Saturday, November 07, 2009

ನಮ್ಮ ದೇಶ ನಮ್ಮದು!

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು.  ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ.  ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

 

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು.  ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ.  ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು.  ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು.  ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು.  ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

 

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ.  ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು.  ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು.  ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ.  ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ.  ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು.  ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

 

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು?  ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ?  ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ?  ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ?  ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು?  ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

 

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು.  ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ.  ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ.  ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.

3 comments:

Keshav.Kulkarni said...

ಹೌದ್ರೀ, ನೀವ್ಹೇಳೋದ್ರಾಗ ಖರೆ ಅದ. ನೀವಂದಂಗ ನಂಗೂ ಇಲ್ಲಿ ಕೆಲವೊಬ್ರ ಜೊತೆ ಮಾತಾಡು ಮುಂದ ಅನಿಸ್ಯೇದ.
- ಕೇಶವ

sunaath said...

ಸತೀಶ,
I may not agree with you. ಭಾರತದಲ್ಲಿಯೇ ಇರುವ ನನಗೆ ಭಾರತದಲ್ಲಾಗುತ್ತಿರುವ lopsided ಬೆಳವಣಿಗೆಯ ಬಗೆಗೆ ವಿಷಾದವಿದೆ. ಭಾರತದಲ್ಲಿ ತಂತ್ರಜ್ಞಾನ ಅಪಾರವಾಗಿ ಬೆಳದಿರಬಹುದು, ಆದರೆ ಪ್ರತಿದಿನವೂ ಇಲ್ಲಿಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ನಾಗರಿಕನಿಗೆ ಶುದ್ಧ ನೀರು ಸಿಗೋದಿಲ್ಲ...ಇತ್ಯಾದಿ. ನಮ್ಮ ರಾಜಕಾರಣಿಗಳಿಗೆ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಧೈರ್ಯವಿಲ್ಲದಿರುವದೇ ಇದಕ್ಕೆ ಕಾರಣ ಅಂತ ಅನಸ್ತದ.

Satish said...

ಕೇಶವ್,
ಭಾಳ್ ದಿನಾ ಆತ್ ನೋಡ್ರಿ ನಿಮ್ಮಿಂದಾ ಸುದ್ದೀನೇ ಇಲ್ಲ...

ಸುನಾಥ್,
ಶುದ್ಧ ನೀರು ಅನ್ನೋದು ಎಂದಿನಿಂದಲೂ ನಮಗೆ ಸಮಸ್ಯೇ ಅಲ್ಲವೇ? ತಂತ್ರಜ್ಞಾನ ಇನ್ನೂ ಬೆಳೀತಿದೆ, ನಮ್ಮ ಮೂಲಭೂತ ಸಮಸ್ಯೆಗಳು ನಮ್ಮಿಂದ ದೂರವಾಗಲು ಇನ್ನೂ ಹಲವು ದಶಕಗಳು ಬೇಕು. ರಾಜಕಾರಣಿಗಳು ಸಮಾಜದ ಒಂದು ಅಂಗ, ಅವರನ್ನಷ್ಟೇ ದೂರಿದರೆ ಪ್ರಯೋಜನವಾಗಲಾರದು.