಂಡವನ್ನು ಬಿಡುವಾಗ ಏನೇನು ಇರಲಿಲ್ಲ ಏನೇನು ಇದ್ದಿದ್ದರೆ ಚೆನ್ನಿತ್ತು ಎಂದು ಹಲಬುತ್ತಿದ್ದನೋ ಅದೆಲ್ಲವೂ ಅಲ್ಲಿ ಮೇಳೈಸಿದಂತಿತ್ತು.

ಯಾವ ಯಾವ ಬಗೆಗಳಿವೆ - ದೈನ್ಯದಿಂದ ಬೇಡಿಕೊಂಡಿದ್ದಾಯಿತು, ಹೊಸ ಉಪಾಯಗಳನ್ನು ಹೇಳಿಕೊಡುತ್ತೇನೆ ಎಂದು ಮೂಗಿನ ಮೇಲೆ ತುಪ್ಪ ಸವರಿದ್ದಾಯಿತು, ಇನ್ನು ಹೆದರಿಸುವುದೊಂದೇ ಬಾಕಿ ಎಂದು ಅನ್ನಿಸಿದ್ದೇ ತಡ, ಕರಿಹೈದ,
’ನೋಡ್ರೋ, ನನ್ನನ್ನೇನಾದ್ರೂ ಆಟಕ್ಕೆ ಸೇರಿಸಿಕೊಳ್ಳದೇ ಹೋದ್ರೆ you don't know what you are missing!' ಎಂದು ಬ್ರಹ್ಮಾಸ್ತ್ರವನ್ನು ಎಸೆದಷ್ಟೇ ಸುಖವಾಗಿ ಕಣ್ಣುಗಳನ್ನು ಇನ್ನೂ ದೊಡ್ಡದಾಗಿ ತೆರೆದು ನಿರೀಕ್ಷೆಯಲ್ಲಿ ಒಂದು ಕ್ಷಣದ ಮೌನವನ್ನು ಸಹಿಸಿಕೊಂಡ.

ಕಂದು ತಂಡದ ಆಟಗಾರರು ಇವನು ಹೇಳಿದ ಮಾತಿಗೆ ಒಂದು ಕ್ಷಣ ಸ್ತಂಭೀಭೂತರಾದರು, ಅವರ ಆಟದ ವರಸೆಗಳು ’ಲಂಡನ್-ಲಂಡನ್’ ಆಟದಲ್ಲಿ ಆಟಗಾರರು ಕಿಂಚಿತ್ತೂ ಅಲುಗಾಡದೇ ನಿಲ್ಲುತ್ತಿದ್ದರಲ್ಲ ಹಾಗಾದರು, ಆದರೆ ಕರಿಹೈದನ ಮೋಡಿಗೆ ಯಾರೂ ಬಿದ್ದಂತೆ ಕಾಣಲಿಲ್ಲ, ಇವನು ಹೇಳಿದ ಮಾತನ್ನು ಕೊಡಗಿಕೊಂಡು ಕಂದು ತಂಡ ಮತ್ತೆ ತಮ್ಮ ತಮ್ಮ ವರಸೆಗಳನ್ನು ಬದಲಾಯಿಸಿ ತಮ್ಮ ತಮ್ಮ ಆಟಗಳಲ್ಲಿ ಲೀನವಾದರು, ಕರಿ ಹೈದನ ಮೌನ ಅವನ ಹೊಟ್ಟೆಯೊಳಗೆ ಕಲಸುತ್ತ ಅದು ಇದ್ದಲ್ಲೇ ಹಸಿವಾದ ಹೊಟ್ಟೆಯಂತೆ ಕುರ್ ಕುರ್ ಸದ್ದು ಮಾಡಿ ಸುಮ್ಮನಾಯಿತು.

ಬಿಳಿತಂಡವನ್ನು ಬಂದು ಸೇರಿ ಅದರಲ್ಲಿದ್ದನ್ನು ಇವನಿಗೆ ತೋಚಿದಷ್ಟು ಅನುಭವಿಸಿ ಈಗ ನಡುನಡುವೆಯೇ ಕೈ ಬಿಟ್ಟು ಹಳೆಯ ಕಂದು ತಂಡವನ್ನು ಸೇರುತ್ತೇನೆ ಎನ್ನುವ ಕರಿಹೈದನ ವರಸೆಯನ್ನು ಅವನ ಸ್ನೇಹಿತರು ಹಗಲೂರಾತ್ರಿ ಆಡಿಕೊಂಡು ನಗುತ್ತಾರೆ. ಆಗಾಗ್ಗೆ, ’ಮುಠ್ಠಾಳ’ ಎಂದು ಗುನಗಾನ ಮಾಡುತ್ತಾರೆ. ’ಇಲ್ಲಿರಲಾರದವನು ಅಲ್ಲಿ ಹೋಗಿ ಮಾಡಿ ಕಡಿಯುವುದೇನು’ ಎಂದು ಛೇಡಿಸುತ್ತಾರೆ. ’ಹಸಿವೋ ಸಮೃದ್ಧಿಯೋ ನಮ್ಮದು ನಮಗೆ ಚೆಂದ’ ಎಂದು ಕರಿಹೈದ ಯಾವುದೋ ಕಾಡಕವಿಯ ಪಂಕ್ತಿಗಳನ್ನು ಅರಹುತ್ತಾ ಇಂದಲ್ಲ ನಾಳೆ ಕಂದು ತಂಡವನ್ನು ಸೇರಿಯೇ ಸೇರೇನು ಎಂದು ಕನಸು ಕಾಣುವುದನ್ನು ಮಾತ್ರ ಬಿಡಲೊಲ್ಲ.

ಕರಿಹೈದ ಮೊದಲು ಕಂದುತಂಡವನ್ನು ಬಿಟ್ಟು ಬಿಳಿತಂಡವನ್ನು ಸೇರಿಕೊಂಡಾಗ ಆತನಿಗೆ ಹೀಗೊಂದು ದಿನ ಬವಣೆಯನ್ನು ಅನುಭವಿಸಬಹುದು ಎಂದೆನಿಸಿರಲಿಲ್ಲ. ಹೀಗೆ ತಂಡಗಳನ್ನು ಬದಲಾಯಿಸಿದವರು ಯಾರೂ ಮತ್ತೆ ಪುನಃ ಪಕ್ಷಾಂತರ ಮಾಡುವುದು ಕಡಿಮೆಯಾದರೂ ಹಾಗೆ ಅಂದಿನ ಲೆಕ್ಕದಲ್ಲಿ ಸಿಕ್ಕ ಹಾಗೆ ಒಳಿತು-ಕೆಡಕುಗಳನ್ನು ಯಾರೂ ವಿವರಿಸಿ ಹೇಳಿದ್ದಂತೂ ಇಲ್ಲ. ಕರಿಹೈದ ಬೇಕಾದಷ್ಟು ತೊಳಲಾಡುತ್ತಾನೆ - ಒಮ್ಮೆ ದ್ರಾಕ್ಷಿ ಸಿಗದ ನರಿಯ ಹಾಗೆ ಆ ಹುಳಿ ದ್ರಾಕ್ಷಿ ಸಿಕ್ಕರೆಷ್ಟು ಬಿಟ್ಟರೆಷ್ಟು ಎಂದು ಹೂಂಕರಿಸುತ್ತಾನೆ, ಮತ್ತೊಮ್ಮೆ ಕಂದು ತಂಡದಲ್ಲಿ ಆಡಿಬೆಳೆದು ಓಡಿಯಾಡಿದ ಹಾಗೆ ನೆನಪಿಸಿಕೊಂಡು ನಾಸ್ಟಾಲ್ಜಿಯಾವನ್ನು ಹೊಗಳುವುದೇ ಬದುಕು ಎಂದುಕೊಳ್ಳುತ್ತಾನೆ.

ಹೆಚ್ಚಾಗಿ ವಿಷಾದ ಆವರಿಸುತ್ತದೆ, ಅದರ ಬೆಳಕಿನ ನೆರಳಿನ ಬೆನ್ನಿಗೆ ಹೊಸ ತತ್ವಗಳು ಮೂಡಿಬರುವಂತೆ ಕಾಣಿಸುತ್ತದೆ - ’ಯಾವ ತಂಡದಲ್ಲಿದ್ದು ಆಡಿದರೇನು, ವಿಶ್ವವೇ ಒಂದು ತಂಡ. ಆ ತಂಡ-ಈ ತಂಡ ಇವೆಲ್ಲ ಬರೀ ಕಾಗದ ಪತ್ರಗಳ ಮೇಲಿನ ಒಡಂಬಡಿಕೆ ಮಾತ್ರ, ಅವರವರ ಹೃದಯದಲ್ಲೇನಿದೆ ಅದು ಮುಖ್ಯ. ಬಿಳಿ ತಂಡದಲ್ಲಿದ್ದುಕೊಂಡೇ ಕಂದು ತಂಡಕ್ಕೆ ಸಪ್ಪೋರ್ಟ್ ಮಾಡಲಾಗದೇನು, ಹೊರಗಿನಿಂದ ಅವರವರ ಬೆಂಬಲವನ್ನು ಯಾರೂ ಸೂಚಿಸಬಹುದಲ್ಲ. ಈ ಆಟಗಳೇ ಹೀಗೆ - ಇದರ ಹಿಂದಿನ ಸಂಸ್ಕೃತಿ, ರಾಜಕೀಯ, ಧರ್ಮ ಇವೆಲ್ಲ ಒಂದೇ ಎಲ್ಲಿದ್ದರೂ ಹೇಗಿದ್ದರೂ!’

ಹೀಗೆ ಹಲವಾರು ತತ್ವಗಳು ಮೈತಳೆತಳೆದು ಅವುಗಳು ತಮ್ಮಷ್ಟಕ್ಕೆ ತಾವು ಒಂದಕ್ಕೊಂದು ತೀಡಿಕೊಂಡು ಕಾಡಿಕೊಂಡು ಗಡುಸಾದ ಕಪ್ಪಗಿನ ಕಲ್ಲಿದ್ದಿಲು ಕೆಂಪಾಗಿ ಬೆಂಕಿಯಾಗಿ ನಿಗಿನಿಗಿ ಕೆಂಡವಾಗಿ ಕೊನೆಗೆ ಹಗುರವಾದ ಬಿಳಿಯ ಬೂದಿಯಾಗುವಲ್ಲಿಯವರೆಗಿನ ರೂಪಾಂತರವನ್ನು ಪಡೆದುಕೊಳ್ಳುತ್ತವೆ. ಅಲ್ಲಲ್ಲಿ ಕಿಡಿಗಳೋ ಅಥವಾ ಬೆಂಕಿ ಇರುವ ತಾವೋ ತಾವಿದ್ದ ಕಡೆ ಮೊದಲು ಸುಡುವಂತೆ ಹೊಸ ತತ್ವಗಳ ಚುರುಕು ಅದೆಷ್ಟರ ಮಟ್ಟಿಗೆ ಏರುತ್ತದೆ ಎಂದರೆ ಪಕ್ಕದಲ್ಲಿನ ಏರ್‌ಕಂಡೀಷನರ್ ಬೀಸುವ ತಂಗಾಳಿಯೂ ತನ್ನ ತಂಪನ್ನು ಈ ಬಿಸಿಯಲ್ಲಿ ಕಳೆದುಕೊಳ್ಳುತ್ತದೆ.

ಕ್ಯಾನ್ಸರ್ ರೋಗಿ ತನ್ನ ಕ್ಯಾನ್ಸರ್ ಅನ್ನು ಒಪ್ಪಿಕೊಂಡು ಸಮಾಧಾನಿಯಾಗುವ ಮೊದಲು ಬೇಕಾದಷ್ಟು ಕಿರಿಚಾಡಿ ಕೂಗಾಡಿ ಅವರಿವರಿಗೆಲ್ಲ ಬೈದು ದೇವರನ್ನೂ ಸೇರಿಸಿಕೊಂಡು ಮತ್ತೆ ಸಂತನ ಮನಸ್ಥಿತಿಯನ್ನು ತಂದುಕೊಳ್ಳುವಂತೆ ಕರಿಹೈದ ಕಂದು ತಂಡದವರನ್ನು ಕುರಿತು ಸಹಸ್ರನಾಮ ಶುರುಮಾಡಿ ಸುಮ್ಮನಾಗುತ್ತಾನೆ:
’ಯಾರಿಗ್ ಬೇಕ್ ಹೋಗಿ ನಿಮ್ಮ ತಂಡದಲ್ಲಿ ಆಡೋ ಭಾಗ್ಯ. ನೀವೋ ನಿಮ್ಮ ಪ್ರಾಸೆಸ್ಸೋ ನಿಮ್ಮ ರೂಲ್ಸ್-ರೆಗ್ಯುಲೇಷನ್ನುಗಳೋ ಎಲ್ಲವೂ ಸಾಯ್ಲಿ! ನನ್ನಂತಹವರ ಯೋಗ್ಯತೆಯನ್ನು ಇವತ್ತಿಗೂ ಕಂಡು ಮಣೆಹಾಕದ ನಿಮ್ಮ ಸಂಸ್ಕೃತಿಗಿಷ್ಟು ಧಿಕ್ಕಾರವಿರಲಿ. ನನ್ನಂತೋರುನ್ನ ಸೇರಿಸಿಕೊಳ್ದೇ ಅದು ಹೆಂಗ್ ಆಡ್ತೀರೋ ಆಡ್ರಿ ನೋಡೇ ಬಿಡ್ತೀನಿ. ನಿಮ್ಮಲ್ಲಿನ ಕೆಟ್ಟ ಪರಂಪರೆಯೇ ಸಾಕು ನಿಮ್ಮವರ ಕಾಲುಗಳನ್ನು ಎಳೆದೆಳೆದು ನೀವಿದ್ದಲ್ಲೇ ನಿಮ್ಮನ್ನು ಕೂರಿಸಲು, ನೀವು ಮುಂದೆ ಬರುವ ಸಾಧ್ಯತೆಯೇ ಇಲ್ಲ - ಎಂದಿಗೂ ಯಾವತ್ತೂ. ಎಲ್ರೂ ಹಾಳಾಗ್ ಹೋಗಿ...’

ಕರಿಹೈದನ ಆಕ್ರಂದನ ಮುಗಿಲು ಮುಟ್ಟುತ್ತೆ. ನಂತರ ಧೀರ್ಘ ಸಮಾಧಾನ ಮೂಡುತ್ತೆ. ಕರಿಹೈದ ಸಂತನಂತೂ ಆಗೋದಿಲ್ಲ, ತನ್ನ ಬಿಳಿತಂಡದವರ ಜೊತೆ ಸರಿಯಾಗಿ ಮನಸಿಟ್ಟು ಆಡಲೊಲ್ಲ, ಹಳೆಯ ಕಂದುತಂಡದವರ ನೆನಪನ್ನು ಬದಿಗಿಟ್ಟು ಮುಂದಿನ ದಾರಿಯನ್ನು ಮಾತ್ರ ನೋಡೋದಿಲ್ಲ. ಹಲವಾರು ಲೇನುಗಳು ಇರುವ ನುಣುಪಾದ ರಸ್ತೆಯ ಮೇಲೆ ನಾಗಾಲೋಟದಿಂದೋಡುವ ದೊಡ್ಡ ಕಾರಿರುವ ಕರಿಹೈದ ಮುಂದಿನ ಅಗಲವಾದ ವಿಂಡ್‌ಶೀಲ್ಡನ್ನು ನೋಡಿ ತಾನು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುವ ನಡುನಡುವೆ ಚಿಕ್ಕದಾದ ಹಾಗೂ ಚೊಕ್ಕದಾದ ರಿಯರ್ ವ್ಯೂ ಮಿರರ್ ಅನ್ನು ಅಗತ್ಯಕ್ಕಿಂತ ಹೆಚ್ಚಾಗಿ ನೋಡಿಕೊಂಡಿರುವುದನ್ನು ಕಂಡ ಕರಿಹೈದನ ಸ್ನೇಹಿತರು ಕರಿಹೈದನ ಮನಸ್ಸಿನಲ್ಲಿರುವುದನ್ನು ಗೊತ್ತು ಮಾಡಿಕೊಂಡವರಂತೆ ಅವರೊಳಗೇ ಹಲ್ಲುಕಿರಿದುಕೊಂಡಿರುವುದನ್ನು ನೆನೆಸಿಕೊಂಡು ಕರಿಹೈದನ ಮನಸ್ಸು ಮತ್ತಷ್ಟು ಪಿಚ್ಚಾಗುತ್ತದೆ.

Saturday, June 28, 2008

ಬದಲಾದ Hy factorಗಳ ವ್ಯಾಪ್ತಿ ಅರ್ಥಾಥ್ ಏನಾಗಿದೆ ನನಗೆ

ನೀವು ನನ್ನ ಹಾಗೆ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಹುಟ್ಟಿದ್ದರೆ ಇನ್ನೇನು ಇಂಗ್ಲೀಷರು ಭಾರತವನ್ನು ಬಿಟ್ಟು ಹೋದರು ನಾವೆಲ್ಲ ನಮ್ಮ ನಮ್ಮ ಮೂಲ ಸಂಸ್ಕೃತಿಯಲ್ಲಿ ಬೆಳೆಯುತ್ತೇವೆ ಬದುಕುತ್ತೇವೆ ಎಂದು ಒಳಗೊಳಗೆ ಅಂದುಕೊಳ್ಳುತ್ತಲೇ ಮಾತಿನ ಮಧ್ಯೆ ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ಪೋಷಕರೋ ಸಂಬಂಧಿಕರ ನಡುವೆ ಬೆಳೆದು ಬಂದಿರುತ್ತೀರಿ. ’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು!’ ಎನ್ನುವ ಹಾಡಿನ ಗುಂಗಿನಲ್ಲಿ ಬೆಲ್ ಬಾಟಮ್ ಪ್ಯಾಂಟುಗಳನ್ನು ಧರಿಸಿಕೊಂಡಿರುತ್ತೀರಿ. ಆಗಷ್ಟೇ ನಾಯಿಕೊಡೆಗಳಂತೆ ಎಲ್ಲೆಲ್ಲೆ ಬೇಕು ಅಲ್ಲಲ್ಲಿ ತಲೆ ಎತ್ತಿ ನಿಂತು ತಮ್ಮನ್ನು ತಾವು ಸೃಷ್ಟಿಯಲ್ಲಿ ಲೀನವಾಗಿಸಿಕೊಳ್ಳಲು ಸಾಹಸ ಮಾಡುವ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜುಗಳಲ್ಲಿ ವ್ಯಾಸಾಂಗ ನಡೆಸುವವರನ್ನು ನೋಡಿ ಬೆರಗಾಗಿರುತ್ತೀರಿ. ಆಗಷ್ಟೇ ಕಣ್ತೆರೆಯುತ್ತಿದ್ದ ಕಾಮನ್ ಎಂಟ್ರನ್ಸ್ ಟೆಸ್ಟ್ (CET) ಎನ್ನುವ ವರ್ತುಲದಲ್ಲಿ ನೀವೂ ತೊಡಗಿಕೊಂಡಿದ್ದು, ಸಾಗರ-ಸೊರಬದಂತಹ ಹಳ್ಳಿಯೂರುಗಳಲ್ಲೂ ವಿದ್ಯಾರ್ಥಿಗಳ ನಿದ್ದೆಗೆಡಿಸುವ ಆಬ್ಜೆಕ್ಟಿವ್ ಪರೀಕ್ಷೆಗಳ ಪ್ರಭಾವಕ್ಕೊಳಗಾಗಿರುತ್ತೀರಿ.

ಹೀಗೆ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ನಾವು Y2K ಗೆ ತಯಾರಿ ಮಾಡಲೆಂದು ಸಿಸ್ಟಮ್ ಪ್ಲಾನಿಂಗ್ ಮೀಟಿಂಗ್ ಸೇರಿ ಇಂದಿಗೆ ಹತ್ತು ವರುಷಗಳು ಕಳೆದು ಹೋದವು! ಹೀಗೆ ಕಳೆದ ಮೂರು ದಶಕಗಳಲ್ಲಿ ಉಪೇಂದ್ರನ ’ಡೇಂಜರ್’ ಹಾಡಿನ ಎಫೆಕ್ಟ್ ಏನೂ ಅಷ್ಟೊಂದು ಗೊತ್ತಾಗದಿದ್ದರೂ ನನ್ನಲ್ಲಿ ನನ್ನ ಸುತ್ತಲಿನಲ್ಲಿ ಆದ ಬೇಕಾದಷ್ಟು ಬದಲಾವಣೆಗಳು ಇಂದು ಅದೇನನ್ನೋ ಯೋಚಿಸಿಕೊಂಡು ಹಳೆಯ ಫೈಲ್ ಒಂದನ್ನು ಹುಡುಕಿಕೊಂಡು ಹೋದವನಿಗೆ ಕಣ್ಣ ಮುಂದೆ ಸುಳಿದು ಹೋದವು.

ಈ ಕಂಪ್ಯೂಟರುಗಳು ಒಂದಲ್ಲ ಒಂದು ನಮ್ಮ ಮನೆಯ ಫೋನ್ ಆದ ಹಾಗೆ ಆಗುತ್ತವೆ ಎಂದು ಯಾರೋ ಹೇಳಿದ್ದು ನಿಜವಾಗಿದೆ ಅನ್ನಿಸುತ್ತೆ. ಹತ್ತು ವರ್ಷದ ಹಿಂದೆ ದಿನಕ್ಕೆ ಪರ್ಸನಲ್ ಕೆಲಸಗಳಿಗೆಂದು ನಾಲ್ಕೈದು ಘಂಟೆಗಳನ್ನು ಕಳೆಯುತ್ತಿದ್ದವನಿಗೆ (ಅದರಲ್ಲೂ ವೀಕೆಂಡಿನಲ್ಲಿ ಇನ್ನೂ ಹೆಚ್ಚು), ಇಂದೆಲ್ಲ ಪರ್ಸನಲ್ ಬಳಕೆಗೆಂದು ಕಂಪ್ಯೂಟರ್ ಉಪಯೋಗ ಅತ್ಯಂತ ಮಿತವಾಗಿದೆ ಎಂದೇ ಹೇಳಬೇಕು: ಎಲ್ಲೋ ಒಂದಿಷ್ಟು ಇ-ಮೇಲ್‌ಗಳನ್ನು ನೋಡಬೇಕು, ಕೆಲವಕ್ಕೆ ಉತ್ತರಿಸಬೇಕು, ಇನ್ನು ದಿನದ ಸುದ್ದಿ ವಿಶೇಷಗಳನ್ನೂ ಓದಿ/ಕೇಳುವುದಕ್ಕೆ ಮೊದಲಿನ ತರಾತುರಿಯಿಲ್ಲದಿರುವುದು ವಿಶೇಷವೇ ಸರಿ, ಜೊತೆಗೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ನೋಡುವುದಾಗಲೀ ಆಡಿಯೋ ಕೇಳುವುದಾಗಲೀ ಬಹಳ ಅಪರೂಪವೆಂದೇ ಹೇಳಬೇಕು. ಮೊದಲೆಲ್ಲ ಇದ್ದ Hy factors ಗಳಿಗೂ ಇಂದಿನ ಅವೇ ಫ್ಯಾಕ್ಟರುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. Hy factors ಎಂದರೆ ಏನು ಎಂದಿರಾ? ಅವೇ - Happy, Hobby, Hungry ಮೊದಲಾದವುಗಳು. ಅವರವರ ಹಸಿವು, ದಾಹ, ಸಂತೋಷ-ದುಃಖ, ಹವ್ಯಾಸ ಮೊದಲಾದವುಗಳ ಮೇಲೆ ಅವುಗಳನ್ನು ಅವಲಂಭಿಸಿದ ಅಗತ್ಯಗಳ ಮೇಲೆ ತಾನೆ ಅವರವರ ಚಟುವಟಿಕೆಗಳು ಸುತ್ತುವರೆದಿರೋದು? (ನಿಮಗೇನಾದರೂ ಬೇರೆ Hy factor ಗಳು ಗೊತ್ತಿದ್ದರೆ ತಿಳಿಸಿ).

ಅಂದಿಗಿಂತ ಇಂದು ಇನ್‌ಫರ್ಮೇಷನ್ ಲೋಕ ಬದಲಾಗಿದೆ, ಅಂದು ಸಿಗುತ್ತಿದ್ದ ಒಂದೊಂದು ವೆಬ್ ಸೈಟ್‌ಗಳಿಗೂ ಇಂದು ಅದರ ಹತ್ತು-ನೂರರ ಪಟ್ಟು ಹೆಚ್ಚು ವೆಬ್ ಸೈಟ್‌ಗಳು ಸಿಗತೊಡಗಿವೆ. ಆದರೆ ಇವೆಲ್ಲದರಲ್ಲೂ ಯಾವುದೇ ಆಸಕ್ತಿ ಎನ್ನುವುದು ಇಲ್ಲದಿರುವುದು ನನಗೊಬ್ಬನಿಗೆ ಮಾತ್ರ ಆಗಿಲ್ಲವಷ್ಟೇ? ರಾಷ್ಟ್ರೀಯ-ಅಂತಾರಾಷ್ಟ್ರೀಯ ಸುದ್ದಿಗಳನ್ನು ನಾನು ಬೆನ್ನೆತ್ತಿ ಹೋಗುತ್ತಿದ್ದ ಕಾಲವೊಂದಿತ್ತು, ಏಷ್ಯಾದಿಂದ ಹಿಡಿದು ಅಂಟಾರ್ಟಿಕಾವರೆಗಿನ ವಿದ್ಯಮಾನವನ್ನು ಪ್ರಪಂಚದ ಬೇರೆ ಬೇರೆ ಮಾಧ್ಯಮದವರು ಹೇಗೆ ಬಿಂಬಿಸಿದ್ದಾರೆ ಎಂದು ತೂಗಿ ನೋಡುವುದಿತ್ತು, ಪಾಕಿಸ್ತಾನದ Dawn ನಿಂದ ಹಿಡಿದು, BBC ಮೊದಲಾದವರ ವೆಬ್ ‌ಸೈಟ್‌ಗಳನ್ನು ತಡಕಿ ನೋಡುವುದಿತ್ತು. ಇಂದೆಲ್ಲ ಈ ಪ್ರಪಂಚದಲ್ಲಿ ಕಚ್ಚಾಡಿಕೊಂಡಿರುವವರು ಯಾವಾಗಲೂ ಇದ್ದೇ ಇರುತ್ತಾರೆ ಎನ್ನುವುದು ಗ್ಯಾರಂಟಿಯಾದಂದಿನಿಂದ - ಅವರಲ್ಲಿ ಕಚ್ಚಾಡಿಕೊಂಡು ಹೊಡೆದಾಡಿ ಸತ್ತರೆ ನಾನೇಕೆ ಇಲ್ಲಿ ತಲೆಕೆಡಿಸಿಕೊಳ್ಳಲಿ? - ಎನ್ನುವ ಉದಾಸೀನ ಮೈತುಂಬಿಕೊಂಡಿದೆ. ಕರ್ನಾಟಕದ ರಾಜ್ಯಕಾರಣವೆಂದರೆ ಇನ್ನಾದರೂ ಸ್ವಲ್ಪ ಆಸಕ್ತಿ ಇರೋ ವಿಷಯ, ಅದೇ ಆಸಕ್ತಿ ನನಗೆ ಭಾರತದ ಮಟ್ಟದಲ್ಲಾಗಲೀ ಅಮೇರಿಕದ ವಿಷಯಕ್ಕಾಗಲೀ ಹೋಲಿಸಿಕೊಂಡರೆ 2004 ರಲ್ಲಿ ಬುಷ್-ಕೆರ್ರಿ ಅವರ ಪ್ರತಿಯೊಂದು ಡಿಬೇಟುಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನಿಗೆ ಈ ವರ್ಷ ಆ ಆಸಕ್ತಿಯೂ ಇಲ್ಲವೆಂದೇ ಹೇಳಬೇಕು. ಈ ಯಡಿಯೂರಪ್ಪನ ಸರ್ಕಾರವೇನಾದರೂ ಇನ್ನೊಂದು ವರ್ಷದಲ್ಲಿ ಬಿದ್ದು ಮತ್ತೆ ಅತಂತ್ರ ವ್ಯವಸ್ಥೆ ಉದ್ಭವವಾದರೆ ಕರ್ನಾಟಕದ ರಾಜಕೀಯ ಸ್ಥಿತಿಗತಿಯೂ ನನ್ನ ಆಸಕ್ತಿಯಿಂದ ಮರೆಯಾಗುವುದರಲ್ಲಿ ಸಂಶಯವಂತೂ ಇಲ್ಲ.

ಏನಾಗಿದೆ ನನಗೆ? ನನ್ನ Hy factor ಗಳ ವ್ಯಾಪ್ತಿ ಹೇಗೆ ಹೇಗೆ ಬದಲಾಗುತ್ತಾ ಬಂದಿದೆ? ನನ್ನ ಬದಲಾವಣೆಗಳಿಗೆ ಕನ್ನಡಿ ಅನ್ನೋ ಹಾಗೆ ನನ್ನ ಇಂಟರ್ನೆಟ್ ಬ್ರೌಸಿಂಗ್ ಹ್ಯಾಬಿಟ್ಟನ್ನೇ ತೆಗೆದುಕೊಂಡರೆ ಅಗತ್ಯವಿದ್ದಷ್ಟು ಆನ್‌ಲೈನ್ ಮ್ಯಾಪ್, ಮಿತವಾದ ಪರ್ಸನಲ್ ಇ-ಮೇಲ್‍ಗಳು (unsolicited ಇ-ಮೇಲ್‌ಗಳು ತಮ್ಮಷ್ಟಕ್ಕೆ ತಾವೇ ಕಸದ ಬುಟ್ಟಿಗೆ ಹೋದ ಬಳಿಕ), ಬ್ಯಾಂಕ್ ಅಕೌಂಟುಗಳು (ಬಿಲ್ ಪೇಮೇಂಟ್‌ಗೆಂದು), ಫೈನಾನ್ಸಿಯಲ್ ಹೆಡ್‌ಲೈನ್ಸುಗಳು (ಸ್ಟಾಕ್ ಮಾರ್ಕೆಟ್ಟಿನ ಮೇಲೆ ಕಣ್ಣಿಟ್ಟುಕೊಂಡೇ ಇರಬೇಕಲ್ಲ ಅದಕ್ಕೆ), ಇವೆಲ್ಲದರ ಜೊತೆಗೆ ನಮ್ಮನೆ ಕಂಪ್ಯೂಟರಿನ ಹೋಮ್ ಪೇಜ್ ಆದ ಪ್ರಜಾವಾಣಿಯ ಹೆಡ್‌ಲೈನ್‌ಗಳನ್ನು ಇಪ್ಪತ್ತು ಸೆಕೆಂಡು ಜಾಲಾಡಿ ನೋಡುವುದನ್ನು ಬಿಟ್ಟರೆ ಮತ್ತೆ ಹೆಚ್ಚು ಹೊತು ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಕಷ್ಟವೆಂದೇ ಹೇಳಬೇಕು. ಮೊದಲೆಲ್ಲ ಉಳಿದವರ ಬ್ಲಾಗ್‌ಗೆ ಹೋಗಿ ಓದಿ, ಅಪರೂಪಕ್ಕೆ ಕಾಮೆಂಟುಗಳನ್ನು ಬಿಡುತ್ತಿದ್ದವನು ಇಂದು ಅದನ್ನು ಮಿತಿಗೊಳಿಸಿದ್ದೇನೆಂದು ಹೇಳಿಕೊಳ್ಳುವುದಕ್ಕೇ ಕಷ್ಟವೆನಿಸುತ್ತದೆ. ಆಗೆಲ್ಲ ಒಂದೇ ದಿನ ಐದು-ಆರು-ಎಂಟು ಘಂಟೆಗಳಷ್ಟು ಹಲವಾರು ವ್ಯಕ್ತಿಗಳೊಡನೆ ಧೀರ್ಘವಾದ ಚಾಟ್ ಮಾಡುತ್ತಿದ್ದವನು ಇತ್ತೀಚೆಗೆ ವಾರಕ್ಕೊಮ್ಮೆಯೂ ಒಬ್ಬರಿಗೂ ’ಹಾಯ್’ ಹೇಳದ ಮಟ್ಟಕ್ಕೆ ಬಂದಿಳಿದಿದ್ದೇನೆ! ಆಫೀಸಿನಲ್ಲೂ ಅಷ್ಟೇ ಇನ್ಸ್ಟಂಟ್ ಮೆಸ್ಸೇಜ್ ಸಂಭಾಷಣೆಗಳು ನೀರಸವೆನ್ನಿಸತೊಡಗಿ ಪಕ್ಕದಲ್ಲಿನ ಫೋನ್ ಎತ್ತಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾತನಾಡಿ ಆಗಬೇಕಾದ ಕೆಲಸವನ್ನು ಮುಗಿಸಿಕೊಳ್ಳುತ್ತೇನೆ.

