Thursday, March 29, 2007

ಕಾಲವಾದ kaaloo!




http://kaalachakra.blogspot.com/

ದುರದೃಷ್ಟವಷಾತ್ ಮೊನ್ನೆ ನಡೆದ ಅವಘಡದಲ್ಲಿ ನಮ್ಮೆಲ್ಲರ ಆತ್ಮೀಯ, ಕಾಳೂ, ಕಾಲೂದಾದ, ಕಾಳೂ ಮಾಮ ಎಂದೇ ಜನಪ್ರಿಯವಾಗಿದ್ದ kaaloo ಬೆಳ್ಳಿತೆರೆಯಿಂದ ನಿರ್ಗಮಿಸಿದ್ದನ್ನು ಬಹು ದುಃಖದಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ನಮ್ಮ ನಿಮ್ಮೆಲ್ಲರ ಬಯಲುಸೀಮೆಯ ತೆರೆದ ಧ್ವನಿಯ ಜೊತೆಗೆ ಹೃದಯದಲ್ಲಿ ಕರ್ನಾಟಕದ ರಾಜಕೀಯ ಚಲನವಲನಗಳನ್ನು ತನ್ನದೇ ಆದ ಧಾಟಿಯಲ್ಲಿ ತನ್ನ ಸ್ನೇಹಿತರಾದ ಕೋಡೀಹಳ್ಳಿ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರ ಜೊತೆ ಸೇರಿಕೊಂಡು ದೇವೇಗೌಡ, ಧರಮ್ ಸಿಂಗ್, ಯಡಿಯೂರಪ್ಪ ಮೊದಲಾದವರ ಚೇಲಾಗಳು ಎಷ್ಟೊತ್ತಿಗೆ ಬೇಕಾದರೂ ನನ್ನ ಮನೆ ಕಿಟಕಿ ಗಾಜುಗಳನ್ನು ಒಡೆಯಬಹುದು ಎಂದು ಒಳಗೊಳಗೆ ಹೆದರಿಕೊಂಡೇ ಪುರುಸೊತ್ತಾದಾಗಲೆಲ್ಲ ಭಾರತೀಯ ಕಾಲಮಾನದಲ್ಲಿ ಅಲ್ಲಿನ ವ್ಯತಿರಿಕ್ತ ಮನೋಸಂಕಲ್ಪಗಳ ಕಾದಾಟದಲ್ಲಿಯೂ ತನ್ನ ಮನಸ್ಸಿನ ಚಿತ್ರಗಳನ್ನು ತೆರೆದಿಡುತ್ತಿದ್ದ. ಅಂತಹ kaaloo ಇನ್ನಿಲ್ಲ!

ಆದದ್ದಿಷ್ಟೇ: ಸುಮ್ಮನಿರಲಾರದ ನಾನು ಮೊನ್ನೆ kaaloo ವನ್ನು ರಾತ್ರಿ ಊಟಕ್ಕೆ ನಮ್ಮ ಮನೆಗೆ ಆಮಂತ್ರಿಸಿ ಊಟವಾದ ಬಳಿಕ ಲೋಕಾಭಿರಾಮವಾಗಿ ಹರಟೆ ಹೊಡೆದು ರಾತ್ರಿ ಹನ್ನೊಂದೂವರೆ ಹೊತ್ತಿಗೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಇನ್‌ಫರ್ಮೇಷನ್ ಹೈವೇಯಲ್ಲಿ ಘಂಟೆಗೆ ಸುಮಾರು ೬೦ ಮೈಲಿಯ ವೇಗದಲ್ಲಿ ಡ್ರಾಪ್ ಮಾಡಲು ಹೊರಟಿದ್ದೆ. ಗೂಗಲ್‌ನವರು ಬ್ಲಾಗರ್ ಅಕೌಂಟನ್ನು ಅದೇ ಹೊತ್ತಿಗೆ ಮರ್ಜ್ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ, ಗೂಗಲ್ ವಾಹನ ಮರ್ಜ್ ಆಗುವ ಹೊತ್ತಿನಲ್ಲಿ ನನ್ನ ತಪ್ಪಿನಿಂದಾಗಿ ಪ್ಯಾಸೆಂಜರ್ ಸೀಟಿನಲ್ಲಿ ಕುಳಿತಿದ್ದ kaaloo ಬಲವಾದ ಹೊಡೆದ ಬಿದ್ದಿದ್ದರಿಂದ ಸ್ಥಳದಲ್ಲೇ ಅಸುನೀಗಿಬಿಟ್ಟರು. ರಕ್ತಸ್ರಾವವೇನೂ ಮೇಲ್ನೋಟಕ್ಕೆ ಕಂಡುಬರದಿದ್ದರೂ ಒಳಗೊಳಗೇ ಹೊಡೆತ ತಿಂದು 'ಬಡವಾ ನೀ ಮಡುಗ್ದಂಗಿರು!' ಎಂದು ಹೇಳಿದ್ದೇ ಅವರ ಕೊನೆ ಉಸಿರಾಗಿ ಹೋಯಿತು.

ಪಲ್ಸ್ ಚೆಕ್ ಮಾಡಿ ನೋಡಿದ ನಾನು ಏನೇ ತಿಪ್ಪರಲಾಗ ಹಾಕಿದರೂ, ಗೂಗಲ್ ವಾಹನದ ಅವಘಡವನ್ನು ವಿವರಿಸಿ ದೊಡ್ಡ ಕಂಪನಿಯವರಿಗೆ ಬರೆದರೂ ಯಾರೂ ನಮ್ಮ kaaloo ವನ್ನು ಉಳಿಸಿಕೊಳ್ಳಲು ಸಹಾಯ ಮಾಡದೇ ಹೋದರು.

kaaloo ವನ್ನು ತಿಂದ ನಮ್ಮ ರಸ್ತೆ, ವಾಹನ, ಗೂಗಲ್ ಅಂತಹ ದೊಡ್ಡ ಕಂಪನಿ, ನನ್ನ capitalistic ಮೈಂಡ್‌ಸೆಟ್ಟಿನವನನ್ನು kaaloo ವಿನ ಆತ್ಮೀಯರಾದ ಮೇಷ್ಟ್ರು, ನಂಜ, ತಿಮ್ಮಕ್ಕ ಮುಂತಾದವರೆಲ್ಲರೂ ಹಳಿದಿದ್ದೇ ಹಳಿದಿದ್ದು. 'ನಿಮ್ ಅಮೇರಿಕನ್ ಆಕ್ರಮಿಕೆಯ ವಸಾಹತುಶಾಹಿ ಮನೋಭಾವದ ಮುಂಡಾ ಮೋಚಾ!' ಎಂದೂ, 'ಅಲ್ಲೀ ನೀರ್ ಕುಡ್ದು ಅಲ್ಲಿಗೇ ಜೀತಾ ಮಾಡೋ ನಿಮ್ ಕರ್ಮಕ್ಕೆ ಮೆಟ್ನಾಗ್ ಹೊಡಿಯಾ!' ಎಂತಲೂ, ಇನ್ನೂ ಮುಂತಾಗಿ kaaloo ವನ್ನು ತಿಂದು ಹಾಕಿದ ನನ್ನನ್ನು ದೂರಿ ಹಲವಾರು ಸಂದೇಶಗಳು ನಿರಂತರವಾಗಿ ಬರತೊಡಗಿವೆ.

