Thursday, June 17, 2010

ಗೋಲ್ಡ್ ಫಿಶ್ - 2010

 

ನಮ್ಮ ಮನೆಯಲ್ಲಿ ಒಂದು ಚಿಕ್ಕ ಅಕ್ವೇರಿಯಂ, ಅದರಲ್ಲಿ ೨೦೦೩ ರಿಂದ ನೆಲೆ ನಿಂತಿದ್ದ ಒರ್ಯಾಂಡಾ (oranda) ಜಾತಿಯ ಗೋಲ್ಡ್ ಫಿಶ್ ಮೊನ್ನೆ ಸತ್ತು ಹೋಯಿತು.  ಒಂದು ಸಾಕು ಪ್ರಾಣಿಯ ಕುರಿತು, ಅದರ ನೆಲೆಗೆ ಹೊಂದಿಕೊಂಡ ನಮ್ಮ ನಡವಳಿಕೆಗಳ ಕುರಿತು ಈ ಲೇಖನ.

 

Gold fish 2010

***

ಮಕ್ಕಳಿದ್ದವರ ಮನೆಯಲ್ಲಿ ಈ ಪ್ರಶ್ನೆ ಬಂದೇ ಬರುತ್ತೆ - ನಮ್ಮ ಮನೆಯಲ್ಲೂ ಬೇರೆ ಬೇರೆ ಸಾಕು ಪ್ರಾಣಿಗಳೇಕಿಲ್ಲ? ಎಂಬುದಾಗಿ.  ಈ ನಿಟ್ಟಿನಲ್ಲಿ ಹೆಚ್ಚಿನವರು ಒಂದು ಬೆಕ್ಕನ್ನೋ ಅಥವಾ ನಾಯಿಯನ್ನೋ ಸಾಕುವುದು ಸಾಮಾನ್ಯ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮೊಲವನ್ನೋ, ಗಿಣಿಯನ್ನೋ ಇಟ್ಟುಕೊಂಡಾರು.  ಕೆಲವರು ಎಲ್ಲರನ್ನು ಮೀರಿ exotic ಪ್ರಾಣಿಗಳಾದ ಚೇಳು, ಹಾವು ಮೊದಲಾದ ಸರೀಸೃಪಗಳನ್ನು ಪೋಷಿಸಿಯಾರು.  ಆದರೆ ಇವೆಲ್ಲಕ್ಕಿಂತ ಸುಲಭವಾದ ವಿಧಾನವೊಂದಿದೆ, ಅದು ಮನೆಯಲ್ಲೇ ಅವರವರ ಸಾಮರ್ಥ್ಯ ಅನುಕೂಲಗಳಿಗೆ ತಕ್ಕಂಥ ಫಿಶ್ ಟ್ಯಾಂಕ್ ಒಂದನ್ನು ಇಟ್ಟು ಅದನ್ನು ಜೋಪಾನವಾಗಿ ನೋಡಿಕೊಳ್ಳುವುದು.