ಈ ಇಂಟರ್ನೆಟ್ ಎಂದರೆ ಒಂದು ದೊಡ್ಡ ಲೈಬ್ರರಿ ಇದ್ದ ಹಾಗೆ - ನೆನಪಿದೆಯಾ ನಿಮಗೆ ನಿಮ್ಮ ಸುತ್ತಮುತ್ತಲೂ ಅಗಾಧವಾದ ಪುಸ್ತಕಗಳ ರಾಶಿಯೇ ಇದ್ದರೂ ನೀವು ನಿಮಗೆ ಬೇಕಾದ ಯಾವುದೋ ಒಂದು ಪುಸ್ತಕಕ್ಕಂಟಿಕೊಂಡು ದಿನಪೂರ್ತಿ ಅದೇ ಲೈಬ್ರರಿಯಲ್ಲಿ ಕಳೆಯುತ್ತಿದ್ದುದು? ಒಂದು ಕಾಲದಲ್ಲಿ ಮಾನಸಗಂಗೋತ್ರಿಯ ಕನ್ನಡ ವಿಭಾಗದಲ್ಲಿನ ನನಗೆ ಬೇಕಾದ ಲೇಖಕರ ಎಲ್ಲ ಪುಸ್ತಕಗಳನ್ನು ಓದಿ ಮುಗಿಸುವ ದಾಹವಿದ್ದವನಿಗೆ ಇಂದು ಅದೇ ವಾತಾವರಣದಲ್ಲಿ ಬಿಟ್ಟರೆ ಯಾವೊಂದು ಪುಸ್ತಕವನ್ನು ತೆಗೆದು ಓದುತ್ತೇನೆ ಎನ್ನುವ ಕಲ್ಪನೆಯನ್ನೂ ಮಾಡಿಕೊಳ್ಳಲಾಗದು. ನಮ್ಮ ಮನೆಗೆ ನ್ಯೂ ಯಾರ್ಕ್ ಟೈಮ್ ನ್ಯೂಸ್ ಪೇಪರನ್ನು ತರಿಸೋಣವೆಂದುಕೊಂಡರೆ ಅದನ್ನು ಓದೋರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವೆಂಬ ಉತ್ತರ ಬಂತು. ಎಲ್ಲಾದರೂ ಬಿಸಿನೆಸ್ ಟ್ರಿಪ್‌ನಲ್ಲಿ ನಾನುಳಿದುಕೊಳ್ಳುವ ಹೋಟೇಲಿನಲ್ಲಿ ಪುಕ್ಕಟೆ ನ್ಯೂಸ್ ಪೇಪರನ್ನು ಕೊಟ್ಟರೂ ಓದದೇ ಇರುವ ಪರಿಗೆ ಬಂದು ತಲುಪಿದ್ದೇನೆ ಎಂದು ಹೇಳಿಕೊಳ್ಳಲು ಹೆದರಿಕೆಯಾಗುತ್ತದೆ. ನಿನ್ನೆಯವರೆಗೆ ನಡೆದ ವಿಶ್ವದೆಲ್ಲ ಸುದ್ದಿಗಳನ್ನು ಇಂತಿಷ್ಟೇ ಪುಟಗಳಲ್ಲಿ ಹೀಗೇ ಕಟ್ಟಿ ಹಿಡಿಯುತ್ತೇವೆ ಎನ್ನುವ ಹಠವಾದಿಗಳ ಅಗತ್ಯ ಈಗಿನ ಇಂಟರ್ನೆಟ್ ಯುಗದಲ್ಲಿ ಯಾರಿಗೆ ಬೇಕು ಹೇಳಿ, ಹಾಗೆ ಮುಕ್ತವಾಗಿ ಸಿಗುವ ವಿಷಯಗಳನ್ನೆ ನಮ್ಮ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಓದದಿರುವ ನಾವು ಇನ್ನು ಭೌತಿಕ ಪುಟಗಳನ್ನು ತಿರುಗಿಸಿ ಓದುವುದು ನಿಜವೇ?

ಇವತ್ತಿಗೆ ನನ್ನ ಸ್ವ ಇಚ್ಛೆಯಿಂದ ರೇಡಿಯೋವನ್ನು ಕೇಳದೆ ಆರು ತಿಂಗಳು ಸಂದವು. ಹಿಂತಿರುಗಿ ನೋಡಿದರೆ ನಾನು ಕಳೆದುಕೊಂಡದ್ದೇನು ಇಲ್ಲ ಅನ್ನುವ ವಾದಕ್ಕೆ ಪೂರಕವಾದ ಅಂಶಗಳೇ ಹೆಚ್ಚು ಎನ್ನಿಸುತ್ತಿರುವುದು ಈ ಹೊತ್ತಿನ ತತ್ವಗಳಲ್ಲೊಂದು. ಇತ್ತೀಚೆಗೆ ಟಿವಿಯಲ್ಲಿ ಬೇಕಾದಷ್ಟು ಸಿಗುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಯೂ ಅಷ್ಟೊಂದು ಇಷ್ಟವಾಗುತ್ತಿಲ್ಲ ಎಂದು ಹೇಳುವ ಹೊತ್ತಿಗೆ ನನ್ನ ಫೇವರೈಟ್ ಕಮಿಡಿಯನ್ George Carlin ಸತ್ತು ಹೋದ ವಿಷಯ ನಿನ್ನೆ ಆಫೀಸಿನಲ್ಲಿ ಯಾರದ್ದೋ ಇನ್ಸ್ಟಂಟ್ ಮೆಸ್ಸೇಜಿನ ಸೇಟಸ್ಸ್ ಮೆಸ್ಸೇಜಿನ ಮೂಲಕ ಗೊತ್ತಾಯಿತು - One good thing about being dead is you automatically qualify for putting your picture on stamps and notes! ಅಡಿಗರು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಅದೆಷ್ಟೋ ವರ್ಷಗಳ ಹಿಂದೆ ಬರೆದದ್ದೂ, ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಸಂಸಾರ ಸೋಜಿಗವನ್ನು ಸರಳ ವಿಷಯ-ವಸ್ತುಗಳಲ್ಲಿ ಹಿಡಿದದ್ದೂ ನನ್ನನ್ನಂತೂ ಅಗಾಧವಾಗಿ ಕಾಡಿಸುತ್ತಲೇ ಎನ್ನಬಹುದು. ನಾವಂತೂ ಇತ್ತೀಚೆಗೆ ಧೀರ್ಘವಾಗಿ ಗಾಢವಾಗಿ ಅದೇನನ್ನು ಓದಿಲ್ಲವಾದರೂ ಅಲ್ಲಲ್ಲಿ ಸಿಗುವ ಈ ಹಳೆಯ ಗ್ರಂಥಗಳ ಪುಟಗಳು ನನ್ನನ್ನು ಯಾವತ್ತೂ ಒಂದು ಕ್ಷಣ ನಿಲ್ಲಿಸಿಯೇ ನಿಲ್ಲಿಸುತ್ತವೆ - ಅದು ಮಾತ್ರ ಬದಲಾಗಿಲ್ಲ ಎನ್ನುವುದೇ ಸಂತೋಷದ ವಿಷಯ.

ಈ information overload ಕಾಲದಲ್ಲಿ ಈಗಷ್ಟೇ ಇನ್ನೂ ಮೂರೂವರೆ ದಶಕಗಳನ್ನು ಪೂರೈಸಿಕೊಂಡು ದಿನದಿನಕ್ಕೂ ಪ್ರಬುದ್ಧಗೊಳ್ಳುತ್ತಿರುವ (ಅಥವಾ ಹಾಗೆಂದುಕೊಂಡು) ಮೈಮನಗಳಿಂದ ಜಗತ್ತನ್ನು ನೋಡುವ ನನ್ನ ಪರಿ ಇನ್ನು ಇಷ್ಟೇ ವರ್ಷಗಳಲ್ಲಿ ಅದೇನೇನೂ ಬದಲಾವಣೆಗಳನ್ನು ತಾಳುವುದಿದೆಯೋ? 2000 ದ ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಎಲ್ಲರಿಗಿಂತ ಮೊದಲು ನೋಂದಾವಣೆ ಮಾಡಿಸಿಕೊಂಡು ಹೋಗಿ ಖುಷಿಯಾಗಿ ವಾಪಾಸು ಬಂದಿದ್ದ ನನಗೆ ಇಂದು 2008 ರ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಲು ಅಷ್ಟೊಂದು ಮನಸ್ಸು ಬಾರದಿರುವುದು ಏಕೆ ಎಂದು ಕೇಳಿಕೊಳ್ಳುತ್ತಲೇ ಇರುವಂತಾಗಿರುವುದು ವಿಶೇಷ. ನಮ್ಮದೇ ಆದದ್ದನ್ನು ಬರೆಯುವ ವ್ಯವಧಾನ ಆಸಕ್ತಿ ಹಗುರವಾಗುತ್ತಾ ಬಂದ ಹಾಗೆ ಇನ್ನೊಬ್ಬರದನ್ನು ಓದುವ ಕಾಳಜಿ ಕಳಕಳಿ ದೂರವಾಗದಿದ್ದರೆ ಸಾಕು. ಸುತ್ತಮುತ್ತಲಿನಿಂದ ದೂರವಿದ್ದುಕೊಂಡು ಸ್ವಯಂ ಅನ್ನೇ ಸರ್ವಸ್ವ ಎಂದುಕೊಂಡು ಈ ದೊಡ್ಡ ಜಗದ ಚಿಕ್ಕ ಗೂಡಿನೊಳಗೆ ಮನಸ್ಸು ಹೂತು ಹೋಗದಿದ್ದರೆ ಸಾಕು. ಬೆಟ್ಟದಷ್ಟು ಬಿದ್ದುಕೊಂಡಿರುವ ಕಸದಲ್ಲಿ ರಸವನ್ನು ಹುಡುಕಿ ತೆಗೆದು ಅದನ್ನು ಅರಗಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಇಂದು ಹೆಚ್ಚಿನ ಶ್ರಮ ಬೇಕು ಅನ್ನುವುದಕ್ಕೆ ನನ್ನನ್ನು ಕೇಳಿ - ಮೊದಲೆಲ್ಲ ಸ್ನೇಹಿತರು ಈ ಪುಸ್ತಕವನ್ನು ಓದಿ/ಓದಿದೆ - ಎನ್ನುತಲಿದ್ದರು, ಈಗ ಅಂಥವರ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬೇಕು.

ನಿಮ್ಮ ನಿಮ್ಮ (ಬದಲಾಗುತ್ತಿರುವ) Hy factor ಗಳ ಅವಸ್ಥೆ/ವ್ಯವಸ್ಥೆಗಳ ಹಿನ್ನೆಲೆಯಲ್ಲಿ ನೀವು ಬದಲಾಗಿದ್ದೀರಿ ಎಂದುಕೊಂಡಿದ್ದೀರೇನು?

Thursday, June 19, 2008

ಸಮಸ್ಯೆ, ಅವಕಾಶ ಹಾಗೂ multiple right answers

ರಾಜಕಾರಣ, ಲಂಚ, ರಾಜಕೀಯ, ಭ್ರಷ್ಟಾಚಾರ ಇವೆಲ್ಲವನ್ನೂ ಬುದ್ಧಿವಂತ ಜನತೆ ಒಂದು ರೀತಿಯ ಅಲರ್ಜಿಯಿಂದ ನೋಡುತ್ತದೆ, ಹೇಸಿಗೆ ಮಾಡಿಕೊಳ್ಳುತ್ತದೆ. ’ಇವೆಲ್ಲ ನಮಗಲ್ಲ’ ಎಂದುಕೊಂಡು ಕೈ ತೊಳೆದುಕೊಳ್ಳಲು ನೋಡುತ್ತದೆ. ನಮ್ಮ ಜೀವನದಲ್ಲಿ ಸಾಂಸ್ಕೃತಿಕವಾಗಿ ಬೆಳವಣಿಗೆಗಳು ಇದ್ದಂತೆ ರಾಜಕೀಯವಾಗಿಯೂ ನಾವು ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ನಾನು ಹೆಚ್ಚು ಆಲೋಚಿಸಲು ತೊಡಗಿದ್ದು ದೇಶ ಬಿಟ್ಟು ದೇಶಕ್ಕೆ ಬಂದಾಗಲೆ. ಒಂದು ಕಾಲದಲ್ಲಿ ನನ್ನ ಹುಟ್ಟೂರಾದ ಆನವಟ್ಟಿಯ ಗ್ರಾಮಪಂಚಾಯತಿಯನ್ನು ಸೇರಿಕೊಂಡು ಅಲ್ಲಿನ ಸ್ಥಳೀಯ ಕೆಲಸಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕು ಎನ್ನುವುದು ಯಾವತ್ತೂ ನನಸಾಗಲೇ ಇಲ್ಲ - ಹಲವಾರು ಕಾರಣಗಳಿಂದಾಗಿ. ಶಾಲಾ ದಿನಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಕೊಂಡು ಹೈ ಸ್ಕೂಲಿನವರೆಗೂ ಅನೇಕ ’ಮಂತ್ರಿ’, ’ನಾಯಕ’ ಪದವಿಗಳನ್ನು ಪಡೆದುಕೊಂಡು ಒಮ್ಮೆ ಹೈ ಸ್ಕೂಲು ಬಿಟ್ಟು ಕಾಲೇಜು ಸೇರಿಕೊಂಡ ಮೇಲೆ ನನ್ನಲ್ಲಿನ ರಾಜಕೀಯ ಉತ್ಸಾಹವೆಲ್ಲ ಸೂಜಿ ಚುಚ್ಚಿದ ಬೆಲೂನಿನ ಗಾಳಿಯಂತೆ ಖಾಲಿಯಾಗಿ ಹೋಯಿತು. ಮುಂದೆ ತಿಳುವಳಿಕೆ ಬೆಳೆದಂತೆಲ್ಲ ಒಂದು ಕ್ಷೇತ್ರದ ರೆಪ್ರೆಸೆಂಟೇಟಿವ್ ಆಗಲು ಏನೇನೆಲ್ಲ ಪೂರಕ ಅಂಶಗಳು ಬೇಕು ಎಂಬುದನ್ನು ಮನಗಂಡ ನಂತರ ಮುಂದೆ ಎಂದೂ ಈ ರಾಜಕೀಯಕ್ಕೆ ಕೈ ಹಾಕಲೇ ಬಾರದು ಎನ್ನುವಲ್ಲಿಯವರೆಗೆ ಬಂದು ನಿಂತಿದೆ.

***
ನಮ್ಮಲ್ಲಿನ ಅಂದರೆ ಭಾರತದಲ್ಲಿನ ಅನೇಕ ಮೂಲಭೂತ ಸಮಸ್ಯೆಗಳನ್ನು ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಪ್ರಶ್ನೆಯಿಂದ ಅರ್ಥೈಸಬಹುದು ಅಥವಾ ವೀಕ್ಷಿಸಬಹುದು - Can you take a "No" for an answer?

ನಮ್ಮಲ್ಲಿ ಈಗ ಚಾಲ್ತಿಯಲ್ಲಿರುವ ಯಾವುದೋ ಒಂದು ವ್ಯವಸ್ಥೆ ಅಥವಾ ಪ್ರಾಸೆಸ್ಸನ್ನು ತೆಗೆದುಕೊಂಡು ಅದರ ಬಗ್ಗೆ ಚರ್ಚೆ ಮಾಡಿಕೊಂಡರೆ ಸುಲಭವಾದೀತು. ಉದಾಹರಣೆಗೆ ಯಾವುದೋ ಒಂದು ಕಾಲೇಜಿನ ಅಡ್ಮಿಷನ್ನ್‌ ಗೆ ಈಗಾಗಲೇ ಕೊನೇ ದಿನವಾಗಿ ಹೋಗಿದೆ ಎಂದುಕೊಳ್ಳೋಣ. ನೀವು ನಿಮ್ಮ ವಿದ್ಯಾರ್ಥಿಯನ್ನು ಆ ಕಾಲೇಜಿಗೆ ಸೇರಿಸಲು ಹೋಗುತ್ತೀರಿ. ಅಲ್ಲಿನ ಗುಮಾಸ್ತರು ’ಕ್ಷಮಿಸಿ, ಈಗಾಗಲೇ ಡೆಡ್‌ಲೈನ್ ಮುಗಿದಿದೆ’ ಎನ್ನುತಾರೆ. ಆಗ ನೀವೇನು ಮಾಡುತ್ತೀರಿ? ಆ ವ್ಯವಸ್ಥೆಯನ್ನು ಒಪ್ಪಿಕೊಂಡು ಸುಮ್ಮನೇ ಹಿಂತಿರುಗುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ಬೇರೆ ಯಾವುದಾದರೂ ನ್ಯಾಯವಾದ ದಾರಿಗಳಿವೆಯೇ (alternatives) ಎಂದು ಹುಡುಕುತ್ತೀರೋ? ಅಥವಾ ಡೆಡ್‌ಲೈನ್ ಮುಗಿದ ಮೇಲೆಯೂ ನಿಮ್ಮ ಶಿಫಾರಸ್ಸಿನಿಂದ ಅಥವಾ ಲಂಚಕೊಡುವ ಮೂಲಕ ಅಥವಾ ಮತ್ತ್ಯಾವುದೋ ’ನ್ಯಾಯವಲ್ಲದ’ ದಾರಿಗಳಿವೆಯೇ ಎಂದು ಹುಡುಕುತ್ತೀರೋ?

ಹೀಗೇ, ನಮ್ಮಲ್ಲಿ ನಾವು ಅನುಭವಿಸುವ ಪ್ರತಿಯೊಂದು ಸಂಕಷ್ಟ, ನೋವು, ನಲಿವು, ಅವಕಾಶ (opportunity) ಹಾಗೂ ಸವಾಲುಗಳಿಗೆ ಹಲವಾರು ಉತ್ತರಗಳಿವೆ - there are multiple right answers ಅಂತಾರಲ್ಲ ಹಾಗೆ. ಆದರೆ ಅವುಗಳನ್ನು ನಾವು ನೋಡೋ ದೃಷ್ಟಿಕೋನ ಬದಲಾಗಬೇಕು ಅಷ್ಟೇ.

***

ನಮ್ಮ ರಾಜಕಾರಣಿಗಳು ಅಂದರೆ ಬುದ್ಧಿವಂತ ಜನ ಮೂಗು ಮುರಿಯಬೇಕೇಕೆ? ಅವರು ಹೇಗಿದ್ದರೂ ಹೇಗಾದರೂ ನಮ್ಮ ಪ್ರತಿನಿಧಿಗಳೇ ಅಲ್ಲವೇ? ನಾವು ಎಲ್ಲ ರೀತಿಯಿಂದ ಚೆನ್ನಾಗಿದ್ದು ನಮ್ಮ ಪ್ರತಿನಿಧಿಗಳು ಸರಿಯಾಗಿಲ್ಲವೆಂದರೆ ಅದಾದರೂ ಒಂದು ವಾದವಾದೀತು. ನಮ್ಮ ಸಮಾಜದಲ್ಲಿ ಹಲವು ರೀತಿಯ ಜನರು ಇರೋದು ಸಹಜವಾದಲ್ಲಿ, ಅಂತಹವರನ್ನು ರೆಪ್ರೆಸೆಂಟ್ ಮಾಡುವವರು ಎಲ್ಲರಿಗೂ ಸ್ಪಂದಿಸಬೇಕಾದಲ್ಲಿ ನಮ್ಮ ನಾಯಕರು ಈಗಿರುವುದಕ್ಕಿಂತ ಭಿನ್ನರಾಗಲು ಸಾಧ್ಯವೇ ಇಲ್ಲ. ಯಾರೇ ವಿಧಾನಸೌಧಕ್ಕೋ ಅಥವಾ ಪಾರ್ಲಿಮೆಂಟಿನ ಒಳಗೆ ನುಗ್ಗಿ ಅಲ್ಲಿನ ಈಗಿನ ರಾಜಕಾರಣಿಗಳನ್ನೆಲ್ಲ ನಾಶ ಮಾಡಿದರೂ ಎಂದೇ ಇಟ್ಟುಕೊಳ್ಳಿ, ಆ ಪಾಯಿಂಟಿನಿಂದ ಮುಂದೆ ಬರುವ ಹೊಸ ರಾಜಕಾರಣಿಗಳು ಈಗಿನವರಿಗಿಂತ ಅದೆಷ್ಟು ಭಿನ್ನರಾಗಿರಬಲ್ಲರು ಎನ್ನುವುದು ಪ್ರಶ್ನಾರ್ಥಕ ವಿಚಾರ. ನನ್ನ ಪ್ರಕಾರ ಒಬ್ಬ ಸಾದು-ಸಂತನನ್ನು ನಮ್ಮೂರಿನ ತಾಲ್ಲೂಕು ಆಫೀಸಿನಲ್ಲಿ ಕೂರಿಸಿದರೂ ಅವನಿಗೆ ಜನರು ಲಂಚದ ಆಮಿಷ ಒಡ್ಡೇ ಒಡ್ಡುತ್ತಾರೆ. ಜೊತೆಗೆ ತಾಲ್ಲೂಕು ಆಫೀಸು, ರಿಜಿಸ್ಟ್ರಾರ್ ಆಫೀಸಿನಲ್ಲಿ ಕೆಲಸ ಮಾಡುವವರೂ ನಮ್ಮ ಸಮಾಜದ ಒಂದು ಅವಿಭಾಜ್ಯ ಅಂಗದ ಸದಸ್ಯರು ಎನ್ನುವುದನ್ನು ನಾವು ಹೇಗೆ ತಾನೇ ಮರೆಯಲಾದೀತು?

ನಮ್ಮ ಕಾನೂನು-ಕಟ್ಟಳೆಗಳು ಹಳೆಯದಾಗಿರಬಹುದು, ಇವತ್ತಿಗೂ ನಮ್ಮೂರಿನ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳು ಓಬೀರಾಯನ ಕಾಲದ ಮೌಲ್ಯವನ್ನು ತಾಲೂಕು ಆಫೀಸಿನ, ಗ್ರಾಮ ಪಂಚಾಯತಿಯ ರೆಕಾರ್ಡುಗಳಲ್ಲಿ ಬಿಂಬಿಸುತ್ತಿರಬಹುದು. ಇಂದು ನೀವು ಕೊಡುತ್ತಿರುವ ಕಂದಾಯ ಆಯಾ ಪಟ್ಟಣದ ಅಭಿವೃದ್ಧಿಗೆ ಮೀಸಲಾದ ಬಜೆಟ್ಟಿನಲ್ಲಿ ಯಾವುದೇ ಮಹತ್ವದ ಪಾತ್ರವನ್ನು ವಹಿಸುವಲ್ಲಿ ಬಹಳ ಚಿಕ್ಕದಾಗಿ ತೋರಬಹುದು. ನಾವು ಕೊಡುತ್ತಿರುವ ಕಂದಾಯ ಅಷ್ಟೇ ಇರಲಿ, ಆದರೆ ನಮ್ಮೂರಿನ ಅಭಿವೃದ್ಧಿ ಆಗಲಿ ಎಂದರೆ ಹೇಗೆ ಸಾಧ್ಯ? ಸರ್ಕಾರ ಎಲ್ಲದಕ್ಕೂ ದುಡ್ಡು ಕೊಡಲಿ ಅಂದರೆ ಅದು ಯಾರ ಹಣ, ಅದಕ್ಕೆ ಮೂಲ ಆದಾಯ ಎಲ್ಲಿಂದ ಬರಬೇಕು? ಸರಿಯಾಗಿ ತೆರಿಗೆ ಕಟ್ಟುವವರಿಂದ ಹಣ ವಸೂಲಿ ಮಾಡುವ ವ್ಯವಸ್ಥೆ ತೆರಿಗೆ ಕಟ್ಟದೇ ಬದುಕುವ ಅದೆಷ್ಟೋ ಕೋಟಿ ಜನರನ್ನು ಹೇಗೆ ಸಂತೈಸಲು ಸಾಧ್ಯ? ಪ್ರತಿ ಊರಿನ, ಗ್ರಾಮದ, ಪಟ್ಟಣದ, ನಗರದ ಬೆಳವಣಿಗೆಗೆ ತಕ್ಕಂತೆ ಅಲ್ಲಿನ ಬಜೆಟ್ ಬೆಳೆಯುತ್ತಿದೆಯೇ? ಒಂದು ಐಸ್ ಕ್ಯೂಬ್‌ನಂತೆ ಇದ್ದಲ್ಲೇ ಕರಗುವ ಹಣದ ಗಂಟು ಈ ಬೆಳವಣಿಗೆಗಳು ಒಡ್ಡುವ ಸವಾಲುಗಳನ್ನು ಅದೆಷ್ಟರ ಮಟ್ಟಿಗೆ ಎದುರಿಸ ಬಲ್ಲದು?

***

ನಾವು ಅಮೇರಿಕಕ್ಕೆ ಬಂದೆವು, ಬಂದ ದಿನದಿಂದ ಇಲ್ಲಿಯವರೆಗೆ ಕಾನೂನನ್ನು ಪಾಲಿಸಿಕೊಂಡು, ಇದ್ದ ಕಾನೂನು-ಕಟ್ಟಳೆಗಳಿಗೆಲ್ಲ ಸರಿಯಾಗಿ ಹೊಂದಿಕೊಂಡು ಬದುಕುತ್ತಿದ್ದೇವೆ. ಈಗ ನಾವಿರುವ ಟೌನ್‌ಶಿಪ್‌ನವರು ಮೊನ್ನೆ ನಮ್ಮ ಮನೆ ಕಂದಾಯವನ್ನು ಹೆಚ್ಚು ಮಾಡಿದರು, ಅದಕ್ಕೆ ನಾನು ಅಪೀಲು ಮಾಡಿದೆ. ಅದಕ್ಕೆ ತಕ್ಕ ಉತ್ತರದ ಜೊತೆಗೆ ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಸರಿಯಾದ ವಿವರಣೆಯನ್ನು ಕೊಟ್ಟರು ನಾನು ಬಾಯಿ ಮುಚ್ಚಿಕೊಂಡು ಹಿಂದೆ ಬರದೆ ಬೇರೆ ದಾರಿ ಇರಲಿಲ್ಲ. ಇಲ್ಲಿನ ಸ್ಕೂಲ್ ಬಜೆಟ್‌ನ ಪ್ರಾಸೆಸ್ಸಿನಲ್ಲಾಗಲಿ, ಇಲ್ಲಿ ಆಗಾಗ್ಗೆ ಟೌನ್‌ಶಿಪ್‌ನವರು ತೆರಿಗೆಯನ್ನು ವಿಶ್ಲೇಶಿಸುವ ಬಗೆಯಲ್ಲಾಗಲೀ, ಇಲ್ಲಿನ ಸ್ಥಳೀಯ ಅಭ್ಯರ್ಥಿಗಳ ಚುನಾವಣೆಯಲ್ಲಾಗಲೀ ನಾನು ಯಾವುದೇ ರೀತಿಯ ಕ್ರಿಯಾತ್ಮಕ ಸ್ಪಂದನವನ್ನು ತೋರದವನು ಅದೇಕೋ ನಮ್ಮ ಮನೆಯ ಟ್ಯಾಕ್ಸ್ ಹೆಚ್ಚಳವನ್ನು ಅವರು ಹೆಚ್ಚಿಸಿದ ಮೇಲೆ ನೋಡಿ ನೊಂದಿದ್ದೇ ಬಂತು. ನಾನು ಈ ಸ್ಥಳೀಯ ಪ್ರಾಸೆಸ್ಸುಗಳಲ್ಲಿ ಇನ್‌ವಾಲ್ವ್ ಆಗಲೀ ಬಿಡಲೀ ಅದಕ್ಕೂ ಟ್ಯಾಕ್ಸ್ ಹೆಚ್ಚಳಕ್ಕೂ ನೇರ ಸಂಬಂಧವಿಲ್ಲದಿರಬಹುದು, ಕೊನೇಪಕ್ಷದ ಇಲ್ಲಿನ ನಿರ್ಧಾರಗಳಲ್ಲಿ ನಾನೂ ಭಾಗಿಯಾಗಬಹುದಿತ್ತೇನೋ.

ಇಲ್ಲಿಗೆ ಬಂದಂದಿನಿಂದ ಕೇವಲ ಪ್ರೊಪೆಷನಲ್ ಅಸ್ಥೆಯಿಂದಷ್ಟೇ ಅಮೇರಿಕವನ್ನು ನೋಡಿ ಅದರಲ್ಲಿ ಒಂದಾಗಿರುವ ನಾವು ಉಳಿದ - ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದರೆ, ತೊಡಗಿಸಿಕೊಂಡರೆ...ಎನ್ನುವುದು ಈ ಲೇಖನದ ಆಶಯವಷ್ಟೆ. ’ಅದು ನಮ್ಮದಲ್ಲದ ಸಮಸ್ಯೆ’ ಎಂದು ದೂರ ನಿಂತುಕೊಂಡರೆ ಸಮಸ್ಯೆಗಳೇನೂ ದೂರ ಹೋಗೋದಿಲ್ಲ. ಹುಟ್ಟಿನಿಂದ ಸಾಯುವವರೆಗೆ ಒಂದಲ್ಲ ಒಂದು ದಿನ ಅದೇ ಸಮಸ್ಯೆಯ ಸುಳಿಯಲ್ಲಿ ನೀವೂ ಸಿಕ್ಕಿ ಹಾಕಿಕೊಳ್ಳಬಹುದು, ಒಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡ ಮೇಲೆ ಅದಕ್ಕೆ ಪರಿಹಾರ ಕಂಡು ಹಿಡಿಯುವ ನಮ್ಮ ನಿಲುವು ಆ ಸಮಯಕ್ಕೆ ತಕ್ಕಂತೆ ಭಿನ್ನವಾಗಿರಬಹುದು ಅಥವಾ ನಮಗೆ ಏನು ಅನುಕೂಲವೋ ಅದನ್ನು ನಾವು ಸಮರ್ಥಿಸಿಕೊಳ್ಳಬಹುದು. ನಮ್ಮನ್ನು ಅಡರಿಕೊಳ್ಳುವ ಸಮಸ್ಯೆಗಳು ಒಂದೊಂದು ಅವಕಾಶಗಳು ಎಂದುಕೊಂಡು ಆ ಮಟ್ಟಿಗೆ ನಾವು ಏನು ಮಾಡಬಲ್ಲೆವು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ನಿಮ್ಮ ಮನೆಯ ಮುಂದಿನ ಬೀದಿಯಲ್ಲಿ ನಾಯಿಯೊಂದು ಸತ್ತಿದೆ ಎಂದುಕೊಳ್ಳಿ - ಒಂದೆರಡು ದಿನಗಳಲ್ಲಿ ಅದು ಗಬ್ಬು ನಾತ ಹರಡಬಲ್ಲದು, ಅದರಿಂದ ಹರಡುವ ಕ್ರಿಮಿ ಕೀಟಗಳು ರೋಗ ರುಜಿನಗಳನ್ನು ತಂದೊಡ್ಡಬಹುದು. ಇಂತಹ ಒಂದು ಸರಳ ಸಮಸ್ಯೆಯನ್ನು ನಾವು ಹೇಗೆ ನೋಡುತ್ತೇವೆ, ಅದಕ್ಕೇನು ಉತ್ತರ ಕಂಡುಕೊಳ್ಳುತ್ತೇವೆ, ಅದಕ್ಕೆ ಒಬ್ಬೊಬ್ಬರ ಟಾಲರೆನ್ಸ್ ಒಂದೊಂದು ರೀತಿ ಇದ್ದು ಕೊನೆಗೆ ಅದು ಪರಿಹಾರಗೊಳ್ಳುವುದೋ ಇಲ್ಲವೋ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿಕೊಳ್ಳಿ - ಅದೇ ರೀತಿ ನಮಗೆದುರಾಗುವ ಸಮಸ್ಯೆ-ಅವಕಾಶಗಳು ಹಾಗೇ - ಅವುಗಳಿಗೆಲ್ಲ multiple right answers ಇವೆ!