ಕಳೆದ ವರ್ಷ "ಅಂತರಂಗಿ"ಯನ್ನು ಕೆಲಸದಿಂದ ಬಿಡಿಸಿ 'ಅಂತರಂಗ'ವನ್ನು ಬಸವನ ಹುಳುವಿನಂತೆ ಬಸವಳಿಯುವಂತೆ ಮಾಡಿದ್ದನ್ನು ಜನರು ಇನ್ನೂ ಮರೆಯುವ ಮೊದಲೇ ಮತ್ತೊಬ್ಬ ಹವ್ಯಾಸಿ ಬರಹಗಾರನನ್ನು ಇಲ್ಲವಾಗಿಸಿದ್ದಕ್ಕೆ ಅಥವಾ ಅವರ ಜವಾಬ್ದಾರಿಯನ್ನೂ ನನ್ನ ಮೇಲೆ ಹೇರಿಕೊಂಡು ಈಗಾಗಲೇ mediocre ಕೆಲಸಮಾಡಿಕೊಂಡಿರುವ ನನ್ನಿಂದ ಹೆಚ್ಚಿನದೇನನ್ನೂ ನಿರೀಕ್ಷಿಸ ಜನರಿಗೆ ನಾನು ಹೇಳುವುದಾದರೂ ಏನಿದೆ.

kaaloo ವಿನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅಲ್ಲಲ್ಲಿ ಕಾಲೂವಿನ ಆತ್ಮ ಜಾಗರೂಕವಾಗಿ ಏನಾದ್ರೂ ನುಡಿದಿದ್ದೇ ಆದಲ್ಲಿ ಅದನ್ನೂ ಪುರಸ್ಕರಿಸಬೇಕಾಗಿ ನನ್ನ ಮನವಿ. ಪುರುಸೊತ್ತು ಸಿಕ್ಕರೆ kaaloo ವಿನ ಆತ್ಮಕ್ಕೆ ಇಲ್ಲಿ ಶಾಂತಿಕೋರಿ.

Thursday, March 15, 2007

ಸ್ಟಾಪ್ ಸೈನೂ ಸಿಗ್ನಲ್ ಲೈಟೂ






ವಯಸ್ಸಾಗಿರೋ ಕುರುಹು ಅನ್ನೋ ಹಾಗೆ ಪ್ರತಿಯೊಬ್ಬರಿಗೂ ಬೇಕಾದಷ್ಟು ಸೂಚನೆಗಳು ಸಿಗುತ್ತವೆ. ಅವರವರ ಮೂಗಿನ ಹೊಳ್ಳೆಗಳಲ್ಲಿ ಬೆಳೆದು ನಿಂತ ಕೂದಲುಗಳನ್ನು ಕತ್ತರಿಸುವ ಅಗತ್ಯದಷ್ಟು ಸರಳವಾದ ಅಥವಾ ಮದುವೆ-ಮುಂಜಿ ಮಾಡಿಕೊಂಡು ಸಂಸಾರ ಹೂಡುವಷ್ಟು ಸಂಕೀರ್ಣವಾದ ಹಂತಗಳನ್ನು ಎಲ್ಲರೂ ದಾಟಿಕೊಂಡು ಬಂದೇ ಬರುತ್ತಾರೆ. ನಾವು ಬೆಳೆದು ದೊಡ್ಡವರಾದ ಹಾಗೆ ನಮ್ಮ ಬೆಳವಣಿಗೆ, ನಮ್ಮ ಪ್ರಬುದ್ಧತೆ ಎಲ್ಲ ಕಡೆಗಳಲ್ಲೂ ಸಹಾಯ ಮಾಡುತ್ತದೆ ಎನ್ನೋದೇನೋ ನಿಜ, ಆದರೆ ಅದು ಎಷ್ಟೋ ಸಾರಿ ಅಸಹಾಯಕತೆಯನ್ನೂ ತಂದೊಡ್ಡುತ್ತದೆ. ಎಲ್ಲ ಮುಖ್ಯ ನಿಲುವು ನಿರ್ಧಾರಗಳಲ್ಲಿ ಅವರವರನ್ನು ಹೂಡಿಕೊಂಡು ಮುಂದೆ ಬರುವ ಅನಿರೀಕ್ಷಿತ ತಿರುವುಗಳಲ್ಲಿ ಇನ್ನು ಯಾವ ಯಾವ ನಿರ್ಧಾರವನ್ನು ಕೈಗೊಳ್ಳುವುದೋ ಏನೋ ಎನ್ನುವ ಹೆದರಿಕೆಯೂ ಮನೆಮಾಡಿಕೊಂಡಿರುತ್ತದೆ. ಸೇತುವೆ ಬಂದಾಗ ನೋಡಿದರಾಯಿತು ಈಗೇಕೆ ಎನ್ನುವ ಮಾತುಗಳು ಹೇಳಲಿಕ್ಕೆ ಮಾತ್ರ ಚೆಂದವೇನೋ ಅನ್ನಿಸೋದಿಲ್ಲವೇ, ಎಷ್ಟೋ ಸಾರಿ?

ನನ್ನ ಮಟ್ಟಿಗೆ ಹೇಳೋದಾದರೆ ಈ ಕೆಲವು ವರ್ಷಗಳ ಹಿಂದೆ ನಾನು ಟ್ರಾಫಿಕ್ ಸಿಗ್ನಲ್ ಲೈಟುಗಳನ್ನು ಅಪಾರವಾಗಿ ದ್ವೇಷಿಸುತ್ತಿದ್ದೆ, ಅವುಗಳು ನನ್ನ ವೇಗದ ಮಿತಿಯನ್ನು ಅನಗತ್ಯವಾಗಿ ಕಟ್ಟಿ ಹಾಕುವ ಶತ್ರುಗಳು ಎಂದುಕೊಂಡಿದ್ದೆ. ಈ ಅಪರೂಪಕ್ಕೆ ಸಿಗುವ ಲೈಟುಗಳು ನನ್ನಿಂದ ಯಾವುಗಲೂ ಶಾಪ ಹಾಕಿಕೊಳ್ಳುತ್ತಿದ್ದರೆ, ಎಲ್ಲಿ ಬೇಕಂದರಲ್ಲಿ ಸಿಗುವ ಸ್ಟಾಪ್ ಸೈನುಗಳು ನನಗೆ ಯಾವ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಈ ನಗರದ ಬದುಕಿನ ಅಂಗವಾಗಿ ಪ್ರತಿ ಸಿಗ್ನಲ್ ಲೈಟಿಗೆ ಒಂದಕ್ಕೆ ಐದರ ಅನುಪಾತದಲ್ಲಿ ದಾರಿಯಲ್ಲಿ ಎದುರಾಗುವ ಸ್ಟಾಪ್ ಸೈನುಗಳು ಹೇಳಲಿಕ್ಕೆ ಮಾತ್ರ 'STOP' ಎಂದು ಎಲ್ಲ ಕ್ಯಾಪಿಟಲ್ ಲೆಟರುಗಳಲ್ಲಿ ಬರೆದುಕೊಂಡು ಕೆಂಪು-ಬಿಳಿ ಬಣ್ಣದಲ್ಲಿದ್ದರೂ ಅವುಗಳಿಗೆ ನಾನಾಗಲಿ ಅಥವಾ ಮತ್ಯಾರಾಗಲಿ ಕೊಡುತ್ತಿದ್ದ ಗೌರವ ಅಷ್ಟೇ - rolling stop ಮಾಡಿಕೊಂಡು ನಿಂತೆವೋ ಬಿಟ್ಟೆವೋ ಎಂದು ಅತ್ತಿತ್ತ ಗೋಣು ತಿರುಗಿಸಿ ನೋಡಿದಂತೆ ಮಾಡಿ, ದಾರಿ ಹೋಕರಿಗೆ ನಡೆಯಲು ಅವಕಾಶವನ್ನು ಕೊಟ್ಟು ಒಳಗೊಳಗೆ ಬೈದುಕೊಂಡರೂ ಮೇಲ್ನೋಟಕ್ಕೆ ಹಲ್ಲು ಗಿಂಜಿದಂತೆ ಮಾಡಿ ಅವರವರ ಪಾಡಿಗೆ ದಾರಿ ಹಿಡಿಯುವುದು ಎಲ್ಲ ಕಡೆ ಸಾಮಾನ್ಯ ನೋಟ. ಆದರೆ ಅದೇ ಟ್ರಾಫಿಕ್ ಸಿಗ್ನಲ್ ಬಂದಿತೆಂದರೆ ಅದರ ಕಥೆಯೇ ಬೇರೆ, ಕಾರು ಡೆಡ್ ಸ್ಟಾಪಿಗೆ ಬರುವುದೂ ಅಲ್ಲದೆ, ಅನಗತ್ಯವಾಗಿ ವಿಳಂಬವನ್ನು ತಂದೊಡ್ಡುವ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸುವ ಮಹಾಕಾರ್ಯವೂ ನಡೆದು ಹೋಗುವುದು ಸರ್ವೇಸಾಮಾನ್ಯ. ನಮ್ಮ ಮುಂದಿನವರಿಗೆ ಅವರ ಮುಂದಿನವರ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು, ನಮ್ಮ ಹಿಂದಿನವರಿಗೆ ನಮ್ಮ ಕಾರಿನ ಹಿಂಬದಿಯನ್ನು ನೋಡಿಕೊಂಡು ಚಲಿಸುವುದು ಒಂದು ರೀತಿಯಲ್ಲಿ ವೇಗವನ್ನು ಕಡಿಮೆ ಮಾಡುವುದರ ಜೊತೆಗೆ ದೃಷ್ಟಿಯನ್ನೂ ಸೀಮಿತಗೊಳಿಸುವ ಶತ್ರುಗಳು ಎಂದುಕೊಂಡು ಗಾಡಿ ಓಡಿಸುವುದೇ ಮಾಮೂಲಿಯಾಗಿ ಹೋಗಿತ್ತು.