ನಮ್ಮ ಮನೆಯಲ್ಲಿ ಸುಮಾರು ೨೦೦೧ ರಿಂದ ಹೀಗೇ ನೋಡಿಕೊಂಡು ಬಂದ ಐದು ಗ್ಯಾಲನ್ ನೀರು ಹಿಡಿಯುವ ಮೀನಿನ ಒಂದು ಚಿಕ್ಕ ಟ್ಯಾಂಕ್ ಇದೆ, ಅದರಲ್ಲಿ ಗೋಲ್ಡ್ ಫಿಶ್‌ಗಳನ್ನು ಬಿಟ್ಟು ಮತ್ತೇನನ್ನೂ ನಾವು ಸಾಕಿ ನಮಗೆ ಗೊತ್ತಿಲ್ಲ.  ನಮ್ಮ ಪ್ರಯೋಗದ ಮೊದ ಮೊದಲು ಅನೇಕ ಮೀನುಗಳು ಸಾಯುತ್ತಿದ್ದವು: ಪಿ.ಎಚ್. ಅಮೋನಿಯಾ, ಕ್ಲೋರೀನ್, ನೈಟ್ರೇಟ್, ನೈಟ್ರೈಟ್ ಮೊದಲಾದ ಕೆಮಿಕಲ್ ವಸ್ತುಗಳಲ್ಲಿ ಯಾವುದೇ ಏರುಪೇರಾದರೂ ಮೀನುಗಳು ಗೊಟಕ್.  ಹೀಗೆ ಜೋಡಿಸಿಟ್ಟ ಫಿಶ್ ಟ್ಯಾಂಕ್‌ಗೆ ನಾವು ಹೊಂದಿಕೊಳ್ಳಲು ನಮಗೆ ಸುಮಾರು ಒಂದು ವರ್ಷವೇ ಬೇಕಾಯಿತು, ಜೊತೆಗೆ ಅನೇಕ ಮೀನುಗಳನ್ನು ನಮ್ಮ ಪ್ರಯೋಗಗಳಿಗೆ ಬಲಿಕೊಟ್ಟದ್ದೂ ಆಯಿತು.  ಹೀಗೆ ನಡೆದು ಬಂದ ಫಿಶ್ ಮ್ಯಾನೇಜ್‌ಮೆಂಟ್ ಅನುಭವದ ಕೊನೆಗೆ ಬಂದು ಮುಟ್ಟಿದಾಗ ಉಳಿದವು ಎರಡು ಗೋಲ್ಡ್ ಫಿಶ್‌ಗಳು - ಅದರಲ್ಲಿ ಒಂದು ಬಿಳಿ ಬಣ್ಣದ್ದು, ಮತ್ತೊಂದು ಕಿತ್ತಳೆ ಬಣ್ಣದ್ದು.  ಎರಡೂ ಕೂಡ ಚೆನ್ನಾಗಿ ರೆಕ್ಕೆಗಳನ್ನು ಉದ್ದುದ್ದವಾಗಿ ಬೆಳೆಸಿಕೊಂಡು ಟ್ಯಾಂಕ್‌ನ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಈಜಾಡುವುದನ್ನು ನೋಡುವುದೇ ಎಂಥವರಿಗೂ ಮುದಕೊಡುತ್ತಿತ್ತು.

ನಮ್ಮ ಚಲನವಲನಗಳು, ವೆಕೇಷನ್ನುಗಳು ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಾವು ಬದಲಾವಣೆ ಮಾಡುವುದು ಇವೆಲ್ಲ ನಮ್ಮ ಮನೆಯ ಫಿಶ್ ಟ್ಯಾಂಕ್‌ನ ನಿವಾಸಿಗಳ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿತ್ತು.  ನಾವು ಮೂರು ವಾರ ಭಾರತಕ್ಕೆ ವೆಕೇಷನ್ನ್ ಹೊರಟರೆ ನಮ್ಮ ಬದಲಿಗೆ ಬೇರೆ ಯಾರಾದರೂ ನಮ್ಮ ಮನೆಗೆ ಬಂದು ಈ ಮೀನುಗಳಿಗೆ ಊಟ ಹಾಕುವ ವ್ಯವಸ್ಥೆಯನ್ನು ಮಾಡಿ ಹೋಗುತ್ತಿದ್ದೆವು, ಅಥವಾ ಈ ಮೀನಿನ ಟ್ಯಾಂಕ್ ಅನ್ನೇ ಅವರ ಮನೆಯಲ್ಲಿಟ್ಟು ನಾವು ಬರುವ ತನಕ ಜೋಪಾನವಾಗಿ ಕಾಯ್ದುಕೊಂಡಿರುವಂತೆ ಮಾಡಿದ್ದೂ ಇದೆ.  ಒಟ್ಟಿನಲ್ಲಿ ಒಂದು ಕಡೆ ಸರಿಯಾಗಿ ನೆಲೆ ನಿಂತ ಇಕೋ ಸಿಸ್ಟಂ ಅನ್ನು ಮತ್ತೊಂದು ಕಡೆ ಪ್ರತಿಷ್ಠಾಪಿಸುವುದು ಅಷ್ಟು ಸುಲಭದ ಮಾತಂತೂ ಅಲ್ಲ.  ಈ ನಿಟ್ಟಿನಲ್ಲಿ ನನ್ನ ಸಹೋದ್ಯೋಗಿಗಳಿಗೆ ಹಾಗೂ ಸ್ನೇಹಿತರಿಗೆ ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಿದೆ.