Tuesday, June 17, 2008

ಪಾಪ, ಇಂದಿನ ಮಕ್ಕಳು!

ಆಫೀಸಿನಲ್ಲಿ ನನ್ನ ಅಕ್ಕ ಪಕ್ಕದ ಕ್ಯೂಬಿಕಲ್‌ಗಳಲ್ಲಿ ಕುಳಿತುಕೊಳ್ಳುವ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡ ನಾಲ್ಕು ಸಹೋದ್ಯೋಗಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಂಡುಕೊಂಡಿದ್ದೇನೆ. ಅವರೆಲ್ಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತನಾಲ್ಕು ವರ್ಷದ ಆಜುಬಾಜಿನವರು, ಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದು ಓದಿದ್ದೂ ಸಹ ಹಾಗೂ ಇವತ್ತಿಗೂ ತಮ್ಮ ತಂದೆ-ತಾಯಿಯರ ಜೊತೆಗೇ ವಾಸಿಸುತ್ತಿರುವವರು. ಈ ನಾಲ್ಕು ಜನರು ಇಲ್ಲೇ ಹುಟ್ಟಿ ಬೆಳೆದವರಾದರೂ ನಮ್ಮ ಭಾರತೀಯ ಪರಂಪರೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲುವವರೆಗೆ ತಮ್ಮ ತಮ್ಮ ಪೋಷಕರನ್ನು ಆಧರಿಸಿಕೊಂಡಿರುತ್ತಿದ್ದುದನ್ನು ಆಗಾಗ್ಗೆ ನೆನಪಿಗೆ ತಂದುಕೊಡುತ್ತಾರೆ. ಇವರನ್ನು ನೋಡಿದ ಬಳಿಕ ಅಮೇರಿಕನ್ ಮಕ್ಕಳು ಸ್ವಾತಂತ್ರ ಪ್ರಿಯರೋ ಅಥವಾ ಹದಿನೆಂಟು ವರ್ಷ ವಯಸ್ಸಾಗುತ್ತಿದ್ದಂತೆ ತಮ್ಮ ಪೋಷಕರನ್ನು ಬಿಟ್ಟು ದೂರ ಹೋಗಬಯಸುವವರೋ ಎಂದೆಲ್ಲ ಯೋಚಿಸಿಕೊಂಡಿದ್ದ ಅಥವಾ ಜೆನರಲೈಜೇಷನ್ನುಗಳ ಬಗ್ಗೆ ಕೇಳಿದ್ದು ಅಲ್ಲವೋ ಹೌದೋ ಎಂದು ಪ್ರಶ್ನೆ ಎದ್ದಿದ್ದಂತೂ ನಿಜ. ತಾವು ತಮ್ಮ ಕಾರುಗಳನು ಚಲಾಯಿಸಬಲ್ಲರಾದರೂ ತಮ್ಮ ಪೋಷಕರೊಡನೆ ಕೂಡಿ ಆಫೀಸಿಗೆ ಬಂದು ಹೋಗುವ ಅಥವಾ ಪೋಷಕರು ಮಕ್ಕಳನ್ನು ಆಫೀಸಿಗೆ ಬಿಟ್ಟು ಕರೆದುಕೊಂಡು ಹೋಗುವುದನ್ನು ನಾನು ನೋಡಿದ್ದು ಕಡಿಮೆಯೇ. ಹಿಂದೆ ನನ್ನ ಅಮೇರಿಕನ್ ಸ್ನೇಹಿತ ಕೆನ್ ಲೆನಾರ್ಡ್‌ನ ಕುಟುಂಬವನ್ನು ನಾನು ನೋಡಿದ ಹಾಗೆ ಎಷ್ಟೋ ರೀತಿಯಲ್ಲಿ ಭಾರತೀಯ ಕುಟುಂಬಗಳನ್ನು ಹೋಲುವಂತೆಯೇ ಆತನೂ ಹಲವಾರು ಗ್ರೌಂಡ್ ರೂಲ್ಸ್‌ಗಳ ಸಹಾಯ/ಆಧಾರದ ಮೇಲೆ ತನ್ನ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದುದರ ಬಗ್ಗೆ ಬರೆದಿದ್ದೆ.

ನನ್ನ ಹಾಗಿನವರು ಬಹಳಷ್ಟು ಜನ ಹತ್ತನೇ ತರಗತಿ ಮುಗಿದ ಬಳಿಕ ಪಿಯುಸಿ ವಿದ್ಯಾಭ್ಯಾಸದಿಂದ ಹಿಡಿದು ತಮ್ಮ ಮುಂದಿನ ಜೀವನವನ್ನು ಪೋಷಕರಿಂದ ದೂರವಿದ್ದೇ ನಡೆಸಿಕೊಂಡು ಬರುತ್ತಿರುವುದು ಭಾರತದಲ್ಲಿ ಸಾಮಾನ್ಯವೆಂದು ಹೇಳಲಾಗದಿದ್ದರೂ ಅಲ್ಲಲ್ಲಿ ನೋಡಲು ಸಿಗುತ್ತದೆ ಎನ್ನಬಹುದಾದ ಅಂಶ. ಹತ್ತನೇ ತರಗತಿ ಮುಗಿದರೂ ನನಗೆ ಒಂದು ಬ್ಯಾಂಕಿಗೆ ಹೋಗಿ ಹತ್ತು ರೂಪಾಯಿ ಡಿಪಾಜಿಟ್ ಮಾಡುವುದು ಹೇಗೆ ಎಂದು ಗೊತ್ತಿರದಿದ್ದುದು ಇಂದಿಗೂ ಆಶ್ಚರ್ಯ ತರಿಸುತ್ತದೆ. ಮೊದಲನೆಯದಾಗಿ ಬ್ಯಾಂಕ್ ವ್ಯವಹಾರಗಳಾಗಲೀ ಹಣಕಾಸು ಸಂಬಂಧಿ ಚರ್ಚೆಗಳಾಗಲೀ ನಮ್ಮ ಅವಿಭಕ್ತ ಕುಟುಂಬಗಳಲ್ಲಿ (ನಮ್ಮೆದುರಿಗೆ) ಆಗುತ್ತಿದ್ದುದು ಕಡಿಮೆ. ಮನೆಯ ಯಜಮಾನನಾದವನು ನಡೆಸಿಕೊಂಡು ಹೋಗಬಹುದಾದ ಚರ್ಚೆ ಹಾಗೂ ವ್ಯವಹಾರಗಳಲ್ಲಿ ನಾವು ಚಿಕ್ಕವರಿಗೆ ಯಾವ ಸ್ಥಾನವೂ ಇದ್ದಿರಲಿಲ್ಲ. ಹೈ ಸ್ಕೂಲು ಮುಟ್ಟುವ ಹೊತ್ತಿಗೆ ಒಂದೆರಡು ಬಾರಿ ಯಾರೋ ಕೊಟ್ಟ ಚೆಕ್ ಡಿಪಾಜಿಟ್ ಮಾಡಿದ್ದೋ ಅಥವಾ ಬ್ಯಾಂಕಿನಿಂದ ಹಣವನ್ನು ತೆಗೆದುಕೊಂಡಿದ್ದನ್ನೋ ಬಿಟ್ಟರೆ ಮತ್ತೇನೂ ವಿಶೇಷ ಅನುಭವಗಳು ನಮ್ಮ ನೆನಪಿನಲ್ಲಿ ಇರಲಾರವು. ಇನ್ನು ಕೆಲವರು ಇಂಜಿನಿಯರಿಂಗ್ ಮುಗಿಯುವವರೆಗೆ, ಕೆಲಸ ಸಿಗುವವರೆಗೆ, ಮದುವೆಯಾಗಿ ಮಕ್ಕಳಾಗುವವರೆಗೂ ಪೋಷಕರನ್ನು ಆಧರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಈ ವಿಭಿನ್ನ ವ್ಯವಸ್ಥೆ-ವಿಧಾನಗಳಲ್ಲಿ ತಪ್ಪು ಸರಿ ಯಾವುದು ಎನ್ನುವುದಕ್ಕಿಂತ ಹಲವು ಮನಸ್ಥಿತಿ, ನನ್ನಂತಹವರು ಬೆಳೆದು ಬಂದ ರೀತಿ ಹಾಗೂ ಬದಲಾದ ಕಾಲಮಾನಗಳ ಅವಲೋಕನವನ್ನು ಮಾಡಿಕೊಡುವ ಒಂದು ಪ್ರಯತ್ನವಿದಷ್ಟೇ.

’ಅಮೇರಿಕನ್ ಮಕ್ಕಳು ಬಹಳ ಇಂಡಿಪೆಂಡೆಂಟ್’ ಎನ್ನುವ ನೋಷನ್ನ್ ಅನ್ನು ನಾನು ಎನ್‌ಆರ್‍‌ಐ ಸಮುದಾಯಗಳಲ್ಲಿ, ನಮ್ಮ-ನಮ್ಮ ನಡುವಿನ ಮಾತುಕಥೆಗಳಲ್ಲಿ ಕೇಳಿದ್ದೇನೆ. ಈ ಬಗೆಯ ಜನರಲೈಜೇಷನ್ನಿಗಿಂತ ಇದೇ ಅವಲೋಕನವನ್ನು ಇಲ್ಲಿನ ಹಳ್ಳಿ-ಪಟ್ಟಣ-ನಗರ ಸಮುದಾಯಗಳಲ್ಲಿ ಮಾಡಿದಾಗ ಬೇಕಾದಷ್ಟು ರೀತಿಯ ಫಲಿತಾಂಶಗಳು ಹಾಗೂ ಮುಖ್ಯವಾಗಿ ಜನರಲೈಜೇಷನ್ನಿಗಿಂತ ಭಿನ್ನ ಅಂಕಿ-ಅಂಶಗಳೂ ಸಿಕ್ಕಬಹುದು. ನಮ್ಮ ಪುರೋಹಿತರು ಇಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳಿಗೆ ಇಂಗ್ಲೀಷಿನಲ್ಲಿ ಬಾಲಕೃಷ್ಣನ ಲೀಲೆಗಳನ್ನು, ಕೃಷ್ಣ-ಬಲರಾಮರ ಬಗ್ಗೆ ಕಥೆಗಳನ್ನು ಹೇಳುತ್ತಿದ್ದರಂತೆ. ’ಕೃಷ್ಣ ಮತ್ತು ಆತನ ಸ್ನೇಹಿತರು ಬೆಣ್ಣೆಯನ್ನು ಮನೆಯಲ್ಲಿ ಹುಡುಕುತ್ತಿದ್ದರಂತೆ, ಮಡಿಕೆಯ ಕುಡಿಕೆಯನ್ನು ಯಶೋಧೆ ಮಾಳಿಗೆಯ ಕುಡಿಕೆಯಲ್ಲಿ ಬಿಗಿದು ಕಟ್ಟಿದ್ದನ್ನು ಇವರು ಕಂಡು ಹಿಡಿದರಂತೆ...’ ಎಂದು ಕಥೆ ಮುಂದುವರಿಸುತ್ತಿದ್ದಾಗ ಒಬ್ಬ ಹುಡುಗ ’ಅಂಕಲ್, ಅವರು ಬೆಣ್ಣೆಯನ್ನು ಏಕೆ ಹುಡುಕುತ್ತಿದ್ದರು, ಫ್ರಿಜ್ ಬಾಗಿಲು ತೆಗೆದು ನೋಡಿದ್ದರೆ ಅಲ್ಲೇ ಸಿಗುತ್ತಿರಲಿಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನೆ ಕೇಳಿದ್ದನ್ನು ಪುರೋಹಿತರು ನಗುತ್ತಲೇ ಇನ್ನೂ ಸ್ವಾರಸ್ಯವಾಗಿ ವಿವರಿಸಿ, ’ಇಂದಿನ ಮಕ್ಕಳು ಬಹಳ ಭಿನ್ನ ನಮ್ಮ ಕಾಲದವರ ಹಾಗಲ್ಲ’ ಎಂದು ಹೇಳಿದ್ದು ನೆನಪಿಗೆ ಬಂತು.

ಇಂದಿನ ಮಕ್ಕಳ ಪ್ರಪಂಚ ಸಣ್ಣದು, ಆದರೆ ಅದರ ಒಳ ವಿಸ್ತಾರ ಬಹಳ ಹೆಚ್ಚು - ಅವರ ಆಟಿಕೆಗಳು ಬೇರೆ, ಅವರ ಪಾಠ-ಪುಸ್ತಕ ಪ್ರವಚನಗಳು ಬೇರೆ, ಅವರ ಬದುಕೇ ಭಿನ್ನ. ಕಂಪ್ಯೂಟರ್ ಕೀ ಬೋರ್ಡಿನಿಂದ ಹಿಡಿದು ವಿಡಿಯೋ ಗೇಮ್ ಆಟಗಳವರೆಗೆ, ಅವರು ಮಾತಿನಲ್ಲಿ ಬಳಸುವ ಶಬ್ದಗಳಿಂದ ಹಿಡಿದು ಅವರವರಲ್ಲೇ ಸಂವಹನಕ್ಕೆ ಬಳಸುವ ಮಾಧ್ಯಮಗಳವರೆಗೆ ಇಂದಿನ ಮಕ್ಕಳು ಬಹಳ ಭಿನ್ನ. ನಮ್ಮ ಪೋಷಕರು ನಾವು ಬೆಳೆಯುತ್ತಿದ್ದಾಗ ಅವರಿಗೂ ನಮಗೂ ಇದ್ದ ಅಂತರಕ್ಕಿಂತಲೂ ನಮಗೂ ನಮ್ಮ ಮಕ್ಕಳಿಗೂ ಇರುವ ಅಂತರ ಹೆಚ್ಚು ಎಂದರೆ ತಪ್ಪಾಗಲಾರದು. ನಮ್ಮ ತಲೆಯಲ್ಲಿ ಬಳಸಿ ಉಳಿದುಹೋದ ಪದಗಳಾದ - ಎತ್ತು ಏರಿ ಕಣ್ಣಿ ಮಿಣಿ ಕಡಗೋಲು ಮಜ್ಜಿಗೆ ಗಿಣ್ಣ ನೊಗ ಗೋಲಿ ಬುಗುರಿ ಚೆಂಡು ಚಿತ್ರ ಪರೀಕ್ಷೆ ಹಾಡು ಹಸೆ ಸ್ನಾನ - ಮೊದಲಾದವುಗಳಿಗೆ ಈಗಿನ ಮಕ್ಕಳ ತಲೆಯಲ್ಲಿ ಪರ್ಯಾಯ ಪದಗಳು ಬಂದಿರಬಹುದು ಅಥವಾ ಅವು ಉಪಯೋಗಕ್ಕೆ ಬಾರದೇ ಇರುವವಾಗಿರಬಹುದು. ಮೆಕ್ಯಾನಿಕಲ್ ಟೈಪ್‌ರೈಟರ್ ಎಂದರೆ ಏನು? ಎನ್ನುವವರಿಂದ ಹಿಡಿದು ತಮ್ಮಿಂದ ಕೇವಲ ಇಪ್ಪತ್ತೇ ಅಡಿ ದೂರದಲ್ಲಿರುವ ಗೆಳೆಯ-ಗೆಳತಿಯರೊಡನೆ ಕೇವಲ ಟೆಕ್ಸ್ಟ್ ಮೆಸ್ಸೇಜ್ ಸಂಭಾಷಣೆಯಲ್ಲೇ ನಿರತರಾಗಿದ್ದುಕೊಂಡು ಅದರ ಮಿತಿಯಲ್ಲೇ ತಮ್ಮ ಆಗುಹೋಗು ಅನಿಸಿಕೆಗಳನ್ನು ಹಂಚಿಕೊಳ್ಳುವವರು. ವಿಶ್ವದ ಎಲ್ಲ ಸಮಸ್ಯೆಗಳನ್ನೂ ಶಾಲಾ ಮಟ್ಟದಲ್ಲೇ ಇವರಿಗೆ ಪರಿಚಯಿಸಿ ಅದರ ಉತ್ತರ ಕಂಡುಹಿಡಿಯುವಂತೆ ಮಾಡುವ ಅಸೈನ್‌ಮೆಂಟ್‌ಗಳು ಇವರವಾಗಿರಬಹುದು. ತಮ್ಮ ಹಿರಿಯರು ಮನೆಗೆ ಬಂದವರು ಅತಿಥಿಗಳು ಮೊದಲಾದವರು ಯಾವುದೋ ಒಂದು ಶುಭ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಇವರು ಅದೇ ಹಾಲ್‌ನ ಒಂದು ಮೂಲೆಯ ಸೋಫಾದ ಮೇಲೆ ಕುಳಿತು ಹ್ಯಾಂಡ್‌ಹೆಲ್ಡ್ ಡಿವೈಸ್‌ನಿಂದ ಇಂದೇ ಪ್ರಪಂಚದ ಕೊನೆಯಾದೀತೇನೋ ಎಂಬ ತನ್ಮಯತೆಯಲ್ಲಿ ವಿಡಿಯೋ ಗೇಮ್‌ಗಳನ್ನು ಆಡುವವರು. ವಿಕಾಸವಾದದ ಮುನ್ನಡೆಯಾದಂತೆ ಇವರ ಮಿದುಳು ಪ್ರಚಂಡ ಇನ್‌ಫರ್ಮೇಷನನ್ನು ಸಂಸ್ಕರಿಸುವ ಹಾಗೂ ಒಂದೇ ಸಮಯದಲ್ಲಿ ಹಲವು ಕಾರ್ಯಗಳನ್ನು ಮಾಡುವ ಕ್ಷಮತೆಯನ್ನು ಹೊಂದಿರಬಹುದು ಅಥವಾ ವಿಡಿಯೋ ಗೇಮ್ ಆಡೀ ಆಡೀ ಇವರ ಕೈ ಬೆರಳುಗಳ ಸ್ನಾಯುಗಳು ಬಲಗೊಂಡು ಮುಂದೆ ಬ್ಲಾಕ್‌ಬೆರಿ ಉಪಯೋಗಿಸುವಲ್ಲಿ ನೆರವಾಗಬಹುದು ಅಥವಾ ಅದಕ್ಕೆಂದೇ ಹೊಸ ಸ್ನಾಯುಗಳ ಬೆಳವಣಿಗೆಯಾದರೂ ನನಗೇನೂ ಆಶ್ಚರ್ಯವಾಗೋದಿಲ್ಲ.

ಆದರೆ ಇಂದಿನ ಮಕ್ಕಳನ್ನು ನೋಡಿದರೆ ಕಷ್ಟವಿದೆ ಎನ್ನಿಸುತ್ತೆ, ಅವರ ಬದುಕಿನ ಬಗ್ಗೆ ಅನುಕಂಪ ಖಂಡಿತ ಹುಟ್ಟುತ್ತೆ. ನಾವು ಎಂಭತ್ತರ ದಶಕದಲ್ಲಿ ಸಾಗರದಂತಹ ಪಟ್ಟಣಗಳಲ್ಲಿ ಪಿಯುಸಿ ಓದುತ್ತಿರುವಾಗ ನಮ್ಮ ಕ್ಲಾಸಿನಲ್ಲಿ ಒಂದಿಷ್ಟು ’ಮುಂದುವರೆದ’ ಕುಟುಂಬದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಪರೀಕ್ಷೆ ಬರೆದು ಅದರ ಫಲಿತಾಂಶ ಬಂದು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಮೊದಲೇ ಮನೆಪಾಠಗಳಲ್ಲಿ ವ್ಯವಸ್ಥಿತವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನನ್ನಂತಹ ಸಾಧಾರಣ ಹಳ್ಳಿಗಾಡಿನ ವಿದ್ಯಾರ್ಥಿಗಿಂತ ಬಹಳಷ್ಟು ಮುಂದಿರುತ್ತಿದ್ದರು. ಅದು ನನಗೆ ಆಗ ಆಶ್ಚರ್ಯ ತರಿಸಿತ್ತು. ಒಂದು ತರಗತಿಯ ಪರೀಕ್ಷೆಗಳು ಮುಗಿದ ಬಳಿಕ ನನ್ನಂತಹವರು ಅಜ್ಜ-ಅಜ್ಜಿಯ ಜೊತೆ ಸ್ನೇಹಿತರ ಜೊತೆ ಬೇಸಿಗೆ ರಜೆ ಕಳೆಯುವ ಸಂದರ್ಭಗಳಲ್ಲಿ ಮುಂದಿನ ತರಗತಿಗಳಾಗಲೀ ಬದುಕಿನ ಬಗ್ಗೆಯಾಗಲೀ ಯೋಚಿಸಿದ್ದಿರಲಾರೆವು, ಆದರೆ ’ಮುಂದುವರೆದ’ ವಿದ್ಯಾರ್ಥಿಗಳ ಜನರೇಷನ್ನ್ ಅಲ್ಲಿ ನಮಗೆ ವಿಶೇಷವಾಗಿತ್ತು, ಅದರಲ್ಲೂ ನಾವು ಯಾವ ನಿಟ್ಟಿನಲ್ಲಿ ಆಲೋಚಿಸಿಕೊಂಡರೂ ಅವರ ಎದುರಿಗೆ ನಮ್ಮ ಸ್ಪರ್ಧೆ ನೀರಸವಾಗುತ್ತಿತ್ತು. ಇಂದಿನ ಮಕ್ಕಳಿಗೆ ಎಲಿಮೆಂಟರಿ (ಪ್ರಾಥಮಿಕ) ಹಂತದಲ್ಲೆ ಮನೆ-ಪಾಠ (ಪೈವೇಟ್ ಟ್ಯೂಷನ್) ಆರಂಭವಾಗುತ್ತದೆ ಎಂದು ಕೇಳಿದಾಗ, ಅದರ ಬಗ್ಗೆ (ವಿರುದ್ಧವಾಗಿ) ಬೇಕಂತಲೇ ವಾದ ಮಾಡಿದಾಗ ನನ್ನನ್ನು ಮೃಗಾಲಯದ ಪ್ರಾಣಿಯನ್ನು ನೋಡುವ ಹಾಗೆ ಜನರು ನೋಡುವುದನ್ನು ನೆನಪಿಸಿಕೊಳ್ಳುತ್ತೇನೆ. ಅದಕ್ಕೇ ಹೇಳಿದ್ದು ಇಂದಿನ ಮಕ್ಕಳ ಬದುಕು ಕಷ್ಟ ಎಂದು. ನಮ್ಮ ಸರ್ವತೋಮುಖ ಬೆಳವಣಿಗೆ ಎನ್ನುವುದನ್ನು ಅದೆಷ್ಟರ ಮಟ್ಟಿಗೆ ಇಂದಿನ ಸ್ಪರ್ಧಾತ್ಮಕ ವ್ಯವಸ್ಥೆ ಆಧರಿಸುತ್ತದೆ ಎನ್ನುವುದು ಈ ಹೊತ್ತಿನ ಪ್ರಶ್ನೆ - ಅದರ ಬೆನ್ನ ಹಿಂದೆ ಹುಟ್ಟುತ್ತಿರುವುದೇ ಈ ಹೊತ್ತಿನ ತತ್ವ!

ನನ್ನ ಬೆಳವಣಿಗೆ ಹೇಗೇ ಇರಲಿ ಇಂದಿನ ಬದುಕು ಯಾವ ರೀತಿಯಲ್ಲೇ ಇರಲಿ, ನನ್ನ ಬಾಲ್ಯವನ್ನು ಮಾತ್ರ ನಾನು ಯಾವಾಗಲೂ ಬೆಂಬಲಿಸುತ್ತೇನೆ. ನನ್ನ ಮಕ್ಕಳನ್ನು ಇಂದಿಗೆ ಹೋಲುವ ಹಾಗೆ ಅದೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆಸುವ ಹಾಗಿದ್ದರೆ ಎಂದು ಯೋಚಿಸುತ್ತೇನೆ. ನಮ್ಮ ನಡುವೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆಯ ಬೆನ್ನೆಲುಬಿನ ಮೇಲೆ ನಿಂತಿದ್ದ ನೀರು-ನಿಡಿ, ಪರಿಸರ-ನೆರೆಹೊರೆ, ನೆಂಟರು-ಇಷ್ಟರು, ಊರು-ಬಳಗ, ಸಂಪ್ರದಾಯ ಮೊದಲಾದವುಗಳನ್ನು ಇಂದಿನ ಮಕ್ಕಳ ಮನಸ್ಸಿಗೆ ಹೇಗೆ ಅನ್ವಯಿಸಬಹುದು ಎಂದು ಚಿಂತಿಸುತ್ತೇನೆ. ಮಕ್ಕಳು ಒಳ್ಳೆಯ ಶಾಲೆಗೆ ಸೇರಿವುದರಿಂದ ಹಿಡಿದು, ಒಳ್ಳೆಯ ಗ್ರೇಡು-ಮಾರ್ಕ್ಸ್‌ಗಳನ್ನು ಪಡೆಯುವವರೆಗೆ, ಅವರಿಗೆ ತಕ್ಕ/ಒಪ್ಪುವ/ದಕ್ಕುವ ಶಿಕ್ಷಣವನ್ನು ಆಧರಿಸುವವರೆಗೆ, ಮುಂದೆ ಉದ್ಯೋಗವನ್ನು ಕಂಡುಕೊಳ್ಳುವವರೆಗೆ, ಸಂಸಾರ ನಡೆಸಿಕೊಂಡು ಹೋಗುವವರೆಗೆ ಎಲ್ಲೆಲ್ಲಿ ನಮ್ಮ ಇನ್‌ಫ್ಲುಯೆನ್ಸ್‌ಗಳು ನಡೆಯುತ್ತವೆ ಎಂದು ಕೊರಗುತ್ತೇನೆ. ಮನೆ-ಪಾಠ, ಕೋಚಿಂಗ್ ಮೊದಲಾದವುಗಳನ್ನು ಕೊಟ್ಟು ಇವರನ್ನು ನಾವು ಮುಂದಿನ ಬದುಕಿಗೆ ತಯಾರು ಮಾಡುವುದು ನಮ್ಮ ಕೈಯಲ್ಲಿದೆಯೋ, ಅಥವಾ ಅವರೇ ತಮ್ಮ ತಮ್ಮ ದಾರಿ/ಗುರಿಯನ್ನು ರೂಪಿಸಿಕೊಳ್ಳುತ್ತಾರೋ, ನಮ್ಮ ಪೋಷಕರು ನಮ್ಮನ್ನು ಬೆಳೆಸಿದ ರೀತಿಯಲ್ಲಿ ನಾವು ಇವರನ್ನು ಬೆಳೆಸಲಾಗದಿದ್ದ ಮೇಲೆ ಇವರನ್ನು ನಾವು ಬೆಳೆಸುವ ರೀತಿಯೇ ಸರಿಯೆಂದು ನಮಗೆ ಗೊತ್ತಾಗುವುದು ಹೇಗೆ ಮತ್ತು ಎಂದು?

Sunday, June 08, 2008

ಬೆತ್ತಲಾಗದ ಮನಸ್ಸಿನ ಕತ್ತಲೆ

ಹನ್ನೊಂದು ವರ್ಷದ ಹಿಂದೆ ಈ ದೇಶಕ್ಕೆ ಬಂದ ಹೊಸದರಲ್ಲಿ ಇಲ್ಲಿ ಜಿಮ್‍ಗೆ ಸೇರಿಕೊಳ್ಳಬೇಕು, ನಾನೂ ಎಲ್ಲರಂತೆ ಒಂದು ಎಕ್ಸರ್‌ಸೈಸ್ ರುಟೀನ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇ ಬಂತು, ನಮ್ಮ ಮನೆಯ ಹತ್ತಿರದ ಹೆಲ್ತ್ ಕ್ಲಬ್ ಒಂದಕ್ಕೆ ಮೆಂಬರ್ ಆದದ್ದು ಚೆನ್ನಾಗಿ ನೆನಪಿದೆ. ನನ್ನಂತಹವರು ಖುರ್ಚಿ ಮೇಲೆ ಕುಳಿತೇ ದುಡಿದು ತಿನ್ನುವ ಕಾಯಕಕ್ಕೆ ಬದ್ಧರಾದಂತೆ, ಆಗಾಗ್ಗೆ ಹಲವಾರು ದಿಕ್ಕುಗಳಲ್ಲಿ ತಿರುಗಿ ಬಾಗಿ ಬಳಕುವ ಖುರ್ಚಿಯ ಮುಂದಿನ ಜಡ ಚೇತನ ಟೇಬಲ್ಲಿನ ಸಂಗಕ್ಕೆ ಜೋತು ಬಿದ್ದು ನನ್ನ ಹೊಟ್ಟೆ ಕಿಂಚಿತ್ತು ಕಿಂಚಿತ್ತಾಗೇ ಮುಂದೆ ಬರಲು ಆರಂಭಗೊಂಡಿದ್ದು ಅನೇಕ ರೀತಿಯಲ್ಲಿ ನನಗೆ ಸೋಜಿಗವನ್ನುಂಟು ಮಾಡುತ್ತಲೇ ಇದೆ, ಆದರೆ ಪರಿತ್ಯಾಗಿ ಮನಸ್ಸು ಅದೇನೇ ಸಂಕಲ್ಪಗಳನ್ನು ಮಾಡಿಕೊಂಡರೂ ದಿನಕ್ಕೊಮ್ಮೆಯಾದರೂ ಹಲ್ಲು ತಿಕ್ಕುವ ಕಾಯಕದಂತೆ ಇಂದಿಗೂ ಮೈ ಮುರಿದು ವ್ಯಾಯಾಮ ಮಾಡುತ್ತಿಲ್ಲವಲ್ಲ ಎನ್ನುವುದು ನನ್ನ ಲಾಂಗ್‌ಟರ್ಮ್ ಕೊರಗುಗಳಲ್ಲೊಂದು. ದಶಕದ ಹಿಂದೆ ಒಂದಿಷ್ಟು ದಿನ ನೆಪಕ್ಕೆಂದು ಹೆಲ್ತ್‌ಕ್ಲಬ್‌ಗೆ ಹೋದಂತೆ ಮಾಡಿ ಕೊನೆಗೆ ಇವತ್ತಿನವರೆಗೂ ಮತ್ತೆ ಅಂತಹ ಸ್ಥಳಗಳಿಗೆ ಕಾಲಿಕ್ಕದ ಭೂಪ ನಾನು ಎಂದು ನನ್ನನ್ನು ನಾನೇ ಹೀಯಾಳಿಸಿಕೊಂಡು ನಗುವ ಪ್ರಸಂಗವೊಂದು ನೆನಪಿಗೆ ಬಂತು.