ಆದರೆ ಇತ್ತೀಚೆಗೆ ನನ್ನ ನಿಲುವುಗಳಲ್ಲಿ ಸಂಪೂರ್ಣ ಬದಲಾವಣೆಯಾಗಿದೆ: ಸ್ಟಾಪ್ ಸೈನುಗಳು ಶತ್ರುವಿನ ಸ್ಥಾನ ಪಡೆದುಕೊಂಡಿದ್ದರೆ, ಸಿಗ್ನಲ್ ಲೈಟುಗಳು ಮಿತ್ರರಾಗಿ ಹೋಗಿವೆ!

ಸ್ಟಾಪ್ ಸೈನುಗಳು ನಮಗೆ ಗೊತ್ತಿದ್ದೋ ಗೊತ್ತಿರದೆಯೋ decision ಬೇಡುವ critical point ಗಳಾಗಿ ಕಂಡುಬರುತ್ತಿವೆ. ಟೂ-ವೇ, ಥ್ರೀ-ವೇ, ಅಥವಾ ಫೋರ್-ವೇ ಸ್ಟಾಪ್ ಸೈನುಗಳಲ್ಲಿ ಯಾವಾಗ ನಿಲ್ಲಿಸಬೇಕು, ಯಾವಾಗ ಹೊರಡಬೇಕು, ಎತ್ತ ನೋಡಬೇಕು ಎಲ್ಲವೂ ನಿಮ್ಮದೇ ಆದ ನಿರ್ಧಾರದ ಮೇಲೆ ಅವಲಂಭಿತವಾಗಿವೆ. ನೀವು ಕಾರಿನಲ್ಲಿ ಕುಳಿತು ಏನೇ ಮಾಡುತ್ತಿರಲಿ, ಯಾವುದೇ ಲೋಕದಲ್ಲಿರಲಿ - ಅದರಿಂದ ಕ್ಷಣಕಾಲವಾದರೂ ಹೊರಗೆ ಬಂದು ಅತ್ತಿತ್ತ ನೋಡಿ, ಶಾಸ್ತ್ರೋಕ್ತವಾಗಿ ಪ್ರತಿಯೊಂದು ಸ್ಟಾಪ್ ಸೈನಿಗೂ ವಿದಾಯ ಹೇಳಿ ಹೊರಡುವ ಪರಿ ಇದೆ ನೋಡಿ ಅದು ನಿಜವಾಗಿಯೂ ನಿಮ್ಮ ಸಂಕಲ್ಪವನ್ನು ಬೇಡುವಂತದ್ದು, ಇದೇ ರೀತಿ ನಗರದ ವಲಯದಲ್ಲಿ ಒಂದರ್ಧ ಘಂಟೆ ಕಾರು ಓಡಿಸಿಕೊಂಡು ಹೋದರೆ ನಿಮಗೆ ಸುಸ್ತಾಗುವುದೂ ಅಲ್ಲದೇ ಕೊನೆಗೆ ಇಡೀ ಊರು, ಕೇರಿ, ವಾತಾವರಣದಲ್ಲಿ ನೆನಪಿರುವುದು ಒಂದೇ - STOP ಎನ್ನುವ ಅಷ್ಟಭುಜಾಕೃತಿಯ ಷಡ್‌ಯಂತ್ರ! ನಾನು ಎಷ್ಟೋ ಸಾರಿ ಯೋಚಿಸಿದ್ದೇನೆ, ಈ ಸ್ಟಾಪ್ ಸೈನ್ ಅನ್ನು ಅಷ್ಟಭುಜಾಕೃತಿಯನ್ನಾಗಿಯೇ ಏಕೆ ಮಾಡಿದರು, ತ್ರಿಕೋನ, ಪಂಚಭುಜ, ಷಡ್ಭುಜಗಳೇಕೆ ಅಲ್ಲ ಎಂದು... ಅಷ್ಟುಭುಜಗಳಲ್ಲಿ ನಾಲ್ಕು ಭುಜಗಳು ನಾಲ್ಕು ದಿಕ್ಕುಗಳನ್ನೂ ಪ್ರತಿನಿಧಿಸಿ, ಇನ್ನೆರೆಡು ಮೇಲೆ ಮತ್ತು ಕೆಳಗಿನ ಲೋಕದಿಂದ ನಿಮ್ಮನ್ನು ಹೊರಗೆ ತಂದು ಆ ಕ್ಷಣದಲ್ಲಿ ಬೇಡುವ ಸ್ಥಳೀಯ ಲೌಕಿಕತೆಯನ್ನು ಸೃಷ್ಟಿಸುವ ಅಥವಾ ಹೇರುವ ಪ್ರತಿನಿಧಿಗಳಾಗಿ ಕಂಡುಬಂದು, ಮತ್ತೆರಡು ನಿಮ್ಮನ್ನು ಹತೋಟಿಯಲ್ಲಿಡುವ ಸರದಾರರಂತೆ ತೋರುತ್ತವೆ. Rolling stop ಮಾಡಿಕೊಂಡು ನಿಂತಹಾಗೆ ಮಾಡಿ ಹೊರಟರೂ ಹೊರಡದಿದ್ದರೂ ನೀವು ಎಷ್ಟೇ ಜಾಗರೂಕರಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ಐದಲ್ಲ, ಕೊನೆಗೆ ಎರಡು ಸ್ಟಾಪ್ ಸೈನುಗಳನ್ನು ನೀವು ದಾಟಿಕೊಂಡು ಮುಂದೆ ಹೋದರೂ (ಹಾಗೆ ಹಿಂದೆ ಬಂದರೂ), ವರ್ಷಗಳು ಕಳೆದ ಮೇಲೆ (ಅಂದರೆ ಐದು, ಹತ್ತು, ಇಪ್ಪತ್ತೈದು...) ನಿಮ್ಮ ಧಕ್ಷತೆ ದಿನೇದಿನೇ ಕಡಿಮೆಯಾಗಿಹೋಗುತ್ತದೆ. ದಿನವೂ ಸ್ಟಾಪ್ ಸೈನಿಗೆ ದರ್ಶನ ಕೊಟ್ಟು ಕಲಿತು ಬೆಳೆದು ನಿಪುಣತೆಯನ್ನು ಪಡೆಯುವುದಿರಲಿ, ವಯಸ್ಸಾಗುತ್ತಿದ್ದ ಹಾಗೆ ಹಿಂದಿನವರು ಹಾರ್ನ್ ಬಜಾಯಿಸುವ ವರೆಗೆ ನೀವು ಸ್ಟಾಪ್ ಸೈನಿನಲ್ಲಿ ಅತ್ತಿತ್ತ ನೋಡುತ್ತಾ ವಿಜ್ಞಾನಿಯ ಮುಖ ಮಾಡಿಕೊಂಡು ಅದೇನೋ ಮಹಾ ಸೂತ್ರವನ್ನು ಬಿಡಿಸುವವರ ಹಾಗೆ ಕಂಡುಬರುತ್ತೀರೇ ವಿನಾ ಸ್ಟಾಪ್ ಸೈನನ್ನು ಬಿಟ್ಟು ಒಂದಿಂಚೂ ಕದಲಿರುವುದಿಲ್ಲ. ದಿನವೂ ಉಪಯೋಗಿಸುವ ಕಂಪ್ಯೂಟರುಗಳು ನಮ್ಮ ವರ್ತನೆಯಿಂದ ಏನನ್ನು ಕಲಿಯದಿದ್ದರೂ ಒಂದು ರೀತಿ ನ್ಯೂಟ್ರಲ್ ಆಗಿಯಾದರೂ ಇರುತ್ತವೆ, ಆದರೆ ಈ ಸ್ಟಾಪ್ ಸೈನುಗಳಿಂದ ನಾವು ಕಲಿಯುವುದೇನೂ ಖಂಡಿತವಾಗಿ ಇಲ್ಲ, ಬದಲಿಗೆ ಎಫಿಷಿಯನ್ಸಿಯನ್ನು ಕಳೆದುಕೊಂಡ ಛಳಿಯಲ್ಲಿ ಸೊರಗಿದ ಹೀಲಿಯಂ ತುಂಬಿದ ಬೆಲೂನಿನಂತಾಗಿ ಮನಸ್ಸು-ಮಿದುಳು ಆಗಿ ಹೋಗುವುದೇ ಹೆಚ್ಚೇನೋ ಎನ್ನಿಸಿದ್ದೂ ಇದೆ.

