Wednesday, September 05, 2007

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!

ಹೀಗೇ ಒಂದ್ ಕ್ಷಣ ಸೋಮಾರಿತನದ ಪರಮಾವಧಿಯಲ್ಲಿ ಗದ್ದಕ್ಕೆ ಕೈ ಕೊಟ್ಟು ಕುಳಿತು ಯೋಚಿಸುತ್ತಿರುವಾಗ ಈ ಸೋಮಾರಿತನವೆನ್ನುವುದು ಏಕೆ ಅಷ್ಟೊಂದು ಸಹಜವಾಗಿ ಎಲ್ಲರಿಗೂ ಅನ್ವಯವಾಗೋದು ಒಂದು ಸಣ್ಣ ಚಿಂತೆ ಶುರುವಾಯಿತು. ಮೊದಲಿಗೆ ಮಾಮೂಲಿನ ಪ್ರತಿಕ್ರಿಯೆಯಂತೆ ಯಾರಪ್ಪಾ ಅದನ್ನು ಕುರಿತು ಯೋಚನೆ ಮಾಡೋದು ಎಂದು ಒಮ್ಮೆ ಉದಾಸೀನತೆ ಪುಟಿದೆದ್ದು ನಿಂತರೆ, ಮತ್ತೊಂದು ಕಡೆ ಅದೇನ್ ಆಗೇ ಬಿಡುತ್ತೋ ನೋಡಿಯೇ ಬಿಡೋಣ ಎನ್ನುವ ಛಲ ಅದಕ್ಕೆ ವಿರುದ್ಧ ಧ್ವನಿ ಎತ್ತಿತ್ತು. ಈ ಹೊತ್ತಿನ ತತ್ವದ ಮಟ್ಟಿಗೆ ಕಂಡುಬಂದ ಸತ್ಯಗಳು ಇವು, ಉದಾಸೀನತೆ ಹಾಗೂ ಛಲದ ವಿರುದ್ಧ ನಡೆಯುವ ಮುಖಾಮುಕಿಯಲ್ಲಿ ಯಾರು ಗೆಲ್ಲುತ್ತಾರೋ ಬಿಡುತ್ತಾರೋ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧರಿತವಾಗಬೇಕಿದೆ.

ಅದೂ ನಿಜಾ ಅನ್ನಿ, ಜೀವನದಲ್ಲಿ ಪ್ರತಿಯೊಂದನ್ನೂ ಮ್ಯಾನೆಜ್ ಮಾಡಬೇಕಾಗುತ್ತೆ, ಪ್ರತಿಯೊಂದನ್ನೂ ಮೈಂಟೇನ್ ಮಾಡಬೇಕಾಗುತ್ತೆ. ಚಕ್ರದ ಹಾಗೆ ಸುತ್ತಿ ಸುತ್ತಿ ಬರೋ ಪ್ರತಿಯೊಂದು ಬದಲಾವಣೆಗಳು ಮೇಲ್ನೋಟಕ್ಕೆ ಮಾಡಿದ್ದೇ ಮಾಡು ಎಂದು ಅಣಗಿಸುವಂತೆ ತೋರಿದರೂ ಮಾಡದೇ ಇದ್ದರೇ ವಿಧಿಯಿಲ್ಲ ಎಂದು ಕಿಚಾಯಿಸುವ ಪ್ರಸಂಗಗಳೇ ಹೆಚ್ಚು. ಸವಲತ್ತುಗಳನ್ನು ಮ್ಯಾನೇಜ್ ಮಾಡಬೇಕು, ಸಂಬಂಧಗಳನ್ನು ಮ್ಯಾನೇಜ್ ಮಾಡಬೇಕು, ಇನ್ನು ಕೆಲವನ್ನು ನಿಗದಿತ ಸಮಯದಲ್ಲಿ ಮೇಂಟೈನ್ ಮಾಡಬೇಕು ಇಲ್ಲವೆಂದರೆ ಬೇಕು ಎಂದಾಗಲೇ ಕೈಕೊಡುತ್ತವೆ. ಗಾಳಿ ಇದ್ದಲ್ಲೆಲ್ಲ ಧೂಳು ಇರೋದು ಸಹಜ ಎನ್ನುವುದು ’ಅಂತರಂಗ’ ಕಂಡುಕೊಂಡ ಸರಳ ಸತ್ಯಗಳಲ್ಲೊಂದು. ಅದರ ಅರ್ಥವೇನಪ್ಪಾ ಅಂದ್ರೆ ನಾವು ಉಪಯೋಗಿಸದೇ ಬಿಟ್ಟಿರೋ ಜಾಗ ಅಥವಾ ಕೋಣೆಯನ್ನು ಗುಡಿಸಿ ಶುಭ್ರವಾಗಿಟ್ಟುಕೊಳ್ಳಲೇ ಬೇಕಾಗುತ್ತೆ. ಕಿಟಕಿ-ಬಾಗಿಲು ಎಲ್ಲವನ್ನು ಭದ್ರಪಡಿಸಿ ಯಾರೂ ಉಪಯೋಗಿಸದ ಕೋಣೆಯನ್ನು ಒಂದು ವಾರ ಬಿಟ್ಟು ತೆರೆದು ನೋಡಿ, ಅದ್ಯಾವುದೋ ಅಗೋಚರ ಶಕ್ತಿ ನಿಮಗೆ ವಿರುದ್ಧವಾಗಿ ತಿರುಗಿ ಬಿದ್ದಂತೆ ಎಲ್ಲದರ ಮೇಲೂ ತೆಳುವಾದ ಧೂಳಿನ ಒಂದು ಲೇಪನ ಮಾಡಿರುತ್ತೆ. ಹೀಗೆ ತೆಳುವಾದ ಧೂಳನ್ನು ಒಂದು ಕಡೆ ಒರೆಸಿದರಷ್ಟೇ ಸಾಲದು, ಅಲ್ಲಿ-ಇಲ್ಲಿ, ಅತ್ತ-ಇತ್ತ ಒರೆಸುತ್ತಾ ಹಿಂದೆ ಮುಂದೆ ನೋಡುವಷ್ಟರಲ್ಲಿ ಇಡೀ ಕೊಠಡಿಯೇ ಸ್ವಚ್ಛತೆಯನ್ನು ಬೇಡಲು ತೊಡಗುತ್ತದೆ. ಇದು ಎಂದೂ ಉಪಯೋಗಿಸದೇ ಇರುವ ಕೋಣೆಯ ಕಥೆಯಾದರೆ ಇನ್ನು ಪ್ರತಿದಿನವೂ ಉಪಯೋಗಿಸುವ ಕೊಠಡಿ, ಪರಿಕರಗಳ ಕಥೆ ಇನ್ನೊಂದು ರೀತಿ. ನೀವು ಆಯಾ ವಸ್ತುಗಳನ್ನು ಉಪಯೋಗಿಸಿದಂತೆಲ್ಲಾ ಅಲ್ಲೆಲ್ಲಾ ನಿಮ್ಮ ಸಿಗ್ನೇಚರ್ ಬೀಳಲುತೊಡಗುತ್ತದೆ. ಸೂಕ್ಷ್ಮವಾದವರಿಗೆ ಬೆರಳಿನ ಗುರುತು ಕಾಣತೊಡಗಿದರೆ, ಕೊಂಕಣೀ ಎಮ್ಮೆಗೆ ಕೊಡತಿ ಪೆಟ್ಟು ಅನ್ನೋ ಹಾಗೆ ಅವರವರ ಚರ್ಮದ ಥಿಕ್‌ನೆಸ್‌ಗೆ ಅನುಸಾರವಾಗಿ ಆಯಾ ವಸ್ತುವಿನ ಫಲಾನುಭವ ಕಣ್ಣಿಗೆ ರಾಚುತ್ತದೆ.