ಅವತ್ತೇ ಮೊದಲು ನಾನು ಇಲ್ಲಿನ ಹೆಲ್ತ್‌ಕ್ಲಬ್‌ನ ಶೌಚಾಲಯಗಳಿಗೆ ಭೇಟಿ ನೀಡಿದ್ದು. ನಾನು ಅಲ್ಲಿನ ಥರಾವರಿ ಉಪಕರಣಗಳನ್ನು, ಮಷೀನುಗಳನ್ನು ಬಳಸಿ ಏನು ಬೇಕಾದರೂ ಮಾಡಿ ಧಾರಾಳವಾಗಿ ಬೆವರಿಸಿಕೊಂಡು ಅಲ್ಲಿನ ಶೌಚಾಲಯ ದಾರಿ ಹಿಡಿದು ಅಲ್ಲಿ ನೋಡಿದರೆ ಅಲ್ಲಿ ಬೇಕಾದಷ್ಟು ಜನ ತಮ್ಮ ಹುಟ್ಟುಡುಗೆಲ್ಲಿರುವುದೇ? ಅಂದರೆ ಬರೀ ಬೆತ್ತಲಾಗಿ ನಿಂತುಕೊಂಡು ತಮ್ಮ ತಮ್ಮ ಕೆಲಸವನ್ನು ನೋಡಿಕೊಂಡಿರುವುದೇ? ಇದು ಮುಂದುವರೆದ ದೇಶ, ಇಲ್ಲಿನ ಜನರಿಗೆ ತಮ್ಮ ಮಾನ-ಮರ್ಯಾದೆ, ನಾಚಿಕೆ-ಸಂಕೋಚಗಳು ಒಂದೂ ಅಡ್ಡಿ ಬಾರವೇ? ಎನ್ನಿಸಿ ಶಾಕ್ ಹೊಡೆದದ್ದು ನಿಜ. ಅಂದಿನಿಂದ ನಾನು ಮತ್ತೆ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಮನಸ್ಸು ಮಾಡಿಲ್ಲ.

ಹೌದು, ನಮ್ಮ ಬೆಳವಣಿಗೆಯೇ ಹಾಗಿದೆ, ಹಾಗಿತ್ತು. ಶಾಲಾ ದಿನಗಳಲ್ಲಿ ನಮ್ಮೂರಿನ ಹಳ್ಳಿ ಬಯಲಿನಲ್ಲಿ ಕೊ ಎಜುಕೇಶನ್‌ ಇದ್ದ ಕಾರಣ ನಾವೆಲ್ಲರೂ ಮಧ್ಯಂತರ ವಿರಾಮ ಕಾಲದಲ್ಲಿ ಸಾಲಿನಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡಿದ್ದೇ ನಮ್ಮಲ್ಲಿನ ಇಂಟಿಮಸಿ. ಅದನ್ನು ಬಿಟ್ಟರೆ ಬತ್ತಲಾಗುವುದೆಂದರೆ ಶಾಪ, ಅದೂ ತನ್ನ ಸಹಪಾಠಿಗಳೆದುರು, ಸಹೋದರ-ಸಹೋದರಿಯರ ಎದುರು, ಊಹ್ಞೂ ಸಾಧ್ಯವಿಲ್ಲದ ಮಾತು. ಹಾಗಿದ್ದ ಮೇಲೆ, ಇನ್ನು ಸ್ಟ್ರೇಂಜರ್ಸ್ ಎದುರು ಬತ್ತಲಾಗುವುದಕ್ಕೆ ಸಂಕೋಚವೇಕೆ ಎಂದು ಪ್ರಶ್ನೆ ಎದ್ದಿದ್ದೂ ಸಹಜ. ಆದರೆ, ಸಾರ್ವಜನಿಕವಾಗಿ ಬತ್ತಲಾಗುವುದು ಖಂಡಿತವಾಗಿ ಸಲ್ಲದ ನಡವಳಿಕೆ, ಅದು ನನ್ನ ಕಲ್ಪನೆಯಲ್ಲಂತೂ ಈವರೆಗೆ ಬಂದೇ ಇಲ್ಲ ಎನ್ನಬಹುದು.

ಸೆಪ್ಟೆಂಬರ್ ಹನ್ನೊಂದರ ನಂತರ ಬಿಗಿಯಾದ ಭದ್ರತಾ ವ್ಯವಸ್ಥೆಯಲ್ಲಿ ಒಂದು ಕೋಮಿನವರನು ಬೆತ್ತಲೆ ಸರ್ಚ್ ಮಾಡುವುದರ ಬಗ್ಗೆ ಕೇಳಿದ್ದೇನೆ. ತಮ್ಮ ಬಗಲಿನ ಚೀಲದಲ್ಲಿರುವ ಕುರ್ ಆನ್ ಪುಸ್ತಕವನ್ನು ಪೋಲೀಸ್ ನಾಯಿಗಳು ಮೂಸುವುದನ್ನು ತಪ್ಪು ಎಂದುಕೊಂಡ ಮನಸ್ಥಿತಿಗಳ ಬಗ್ಗೆ ಕೇಳಿದ್ದೇನೆ. ನನ್ನ ಹಾಗೆ ನನ್ನ ಹಿನ್ನೆಲೆಯಲ್ಲಿಂದ ಬಂದಿರುವವರು ಸಾರ್ವಜನಿಕವಾಗಿ ಬೆತ್ತಲಾಗದಿರುವುದನ್ನು ಅನೋಮೋದಿಸುವುದನ್ನು ನೋಡಿದ್ದೇನೆ. ಹೀಗಿರುವಲ್ಲಿ ನಾವಿರುವ ಪರಿಸರ ಹೊಸದಾದರೂ, ಏಕ್ ದಂ ನಮಗೆಲ್ಲ ಇಲ್ಲಿನ ರೀತಿ-ರಿವಾಜುಗಳಿಗೆ ಹೊಂದಿಕೊಳ್ಳಿ ಎನ್ನುವುದು ಹೇಳಲು ಮಾತ್ರ ಚೆಂದ, ಆಚರಿಸಲು ಅಷ್ಟೇ ಕಷ್ಟ ಎನ್ನುವುದಕ್ಕೆ ನನ್ನದೇ ಉದಾಹರಣೆ ತೆಗೆದುಕೊಳ್ಳಿ - ಇಂದಿಗೂ ಸಾರ್ವಜನಿಕವಾಗಿ ಬತ್ತಲಾಗುವುದನ್ನು ಮನಸ್ಸು ಒಪ್ಪದು.

***

ಆಫೀಸಿನಲ್ಲಿ ನನ್ನ ಸಮವಯಸ್ಕ, ಈಗಾಗಲೇ ಅಮೇರಿಕದ ಸಿಟಿಜನ್‌ಶಿಪ್ ಪಡೆದುಕೊಂಡು ನಮ್ಮ ಆಫೀಸಿನ ವ್ಯಾಪ್ತಿಯಲ್ಲೆ ಇರುವ ಫಿಟ್‌ನೆಸ್ ಸೆಂಟರ್ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡು ಕಟ್ಟು ಮಸ್ತಾಗಿರುವ ಪರಾಗ್ ನನ್ನನ್ನು ಒತ್ತಾಯ ಮಾಡಿ ಸುಮ್ಮನೆ ವಿಸಿಟ್‌ಗೆಂದು ಫಿಟ್‌ನೆಸ್ ಸೆಂಟರ್‌ ಅನ್ನು ನೋಡಲು ಕಳೆದ ವಾರ ಕರೆದುಕೊಂಡು ಹೋದ. ಮತ್ತೆ ಅದೇ - ಮಟ ಮಟ ಮಧ್ಯಾಹ್ನ ಮೈ ಬಗ್ಗಿಸಿ ವ್ಯಾಯಾಮ ಮಾಡಿದ ಪ್ರಯುಕ್ತ ಅನೇಕರು ಸ್ನಾನದ ಕೋಣೆಗಳಿಂದ ಬೆತ್ತಲೆ ಓಡಾಡಿಕೊಂಡಿದ್ದರು ತಮ್ಮ ಸುತ್ತು ಮುತ್ತಲೂ ಏನೂ ಯಾರೂ ಇಲ್ಲವೇ ಇಲ್ಲ ಎನ್ನೋ ಹಾಗೆ. ನನಗಂತೂ ಒಂದು ರೀತಿಯ ಅಸಮಧಾನ, ಕಸಿವಿಸಿ - ಅದೇನೋ ಹೇಳಿಕೊಳ್ಳಲಾಗದ ಕಷ್ಟ... ’ನಿನಗೂ ಇವತ್ತಲ್ಲ ನಾಳೆ ರೂಢಿಯಾಗುತ್ತೆ!’ ಎನ್ನುವ ಪರಾಗ್‌ನ ಧ್ವನಿಗೆ ನನ್ನನ್ನು ಸಮಾಧಾನ ಮಾಡಲಾಗಲಿಲ್ಲ. ನಾನೋ ಇನ್ನೆಂದೂ ಇಲ್ಲಿ ಕಾಲಿಡಬಾರದು ಎಂದುಕೊಳ್ಳುತ್ತಲೇ ಅಲ್ಲಿಂದ ಕಂಬಿಕಿತ್ತೆ.

ಸಾರ್ವಜನಿಕವಾಗಿ ಬೆತ್ತಲಾಗದ, ಸಾರ್ವಜನಿಕವಾಗಿ ಬೆತ್ತಲನ್ನು ನೋಡದ ಕತ್ತಲ ಮನಸ್ಥಿತಿಗೆ ಒಂದಿಷ್ಟು ಬೆಳಕು ಚೆಲ್ಲೋಣ: ನನ್ನ ಮನಸ್ಸಿನಲ್ಲಾಗಲೀ, ನನ್ನ ಹಾಗೆ ಆಲೋಚಿಸುವವರ ಮನಸ್ಸಿನಲ್ಲೇನಿದೆ? ನಾವು ಏಕೆ ಈ ರೀತಿ ಆಲೋಚಿಸುತ್ತೇವೆ. ಅದರ ಹಿನ್ನೆಲೆ ಏನು? ಸಭ್ಯತೆ, ಸಂಸ್ಕೃತಿಗಳ ಚೌಕಟ್ಟಿನಲ್ಲಾಗಲೀ, ಅಥವಾ ನಾವು ಬೆಳೆದು ಬಂದ ರೀತಿಯನ್ನು ಶೋಧಿಸಿ ನೋಡಿದರೆ ಈ ರೀತಿಯ ಮನಸ್ಥಿತಿಗೆ ತಕ್ಕ ಉತ್ತರ ಸಿಗುತ್ತದೆ.

ನೀನು ಹಾಲು ಕುಡಿದು ಮಲಗದೇ ಇದ್ದರೆ ಗುಮ್ಮನನ್ನು ಕರೆಯುತ್ತೇನೆ ಎಂದು ಹೆದರಿಸುವ ಅಮ್ಮನ ಧ್ವನಿಯಿಂದ ನಮ್ಮ ನೆರೆಹೊರೆಯಲ್ಲಿನ ಕತ್ತಲು-ಬೆಳಕುಗಳ ಮೇಲೆ ನಮ್ಮ ಅವಲಂಭನೆ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ’ಶೇಮ್-ಶೇಮ್, ಸ್ವಲ್ಪವೂ ಇವನಿಗೆ ಸ್ವಲ್ಪ ನಾಚಿಕೆ-ಮಾನ-ಮರ್ಯಾದೆ ಅನ್ನೋದೇ ಇಲ್ಲ, ಎಲ್ಲರ ಎದುರಿಗೆ ಹೀಗೆ ಬೆತ್ತಲೆ ಬಂದಿದ್ದಾನೆ!’ ಎನ್ನುವ ಮಾತುಗಳು ಮುಗ್ಧ ಮನಸ್ಸಿನ ಮೇಲೆ ಅವುಗಳ ಪ್ರಭಾವವನ್ನು ಮಾಡುತ್ತವೆ. ಬಸ್‌ಸ್ಟ್ಯಾಂಡಿನ ಆವರಣಗಳಲ್ಲಿ ಸಿಗುವ ಅರೆಬೆತ್ತಲೆ ಭಿಕ್ಷುಕರೂ, ಅಲ್ಲಲ್ಲಿ ಹುಚ್ಚು ಹಿಡಿದು ಅಲೆಯುವ ಬೆತ್ತಲೆ ಹುಚ್ಚರೂ ನೆನಪಾಗಿ ಒಂದು ಹೀನ ಸ್ಥಿತಿಗೆ ತಳಪಾಯವಾಗುತ್ತಾರೆ. ಇನ್ನು ನಮ್ಮ ಭಾರತೀಯ ನೆಲೆಯಲ್ಲಿ ಬೆತ್ತಲೆ ಇರುವವರೆಂದರೆ ಯಾರು? ಆದಿವಾಸಿಗಳು, ಕಾಡಿನಲ್ಲಿ ಬದುಕುವವರು, ಮೊದಲಾದ ವಿಭಿನ್ನ ಸಂಸ್ಕೃತಿಯ ಜನರು. ಈ ಮನಸ್ಸಿನ ಮೂಲದ ನಾವುಗಳು ಹತ್ತು-ಹದಿನೈದು ವರ್ಷಗಳ ಹಿಂದೆ ಆಧುನಿಕ ಫಿಟ್‌ನೆಸ್ ಸೆಂಟರ್‍ಗೆ ಬೆಂಗಳೂರು-ಮದ್ರಾಸ್ ವಾತಾವರಣದಲ್ಲಿ ಹೋಗಿದ್ದೂ ಇಲ್ಲ, ಅಲ್ಲೂ ಇಂದು ಪರಿಸ್ಥಿತಿ ಬದಲಾಗಿದೆ ಎಂದು ಹೇಳುವ ಪರಾಗ್‌ನ ಮಾತುಗಳು ನಂಬಲೂ ಕಷ್ಟವಾಗುತ್ತಿರುವುದಕ್ಕೆ ಸಾಕಲ್ಲವೇ ಇಷ್ಟು ಕಾರಣಗಳು?

***

ಬೆತ್ತಲಾಗದ ನಮ್ಮ ಮನಸ್ಸಿನ ಹಿಂದಿನ ಕಾರಣಗಳೇನು? ನಾವೂ ಈ ರೀತಿ ಇಲ್ಲಿನವರಂತೆ ಬದಲಾಗಬೇಕೇ? ಎಲ್ಲರೊಳಗೊಂದಾಗದ ಮನಸ್ಸಿನಲ್ಲೇ ಮಂಡಿಗೆ ತಿಂದುಕೊಂಡು ನಮ್ಮ ಪ್ರಪಂಚದ ಖುರ್ಚಿ ಮೇಜಿಗೆ ಸಂಬಂಧವನ್ನು ಗಟ್ಟಿಯಾಗಿ ಬೆಳೆಸಿಕೊಂಡು ಜೊತೆಗೆ ದಿನೇದಿನೇ ಬೊಜ್ಜನ್ನು ಹೆಚ್ಚಿಸಿಕೊಳ್ಳುವ ಬತ್ತಲಾಗದ ನಮ್ಮ ಮನಸ್ಸಿನ ಕತ್ತಲೆಗೆ ಕನ್ನಡಿ ಹಿಡಿಯುವವರಾರು? ಅಥವಾ ಇಲ್ಲಿಗೆ ಬಂದು ನಮ್ಮ ತನವೆಲ್ಲ ದಿನೇದಿನೇ ಕಳೆದುಕೊಂಡು ಹೋಗುತ್ತಿರುವ ಹಾಗೆ ಇದೂ ಒಂದು ಬಿಹೇವಿಯರ್ ಅನ್ನು ಬದಲಾಯಿಸಿಕೊಳ್ಳದೇ ಹಾಗೇ ಇದ್ದರೆ ಏನಾದೀತು?

Monday, June 02, 2008

...ಪ್ರಯೋಜನಕ್ಕೆ ಬಾರದ್ದು ಅಂತ ಯಾರಂದೋರು?

ಅನುಭವ ಅನ್ನೋದರ ಲಿಮಿಟೇಷನ್ನ್ ಏನೂ ಅಂತ ನನಗೆ ಹೊಳೆದಿದ್ದು ಇತ್ತೀಚೆಗೆ ಅಂತ್ಲೇ ಹೇಳಬೇಕು, ಯಾರೋ ತಾವ್ ಕಲಿತ ಪಾಠವನ್ನು ಅನುಭವ ಅಂತ ದೊಡ್ಡ ಕರೆದುಕೊಂಡಿದ್ದಿರಬಹುದು, ಅದಕ್ಕೆ ಅದು ಇಲ್ಲದೆ ಯಾವ ಕೆಲ್ಸಾನೂ ಅಷ್ಟು ಸಲೀಸಾಗಿ ಆಗಲ್ಲ, ಒಂದ್ಸರ್ತಿ ಮಾಡಿ (ಹೊಡೆತ ತಿಂದು) ಪಾಠ ಕಲಿತ ಮೇಲೆ ಅದನ್ನೇ ಅನುಭವ ಅಂತ ದೊಡ್ಡದಾಗಿ ಬೋರ್ಡು ಬರೆಸಿ ಹಾಕ್ಕೋಬಹುದು ನೋಡಿ.

ನಮ್ಮನೇಲಿ ಒಂದೆರಡು ಕಿಟಕಿಗಳಿಗೆ ಹೊಸ ಸ್ಕ್ರೀನುಗಳನ್ನು ಹಾಕೋಣ ಅನ್ನೋ ಪ್ರಾಜೆಕ್ಟು ಹಲವಾರು ಕಾರಣಗಳಿಂದ ಮುಂದೂಡಿಕೊಂಡು ಮೊನ್ನೆ ಕೈಗೂಡಿತು ನೋಡಿ. ನಾನೋ ಹುಟ್ಟಿದಾರಭ್ಯ ಗೋಡೆಗೆ ಒಂದು ಮೊಳೆಯನ್ನೂ ಸಹ ಹೊಡೆಯದವನು, ಗೋಡೆಗೆ ಎಲ್ಲಿ ನೋವಾಗುತ್ತೋ ಅನ್ನೋ ಅರ್ಥದಿಂದಲ್ಲ, ಶಾಲೆಯಲ್ಲಿ ಮುಂದಿದ್ದ ಮಕ್ಕಳು ನಾವು ಯಾವತ್ತೂ ಹ್ಯಾಂಡಿಮ್ಯಾನ್ ಸ್ಕಿಲ್ಸ್‌ಗಳನ್ನು ರೂಢಿಸಿಕೊಳ್ಳಲೇ ಇಲ್ಲ. ಇವತ್ತಿಗೂ ಸಹ ಒಂದು ಏಣಿಯನ್ನು ಹತ್ತಿ ನಿಲ್ಲೋದು ಅಂದರೆ ಮುಜುಗರ, ಸಂಕೋಚ ಎಲ್ಲಕ್ಕಿಂತ ಮುಖ್ಯವಾಗಿ ಅದೇನೋ ಹಾಳು ಹೆದರಿಕೆ ಬೇರೆ ಕೇಡಿಗೆ. ಈ ಹ್ಯಾಂಡಿಮ್ಯಾನ್ ಕೆಲ್ಸದ ವಿಚಾರಕ್ಕೆ ಬಂದಾಗ ಒಂದಂತೂ ಗ್ಯಾರಂಟಿಯಾಗಿ ಕಲಿತುಕೊಂಡಿದ್ದೇನೆ - ಆಯಾ ಕೆಲಸಕ್ಕೆ ಸರಿಯಾದ ಟೂಲ್ಸ್ ಅನ್ನು ಇಟ್ಟುಕೊಂಡಿರುವುದು. ನಿಮ್ಮ ಬಳಿ ಸರಿಯಾದ, ಅಳತೆಗೆ ತಕ್ಕ ಟೂಲ್ಸ್ ಇಲ್ಲವೆಂದಾದರೆ ಸುಮ್ಮನೇ ನೀವು ಕೆಲಸಕ್ಕೆ ಕೈ ಹಾಕಿ ಕೆಟ್ಟಿರಿ. ಅದರ ಬದಲು ಸುಮ್ಮನಿರುವುದು ಒಳ್ಳೆಯದು ಇಲ್ಲವೆಂದರೆ ಇನ್ನೊಬ್ಬರಿಂದ ದುಡ್ಡು ಕೊಟ್ಟು ಮಾಡಿಸಿದರಾಯಿತು.

ಒಂದು ಅರವತ್ತೈದು ಡಾಲರ್ ಕೊಟ್ಟು ಆರಡಿ ಎತ್ತರದ ಏಣಿಯನ್ನು ತೆಗೆದುಕೊಂಡಿರದ ಬುದ್ಧಿವಂತನಾದ ನಾನು, ಇರುವ ಕಿಚನ್ ಸ್ಟೆಪ್‌ಸ್ಟೂಲಿನಲ್ಲೇ ಎರಡು ಮೆಟ್ಟಿಲು ಹತ್ತಿ ಭಾರವಾದ ಡ್ರಿಲ್ ಸೆಟ್ ಅನ್ನು ನನ್ನ ಭುಜಕ್ಕಿಂತಲೂ ಎತ್ತರ ಮಟ್ಟದಲ್ಲಿಟ್ಟುಕೊಂಡು ಅದೆಷ್ಟು ಡ್ರಿಲ್‌ಗಳನ್ನು ಕೊರೆಯಲಾದೀತು? ಅದೆಷ್ಟು ಸ್ಕ್ರೂಗಳನ್ನು ಲೀಲಾಜಾಲವಾಗಿ ಒಳಗೆ ಸೇರಿಸಲಾದೀತು? ಇಂತಹ ಕಷ್ಟಕರ ಸನ್ನಿವೇಶಗಳಲ್ಲಿ ನನ್ನ ಬಾಯಿಯಿಂದ ಸಹಸ್ರನಾಮಾರ್ಚನೆ ತನ್ನಷ್ಟಕ್ಕೆ ತಾನೇ ಹೊರಟು ಬರುತ್ತದೆ, ಅದರ ಬೆನ್ನ ಹಿಂದೆ ಸಮಜಾಯಿಷಿ ಕೂಡ:
- ಈ ಸುಡುಗಾಡು ಭಾರತೀಯರೆಲ್ಲ ಚಿಂಕರರು, ಪಕ್ಕದ ಮನೆಯವನು ಆರೂವರೆ ಅಡಿ ಎತ್ತರವಿದ್ದಾನೆ ಅವನೋ ನೆಲದ ಮೇಲೆ ನಿಂತೇ ಬಲ್ಬ್ ಬದಲಾಯಿಸುತ್ತಾನೆ!
(ಭಾರತೀಯರರು ಕುಳ್ಳಕಿರುವುದು ಅವರ ತಪ್ಪೇ? ಪಕ್ಕದ ಮನೆಯವನು ಎತ್ತರವಿರುವುದು ಅವನ ತಪ್ಪೇ?)
- ಈ ಥರ್ಡ್‌ಕ್ಲಾಸ್ ಅಮೇರಿಕದಲ್ಲಿ ಗರಾಜಿನಲ್ಲಿ ಅಲಂಕಾರಕ್ಕಿಡುವ ಏಣಿಯು ಅರವತ್ತೈದು ಡಾಲರ್ರೇ?
(ನಿನಗೆ ಬೇಕಾದರೆ ಹತ್ತೇ ಡಾಲರಿನ ಏಣಿಯನ್ನು ತೆಗೆದುಕೊಂಡು ಬಾ, ಯಾರು ಬೇಡಾ ಅಂದೋರು?)
- ಈ ಕಿಟಕಿಗಳಿಗೆ ಸ್ಕ್ರೀನ್ ಏಕೆ ಹಾಕಬೇಕು? ಅದರಿಂದ ಯಾವ ದೇಶ ಉದ್ದಾರವಾಗುತ್ತದೆ?
(ಹಾಕೋದೇ ಬೇಡ ಬಿಡು, ಯಾರು ಹಾಕು ಅಂತ ಗಂಟುಬಿದ್ದೋರು ಈಗ).

ಮೇಲೆ ಕೈ ಎತ್ತಿ ಹಿಡಿದೂ ಹಿಡಿದೂ ನೋವಾದ ಹಾಗೆ, ಎಂದೂ ಕೀ ಬೋರ್ಡನ್ನೇ ಕುಟ್ಟುತ್ತೇವೆ ಎಂದು ಶಪಥ ತೊಟ್ಟ ಕೈ ಬೆರಳುಗಳು ಯಾವತ್ತೋ ಒಮ್ಮೆ ಸ್ಕ್ರೂ ಡ್ರೈವರ್ರನ್ನು ತಿರುಗಿಸಿ ವ್ಯಥೆ ಪಟ್ಟು ಅವುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವ ಹಾಗೆ ಬಸ್ಸಿನ ಗಡಿಬಿಡಿಯಲ್ಲಿ ನಮ್ಮೂರಿನ ದೇವಸ್ಥಾನದ ಅರ್ಚಕರು ಹೈ-ಸ್ಪೀಡ್ ಅರ್ಚನೆ ಮಾಡುವ ಹಾಗೆ ನನ್ನ ಸಹಸ್ರನಾಮ ಹೊಸಹೊಸ ರೂಪವನ್ನು ಪಡೆದುಕೊಳ್ಳುತ್ತದೆ, ಆ ಹೊತ್ತಿನಲ್ಲಿ ಯಾರೇ ಕಣ್ಣಿಗೆ ಬಿದ್ದರೂ, ಏನೇ ಕಂಡರೂ ಅವುಗಳಿಗೆಲ್ಲ ಬೈಗಳು ಗ್ಯಾರಂಟಿ! ಕೊನೆಗೆ ಬೇಸತ್ತು ನನಗೆ ನಾನೆ ಬೈದುಕೊಳ್ಳುವುದೂ ಇದೆ:
- ಒಂದ್ ದಿನಾನಾದ್ರೂ ಚಿಕ್ಕ ವಯಸ್ಸಿನಲ್ಲಿ ಒಂದಿಷ್ಟು ಹ್ಯಾಂಡಿ ಸ್ಕಿಲ್ಸ್‌ಗಳನ್ನು ಕಲಿಯಲಿಲ್ಲ, ಥೂ ನಿನ್ನ ಮುಸುಡಿಗೆ ಇಷ್ಟು ಬೆಂಕಿ ಹಾಕ!
- ಅದೇನ್ ಸ್ಕೂಲ್‌ನಲ್ಲಿ ಕಿಸಿದು ಫಸ್ಟ್‌ಕ್ಲಾಸ್ ಬಂದಿದ್ದು ಅಷ್ಟರಲ್ಲೇ ಇದೆ, ಇವತ್ತಿಗೆ ನೆಟ್ಟಗೆ ಒಂದು ರೂಮಿಗೆ ಬಣ್ಣಾ ಹಚ್ಚೋಕ್ ಬರೋಲ್ವಲ್ಲೋ!
- ಗಂಡಸು ಅಂತ ಮುಖದ ಮೇಲೆ ಮೀಸೆ ಹೊತ್ತ ಮೇಲೆ ಒಂದಿಷ್ಟು ಪ್ರಿಮಿಟಿವ್ ಕೆಲ್ಸಗಳೂ ಬರ್ದೇ ಇದ್ರೆ ಆ ಮೀಸೆಗೆ ಅವಮಾನ ಅಲ್ವಾ?!

ಅಂತೂ ಇಂತೂ ಈ ಸಹಸ್ರನಾಮಾರ್ಚನೆಗಳ ಮಧ್ಯದಲ್ಲೇ (ಕಾಟಾಚಾರಕ್ಕೆ ಎನ್ನುವಂತೆ ಆರಂಭಿಸಿ ಮುಗಿಸಿದ) ಕೈಗೆತ್ತಿಕೊಂಡುದನ್ನು ಮುಗಿಸಿ ಆಯಿತು. ಮೌಂಟ್ ಎವರೆಸ್ಟ್ ಹತ್ತಿ ಇಳಿದ ತೇನ್‌ಸಿಂಗ್ ಕೂಡ ಅಷ್ಟೊಂದು ವ್ಯಥೆ ಪಟ್ಟಿರಲಾರ, ಕೆಲಸ ಮುಗಿಯುವ ಕೊನೆಯಲ್ಲಿ ಕೈ ಬೆರಳುಗಳು ಯಕ್ಷಗಾನದ ಕಾಳಿಂಗ ನಾವುಡರನ್ನು ಮೀರಿ ಭಾಗವತಿಕೆಯನ್ನು ಶುರು ಹಚ್ಚಿಕೊಂಡಿದ್ದವು. ಅದೆಷ್ಟೋ ತಪ್ಪುಗಳು, ಅವುಗಳ ನಡುವೆ ಅಲ್ಪಸ್ವಲ್ಪ ಸರಿಗಳಿಂದ ಹಿಡಿದ ಕೆಲಸವನ್ನೇನೋ ಮಾಡಿದೆ, ಕೊನೆಗೆ ಒಂದಿಷ್ಟು ಅನುಭವವಾಯ್ತು ಬಿಡು ಎಂದು ಒಮ್ಮೆ ತಂಪೆನಿಸಿತಾದರೂ - ಥೂ ಈ ಅನುಭವದ ಮನೆಗಿಷ್ಟು ಬೆಂಕೀ ಹಾಕ! ಅಂತ ಅನ್ನಿಸದೇ ಇರಲಿಲ್ಲ.

***

ನಿಮಗೆ ನನ್ನ ಮಾತಿನ ಮೇಲೆ ನಂಬಿಕೆ ಇರದಿದ್ದರೆ ಟಿವಿಯಲ್ಲಿ ಎಷ್ಟೊಂದು ಲೀಲಾಜಾಲವಾಗಿ ಸೀಲಿಂಗ್ ಪೈಂಟ್ ಮಾಡುತ್ತಾರೆ ಎಂದುಕೊಂಡು ನೀವು ನಿಮ್ಮ ಮನೆಯಲ್ಲಿನ ಒಂದು ಸಣ್ಣ ಕೊಠಡಿಯ ಸೀಲಿಂಗ್ ಅನ್ನು ಪೈಂಟ್ ಮಾಡಲು ಪ್ರಯತ್ನಿಸಿ ನೋಡಿ. ನಿಮ್ಮ ಬಳಿ ಎಂಥ ಅದ್ಭುತ ರೋಲರ್‌ಗಳು ಇದ್ದರೂ (ಪೈಂಟ್ ಹೆಂಗಾದರೂ ಇರಲಿ, ಅದರ ಕಥೆ ಬೇರೆ) ಒಂದು ಛಾವಣಿ ಮುಗಿಯುವ ಹೊತ್ತಿಗೆ ನಿಮ್ಮ ಪುಪ್ಪುಸದಲ್ಲಿನ ಗಾಳಿಯೆಲ್ಲವೂ ಬರಿದಾಗಿ ನೀವು ಇನ್ನೊಂದು ಅರ್ಧ ಘಂಟೆಯಲ್ಲಿ ಕುಸಿದು ಬೀಳುತ್ತೀರಿ ಎಂದೆನಿಸದಿದ್ದರೆ ಖಂಡಿತ ನನಗೆ ತಿಳಿಸಿ. ಸೀಲಿಂಗ್ ಪೈಂಟ್ ಮಾಡುವುದಕ್ಕೆ ಅದೆಷ್ಟು ಅಪ್ಪರ್ ಬಾಡಿ ಸ್ಟ್ರೆಂಗ್ತ್ ಬೇಕು ಎನ್ನುವುದಕ್ಕೆ ನನಗೆ ತಿಳಿದ ಯಾವ ಯುನಿಟ್ಟುಗಳಿಂದಲೂ ಮೆಜರ್ ಮಾಡುವುದಕ್ಕಾಗುತ್ತಿಲ್ಲ, ಅದೇನಿದ್ದರೂ ಅನುಭವದಿಂದಲೇ ತಿಳಿಯಬೇಕು. ಹೀಗೇ ಒಂದು ದಿನ ಪೈಂಟಿಂಗ್ ಪ್ರಾಜೆಕ್ಟ್ ಅನ್ನು ನಮ್ಮ ಅಲೆಕ್ಸಾಂಡ್ರಿಯದ ಮನೆಯಲ್ಲಿ ಕೈಗೆತ್ತಿಕೊಂಡ ನನಗೆ ನಮ್ಮ ಆ ಸಣ್ಣ ಮನೆಯ ಸೀಲಿಂಗ್ ಒಮ್ಮೊಮ್ಮೆ ಅಟ್ಲಾಂಟಿಕ್ ಮಹಾಸಾಗರಕ್ಕಿಂತಲೂ ವಿಸ್ತಾರವಾಗಿ ತೋರುತ್ತಿತ್ತು ಎನ್ನುವುದರಲ್ಲಿ ಉತ್ಪ್ರೇಕ್ಷೆ ಇದ್ದಿರಲಾರದು!