ಹೀಗಾಗಿಯೇ ಇತೀಚೆಗೆ ನಾನು ಟ್ರಾಫಿಕ್ ಲೈಟುಗಳ ಫ್ಯಾನ್ ಆಗಿರುವುದು. ನೀವೇನೂ ನಿರ್ಧಾರ ಮಾಡಬೇಕಾಗಿಲ್ಲ, ಸ್ವಲ್ಪ ಆಚೀಚೆ ನೋಡುವ ಅಗತ್ಯ ನೆರೆಹೊರೆಯಿಂದ ನೆರೆಹೊರೆಗೆ ಬದಲಾಗಬಹುದಾದರೂ ನಿಮ್ಮ ಪಾಡಿಗೆ ನೀವಿರಬಹುದು, ನಿಮಗೋಸ್ಕರ ಯಾರೋ ಡಿಸಿಶನ್ ಮಾಡುತ್ತಾರೆ, ನಿಮ್ಮ ಮುಂದಿನವರನ್ನು ಅನುಸರಿಸಿಕೊಂಡು ನಿಮ್ಮಷ್ಟಕ್ಕೆ ನೀವು ಹೋದರೆ/ಇದ್ದರೆ ಆಯಿತಪ್ಪಾ, ಸ್ವರ್ಗದಲ್ಲಿ ಇದಕ್ಕಿಂತ ಹೆಚ್ಚು ಸುಖವೆನ್ನುವುದೇನೂ ಇಲ್ಲ! ಸಿಗ್ನಲ್ ಲೈಟಿನಲ್ಲಿ ಕುಳಿತು ತಪಸ್ಸನ್ನು ಮಾಡಿದರೂ, ಧ್ಯಾನವನ್ನು ನಡೆಸಿಕೊಂಡು ಬಂದರೂ, ಅಥವಾ 'ಅತ್ತಿತ್ತ ನೋಡದಂತೆ ಅಂಧಕನ ಮಾಡಯ್ಯಾ ತಂದೆ' ಎಂದು ಹಾಡಿದರೂ ದಿನ, ತಿಂಗಳು, ವರ್ಷಗಳುರುಳಿದ ಬಳಿದ ನಿಮ್ಮ ಬೇಡಿಕೆ ಈಡೇರಿದರೂ ಈಡೇರಬಹುದು. Minding my own business, ದಾರಿಯಲ್ಲಿ ಯಾರು ದಾಟಿದರೇನು ಬಿಟ್ಟರೇನು; ಎದುರುಗಡೆಯಿಂದ ವೆಹಿಕಲ್ ಬರುತ್ತದೆಯೋ ಬಿಡುತ್ತದೆಯೋ, ಕುತ್ತಿಗೆ ನರಗಳು ಅತ್ತಿತ್ತ ತಿರುಗಿ ನೋಡುವ ದುಃಖದಿಂದ ತಪ್ಪಿಸಿದ್ದಕ್ಕಾಗಿ ಥ್ಯಾಂಕ್ಯು ಎಂದು ಹೇಳುವುದೂ ಅಲ್ಲದೇ ನೀವು ಹೀರುತ್ತಿರುವ ಕಾಫಿಯನ್ನು ಹೆಚ್ಚು ರುಚಿಯಾಗಿ ಕಾಣಿಸುವಂತೆ ನಾಲಿಗೆಯ ಟೇಸ್ಟ್ ಬಡ್‌ಗಳಿಗೆ ಅದೇಶವನ್ನೂ ಕೊಡುತ್ತವೆ, ಅಥವಾ ಟೇಸ್ಟ್ ಬಡ್‌ಗಳು ಕಳಿಸಿದ ರುಚಿಯ ಸಂದೇಶವನ್ನು ಇಮ್ಮಡಿಯಾಗಿ ಮಿದುಳು ಮಾಸ್ಟರಿಗೆ ತಲುಪಿಸುತ್ತವೆ ಆಗ ಆ ಕೆಫೀನಿನ ಕಿಕ್ಕೂ ಇಮ್ಮಡಿಯಾಗಿ ಇನ್ನೂ ಎಷ್ಟೋ ಭಯಂಕರ ಐಡಿಯಾಗಳು ನಮಗೆ ಗೊತ್ತಿಲ್ಲದ ಹಾಗೆ ಸೆರೆಬೆಲ್ಲಮ್ಮ್‌ನಲ್ಲಿ ದಾಖಲಾಗುತ್ತವೆ! ಪ್ರಪಂಚದಲ್ಲಿನ ಜನರು ಕಾರು ಓಡಿಸುವಾಗ ಹುಟ್ಟಿ ಎಲ್ಲೋ ಅಡಗಿಕೊಳ್ಳುವ ಐಡಿಯಾಗಳನ್ನು, ಆಲೋಚನೆಗಳನ್ನೆಲ್ಲ ಹಿಡಿದು ಸಂಗ್ರಹಿಸಿ, ಪ್ರಾಸೆಸ್ಸು ಮಾಡಿದ್ದೇ ಆದರೆ ಪ್ರಪಂಚದ ಎಲ್ಲ ನೋವಿಗೂ ಅದರಲ್ಲಿ ಸಮಾಧಾನವಿದೆ ಹಾಗೂ ಎಂತಹ ಸಂದರ್ಭವನ್ನೂ ಗೆಲ್ಲುವ ಆಶ್ವಾಸನೆ ಸಿಗುತ್ತವೆ ಎನ್ನುವುದು ಹೀಗೇ ಕಾರಿನಲ್ಲಿ ಕುಳಿತಾಗ ಹುಟ್ಟಿ ಬೆಳೆದು ಈಗ ಪ್ರಬುದ್ಧವಾಗಿರುವ ನನ್ನ ಅಂಬೋಣ!