ನಮ್ಮ ಮನೆಯಲ್ಲಿ ಇದ್ದ ಎರಡು ಮೀನುಗಳನ್ನು ಅವುಗಳ ಟ್ಯಾಂಕ್ ಹಾಗೂ ಪರಿಕರಗಳ ಸಮೇತ ವರ್ಜೀನಿಯಾದಿಂದ ನ್ಯೂ ಜೆರ್ಸಿಗೆ ೨೫೦ ಮೈಲು ದೂರ ತಂದು ನಮ್ಮ ಮನೆಯ ಸಾಮಾನುಗಳ ಜೊತೆಗೆ ಅವುಗಳನ್ನು ಜೋಡಿಸುವಾಗ ಆದ ಕಷ್ಟ ಅಷ್ಟಿಷ್ಟಲ್ಲ.  ಹೀಗೆ ಮಾಡಿ ಅನೇಕ ತಿಂಗಳುಗಳ ತರುವಾಯ ಬಿಳಿಯ ಮೀನು ಯಾವುದೋ ಖಾಯಿಲೆಗೆ ಬಲಿಯಾಗಿ ಸತ್ತು ಹೋದ ಮೇಲೆ ಉಳಿದದ್ದು ಕಿತ್ತಳೆ ಬಣ್ಣದ ಗೋಲ್ಡ್ ಫಿಶ್ ಒಂದೇ.  ಎರಡು ಮೂರು ಮನೆಗಳನ್ನು ತಿರುಗಿ ಬಂದ ಮೇಲೆ ಅದು ಟ್ಯಾಂಕ್‌ನಲ್ಲಿ ತಾನೊಂದೇ ಪ್ರಾಬಲ್ಯವನ್ನು ಮೆರೆಯುತ್ತಾ ತಂದಾಗ ಎರಡು ಅಂಗುಲ ಉದ್ದ ಇದ್ದದ್ದು ದಿನೇ ದಿನೇ ಬೆಳೆದು ಸುಮಾರು ಆರು ಅಂಗುಲ ಉದ್ದಕ್ಕೂ ಹೆಚ್ಚು ದೊಡ್ಡದಾಯಿತು.  ಕಳೆದ ವರ್ಷ ಡಿಸೆಂಬರ್ ಸಮಯದಲ್ಲಿ ಸ್ನೇಹಿತ ಗಾರ್‌ಫೀಲ್ಡ್ ಮನೆಯಲ್ಲಿ ನಾವು ವೇಕೇಷನ್ನಿಗೆ ಹೋದಾಗ ಮೊಕ್ಕಾಂ ಹೂಡಿ ಜನವರಿಯಿಂದ ಮೇ ವರೆಗೂ ಚೆನ್ನಾಗಿಯೇ ಇತ್ತು.

ಮೇ ತಿಂಗಳ ಮೊದಲ ವಾರದಲ್ಲಿ ಅದರ ಲವಲವಿಕೆ ಕುಂಠಿತಗೊಂಡಿತು, ಅದು ಆಹಾರ ಸೇವಿಸುವುದನ್ನು ಸಂಪೂರ್ಣ ಬಿಟ್ಟು ಟ್ಯಾಂಕಿನ ಬುಡದಲ್ಲಿ ಎಲ್ಲೆಂದರಲ್ಲಿ ಅಡ್ಡಾ-ದಿಡ್ಡಿ ಬಿದ್ದುಕೊಂಡಿರುತ್ತಿತ್ತು.  ಅದು ಇನ್ನೇನು ಸರಿ ಹೋದೀತು ಎಂದುಕೊಂಡವನಿಗೆ ಮುಪ್ಪಿನಿಂದ ಅದು ದಿನೇದಿನೇ ಕುಗ್ಗತೊಡಗಿದ್ದು ಗಮನಕ್ಕೆ ಬಂದು ಈ ಮೀನಿನ ಬದುಕಿಗೆ ಯಾವ ರೀತಿಯ ಅಂತ್ಯವನ್ನು ಹಾಡಬೇಕು ಎಂದು ಗೊತ್ತಾಗದೆ ಒಂದೆರೆಡು ಬಾರಿ ಟ್ಯಾಂಕಿನ ನೀರನ್ನು ಖಾಲಿ ಮಾಡಿ ಎಲ್ಲವನ್ನು ಸ್ವಚ್ಛಗೊಳಿಸಿಟ್ಟು ಹಾಗಾದರೂ ಮೀನಿನ ಲವಲವಿಕೆ ಮರುಕಳಿಸಲಿ ಎಂದುಕೊಂಡರೆ ಹಾಗಾಗಲಿಲ್ಲ.