ಅದಕ್ಕೇ ಹೇಳಿದ್ದು, ಈ ಅನುಭವ ಅನ್ನೋದು ಪ್ರಯೋಜನಕ್ಕೆ ಬಾರದ್ದು ಅಂತಾ. ಒಮ್ಮೆ ಮಾಡಿ ಕೈ ಸುಟ್ಟುಕೊಂಡೋ ಹೊಡೆತ ತಿಂದ ಮೇಲೋ ಬರುವ ಭಾಗ್ಯವನ್ನು ನೀವು ಕರೆದುಕೊಳ್ಳಲು ನಾಲ್ಕಕ್ಷರದ ಸೌಭಾಗ್ಯ ಬೇಕೆಂದರೆ ಅದನ್ನು ಅನುಭವವೆಂದುಕೊಳ್ಳಿ. ಇಲ್ಲವೆಂದಾದರೆ ನನ್ನ ಹಾಗೆ ಚಪ್ಪಟೆ ಇರುವ ನಿಮ್ಮ ಹಣೆಯಲ್ಲಿ ಎರಡೆರಡು ಬಾರಿ ಗಟ್ಟಿಸಿಕೊಂಡು ಅದರ ಮೇಲೆ ಒಂದು ಕ್ಯೂಬ್ ಐಸ್ ಇಟ್ಟು ತಣ್ಣಗೆ ಮಾಡಿಕೊಳ್ಳಿ ಅಷ್ಟೇ.

ವೇಷ್ಟು ಸಾರ್, ಎಲ್ಲಾ ವೇಷ್ಟ್ ಉ. ನಮ್ಮೂರಿನ ಮಕ್ಳು ನಾಳೆ ಶಾಲೆಯಲ್ಲಿ ಫಸ್ಟ್ ಕ್ಲಾಸ್ ಬರದಿದ್ದರೂ ಪರವಾಗಿಲ್ಲ ಮನೆ ಒಳಹೊರಗಿನ ಕೆಲಸವನ್ನು ಮಾಡಿಕೊಳ್ಳಲು ಬರಲೇ ಬೇಕು ಅಂತ ಹೊಸ ಕಾನೂನು ತರಬೇಕು ಅಂತ ಹೊಸ ಸರ್ಕಾರಕ್ಕೆ ನಾನು ಶಿಫಾರಸ್ಸು ಮಾಡ್ತೀನಿ. ಅನುಭವ ಇಲ್ಲದವರು ಮೀಸೆ ಬಿಡಲು ತಕ್ಕವರಲ್ಲ ಅಂತ ಹೊಸ ಶಾಸನವನ್ನು ಕೆತ್ತಿಸ್ತೀನಿ. ಕೈಲಾಗ್ತೋನ್ ಮೈಯೆಲ್ಲ ಪರಚಿಕೊಂಡ ಅಂತಾರಲ್ಲ ಹಾಗೆ ನನ್ನ ಕೈಯಲ್ಲಿ ಏನೂ ಮಾಡೋಕ್ ಆಗ್ತೇ ಇದ್ರೂ ಅಮೇರಿಕದ ನೀರಿನ ಋಣದ ದಯೆಯಿಂದ ಯಾವತ್ತೂ ನಾನು ಉದ್ದುದ್ದವಾಗಿ ಮಾತಾಡ್ತಲೇ ಇರ್ತೀನಿ.

ಅನುಭವಗಳಿಗೆ ಧಿಕ್ಕಾರ, ಮೈಗಳ್ಳರ ಸಂಘಕ್ಕೆ ಜೈ!

Saturday, May 31, 2008

ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ

’ಅದೆಲ್ಲಾ ಏನೂ ಬೇಡಾ ಸಾರ್, ನಾನು ಅಲ್ಲಿಂದಿಲ್ಲಿಗೆ ಓಡಾಡ್ತಾ ಇರೋವಾಗ ಉಪಯೋಗಿಸೋದಕ್ಕೆ ಒಂದು ಫೋನ್ ಇದ್ರೆ ಸಾಕು’ ಅಂತ ನಮ್ಮ ಮೊಬೈಲ್ ಫೋನ್ ಕಂಪನಿಯವರ ಹತ್ರ ಹೇಳಿ ಒಂದು ಸಾಧಾರಣ ಮೊಬೈಲ್ ಫೋನ್ ಇಟ್ಕೊಂಡೇ ಇರೋದನ್ನ ನೋಡಿದ ವೈರ್‌ಲೆಸ್ ಕಂಪನಿ ಸೇಲ್ಸ್‌ಮ್ಯಾನ್ ನನ್ನನ್ನ ಯಾವ್ದೋ ಶಿಲಾಯುಗದ ಪಳಯುಳಕೆಯನ್ನು ನೋಡಿದ ಹಾಗೆ ನೋಡಿ ಒಂದು ಲುಕ್ ಕೊಟ್ಟ.

ಹತ್ತೊಂಬತ್‌ ನೂರಾ ತೊಂಭತ್ತೆಂಟರಲ್ಲಿ ನಾನು ನನ್ನ ಮೊಬೈಲ್ ಫೋನ್ ಸಮೇತನಾಗಿ ಇಂಡಿಯಾಕ್ಕೆ ಹೋಗಿದ್ದಾಗ ಅಲ್ಲಿ ಇನ್ನೂ ಅದೇ ತಾನೇ ಫೋನ್ ರೆವಲ್ಯೂಷನ್ ಆಗ್ತಾ ಇದ್ರೂ ಸಹ ನನ್ನಣ್ಣ ನನ್ನ ಫೋನ್ ನೋಡಿ ’ಇದೇನು ಕಾರ್ಡ್‌ಲೆಸ್ ಫೋನ್ ಥರಾ ಇದೆ!’ ಅಂತ ತಮಾಷೆ ಮಾಡಿದ್ದು ನನಗಿನ್ನೂ ನೆನಪಿನಿಂದ ಮಾಸಿ ಹೋಗಿಲ್ಲ. ಅಲ್ಲೇನು? ಸಿಂಗಪುರ, ಹಾಂಗ್‌ಕಾಂಗ್, ತೈವಾನ್‌ನಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು ಆಕರ್ಷಕವಾಗಿ ಸಿಗುತ್ವೆ, ದಿನಕ್ಕೊಂದು ಮಾಡೆಲ್ ಸಸ್ತಾದಲ್ಲೂ ಸಿಗುತ್ತೆ, ನೋಡೋಕೂ ಚೆನ್ನಾಗಿರುತ್ತೆ. ಈ ಅಮೇರಿಕದವರು ಟೆಕ್ನಾಲಜಿಯಲ್ಲಾಗಲೀ, ಇಂಟರ್ನೆಟ್ ಬಳಕೆಯಲ್ಲಾಗಲೀ ಏಷಿಯಾ ದೇಶಗಳಿಗಿಂತ ಹಿಂದಿದ್ರೆ ಅದು ನನ್ನ ತಪ್ಪೇ?

ಇತ್ತೀಚೆಗೇನಪ್ಪ ಎಲ್ಲರೂ ಬ್ಲ್ಯಾಕ್‌ಬೆರಿ ಹಿಡಕೊಂಡು ಓಡಾಡೋ ಕಾಲ, ಅದಿಲ್ಲದೇ ಹೋದ್ರೆ ಐ-ಫೋನ್ ಆದ್ರೂ ಜನ ಇಟ್ಕೊಂಡಿರೋದು ನಾರ್ಮು. ನಮ್ಮಂಥೋರು ಅದೇ ಹಳೇ ಫೋನುಗಳಿಗೆ ಗಂಟು ಬಿದ್ದುಕೊಂಡಿರೋದಂತೂ ನೋಡೋಕೂ ಸಿಗೋಲ್ಲ ಅನ್ನೋ ಕಾಲ. ಇರೋ ಡಿವೈಸ್‌ನಲ್ಲೇ ನನಗೆ ಬೇಕಾದ ಕೆಲಸಗಳನ್ನೆಲ್ಲ ಮಾಡಿಕೊಂಡಿದ್ರೆ ಸಾಲ್ದೇ ಅನ್ನೋದು ನಾನು ಅವಾಗಾವಾಗ ನನಗೇ ಹೇಳಿಕೊಂಡಿರೋ ಕಾರಣ ಅಷ್ಟೇ.

***

ಇವೆಲ್ಲ ಯಾಕೆ ಹೇಳಬೇಕಾಗಿ ಬಂತೂ ಅಂತಂದ್ರೆ - ಇತ್ತೀಚೆಗೆ ಹೊಸದೊಂದು ಕಾನ್ಸೆಪ್ಟ್ ಶುರು ಮಾಡಿದೀನಿ, ಅದೇ ಬ್ಲ್ಯಾಕ್‌ಬೆರಿ ರೆಸಿಸ್ಟೆನ್ಸ್ ಅಂತ. ಅದೇನಪ್ಪ ಅಂದ್ರೆ ಸರಳವಾಗಿ - ನಾನು ಬ್ಲ್ಯಾಕ್‌ಬೆರಿ ಉಪಯೋಗಿಸೋಲ್ಲ ಅನ್ನೋ ವಾದ, ಇನ್ನೂ ಕ್ಲಿಯರ್ ಆಗಿ ಹೇಳಬೇಕು ಅಂತಂದ್ರೆ ನನಗೀಗ ಅದರ ಅಗತ್ಯ ಇಲ್ಲಾ ಅನ್ನೋ ನೆಪ.

ದಿನದ ಹತ್ತು ಘಂಟೆ ಆಫೀಸ್ ಸಮಯದಲ್ಲಿ ಕೊನೇಪಕ್ಷ ಐದು ಘಂಟೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳೋ ಕೆಲಸದವರಿದ್ದರೂ ಅಂತಹವರು ತಮ್ಮ ಇ-ಮೇಲ್‌ಗಳನ್ನೋ, ಇನ್ಸ್ಟಂಟ್ ಮೆಸ್ಸೇಜುಗಳನ್ನೋ ತಮ್ಮ ಮೊಬೈಲ್ ಡಿವೈಸ್‌ನಲ್ಲಿ ನೋಡ್ತಾ ಕೂರೋದನ್ನ ನೋಡಿದ್ರೆ ಒಮ್ಮೊಮ್ಮೆ ಅಂಥಾ ಘನಂದಾರಿ ಕೆಲ್ಸ ಏನಿರಬಹುದು ಅಂತ ಸೋಜಿಗವಾಗುತ್ತೆ. ಇರೋ ಇ-ಮೇಲ್‌ಗಳನ್ನ ಕಂಪ್ಯೂಟರಿನಲ್ಲಿ ನೋಡಿ ಮ್ಯಾನೇಜ್ ಮಾಡೋದಕ್ಕೆ ಕಷ್ಟಾ ಪಡ್ತಾ ಇರೋ ನಾನು, ಇನ್ನು ಅದನ್ನ ಬ್ಲ್ಯಾಕ್‌ಬೆರಿನಲ್ಲೂ ನೋಡ್ತಾ ಕೂರೋದು, ಯಾವ್ ಯಾವ್ದನ್ನ ಎಲ್ಲೆಲ್ಲಿ ಓದಿ ಎಲ್ಲೆಲ್ಲಿ ಉತ್ರ ಕೊಡೋದು, ಸ್ಕೆಡ್ಯೂಲ್ ಕ್ಯಾಲೆಂಡರು ಕಾಂಟ್ಯಾಕ್ಟ್‌ಗಳನ್ನೆಲ್ಲ ಹೇಗೆ ಮ್ಯಾನೇಜ್ ಮಾಡೋದು? ಎಲ್ಲೋ ಸುಖವಾಗಿ ಕುಳಿತು ಇನ್ನೇನನ್ನೋ ಮಾಡ್ತಾ ಇರೋವಾಗ ಈ ಮೊಬೈಲ್ ಡಿವೈಸ್‌ಗಳನ್ನ ನೋಡದಿರುವ ಶಿಸ್ತನ್ನ ಹೇಗೆ ಬೆಳೆಸಿಕೊಳ್ಳೋದು? ಮುಂತಾದ ಪ್ರಶ್ನೆಗಳಿಗೆ ಉತ್ರ ಕಂಡ್ ಹಿಡಿದುಕೊಳ್ಳದ ಹೊರತು ಬ್ಲ್ಯಾಕ್‌ಬೆರಿ ಮುಟ್ಟದೇ ಇದ್ರೆ ಒಳ್ಳೇದು, ಅಲ್ವೇ?

ಹಂಗ್ ನೋಡಿದ್ರೆ, ನಮ್ ಹತ್ರ ಇರೋ ಉಪಕರಣ (ಟೂಲ್ಸ್) ಗಳಲ್ಲಿ ನಾವು ಎಲ್ಲ ಫಂಕ್ಷನ್ಸ್ ಅನ್ನೂ ಬಳಸೋದಿಲ್ಲ. ಉದಾಹರಣೆಗೆ ನನ್ನ ಮೊಬೈಲ್ ಫೋನ್ ಅನ್ನು ಹೆಚ್ಚಾಗಿ ಫೋನ್ ಆಗೇ ಬಳಸ್ತಾ ಇರೋ ನಾನು ಮುಂದೆ ಬ್ಲ್ಯಾಕ್‌ಬೆರಿಯಲ್ಲಿನ ಎಲ್ಲಾ (ಹೆಚ್ಚಿನ) ಫಂಕ್ಷನ್ನುಗಳನ್ನು ಯಶಸ್ವಿಯಾಗಿ ಬಳಸಿ ಎಫಿಷಿಯಂಟ್ ಆಗ್ತೀನಿ ಅನ್ನೋದಕ್ಕೇನು ಗ್ಯಾರಂಟಿ? Use your current device to the best extent - ಅನ್ನೋದು ನನ್ನ ಇತ್ತೀಚಿನ ಸ್ಲೋಗನ್ನು. ಮುಂದೆ ನನ್ನ ಫೋನ್ ಅಪ್‌ಗ್ರೇಡ್ ಮಾಡುವ ಸಮಯ ಬಂದಾಗ್ಲೂ ನಾನಂತೂ ಶಿಪ್ಪಿಂಗೂ ಸೇರಿ ಫ್ರೀ ಆಗಿ ಸಿಗುವ ನನ್ನ ಅನುಕೂಲಕ್ಕೆ ತಕ್ಕನಾದ ಫೋನನ್ನೇ ಆರಿಸಿಕೊಳ್ಳೋದು. ಬ್ಲ್ಯಾಕ್‌ಬೆರಿನೋ ಮತ್ತೊಂದನ್ನೋ ಕೊಳ್ಳೋದಕ್ಕೆ ನೂರ್ ನೂರೈವತ್ತು ಡಾಲರ್ರನ್ನ ಯಾರ್ ಕೊಡ್ತಾರೆ ಹೇಳಿ?

ಈ ದಿನಕ್ಕೊಂದು ವಾರಕ್ಕೊಂದು, ವರ್ಷಕ್ಕೊಂದು ಅಂತ ಅನೇಕಾನೇಕ ಇಂಪ್ರೂವ್‌ಮೆಂಟ್ಸ್ ಮಾಡ್ತಾರಲ್ಲ ಅದೆಲ್ಲ ದೊಡ್ಡ ಕಾನ್ಸ್‌ಪಿರಸಿ ಸಾರ್. ನೀವು ಬೇಕಾದ್ರೆ ಇವತ್ತೇ ಹೋಗಿ ಇವತ್ತಿನ ಲೇಟೆಸ್ಟ್ ಅಂಡ್ ಗ್ರೇಟೆಸ್ಟ್ ಮಾಡೆಲ್ ಅಂತ ಯಾವ್ದೋ ಒಂದನ್ನ ತೆಗೊಳ್ಳಿ. ನಾಳೇನೇ ಅದಕ್ಕಿನ್ನೊಂದೋ, ಮತ್ತೊಂದನ್ನೋ ಸೇರಿಸಿ ಮಾರ್ತಾರೆ. ಹೀಗೆ ಜನರಿಗೆ ಘಳಿಗೆಗೊಂದು ಘಂಟೆಗೊಂದು ಹೊಸಹೊಸದನ್ನೆಲ್ಲ ಕೊಟ್ಟೂ ಕೊಟ್ಟೂ ಅಮೇರಿಕದ ಜನರಿಗೆ ಕೊನೆಗೆ ತಮ್ಮ ತಮ್ಮ ಹೆಂಡ್ತಿ-ಮಕ್ಳು ಹೀಗೇ ಹೊಸದಾಗಿ ಸಿಗ್ತಾ ಇದ್ರೆ ಅನ್ಸಿರೋದೋ ಏನೋ. ಒಂದ್ ಕಡೆ ತಮಗೆ ಅನ್ನಿಸಿದಂತೆ ನಡೆದುಕೊಳ್ಳೋ ಕನ್ಸ್ಯೂಮರ್ ಮೈಂಡ್‌ಸೆಟ್‌ಗೆ ಧೀರ್ಘಕಾಲದ ಬದುಕಿನ ವಂಡರ್ಸ್‌ಗಳನ್ನು ಹೇಗೆ ಅರ್ಥ ಮಾಡಿಸೋದು?

ಸದ್ಯ, ಈ ಅಮೇರಿಕದಲ್ಲಿ ಭಾರತದಲ್ಲಿದ್ದ ಹಾಗೆ ನೂರು ಕೋಟಿ ಜನರಿಲ್ಲಪ್ಪ ಅಂತ ನಿಮಗೂ ಅನ್ಸುತ್ತಾ? ಇಲ್ಲಿನ ಎಲ್ಲಾ ಕಾರ್ಪೋರೇಷನ್ನಿನವರೂ ತಮ್ಮ ತಮ್ಮ ಪದಾರ್ಥಗಳು ಹೆಚ್ಚು ಹೆಚ್ಚು ಜನ್ರಿಗೆ ತಲುಪ್ಲಿ ಅಂತ ಪ್ಲಾನು ಮಾಡೋದೇ ಮಾಡೋದು. ಒಂದು ಮಿಲಿಯನ್ ಕಷ್ಟಮರ್ಸ್ ಇದ್ದೋರು ಹತ್ತು ಮಿಲಿಯನ್ನ್ ಮಾಡೋ ಗುರಿ ಇಟ್ಕೋತಾರೆ, ಹತ್ತು ಮಿಲಿಯನ್ ಇದ್ದೋರು ನೂರು ಮಿಲಿಯನ್ನ್ ಅಂತಾರೆ. ಒಟ್ನಲ್ಲಿ ನೀವು ಇಲ್ಲಿನ ಕಂಪನಿಗಳಿಂದ ಹೆಚ್ಚು ಹೆಚ್ಚು ಕೊಳ್ತಾನೇ ಇರಬೇಕು ಅನ್ನೋದು ಅದರ ಮರ್ಮ ಅಷ್ಟೇ.

***

ನೀವು ಯಾವಾಗ್ಲೂ ಅಲ್ಲಿ-ಇಲ್ಲಿ ಓಡಾಡ್ಕೊಂಡೇ ಇರೋರಾದ್ರೆ ನಿಮಗೆ ನಿಜವಾಗ್ಲೂ ಒಂದು ಪವರ್‌ಫುಲ್ ಮೊಬೈಲ್ ಡಿವೈಸಿನ ಅಗತ್ಯವಿದೆ, ಅದು ನನಗೂ ಅರ್ಥವಾಗುತ್ತೆ. ಆದ್ರೆ ಬೆಳಗ್ಗಿಂದ ಸಂಜೇವರೆಗೂ ಖುರ್ಚೀ ಸ್ನೇಹಾ ಬೆಳಸ್ಕೊಂಡು ಕುಳಿತುಕೊಳ್ಳೋ ನನಗೆ ಅದ್ಯಾವ್ ಮೊಬೈಲೂ ಬೇಡಾ ಸಾರ್. ಎಲ್ಲಾದ್ರೂ ಅರ್ಜೆಂಟಿಗೆ ಅಂತ ಒಂದು ಫೋನ್ ಇದ್ರೆ ಸಾಕು. ಅದ್ಕೇನೇ, ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ ಅಂತ ಆದಷ್ಟು ದಿನ ಕಾಲಾ ತಳ್ತಾ ಇದ್ದೀನಿ ನೋಡೋಣ ಎಷ್ಟು ದಿನ ಬರುತ್ತೋ ಅಂತ.

Sunday, May 25, 2008

ಸೋಜಿಗಗಳು ನೂರು

ವರ್ಷದ ಮೇ ಒಂದು ವಿಶೇಷವಾದ ತಿಂಗಳೆಂದೇ ಹೇಳಬೇಕು. ೨೦೦೬ ರ ಮೇ ತಿಂಗಳಿನಲ್ಲಿ ದಿನಕ್ಕೊಂದರಂತೆ ೩೧ ಲೇಖನಗಳು ಬರೆದು ’ಅಂತರಂಗ’ದಲ್ಲಿ ಪ್ರಕಟಿಸಿದ ನನಗೆ ೨೦೦೭ ರ ಮೇ ತಿಂಗಳಿನಲ್ಲಿ ಕೇವಲ ೭ ಲೇಖನಗಳನ್ನಷ್ಟೇ ಪ್ರಕಟಿಸಲು ಸಾಧ್ಯವಾಯಿತು, ಹಾಗೇ ಈ ವರ್ಷದ ಮೇ ತಿಂಗಳಿನ ಈ ೨೫ ದಿನಗಳಲ್ಲಿ ಇದುವರೆಗೂ ಬರೆದು ಪ್ರಕಟಿಸಿದ್ದು ಕೇವಲ ಎರಡೇ ಎರಡು ಲೇಖನಗಳು. ಈ ಕಡೆ ಆಫೀಸಿನ ಕೆಲಸ ಓಡಾಟ ಹಾಗೂ ಅನೇಕಾನೇಕ ಕಾರಣಗಳಿಂದ ಕಂಪ್ಯೂಟರಿನ ಮುಂದೆ ಕುಳಿತು ಪರ್ಸನಲ್ ಟೈಮ್ ಎಂದು ಪುರುಸೊತ್ತು ಸಿಕ್ಕಿದ್ದೇ ಹೆಚ್ಚಾದರೆ ನನಗೆ ಆಶ್ಚರ್ಯವಾಗುವಂತೆ ಕನ್ನಡಪ್ರಭದ ಬ್ಲಾಗಾಯಣ ಹಾಗೂ ದಟ್ಸ್‌ಕನ್ನಡ ಪೋರ್ಟಲ್ಲುಗಳ ಮೂಲಕ ’ಅಂತರಂಗ’ಕ್ಕೆ ಭೇಟಿಕೊಡುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು ಈಗಾಗಲೇ ಈ ತಿಂಗಳ ಮೇ ಭೇಟಿ ಹಾಗೂ ಪೇಜ್ ವ್ಯೂವ್ ಅಂಕಿ-ಅಂಶಗಳ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿರುವ ವಿಶೇಷವೇ ಹೌದು. Thanks to the portals and thanks to all of you!


***

ಈ ತಿಂಗಳು, ಈ ದಿನ ಮತ್ತೊಂದು ರೀತಿಯಲ್ಲಿ ವಿಶೇಷವಾದದ್ದೇ ಅನ್ನಬೇಕು - ಯಾವೊಂದು ಪಕ್ಷಕ್ಕೆ ನಿಚ್ಚಳ ಬಹುಮತ ಬರದೇ ಮತ್ತೆ ತೇಲಾಡುವ ಒಪ್ಪಂದಗಳು ಸರ್ಕಾರಗಳು ಬರುತ್ತವೆಯೇನೋ ಎಂದು ಕೊರಗುತ್ತಿದ್ದವರಲ್ಲಿ ನಾನೂ ಒಬ್ಬ. ಕಾಂಗ್ರೇಸೋ ಬಿಜೇಪಿಯೋ ಯಾವುದೋ ಒಂದು ಪಕ್ಷಕ್ಕೆ ಬಹುಮತ ಬಂತಲ್ಲ, ಇನ್ನಾದರೂ ಇವರಿವರಲ್ಲೇ ಕಚ್ಚಾಡಿಕೊಳ್ಳದೇ ಒಂದು ಐದು ವರ್ಷ ನಿರಾಳವಾಗಿ ಸರ್ಕಾರವನ್ನು ನಡೆಸಿ ಜನರ ಸಮಸ್ಯೆಗಳಿಗೆ ಅವರ ಪ್ರತಿನಿಧಿಗಳು ಸ್ಪಂದಿಸುವ ವ್ಯವಸ್ಥೆಯಾದರೆ ಸಾಕು!

ಹ್ಞಾ, ಈಗಾಗಲೇ ಕಾಲಚಕ್ರದ ಬರಹಗಳು ಆರಂಭವಾಗಿವೆ, ಇನ್ನು ಕಾಲಚಕ್ರದ ಮೇಷ್ಟ್ರು-ನಂಜ, ತಿಮ್ಮಕ್ಕ ಇವರೆಲ್ಲ ಸೇರಿ ಹೆಚ್ಚು ಹೆಚ್ಚು ಕಟ್ಟೆ ಪಂಚಾಯಿತಿ ಹಚ್ಚಿಕೊಳ್ಳುತ್ತಾರೆ ನೋಡುತ್ತಿರಿ.

ಈ ವರ್ಷದ ಚುನಾವಣೆಯ ಫಲಿತಾಂಶ ಬಹಳ ಸ್ವಾರಸ್ಯಕರವಾಗಿದೆ:
224 ಸ್ಥಳಗಳಲ್ಲಿ ನಡೆದ ಚುನಾವಣೆಗಳಲ್ಲಿ 943 ಪಕ್ಷೇತರರನ್ನು ಬಿಟ್ಟು 31 ಪಕ್ಷಗಳ 1299 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆಂದರೆ ನಂಬಲು ಕಷ್ಟವಾಗುತ್ತದೆ. ನೂರಕ್ಕೆ 42 ರಷ್ಟು ಪಕ್ಷೇತರರು, ಕೆಲವೊಂದು ಕ್ಷೇತ್ರಗಳಲ್ಲಿ ಐದು-ಆರು ಜನರು ಸ್ಪರ್ಧಿಸಿದ್ದು ಹೊಸಬರಲ್ಲಿ ಹೆಚ್ಚು ಉತ್ಸಾಹವನ್ನು ಇನ್ನೂ ಉಳಿಸಿರುವುದು ನನಗಂತೂ ಆಶ್ಚರ್ಯ ತಂದಿತು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜನಸ್ಪಂದನಕ್ಕೆ ಕಿವಿಗೊಡುವ ತಾಳ್ಮೆ ಎಷ್ಟು ಜನರಿಗಿದ್ದೀತು? NDTV ಯ ವರದಿಯಂತೆ ಇಂದಿನ ರಾಜಕೀಯದ ಹಿರಿಯ ತಲೆಗಳೆಲ್ಲ ಭಯಂಕರ ಶ್ರೀಮಂತರಿರಬಹುದು, ಕೋಟ್ಯಾಧೀಶ್ವರರಿರಬಹುದು ಆದರೆ ಈ ರಾಜಕೀಯವನ್ನೇ ನಂಬಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತೇವೆ, ಇದರಲ್ಲೇ ಇದ್ದು ನಾವೂ ಒಂದು ದಿನ ಕೋಟ್ಯಾಧಿಪತಿಗಳಾಗುತ್ತೇವೆ ಎನ್ನುವ ತತ್ವ ನಿನ್ನೆಯಷ್ಟಂತೂ ಇಂದು ಸರಳವಿಲ್ಲ.

ಆರು ಜನ ಪಕ್ಷೇತರ ಅಭ್ಯರ್ಥಿಗಳನ್ನು ಬಿಟ್ಟು ಖಾತೆ ತೆರೆದ ಪಕ್ಷಗಳೆಂದರೆ ಮೂರೇ ಮೂರು: ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್. ಉಳಿದ 28 ಪಕ್ಷದ 634 ಜನ ಅಭ್ಯರ್ಥಿಗಳಲ್ಲಿ ಹೆಚ್ಚು ಜನರಿಗೆ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗದಾಗಿದ್ದು ನನಗೆ ಜನಾದೇಶ ಕಡಿಮೆ ಪಕ್ಷಗಳ ಸರ್ಕಾರದತ್ತ ಒಲವು ತೋರಿಸುತ್ತಿರುವಂತೆ ಕಂಡುಬಂತು.

ನನ್ನ ಹುಟ್ಟೂರು ಆನವಟ್ಟಿ, ಸೊರಬಾ ತಾಲೂಕಿನಲ್ಲಿ 1967 ರಿಂದ ಗೆದ್ದು ಬರುತ್ತಿದ್ದ ಬಂಗಾರಪ್ಪನವರ ಕುಟುಂಬದ ಯಶೋಗಾಥೆಗೆ ಕಡಿವಾಣ ಬಿದ್ದಿದೆ, ನಾಲ್ಕು ದಶಕಗಳ ನಂತರ ಹೊಸನಗರದ ಹಾಲಪ್ಪನವರು ಬಿಜೆಪಿ ಟಿಕೇಟಿನಲ್ಲಿ ಸಾಕಷ್ಟು ಬಹುಮತದಲ್ಲೇ ಗೆದ್ದುಬಂದಿರುವುದು (43%) ನಿಜವಾಗಲೂ ವಿಶೇಷ ಹಾಗೂ ವಿಚಿತ್ರ. ನಮ್ಮೂರಿನ ರಸ್ತೆಗಳಲ್ಲಿ, ಅಂಗಡಿ ಗೂಡುಗಳಲ್ಲಿ, ಹಳ್ಳಿಪಾಡುಗಳಲ್ಲಿ ಯಾವ ಯಾವ ರೀತಿಯ ಮಾತುಕಥೆಗಳು ನಡೆದಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ ಅಷ್ಟೇ. ಪಕ್ಕದ ಶಿಕಾರಿಪುರದಲ್ಲಿ ಬಂಗಾರಪ್ಪನವರು ಈ ಇಳಿ ವಯಸ್ಸಿನಲ್ಲಿ ಸ್ಪರ್ಧಿಸಿ ಏನು ಮಾಡುತ್ತಾರೋ ಎಂದುಕೊಂಡ ನನಗೆ ಗೆದ್ದ ಎಡಿಯೂರಪ್ಪನವರ ಮುಂದೆ (66%) ಬಂಗಾರಪ್ಪನವರು 30% ಮತಗಳಿಸಿದ್ದು ನಿಜವಾಗಲೂ ಸೋಜಿಗ ಮೂಡಿಸಿತು.

ಇನ್ನು ಬೆಂಗಳೂರು-ಜಯನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭಾಗವಹಿಸಿದ್ದ ರವಿರೆಡ್ಡಿಯವರನ್ನು ಕುರಿತು ಅವರ ಅನುಭವಗಳ ಬಗೆಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಮ್ಮೆಲ್ಲರ ನಡುವಿನ ಧ್ವನಿಯಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿನ ರಾಜಕೀಯ ಕರ್ಮಕಾಂಡದಲ್ಲಿ ಮೌಲ್ಯಾಧಾರಿತ ಧೋರಣೆಗಳನ್ನು ಮುಂದಿಟ್ಟುಕೊಂಡು ಅವರು ಪಡೆದ 244 ಮತಗಳಿಂದ ನಾವೆಲ್ಲ ಕಲಿಯುವುದು ಸಾಕಷ್ಟಿದೆ.