STOP ಸೈನುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸಿದ ಸಂದರ್ಭಗಳು ಅನುಪಾತದ ಲೆಕ್ಕದಲ್ಲಿ ನಿಂತು ಹೊರಡುವ ಹಾಗೆ ಮಾಡಿದ ಸಂದರ್ಭಗಳಿಗೆ ಹೋಲಿಸಿದರೆ ಬಹಳ ಕಡಿಮೆ. ಆದರೆ ಟ್ರಾಫಿಕ್ ಲೈಟುಗಳು ನನ್ನನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಮಾಣವೇ ಹೆಚ್ಚು. ಅಂದರೆ "STOP" ಎನ್ನುವ ತಲೆ ಬರಹವನ್ನು ಹಗಲು-ರಾತ್ರಿ ಹೊತ್ತು ನಿಂತರೂ ಯಾರೂ ಗೌರವ ಕೊಡದಿರುವ ಇಂತಹವುಗಳನ್ನು ನಾನು ಮಿತ್ರರನ್ನಾಗಿ ಸ್ವೀಕರಿಸಬೇಕೇಕೆ? ಇವುಗಳಿಂದಾಗಿ ನನ್ನ ಕಾಫಿ ರುಚಿ ಅರ್ಧಕ್ಕರ್ಧ ಕಡಿಮೆಯಾಗಿರುವುದೂ ಅಲ್ಲದೇ ರೇಡಿಯೋ ಸ್ಟೇಷನ್ನುಗಳಲ್ಲಿ ಬರುವ ವರದಿ ಫಸ್ಟ್ ಪಿಯುಸಿಯ ಟ್ರಿಗನೋಮೆಟ್ರಿ ಲೆಕ್ಚರ್‌ನಂತೆ ಕಂಡುಬರುತ್ತಿದೆ. ಈ ಕೆಂಪು ಸೈನ್ (ಬೋರ್ಡು) ನನ್ನಲ್ಲಿ ಕೆಂಪು ಬಣ್ಣವನ್ನೂ ಅಸಡ್ಡೆ ಮಾಡುವ ಮನೋಭಾವವನ್ನು ಮೂಡಿಸಿವೆ. ಈ ಪ್ರಪಂಚದಲ್ಲಿರುವ ಸ್ಟಾಪ್ ಸೈನುಗಳನ್ನೆಲ್ಲ ತೆಗೆದು ಬಿಸಾಡಿಬಿಟ್ಟರೆ ಹೇಗೆ? ಇವು "STOP" ಎಂದು ಯಾರಿಗೆ ಆದೇಶವನ್ನು ಕೊಡುತ್ತಿವೆ, ನನ್ನಂತಹವರನ್ನು ನಿಲ್ಲಿಸಲು ಇವು ಯಾರು, ಇವುಗಳ ಹಕ್ಕೇನು? ಇವುಗಳ ಅಷ್ಟಕೋನಗಳಲ್ಲಿ ಯಾವ ಯಾವ ಷಡ್‌ಯಂತ್ರ ಅಡಗಿದೆಯೋ ಯಾರು ಬಲ್ಲರು? ಎಂಟೂ ಕಡೆಯಿಂದ ಒತ್ತಡವನ್ನು ಹೇರುವ ಇವುಗಳ ಆಟ ಅತಿಯಾಯಿತಪ್ಪಾ ಎಂದು ಅನ್ನಿಸೋದಿಲ್ಲವೇ?

ನಾನೊಬ್ಬ ಮುಕ್ತ ಜೀವಿ, ಡ್ರೈವಿಂಗ್ ಮಾಡುವುದು ನನ್ನ ಹಕ್ಕಲ್ಲ, ಅದು ನನ್ನ ಪ್ರಿವಿಲೇಜ್ ಎಂದು ಗೊತ್ತಿದೆ, ಆದರೆ ಸುಖಾಸುಮ್ಮನೆ ಸ್ಟಾಪ್ ಎಂದು ಕಾಪಿಟಲ್ ಲೆಟರುಗಳಲ್ಲಿ ಕೆಂಪು-ಬಿಳಿ ಬಣ್ಣದ ಈ ಸೈನುಗಳನ್ನು ಯಾರಾದರೂ ಕಿತ್ತು ಹಾಕಿ, ಕೊನೇಪಕ್ಷ ಏನಿಲ್ಲವೆಂದರೂ ಬಣ್ಣವನ್ನು ಬದಲಿಸಿ, "Stop" ಎಂದು ತಿದ್ದಿ, ಪ್ಲೀಜ್!

Thursday, March 08, 2007

ದೊಡ್ಡ ಮನುಷ್ಯರಾದ ಹಾಗೆ...

ದೊಡ್ಡ ಮನುಷ್ಯರಾದ ಹಾಗೆ ಆಫೀಸಿಗೆ ಬೆಳಿಗ್ಗೆ ಬೇಗ ಬರಬೇಕು ಹಾಗೂ ಸಂಜೆ ಆಫೀಸಿನಲ್ಲಿ ಲೇಟ್ ಆಗಿ ಇರಬೇಕು ಅಂತ ರೂಲ್ಸ್ ಏನಾದರೂ ಇದೆಯಾ ಅಂತ ಎಷ್ಟೋ ಸರ್ತಿ ಯೋಚ್ನೆ ಬಂದಿದ್ದಿದೆ. ಕೆಲವೊಂದ್ ಸರ್ತಿ ಆಫೀಸಿಗೆ ನಾನೇನಾದ್ರೂ ತಡವಾಗಿ ಬಂದಿದ್ದೇ ಆದ್ರೆ ಪಾರ್ಕಿಂಗ್ ಲಾಟ್‌ನಲ್ಲಿ ಎಲ್ಲೋ ಒಂದೂ ಸ್ಪಾಟ್ ಸಿಗದೇ ಆ ಕಡೆ ಈ ಕಡೆ ಓಡಾಡೋದು ಒಂದು ರೀತಿ ಹೈ ಸ್ಕೂಲಿನಲ್ಲಿ ತಡವಾಗಿ ಬಂದೋರಿಗೆ ಮೇಷ್ಟ್ರು ಶಿಕ್ಷೆ ಕೊಡುತಿದ್ರಲ್ಲ ಹಾಗೆ ಅನ್ಸುತ್ತೆ.

ನಾನು ಗಮನಿಸಿದ ಹಾಗೆ ನಮ್ಮ ಆಫೀಸಿನಲ್ಲಿರೋ ದೊಡ್ಡ ಮನುಷ್ಯರಿಗೆಲ್ಲ ಹಲವಾರು ಕಾಮನಾಲಿಟಿಗಳಿವೆ: ಒಳ್ಳೊಳ್ಳೆಯ ಕಾರು, ಎಸ್.ಯು.ವಿ.ಗಳನ್ನು ಆಫೀಸಿಗೆ ಹೋಗೋ ಬಾಗಿಲ ಬಳಿಯೇ ಪಾರ್ಕ್ ಮಾಡಿರೋದು, ಬೇಗ ಬಂದು ತಡವಾಗಿ ಹೋಗೋದು, ಯಾವಾಗ ನೋಡಿದ್ರೂ ಸೂಟ್ ಹಾಕ್ಕೋಂಡೇ ಇರೋದು, ದೊಡ್ಡ ದೊಡ್ಡ ಪ್ರಶ್ನೆಗಳನ್ನ ಕೇಳೋದು, ಮಾತೆತ್ತಿದ್ರೆ ಮಿಲಿಯನ್ ಡಾಲರ್ ಅನ್ನೋದು, ಇತ್ಯಾದಿ. ನಾನು ಈ ದೇಶದಲ್ಲಿರೋವರೆಗೆ ಈ ರೀತಿ 'ದೊಡ್ಡ'ವನಾಗೋದಿಲ್ಲ ಅಂತ ಮೊನ್ನೆ ತಾನೆ ನನ್ನ ನೈಜೀರಿಯನ್ ಸಹೋದ್ಯೋಗಿ ನೆನಪಿಸಿದ, ಅವನ ಹೇಳಿಕೆ ಪ್ರಕಾರ ನಾನು ಭಾರತದಲ್ಲೇನಾದ್ರೂ ಕೆಲಸ ಮಾಡಿ ಅಲ್ಲೇ ಇದ್ರೆ ಅಲ್ಲಿ ಪ್ರಸಿಡೆಂಟೋ ಮತ್ತೂಂದೋ ಆಗ್‌ಬಹುದಂತೆ, ಇಲ್ಲಿ ನನ್ನಂತಹವರು ಮೇಲೆ ಹೋಗೋಕೆ ಹೇಗೆ ಸಾಧ್ಯ?