ನನ್ನ ಸ್ನೇಹಿತರು ಹಾಗೂ ಹಿರಿಯರು ಮಾರ್ಗದರ್ಶನ ಮಾಡಿದ ಹಿನ್ನೆಲೆಯಲ್ಲಿ ಅದನ್ನು ದೊಡ್ಡ ಟ್ಯಾಂಕಿನಿಂದ ಸಣ್ಣದೊಂದು ಗಾಜಿನ ಜಾಡಿಗೆ ಬದಲಾಯಿಸಿ ಅದರ ಬದಲಿಗೆ ಬೇರೆ ಹೊಸ ಮೀನುಗಳನ್ನು ತಂದು ಹಾಕುವುದೆಂದು ಯೋಚಿಸಿ ಹಾಗೆ ಮಾಡಲನುವಾದೆ.  ಅಂಗಡಿಗೆ ಹೋಗಿ ಉತ್ಸಾಹದಿಂದ ಪುಟಿಯುತ್ತಿದ್ದ ಅವೇ ಒರ್ಯಾಂಡಾ (oranda) ಜಾತಿಯ ಥರಾವರಿ ಬಣ್ಣಗಳ ನಾಲ್ಕು ಮೀನುಗಳನ್ನು ತಂದೆ.  ಒಂದು ಕಡೆ ಹೊಸ ಮೀನುಗಳನ್ನು ಅವುಗಳನ್ನು ತಂದ ಪ್ಲಾಸ್ಟಿಕ್ ಕವರ್ ಸಮೇತ ಟ್ಯಾಂಕಿನ ನೀರಿನ ತಾಪಮಾನಕ್ಕೆ ಹೊಂದುಕೊಳ್ಳಲು ಬಿಟ್ಟು, ಮತ್ತೊಂದು ಸಣ್ಣ ಗಾಜಿನ ಜಾಡಿಯನ್ನು ಅನುಗೊಳಿಸಿದೆ.  ಅದರಲ್ಲಿ ಹಳೆಯ ಮೀನನ್ನು ಹುಷಾರಾಗಿ ಇಟ್ಟೆ, ನಾನು ತೆಗೆದು ಹಾಕುವಾಗ ಒಂದಿಷ್ಟು ಕೊಸರಾಡಿದ ಮೀನು, ಹೊಸ ಜಾಡಿಯ ತಳದಲ್ಲಿ ನಿಧಾನವಾಗಿ ಉಸಿರಾಡುತ್ತಾ ಬಿದ್ದುಕೊಂಡಿದ್ದು ನೋಡಿ ಕರುಳು ಕಿವುಚಿದಂತಾಯಿತು.  ಅದನ್ನು ಅಲ್ಲಿಗೆ ಬಿಟ್ಟು ಹೊಸ ಮೀನುಗಳನ್ನು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಾಗ ಅವುಗಳಿಗೆ ಒಂದು ಕಡೆ ಸಂಭ್ರಮವೂ ಮತ್ತೊಂದು ಕಡೆ ಹೆದರಿಕೆಯೂ ಸೇರಿಕೊಂಡು ಟ್ಯಾಂಕಿನ ಮೂಲೆ ಮೂಲೆಗಳಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು.  ಸ್ವಲ್ಪ ಹೊತ್ತಿನ ತರುವಾಯ ಅವುಗಳು ತಮ್ಮ ಹೊಸ ವಾತಾವರಣಕ್ಕೆ ಹೊಂದಿಕೊಂಡ ಎಲ್ಲ ಸೂಚನೆಗಳೂ ಕಂಡು ಬಂದು, ಈ ಟ್ಯಾಂಕಿನಲ್ಲಿ ವರ್ಷಾನುಗಟ್ಟಲೆ ಮನೆ ಮಾಡಿದ್ದ ನೆಲೆ ನಿಂತಿದ್ದ ಆ ಮಹಾಶಯನ ಗುರುತು ಪರಿಚಯವೂ ವಾಸನೆಯೂ ಅವುಗಳಿಗೆ ಒಂದಿಷ್ಟು ಇರದಿದ್ದ ಮುಗ್ಧತೆಯಲ್ಲಿ ಜೀವಿಸತೊಡಗಿದವು.