ಈ ದಿನ ನಿತ್ಯ ಉಪಯೋಗಿಸುವ ವಸ್ತುಗಳ ರಂಪಾಟವೇ ಸೋಮಾರಿತನಕ್ಕೆ ಮೂಲಭೂತ ಕಾರಣ. ಹೊಸ ಬಟ್ಟೆಗಳನ್ನು ಧರಿಸಿ ಶೋಕಿ ಮಾಡುವುದರ ಸುಖ ಕೊಳೆಯಾದ ಅದನ್ನು ಒಗೆದು, ಒಣಗಿಸಿ, ಇಸ್ತ್ರಿ ತಾಗಿಸಿ ಜೋಪಾನವಾಗಿ ಹ್ಯಾಂಗರ್‌ಗೆ ಹಾಕುವವರೆಗೂ ಇರೋದಿಲ್ಲ. ಜನರು ವಾರಕ್ಕೆ ಐದು ದಿನಗಳಿಗಾಗೋಷ್ಟು ಬಟ್ಟೆಯ ನಾಲ್ಕು ಪಟ್ಟು ಬಟ್ಟೆಯನ್ನು ಇಟ್ಟುಕೊಳ್ಳುವುದೇಕೆ ಎಂದುಕೊಂಡಿರಿ? ಉಪಯೋಗಿಸಿ ಉಪಯೋಗಿಸಿ ಕೊಳೆ ಬಟ್ಟೆಗಳು ರಾಶಿ ಬಿದ್ದ ನಂತರ ಒಂದು ದಿನ ಅವುಗಳಿಗೆಲ್ಲ ಗ್ರಹಚಾರ ಬದಲಾವಣೆಯಾದ ಪ್ರಯುಕ್ತ ನೀರಿನ ಮುಖ ಕಾಣಿಸುತ್ತದೆ. ನಂತರ ಒಗೆದು, ಒಣಗಿಸಿದಂತೆ ಮಾಡಿದ ಮೇಲೆ ಕೆಟ್ಟ ಮುಖವನ್ನು ಮಾಡಿಕೊಂಡು (ಅದೂ ಎಷ್ಟೋ ದಿನಗಳ ನಂತರ) ಬಟ್ಟೆಗಳನ್ನು ಮಡಚಿಡಲಾಗುತ್ತದೆ. ಇನ್ನು ಇಸ್ತ್ರಿ ತಾಗಿಸುವ ಅಗತ್ಯವಿದ್ದರೆ, ಅದು ಆಯಾ ದಿನದ ಮುಂಜಾನೆಯ ಕರ್ತವ್ಯಗಳಲ್ಲೊಂದು. ಈ ಕೊಳೆಯಾಗಿ ಮತ್ತೆ ಸುಸ್ಥಿತಿಯನ್ನು ಕಾಣುವ ಬಟ್ಟೆಗಳ ಗೋಳು ಬೇಡವೆಂದೇ ನ್ಯೂಡಿಷ್ಟ್ ಬೀಚುಗಳು ಇತ್ತೀಚೆಗೆ ಹೆಚ್ಚುತ್ತಿರೋದು ಎಂದು ಕಾಣಿಸುತ್ತೆ! ಮಕ್ಕಳಿದ್ದವರು ಕೊರಗುವುದನ್ನು ನೋಡಿ ನಮಗೆ ಮಕ್ಕಳೇ ಬೇಡ ಎಂದು ನಿರ್ಧರಿಸಿಬಿಡುವ ದಂಪತಿಗಳ ಹಾಗೆ ನ್ಯೂಡಿಷ್ಟ್ ಜನರು ಬಟ್ಟೆಯನ್ನೇ ಹಾಕೋದಿಲ್ಲವಂತೆ, ಬಟ್ಟೆ ಹಾಕಿದರೆ ತಾನೇ ಅದರ ಕಷ್ಟಾ-ನಷ್ಟಾ ಎಲ್ಲಾ?

ಈ ಬಟ್ಟೆಗಳ ಸವಾಸ ಬೇಕು ಆದರೆ ಕಸ ಹೊಡೆಯುವುದಾಗಲೀ ಪಾತ್ರೆ ತಿಕ್ಕುವುದರ ಸಹವಾಸ ಬೇಡವೇ ಬೇಡ. ಅದೂ ದಿನಕ್ಕೆ ಮೂರು ಹೊತ್ತು ಮುಕ್ಕಿ ಮಿಕ್ಕಿದ್ದೆಲ್ಲವನ್ನೂ ಮುಗಿಸುವ ಜಾಯಮಾನವಿರುವವರೆಗೆ ಬದುಕು ಬಹಳ ಕಷ್ಟಾ. ಎಷ್ಟೇ ನೀಟಾಗಿ ಸಿಂಕು ತೊಳೆದಿಟ್ಟರೂ ಒಂದಲ್ಲಾ ಒಂದು ಪಾತ್ರೆಗಳು ಬಂದು ಬೀಳುತ್ತಲೇ ಇರೋದನ್ನ ನೋಡಿದ್ರೆ ಯಾರೋ ನಮಗೆ ಆಗದವರು ಮಾಟಾ-ಮಂತ್ರ ಮಾಡಿಸಿಟ್ಟಿದ್ದಾರೇನೋ ಅನ್ನಿಸುತ್ತೆ. ಅದೂ ಈ ದೇಶದಲ್ಲಂತೂ ಎಲ್ಲವನ್ನೂ ನಾವೇ ಮಾಡಿಕೂಳ್ಳಬೇಕಪ್ಪ. ವಾರವಿಡೀ ದುಡಿದು ತರೋದು ಅಲ್ಲಿಂದಲ್ಲಿಗೆ ಆಗುತ್ತೆ. ವಾರಾಂತ್ಯದಲ್ಲಿ ಇರೋ ಬರೋದನ್ನೆಲ್ಲ ಮ್ಯಾನೇಜೂ ಮೇಂಟೇನೂ ಮಾಡಿಕೊಂಡೇ ಇರಬೇಕಾಗುತ್ತೆ.

ಹೀಗೆ ಸೃಷ್ಟಿಯಲ್ಲಿ ನಮ್ಮ ವಿರುದ್ಧ ನಿಲ್ಲಬಲ್ಲ ಸಂಕೋಲೆಗಳನ್ನು ಜಯಿಸಲು ವಿಕಾಸವಾದದ ಬುನಾದಿಯ ಅಡಿಯಲ್ಲಿ ನಾವು ಪಡೆದುಕೊಂಡ ಶಕ್ತಿಯ ಸ್ವರೂಪವೇ ಸೋಮಾರಿತನ. ಅದನ್ನ ನಾವೆಲ್ಲರೂ ಪೂಜಿಸೋಣ, ಆರಾಧಿಸೋಣ. ಪ್ರಾಣಿಗಳು ನಗೋದಿಲ್ಲ, ಮನುಷ್ಯರು ನಗ್ತಾರೆ ಎನ್ನುವವರಿಗೆ ನಿಜ ಸ್ಥಿತಿಯ ಪೂರ್ತಿ ಅರಿವಂತೂ ಇಲ್ಲ. ಪ್ರಾಣಿಗಳು ಸೋಮಾರಿಗಳಾಗೋದಕ್ಕೆ ಸಾಧ್ಯವೇ ಇಲ್ಲ.

***

ವಿಶ್ವ ಸೋಮಾರಿಗಳ ಸಂಘಕ್ಕೇ ಜೈ!