ನಿಜವಾಗಿ ಮೇಲೆ ಹೋಗ್ಲೇ ಬೇಕೇ? ಮೇಲೆ ಹೋದ ಮೇಲೆ ಇನ್ನೇನ್ ಆಗುತ್ತೋ ಬಿಡುತ್ತೋ, ನನ್ನ ಹತ್ರ ಇರೋ ಸಾಲ ಇನ್ನಷ್ಟು ಬೆಳೀದೇ ಇದ್ರೆ ಸಾಕಪ್ಪಾ! ಈ ಅಮೇರಿಕದಲ್ಲಿ ಏನಿಲ್ಲಾ ಅಂದ್ರು ಜೋಬಿನ ತುಂಬಾ ಕಾರ್ಡುಗಳು, ತಲೆ ತುಂಬಾ ಸಾಲದ ಹೊರೆ ಇವೆಲ್ಲಾ ಮಾಮೂಲಿ. ನಮ್ಮ ತಾತ ಬದುಕಿದ ಹಾಗೆ ಸಾಲ ಮುಕ್ತನಾಗಿ ಬದುಕೋದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸತ್ತೆ ಕೆಲವೊಮ್ಮೆ.

ದೊಡ್ಡ ಮನುಷ್ಯರಾದ ಮೇಲೆ ಇನ್ನೇನ್ ಆಗುತ್ತೋ ಬಿಡುತ್ತೋ ಅಂತ ಕಲ್ಪನೆ ಮಾಡ್ಕೊಳ್ತಾ, ಮಾಡ್ಕೊಳ್ತಾ...ಇನ್ನೆಲ್ಲಿ ಯಾವ್ದಾದ್ರೂ ದೊಡ್ಡ ಮನುಷ್ಯರು ಬಂದು ದೊಡ್ಡ ಪ್ರಶ್ನೆ ಕೇಳ್ತಾರೋ ಅಂತ, ನಿಧಾನವಾಗಿ ಆಫೀಸಿನಿಂದ ಜಾಗ ಖಾಲಿ ಮಾಡ್ತೀನಿ!

(ಯಾವ್ದೋ ದೊಡ್ಡ ಮನುಷ್ಯರ ಬೋರಿಂಗ್ ಕಾಲ್ ಮಧ್ಯೆ, ಕೇವಲ ಹತ್ತೇ ನಿಮಿಷದಲ್ಲಿ ಬರೆದಿದ್ದು!)

Friday, March 02, 2007

ಕಡಿಮೆ ಸಮಯವಿದ್ದರೇನಂತೆ, ಹೆಚ್ಚು ಆಸ್ವಾದಿಸುವ ಮನಸ್ಸಿದ್ದರೆ ಆಯಿತಪ್ಪಾ!

ಸೋಮವಾರದಿಂದ ಶುಕ್ರವಾರ ಹೋಗೋದು ಅಂದ್ರೆ ಒಂದ್ ರೀತಿ ಸರತಿ ಸಾಲಿನಲ್ಲಿ ನಿಂತ ವಿಮಾನಗಳ ಹಾಗೆ ಒಂದು ವಾರ ಮುಗಿದ ಮೇಲೆ ಮತ್ತೊಂದು ವಾರ, ಅದರ ಹಿಂದೆ ಇನ್ನೊಂದು, ಮಗದೊಂದು - ಮುಗಿದೇ ಹೋಯಿತು ತಿಂಗಳು, ಹಾಗೆಯೇ ಹೋಯಿತು ವರ್ಷ! ಏನ್ ಮಾಡಿದೀಯಾ ಇಲ್ಲೀವರೆಗೆ ಅಂತ ಯಾರಾದ್ರೂ ಕೇಳಿದ್ರೆ 'ಟೈಮ್ ಇಲ್ಲಾರೀ' ಅಂತ ಹೇಳೋದೊಂದನ್ನು ಬಿಟ್ಟು ಮತ್ತೇನನ್ನೂ ಮಾಡ್ಲೇ ಸಾರ್.

'ಥೂ, ಅವನೌವ್ನ...ಈ ಟೈಮಿಗೇನ್ ಮಾಡ್ಬೇಕು?' ಅಂತ ನಮ್ಮೂರಿನವರು ಯಾರೋ ಕಿವಿ ಹಿಂದುಗಡೆ ಬಂದು ಕೇಳಿದಂಗಾಯ್ತು, ಹಿಂದೆ ತಿರುಗಿ ನೋಡಿದ್ರೆ ಯಾರೂ ಇರ್ಲಿಲ್ಲ. ಅಮೇಲ್ ಅನ್ನಿಸ್ತು, ಅದು ನಂದೇ ಧ್ವನಿ - ಒಂದೊಂದು ಸರ್ತಿ ನಾವ್ ನಾವ್ ಮಾಡೋ ಕರ್ಮಕ್ಕೆ ಒರಟು ಮಾತು ಬ್ಯಾಡಾ ಅಂದ್ರು ಬಂದ್ ಬಿಡುತ್ತೆ. ಆದ್ರೆ ಈ ಬೈಗಳ ಒಳಗಿನ ಸುಖವೇ ಬೇರೆ, ಅದೇನೆ ಇದ್ರೂ ಮನದೊಳಗಿನ ಮಾತನ್ನ ಹೇಳೋ ಒಂದು ವಿಧಾನ ಅಥವಾ ಭಾಷೆ ಕಂಡುಕೊಂಡ ಒಂದು ಹೊಸ ಆಯಾಮ ಅಂತ ದೊಡ್ಡ ಮಾತ್ನಲ್ಲ್ ಹೇಳ್ಳೋ? ಅಥವಾ ನಾವಿರೋದೇ ಹಾಗೆ, ಒರಟು ಮಾತು ಬಿಟ್ರೆ ಬೇರೇನೂ ಬರೋದೇ ಇಲ್ಲ, ಅಂತ ಇರೋ ವಿಷ್ಯಾನ ಇದ್ದ್ ಹಾಗೆ ಹೇಳ್ಳೋ?

ನನ್ನ ಕಾರಿನಲ್ಲ್ ಕುಳಿತೋ, ಆಫೀಸ್ ಕ್ಯೂಬಿನಲ್ಲಿ ಕುಳಿತೋ, ಮನೆಯ ಕುರ್ಚಿಯ ಮೇಲೆ ಕುಕ್ಕರಿಸಿಯೋ, ನಾನು ಮಾಡ್ತೀನಲ್ಲಾ ಹಾಗೆ - ಪ್ರಪಂಚದ ಆಗುಹೋಗುಗಳಿಗೆಲ್ಲಾ ಸ್ವಂದಿಸೋ ಹಾಗೇನಾದ್ರೂ ನೀವೂ ಆಡೋರಾದ್ರೆ - ನಿಮಗೆ ಪ್ರಪಂಚದ ಎಲ್ಲ ಜನರ ಟೈಮನ್ನ ಗುಡ್ಡೇ ಹಾಕ್ ಕೊಟ್ರೂ ಸಾಕಾಗೋದಿಲ್ಲ ನೋಡಿ! ಅದರ ಬದಲಿಗೆ ಒಂದಿಷ್ಟು ನಮ್ಮದೇ ಆದ nitch ಕಂಡ್‌ಕೋಬೇಕು, ಅದರಲ್ಲೇನಾದ್ರೂ ಸಾಧಿಸಿಕೋಬೇಕಪ್ಪಾ, ಆಗ ಎಲ್ಲ ಟೈಮೂ ನಿಮ್ಮ ಬಳಿ ಇದ್ದೇ ಇರತ್ತೆ. ನಿಮಗೆ ಬೆಳಿಗೆ ಒಂಭತ್ತು ಘಂಟೆಯಿಂದ ಸಂಜೆ ಐದು ಘಂಟೆವೆರೆಗಿನ ಎಂಟು ಘಂಟೆಗಳು ಎಷ್ಟು ದೊಡ್ಡ ಸಮಯ ಅಂತ ಅನುಭವಕ್ಕೇನಾದ್ರೂ ಬರಬೇಕು ಅಂದ್ರೆ ನಾನು ಹೇಳ್ದೇ ಅಂತ ಒಂದು ಸಣ್ಣ ಪ್ರಯೋಗಾ ಮಾಡಿ - ಒಂದು ದಿನ ಆಫೀಸಿಗೆ ರಜೆ ಹಾಕಿ, ಮನೆಯಲ್ಲಿ ಸುಮ್ನೇ ಕುಳಿತುಕೊಳ್ಳಿ, ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಓದಿ, ಇಲ್ಲಾ CNBC ಚಾನೆಲ್ ನೋಡಿ, ಇಲ್ಲಾ ಎರಡನ್ನೂ ಮಾಡಿ. ನಡುವೆ ನಿಸರ್ಗ ನಿಯಮದ ಬ್ರೇಕ್‌ಗಳನ್ನು ತೆಗೆದುಕೊಳ್ಳಿ...ಆಗ ಗೊತ್ತಾಗುತ್ತೆ ಎಂಟೊಂಭತ್ತು ಘಂಟೆಗಳು ಅದೆಷ್ಟು ಬೇಗ ಓಡ್ತಾವೆ ಅಂತ! ದಿನಗಳು ನಿಮಗೆ ಬೇಗ ಬೇಗ ಓಡಿ ಹೋಗ್ತಾವೆ ಅಂತ ಅನ್ನಿಸಿದ್ರೆ ಅಂದು ಒಳ್ಳೆಯ ವಿಷಯವೇ ಇರಬಹುದು, ನೀವು ವ್ಯಸ್ತರಾಗಿದ್ರೆ (busy), ನಿಮ್ಮ ಅಸ್ತವ್ಯಸ್ತತೆಯಲ್ಲಿ ಸಮಯ ಓಡಿಹೋಗಿದ್ದೇ ಗೊತ್ತಾಗಲ್ಲ, ಅಥವಾ ಸುತ್ತಲನ್ನು ನೀವು ಗಮನಿಸೋದೇ ಇಲ್ಲ.