ಇತ್ತ ಸಣ್ಣ ಗಾಜಿನ ಜಾಡಿಯಲ್ಲಿನ ಹಳೆಯ ಮೀನಿನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗದೇ ಅದೇ ದಿನ ರಾತ್ರಿ ಎಷ್ಟೋ ಹೊತ್ತಿಗೆ ಅದರ ಪ್ರಾಣಪಕ್ಷಿ ಹಾರಿ ಹೋಗಿದ್ದು ನಮಗೆಲ್ಲ ನಿಚ್ಛಳವಾಯಿತು.  ನಮಗೆಲ್ಲ ಇಷ್ಟೊಂದು ವರ್ಷ ಫ್ಯಾಮಿಲಿ ಮೆಂಬರಿನಂತಿದ್ದ ಮೀನಿನ ಅಂತ್ಯಕ್ರಿಯೆಗೋಸ್ಕರ ನಾನು ಶವೆಲ್ಲೊಂದನ್ನು ತೆಗೆದುಕೊಂಡು ರಾತ್ರಿ ನಮ್ಮ ಹಿತ್ತಲಿಗೆ ಹೋಗಿ ಸಣ್ಣ ತಗ್ಗನ್ನು ತೆಗೆದು ಅಲ್ಲಲ್ಲಿ ಮಿಡತೆಗಳು ಅಳುತ್ತವೆಯೇನೋ ಎನ್ನುವ ಕಿರುಗುಟ್ಟುವಿಕೆಯ ಹಿನ್ನೆಲೆಯ ನಡುವಿನ ಮೌನದ ಸಹಾಯದಿಂದ ಯಾವೊಂದು ಮಾತನಾಡದೆ ಎರಡು ಮುಷ್ಠಿ ಮಣ್ಣನ್ನು ಕೈಯಿಂದ ಹಾಕಿ ಉಳಿದದ್ದನ್ನು ಶವೆಲ್ಲಿನಿಂದಲೇ ಮುಚ್ಚಿ ಸಂಸ್ಕಾರ ಮಾಡಿದೆ.

ಮರುದಿನ ಇಂಚರ (ನಮ್ಮ ನಾಲ್ಕು ವರ್ಷದ ಮಗಳು) ಅನೇಕ ಬಾರಿ ಹಳೇ ಮೀನು ಎಲ್ಲಿ ಹೋಯಿತು? ಅದು ಏಕೆ ಸತ್ತಿತು? ಸತ್ತಾಗ ಏನಾಗುತ್ತದೆ? ಯಾಕೆ ಹಿತ್ತಲಿನಲ್ಲಿ ಮಣ್ಣು ಮಾಡಿದೆ? ನನ್ನನ್ನೇಕೆ ಕರೆಯಲಿಲ್ಲ? ಎಂದು ಕೇಳಿದ ಅನೇಕಾನೇಕ ಪ್ರಶ್ನೆಗಳಿಗೆ ನನ್ನ ಶಕ್ತಿ ಮೀರಿ ಸರಳವಾಗಿ ಉತ್ತರಿಸಿದ್ದಾಯಿತು.  ನಾವು ಹಳೇ ಮೀನಿಗೆ ಯಾವುದೇ ಹೆಸರನ್ನಿಟ್ಟಿರಲಿಲ್ಲ - Elmo’s world ನಲ್ಲಿ ಬರುವ Dorothyಯ ದೆಸೆಯಿಂದ ಇಂಚರ ಅದನ್ನು ನಮ್ಮ ಮನೆಯ ಡೊರೋತಿ ಅಂದುಕೊಂಡಿದ್ದನ್ನು ಬಿಟ್ಟರೆ, ಅದೇ ಛಾಳಿಯನ್ನು ಮುಂದುವರೆಸಿ ನಾವು ಈ ಹೊಸ ಮೀನುಗಳಿಗೂ ಹೆಸರನ್ನೂ ಇಟ್ಟಿಲ್ಲ.

ಪ್ರತಿ ದಿನ ಆಫೀಸಿನಿಂದ ಬಂದಾಗ ಶೂ ತೆಗೆದು ಅದರ ಸ್ಥಳದಲ್ಲಿಟ್ಟು ನಂತರ ಮಾಡುವ ಕೆಲಸವೇ ಈ ಮೀನಿನ ಟ್ಯಾಂಕಿನ ಲೈಟ್ ಹಾಕಿ ಅವುಗಳಿಗೆ ಪ್ಲ್ಹೇಕ್ ಫುಡ್ಡನ್ನು ಹಾಕುವುದು, ಈ ಹೊಸ ಮೀನುಗಳ ಸಹಾಯದಿಂದ ವರ್ಷಾನುಗಟ್ಟಲೆ ನಡೆದ ಬಂದ ಕಾಯಕ ಇಂದಿಗೂ ಹಾಗೇ ಮುಂದುವರೆದಿದೆ.