ನಾವಿರುವ ಅಮೇರಿಕದಲ್ಲಾಗಲೀ ಮುಂದುವರೆದ ಜನರಿರುವ ನಗರಗಳಲ್ಲಿ ಹೆಚ್ಚು ಜನರು ಓಟ್ ಹಾಕಲು ಹೋಗುತ್ತಾರೆ ಎನ್ನುವುದು ಒಂದು ದೊಡ್ಡ ಕಲ್ಪನೆಯೇ ಸರಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೆಚ್ಚು ಹೆಚ್ಚು ಮತಗಟ್ಟೆಗೆ ಬಂದಿದ್ದು ಚುನಾವಣಾ ಅಂಕಿ-ಅಂಶಗಳನ್ನು ಗಮನಿಸಿದ ನಿಮಗೆ ಮನವರಿಕೆಯಾದೀತು.

***

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಇಷ್ಟವಾಗುವಂತೆ ನಮ್ಮ ಸರ್ಕಾರಿ ಪೋರ್ಟಲುಗಳು ಚೆನ್ನಾಗಿ ಬೆಳೆದು ಬಂದಿವೆ, ಚುನಾವಣೆ ಸಂಬಂಧಿ ಅಂಕಿ-ಅಂಶಗಳಿಗಾಗಿ ನಾನು ಈ ಪೋರ್ಟಲುಗಳನ್ನು ನೋಡಿದಾಗಲೆಲ್ಲ ನನಗೆ ಎಂದೂ ನಿರಾಶೆಯಾದದ್ದಂತೂ ಇಲ್ಲ, ಬೇಕಾದರೆ ಚುನಾವಣಾ ಆಯೋಗದ ವಿವರಗಳನ್ನು ನೀವೇ ಖುದ್ದಾಗಿ ನೋಡಿ, ಇಲ್ಲಿ ನಿಮಗೆ ಬೇಕಾದ ಅಭ್ಯರ್ಥಿಯ ಚುನಾವಣೆ ಅರ್ಜಿ, ಅದಕ್ಕೆ ಲಗತ್ತಿಸಿದ ಕಾಗದ ಪತ್ರಗಳಿಂದ ಹಿಡಿದು ವಿವರವಾದ ಫಲಿತಾಂಶವನ್ನೂ ಇಲ್ಲಿ ನೋಡಬಹುದು.

Thursday, May 15, 2008

ಐದೇ ಐದ್ ನಿಮಿಷ...

ನಾನು ಕೆಲ್ಸಾ ಮಾಡೋ ಕಂಪ್ಯೂಟರ್ರುಗಳ ಸ್ಪೀಡೂ ಪ್ರಾಸೆಸ್ಸರ್ರುಗಳ ಪವರ್ರು ಜಾಸ್ತೀ ಆದ ಹಾಗೆ, ನಾನು ಉಪಯೋಗಿಸೋ ಸಾಫ್ಟ್‌ವೇರ್ ಅಥವಾ ಅಪ್ಲಿಕೇಷನ್ನುಗಳ ವರ್ಷನ್ನುಗಳು ಹೆಚ್ಚಾದ ಹಾಗೆ ನನ್ನ ಧಕ್ಷತೇನೂ ಹೆಚ್ಚಾಗುತ್ತೇ ಅನ್ನೋದು ಬರೀ ಕನಸೇ ಆಗಿ ಹೋಗಿದೆ ಅನ್ನೋದು ಇತ್ತೀಚಿನ ನನ್ನ ಕೊರೆತಗಳಲ್ಲೊಂದು! ಯಾವಾಗ್ ನೋಡಿದ್ರೂ ’ಟೈಮೇ ಇಲ್ಲಾ ಸಾರ್!’ ಎಂದು ರಾಗ ಎಳಿತಾ ಇರೋ ನನಗೆ ನನ್ನ ಇದ್ದ ಬದ್ದ ಟೈಮ್ ಎಲ್ಲಾ ಎಲ್ಲಿ ಕರಗಿ ಹೋಗುತ್ತೇ ಅನ್ನೋದು ಹೊಳೆಯದೇ ಬಹಳ ಸಂಕಷ್ಟಕ್ಕೆ ಬಂದಿರೋದರ ಜೊತೆಗೆ ಟೈಮೇ ಇಲ್ಲವಲ್ಲ ಅಂಥ ಯೋಚಿಸೋದಕ್ಕೂ ಟೈಮ್ ಇಲ್ಲದ ಹಾಗೆ ಆಗಿದೆ ಅನ್ನೋದು ನನ್ನ ಹೊಸ ಕೀರ್ತನೆ ಅಷ್ಟೇ.

ನೀವೇ ನೋಡಿ, ಯಾವತ್ತಾದ್ರೂ ಎಲ್ಲಿಗೋ ಹೊರಟಿರೋ ಹೊತ್ತಿನಲ್ಲಿ ಒಂದು ನಿಮಿಷ ಕಂಪ್ಯೂಟರಿನಲ್ಲಿ ಏನೋ ನೋಡೋಣ ಅಂತ ಕೂತಿರೋದಷ್ಟೇ ನೆನೆಪು, ಅದು ಹೇಗೆ ನಿಮಿಷಗಳು-ಘಂಟೆಗಳು ಉರುಳುತ್ತವೋ ಗೊತ್ತೇ ಆಗಲ್ಲ. ದಿನಾ ಆನ್ ಮಾಡಿ ಆಫ್ ಮಾಡೀರೋ ಕಂಪ್ಯೂಟರಿನಿಂದ ಹಿಡಿದು ಎರಡು ವಾರಕ್ಕೊಮ್ಮೆ ಸ್ಟ್ಯಾಂಡ್ ಬೈ ಮೋಡ್ ನಲ್ಲೇ ಇರೋ ನನ್ನ ಲ್ಯಾಪ್‌ಟಾಪಿನ ವರೆಗೆ ಅದರಲ್ಲಿರೋ ಅಪ್ಲಿಕೇಷನ್ನಿನ ಗೊಂಚಲುಗಳಲ್ಲಿ ಒಬ್ಬನಲ್ಲ ಒಬ್ಬನು ಏನನ್ನಾದರೊಂದನ್ನು ಇನ್ಸ್ಟಾಲ್ ಮಾಡಿಕೊಂಡೇ ಇರ್ತಾನೆ. ಆಂಟಿ ವೈರಸ್ಸು ಪ್ಯಾಚುಗಳಿಂದ ಹಿಡಿದು ಅಪ್ಲಿಕೇಶನ್ನ್ ಪ್ಯಾಚುಗಳವರೆಗೆ ಸದಾ ಕರಕರಕರ ಶಬ್ದ ಮಾಡ್ತಾ ಹಾರ್ಡ್ ಡ್ರೈವ್ ತಿರುಗೋ ಶಬ್ದವನ್ನು ಕೇಳ್ದೇ ಇದ್ರೆ ತಿಂದ ಅನ್ನಾನೇ ಅರಗಲ್ಲ. ಹೀಗೆ ಅವರು ಬಿಟ್ಟು ಇವರು ಬಿಟ್ಟು ಯಾರ್ಯಾರೋ ಏನನ್ನೋ ಇನ್ಸ್ಟಾಲ್ ಮಾಡಿ ಅನಂತರ ಕಂಪ್ಯೂಟರಿನ ಪ್ರಾಸೆಸ್ಸರು ಫ್ರೀ ಇರೋ ಹೊತ್ತಿಗೆ ದಿನವೇ ಮುಗಿದು ಹೋಗಿರುತ್ತೆ. ಮೊದಲೆಲ್ಲ ಸರಳವಾಗಿದ್ದ ಇ-ಮೇಲ್ ಇಂಟರ್‌ಫೇಸುಗಳು ಈಗ ಇನ್ನಷ್ಟು ಸಂಕೀರ್ಣಗೊಂಡಿವೆ, ಮೊದಲೆಲ್ಲ ಡಿಸ್ಟಿಂಕ್ಟ್ ಆಗಿ ಸಿಗುತ್ತಿದ್ದ ವ್ಯವಸ್ಥೆಯ ಪರಿಕರಗಳೆಲ್ಲ ಒಂದಕ್ಕೊಂದು ಇಂಟೆಗ್ರೇಟ್ ಆದ ಮೇಲೆ ಇಷ್ಟೆಲ್ಲ ತಲೆ ನೋವು ಬಂದಿದ್ದು ಅನ್ನೋದು ನನ್ನ ಅಂಬೋಣ.

ಕಳೆದ ನಾಲ್ಕು ವಾರಗಳಿಂದ ಅವರ ಕಾಲ್ ಹಿಡಿದು ಇವರ ಕೈ ಹಿಡಿದು ಆಫೀಸಿನಲ್ಲಿ ಪರ್‌ಚೇಸ್ ಆರ್ಡರ್ ಒಂದನ್ನು ಇನ್ನೇನು ಕೊನೆಯ ಹಂತದವರೆಗೆ ತಂದೆ, ಮೇಲಿನವರ ಅಪ್ರೂವಲ್ ಸಿಕ್ಕೇ ಬಿಟ್ಟಿತು ಎಂದು ಮೀಸೇ ಮೇಲೆ ಕೈ ಹಾಕಿ ನಗುವನ್ನು ತಂದುಕೊಂಡಿದ್ದೇ ಬಂತು, ಅಪ್ರೂವ್ ಮಾಡುವವರು ಅಪ್ರೂವ್ ಮಾಡುವ ಸಿಸ್ಟಮ್‌ಗೆ ಲಾಗ್ ಇನ್ ಮಾಡಲು ಹೋದರೆ ಅಲ್ಲಿ ಬ್ಯಾಕ್ ಎಂಡಿನಲ್ಲಿ ಮೈಕ್ರೋ ಸಾಫ್ಟ್‌ನವರ ಸರ್ವರ್ ಮುಷ್ಕರ ಹೂಡಿ ಕುಳಿತುಕೊಂಡಿದೆ. ಸಾಯಂಕಾಲ ಎಷ್ಟೊತ್ತು ಕಾದರೂ ಸರ್ವರ್ ಎದ್ದು ಬರುವಂತೆ ಕಾಣಲಿಲ್ಲ, ನಾಳೆ ಈ ಅಪ್ರೂವ್ ಮಾಡುವ ಮನುಷ್ಯ ಬೇರೆ ಆಫೀಸಿನಲ್ಲಿ ಇಲ್ಲ, ಅವನು ಇನ್ಯಾವನಿಗೆ ಹೀಗೆ ಮಾಡು ಹಾಗೆ ಮಾಡು ಎಂದು ಹೇಳಿ, ಹೇಳಿಸಿಕೊಂಡವನು ನನ್ನ ಅನುಕೂಲಕ್ಕೆ ಸ್ಪಂದಿಸಿ ’ಅಪ್ರೂವ್ ಆಯ್ತು’ ಎಂದು ಬಟನ್ ಒತ್ತುವಷ್ಟರಲ್ಲಿ ನನ್ನ ತಲೆ ಕೂದಲೆಲ್ಲ ಬೆಳ್ಳಗಾಗದಿದ್ದರೆ ಸಾಕು. ಒಂದೊಂದು ಸರ್ವರ್ರುಗಳು ಅಂದ್ರೆ ಅದೆಷ್ಟು ಪವರ್ ಇರುವ ಮೆಷಿನುಗಳು, ಅಂಥವು ದಿನಕ್ಕೊಂದಲ್ಲ ಒಂದು ಔಟ್ ಆಗುತ್ತಲೇ ಇರುತ್ತವೆ, ಅದನ್ನ ಅಡ್ಮಿನಿಶ್ಟ್ರೇಷನ್ನವರು ಬೌನ್ಸ್ ಮಾಡಿ ಮತ್ತೆ ಜೀವ ಕೊಡುತ್ತಲೇ ಇರುತ್ತಾರೆ. ಹೀಗೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲ ಕ್ಲೈಂಟು-ಸರ್ವರುಗಳ ಕೈಂಕರ್ಯಕ್ಕೆ ಅದೆಷ್ಟು ಹೊಂದಿಕೊಂಡಿವೆ ಅಂದರೆ ಇನ್ನೊಂದು ಕೆಲವು ವರ್ಷಗಳಲ್ಲಿ ಸಾಯೋರಿಗೂ ಪರ್ಮಿಷನ್ನ್ ಸಿಗುವ ಹಾಗೆ ಮಾಡುತ್ತವೆ ಈ ಸರ್ವರುಗಳು ನೋಡ್ತಾ ಇರಿ.

ಐದೇ ಐದು ನಿಮಿಷ ಅಂತ ಯಾರೂ ಹೇಳೋದಿಲ್ಲ ಬಿಡಿ...’ಒಂದು ನಿಮಿಷ ಬಂದೇ ಬಿಟ್ಟೇ!’ ಅಂತಾರೆ, ಆದರೆ ಘಂಟೆಗಟ್ಟಲೆ ಆದ್ರೂ ತಮ್ಮ ಪ್ರಪಂಚದಿಂದ ಹೊರಗೆ ಬರೋದಿಲ್ಲ. ಒಂದು ನಿಮಿಷ, ಒಂದು ಸೆಕೆಂಡು ಅನ್ನೋ ಮಾತುಗಳು ಔಪಚಾರಿಕ ಮಾತುಕಥೆಗಳಾಗಿವೆ ಅಷ್ಟೇ. ನಾವೆಲ್ಲ ’ಒಂದ್ ಸೆಕೆಂಡ್’ ಅನ್ನೋದನ್ನ ಯಾರಾದ್ರೂ ಬೇರೆ ಗ್ರಹದ ಪ್ರಾಣಿಪಕ್ಷಿಗಳು ಕೇಳಿಕೊಂಡವು ಅಂತಂದ್ರೆ ಅವರ ಹೃದಯ ನಿಂತು ಹೋಗೋದು ಗ್ಯಾರಂಟಿ - ಅದೇನು ಒಂದು ಸೆಕೆಂಡಿನಲ್ಲಿ ಅದೇನೇನೆಲ್ಲ ಮಾಡ್ತಾರಲ್ಲ ಅಂತ. ನಮ್ಮ ಒಂದೊಂದು ಸೆಕೆಂಡುಗಳು ’ಬ್ರಹ್ಮ ಶೌಚ’ದ ಯೂನಿಟ್‌ನಲ್ಲಿವೆ ಅನ್ನೋದು ಅವರಿಗೇನು ಗೊತ್ತು?

ಯಾವ್ದೇ ಮ್ಯಾಪ್ ಅಪ್‌ಲೋಡ್ ಮಾಡಿ, ಯಾವ್ದೇ ಇ-ಮೇಲ್ ಕ್ಲೈಂಟ್ ಹೊರಗೆ ತನ್ನಿ, ಯಾವ್ದೇ ವೆಬ್‌ ಪೇಜ್ ಮೇಲೆ ಕಣ್ಣಾಡಿಸಿ - ಅದು ನಿಧಾನವಾಗಿ ಲೋಡ್ ಆಗುತ್ತಿದ್ದರೆ ನಿಮ್ಮ ಇಂಟರ್ನೆಟ್ ಕನೆಕ್ಷನ್ನನ್ನೋ ಅಥವಾ ಹಳೆಯ-ಹೊಸ ಕಂಪ್ಯೂಟರನ್ನ ನೀವು ಬೈದುಕೊಳ್ಳೋ ಸನ್ನಿವೇಶ ಬಂದೇ ಬರುತ್ತೆ. ’ಕನ್ನಡಪ್ರಭ’, ’ಪ್ರಜಾವಾಣಿ’ ಅಂಥ ವೆಬ್‌ಸೈಟ್‌ಗಳು ASP ತಂತ್ರಜ್ಞಾನವನ್ನು ಮೊರೆಹೊಕ್ಕರು, ಅವರಿಗೆಲ್ಲ ಅದರಿಂದ ಏನೇನು ಅನುಕೂಲವಾಗಿದೆಯೋ ಬಿಟ್ಟಿದೆಯೋ User friendliness ಮಾತ್ರ ಮಾಯವಾಗಿ ಬಿಟ್ಟಿದೆ. ಹನ್ನೊಂದು ವರ್ಷದ ಹಿಂದೆ ನನ್ನ ಪೆಂಟಿಯಮ್ 166 MHz ಕಂಪ್ಯೂಟರಿನಲ್ಲಿ 56 Mbps ಡಯಲ್ ಅಪ್ ಕನೆಕ್ಷನ್ನ್ ನಲ್ಲಿ ನನಗೆ ವೆಬ್‌ಸೈಟ್ ಓದುವಾಗ ಸಿಗುತ್ತಿದ್ದ ಫ್ರೀಡಮ್ ಈಗ ಕಡಿಮೆ ಆಗಿದೆ. ಆಗೆಲ್ಲ HTML ಪುಟಗಳಲ್ಲಿ ಆಡ್ರಸ್ ಬಾರ್ ನಲ್ಲಿ ಯಾವ ಯಾವ ದಿನದ ಪತ್ರಿಕೆಗಳ ದಿನಾಂಕಗಳನ್ನೆಲ್ಲ ಹಾಕಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದ್ರೂ ನೇವಿಗೇಟ್ ಮಾಡುತ್ತಿದ್ದ ನನಗೆ ಇಂದಿನ ASP ಯುಗದಲ್ಲಿ ದಿಕ್ಕೇ ತೋಚದ ಹಾಗಾಗುತ್ತೆ ಎಷ್ಟೋ ಸಲ. ಅದೂ ಅಲ್ದೇ ಯಾವ್ದಾದ್ರೂ ಫ್ಲಾಶ್ ಇರೋ ಪುಟಕ್ಕೆ ಹೋದ್ರಂತೂ ಆ ಪುಟದಲ್ಲಿ ಉಪಯೋಗಿಸಿರೋ ಫ್ಲ್ಯಾಶ್ ವರ್ಶನ್ ನನ್ನ ಹತ್ರ ಇರೋಲ್ಲ, ಅವರ ಪುಟಗಳನ್ನು ನೋಡೋಕೆ ಮತ್ತೊಂದೇನನ್ನ ಇನ್ಸ್ಟಾಲ್ ಮಾಡೂ ಅಂತಾನೆ, ಅವನು ಹೇಳಿದ್ದನ್ನ ಕೇಳಿದ್ರೆ ಇನ್ನೊಬ್ರ ಪುಟ ಮತ್ತೆನ್ನೆಲ್ಲೋ ಸರಿಯಾಗಿ ಲೋಡ್ ಆಗಲ್ಲ, ಬ್ಯಾಕ್‌ವರ್ಡ್ ಕಂಪ್ಯಾಟಿಬಿಲಿಟಿ ಇದ್ರೆ ಫಾರ್‌ವರ್ಡ್ ಇರಲ್ಲ, ಇವನನ್ನ ಓಲೈಸಿದ್ರೆ ಮತ್ತೊಬ್ಬನಿಗೆ ಸಿಟ್ಟು ಬರುತ್ತೆ ಅನ್ನೋ ಹಾಗೆ.

ಇವತ್ತೆಲ್ಲ 3-4 GB RAM ಇರೋ ಲ್ಯಾಪ್ ಟಾಪ್‌ಗಳೇ ಸಿಕ್ತಾವೆ, ಅವೇ ಹಲ್ಲು ಕಿರಿದು ನಿಲ್ಲೋ ಜನರ ಫೋಟೋ ಹೊಡೆಯೋಕೆ ಹದಿನೈದ್ ಪಿಕ್ಸೆಲ್ ವರೆಗಿನ ಕ್ಯಾಮರಾಗಳು ಬಂದಿರಬಹುದು. ಒಂದೊಂದು ಫೋಟೋ ಸೈಜೂ ಹತ್ತು MB ಆಗುತ್ತೋ ಏನೋ, ಅವನ್ನ ಸ್ಟೋರ್ ಮಾಡೋಕೆ, ಕಳಿಸೋಕೆ, ಬಳಸೋಕೆ ಹೆಚ್ಚು ಹೆಚ್ಚು ಜಾಗ ಬೇಕು, ಮೆಮರಿ ಬೇಕು - ಎಲ್ಲಿಂದ ತರಾಣಾ? ಹೊಸ ಕ್ಯಾಮರ ಕೊಂಡ್ರೆ ಹೊಸ ಕಂಪ್ಯೂಟರ್ ಬೇಕು ಅಂತ ಆಗುತ್ತೆ, ಹೊಸ ಕಂಪ್ಯೂಟರ್ ಕೊಂಡ್ರೆ ಹೊಸ ಸಾಫ್ಟ್‌ವೇರ್ ಬೇಕು ಅಂತ ಆಗುತ್ತೆ, ಹೊಸ ಸಾಫ್ಟ್‌ವೇರ್ ಸಿಕ್ರೆ ನಮಗೆ ಬೇಕಾದ್ದ್ ಎಲ್ಲ ಇರಲ್ಲ, ಇದೂ ಅದೆಲ್ಲೆಲ್ಲೋ ಹುದುಗಿಸಿ ಇಡ್ತಾರೆ - ಹೊಸದರ ಜೊತೆಗೆ ಹಳೆಯದು ಕೆಲ್ಸಾ ಮಾಡಲ್ಲ...ಹೀಗೆ ಇದರ ಪಟ್ಟಿ ಇಲ್ಲಿಗೆ ನಿಲ್ಲದೆ ಮುಂದೆ ಬೆಳಿಯುತ್ಲೇ ಇರುತ್ತೆ. ನಾನು ಇವತ್ತೇ ಹೋಗಿ ಸ್ಯಾಮ್ಸ್ ಕ್ಲಬ್ಬಿನಿಂದ ಏಳ್‌ನೂರ್ ಡಾಲರ್ ಕೊಟ್ಟು ಹೊಸ ಕಂಪ್ಯೂಟರ್ ತಂದು ಬಿಸಾಕೇನು, ಅದನ್ನ ಸಂಪೂರ್ಣವಾಗಿ ಕಷ್ಟಮೈಜ್ ಮಾಡಿ ನನಗೆ ಬೇಕಾದ್ದನ್ನೆಲ್ಲ ಇನ್ಸ್ಟಾಲ್ ಮಾಡಿ ರನ್ ಮಾಡೋ ಅಷ್ಟೊತ್ತಿಗೆ ನನ್ನ ಒಂದು ದಶಕದ ಆಯಸ್ಸೇ ಮುಗಿದು ಹೋಗುತ್ತೆ, ಅಷ್ಟೊತ್ತಿಗೆ ಆ ಕಂಪ್ಯೂಟರ್ರೇ ಹಳೆಯದಾಗಿರುತ್ತೆ. ಇವುಗಳ ಮುಂದೆ ಯಾವತ್ತೂ ಗೆಲ್ಲೋಕೇ ಆಗಲ್ಲ ಅನ್ಸಲ್ವಾ?

ನಮ್ ಜೀವ್ನಾ ಎಲ್ಲಾ ಐದೇ ಐದ್ ನಿಮಿಷ ಅಂದು ಒಂದೊಂದು ಘಂಟೆ ಸವೆಸೋದ್ರಲ್ಲೇ ಆಗ್ ಹೋಯ್ತು, ಇನ್ನು ಮುಂದಿನ ಜನರೇಷಿನ್ನಿನ ಕಥೆ ದೇವ್ರೇ ಕಾಪಾಡ್ ಬೇಕು.

ನಾವು ಸಾಮಾನ್ಯರು, ನಮಗೆ ಹೆಚ್ಗೆ ಪವರ್ ಬೇಡಾ, ಇವತ್ತು ಸಾವಿರ ಡಾಲರ್ ಕೊಟ್ಟು ತಂದ ಕಾರು ಇನೈದು ವರ್ಷ ಬಿಟ್ರೂ ಇವತ್ತಿನ ಹಾಗೇ ಓಡಾಡೋಲ್ವೇ ಅದೇ ಥರ ಈ ಕಂಪ್ಯೂಟರಿಗೊಂದು ಹೊಸ ಇಕ್ವೇಷನ್ನ್ ತಂದು, ’ಇಲ್ಲಿಗೆ ಸಾಕು, ಶಿವಾ’ ಅನ್ನೋ ಒಂದು ಕಾನ್‌ಫಿಗರೇಷನ್ನಿಗೆ ನಿಲ್ಲಿಸಿಬಿಡಿ, ಅಷ್ಟೇ ಸಾಕು. ಜಗತ್ತಿನ ಒಂದೊಂದು ಇಂಚನ್ನೂ IP ಅಡ್ರಸ್ಸುಗಳಿಂದ ಅಳೀತೀವಿ ಅನ್ನೋ ಜನರಿಗೆ ಯಾವನೋ ಎಲ್ಲೋ ಬರೆದ ಕಂಪ್ಯೂಟರ್ ವೈರಸ್ಸುಗಳನ್ನು ಕಂಡು ಹಿಡಿಯೋದ್ ಕಷ್ಟಾನೇ? ಹಾಗೆ ವೈರಸ್ಸುಗಳನ್ನು ಬರೆದು ಜನರನ್ನು ಹಿಂಸಿಸೋರನ್ನ ಪಬ್ಲಿಕ್‌ನಲ್ಲಿ ಕಲ್ ತಗೊಂಡ್ ಹೊಡೀರಿ ಅವಾಗ್ಲಾದ್ರೂ ಜನರಿಗ್ ಬುದ್ಧಿ ಬರುತ್ತೋ ಏನೋ. ನಮ್ಮ್ ನಮ್ಮ್ ಇ-ಮೇಲ್ ನೋಡ್ಕೊಂಡು ಜೀವ್ನಾ ಸಾಗ್ಸದೇ ಕಷ್ಟಾ ಅನ್ಸಿರುವಾಗ ಅದ್ಯಾವನಿಗೆ ಅದೆಲ್ಲಿಂದ ವೈರಸ್ ಬರೆಯೋಕ್ ಟೈಮ್ ಸಿಗುತ್ತೋ ಯಾರಿಗ್ ಗೊತ್ತು?

Thursday, May 01, 2008

ಮೊದಲು ಅಪ್ಪ-ಅಮ್ಮನಿಗೆ ಬುದ್ಧಿ ಹೇಳಿ!

ಬ್ರೂ ಕಾಫಿ ಸ್ವಾದ-ತಾಜಾತನದ ಬಗ್ಗೆ ಒಂದು ಕಮರ್ಷಿಯಲ್ ಅಡ್ವರ್‌ಟೈಸ್‌ಮೆಂಟು ಉದಯ ಟಿವಿಯಲ್ಲಿ ಬರುತ್ತೆ, ಅದರಲ್ಲಿ ನವದಂಪತಿಗಳನ್ನು ಅವರ ಮನೆಯಲ್ಲಿ ಸಂದರ್ಶಿಸಲೆಂದು ಹತ್ತಿರದ ಸಂಬಂಧಿಕರು ಬಂದಿರುತ್ತಾರೆ, ಆಧುನಿಕ ಉಡುಪಿನಲ್ಲಿರುವ ಯುವತಿ ಮನೆಯನ್ನು ಕಿಟಕಿಯಿಂದಲೇ ಪ್ರವೇಶ ಮಾಡಿ ಮನೆಗೆ ಬಂದವರ ಸಮಾಧಾನಕ್ಕೆ ಹಾಗೂ ಅವರಿಗೆ ಆಶ್ಚರ್ಯವಾಗುವಂತೆ ಕೂಡಲೇ ಟ್ರೆಡಿಷನಲ್ ಡ್ರೆಸ್‌ಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದನ್ನು ತೋರಿಸುತ್ತಾರೆ. ಕೈ ಯಲ್ಲಿ ಕಾಫಿ ಕಪ್ ಹಿಡಿದುಕೊಂಡು ಬರುವುದು ಅದರ ಜೊತೆಗೆ ಸೇರಿರುತ್ತೆ. ಆ ವಿಡಿಯೋ ತುಣುಕಿನ ಸಂದೇಶವೇನೇ ಇರಲಿ, ದೂರದ ನನಗೆ ನಮ್ಮ ದೇಶದಲ್ಲಿನ ಗೊಂದಲ ಒಡನೆಯೇ ನೆನೆಪಿಗೆ ಬಂತು. ಅದೇ ನಮ್ಮಲ್ಲಿನ ಜನರೇಶನ್ ಗ್ಯಾಪ್.

ಇಂದಿನ ಕಾಲದಲ್ಲಿ ಹೈ ಸ್ಕೂಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರವನ್ನು ಶಾಲೆಯ ಆವರಣದಲ್ಲಿ ಮಾತ್ರ ಹಾಕಿಕೊಳ್ಳುವುದು ಸಾಮಾನ್ಯ ನೋಟ. ಶಾಲೆ-ಕಾಲೇಜಿನವರೆಗೆ ತಮ್ಮ ದಿನನಿತ್ಯದ ಡ್ರೆಸ್‌ಗಳಲ್ಲಿ ಬಂದು, ಶಾಲೆಯು ಹತ್ತಿರ ಬಂದಾಗ ಸಮವಸ್ತ್ರವನ್ನು ಧರಿಸಿಕೊಳ್ಳುವುದು ಬೆಳಗ್ಗಿನಿಂದ ಸಂಜೆವರೆಗೆ ಹೈ ಸ್ಕೂಲು ಸಮವಸ್ತ್ರವನ್ನೇ ಧರಿಸಿ ತಿರುಗಾಡುತ್ತಿದ್ದ ನಮಗೆ ವಿಶೇಷವಾಗಿ ಕಾಣಿಸುವುದರಲ್ಲಿ ತಪ್ಪೇನು ಇಲ್ಲ.

***

ಹಿಂದಿನ ಸಂಬಂಧ-ಸೂಕ್ಷ್ಮತೆ ಲೇಖನ ಬರೆದ ಮೇಲೆ ಆ ಕುರಿತು ಮತ್ತಿನ್ನಷ್ಟು ಆಲೋಚಿಸಲಾಗಿ ಈ ನಡುವೆ ಕುಟುಂಬಗಳಲ್ಲಿ ಅಸಮಧಾನ ಏಕೆ ಹೊಗೆ ಆಡುತ್ತದೆ ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಕ್ಕ ಹಾಗಿದೆ. ಅದರಲ್ಲಿ ಪ್ರತಿಯೊಬ್ಬರೂ ಅವರವರ ತಂದೆ-ತಾಯಿ ಬಂಧು ಬಳಗದವರನ್ನು ಅದೆಷ್ಟರ ಮಟ್ಟಿಗೆ ತಿಳುವಳಿಕೆ ಹೇಳಿಕೊಡುತ್ತಾರೆ ಅದರ ಮೇಲೂ ಬಹಳಷ್ಟು ನಿರ್ಧರಿತವಾಗುತ್ತದೆ. ಈ ಕೆಳಗಿನ ನಿದರ್ಶನಗಳನ್ನು ಪರಿಶೀಲಿಸಿ ನೋಡಿ:

೧) ಇತ್ತೀಚಿನ ಚಿಕ್ಕ (nuclear) ಕುಟುಂಬಗಳಲ್ಲಿ ಗಂಡ-ಹೆಂಡತಿಯರು ತಮ್ಮ ತಮ್ಮಲ್ಲಿ ಏಕವಚನದಲ್ಲೇ ಸಂಭಾಷಣೆ ನಡೆಸುತ್ತಾರೆ.
೨) ಡಬಲ್ ಇನ್‌ಕಮ್ ಇರುವ ಕುಟುಂಬಗಳಲ್ಲಿ ಗಂಡ-ಹೆಂಡತಿಯ ಸಂಬಳದಲ್ಲಿ ಹೆಚ್ಚು ವ್ಯತ್ಯಾಸವಿರಬೇಕಿಲ್ಲ, ಹೆಂಡತಿಗೆ ಗಂಡನಿಗಿಂತ ಹೆಚ್ಚು ಸಂಬಳಬರುವ ಸಾಧ್ಯತೆಗಳೂ ಇವೆ.
೩) ಗಂಡ-ಹೆಂಡತಿಯರ ವಯಸ್ಸಿನಲ್ಲಿ ಹೆಚ್ಚಿನ ಅಂತರವಿರಬೇಕೆಂದೇನಿಲ್ಲ ಜೊತೆಗೆ ಅವರ ವಿದ್ಯಾರ್ಹತೆಯೂ ಒಂದೇ ಮಟ್ಟದಲ್ಲಿರಬಹುದು.