ಸೂರ್ಯ ಹುಟ್ತಾನೆ, ಮುಳುಗ್ತಾನೆ - ಅದರಲ್ಲೇನು ವಿಶೇಷ ಅಂತ ಯಾಕ್ ಅಂದುಕೋಬೇಕು? ಬೀಳೋ ಮಳೆ ಹನಿಗಳನ್ನಾಗಲೀ, ಸ್ನೋ ಪ್ಲೇಕ್ಸ್‌ಗಳನ್ನಾಗಲೀ ಯಾಕ್ ನೋಡ್‌ಬೇಕು ಅಂತ ನನ್ನನ್ನೇನಾದ್ರೂ ನೀವು ಕೇಳಿದ್ರೆ ನಿಮಗೆ ನಿಜವಾಗ್ಲೂ ತೊಂದ್ರೆ ಇದೆ ಅಂತ್ಲೇ ನಾನು ಹೇಳೋದು. ಒಂದು ದಿನ ಮಳೆಯಲ್ಲಿ ನೆನೆದುಕೊಂಡೇ ಪಾರ್‌ಕಿಂಗ್ ಮಾಡಿ ಮನೆಗೆ ಬನ್ನಿ, ಮುಖದ ಮೇಲೆ ಬೀಳೋ ಮಳೆ ಹನಿಗಳು ನಿಮಗೇನಾದ್ರೂ ಗುಟ್ಟನ್ನು ಹೇಳ್ತಾವೋ ಕಾದು ನೋಡಿ. ಅದೂ ಬ್ಯಾಡಪ್ಪಾ, ಇನ್ನೇನು ಚೈತ್ರ ಮಾಸ ಬಂತು ತಾನೆ, ನಿಮ್ಮನೇ ಸುತ್ತಲಿರೋ ಮರದ ಎಲೆಗಳು ನಿಧಾನವಾಗಿ ಚಿಗುರೋ ಪ್ರಕ್ರಿಯೆಯನ್ನ ದಿನಕ್ಕೊಮ್ಮೆಯಾದ್ರೂ ಗಮನಿಸಿ, ಒಂದೇ ಒಂದ್ ವಾರ ನೀವು ಹೀಗೆ ಮಾಡಿದ್ದೇ ಅದ್ರೆ, ನಿಮ್ಮ ಮನದ ದುಗುಡ-ದುಮ್ಮಾನಗಳೆಲ್ಲಾ ೧೦ ಪರ್ಸೆಂಟ್ ಕಡಿಮೆಯಾಗ್ತಾವೆ ಅಂದುಕೊಳ್ಳಿ, ನಾನ್ ಗ್ಯಾರಂಟಿ ಕೊಡ್ತೀನಿ!

ಟೈಮಿಗ್ಯಾಕ್ ಬೈಯಬೇಕ್ ಹೇಳಿ? ಎಲ್ಲರಿಗೂ ಇರೋ ಸಮಯ ಇಷ್ಟೇ ಅಂತ ನಿಸರ್ಗ ಸಮತಾವಾದ ಸಾರಿರೋವಾಗ ಅದನ್ನ ಹೇಳಿಯಾಗಲೀ, ಹಳಿದುಕೊಂಡಾಗಲೀ ಏನು ಬಂದೀತು? ಕಡಿಮೆ ಸಮಯವಿದ್ದರೇನಂತೆ, ಸುತ್ತಲನ್ನು ಆಸ್ವಾದಿಸುವ ಮನಸ್ಸಿದ್ದರಾಯಿತ್ತಪ್ಪಾ. ನೀವು ನಾಳೆ ಡ್ರೈವ್ ಮಾಡ್ತೀರಲ್ಲ, ಆಗ ಬರೀ ರಸ್ತೆಯನ್ನ ನೋಡ್ದೇ ಸುತ್ತಮುತ್ತಲೂ ಸ್ವಲ್ಪ ನೋಡಿ, ಏನಾದ್ರೂ ವಿಶೇಷವಾಗಿದ್ದು ಕಂಡು ಬಂದ್ರೆ ನಮಗೂ ಸ್ವಲ್ಪ ತಿಳಿಸಿ, ಆಯ್ತಾ?

Thursday, March 01, 2007

ಮಾರ್ಚ್ ತರುವ ಸುಖಾನುಭವ

ಒಂದು ವಾರದ ಹಿಂದೆ ನಮ್ ಆಫೀಸ್‌ನಲ್ಲಿ 'ನಾನೂ ಜಿಮ್‌ಗೆ ಹೋಗ್ತೀನಿ ಇನ್ನ್‌ಮೇಲೆ' ಎಂದು ಕಣ್ಣುಗಳನ್ನು ಅಗಲಿಸಿ ಸಾರ್ವಜನಿಕವಾಗಿ ಸಾರಿಕೊಂಡು ನೆಲದಿಂದ ಮೂರಡಿ ಮೇಲೆ ಹಾರಿಹೋಗುತ್ತಿದ್ದ ನನ್ನನ್ನು 'when do you have time for that?' ಸಹೋದ್ಯೋಗಿಯೊಬ್ಬಳ ಹಿನ್ನೆಲೆಯಲ್ಲಿ ಬಂದ ಪ್ರಶ್ನೆ ದಿಢೀರನೆ ನನ್ನನ್ನು ಭೂಮಿಗೆ ಕರೆದುಕೊಂಡು ಬಂದಿದ್ದೂ ಅಲ್ಲದೇ ಪಾತಾಳ ಮಾರ್ಗವನ್ನೂ ನಿಚ್ಚಳವಾಗಿ ತೋರತೊಡಗಿತು. 'ಅದು ಮಾಡ್ತೀನಿ, ಇದು ಮಾಡ್ತೀನಿ, ಅದು ಮಾಡಬಲ್ಲೆ, ಇದನ್ನು ಮಾಡಬಲ್ಲೆ...' ಎನ್ನುವ ಎಲ್ಲ ಸ್ವರಗಳಿಗೂ ಉತ್ತರವಾಗಿ 'ಮಾಡಿದ್ದಿಷ್ಟೇ' ಎನ್ನುವ ವಾಸ್ತವ ಇತ್ತೀಚೆಗೆ ಕನ್ನಡಿಯನ್ನು ನೋಡಲೂ ಹೆದರಿಕೆಯನ್ನು ಹುಟ್ಟಿಸಿಬಿಟ್ಟಿದೆಯೇನೋ ಅನ್ನಿಸಿದ್ದೂ ಇದೆ. ಏಕೆಂದರೆ ಇಂತಹ ಸನ್ನಿವೇಶಗಳೇ ನನ್ನ ಹಾಗೂ ಕನ್ನಡಿಯಲ್ಲಿನ ಪ್ರತಿಬಿಂಬದ ನಡುವಿನ (ದ್ವಿಗುಣಗೊಂಡ ದೂರದಲ್ಲಿ) real ಮತ್ತು imaginary ಅವಕಾಶದಲ್ಲಿ ಹೊಸ ತಾಲೀಮು ನಡೆಸುವ ಅಮೆಚೂರ್ ಕಲಾವಿದರನ್ನು ಹುಟ್ಟಿಸೋದು.