***

ಸಾವು-ನೋವಿನ ವಿಚಾರಕ್ಕೆ ಬಂದಾಗ ಅಮೇರಿಕದ ನಮ್ಮ ಅನುಭವ ವ್ಯಾಪ್ತಿ ಕಡಿಮೆಯೇ.  ಬೇರೆ ಯಾರೂ ರಕ್ತ ಸಂಬಂಧಿಗಳಿಲ್ಲದ ಈ ದೇಶದಲ್ಲಿ ಸಾವು ಎನ್ನುವ ಮಹತ್ವಪೂರ್ಣವಾದ ಬದುಕಿನ ಮಜಲಿನ ಅನುಭವ ನಮಗೆ ಭಾರತದಲ್ಲಿ ಇದ್ಧಾಗ ಆಗುವಂತೆ ಇಲ್ಲಿ ಆಗುವುದಿಲ್ಲ.  ನಮ್ಮ ನೆಂಟರು-ಇಷ್ಟರು-ಬಂಧು-ಬಳಗ ಇವರೆಲ್ಲರ ಮದುವೆ ಮುಂಜಿಗಳಿಗೆ, ಕಷ್ಟ-ನಷ್ಟಗಳಿಗೆ ನಾವು ಎಂದಿನ ಸಂವೇದನೆಯನ್ನು ತೋರೋದಿಲ್ಲ.  ಸಾವನ್ನು ಬೇಕು ಎಂದು ಆರಿಸಿಕೊಳ್ಳದಿದ್ದರೂ ಹುಟ್ಟು ತರುವಷ್ಟೇ ಮುಖ್ಯವಾದ ಬದಲಾವಣೆಯನ್ನು ಸಾವೂ ತರಬಲ್ಲದು.  ಈ ನಿಟ್ಟಿನಲ್ಲಿ ಸಾಕು ಪ್ರಾಣಿ ಮೀನಿನ ಸಾವು ಅದರ ಜೊತೆಗಿದ್ದ ನಮ್ಮ ವರ್ಷಾನುಗಟ್ಟಲೆಯ ಬಂಧನವನ್ನು ಕಳಚಿ ಹಾಕುವುದರ ಮೂಲಕ ದೂರದಲ್ಲಿರುವ ನಮಗೆ ಹತ್ತಿರದ ಬಂಧುವನ್ನು ಕಳೆದುಕೊಂಡ ನೆನಪನ್ನು ಎತ್ತಿ ಹಿಡಿಯಿತು.  ಸಾವಿರದ ಮನೆಯಿಂದ ಸಾಸಿವೆ ತರುವ ಪ್ರಯತ್ನವನ್ನು ಇನ್ನೂ ಯಾರಾದರೂ ಮಾಡುತ್ತಿದ್ದರೆ ಆ ದೃಷ್ಟಿಯಲ್ಲಿ ನಾವು ಹೊರಗುಳಿದಿರುವುದು ಸ್ಪಷ್ಟವಾಯಿತು.  ನಮ್ಮಂಥ ನ್ಯೂಕ್ಲಿಯರ್ ಕುಟುಂಬಗಳಿಗೆ ಈ ಸಣ್ಣ ಅಗಲಿಕೆ ಬದುಕು ಒಡ್ಡುವ ಅನೇಕ ಬದಲಾವಣೆಗಳ ನೆನಪು ಮಾಡುವಲ್ಲಿ ಯಶಸ್ವಿಯಾಯಿತು.  ಜೊತೆಯಲ್ಲಿ ನಮ್ಮ ಸಂಬಂಧಿಗಳ, ಬಂಧು-ಮಿತ್ರರ, ಒಡಹುಟ್ಟಿದವರ ನೋವು-ನಲಿವುಗಳಿಗೆ ಸಕಾಲಕ್ಕೆ ಆಗಿಬರದ ನಾವು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿ ಬಿಟ್ಟೆವೇನೋ ಎನ್ನಿಸಿಬಿಟ್ಟಿತು.