ಪ್ರತಿಯೊಂದು ಕುಟುಂಬದಲ್ಲಿಯೂ ಈ ಹೌಸ್‌ಹೋಲ್ಡ್ ಕಾಯಕಗಳು ಸಹಜವಾದವುಗಳು: ಅವೇ - ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆದು-ಒಣಗಿಸಿ-ಮಡಚಿಡುವುದು, ಮಕ್ಕಳಿದ್ದರೆ ಅವರ ಹೋಮ್‌ವರ್ಕ್ ಊಟ-ಉಪಚಾರದಲ್ಲಿ ತೊಡಗುವುದು, ಅಗತ್ಯ ವಸ್ತುಗಳನ್ನು ಶಾಪಿಂಗ್ ಮಾಡುವುದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮ್ಯಾನೇಜ್ ಮಾಡುವುದು, ದಿನಕ್ಕೆರಡು ಬಾರಿಯಾದರೂ ಅಡಿಗೆ ಮನೆಯಲ್ಲಿನ ಕೆಲಸಗಳಿಗೆ (ಕುಕು, ಕ್ಲೀನ್, ಆರ್ಗನೈಜ್, ಇತ್ಯಾದಿ) ಆದ್ಯತೆ ಕೊಡುವುದು ಇತ್ಯಾದಿ. ಈ ಕೆಲಸಗಳು ಒಂದು ದಿನಕ್ಕೆ ಮಾತ್ರ ಬಂದು ಹೋಗುವಂಥದ್ದಲ್ಲ, ಇವುಗಳನ್ನು ಪ್ರತಿದಿನ, ಪ್ರತಿರಾತ್ರಿ ನಿರ್ವಹಿಸುತ್ತಲೇ ಇರಬೇಕು ಎಂಥ ಕುಟುಂಬವಾದರೂ. ದುಡ್ಡಿದ್ದವರು ಕೆಲಸದವರನ್ನು ನೇಮಿಸಿಕೊಂಡಿರಬಹುದು, ಆದರೆ ಕೆಲಸ ಮಾಡುವವರನ್ನು ನಿಭಾಯಿಸುವುದು ತಪ್ಪುವುದಿಲ್ಲ. ಅಂದರೆ ಮನೆ ಎಂದರೆ ಇಂತಿಷ್ಟು ಕೆಲಸಗಳು ಇದ್ದೇ ಇರುತ್ತವಾದ್ದರಿಂದ ಈ ಆಧುನಿಕ ಕುಟುಂಬಗಳ ಹೆಚ್ಚಿನ ಸಮಸ್ಯೆಯೇ ಈ ಕೆಲಸಗಳ ಹೂಡಿಕೆ-ಹಂಚಿಕೆಗಳಿಂದ ಎಂದರೆ ತಪ್ಪಾಗಲಾರದು. ಇಂಥದರ ನಡುವೆ ಅಥವಾ ಇಷ್ಟೆಲ್ಲಾ ಇದ್ದೂ, ಅದರ ಮೇಲೆ ಬರುವುದೇ "in-law" factor, ಅಥವಾ ಸಂಬಂಧಿಕರ ಉಪದ್ರವ! ದೂರದ ಅಮೇರಿಕೆಯಲ್ಲಿರುವ ನಮಗೆ ಸಂಬಂಧಿಕರಿಲ್ಲ ಎಂದು ಕೊರಗುವವರು ಒಂದು ಕಡೆ, ದಿನಕ್ಕೊಮ್ಮೆ ಒಬ್ಬರಲ್ಲ ಒಬ್ಬರು ಬರುತ್ತಾರಲ್ಲ ಎಂದು ಹಲಬುವ ಬೆಂಗಳೂರಿನ ದಂಪತಿಗಳು ಮತ್ತೊಂದು ಕಡೆ.

ಅದೇ "in-law" factor ಎಂದರೆ ತಮ್ಮ ಸಣ್ಣ ಕುಟುಂಬಕ್ಕೆ ಅವರವರ ತಂದೆ-ತಾಯಿಯರಿಂದಲೇ ಕಷ್ಟಗಳು ಬರುತ್ತವೆ ಎನ್ನುವ ಮಾತು. ಉದಾಹರಣೆಗೆ, ಗಂಡ-ಹೆಂಡತಿ ಇಬ್ಬರೂ ಸಮವಯಸ್ಕ, ಸಮಾನ ಅಭಿರುಚಿ, ಸಮಾನ ವಿದ್ಯಾರ್ಹತೆ, ಸಮಾನ ಕೆಲಸದಲ್ಲಿದ್ದಾರೆಂದುಕೊಳ್ಳೋಣ. ಹುಡುಗನ ತಂದೆ ತಾಯಿಯರು ಈ ನವದಂಪತಿಗಳಿರುವ ಗೂಡಿಗೆ ದೂರದ ಊರಿನಿಂದ ಬಂದರೆಂದುಕೊಂಡರೆ ಅಲ್ಲಿ ತನ್ನ ಅತ್ತೆ-ಮಾವಂದಿರ ಉಪಚಾರವನ್ನು ಈ ಹುಡುಗಿಯೇ ಕೈಗೊಳ್ಳಬೇಕೆ, ಅದು ಎಷ್ಟರ ಮಟ್ಟಿನ ನಿರೀಕ್ಷೆಯಾಗಿರಬೇಕು ಎನ್ನುವುದು ಒಳ್ಳೆಯ ಪ್ರಶ್ನೆ. ಅದೇ ಮನೆಗೆ ಹುಡುಗಿಯ ತಂದೆ-ತಾಯಿಯರು ಬಂದರೆಂದುಕೊಂಡರೆ ಹುಡುಗನಿಂದ ಅವರು ಏನೇನನ್ನು ನಿರೀಕ್ಷಿಸಬಹುದು? ನಮ್ಮ ಸಮಾಜ ಇನ್ನೂ ಪುರುಷ-ಪ್ರಧಾನವಾದುದು ಎನ್ನುವ ಉತ್ತರ ನಾವಂದುಕೊಂಡಷ್ಟು ಪ್ರಬಲವಾಗಿ ಇಲ್ಲಿ ಸಹಾಯ ಮಾಡೋದಿಲ್ಲ. ಆ ಮನೆಯ ಹುಡುಗಿಗೂ ತಕ್ಕ ಕೆಲಸ, ಡೆಡ್‌ಲೈನುಗಳು, ಜವಾಬ್ದಾರಿ ಮುಂತಾದವುಗಳೆಲ್ಲ ಇದ್ದಾಗ ತನ್ನ ತಂದೆ-ತಾಯಿಯರಿಗೆ ತನ್ನ ಕೈಯಾರೇ ತಾನೇ ಮಗ ಒಂದು ಕಪ್ ಕಾಫಿ ಮಾಡಿಕೊಟ್ಟ ಎಂದೇ ಇಟ್ಟುಕೊಳ್ಳಿ ಆ ತಂದೆ-ತಾಯಿ ಅದನ್ನು ನೋಡುವ ರೀತಿಯೇ ಬೇರೆ. ಕೆಲಸಕ್ಕೆ-ಸಂಬಳಕ್ಕೆ-ಸ್ಟೇಟಸ್ಸಿಗೆ ಮಾತ್ರ ಹೆಂಡತಿ ಎಂದುಕೊಂಡರೆ ಆದೀತೆ? ಇಂತಹ ಸಮಯದಲ್ಲೇ ನಾನು ಆ ಹುಡುಗ ತನ್ನ ತಂದೆ-ತಾಯಿಯರ ನಿರೀಕ್ಷೆಗೆ ತಕ್ಕ ಉತ್ತರಗಳನ್ನು ತಯಾರಿಸಿಟ್ಟುಕೊಳ್ಳಬೇಕು ಎನ್ನುವುದು. ಡಬಲ್ ಇನ್‌ಕಮ್ ಕುಟುಂಬಗಳಲ್ಲಿನ ಜವಾಬ್ದಾರಿಗಳು ತಕ್ಕಮಟ್ಟಿಗೆ ಡಿವೈಡ್ ಆಗಿ ಒಬ್ಬರಿಗೊಬ್ಬರು ಪೂರಕವಾಗಿ ನಡೆದುಕೊಳ್ಳುವುದೇ ಉತ್ತರ ಹೊರತು ಹೊರಗಿನ ಸಮಾಜಕ್ಕೆ (ತಮ್ಮ ತಂದೆ-ತಾಯಿ ಕುಟುಂಬದವರನ್ನೂ ಸೇರಿ) ತಕ್ಕಂತೆ ನಡೆಯುತ್ತೇವೆ ಎಂದುಕೊಳ್ಳುವುದು ತಮಗೆ ತಾವೇ ಮಾಡಿಕೊಳ್ಳುವ ಮೋಸವಲ್ಲದೇ ಮತ್ತೇನು?

ನಮ್ಮಲ್ಲಿ ಸಣ್ಣ-ಸಣ್ಣ ವಿಷಯಗಳೂ ದೊಡ್ಡದಾಗಿ ಬೆಳೆದುಕೊಳ್ಳಲು ಬೇಕಾದ ರೀತಿಯ ವಾತಾವರಣ ಇರುತ್ತೆ. ಈ ಉದಾಹರಣೆಯನ್ನು ನೋಡಿ: ನನಗೆ ಗೊತ್ತಿರುವ ಯುವ ದಂಪತಿಗಳು ತಮ್ಮ ತಮ್ಮನ್ನು ಏಕವಚನದಲ್ಲೇ ಸಂಬೋಧಿಸಿಕೊಳ್ಳೋದು - ಅಂದರೆ ಹೋಗೋ-ಬಾರೋ ಎಂಬ ರೀತಿಯಲ್ಲಿ. ಒಬ್ಬೊರಿಗೊಬ್ಬರು ಅನ್ಯೋನ್ಯವಾಗಿರುವ ಅವರು ತಮ್ಮನ್ನು ಪ್ರೀತಿಯಿಂದ ಈ ಸಂಬೋಧನೆಗೆ ಹೊಂದಿಸಿಕೊಂಡಿದ್ದಾರೆ ಅಷ್ಟೇ. ಅದೇ ದಂಪತಿಗಳು ದೂರದ ಭಾರತಕ್ಕೆ ಪ್ರಯಾಣ ಬೆಳೆಸಿದಾಗಲೂ ತಮ್ಮ ಸಂಬಂಧಿಕರ ನಡುವೆಯೂ ತಮ್ಮನ್ನು ಹೀಗೇ ಕರೆದುಕೊಳ್ಳುತ್ತಾರಷ್ಟೇ. ಅಕಸ್ಮಾತ್ ಅವರು ತಮ್ಮತಮ್ಮ ತಂದೆತಾಯಿಯರ ನಡುವೆ "ಏನ್ರೀ-ಬನ್ರೀ" ಪ್ರಯೋಗಕ್ಕೆ ತೊಡಗಿಕೊಂಡರೆಂದರೆ ಹೇಗಿರಬಹುದು? ನೆರೆಹೊರೆಗೆ ಹೊಂದಿಕೊಂಡಿರುವುದೋ ಅಥವಾ ತಮಗೆ ಬೇಕಂತೆ ನಡೆದುಕೊಳ್ಳುವುದೋ ಎನ್ನುವ ಪ್ರಶ್ನೆ ಬರುತ್ತದೆ. ನನ್ನ ಅನಿಸಿಕೆ ಪ್ರಕಾರ, ಯುವ-ದಂಪತಿಗಳು ಈ ನಿಟ್ಟಿನಲ್ಲೂ ತಮ್ಮ ಹಿರಿಯರಿಗೆ ತಿಳಿಹೇಳುವ ಅಗತ್ಯವಿದೆ.

***

ಮೊನ್ನೆ ಯಾರೋ ಹೇಳೋದನ್ನು ಕೇಳಿದೆ - ’ನಮ್ಮ ಮಗ ಅಮೇರಿಕಕ್ಕೆ ಇದಷ್ಟೇ ಬಂದಿದ್ದಾನೆ, ಅವನಿಗೊಂದು ಭಾರತೀಯ ಮೂಲದ ಅಮೇರಿಕನ್ ಸಂಜಾತೆಯೊಡನೆ ಮದುವೆ ನಿಶ್ಚಯವಾಗಿದೆ, ಆದರೆ ನಮ್ಮದು ಒಂದೇ ಒಂದು ಕಂಡೀಷನ್ ಎಂದರೆ ಇನ್ನೈದು ವರ್ಷಗಳ ನಂತರ ಅವರಿಬ್ಬರೂ ಪರ್ಮನೆಂಟ್ ಆಗಿ ಭಾರತಕ್ಕೆ ಹಿಂದಿರುಗಿಬಿಡಬೇಕು!’. ನನ್ನ ಮನಸ್ಸಿನಲ್ಲಿ, ’ಏಕೆ?’ ಎನ್ನುವ ಪ್ರಶ್ನೆ ಬಂದು ಹಾಗೇ ಉಳಿದುಹೋಯಿತು.

ನಮಗೆಲ್ಲ ೨೪ ವರ್ಷವಾಗುವವರೆಗೆ ಫುಲ್‌ಟೈಮ್ ಓದಿಸುವವರೆಗೆ ನಮ್ಮ ನಮ್ಮ ಪೋಷಕರು ಸಹಾಯ ಮಾಡಿದ್ದಾರೆ ನಿಜ. ನಮಗೆಲ್ಲ ಜಾತಿ-ಜಾತಕಗಳ ಬಂಧನಕ್ಕೆಳೆದು ಅವರ ಮನಸ್ಸಿಗೆ ಸಮಾಧಾನವಾಗುವಂತೆ ವಿವಾಹ ಮಾಡಿದ್ದಾರೆ ನಿಜ. ಇದೇ ಪೋಷಣೆ ಸಾಯುವವರೆಗೂ ನಮ್ಮನ್ನು ಕಾಯಬೇಕೇಕೆ? ನಮ್ಮ ಪೋಷಕರು ನೋಡಿರದ ಅಮೇರಿಕಕ್ಕೆ ನಾವು ಬಂದಿರೋದು, ಇನೈದು ಹತ್ತು ಇಪ್ಪತ್ತು ವರ್ಷಗಳಲ್ಲಿ ಈ ಹುಡುಗ-ಹುಡುಗಿಯ ಪ್ರಬುದ್ಧತೆ ಬದಲಾಗುತ್ತೆ, ಅವರಿಗೂ ಒಂದು ಕುಟುಂಬವಿರುತ್ತೆ, ಮೇಲಾಗಿ ಜವಾಬ್ದಾರಿ ಇರುತ್ತೆ, ಅದರ ನಡುವೆ ಇನ್ನೈದು ವರ್ಷಗಳಲ್ಲಿ ’ಭಾರತಕ್ಕೆ ಹಿಂತಿರುಗಿ’ ಎಂದು ಆಜ್ಞೆ ಮಾಡಲು ಇವರ ಹಿನ್ನೆಲೆ ಏನಿರಬಹುದು? ಸರಿ, ಆ ಅಮೇರಿಕನ್ ಸಂಜಾತೆ ಹೆಣ್ಣಿಗೆ ಇವರ ಬಾಯಿ ನೀರೂರುವ ಇಡ್ಲಿ-ದೋಸೆಯನ್ನು ಮಾಡಲು ಬಾರದಿದ್ದರೆ ಅದು ಆಕೆಯ ತಪ್ಪೇ? ನಮ್ಮಲ್ಲಿ ಒಂದು ಗಾದೆ ಮಾತಿದೆ, ಅಕ್ಕನೂ ಉಳಿಯಲಿ ಅಕ್ಕಿಯೂ ಉಳಿಯಲಿ ಎಂದರಾಗದು. ಅತ್ತೆ-ಮಾವಂದಿರನ್ನು ಮೆಚ್ಚಿಸಿಕೊಂಡು ಗಂಡನ ಸಮಸಮಕ್ಕೆ ಕೆಲಸವನ್ನೂ ಮಾಡಿಕೊಂಡು ಮನೆಯಲ್ಲಿ ಮತ್ತೆ ಹೊರಗೆ "ತಗ್ಗಿ-ಬಗ್ಗಿ" ನಡೆಯುವ ನಿರೀಕ್ಷೆಯನ್ನು ಪ್ರತಿಯೊಬ್ಬರೂ ಇಟ್ಟುಕೊಂಡರಾದರೆ ಅದು ಅನಿರೀಕ್ಷಿತ ಪ್ರತಿಫಲವನ್ನು ತಂದುಕೊಡಬಹುದು.

ಇಷ್ಟೇ ಅಲ್ಲದೆ, ಹಣ ಕಾಸಿನ ದೃಷ್ಟಿಯಿಂದಲೂ ಬೇಕಾದಷ್ಟು ಸಂಕಷ್ಟಗಳು ಬಂದೊದಗುವುದು ಸಹಜ. ತಮ್ಮ ಮಗ ತಮ್ಮನ್ನು ಇಳಿವಯಸ್ಸಿನಲ್ಲಿ ಸಲಹಲಿ ಎಂದು ಆಶಿಸುವ ಅಪ್ಪ-ಅಮ್ಮ ಅದೇ ರೀತಿ ತಮ್ಮ ಮನೆಯ ಸೊಸೆಗೂ ಹಾಗೇ ಜವಾಬ್ದಾರಿ ಇರಬಹುದು ಎನ್ನುವುದನ್ನು ನೋಡಲಾರರೇಕೆ? ತನ್ನ ತಂದೆಯ ಆಸ್ತಿಯಲ್ಲಿ ತನ್ನ ಸಹೋದರರ ಸಮಸಮಕ್ಕೆ ಪಾಲು ಕೇಳುವಂತೆ ಕಾನೂನೇ ಇದ್ದಾಗ ಗಂಡು ಮಕ್ಕಳ ಸಮಕ್ಕೆ ಹೆಣ್ಣು ಮಕ್ಕಳೂ ಅವರರವರ ಹೆತ್ತವರನ್ನು ನೋಡಿಕೊಂಡರೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಎನ್ನುವ ಗಾದೆ ಮಾತಿನ ಮೊರೆ ಏಕೆ ಹೋಗಬೇಕು?

ಹೀಗೆ...ಈ ವಿಷಯವನ್ನು ಕುರಿತು ಬೇಕಾದಷ್ಟು ಬರೆಯಬಹುದು, ಈ ಸಮಯದಲ್ಲಿ ಅವರವರ ತಂದೆ-ತಾಯಿಯರಿಗೆ ಮನ ಒಲಿಸುವ ತಿಳಿಸಿ ಹೇಳುವ ಅಗತ್ಯ ಇದೆ ಎಂದೆನಿಸಿದ್ದು ಈ ಹೊತ್ತಿನ ತತ್ವಗಳಲ್ಲೊಂದು!

Sunday, April 27, 2008

ನಮ್ಮ ನಡುವಿನ ಸಂಬಂಧ-ಸೂಕ್ಷ್ಮತೆ

ನನ್ನ ಸ್ನೇಹಿತ, ಸಹೋದ್ಯೋಗಿಯಾಗಿದ್ದವನು ಇಂದು ಕರೆ ಮಾಡಿ ಏನೋ ಹೊಸ ಸುದ್ದಿಯನ್ನು ಹೇಳುತ್ತಾನೆ ಅಂದುಕೊಂಡರೆ ನನಗೆ ಖಂಡಿತವಾಗಿ ಆಶ್ಚರ್ಯ ಕಾದಿತ್ತು. ಆತನ ಮಾತನ್ನು ಕೇಳಿದ ಮೇಲೆ ಮಾನವ ಸಂಬಂಧಗಳನ್ನು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುವಂತೆ ಆಗಿದ್ದು ನಿಜ. ಒಮ್ಮೆ ಆ ಮಟ್ಟಿಗಿನ ವೈರಾಗ್ಯ ನನ್ನನ್ನು ಹಾಗೆ ಆಲೋಚಿಸುವಂತೆ ಸ್ಪೂರ್ತಿ ನೀಡಿದ್ದಿರಬಹುದು, ಅಥವಾ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕಿಸುವ ನನ್ನ ರೀತಿ ಹಾಗೆಯೇ ಇರಬಹುದು.

ಈಗ್ಗೆ ಕಳೆದ ಹದಿನಾರು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿ ಕಳೆದು ಹನ್ನೊಂದು ವರ್ಷಗಳ ವೈವಾಹಿಕ ಜೀವನದಲ್ಲಿ ಮುದ್ದಾದ ಎರಡು ಮಕ್ಕಳನ್ನು ಪಡೆದ ನನ್ನ ಸ್ನೇಹಿತನ ಬದುಕು ಗಂಭೀರವಾಗಿದೆಯಂತೆ. ಆತನ ಹೆಂಡತಿ ಇದ್ದಕ್ಕಿದ್ದಂತೆ ಕಳೆದೊಂದು ವಾರದಲ್ಲಿ ಮಾತಿಗೆ ಮಾತು ಬೆಳೆಸಿ ತನ್ನ ಮಕ್ಕಳನ್ನು ಕರೆದುಕೊಂಡು ಇನ್ನೊಮ್ಮೆ ಬರುವುದಿಲ್ಲ ಎಂದುಕೊಂಡು ಒನ್ ವೇ ಟಿಕೇಟ್ ತೆಗೆದುಕೊಂಡು ಹೋಗಿದ್ದಾಳಂತೆ. ಮೊದಲಿನಿಂದಲೂ ಎರಡೂ ಮನೆಯವರಿಗೂ ಸಂಬಂಧಗಳಲ್ಲಿ ಅಷ್ಟೊಂದು ವಿಶ್ವಾಸವಿರಲಿಲ್ಲವೆಂದೂ ಯಾವಾಗಲೂ ಗಂಡ-ಹೆಂಡತಿಯರ ನಡುವೆ ಜಗಳವಿತ್ತೆಂದೂ, ಎಷ್ಟೋ ಸಾರಿ ಜಗಳ ತಾರಕಕ್ಕೇರಿ ವಿಚ್ಛೇದನದ ಮಾತಿನವರೆಗೂ ಹೋಗಿದೆ ಎಂದು ತಿಳಿದು ನನಗಂತೂ ಏನೂ ಹೇಳಲು ತೋಚದಂತಾಯಿತು.

***

ಇಂದಿನ ಯುಗದಲ್ಲಿ ನಮ್ಮ ನಮ್ಮ ನಡುವಿನ ಕಮ್ಮ್ಯುನಿಕೇಷನ್‌ಗೆ ಆದ್ಯತೆ ಕೊಡುವ ಕಾಲ, ನಮ್ಮ ಅಂತರಾಳದ ಸಂವಹನಕ್ಕೆ ಬೇಕಾದ ಸೂತ್ರಗಳಿವೆ, ಉಪಕರಣಗಳಿವೆ. ಹೀಗೆಲ್ಲ ಇರುವಾಗಲೇ ನಾನು ಗಂಡ-ಹೆಂಡತಿ ನಡುವೆ ಆಗಿ ಹೋಗದ ಮಾತುಗಳನ್ನೋ ಅಥವಾ ಹೆಚ್ಚು ವಿಚ್ಛೇದನದ ವಿಷಯವನ್ನೋ ಅಲ್ಲಲ್ಲಿ ಸುದ್ಧಿ-ವಿಚಾರವಾಗಿ ಕೇಳೋದೇ ಹೆಚ್ಚು. ಅಂದರೆ ಹಿಂದಿನ ಕಾಲದವರು ಕಷ್ಟವೋ-ಸುಖವೋ ಹೊಂದಿಕೊಂಡಿರುತ್ತಿದ್ದರೋ ಅಥವಾ ಅವರ ರಾದ್ಧಾಂತಗಳು ಹೊರಗೆ ಬರುತ್ತಿರಲಿಲ್ಲವೋ, ಅಥವಾ ಇಂದಿನವರ ಸವಾಲಿಗೂ ಅಂದಿನವರ ಸವಾಲಿಗೂ ವ್ಯತ್ಯಾಸವಿದೆಯೋ, ಅಥವಾ ಇವೆಲ್ಲ ನಿಜವೋ ಎನ್ನುವ ಆಲೋಚನೆ ಸಹಜವಾಗೇ ಬರುತ್ತದೆ. ಅದೂ ಇತ್ತೀಚಿನ ಗಂಡ-ಹೆಂಡತಿ ಇಬ್ಬರೂ ದುಡಿದು ಬರುವ ನ್ಯೂಕ್ಲಿಯರ್ ಕುಟುಂಬಗಳಲ್ಲಿ ಮಕ್ಕಳಿರಲಿ ಬಿಡಲಿ ಮನೆಯ ಹಿರಿಯ ಅಥವಾ ಯಜಮಾನರಾಗಿ ಅವರೇ ಎಲ್ಲ ಜವಾಬ್ದಾರಿಯನ್ನು ಹೊತ್ತು ಸಂಸಾರ ರಥವನ್ನು ನಡೆಸುವ ಕಾಯಕವನ್ನು ಅನುಸರಿಸುತ್ತಿರುವಾಗ ಸಂಬಂಧಗಳ ಹೆಣಿಕೆಯಲ್ಲಿ ಒಂದು ಚೂರು ಊನವಾದರೂ ಸಂಸಾರ ರಥಕ್ಕೆ ಸಂಚಕಾರ ಬಂದಂತೆಯೇ ಎಂದು ಎಷ್ಟೋ ಸರತಿ ಅನ್ನಿಸಿದ್ದಿದೆ.

ನಾನೇನೂ ಹೇಳೋದಿಲ್ಲ, ಹೇಳೋದಕ್ಕೆ ಉಳಿದಿರೋಲ್ಲ ಬಿಡಿ. ಈ ಸಂಸಾರ ತಾಪತ್ರಯದ ಒಡಕಲಿನ ವಿಷಯ ನನ್ನ ಕಿವಿಗೆ ಬೀಳುವ ಹೊತ್ತಿಗೆ ಆಗಬೇಕಾದ್ದದೆಲ್ಲ ಆಗಿ ಹೋಗಿರುತ್ತದೆ. ಗಂಡ-ಹೆಂಡತಿ ಇಬ್ಬರೂ ನನಗೆ ಪರಿಚಿತರೇ ಆದ ಸಂದರ್ಭಗಳಲ್ಲಿ ನಾವು ಯಾರೊಬ್ಬರ ಪರವನ್ನು ವಹಿಸಿ ಮಾತನಾಡುವುದು ತಪ್ಪಾದೀತು - ಬೆಂಕಿ ಇಲ್ಲದೇ ಹೊಗೆ ಬಾರದು ಎನ್ನುವಂತೆ ಏನೋ ಕ್ಷುಲ್ಲಕ ಕಾರಣ ಇದ್ದು ಅದು ದೊಡ್ಡ ಹೆಮ್ಮರವಾಗಿ ಬೆಳೆಯುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ.

***

ಇಂದಿನ ಗಂಡ-ಹೆಂಡತಿ ಸಂಬಂಧವೆಂದರೆ ಸಾವಿರದ ಒಂಭೈನೂರ ಐವತ್ತರ ಸಮಯದ ಸಂಬಂಧಗಳ ಹಾಗೆ ಇರಬೇಕಾಗಿಲ್ಲ. ಗಂಡ ಉಂಡಾದ ನಂತರವೇ ಹೆಂಡತಿ ಊಟ ಮಾಡುವುದು ಎಂಬ ಕಾನೂನನ್ನು ತಲೆ ಸರಿ ಇರುವ ಯಾರೂ ಪಾಲಿಸಿಕೊಂಡು ಹೋಗಲಾರರು. ಆದರೆ ಗಂಡ-ಹೆಂಡತಿಯ ನಡುವೆ ವ್ಯತ್ಯಾಸವಿದ್ದಿರಲೇ ಬೇಕು, ಹಾಗಿದ್ದಾಗಲೇ ಚೆನ್ನು, ಆ ವ್ಯತ್ಯಾಸವನ್ನು ಆ ಕುಟುಂಬದ ಏಳಿಗೆಗೆ ಬಳಸದೇ ಅದನ್ನು ವಾದದ ಬೆಂಕಿಗೆ ಇಂಬುಕೊಡುವ ತುಪ್ಪವನ್ನಾಗಿ ಸುರಿದು ಮಾತಿಗೆ ಮಾತು ಬೆಳೆಸಿ ಕೋರ್ಟು ಕಛೇರಿ ಹತ್ತುವುದು ಆಯಾ ವ್ಯಕ್ತಿಯ ಹಿನ್ನೆಲೆಯಲ್ಲಿ ಸುಲಭವಾಗಿ ಕಾಣಿಸಿದರೂ ಇಡೀ ಕುಟುಂಬದ ಹಂದರಕ್ಕೆ ಅದರಿಂದ ಸಂಚಕಾರ ಬರುತ್ತದೆ. ಭಾರತದಲ್ಲೂ ಸಹ ಗಂಡ-ಹೆಂಡತಿ ಅಮೇರಿಕನ್ ಶೈಲಿಯಲ್ಲಿ ಮಕ್ಕಳನ್ನು ವಾರಾಂತ್ಯದಲ್ಲಿ ಕಷ್ಟಡಿಗೆ ತೆಗೆದುಕೊಂಡು ಸಾಕುತ್ತಾರೆ ಎನ್ನುವುದನ್ನು ಕೇಳಿದ ಮೇಲೆ ಎಲ್ಲೋ ನಮ್ಮ ಸಂಸ್ಕೃತಿಗೆ ವಿದೇಶಿ ಶಿಫಾರಸ್ಸು ಹೆಚ್ಚಾಗಿಯೇ ಸಿಕ್ಕಿದೆಯೆಂದು ಅರ್ಥವಾಯಿತು. ಮೊದಲೆಲ್ಲಾ ಹೇಗಿತ್ತೋ ಗೊತ್ತಿಲ್ಲ, ಆದರೆ ನಾನು ಭಾರತದಲ್ಲಿ ಮಕ್ಕಳನ್ನು ಕಷ್ಟಡಿಗೆ ತೆಗೆದುಕೊಂಡು ಸಾಕುವುದನ್ನು ಕೇಳಿದ್ದು ಇಂದೇ ಮೊದಲು.

ಯಾವುದು ಎಲ್ಲಿ ತಪ್ಪಿತೋ ಎಂದು ಸೋಜಿಗ ಪಡುವ ಸಮಯವೋ, ಆದದ್ದಾಗಲಿ ಮುಂದಿನದು ಮುಖ್ಯ ಎನ್ನುವ ಧೋರಣೆಯನ್ನು ಬಿಗಿದಪ್ಪುವ ನಿಲುವೋ, ಈ ಸಂಬಂಧಗಳ ಗೊಂದಲವೇ ಬೇಡ ಎನ್ನುವ ಹಣಾಹಣಿಯೋ ಮತ್ತೊಂದೋ ತಪ್ಪಿದ್ದಲ್ಲ. ಅದು ಬದುಕು, ಅದೇ ಅದರ ನಿಯಮ ಹಾಗೋ ಅದರಲ್ಲಿರುವ ಸೂಕ್ಷ್ಮತೆಯ ಒಂದಲ್ಲ ಒಂದು ರೀತಿಯಲ್ಲಿ ನಾವು ಯೋಚಿಸುವುದು ನಮಗೆ ಅಂಟಿದ ಕಾಯಕ ಎಂದರೆ ತಪ್ಪೇನಿಲ್ಲ.