But, ಎಲ್ಲ ಬಾಹ್ಯ ಕ್ರಿಯೆಗಳಿಗೂ, 'ಅಂತರಂಗ'ದ ಸಂವೇದನೆಗಳಿಗೂ ನಿಸರ್ಗದ ಯಾವುದಾದರೊಂದು ಬದಲಾವಣೆಯನ್ನು ಅನುವು ಮಾಡಿಕೊಂಡು 'ನಾಳೆಯಿಂದ ಹೀಗಾಗುತ್ತದೆ, ಹಾಗಾಗುತ್ತದೆ...' ಎಂದು ಮಂಡಿಗೆ ಮೇಯದಿದ್ದರೆ ಅದು ಬದುಕಾಗುವುದಾದರೆ ಹೇಗೆ? ಈ ಮಾತು ಹೇಳೋದಕ್ಕೆ ಕಾರಣಗಳು ಬೇಕಾದಷ್ಟಿವೆ: ಪ್ರತಿಯೊಂದು ಹೊಸ ಚೈತ್ರ ಮಾಸ ಯಾರು ಯಾರಿಗೆ ಏನೇನನ್ನು ಮಾಡಿದೆಯೋ ನನ್ನ ಬದುಕಿನಲ್ಲಂತೂ ಸಾಕಷ್ಟು ಬದಲಾವಣೆಗಳನ್ನು ತಂದಿದೆ, ತರಬಲ್ಲದು...ಪ್ರಕೃತಿಯಲ್ಲಿನ ವ್ಯವಸ್ಥಿತ ಬದಲಾವಣೆಗಳಿಂದ ಹಿಡಿದು, ಆರ್ದ್ರತೆಯನ್ನು ಕಳೆದುಕೊಂಡ ಗಾಳಿ ಚೇತನವನ್ನು ಪಡೆದುಕೊಂಡು ಬೇಸಿಗೆಯಲ್ಲಿ ಬಿರುಸಾಗುವುದರವರೆಗೆ, ದಿನನಿತ್ಯ ಒಂದಲ್ಲ ಒಂದು ಚಿತ್ತಾರವನ್ನು ಬಿಡಿಸಿ ಮುಂಜಾನೆ-ಸಂಜೆಗಳ ರಂಗನ್ನು ಬಟ್ಟೆ ಅಂಗಡಿಯಲ್ಲಿ ಹೊಸ ಸೀರೆ ತೋರಿಸುವ ಹುಡುಗಿ ಹೊಸ ಸೀರೆಯ ಸೆರಗನ್ನು ಕಷ್ಟಮರುಗಳಿಗೆ ಬಿಡಿಸಿ ತೋರಿಸುವ ಹಾಗೆ ಆಕಾಶದ ಮೂಲೆಯಲ್ಲಿ ಬಿಡಿಸುವ ಥರಾವರಿ ಚಿತ್ರಗಳಿಂದ ಹಿಡಿದು, ದಪ್ಪನೆ ಕೋಟು ಜಾಕೇಟುಗಳನ್ನು ಕಳೆದುಕೊಂಡು ಟಿ-ಶರ್ಟಿನಲ್ಲಿ ಬಯಲಿನಲ್ಲಿ ಆಡುವ ಮಕ್ಕಳಿಂದ ಹಿಡಿದು - ಇನ್ನೂ ಹಲವಾರು ರೀತಿಯಲ್ಲಿ ಹೊಸತನವನ್ನು ಸಾರುವ ಮಾರ್ಚ್ ಮಾಹೆಯನ್ನು ನಾನೂ ಯಾವತ್ತೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಿದ್ದೇನೆ.

ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿಗಳಲ್ಲಿ ನನ್ನೊಳಗೇ ಇರಿಸಿ ಬೇಯಿಸಿಕೊಂಡ ಹಲವಾರು ಆಲೋಚನೆಗಳು ಹೊರಬರಲಿವೆ. ಜೊತೆಯಲ್ಲಿ ಇದೇ ಮಾರ್ಚ್ ತಿಂಗಳು ನನ್ನ ಅಮೇರಿಕೆಯ ಬದುಕಿಗೂ ಅಫಿಷಿಯಲಿ ಹತ್ತು ವರ್ಷಗಳನ್ನು ಸಾರುವ ಸಂಭ್ರಮವಿದೆ. ನವೆಂಬರ್ ೨೨, ೨೦೦೫ ರಂದು 'ಅಂತರಂಗ'ವನ್ನು ತೆರೆದಿದ್ದರೂ ನಿಜವಾಗಿ ನಾನು ಇಲ್ಲಿ ಬರೆಯಲು ಆರಂಭಿಸಿದ್ದು ಮಾರ್ಚ್ ೧೬, ೨೦೦೬ ರಂದೇ - ಅದು ಕಾಕತಾಳೀಯವಾಗಿ ನಾನು ಅಮೇರಿಕೆಯಲ್ಲಿ ಕಾಲಿಟ್ಟ ಮೊದಲ ದಿನವೂ ಹೌದು! ಜೊತೆಯಲ್ಲಿ ಇದೇ ತಿಂಗಳಿನಲ್ಲಿ 'ಅಂತರಂಗ' ೨೦೦ ಲೇಖನಗಳನ್ನು ಪೂರೈಸುವ ಮೈಲಿಗಲ್ಲಿದೆ, ಜೊತೆಯಲ್ಲಿ ಹತ್ತು ಸಾವಿರ ವಿಸಿಟರ್‌ಗಳು 'ಅಂತರಂಗ'ಕ್ಕೆ ಬಂದು ಹೋದ ಅವತರಣಿಕೆಯೂ ಸಂಭವಿಸಬಹುದು. ಹಿಂದಿನ ಲೇಖನಗಳಲ್ಲಿನ ಹಾಗೆ ಕಂಡಕಂಡದ್ದನ್ನೆಲ್ಲ ಹಳಿದು 'ಹಾಗಿದ್ದರೆ ಚೆನ್ನ, ಹೀಗಿದ್ದರೆ ಚೆನ್ನ' ಎಂದು ಒಂದೇ ಸಮ ಕುಕ್ಕರಿನ ಹಾಗೆ ಕೂಗುವುದಕ್ಕಿಂದ ಬದುಕು ಪ್ರಸ್ತುತ ಪಡಿಸುವ ಹಲವಾರು ಸವಾಲು-ಸಂವೇದನೆಗಳನ್ನು ಹೊಸ ರೀತಿಯಲ್ಲಿ ತೋರಿಸಿಕೊಳ್ಳುವ ಹುನ್ನಾರವಿದೆ; ಹೀಗೆ ಬರೆಯಬೇಕು, ಹಾಗೆ ಬರೆಯಬೇಕು ಎಂದು ಕನಸು ಕಟ್ಟಿಕೊಳ್ಳುವುದಕ್ಕಿಂತ, ಮೊದಲು ಬರೆ ಆಮೇಲೆ ಕನಸಿನ ಮಾತು ಎನ್ನುವ ವಾಸ್ತವವಿದೆ...ನೋಡೋಣ.

***

Stick around and stay tuned!