Thursday, December 31, 2009

ಯಾರೂ ಇದರ ಬಗ್ಗೆ ಏಕೆ ಮಾತನಾಡಲ್ಲ?

ಸದ್ಯ, ಈ ದಿನ ಪ್ರಜಾವಾಣಿ ಮುಖಪುಟ ತೆರೆದು ನೋಡ್ತಾಗ ಮೃತ್ಯುದೇವತೆ ಕನ್ನಡದ ಅಭಿಮಾನಿಗಳ ಮೇಲೆ ಹ್ಯಾಟ್ರಿಕ್ ಹೊಡೆತವನ್ನೇನೂ ಕೊಟ್ಟಿರಲಿಲ್ಲ ಎಂದು ಸಮಾಧಾನ ಮೂಡಿತು.  ಕೊನೆಗೆ ಆದ ಘಟನೆಗಳ ಸಿಂಹಾವಲೋಕನ ಮಾಡಲಾಗಿ ಅಭಿಮಾನಿಗಳು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದುದನ್ನು ನೋಡಿ ಅವರ ತರ್ಕವೇನು ಎಂದು ಯೋಚಿಸಿ ಮನ ಹೆಣಗಿತು, ಇವೆಲ್ಲದರ ನಡುವೆ ವಿಷ್ಣುವರ್ಧನ್ ಕೇವಲ ೫೯ ವರ್ಷಕ್ಕೆ ಸಾಯಲು ಕಾರಣವೇನಿರಬಹುದು ಎಂದು ಆಶ್ಚರ್ಯವೂ ಆಯಿತು.

 

ನಮ್ಮ ನಂಬಿಕೆಯ ಪ್ರಕಾರ ಆಯಸ್ಸು ತೀರಿದವರು ಎಲ್ಲಿದ್ದರೂ ಮೃತ್ಯುದೇವತೆಯನ್ನು ವಂಚಿಸಲಾಗದು ಎನ್ನುವುದನ್ನು ತಲೆಯ ಒಂದು ಬದಿಯಲ್ಲಿಟ್ಟುಕೊಂಡೇ ಮತ್ತೊಂದು ಕಡೆ ವೈದ್ಯಕೀಯ ವಿಜ್ಞಾನ ಇಷ್ಟೊಂದು ಬೆಳೆದಿರುವಾಗ ವಿಕ್ರಂ ಆಸ್ತ್ಪತ್ರೆಯ ವೈದ್ಯರು ರಾತ್ರಿ ಕಾಡಿದ ಎದೆನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾದರೇನೋ ಎಂದು ಬಲವಾದ ಸಂಶಯ ಕೂಡ ಬಂತು.  ಒಬ್ಬ ೫೯ ವರ್ಷದ ಮನುಷ್ಯ, ಯಾರೇ ಇರಲಿ, ಎದೆ ನೋವು ಎಂದು ರಾತ್ರಿ ಹತ್ತು ಘಂಟೆಗೆ ಆಸ್ಪತ್ರೆಗೆ ಬಂದರೆ ಅಂಥವರನ್ನು ಅಡ್ಮಿಟ್ ಮಾಡಿಕೊಳ್ಳದೇ ಹೇಗೆ ಮನೆಗೆ ಕಳುಹಿಸುತ್ತೀರಿ?  ಮಾಡಬೇಕಾದ ಸ್ಕ್ಯಾನಿಂಗ್ ಎಲ್ಲವನ್ನೂ ಮಾಡಿದ್ದೀರೋ? ಅಥವಾ ಪೇಷೆಂಟ್ ತಮ್ಮ ಸ್ವ-ಇಚ್ಚೆಯಿಂದ ಸೈನ್-ಔಟ್ ಮಾಡಿ ಮನೆಗೆ ಹೋದರೋ?

 

ಅಮೇರಿಕದಲ್ಲಿ ಕುಳಿತ ನಮಗೆ ಈ ರೀತಿಯ ಒಣತರ್ಕ ಮಾಡಲು ಸುಲಭ, ಇಲ್ಲಿನ ಲಿಟಿಗೇಶನ್ ವ್ಯವಸ್ಥೆ ಏನೇನೋ ಅನಾನುಕೂಲಗಳನ್ನು ಕಲ್ಪಿಸಿದ್ದರೂ ಈ ರೀತಿ ಯೋಚಿಸುವ ಮನಸ್ಥಿತಿಯನ್ನಾದರೂ ಹುಟ್ಟಿಸಿದೆ ಎನ್ನುವುದು ದೊಡ್ಡ ವಿಷಯ.  ಯಾರಾದರೂ ವಿಕ್ರಂ ಆಸ್ಪತ್ರೆಯ ಚಾರ್ಟ್ ತೆಗೆದು ನೋಡಿದ್ದಾರಾ? ಅಂದು ರಾತ್ರಿ ಕಾಲ್‌ನಲ್ಲಿ ಇದ್ದ ಆಸ್ಪತ್ರೆ ಸಿಬ್ಬಂದಿ ಯಾರು? ಅವರು ಏನೇನು ಪರೀಕ್ಷೆಗಳನ್ನು ಮಾಡಿದ್ದಾರೆ, ರೋಗಿಯನ್ನು ಹೊರಹೋಗಲು ಬಿಡುವ ಮುನ್ನ ಯಾವ ಯಾವ ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ?  ಏನಾದರೂ ಔಷಧಿ-ಮದ್ದನ್ನು ಕೊಟ್ಟಿದ್ದಾರೋ ಅಥವಾ ಮರುದಿನ ಮತ್ತೆ ಬರಲು ತಿಳಿಸಿದ್ದಾರೋ? ವಿಕ್ರಂ ಆಸ್ಪತ್ರೆ ಚಿಕ್ಕದ್ದಿದ್ದು ಅಲ್ಲಿ ರೋಗಿಯನ್ನು ಇಟ್ಟುಕೊಳ್ಳಲಾಗದಿದ್ದರೆ ಹತ್ತಿರದ ದೊಡ್ಡ ಆಸ್ಪತ್ರೆಗೇನಾದರೂ ವಿಷಯ ತಿಳಿಸಿದ್ದರೋ? ಇತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ, ಯಾರೂ ಇದರ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಲಿಲ್ಲ/ಕಾಣಲಿಲ್ಲ.