Sunday, April 13, 2008

ಇಂದಿನದು ಇಂದಿರಲಿ

ಎಲ್ಲರೂ ಇಲ್ಲಿ ಬೇಸಿಗೆ ಯಾವಾಗ ಬರುತ್ತೋ ಎಂದು ಕುತೂಹಲಿತರಾಗಿ ಕಾದುಕೊಂಡು ಕುಳಿತಿರುವುದರ ಬಗ್ಗೆ ಯೋಚಿಸುತ್ತಿರುವಾಗ ನನಗನ್ನಿಸಿದ್ದು ಹೀಗೆ: ಡಿಸೆಂಬರ್ ನಿಂದ ಜೂನ್ ವರೆಗೆ ನಿಧಾನವಾಗಿ ದಿನದಲ್ಲಿ ಬೆಳಕು ಹೆಚ್ಚಾಗುತ್ತಾ ಹೋಗಿ, ಜೂನ್‌ನಿಂದ ಮತ್ತೆ ಕತ್ತಲಿನ ಆರ್ಭಟ ಹೆಚ್ಚಾಗುವುದು ಇಲ್ಲಿನ ಋತುಮಾನ. ಮಾರ್ಚ್ ಹಾಗೂ ಸೆಪ್ಟೆಂಬರ್ ನಡುವೆ ಇರುವ ಎಲ್ಲ ದಿನಗಳನ್ನು ಬೇಸಿಗೆಯೆಂದೇ ಏಕೆ ಸ್ವೀಕರಿಸಬಾರದು? ಬೇಸಿಗೆ ಬೆಳಕು ಜೂನ್ ವರೆಗೆ ಹೆಚ್ಚಾಗಿ ಮುಂದೆ ಸೆಪ್ಟೆಂಬರ್ ನಲ್ಲಿ ಎಲೆಗಳು ಉದುರಿ ನಿಧಾನವಾಗಿ ಛಳಿ ಹಿಡಿದುಕೊಳ್ಳುವಲ್ಲಿಯವರೆಗೆ ಎಲ್ಲಿಯವರೆಗೆ ಹೊರಗಿನ ಉಷ್ಣತೆ ಸಹಿಸಿಕೊಳ್ಳಬಹುದೋ ಅಲ್ಲಿಯವರೆಗೆ ಬೇಸಿಗೆಯನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

ಇಲ್ಲಿನ ಕಾರ್ಟೂನ್ ಶೋ‌ಗಳಿಂದ ಹಿಡಿದು ನಾನು ನೋಡಿದ ಬೇಕಾದಷ್ಟು ಜನರವರೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಸಂದರ್ಭಕ್ಕೆ ತಕ್ಕಂತೆ ಉಡುಪುಗಳನ್ನು ಬದಲಾಯಿಸುವವರೆ. ನಮ್ಮ ದಕ್ಷಿಣ ಭಾರತದಲ್ಲಿ ವರ್ಷದುದ್ದಕ್ಕೂ ಒಂದೇ ವೇಷ-ಭೂಷಣ ನಡೆದೀತು ಎನ್ನುವಂತಲ್ಲ. ಅಲ್ಲದೇ, ಗೋಲ್ಫ್ ಆಡುವುದಕ್ಕೆ ಹೋಗುವುದರಿಂದ ಹಿಡಿದು ಫಿಶಿಂಗ್ ಹೋಗುವಲ್ಲಿಯವರೆಗೆ, ಆಫೀಸಿಗೆ ಹೋಗುವುದರಿಂದ ಹಿಡಿದು, ಟೆನ್ನಿಸ್ ಆಡುವಲ್ಲಿಯವರೆಗೆ, ಛಳಿಗೆ-ಬಿಸಿಲಿಗೆ ಥರಾವರಿ ವೇಶಗಳು ಅವುಗಳದ್ದೇ ಆದ ಬಣ್ಣ-ವಿನ್ಯಾಸಗಳಲ್ಲಿ. ನಮ್ಮ ಉತ್ತರ ಭಾರತದ ಜನರಲ್ಲಿ ಸ್ವಲ್ಪ ಈ ರೀತಿಯ ಆದ್ಯತೆ ಇರಬಹುದು, ಛಳಿ ಇರಲಿ ಇಲ್ಲದಿರಲಿ ಆ ಒಂದು ಸೀಜನ್ ಬಂದಿತೆಂದರೆ ಕೊನೇ ಪಕ್ಷ ಒಂದು ಸ್ವೆಟರ್ ಇಲ್ಲದೆ ಜನರು ಹೊರಗೆ ಕಾಲಿಡೋದೇ ಇಲ್ಲವೇನೋ.

***

’ರಿಟೈರ್ಡ್ ಆದ ಮೇಲೆ ಬದುಕೇನಿದೆ, ಈಗ ಇದ್ದು ಬದುಕೋದೇ ಸೊಗಸು. ಮುಂದೇನಾಗುತ್ತೋ ಎಂದು ಯಾರಿಗೆ ಗೊತ್ತು?’ ಎಂದು ನನಗರಿವಿಲ್ಲದಂತೆ ನನ್ನ ಬಾಯಿಯಿಂದ ಈ ಅಣಿಮುತ್ತುಗಳು ಉದುರಿದವು. ನನ್ನ ಜೊತೆಯಲ್ಲಿ ಕಾಫಿ ಕುಡಿಯೋದಕ್ಕೆ ಬಂದ ಮತ್ತಿಬ್ಬರು ತಮ್ಮ ವೃದ್ಧ ತಂದೆ-ತಾಯಿಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದುದು ಒಂದು ರೀತಿಯಲ್ಲಿ ಕಾರಣ ಎಂದು ಹೇಳಿದರೂ ಮಧ್ಯಾಹ್ನ ನಾಲ್ಕು ಘಂಟೆಯ ಮೇಲೆ ಹೊಟ್ಟೆಯೊಳಗೆ ಇಳಿಯುತ್ತಿದ್ದ ಗರಮ್ ಕಾಫಿಗೆ ನಾನು ಕೃತಜ್ಞತೆಯನ್ನು ಹೇಳಲೇಬೇಕು. ಪ್ರತೀ ಸಾರಿ ಮಧ್ಯಾಹ್ನದ ಕಾಫಿಯ ನಂತರ ಮನಸ್ಸು ಅದರದ್ದೇ ಒಂದು ತತ್ವವನ್ನು ಹೊಕ್ಕಿಕೊಂಡು ಅದರ ನೆಲೆಯಲ್ಲಿ ಹೊರಗಿನದನ್ನು ನೋಡೋದು ಸಹಜವೇ ನನಗೆ.

ನನ್ನ ಮಾತುಗಳು ಜೊತೆಗಿದ್ದವರಿಗೆ ಸ್ವಲ್ಪ ಆಶ್ಚರ್ಯವನ್ನು ಮೂಡಿಸಿದರೂ ಅವರು ನನ್ನ ತರ್ಕವನ್ನು ಒಪ್ಪಿಕೊಂಡ ಹಾಗಿತ್ತು, ಅದರ ವಿರುದ್ಧವಾಗಿ ಏನನ್ನೂ ಹೇಳದಿದ್ದುದನ್ನು ನೋಡಿ ನಾನು ಹಾಗಂದುಕೊಳ್ಳಬೇಕಾಯ್ತು. ಏನಿರಬಹುದು, ಈ ನಿವೃತ್ತ ಜೀವನದ ಮರ್ಮ? ಎಂದು ಮನಸ್ಸು ತನ್ನದೇ ಯಾವುದೋ ಒಂದು ಸಬ್ ರುಟೀನ್‌ನಲ್ಲಿ ಕಳೆದುಕೊಳ್ಳತೊಡಗಿತು.

ಭಾರತದಲ್ಲಿದ್ದೋರು ತಮ್ಮ ಮಕ್ಕಳ ಮದುವೆ ಯೋಗಕ್ಷೇಮಕ್ಕೆ ಒಂದಿಷ್ಟು ದುಡ್ಡು-ಕಾಸು ಉಳಿಸಿಕೊಂಡಿರುತ್ತಾರೆ. ಸರಿಯಾದ ಆಹಾರ, ದಿನಚರಿ ಇಲ್ಲದ ಶರೀರಗಳು ಕುಬ್ಜವಾಗುವುದರ ಜೊತೆಗೆ ಅಲ್ಲಲ್ಲಿ ಸಾಕಷ್ಟು ಬೊಜ್ಜು ಕಟ್ಟಿಕೊಳ್ಳತೊಡಗುತ್ತವೆ. ತಲೆಯ ಕೂದಲು ನೆರೆತೋ ಅಥವಾ ಉದುರಿಹೋಗಿ, ಹಲ್ಲುಗಳು ಸಂದುಗಳಲ್ಲಿ ಜಾಗ ಕಾಣಿಸಿಕೊಂಡು, ಮುಖದ ಮೇಲೆ ನೆರಿಗೆಗಳು ಹುಟ್ಟಿ, ಮೂಗಿನ ಮೇಲೆ ಕನ್ನಡಕ ಕುಳಿತು, ಆಗಾಗ್ಗೆ ’ಒಂದು ಕಾಲದಲ್ಲಿ ಹಾಗಿತ್ತು...’ ಎನ್ನುವ ವಾಕ್ಯಗಳು ಸಹಜವಾಗಿ ಹೋಗುವುದು ನಿವೃತ್ತ ಬದುಕಿನ ಲಕ್ಷಣವಾಗಿದ್ದಿರಬಹುದು. ಅದೇ ಭಾರತೀಯರು ವಿದೇಶಗಳಲ್ಲಿದ್ದರೂ ಈ ವಿವರಣೆಯನ್ನು ಬಿಟ್ಟು ಹೆಚ್ಚು ಬದಲಾದಂತೆ ಕಾಣಿಸಿಕೊಂಡಿಲ್ಲದಿರುವುದು ನನ್ನ ಕಲ್ಪನೆ ಅಲ್ಲವಷ್ಟೇ.

ನನಗೆ ಇಲ್ಲಿನ ಸಾಲ ಕೂಪದಲ್ಲಿ ಸೇರಿಕೊಳ್ಳುವುದು ಅಷ್ಟೊಂದು ಇಷ್ಟವಿಲ್ಲದಿದ್ದರೂ ಇಲ್ಲಿನ ಜನರ ಪ್ರಾಯೋಗಿಕತೆಗೆ ತಲೆಬಾಗಲೇ ಬೇಕಾಗುತ್ತದೆ. ನೀವು ಜೀವನ ಪರ್ಯಂತ ಕಷ್ಟಪಟ್ಟು ದುಡಿದು ಬಾಡಿಗೆ ಮನೆಯಲ್ಲಿದ್ದು ಎಲ್ಲ ಸಂಕಷ್ಟಗಳ ನಡುವೆ ಹಣವನ್ನು ಕೂಡಿಟ್ಟು, ಬೆಳೆಸಿ ಮುಂದೆ ನಿವೃತ್ತರಾಗುವ ಹೊತ್ತಿಗೆ ಮನೆ ಕಟ್ಟಿಸಿಕೊಂಡು ಹಾಯಾಗಿ ಇರುವ ಕನಸು ಅಥವಾ ಆಲೋಚನೆ ಹೇಗಿದೆ? ಅದರ ಜೊತೆಗೆ ಮೊದಲಿನಿಂದಲೇ ನೀವು ನಿಮಗೆ ಬೇಕಾದ ಮನೆಯನ್ನು ಸಾಲದ ಮುಖೇನ ತೆಗೆದುಕೊಂಡು ಅದನ್ನು ಕಂತುಗಳಲ್ಲಿ ಬಡ್ಡಿ-ಅಸಲನ್ನಾಗಿ ಹಲವಾರು ವರ್ಷಗಳು ತೀರಿಸುತ್ತಾ ಹೋಗುವುದು ಹೇಗೆ? ಸಾಲ ಎಲ್ಲರಿಗೂ ಇದೆ, ತಿರುಪತಿ ತಿಮ್ಮಪ್ಪನಿಂದ ಹಿಡಿದು ನಮ್ಮಂಥ ಹುಲುಮಾನವರವರೆಗೆ, ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಮುಂದುವರೆದೆ ದೇಶಗಳವರೆಗೆ. ನಮ್ಮ ಅಗತ್ಯಗಳಿಗೋಸ್ಕರ ಮುಂದಾಲೋಚನೆಯಿಂದ ಸಾಲ ಮಾಡುವುದು ತಪ್ಪಾದರೂ ಹೇಗೆ ಎಂದು ಪ್ರಶ್ನಿಸಿಕೊಳ್ಳುವಷ್ಟರ ಮಟ್ಟಿಗೆ ಈಗಾಗಲೇ ಆಲೋಚನೆಗಳು ಬೆಳೆದುಕೊಂಡಿವೆ, ಊಹೂ ಪ್ರಯೋಜನವಿಲ್ಲ - ನಿಮಗೆ ಬೇಕೋ ಬೇಡವೋ ಸಾಲದೊಳಗೆ ನೀವಿದ್ದೀರಿ, ನಿಮ್ಮೊಳಗೆ ಸಾಲವಿದೆ.

***

ನಾಳಿನದರಲ್ಲಿ ಏನಿದೆ ಏನಿಲ್ಲವೋ ಯಾರೂ ಗ್ಯಾರಂಟಿ ಕೊಡೋದಿಲ್ಲ. ಅದಕ್ಕೇ ನಮ್ಮ ಹಿರಿಯರು "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ" ಎಂದಿದ್ದು. ಇಂದಿನದು ಎಂದರೆ ವರ್ತಮಾನ, ನಾಳಿನ ಮೂರಕ್ಷರದ ಭವಿಷ್ಯವಾಗಲೀ, ನಿನ್ನೆಯ ಎರಡಕ್ಷರದ ಭೂತವಾಗಲೀ ನಾಲ್ಕಕ್ಷರದ ವರ್ತಮಾನವನ್ನು ಕ್ಷುಲ್ಲಕವಾಗೇಕೆ ಮಾಡಬೇಕು? ನಿನ್ನೆ ನಿನ್ನೆಯೇ ಆಗಿಕೊಂಡಿದ್ದರೂ ಇಂದು ನಾಳೆಯ ಸೇರುವುದರೊಳಗೆ ಆ ಇಂದನ್ನು ಇಂದೇ ಅನುಭವಿಸುವ ಮನಸ್ಥಿತಿ ನಮಗೇಕಿಲ್ಲ? ಅಷ್ಟೂ ಮಾಡಿ ನಾಳೆಯ ನಾಳೆಗಳು ಹೀಗೇ ಇರುತ್ತವೆ ಎಂದು ಯಾರೂ ಬರೆದಂತೂ ಕೊಟ್ಟಿಲ್ಲ, ಎಂತಹ ಅತಿರಥ ಮಹಾರಥರಿಗೂ ನಾಳೆಯ ಪಾಡು ಸಂಪೂರ್ಣವಾಗಿ ತಿಳಿದಿಲ್ಲ ಹಾಗಿರುವಾಗ ಎಲ್ಲವೂ ಭವಿಷ್ಯಮಯವಾಗೇ ಏಕಿರಬೇಕು? ಇಂದಿನ ದಿನವನ್ನು ’ಏನೋ ಒಂದು ಮಾಡಿ ತಿಂದರಾಯಿತು...’ ಎನ್ನುವ ಅಸಡ್ಡೆಯ ಮನೋಭಾವನೆಯಿಂದೇಕೆ ನೋಡಬೇಕು ನಾಳೆ ಮುಚ್ಚಿದ ಕಣ್ಣುಗಳು ತೆರೆದುಕೊಳ್ಳೂತ್ತವೆ ಎನ್ನುವ ಗ್ಯಾರಂಟಿ ಎನೂ ಇಲ್ಲದಿರುವಾಗ?

Sunday, April 06, 2008

ಬೇವು-ಬೆಲ್ಲ ಇರದ ಹೊಸ ವರ್ಷಗಳು

ಓಹ್, ನಮಸ್ಕಾರ, ನಾವು ದಕ್ಷಿಣ ಭಾರತದ ಮಂದಿ ಹಾಗೂ ಇದು ನಮಗೆ ಹೊಸ ವರ್ಷ ಮತ್ತು ಅದರ ಆಚರಣೆ! ಅಯ್ಯೋ, ಇದೇನ್ odd ಈಗ ಏಪ್ರಿಲ್ ಮಧ್ಯೆ ಹೊಸವರ್ಷ ಶುರುವಾಯ್ತು ಅಂತೀರಾ? ಹಾಗೇ ಸಾರ್, ನಮ್ಮ ಕ್ಯಾಲೆಂಡರಿನಲ್ಲಿ ಮಹತ್ವದ ದಿನಗಳೆಲ್ಲ ಆರಂಭವಾಗೋದು ಇಂಗ್ಲೀಷಿನ ಕ್ಯಾಲೆಂಡರಿನ ಮಧ್ಯ ಭಾಗಕ್ಕೆ, ಅದನ್ನ odd ಅಂಥಾ ಬೇಕಾದ್ರೂ ಕರೆದುಕೊಳ್ಳಿ, even ಅಂಥಾನಾದ್ರೂ ಉದ್ಗರಿಸಿ ನಮಗೇನೂ ಇಲ್ಲ. ಇಂಗ್ಲೀಷ್ ಕ್ಯಾಲೆಂಡರ್ ಆರಂಭವಾಗೋದಕ್ಕೆ ಮೊದಲೂ ನಮ್ಮ ದಿನಗಳು ಹೀಗೇ ಇದ್ವು ಅನ್ನೋದಕ್ಕೆ ಹಲವರು ಪುರಾವೆಗಳನ್ನೇನು ಒದಗಿಸೋ ಅಗತ್ಯ ಇಲ್ಲ, ಒಂದೇ ಮಾತ್ನಲ್ಲಿ ಹೇಳೋದಾದ್ರೆ ನಮ್ಮದು ಹಳೇ ಸಂಸ್ಕೃತಿ, ಹಳೇ ಪರಂಪರೆ, ನಾವು ಹಳಬರು ಅಷ್ಟೇ!

ನಿಮಗೆ ನಂಬಿಕೆ ಬರಲಿಲ್ಲಾಂತಂದ್ರೆ ನಿಮ್ಮ ಲಾನೋ ಗಾರ್ಡನ್ನಿನಲ್ಲಿರೋ ಗಿಡಮರಗಳನ್ನ ಹೋಗಿ ವಿಚಾರಿಸಿಕೊಂಡು ಬನ್ನಿ, ನಿಮ್ಮ Spring ಸೀಸನ್ ಮಾರ್ಚ್ ಇಪ್ಪತ್ತೊಂದಕ್ಕೇ ಶುರುವಾಗಿರಲೊಲ್ಲದ್ಯಾಕೆ, ಈ ಗಿಡಮರಗಳಿಗೆ ಏಪ್ರಿಲ್ ಆರನೇ ತಾರೀಖ್ ಚಿಗುರಿಕೊಳ್ಳೀ ಅಂಥಾ ನಾನೇನೂ ಆರ್ಡರ್ ಕಳಿಸಿಲ್ಲಪ್ಪಾ. ಈಗಾದ್ರೂ ಗೊತ್ತಾಯ್ತಾ ನಮ್ ಚೈತ್ರ ಮಾಸ, ವಸಂತ ಋತು ಅನ್ನೋ ಕಾನ್ಸೆಪ್ಟೂ, ಎನ್ ತಿಳಕೊಂಡಿದೀರಾ ನಮ್ಮ ಪರಂಪರೇನೇ ದೊಡ್ದು, ಅದರ ಮರ್ಮಾ ಇನ್ನೂ ಆಳ...ಆದ್ರೆ ನನಗೆ ಅಷ್ಟು ಡೀಟೇಲ್ ಗೊತ್ತಿಲ್ಲ ಏನ್ ಮಾಡ್ಲಿ ಹೇಳ್ರಿ?

***

ಬೇವು-ಬೆಲ್ಲ ತಿನ್ನದೇ ಯುಗಾದಿಯನ್ನೂ ಹೊಸವರ್ಷವನ್ನೂ ಆಚರಿಸಿಕೊಳ್ಳುತಿರೋ ಹಲವಾರು ವರ್ಷಗಳಲ್ಲಿ ಇದೂ ಒಂದು ನೋಡ್ರಿ. ಅವನೌವ್ವನ, ಏನ್ ಕಾನ್ಸೆಪ್ಟ್ ರೀ ಅದು, ಬದುಕಿನಲ್ಲಿ ಬೇವು-ಬೆಲ್ಲ ಎರಡೂ ಇರಬೇಕು ಅಂತ ಅದು ಯಾವನು ಯಾವತ್ತು ಕಾನೂನ್ ಮಾಡಿದ್ದಿರಬಹುದು? ಭಯಂಕರ ಕಾನ್ಸೆಪ್ಟ್ ಅಪಾ, ಎಂಥೆಂಥಾ ಫಿಲಾಸಫಿಗಳನ್ನೆಲ್ಲ ಬೇವು-ಬೆಲ್ಲದಲ್ಲೇ ಅರೆದು ಮುಚ್ಚಿ ಬಿಡುವಷ್ಟು ಗಹನವಾದದ್ದು. ನಾವೆಲ್ಲ ಹಿಂದೆ ಬೇವಿನ ಮರಾ ಹತ್ತಿ ಪ್ರೆಶ್ ಎಲೆಗಳನ್ನು ಕೊಯ್ದುಕೊಂಡು ಬಂದು ಪಂಚಕಜ್ಜಾಯದೊಳಗೆ ಅಮ್ಮ ಸೇರಿಸಿಕೊಡ್ತಾಳೆ ಅಂತಲೇ ಕಣ್ಣೂ-ಬಾಯಿ ಬಿಟಗೊಂಡು ಕಾಯ್‌ಕೊಂತ ಕುಂತಿರತಿದ್ವಿ. ನಾನಂತೂ ಬೇವಿನ ಮರದ ಮ್ಯಾಲೇ ಒಂದಿಷ್ಟು ಎಲೆಗಳನ್ನು ತಿಂದು ಒಂದ್ ಸರ್ತಿ ಕಹಿ ಕಷಾಯ ಕುಡಿದೋರ್ ಮಖಾ ಮಾಡಿದ್ರು, ಮತ್ತೊಂದು ಸರ್ತಿ ಇವನು ಬೇವಿನ ಎಲೇನೂ ಹಂಗೇ ತಿಂತಾನೇ ಭೇಷ್ ಎಂದು ಯಾರೋ ಬೆನ್ನು ಚಪ್ಪರಿಸಿದ ಹಾಗೆ ನನಗೆ ನಾನೇ ನೆನೆಸಿಕೊಂಡು ನಕ್ಕಿದ್ದಿದೆ. ನಮ್ಮೂರ್ನಾಗ್ ಆಗಿದ್ರೆ ಇಷ್ಟೊತ್ತಿಗೆ ಕಹಿ ಬೇವಿನ ಗಿಡಗಳು ಒಳ್ಳೇ ಹೂ ಬಿಟಗೊಂಡು ಮದುವೆಗೆ ಅಲಂಕಾರಗೊಂಡ ಹೆಣ್ಣಿನಂತೆ ಕಂಗೊಳಿಸುತ್ತಿದ್ದವು ಅಂತ ಆಲೋಚ್ನೆ ಬಂದಿದ್ದೆ ತಡ ಇಲ್ಲಿ ನಮ್ಮ ಗಾರ್ಡನ್ನಿನ್ಯಾಗೆ ಏನ್ ನಡದತಿ ಅಂತ ನೋಡೋ ಆಸೆ ಬಂತು. ತಕ್ಷಣ ಇನ್ನೂ ನಲವತ್ತರ ನಡುವೆ ಉಷ್ಣತೆ ಇರೋ ಈ ಊರಿನ ಛಳಿಗೆ ಹೆದರಿಕೆ ಆಗಲಿ ಎನ್ನುವಂತೆ ನನ್ನಲ್ಲಿದ ಬೆಚ್ಚನೆ ಜಾಕೆಟ್ ಒಂದನ್ನು ಹೊದ್ದು ಹೊರ ನಡೆದೆ.

ಮನೆಯ ಸುತ್ತಲಿನ ಹುಲ್ಲು ಹಾಸೋ, ಕೆಲಸ ಕಳೆದುಕೊಂಡು ಹೊಸ ಕೆಲಸವನ್ನು ಹುಡುಕುತ್ತಿರೋ ನಿರುದ್ಯೋಗಿ ಯುವಕನ ಗಡ್ಡವನ್ನು ನೆನಪಿಗೆ ತಂದಿತು, ಈಗಲೋ ಆಗಲೋ ಚಿಗುರೊಡೆದು ಹುಲುಸಾಗಿ ಬೆಳೆಯುವ ಲಕ್ಷಣಗಳೆಲ್ಲ ಇದ್ದವು. ಹೊರಗಡೆಯ ಪೇಪರ್ ಬರ್ಚ್ ಮರಗಳು ಇಷ್ಟು ದಿನ ಗಾಳಿಗೆ ತೊನೆದೂ ತೊನೆದೂ ಕಷ್ಟಪಟ್ಟು ಕೆಲಸ ಮಾಡಿಯೂ ದಿನಗೂಲಿ ಸಂಬಳ ಪಡೆದು ಬದುಕನ್ನು ನಿಭಾಯಿಸೋ ಮನೆ ಯಜಮಾನನ ಮನಸ್ಥಿತಿಯನ್ನು ಹೊದ್ದು ನಿಂತಿದ್ದವು. ಅಕ್ಕ ಪಕ್ಕದ ಥರಾವರಿ ಹೂವಿನ ಗಿಡಗಳಲ್ಲಿ ಬದುಕಿನ ಸಂಚಾರ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟೇಷನ್ನಿನಲ್ಲಿ ಮುಂಜಾನೆ ಐದೂವರೆಗೆಲ್ಲಾ ಸಿಟಿಬಸ್ಸುಗಳು ಪ್ರಾರಂಭವಾಗಿ ಮೊದಲ ಟ್ರಿಪ್ ಹೊರಡುವಾಗ ಇರುವ ಗಲಾಟೆ ವಾತಾವರಣ ಇದ್ದಂತಿತ್ತು. ಇನ್ನು ನನಗೆ ತಿಳಿಯದ ಅನೇಕ ಹೂವಿನ ಮರಗಳು ಮುಂಬರುವ ಅದ್ಯಾವುದೋ ಜಾತ್ರೆಗೆ ಸಿದ್ಧವಾಗುವ ತೇರಿನಂತೆ ನಿಧಾನವಾಗಿ ಮೊಗ್ಗೊಡೆಯುತ್ತಿದ್ದವು. ಇಷ್ಟು ದಿನ ಬಲವಾಗಿ ಬೀಸಿದ ಗಾಳಿಯ ದೆಸೆಯಿಂದ ನಮ್ಮ ಮನೆಯ ಬದಿಯಲ್ಲಿನ ಬರ್ಚ್ ಮರವೊಂದರ ದೊಡ್ಡ ಗೆಲ್ಲು ಮುರಿದು ಸಂಪೂರ್ಣ ಕೆಳಗೆ ವಾಲಿಕೊಂಡಿದ್ದು ಸ್ವಲ್ಪ ಹಿಡಿದೆಳೆದರೂ ಕಿತ್ತು ಬರುವಂತಿತ್ತು, ಇನ್ನೇನು ಕಿತ್ತೇ ಬಿಡೋಣ ಎಂದು ಮನಸು ಮಾಡಿ ಗೆಲ್ಲನ್ನು ಮುಟ್ಟಿದವನಿಗೆ ಮುರಿದು ಬಿದ್ದರೂ ಚಿಗುರುವುದನ್ನು ಮರೆಯದ ಆ ಗೆಲ್ಲಿನ ಜೀವಂತಿಕೆಗೆ ನಾನೇಕೆ ಭಂಗ ತರಲಿ ಎಂದು ಕೀಳದೇ ಹಾಗೆ ಬಿಟ್ಟು ಬಂದದ್ದಾಯಿತು. ಒಟ್ಟಿಗೆ ವಸಂತನಾಗಮನ ನಮ್ಮ ಮನೆಗೂ ಬಂದಿದೆ, ಬೇವು-ಬೆಲ್ಲ ತಿನ್ನದಿದ್ದರೇನಂತೆ, ಆ ರೀತಿಯಲ್ಲಿ ನಾವೂ ಹೊಸವರ್ಷದ ಭಾಗಿಗಳೇ ಎಂದು ನನ್ನ ನೆರೆಹೊರೆಯೂ ಸಂತೋಷದ ಮುಖಭಾವ ಹೊದ್ದುಕೊಂಡದ್ದು ಸ್ವಲ್ಪ ಸಮಾಧಾನವನ್ನು ತಂದಿತು.

***

ನಮಗೆ ನಮ್ಮ ನೀತಿ ಚೆಂದ. ಆದರೆ ನಮ್ಮ ಹೊಸವರ್ಷ ನಮಗೆ ಗೊತ್ತಿರೋ ಒಂದಿಷ್ಟು ಜನರಿಗೆ ’ಹೊಸವರ್ಷದ ಶುಭಾಶಯಗಳು’ ಎಂದು ಹೇಳಿ ಮುಗಿಸುವಲ್ಲಿಗೆ ಸೀಮಿತವಾಗಿ ಹೋಯಿತಲ್ಲ ಎಂದು ಒಂದು ರೀತಿಯ ಕಸಿವಿಸಿ. ತೆಲುಗರೋ ಕನ್ನಡಿಗರೋ ಒಟ್ಟಿಗೆ ದಕ್ಷಿಣ ಭಾರತದ ಹೆಚ್ಚು ಜನ ಆಚರಿಸುವ ಹೊಸ ವರ್ಷದ ಆಚರಣೆ ಇದು. ಚಾಂದ್ರಮಾನ ಯುಗಾದಿ ಇರುವ ಹಾಗೆ ಸೂರ್ಯಮಾನದ ಯುಗಾದಿಯೂ ಇದೆ. ಬದುಕಿನಲ್ಲಿ ಸ್ವಾತಂತ್ರ್ಯ ಅಂದರೆ ಇದೇ ಇರಬೇಕು, ನಿಮಗೆ ಯಾವಾಗ ಬೇಕು ಆಗ ಆಚರಿಸಿಕೊಳ್ಳಿ ಎನ್ನುವ ಫ್ರೀಡಮ್! ನಿಮಗೆ ಯಾವ ದೇವರು ಬೇಕು ಅದನ್ನು ಪೂಜಿಸಿಕೊಳ್ಳಿ ಎನ್ನುವ ಧೋರಣೆ. ನಿಮ್ಮ ತರ್ಕ ನಿಮ್ಮ ನೀತಿ ನಿಮ್ಮ ಧರ್ಮ, ಅದ್ದರಿಂದಲೇ ಇರಬೇಕು ಸನಾತನ ಧರ್ಮಕ್ಕೆ ಯಾವುದೇ ಪ್ರವಾದಿಗಳಿರದಿದ್ದುದು. ಇದು ಮತವಲ್ಲ, ಧರ್ಮ, ಜೀವನ ಕ್ರಮ, ಸ್ವಭಾವ, ನಿಮ್ಮ-ನಮ್ಮ ರೀತಿ ನೀತಿ - ಅವೆಲ್ಲವೂ ಒಡಗೂಡಿಯೇ ನಾವು ಒಂದಾಗಿರೋದು - ವೈವಿಧ್ಯತೆಯಲ್ಲೂ ಏಕತೆ.

ನಿಮಗೆ ನಿಮ್ಮ ಹೊಸವರ್ಷ ಯಾವಾಗ ಬೇಕಾದರೂ ಆರಂಭವಾಗಲಿ, ನನಗಂತೂ ಹೊಸವರ್ಷ ಶುರುವಾಗಿದೆ...ಮುಂಬರುವ ದಿನಗಳು ನಮಗೆಲ್ಲ ಒಳ್ಳೆಯದನ್ನು ಮಾಡಲಿ!

ಹೊಸ ವರ್ಷದ ಶುಭಾಶಯಗಳು, ಸರ್ವಧಾರಿ ನಾಮ ಸಂವತ್ಸರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ!