Friday, September 29, 2006

ತುಣುಕು ಮಿಣುಕು

ನಟಿ ಮೋನಿಕಾ ಬೇಡಿಗೆ ಒಂದಲ್ಲ ಎರಡಲ್ಲ ಐದು ವರ್ಷ ಜೈಲಂತೆ, ಜೊತೆಗೆ ಒಂದ್ ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರಂತೆ! ನಮ್ ದೇಶದ ಈ ಹಣಕಾಸಿನ ವಿಚಾರದಲ್ಲಿ ಬಹಳ ಹಿಂದುಳಿದಿರೋ ದಂಡದ ವಿಚಾರ ಪರಿಗಣನೆಗೆ ಬರೋದ್ ಯಾವಾಗಾ? ಮೋನಿಕಾಗೆ ಒಂದ್ ಸಾವಿರ ರೂಪಾಯಿ ಅಂದ್ರೆ ಅದು ಯಾವ ಲೆಕ್ಕ, ಬಹುಷಃ ಅದು ಆಕೆಯ ಒಂದು ಲಿಪ್‌ಸ್ಟಿಕ್ ಬೆಲೆಗಿಂತಲೂ ಕಡಿಮೆ ಇದ್ದಿರಬಹುದು.

***

ಕುಮಾರ ಸ್ವಾಮಿ ಅಧಿಕಾರದಲ್ಲಿ ಬೆಂಗಳೂರಿನಲ್ಲಿ ಇಂಗ್ಲೀಷ್ ಶಾಲೆಗಳನ್ನು ಮುಚ್ಚೋದರಿಂದ ಬೆಂಗಳೂರು ಸಿಲಿಕಾನ್‌ವ್ಯಾಲಿ ಆಗಿರೋ ಹೆಸರನ್ನ ಕಳೆದುಕೊಳ್ಳುತ್ತೇ ಅಂತ ಇವತ್ತು ಮುಂಜಾನೆ ಮಾರ್ಕೇಟ್‌ಪ್ಲೇಸ್ ಮಾರ್ನಿಂಗ್ ರಿಪೋರ್ಟ್‌ನಲ್ಲಿ ವರದಿ ಬಂದಿತ್ತು! ಅಲ್ವಾ, ಬೆಂಗಳೂರಿನಲ್ಲಿ ಈ ಇಂಗ್ಲೀಷ್ ಶಾಲೆಗಳು ಮುಚ್ಚಿ ನಾಳೆ ಇಂಗ್ಲೀಷ್ ಮಾತನಾಡೋ ಗ್ರ್ಯಾಜುಯೇಟ್‌ಗಳ ಕೊರತೆಯಾಗಿ ಬಿಟ್ರೆ ಏನ್ ಮಾಡೋದು? ಅಷ್ಟೊತ್ತಿಗಾಗ್ಲೇ ಅಮೇರಿಕ ಚೈನಾ ಭಾಯಿ-ಭಾಯಿ ಆಗಿರುತ್ತೆ ಬಿಡಿ ಅದು ಬೇರೆ ಪ್ರಶ್ನೆ!

***

ಬೆಂಗಳೂರು ಬಿಟ್ರೂ ಮಂಗಗಳ ಥರ ವ್ಯವಹರಿಸೋದನ್ನ ನಮ್ ಕರ್ನಾಟಕದ ರಾಜಕಾರಣಿಗಳು ಯಾಕ್ ಬಿಡೋದಿಲ್ಲ ಅಂತ ಇವತ್ತು ಹೊಳೀತು - ಹೇಳಿ ಕೇಳಿ ಆಂಜನೇಯ ಕನ್ನಡಿಗನೇ ತಾನೆ? ಹೀಗೇ 'ಶರಣು ಶರಣು ಓ ಭಾಗವತೋತ್ತಮ ಕನ್ನಡ ಕುಲಪುಂಗವ ಹನುಮ...' ಅಂತಾ ಹಾಡ್‌ತಾ ಇರಬೇಕಾದರೆ ತಟ್ಟನೆ ಈ ಬಲ್ಬು ಹೊತ್ತಿಕೊಂಡಿತು. ಬೆಂಗಳೂರ್ ಬಿಟ್ಟು ಬೆಳಗಾವಿ ಸೇರಿದ್ರೂ ಕಚ್ಚಾಡೋದೂ ಕೂಗಾಡೋದು ನಮ್ಮವರ ಜನ್ಮ ಸಿದ್ಧ ಹಕ್ಕು, ಅಲ್ಲಲ್ಲ, ಜನ್ಮ ಸಿದ್ಧ ಪರಂಪರೆ, ಮತ್ತಿನ್ನೇನ್ ಆಗುತ್ತೆ?

***

ಮೊನ್ನೆ ಎನ್‌ಪಿಆರ್ ನಲ್ಲಿ ಸಾರ್ವಭೌಮ ಪರ್ವೇಜ್ ಮುಷಾರಫ್ ಸಂದರ್ಶನ ನೀಡ್ತಾ ನೀಡ್ತಾ ತಮ್ಮ ಇಂಟಲಿಜೆನ್ಸ್ ಏಜನ್ಸಿ (ಐಎಸ್‌ಐ) ಗೆ ತಮಗೆ ಲಾಯಲ್ ಆದವರನ್ನು ಮಾತ್ರವೇ ನೇಮಕ ಮಾಡಿದ್ದೇನೆ ಎನ್ನುವುದನ್ನು ಅದು ಸಹಜವಾದುದು ಎನ್ನುವಂತೆ ಹೇಳಿದರು. ಮೊದಲೇ ಸರ್ವಾಧಿಕಾರಿ ತಾನು ಆಡಿದ್ದೇ ಆಟ, ಮಾಡಿದ್ದೇ ಮಾಟ, ಅಂತಾದ್ಧರಲ್ಲಿ ಇವರಿಗೆ ತಿರುಗಿ ಬೀಳೋದಾದರೂ ಯಾರು? ಲಾಯಲ್ ಇರಲಿ ಇಲ್ಲದಿರಲಿ ಅವರ ಕೆಳಗಿರೋ ಎಲ್ಲಾ ಚಮಚಾಗಳನ್ನೂ ಬಗ್ಗಿಸಿದ್ದಾರಂತೆ! ಅವರ ಪುಸ್ತಕದ ಹೆಸರು 'ಇನ್ ದಿ ಲೈನ್ ಆಫ್ ಫಯರ್' ನನ್ನ ಕಿವಿಗೆ 'ಇನ್ ದಿ ಲೈ ಆಫ್ ಫೈಯರ್' ಕೇಳಿಸಿದ ಹಾಗಾಯಿತು, ಪಾಕಿಸ್ತಾನ ಬಿಟ್ಟು ಅಮೇರಿಕಕ್ಕೆ ಬಂದ್ರೂ ಆ ಮನುಷ್ಯಾ ಹೇಳೋ ಸುಳ್ಳೇನೂ ಕಡಿಮೆಯಾದಂತಿಲ್ಲ.

Wednesday, September 27, 2006

ಕರ್ಮಯೋಗಿ ಎಂಬ ಇರುವೆ

ಇರುವೆಯೊಂದು ಬಳಲಿ ಬೆಂದು ದಿನವ ಸವೆಸಿ ಬರುತಿರೆ
ಇಂದಿನುಳಿವು ನಾಳಿನಳಿವ ಹಚ್ಚಿಕೊಂಡು ಕೊರಗಿರೆ ೧

ನಮ್ಮನುಳಿಸು ಇದರಿಂದ ಭೀಕರ ಬರಗಾಲ
ದೈವ ನೆನೆದು ನಭಕೆ ಮುಗಿದು ಚಾಚಿತು ಮುಂಗಾಲ ೨

ರೆಕ್ಕೆ ಇರುವ ಹಕ್ಕಿಗಳು ಹಾರಿ ದೂರ ಹೋದವು
ಬಾಯಿ ಬರದ ಬಡಪಾಯಿಗಳು ಕಕ್ಕಾಬಿಕ್ಕಿಯಾದವು ೩

ದೂರದಲ್ಲಿ ವಲಸೆ ಹಕ್ಕಿ ಕಂಡಿತಪ್ಪ ಕಣ್ಣಿಗೆ
ಅದರ ಜೊತೆ ಹಾರುವ ಆಲೋಚನೆ ಬಂತು ಇರುವೆಗೆ ೪

ಒಡನೆ ತಾನು ಗಡಿಬಿಡಿಯಲಿ ಓಡಲು ಶುರುಮಾಡಿತು
ವಲಸೆ ಹಕ್ಕಿ ರೆಕ್ಕೆ ಒಳಗೆ ಬೆಚ್ಚಗೆ ತಾ ಕೂತಿತು ೫

ಉರಿವ ಸೂರ್ಯ ಹೋದ ಕಡೆಗೆ ವಲಸೆ ಹಕ್ಕಿ ಹಾರಲು
ರೆಕ್ಕೆ ಒಳಗೆ ಅವಿತ ಮರಿಗೆ ಹುಟ್ಟಿತು ಎದೆ ಪುಕ್ಕಲು ೬

ಎಷ್ಟೋ ಹೊತ್ತು ಎಷ್ಟೋ ದೂರ ವಲಸೆ ಹಕ್ಕಿ ಹಾರಿತು
ಕೊನೆಗೂ ಒಂದು ಘಳಿಗೆಯಲ್ಲಿ ದೂರ ದೇಶ ಸೇರಿತು ೭

ರೆಕ್ಕೆಯಿಂದ ಜಿಗಿದ ಮರಿಗೆ ಬೆಚ್ಚನೆ ಆಹ್ವಾನ
ನೀಡಿದವು ಸುತ್ತಲಿನ ಹಸುರಾಗಿಹ ಹೂ ಬನ ೮

ತನ್ನ ಜಾಗೆ ಬಿಟ್ಟೆನೆಂದು ಒಮ್ಮೆ ದುಃಖವಾಯಿತು
ಬರದ ಬೇಗೆಯಿಂದ ಬದುಕಿ ಉಳಿದ ಖುಷಿಯೂ ಸೇರಿತು ೯

ದೂರ ದೇಶ ದೂರ ವಾಸ ಹಿಂದೆ ಹೋಗುವ ಯೋಚನೆ
ಸುತ್ತೆಲ್ಲವು ಹೊಸತರಲ್ಲಿ ತಾನು ಎಂಬ ಯಾಚನೆ ೧೦

ಕಣ್ಣು ಕಾಣುವಲ್ಲಿವರೆಗೆ ಹಲವು ಬಣ್ಣ ಗೋಚರ
ತನಗೆ ಬೇಡವಾಗಿ ಮನಸು ಇರುತ್ತಿತ್ತು ಎಚ್ಚರ ೧೧

ಹಾದಿ ಸವೆಸಿದಂತೆ ಹಲವು ಇರುವೆಗಳು ಕಂಡವು
ದಡ್ಡರೊಳಗೆ ಬುದ್ಧಿವಂತರೆಂಬ ಮರ್ಮ ನುಡಿದವು ೧೨

ಹೊಸತು ಹಳತು ಆಗುವಷ್ಟರಲ್ಲಿ ಮರಿಗೆ ತಿಳಿಯಿತು
ಒಂಟಿ ತಾನು ಎಂಬ ಭಾವ ಗಟ್ಟಿ-ಗಟ್ಟಿಯಾಯಿತು ೧೩

ಇಂದು ದುಡಿದು ಅಂದೇ ತಿನ್ನೋ ಸತ್ಯವೆಂಬ ಕನ್ನಡಿ
ಇನ್ನೂ ಬೇಕು ಎಂಬುದಕ್ಕೆ ಬರೆದಾಯಿತು ಮುನ್ನುಡಿ ೧೪

ಹಿಗ್ಗಿನಲ್ಲಿ ನಾಳೆಗಾಗಿ ಕೂಡಿ-ಕೂಡಿ ಹಾಕಲು
ಎಲ್ಲ ಕಡೆಯೂ ಸಮೃದ್ಧಿ ಹಿಡಿಯುವಷ್ಟು ಮುಗ್ಗಲು ೧೫

ಸುಖದ ಪದರಿನಲ್ಲಿ ಆಗ್ಗೆ ಒಂಟಿ ತಾನು ಎನಿಸುತಿತ್ತು
ಹಿತದ ತನ್ನ ಶಿಖರದಲ್ಲಿ ತನ್ನ ತಾನು ಮರೆಯುತಿತ್ತು ೧೬

ಹೊಸ ಜಾಗವು ಹಳೆಯದಾಗೆ ಹೊಸ ಹಾಡಿಗೆ ತೊನೆಯಿತು
ಗಾಳಿ ಇರುವಲಿ ಧೂಳೂ ಇರುವ ಸರಳ ಸತ್ಯ ಹೊಳೆಯಿತು ೧೭

ಹಿಡಿಯಬೇಕು ಕೂಡಬೇಕು ಭಲೇ ಬಂಡವಾಳ
ಅದರ ಮೇಲೇ ತಿರುಗಿ ಬೀಳಬೇಕು ಎಂಬ ಕಳವಳ ೧೮

ಮುಂದೆ ತನ್ನ ಪರಿವಾರ ದೊಡ್ಡದಾಗಿ ಬೆಳೆದೂ
ಎಲ್ಲೋ ಏನೋ ಕಳೆದುಕೊಂಡ ಭಾವ ಬಿಟ್ಟು ಹೋಗದು ೧೯

ಕರ್ಮಯೋಗಿ ಎಂಬ ಇರುವೆ ಹೊಸತನೊಪ್ಪಿಕೊಂಡಿತು
ಕೊನೆಗೆ ತಾನೇ ತಿಣುಕಿ ಗೇಯ್ದು ಪ್ರಾಣವನ್ನೆ ಬಿಟ್ಟಿತು ೨೦

***

ನವೆಂಬರ್ ೧೭, ೨೦೦೫ ರಂದು ಬರೆದ ಈ ಕವನ ೨೦೦೬ ರ ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದೆ.

Tuesday, September 26, 2006

ನಾವು ಮತ್ತು ನಮ್ಮ ವಸ್ತುನಿಷ್ಟ ನಿಲುವುಗಳು

ಅವರವರ ಸ್ಪಂದನಶೀಲತೆಯ ಮೇಲೆ ಆಗುಹೋಗುಗಳ ಕುರಿತು ಒಂದಲ್ಲಾ ಒಂದು ನಿಲುವು ನಮ್ಮೆಲ್ಲರಲ್ಲಿರೋದು ಸರ್ವೇ ಸಾಮಾನ್ಯ. ವೃತ್ತಿಪರರಾಗಿ ಯೋಚಿಸಿ ನಮ್ಮ ಅನುಭವಗಳ ಹಿನ್ನೆಲೆಯಲ್ಲಿ ಒಂದು ಸಂದರ್ಭವನ್ನು ಕುರಿತು ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರಲ್ಲಿ ಹಲವಾರು ಸಂದರ್ಭಗಳು ನಮ್ಮನ್ನು ಕಟ್ಟಿಹಾಕುವುದು ಸಾಮಾನ್ಯ. ಈ ಸಾಮಾನ್ಯವನ್ನು ಮೀರಿ ನಿಂತು ಇರುವ ಆಯಾ ವಿಷಯವನ್ನು ವಸ್ತುವಿನ ನೆಲೆಯಲ್ಲಿ ಕುರಿತು ಆಲೋಚಿಸಿ ಅದರ ಮೇಲೆ ನಮ್ಮ ಅನಿಸಿಕೆ, ದೃಷ್ಟಿಕೋನವನ್ನು ಹಂಚಿಕೊಳ್ಳೋದನ್ನ ನಾವೇಕೆ ರೂಢಿಸಿಕೊಳ್ಳೋದಿಲ್ಲ ಎಂಬ ಆಲೋಚನೆ ಬಂತು.

ಇತ್ತೀಚೆಗೆ ಓದಿದ ಪುಸ್ತಕವಿರಬಹುದು, ಅಥವಾ ಪತ್ರಿಕೆಗಳಲ್ಲಿ ದಿನವೂ ಓದುವ ವರದಿಗಳಿರಬಹುದು, ಅಥವಾ ಸ್ನೇಹಿತರು ಬರೆದ ಕಥೆ-ಕವನವನ್ನು ಕುರಿತು ನಾವು ನೀಡುತ್ತಿರುವ ಅನಿಸಿಕೆಯಾಗಿರಬಹುದು, ಅಥವಾ ಯಾರದ್ದೋ ಲೇಖನಕ್ಕೆ ಬರೆಯುತ್ತಿರುವ ಕಾಮೆಂಟ್ ಇದ್ದಿರಬಹುದು ಇವೆಲ್ಲವನ್ನೂ ಸೂಕ್ಷ್ಮವಾಗಿ ಆಲೋಚಿಸುತ್ತಾ ಬಂದಾಗ ಬಹಳಷ್ಟು ಜನ ಸಮಯದ ಅಭಾವವನ್ನೋ ಮತ್ತೇನನ್ನೋ ನೆಪವಾಗಿ ಒಡ್ಡಿ ಒಂದೇ ನುಣುಚಿಕೊಂಡು ಹೋಗುತ್ತಾರೆ, ಇಲ್ಲಾ ತಿಪ್ಪೆಸಾರಿಸಿದ ಹಾಗೆ ಏನೋ ಒಂದು ಹೇಳಿಬಿಡುತ್ತಾರೆ, ಹೀಗೆ ಮಾಡುವಲ್ಲಿ ನಾನೂ ಹೊರತಲ್ಲ ಅನ್ನಿಸಿತು. ನಮಗೆ ರಚನಾತ್ಮಕವಾಗಿ (constructive) ಫೀಡ್‌ಬ್ಯಾಕ್ ಕೊಡೋದಕ್ಕೆ ಬರೋದಿಲ್ಲವೋ ಅಥವಾ ಒಂದು ವೇಳೆ ನಿಜವನ್ನೇ ಹೇಳಿದರೆ ಅದರಿಂದ ಇನ್ನೇನು ಪರಿಣಾಮಗಳಾಗುತ್ತವೆಯೋ ಎಂಬ ಹೆದರಿಕೆಯೋ ಯಾರಿಗೆ ಗೊತ್ತು? ಇರಾಕ್ ಕದನವಾಗಲೀ, ಇಸ್ರೇಲ್‌ನವರು ಹಿಜಬುಲ್ಲಾ ಮೇಲೆ ನಡೆಸಿದ ಧಾಳಿಯಂತಹ ದೊಡ್ಡ ವಿಷಯಗಳನ್ನು ತೆಗೆದುಕೊಂಡು ದೊಡ್ಡ ವಾದವಿವಾದಗಳಾಗಲೀ ಎಂದೇನೂ ಹೇಳುತ್ತಿಲ್ಲ (ಹಾಗೆ ಆಗುವುದು ಒಂದು ಲೆಕ್ಕದಲ್ಲಿ ಒಳ್ಳೆಯದೆ, ಅದು ಬೇರೆ ಪ್ರಶ್ನೆ), ನಮ್ಮ ನಡುವೆ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ನಾವು ಸ್ವಂದಿಸಬಹುದು, ನಮ್ಮ ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಆದರೆ ಅವರವರ ಅಭಿಪ್ರಾಯಗಳು ಅವರದ್ದೇ ಆದರೂ ಅದರ ಹಿಂದೆ ಸ್ಪಷ್ಟತೆ ಇದೆಯೇ, ಸರಿಯಾದ ಕಾರಣಗಳಿವೆಯೇ, ಆಧಾರಗಳಿವೆಯೇ, ಅನಿಸಿಕೆ ಬೇರೆ, ನಂಬಿಕೆ ಬೇರೆ ಎನ್ನುವ ಪ್ರಜ್ಞೆ ಇದೆಯೇ ಎಂದೆಲ್ಲಾ ಯೋಚಿಸಬೇಕಾಗುತ್ತದೆ.

ನನ್ನ ಪ್ರಕಾರ ಯಾವುದಾದರೊಂದು ಪ್ರಶ್ನೆಗೆ 'ಹೌದು' ಅಥವಾ 'ಇಲ್ಲ' ಎಂಬ ಚಿಕ್ಕ ಉತ್ತರಗಳಷ್ಟೇ ಸಾಲದು, ಅಂತಹ ಉತ್ತರಗಳ ಜೊತೆ 'ಏಕೆ?' ಎನ್ನುವುದನ್ನೂ ಸೇರಿಸಿಕೊಳ್ಳಬೇಕಾಗುತ್ತದೆ, ಎಷ್ಟೋ ಜನರು ಈ 'ಏಕೆ' ಯನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ, ಹಾಗೆ ಮಾಡುವುದರಿಂದ ಅವರ ಅನಿಸಿಕೆ/ಅಭಿಪ್ರಾಯಗಳು ಇದ್ದರೂ ಇಲ್ಲದಂತೆ ಎನ್ನುವ ಸಣ್ಣ ಸತ್ಯವೂ ಅವರನ್ನು ತಲುಪೋದಿಲ್ಲ. ಆದರೆ 'ಏಕೆ' ಎನ್ನುವ ಪ್ರಶ್ನೆಯನ್ನು ಉತ್ತರಿಸುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಸಾಧ್ಯವಾದಷ್ಟು ಆಧಾರವನ್ನು ನೀಡಬೇಕಾಗುತ್ತದೆ, ಯಾವುದಕ್ಕಾದರೂ ಹೋಲಿಕೆ ಮಾಡಿ ನೋಡಿರಬೇಕಾಗುತ್ತದೆ, ಏನಿಲ್ಲವೆಂದರೂ ಹಲವಾರು ಕೋನಗಳಿಂದ ಒಂದೇ ವಿಷಯವನ್ನು ಅಳೆದಿರಬೇಕಾಗುತ್ತದೆ. ನಿಮಗೆ George Bush ಕಂಡರೆ ಇಷ್ಟವೇ ಎಂದು ಯಾರನ್ನಾದರೂ ಕೇಳಿ ನೋಡಿ, ಆಗ ತಟ್ಟನೆ ಉತ್ತರ ಹೊರಗೆ ಬರುತ್ತದೆ, ಅವರ ಉತ್ತರದ ಬೆನ್ನ ಹಿಂದೆ 'ಏಕೆ' ಎಂದು ಕೇಳಿ ನೋಡಿ, ಕೆಲವರಿಗೆ ಸ್ವಲ್ಪ ತಡವರಿಕೆ ಶುರುವಾಗುತ್ತದೆ, ಇನ್ನೂ ಮುಂದಕ್ಕೆ ಹೋಗಿ, ವಾದ ಮಾಡಲಿಕ್ಕೋಸ್ಕರವೆಂದೇ ಅವರು ಹೇಳಿದ ಉತ್ತರಕ್ಕೆ ವಿರೋಧವಾಗಿ ವಾದಿಸಿ ನೋಡಿ, ಅವರ ಉತ್ತರದ ಆಳ ಸ್ಪಷ್ಟವಾಗುತ್ತದೆ. ಬೇಸರದ ಸಂಗತಿಯೆಂದರೆ ನಮ್ಮ ಅನುಭವಗಳನ್ನು ನಮ್ಮ ಗತ ಇತಿಹಾಸ ಆವರಿಸಿಕೊಂಡಂತೆ ನಮ್ಮ ಅಭಿಪ್ರಾಯ-ಅನಿಸಿಕೆಗಳು ಹೆಚ್ಚು ಸಮಯ ಉದ್ಭವಿಸೋದು, ಬೆಳೆಯೋದು ಈ ರೀತಿ ಅರ್ಧ ಬೆಂದ ಹೇಳಿಕೆಗಳಿಂದಲೇ, ಅಥವಾ ಅಲ್ಲಿಲ್ಲಿ ಕೇಳಿ ಬರುವ ಎಷ್ಟೋ ಸಾರಿ ಸತ್ಯವಲ್ಲದ ವರದಿಗಳಿಂದಲೇ. ಯಾವುದೇ ಒಂದು ವಿಷಯವನ್ನು ತೆಗೆದುಕೊಂಡು ಎರಡೂ ಕಡೆಯವರ ಹಾಗೆ ವಾದ ಮಂಡಿಸುವುದು ಬೇರೆ, ಆಂತರ್ಯದಲ್ಲಿ ನಮ್ಮನ್ನು ನಾವು ನಂಬಿಸಲು ನಡೆಸುವ ಸಂವಾದ, ಸಂಘರ್ಷಗಳು ಬೇರೆ - ಇಂತಹ ಆಂತರಿಕ ಹಣಾಹಣಿಗಳು ಆದಷ್ಟು ಪಕ್ವವಾಗಿರಲಿ ಅನ್ನೋದು ನನ್ನ ಆಶಯ.

Sunday, September 24, 2006

ಸಿರಿತನ-ಬಡತನ

ಮಾನವ ಸಂಸ್ಕೃತಿಯಷ್ಟೇ ಹಳೆಯದಾದರೂ ಸಿರಿತನ-ಬಡತನವೆಂಬ ಮಾನಸಿಕ ಸ್ಥಿತಿ ಅಥವಾ ಸಾಮಾಜಿಕ ಸ್ಥಿತಿಯ ಬಗ್ಗೆ ನಾನು ಓದಿದ ಕಡೆಯೆಲ್ಲ ನನಗೆ ಈ ವಿಷಯಗಳನ್ನು ಕುರಿತು ಹಲವಾರು ನೆರಳುಗಳು ಕಂಡುಬರುತ್ತವೆ, ಅವು ಆಯಾ ಆಕೃತಿಯ ಮಾನಸಿಕ ಸ್ಥಿತಿಗತಿಯ ದ್ಯೋತಕವಾಗಿರಬಹುದು ಅಥವಾ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಭೌತಿಕ ವಿಷಯ ವಸ್ತುಗಳೇ ಇಲ್ಲದೇ ಬರೀ ನೆರಳೇ ನನಗೆ ಗೋಚರಿಸಿರಬಹುದು.

ಸಿರಿತನ-ಬಡತನಗಳನ್ನು ಬರೀ ಸಾಮಾಜಿಕ ನೆಲೆಗಟ್ಟಿನಲ್ಲಿ ಉಳ್ಳವರು, ದಿಕ್ಕುಗೆಟ್ಟವರು ಎಂದಷ್ಟೇ ನಾನು ಎಂದೂ ಪರಿಗಣಿಸಿದ್ದಿಲ್ಲ, ಉದಾಹರಣೆಗೆ ಹೃದಯವಂತಿಕೆಯ ಬಡತನ-ಸಿರಿತನಗಳನ್ನೂ ಸಹ ನಾನು ಗುರುತಿಸುತ್ತೇನೆ, ಒಬ್ಬ ವ್ಯಕ್ತಿಯ ಹೃದಯವಂತಿಕೆ ಆತನ/ಆಕೆಯ ಸಾಮಾಜಿಕ ಸ್ಥಿತಿಗತಿಯ ಮೇಲೆ ನೇರವಾಗಿ ಅವಲಂಭಿತವಾಗಿದೆಯೋ ಅಥವಾ ಅವೆರಡೂ ಬೇರೆ ಬೇರೆಯೋ ಎನ್ನುವುದನ್ನು ನಿಮ್ಮ ತರ್ಕಕ್ಕೆ ಬಿಡುತ್ತೇನೆ.

ಈ ಎರಡು ವಸ್ತುಗಳನ್ನು ಕುರಿತು ಈ ಸಮಯದಲ್ಲಿ ನನಗನ್ನಿಸಿದ ಟಿಪ್ಪಣಿಗಳನ್ನು ಹೀಗೆ ಪೋಣಿಸಿಕೊಂಡು ಹೋಗುತ್ತಿದ್ದೇನೆ.

***

ಸಿರಿತನ ಎನ್ನೋದು ಕೆಲವರಿಗೆ born with a sliver spoon ಅನ್ನೋ ತರಹ ಹುಟ್ಟಿದಂದಿನಿಂದ ಸಹಜವಾಗಿದ್ದಿರಬಹುದು, ಅಥವಾ ಜೀವಿತಾವಧಿಯ ಮಧ್ಯೆ ಲಭಿಸಿದ ಸ್ಥಿತಿಯಾಗಿರಬಹುದು, ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಯೋಚಿಸಿದರೆ ಹುಟ್ಟಾ ಆಗರ್ಭ ಶ್ರೀಮಂತರಾಗಿದ್ದವರ ಆಲೋಚನೆಗಳಿಗೂ ಜೀವನ ಪರ್ಯಂತ ಹಣ ಕೂಡಿಟ್ಟು ಶ್ರೀಮಂತಿಕೆಯ ಮಟ್ಟವನ್ನು ಮುಟ್ಟಿದವರಿಗೂ ಬಹಳಷ್ಟು ವ್ಯತ್ಯಾಸಗಳನ್ನು ಗಮನಿಸಬಹುದು. ಅದರಲ್ಲೂ ತಾವೇ ಗಳಿಸಿ ಉಳಿಸಿ ಬೆಳೆಸಿದ ಹಣಕ್ಕೆ ಜನರು ಕೊಡುವ ಮರ್ಯಾದೆಗಿಂತಲೂ ದಿಢೀರನೆ ಲಾಟರಿ ತಾಗಿಯೋ ಮತ್ತಿನ್ಯಾವುದೋ ರೂಪದಲ್ಲೋ ಹಣಗಳಿಸಿದವರು ಕೊಡುವ ಮರ್ಯಾದೆ ಬೇರೆಯಾದುದು. ಹೀಗೆ ಹಲವಾರು ರೀತಿಯಲ್ಲಿ ಜನರಿಗೆ ಒಂದೊಂದು ರೂಪಾಯಿಯ ಮೌಲ್ಯ ಕಂಡು ಬರುತ್ತದೆ.

ನಮ್ಮಲ್ಲಿ ವಿವಾಹ ಮತ್ತೊಂದನ್ನು ಮಾಡುವಾಗ ಜಾತಿಯ ಜೊತೆಗೆ ಅಂತಸ್ತನ್ನೂ ಸಹ ವಿಶೇಷವಾಗಿ ಗಮನಿಸಲಾಗುತ್ತದೆ, ಮೊದಮೊದಲು ಜಾತಿ, ಗೋತ್ರ ಸರಿಯಾಗಿ ಕೂಡಿ ಬಂದರೆ ಆಯಿತು, ಅಂತಸ್ತಿನಲ್ಲೇನಿದೆ ವಿಶೇಷ ಎಂದು ಯೋಚಿಸುತ್ತಿದ್ದವನಿಗೆ ಇತ್ತೀಚೆಗೆ ನಮ್ಮ ನೆರೆಹೊರೆಯಲ್ಲಿ ಕೇಳಿದ ಒಂದು ಸಂಗತಿ ಇನ್ನಷ್ಟು ಯೋಚಿಸುವಂತೆ ಮಾಡಿತು. ಹುಡುಗಿಯ ಕಡೆಯವರು ಆಗರ್ಭ ಶ್ರೀಮಂತರು, ಊರನ್ನೇ ಕೊಳ್ಳುವಷ್ಟು ಹಣವಿದೆ ಅವರಲ್ಲಿ, ಜನಬಲವಿದೆ, ಹುಡುಗನ ಕಡೆಯವರು ಮಧ್ಯಮ ವರ್ಗದವರು, ಹುಡುಗ ದೆಹಲಿಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡಿದ್ದಾನೆ, ಆದರೆ ಈ ಎರಡೂ ಕಡೆಯವರ ಒಟ್ಟು 'ಅಂತಸ್ತನ್ನು' ತಕ್ಕಡಿಯಲ್ಲಿಟ್ಟು ತೂಗಿ ನೋಡಿದರೆ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ.

ಹೀಗಿರುವಾಗ ಹುಡುಗಿಯ ಮನೆಯವರು ಹುಡುಗಿಗೆ ಮದುವೆಗೆ ಮೊದಲು ಒಂದು ಕ್ರ್ಯಾಷ್‌ಕೋರ್ಸ್‌ನಲ್ಲಿ ಅಡುಗೆ ಮಾಡುವುದನ್ನು ಹೇಳಿಕೊಟ್ಟಿದ್ದರೇ ವಿನಾ ಒಂದು ಚಹಾ ಮಾಡುವುದನ್ನು ಕಲಿಯುವ ಅಗತ್ಯವೂ ಆ ಹುಡುಗಿಗೆ ಆ ವರೆಗೆ ಇರಲಿಲ್ಲ. ಆದರೆ ಹುಡುಗನ ಮನೆಯವರು ಆ ಹುಡುಗನನ್ನು ಬೆಳೆಸಿದ ಬಗೆ ನಾಳೆಯ ಬಗ್ಗೆ ಚಿಂತಿಸುವ ಸ್ವಭಾವವನ್ನೂ, ಒಂದೊಂದು ರೂಪಾಯಿಯ ಬಗ್ಗೆ ಆತ ಯೋಚಿಸುವ ಸ್ವಭಾವವನ್ನೂ ಗಳಿಸಿಕೊಟ್ಟಿತ್ತು. ಸಂಸಾರವೆಂದರೆ ಸಂಘರ್ಷಗಳಿಗೆ ಕೊನೆಮೊದಲೆನ್ನುವುದಿದೆಯೇ, ಹೀಗಿರುವಾಗ ಈ ಸಂಬಂಧದಲ್ಲೂ ವ್ಯತ್ಯಾಸಗಳು ಬರತೊಡಗಿದವು - ಹುಡುಗನ ಮಾವನವರು, ಅಂದರೆ ಹುಡುಗಿಯ ತಂದೆ ದೆಹಲಿಯಲ್ಲಿ ಹೊಸದಾಗಿ ಮದುವೆಯಾದವರ ಹೆಸರಿನಲ್ಲಿ ಒಂದು ಒಳ್ಳೆಯ ಫ್ಲ್ಯಾಟ್ ಒಂದನ್ನು ಖರೀದಿಸಿಕೊಟ್ಟರು - ಹುಡುಗನಿಗೆ ಅದನ್ನು ವರದಕ್ಷಿಣೆಯ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದೇನಲ್ಲ ಎನ್ನುವ ಸ್ವಯಂ ಆಲೋಚನೆಯ ಇರುಸುಮುರುಸಿನ ಜೊತೆಗೆ ತನ್ನ ಕೈಯಲ್ಲಿ ಇನ್ನು ಹತ್ತು ವರ್ಷಗಳಲ್ಲೂ ಆ ರೀತಿ ಹಣ ಸುರಿದು ಒಂದು ಫ್ಲ್ಯಾಟ್ ಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವ ನೈಜ ಸ್ಥಿತಿಯ ಅರಿವು ಹುಟ್ಟಿಸುವ ಕೈಕೈ ಹಿಸುಕಿಕೊಳ್ಳುವ ಸಂದರ್ಭ. ಹುಡುಗಿಯ ಹೆಸರಿನಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ಕೆಲಸಗಾರರೂ ಈ ಮದುಮಕ್ಕಳ ಬೆನ್ನು ಹತ್ತಿ ದೆಹಲಿ ಮುಟ್ಟಿದರೂ ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲೇ ದೆಹಲಿಯ ಹವೆ ಆ ಕೆಲಸಗಾರರನ್ನು ಮತ್ತೆಲ್ಲೋ ಹೋಗುವಂತೆ ಮಾಡಿ, ಕೊನೆಗೆ ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ಇವರಿಬ್ಬರೇ ಅಡುಗೆ ಮಾಡಿ ಊಟ ಮಾಡುವ ಸ್ಥಿತಿ ತಲುಪಿತು. ಈ ಮಧ್ಯೆ ಹೊರಗಿನಿಂದ ತರಿಸಿದ ಊಟವೂ, ಹಣ್ಣುಹಂಪಲುಗಳನ್ನು ತಿನ್ನುವುದೂ ನಡೆಯಿತು. ಇವರಿಬ್ಬರಿಗೆ ಸಹಾಯ ಮಾಡಲೆಂದು ದೆಹಲಿ ಸೇರಿದ ಹುಡುಗನ ತಾಯಿಯಿಂದ ಸಂಬಂಧಗಳು ಹದಗೆಟ್ಟವೇ ವಿನಾ ಅದರಿಂದ ಸಹಾಯವೇನೂ ಆದಂತೆ ತೋರಲಿಲ್ಲ. ಮನೆಯಲ್ಲಿ ಒಳ್ಳೆಯ ಊಟ ಸಿಗುತ್ತದೆ ಎನ್ನುವುದೊಂದನ್ನು ಬಿಟ್ಟರೆ ಒಂದು ಕಡೆ ಆಫೀಸಿನ ಕೆಲಸದೊತ್ತಡಗಳು, ಮನೆಗೆ ಬಂದರೆ ಅಮ್ಮ-ಹೆಂಡತಿಯರಿಬ್ಬರ ನಡುವೆ ಒಬ್ಬರ ಪರ ವಹಿಸಲೇ ಬೇಕಾದ ಅನಿವಾರ್ಯತೆಯ ನಡುವೆ ಹುಡುಗ ಬಳಲಿ ಹೋದ. ಬೆಳಿಗ್ಗೆ ಘಂಟೆ ಎಂಟಾದರೂ ಎದ್ದು ಮುಖಕ್ಕೆ ನೀರು ಕಾಣಿಸದ ಸೊಸೆಯನ್ನು ಕಂಡರೆ ಅತ್ತೆಗೆ ಆಗದು, ನನ್ನ ಸ್ವಾತಂತ್ರ್ಯಕ್ಕೆ ಇವರೇಕೆ ಧಕ್ಕೆ ತರುತ್ತಿದ್ದಾರೆ ಎನ್ನುವುದು ಸೊಸೆಯ ಬಗೆ ಹರಿಯಲಾರದ ಸಮಸ್ಯೆ - ಕೊನೆಗೆ ನಾನಿರುವುದು ನಮ್ಮ ಅಪ್ಪ ಕೊಟ್ಟ ಮನೆಯಲ್ಲಿ ಎನ್ನುವ ಗರ್ವ ಬೇರೆ. ಗಂಡನಿಗೆ ಒಂದು ಲೋಟಾ ಕಾಫಿಯನ್ನು ಮಾಡಿಕೊಡದ ಹೆಂಡತಿ ಎಂದು ಅತ್ತೆ ಅಂದುಕೊಂಡರೆ, ನಾನೇನು ಈ ಮನೆಯ ಕೆಲಸದವಳಲ್ಲ ಎನ್ನುವುದು ಸೊಸೆಯ ಜವಾಬು.

ಹೀಗೇ ಹಲವು ತಿಂಗಳುಗಳು ನಡೆದು ಒಂದು ದಿನ ಹುಡುಗಿಯ ತಂದೆಯ ಕಿವಿಗೆ ತಮ್ಮ ಮಗಳು ಫೋನಿನಲ್ಲಿ ಅತ್ತು ಸುದ್ದಿಯನ್ನು ಆಕೆಯ ಚೌಕಟ್ಟಿನಲ್ಲಿ ವರದಿಯನ್ನು ಒಪ್ಪಸಿದ್ದೇ ತಡ ಅವರು ಕೆಂಡಾಮಂಡಲವಾದರು - ಗಿಳಿಯನ್ನು ಸಾಕಿ ಗಿಡುಗನ ಕೈಗೆ ಕೊಟ್ಟೆ ಎಂದುಕೊಂಡರು, ನಮ್ಮ ಮಗಳು ಒಂದು ದಿನವೂ ಅತ್ತಿದ್ದಿಲ್ಲ, ನೀರು ಕುಡಿದ ಲೋಟವನ್ನು ಎತ್ತಿ ಇಟ್ಟವಳಲ್ಲ ಅಂತಹವಳನ್ನು ನೀವು ಅಡುಗೆ ಮಾಡು, ಬಾಗಿಲು ಸಾರಿಸು, ಮನೆ ಕಸ ಹೊಡಿ ಎನ್ನಲು ನಿಮಗೇನು ಹಕ್ಕಿದೆ ಎಂದವರು ಬೊಬ್ಬೆ ಹಾಕಿದರೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಆಕೆ ನಮ್ಮ ಮನೆಯ ಸೊಸೆ, ನಮ್ಮ ಮನೆಯಲ್ಲಿ ಈ ರೀತಿ ಸಂಪ್ರದಾಯ ಎಂದಿನಿಂದಲೂ ನಡೆದು ಬಂದಿದೆ ಅದಕ್ಕೆ ಆಕೆಯೇನೂ ಇಂದು ಹೊರತಲ್ಲ ಎಂದು ಹುಡುಗನ ತಂದೆಯವರು ಸಮಾಧಾನವಾಗಿಯೇ ಉತ್ತರಕೊಟ್ಟರು...ಎರಡೂ ಕಡೆಯವರ ಸಮಾಧಾನ-ಅಬ್ಬರ ಇವುಗಳ ನಡುವೆ ಹುಡುಗ-ಹುಡುಗಿಯ ಸಂಬಂಧವೂ ಬಾಡುತ್ತಾ ಹೋಗಿ ಕೊನೆಗೆ ಮದುವೆಯಾಗಿ ಒಂದು ವರುಷದ ಒಳಗೇ ಸಂಬಂಧ ಕಡಿದು ಹೋಗುವ ಸ್ಥಿತಿಗೆ ಬಂದಿದೆಯೆಂದು ತಿಳಿಯಿತು.

ಹಾಗಾದರೆ, ಈ ರೀತಿ ಅಂತಸ್ತಿನಲ್ಲಿ ವ್ಯತ್ಯಾಸವಿರುವ ಸಂಬಂಧಗಳು ಹೇಗೆ ನೆಲೆ ನಿಲ್ಲುತ್ತವೆ? ಒಂದು ವೇಳೆ ಇಬ್ಬರ ಅಂತಸ್ತು ಒಂದೇ ಆಗಿದ್ದರೂ ಅವರವರ ಸಂಪ್ರದಾಯ, ಆಚಾರ-ವಿಚಾರಗಳಲ್ಲಿ ಬದಲಾವಣೆ ಇರುವಾಗ ಯಾರು ಯಾರಿಗೆ ತಗ್ಗಿಬಗ್ಗಿ ನಡೆಯಬೇಕು, ಹೊಂದಿಕೊಂಡು ಹೋಗಬೇಕು? ಅಕಸ್ಮಾತ್ ಹುಡುಗನ ಮನೆಯವರು ಹುಡುಗನ ಜೊತೆಯಲ್ಲೇ ಇದ್ದರೆ, ಸೊಸೆ ಹುಡುಗನ ತಂದೆತಾಯಿಗಳ ಸೇವೆ ಮಾಡುವುದನ್ನು ಸಂಸಾರದ ಕಾನೂನು ಎನ್ನಲಾದೀತೇ? ಮುಂಜಾನೆದ್ದು ಮುಂಬಾಗಿಲ ಹೊಸ್ತಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಶುದ್ಧ ಹಳೆಯ ಸಂಪ್ರದಾಯದಿಂದ ಹಿಡಿದು ಇಂದಿನ ಬೆಡ್‌ಕಾಫಿ ವ್ಯವಸ್ಥೆಯಲ್ಲಿ ಎಲ್ಲಿ ನಡುವೆ ಗೆರೆಯನ್ನು ಯಾರು ಎಳೆಯಬೇಕು? ಈಗಿನ ಕಾಲದಲ್ಲಿ ಒಂದು ಮನೆಯನ್ನು ಹೊಕ್ಕ ಸೊಸೆಯ ಜವಾಬ್ದಾರಿ ಹೆಚ್ಚೋ ಅಥವಾ ಮನೆಗೆ ಬಂದವಳಿಗೆ ಸಾಧ್ಯವಾದಷ್ಟು ಆದರವನ್ನು ತೋರಿ ಎಲ್ಲರೊಳಗೊಂದಾಗಿಸಿಕೊಳ್ಳಬೇಕೆನ್ನುವ ಮಾತು ಹೆಚ್ಚೋ?

ಅಂತಸ್ತು ಹುಟ್ಟಿಸುವ ಸಂಘರ್ಷ ಈ ಬಗೆಯದಾದರೆ ಕಷ್ಟ ಪಟ್ಟು ಸಂಪಾದಿಸಿದ ಹಣದ ಹೊರೆ ಇನ್ನೊಂದು ಥರ - ಎಷ್ಟು ಗಳಿಸಿದರೂ ಸಾಲದು ಎನ್ನುವ ಸಾಮಾನ್ಯ ರೋಗದ ಜೊತೆಗೆ ಗಳಿಸಿದ್ದನ್ನು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವ ಮನಸ್ಸೂ ಬಹಳಷ್ಟು ಜನರಿಗೆ ಸಿದ್ಧಿಸೋದಿಲ್ಲ. ಸುಮಾರು ಐವತ್ತು ವರ್ಷಗಳವರೆಗೆ ಸಾಕಷ್ಟು ಹಣವನ್ನು ಕೂಡಿಸಿ ತಾವು ಕೂಡಿಟ್ಟ ಮೊತ್ತವನ್ನು ತಮ್ಮ ಜೀವನದ ಉಳಿದ ಅವಧಿಯಲ್ಲಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಅನುಭವಿಸಿ ಹೋಗುವವರು ಬಹಳ ವಿರಳ. ಜೊತೆಗೆ ತಾವೇ ಕೂಡಿ ಹಾಕಿಟ್ಟ ಸಂಪತ್ತನ್ನು ತಮ್ಮ ಮಕ್ಕಳು ಉಡಾಫೆಯಿಂದ ಹಾರಿಸಿ ತೆಗೆಯುತ್ತಿದ್ದರೆ ಇನ್ನೂ ಸಂಕಟ; ತಾವು ದುಡಿಯದ ಹಣದ ಬೆಲೆಯಿರದ ಮಕ್ಕಳು, ತಮ್ಮ ದುಡ್ಡಿನ ಅರಿವಿನ ಹೊರೆ ಹೊತ್ತ ಪೋಷಕರು ಹೀಗೆ ಮಕ್ಕಳು-ತಂದೆತಾಯಿಯರ ನಡುವೆ ಮತ್ತೊಂದು ರೀತಿಯ ಸಂಘರ್ಷವೇರ್ಪಟ್ಟಿದ್ದನ್ನು ನಾವು ನೋಡಬಹುದು.

ಒಂದು ಕಡೆ ತಮ್ಮ ಲೈಟ್‌ಬಿಲ್, ಹಾಲಿನ ಬಿಲ್‌, ತರಕಾರಿ ಬಿಲ್‌ನಲ್ಲಿ ಪ್ರತಿ ತಿಂಗಳು ಒಂದು ರೂಪಾಯಿಯೂ ಹಿಂದೆ-ಮುಂದೆ ಹೋಗದಂತೆ ಜಾಗರೂಕತೆಯಿಂದ ನೋಡಿಕೊಂಡು ಬರುವ ತಂದೆ, ಮತ್ತೊಂದು ಕಡೆ ದಿನಕ್ಕೆರಡು ಬಾರಿ ಹತ್ತತ್ತು ರೂಪಾಯಿ ಕೊಟ್ಟು ಕೋಕ್ ಅಥವಾ ಮತ್ತಿನ್ನೇನನ್ನೋ ಕುಡಿಯುವ, ಐಸ್ ಕ್ರೀಮ್ ತಿಂದು ಮಜಾ ಉಡಾಯಿಸುವ ಮಕ್ಕಳು. ಒಂದು ಕಡೆ ಒಂದು ಅಗಳು ಅನ್ನವನ್ನಾಗಲೀ, ಒಂದು ಕಾಳು ಅಕ್ಕಿಯನ್ನಾಗಲೀ ಚೆಲ್ಲಬಾರದೆಂದು ಅಚ್ಚುಕಟ್ಟಾಗಿ ಯೋಚಿಸುವ ಪೋಷಕರು, ಮತ್ತೊಂದು ಕಡೆ ತಾವು ಉರಿಸುವ ಪೆಟ್ರೋಲ್ ಮೇಲೆಯೇ ನಿಗಾ ಇರಿಸದ ಮಕ್ಕಳು. ಒಂದು ಕಡೆ ಹಳೆಯ ಮೈಂಡ್ ಸೆಟ್‌ನಲ್ಲೇ ಜೀವನ ನಡೆಸುವ ಪೋಷಕರು, ಮತ್ತೊಂದು ಕಡೆ ಹೊಸ ತಂತ್ರಜ್ಞಾನದ ಪರಿಚಯವಿರುವ ಮಕ್ಕಳು - ಹೀಗೆ ಹಲವಾರು ಏರುಪೇರುಗಳ ನಡುವೆಯೂ ಒಂದು ರೀತಿಯ ಸಮತೆ (equilibrium) ನಮಗೆ ಕಂಡುಬರುತ್ತದೆ. ಹಳೆ ಬೇರು ಹೊಸ ಚಿಗುರುಗಳ ನಡುವಿನ ಭಿನ್ನ ನಿಲುವನ್ನ ಸ್ವಲ್ಪ ಮಟ್ಟಿಗಾದರೂ ಸಾಧಿಸಿಕೊಳ್ಳಬಹುದು, ಆದರೆ ಇದ್ದೂ ಇಲ್ಲದಂತಿರುವವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ.

***

ಹಣಕಾಸಿನ ವಿಚಾರವಷ್ಟೇ ಅಲ್ಲ ಮತ್ತೆಲ್ಲಾ ರೀತಿಯಲ್ಲಿ ಸಿರಿತನ-ಬಡತನಗಳ ಆಯಾಮಗಳನ್ನು ಕಲ್ಪಿಸಿಕೊಂಡಾಗ ಈ ರೀತಿ ವಯಸ್ಸಿನ, ಇದ್ದು-ಇಲ್ಲದವರ, ಇಲ್ಲದೆ-ಇದ್ದವರ ಸಮೀಕರಣಗಳಲ್ಲಿ ಬಹಳಷ್ಟು ಪ್ಯಾರಾಮೀಟರುಗಳನ್ನು ನೋಡಬಹುದು. ಹಣ ಎನ್ನುವುದು ನಮಗಿರುವ ಹಲವಾರು ಸಾಧನಗಳಲ್ಲಿ ಒಂದು ಎಂಬುದನ್ನು ಹೆಚ್ಚು ಜನರು ಅರಿತಿರಲಾರರು, ಅಲ್ಲಿಯವರೆಗೆ ಹಣವೇ ಅಂತಹವರನ್ನು ಆಳತೊಡಗುತ್ತದೆ, ಎಲ್ಲವೂ 'ಇದ್ದವರ' ಸುತ್ತಮುತ್ತಲು ಗಿರಕಿ ಹೊಡೆಯತೊಡಗುತ್ತದೆ.

Thursday, September 21, 2006

ಕೆಲಸದ ಜೊತೆಗೆ ಬರಬಹುದಾದ ಸೋಶಿಯಲ್ ಲೈಫ್

'ನಿನಗೆ ಭಾರತದಲ್ಲಿ ಕೆಲಸಾ ಮಾಡೋದು ಅಂದ್ರೇ ಏನು ಅನ್ನೋದೇ ಮರೆತು ಹೋದ ಹಾಗಿದೆ!' ಅನ್ನೋದು ಇತ್ತೀಚೆಗೆ ನನ್ನನ್ನುದ್ದೇಶಿಸಿ ಒಂದಿಬ್ಬರು ಆಡಿದ ಮಾತುಗಳು. ಅದೇನೋ ನಿಜ, ಅಲ್ಲಿ ಕೆಲಸ ಮಾಡಿ ಅದೆಷ್ಟೋ ವರ್ಷಗಳು ಆದವು ಎಂದು ಯೋಚಿಸುತ್ತಿರುವಂತೆ, ಈ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ರಾಂತಿ, ಸೆಲ್ ಫೋನ್-ಎಸ್ಸೆಮ್ಮೆಸ್ ಕ್ರಾಂತಿ, ಬಳಕೆದಾರರ ಬೆಳವಣಿಗೆ, ಕಾಲ್‌ಸೆಂಟರ್‌ಗಳು ತಲೆ ಎತ್ತಿ ನಿಂತದ್ದು ಇವೆಲ್ಲವೂ ನಡೆದವು ಎನ್ನಿಸಿ ಒಂದು ಕಾಲು ಶತಮಾನ ನಿದ್ದೆ ಮಾಡಿಬಿಟ್ಟೆನೇನೋ ಎನ್ನುವಂತಾಯಿತು. 'ರಸ್ತೆ ಪಕ್ಕ ಎಳನೀರು ಮಾರೋರ ಸೊಂಟದಲ್ಲೂ ಒಂದೊಂದು ಮೊಬೈಲು ಫೊನಿರುತ್ತೆ' ಎಂದು ಕೇಳಿದಾಗ ಒಂದು ರೀತಿ ಆಶ್ಚರ್ಯವಾಗುತ್ತೆ, ಮತ್ತೊಂದು ಕಡೆ ಐವತ್ತು ಜನರು ತುಂಬಿರುವ ಬಸ್ಸಿನಲ್ಲಿ ಮುಕ್ಕಾಲು ಪಾಲು ಜನ ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಂತಹ ಪರಿಸ್ಥಿತಿಯ ಗಂಭೀರತೆಯನ್ನು ನೋಡಿ ಹೆದರಿಕೆಯೂ ಆಗುತ್ತೆ.

ನಾನು 'ಸಹೋದ್ಯೋಗಿಗಳು ಸ್ನೇಹಿತರಲ್ಲ' ಎಂದು ಬಲವಾಗಿ ನಂಬಿದವನು - ಈ ಮಾತು ಭಾರತದಲ್ಲಿ ಕೆಲಸ ಮಾಡುವಾಗ ಹೆಚ್ಚು ಅನ್ವಯವಾಗದಿದ್ದರೂ ಇಲ್ಲಂತೂ ಖಂಡಿತ ಎನ್ನಿಸಿಬಿಟ್ಟಿದೆ. ವಿಷಾದದ ವಿಷಯವೆಂದರೆ ಇಲ್ಲಿ ಸಹೋದ್ಯೋಗಿಗಳನ್ನು ಹೊರತು ಪಡಿಸಿದರೆ ನನ್ನಂತಹವರ ಸರ್ಕಲ್ ಬಹಳ ಚಿಕ್ಕದಾಗಿ ಹೋಗುತ್ತದೆ. ಅದಕ್ಕೆ ತಕ್ಕಂತೆ ವಾರದ ದಿನಗಳಲ್ಲಿ ಅರ್ಧಕ್ಕರ್ಧ ಸಮಯವನ್ನು ಆಫೀಸಿನಲ್ಲಿ ಕಳೆಯುವ ನಮಗೆ ಸಾಮಾಜಿಕ ಬದುಕು ಒಂದು ರೀತಿ ದೂರವೇನೋ ಎಂದು ಅನ್ನಿಸಿಬಿಡುತ್ತದೆ.

ಭಾರತದಲ್ಲಿ ಕೆಲಸ ಮಾಡುತ್ತಿದ್ದ ಮಿತ್ರನೊಬ್ಬನ ಜೊತೆ ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕ ಮಾತುಕಥೆ ನಡೆಸಿದ್ದೆ - ಹೇಗೋ ಮಾತು ಎಲ್ಲಿಂದೆಲ್ಲಿಗೋ ಬಂದು ನಾನು ಅವನಿಗೆ ಆಫೀಸಿನ ಸಮಯದಲ್ಲಿ ನಿನ್ನ ಮಿತ್ರರೊಡನೆ ವ್ಯವಹರಿಸುವುದನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳ ಕಡೆ ಗಮನ ಕೊಡು ಎಂದುದಕ್ಕೆ ಅವನು ಪ್ರತಿಯಾಗಿ ಅದೇನೋ ಒಳ್ಳೆಯ ಸಲಹೆ, ಆದರೆ ನನ್ನ ಕೆಲಸದಂತೆ ನಾನು ನನ್ನ ಸಾಮಾಜಿಕ ಬದುಕನ್ನೂ ಗೌರವಿಸಬೇಕು, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು ಎಂದಿದ್ದನ್ನು ನಾನು ಒಂದು ನಿಮಿಷ ಗಹನವಾಗಿ ಯೋಚಿಸಿದೆ. ಅವನು ಹೇಳಿದ್ದು ಬಹಳ ಸತ್ಯವಾದ ವಿಷಯ - ನನಗೇನೋ ಇಲ್ಲಿ ಆಫೀಸಿನ ಸಮಯದಲ್ಲಿ ಅದೂ ಅಪರೂಪಕ್ಕೊಮ್ಮೆ ಎನ್ನುವಂತೆ ಯಾರಾದರೊಬ್ಬರು ಹೊರಗಿನವರು ಇನ್ಸ್ಟಂಟ್ ಮೆಸ್ಸೇಜ್ ಕಳಿಸಿದರೆ ಹೆಚ್ಚು, ಅದನ್ನೂ ಕಡಿಮೆ ಮಾಡಿಕೊಳ್ಳಲು ನಾನು ಒಂದೇ 'invisible' mode ನಲ್ಲಿ ಇರುವುದೋ ಅಥವಾ ಮೆಸ್ಸೆಂಜರ್‌ಗೆ ಲಾಗಿನ್ ಆಗದೇ ಇರುವ ಸಂದರ್ಭವೇ ಹೆಚ್ಚು. ಆದರೆ ಭಾರತದಲ್ಲಿನ ಇನ್ಸ್ಟಂಟ್ ಮೆಸ್ಸೇಜ್, ಸಂದೇಶಗಳ ಯುಗದಲ್ಲಿ, ಅದರಲ್ಲೂ ಪ್ರತಿಯೊಬ್ಬರ ಪರಿವಾರ, ಗೆಳೆಯರ ಬಳಗ ದೊಡ್ಡದಾಗಿರುವ ಸಹಜ ಸ್ಥಿತಿಯಲ್ಲಿ ಅದು ಹೇಗೆ ತಾನೆ ಹೊರಗಿನ ಸಂವೇದನೆಗಳಿಗೆ ಸಂಪೂರ್ಣವಾಗಿ ಕಿವಿಗೊಡದೇ ಕೆಲಸದ ಮೇಲೆ ಗಮನವಿರಿಸಲು ಸಾಧ್ಯ? ಇಲ್ಲಿ ಕೆಲಸ ಮಾಡುತ್ತಿರುವ ನನಗೆ ಹತ್ತು ಜನರು ಪರಿಚಯವಿದ್ದು ಒಬ್ಬರು ಮೆಸ್ಸೇಜ್ ಕಳಿಸಿದರೆ, ನಾನು ಅಲ್ಲೇನಾದರೂ ಕೆಲಸ ಮಾಡುತ್ತಲಿದ್ದರೆ ಕೊನೇಪಕ್ಷ ಒಂದು ನೂರು ಜನರಾದರೂ ಪರಿಚಯವಿದ್ದು ಅವರಲ್ಲಿ ಹತ್ತು ಜನರಾದರೂ ಮೆಸ್ಸೇಜ್ ಕಳಿಸುತ್ತಿರಲಿಲ್ಲವೇ? ಅವರನ್ನೆಲ್ಲ ಹೇಗೆ ನಿಭಾಯಿಸುತ್ತಿದ್ದೆ? ಅಥವಾ ಇಲ್ಲಿನ ಹಾಗೆ ವಾರದ ದಿನಗಳಲ್ಲಿ ವಾರಾಂತ್ಯ ಬಂದರೆ ನೋಡೋಣವೆಂದೋ, ವಾರಾಂತ್ಯದ ದಿನಗಳಲ್ಲಿ 'ನಾಳೆ' ನೋಡೋಣವೆಂದೋ ತಳ್ಳಿಹಾಕಲು ಸಾಧ್ಯವಾಗುತ್ತಿತ್ತೇ? ಇನ್ಸ್ಟಂಟ್ ಮಸ್ಸೇಜ್ ವಿಂಡೋವನ್ನೋ ಅಥವಾ ಇ-ಮೇಲ್ ಮೆಸ್ಸೇಜುಗಳನ್ನೋ ಕ್ಲೋಸ್ ಮಾಡಿ ಮುಗಿಸಿದಷ್ಟು ಸುಲಭವಾಗಿ ನಮ್ಮ ಸಾಮಾಜಿಕ ಜೀವನದ ಎಳೆಗಳನ್ನು ನಿಭಾಯಿಸಬಹುದೇ? ಎನ್ನುವ ತರಾವರಿ ಪ್ರಶ್ನೆಗಳು ಮನದಲ್ಲಿ ಉದ್ಭವವಾದವು.