 

ಆದದ್ದು ಆಯ್ತು, ಎಂದು ಸುಮ್ಮನೆ ಬಿಟ್ಟು ಬಿಡಬಹುದಾದ ವಿಷಯ ಇದಲ್ಲ.  ರೋಗಿ/ವ್ಯಕ್ತಿ ಯಾರೇ ಆಗಿದ್ದರೂ ಆಸ್ಪತ್ರೆ/ವೈದ್ಯರು ತಮ್ಮ-ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕು, ಕೊನೇಪಕ್ಷ ಈ ಘಟನಾವಳಿಗಳಲ್ಲಿ ತಪ್ಪೇನಾದರೂ ನಡೆದಿದ್ದು ಸಾಬೀತಾದರೆ ಇನ್ನು ಮುಂದೆ ಹೀಗಾಗದಂತೆ ನೋಡಬೇಕು.

 

ಅದೇ ರೀತಿ ಅಶ್ವಥ್ ಸಾವೂ ಕೂಡಾ ಅನಿರೀಕ್ಷಿತ ಎಂದೇ ಹೇಳಬೇಕು.  ವೈದ್ಯರು ಇನ್ನೇನು ಗುಣಮುಖರಾಗುತ್ತಾರೆ ಎಂದು ಹೇಳಿದ್ದರಂತೆ, ಏನು ತೊಂದರೆ ಆಯಿತೋ? ಕಿಡ್ನಿ-ಲಿವರ್ ತಮ್ಮ ಸಾಮರ್ಥ್ಯಗಳಲ್ಲಿ ಕ್ಷೀಣಿಸುತ್ತಾ ಬಂದಂತೆ ಅದನ್ನು ಮೊದಲೇ ಪತ್ತೆ ಹಚ್ಚಿ ಯಾವುದಾದರೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದರೋ ಇಲ್ಲವೋ.  ಕ್ಷಮಿಸಿ, ನಾನು ವೈದ್ಯನೇನಲ್ಲ, ಈ ರೀತಿ ಪ್ರಶ್ನೆಗಳನ್ನು ಹಾಕುತ್ತಿರುವುದು ಉದ್ಧಟತನದಿಂದಲ್ಲ, ಕೇವಲ ಕುತೂಹಲದಿಂದ ಮಾತ್ರ.  ಎಲ್ಲೋ ಕುಳಿತು ಇನ್ನೆಲ್ಲಿಯೋ ಸರ್ಜರಿ ಮಾಡುವು ಇಂದಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಇಬ್ಬರು ಮಹಾಚೇತನಗಳನ್ನು ಎರಡು ದಿನಗಳಲ್ಲಿ ಕಳೆದುಕೊಂಡು ರೋಧಿಸುವ ಅಭಿಮಾನಿ ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವೆಂದುಕೊಂಡಿದ್ದೇನೆ.

 

ನಿಮಗೇನಾದರೂ ಹೆಚ್ಚು ತಿಳಿದಿದ್ದರೆ ನಮಗೂ ಸ್ಪಲ್ಪ ತಿಳಿಸಿ.

 

image

(ಕೃಪೆ: ಪ್ರಜಾವಾಣಿ)

3 comments:

ದಿನಕರ ಮೊಗೇರ said...

ಸತೀಶ್ ಸರ್,
ನನಗೂ ಈ ಪ್ರಶ್ನೆ ಕಾಡಿತ್ತು................ ಆದರೆ ಯಾರನ್ನು ಕೇಳೋದು.............

Manju Bhat said...

ನಿಮ್ಮ ಪ್ರಶ್ನೆ ಸರಿಯಾಗಿದೆ. ಆದರೆ ನನಗೆ ಸಿಕ್ಕ ವರದಿಯಪ್ರಕರ ವಿಷ್ಣು ಆಸ್ಪತ್ರೆಗೆ ಬೆತಿಕೊತ್ತಿದ್ದು ಬೆಳಿಗ್ಗೆ. ಅದೇನೇ ಇರಲಿ ಇದು ಕನ್ನಡಿಗರಿಗೆ ತುಂಬಲಾಗದ ನಸ್ಟ. ಇವರ ಸ್ತಾನವನ್ನ ಇನ್ನು ತುಂಬುವಾರರು???

ಸಾಗರದಾಚೆಯ ಇಂಚರ said...

ವಿಷ್ಣು ಸಾವಿನ ಆಘಾತ ಮಾತ್ರ ನಮಗೆ ಅರಿವಿಗೆ ಬಂತು
ಇಂಥಹ ಪ್ರಶ್ನೆಗಳು ತುಂಬಾ ಕಾಡಿತು