ಧಾರ್ಮಿಕವಾಗಿ ನನ್ನ ಬದುಕು ಆಫೀಸಿನ ಬದುಕಿಗಿಂತ ಭಿನ್ನ, ನನ್ನ ಆಚರಣೆಗಳು, ಆಚಾರ-ವಿಚಾರಗಳನ್ನು ನನ್ನ ಸಹೋದ್ಯೋಗಿಗಳ ಜೊತೆ ಹಂಚಿಕೊಳ್ಳುವುದಿಲ್ಲ; ರಾಜಕೀಯವಾಗಿ ನಾನಿಲ್ಲಿ ಯಾವ ರೀತಿಯಲ್ಲೂ ಭಾಗವಹಿಸೋದಿಲ್ಲ; ಸಾಮಾಜಿಕವಾಗಿ ನನ್ನದೇ ಆದ ಒಂದು ಜೀವನ ಶೈಲಿ ಇದೆ, ಅದು ಇಲ್ಲಿಯವರ ಹ್ಯಾಪ್ಪಿ ಅವರ್‌ಗೆ ಹೊಂದಿಕೊಳ್ಳುವುದಿಲ್ಲ, ಕಮ್ಮ್ಯೂನಿಟಿ ಸರ್ವೀಸೂ ಅಷ್ಟಕಷ್ಟೇ; ಮನೆಯಲ್ಲೊಂದು ಪ್ರಪಂಚ, ಕಾರಿನಲ್ಲೊಂದು ಪ್ರಪಂಚ ಹಾಗೂ ಅಫೀಸಿನಲ್ಲೊಂದು ಬದುಕು ಎಂದು ಮೂರು ನಾಲ್ಕು ಭಾಗವಾಗಿ ವಿಂಗಡಣೆಗೊಳಪಟ್ಟಿದ್ದೇನೆ. ಹೀಗಿರುವಾಗ 'ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು, ಮ್ಯಾನೇಜ್ ಮಾಡಬೇಕು' ಎಂದು ಉಪದೇಶ ಸಾರಲು ನನಗ್ಯಾವ ಹಕ್ಕಿದೆ ಹಾಗೂ ಅರ್ಹತೆ ಇದೆ ಎಂದೂ ಯೋಚನೆಗಿಟ್ಟುಕೊಂಡಿತು. ಈ ದಿನ ಬೆಳಗ್ಗಿನ ಜಾವ ಮೂರೂವರೆ ಹೊತ್ತಿಗೆ ನನ್ನ ಎರಡನೇ ಅಣ್ಣ ಫೋನ್ ಮಾಡಿದ್ದ, ಅವನು ಎಷ್ಟು ಸಾರಿ ಹೇಳಿದರೂ ಹೀಗೆ ಅವೇಳೆಯಲ್ಲೇ ಫೋನ್ ಮಾಡೋದು ಎಂದು ಅವನ ಮೇಲೂ ರೇಗುತ್ತೇನೆ, just because ನಾನ್ಯಾವುದೋ ಬೇರೆಯೇ 'ಪ್ರಪಂಚ'ದಲ್ಲಿದ್ದೇನೆಂದು ಅವನೂ ಸಹ ತನ್ನ ಸಂವೇದನೆಗಳನ್ನು ನನಗೆ ಅನುಕೂಲಕರವಾದ ಘಳಿಗೆ ಬರುವಲ್ಲಿಯವರೆಗೆ ಕಟ್ಟಿ ಹಾಕಿಟ್ಟುಕೊಳ್ಳಬೇಕು. ಇದೇ ಅಣ್ಣ ನಾನು ಸಾಗರದಲ್ಲಿ ರೂಮು ಮಾಡಿಕೊಂಡು ಇದ್ದಾಗ ಒಂದು ದಿನ ಬೆಳಗ್ಗಿನ ಜಾವಾ ನಾಲ್ಕೂವರೆಗೆ ಊರಿನಿಂದ ನನ್ನ ತಂದೆಯವರು ತೀರಿಕೊಂಡ ಸುದ್ದಿಯನ್ನು ಹೊತ್ತು ತಂದಿದ್ದ, ನನ್ನನ್ನೂ ಜೊತೆಯಲ್ಲಿಯೇ ಕರೆದುಕೊಂಡು ಹೋದ, ಆಗಂತೂ ನನಗೆ ಅದು ಅವೇಳೆ ಎನ್ನಿಸಿರಲಿಲ್ಲ. ಆಗಿನ ಸ್ಪಂದನಗಳಿಗೆ ಆಗ್ಗೆಯೇ ಉತ್ತರ ಅಥವಾ ಪ್ರತಿಕ್ರಿಯೆ ಸಿಗುತ್ತಿದ್ದರೆ ಸಹಜವೆನಿಸುತ್ತೆ, ಇಲ್ಲವೆಂದರೆ ತಡವಾದ ಯಾವುದರಲ್ಲಿ ಏನು ತಾನೆ ವಿಶೇಷವಿದೆ ಎನ್ನೋದು ನನಗಿನ್ನೂ ತಿಳಿಯದ ವಿಷಯ. ಹೀಗೆ 'ಅವೇಳೆ'ಯಲ್ಲಿ ಭಾರತದಿಂದ ಬರಬಹುದಾದ ಫೋನ್ ಕಾಲ್‌ಗಳ ಮೇಲೆ ನನಗೆ ಬಹಳಷ್ಟು ಭಯವಿದೆ, ಅವು ಎಂತಹ ಭಯಂಕರ ಸುದ್ದಿಯನ್ನು ಹೊತ್ತು ತರುತ್ತವೆಯೋ, ಹಾಗೆ ಬಂದಪ್ಪಳಿಸುವ ಸುದ್ದಿಗಳಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೋ ಎಂದೂ ಗುಮಾನಿಯಿದೆ.

ಸಾಮಾಜಿಕ ಸಂಬಂಧದ ಎಳೆಗಳನ್ನು ಮ್ಯಾನೇಜ್ ಮಾಡುವುದು ಎಂದರೆ ಅವುಗಳನ್ನು ಒಂದು ಡಬ್ಬಿಯಲ್ಲಿಟ್ಟು ಮುಚ್ಚಳವನ್ನು ಭದ್ರವಾಗಿ ಹಾಕಿ ಸಮಯ ಬಂದಾಗ ತೆಗೆದು ನೋಡಿದರಾಯಿತು ಎಂದಲ್ಲ, ನಮ್ಮ-ನಮ್ಮ ಕೆಲಸ ಕಾರ್ಯಗಳ ನಡುವೆಯೂ ಬದುಕು ಬೇಡುವ ಸಂಬಂಧದ ಎಳೆಗಳ ಅಗತ್ಯಗಳಿಗೆ ಸ್ಪಂದಿಸಿ ಎಷ್ಟು ಸಾಧ್ಯವೋ ಅಷ್ಟು ಅವುಗಳನ್ನು ಜೀವಂತವಾಗಿಡುವುದು. ಒಡಹುಟ್ಟಿದವರ, ಸ್ನೇಹಿತರ, ಗುರುತು-ಪರಿಚಯದವರ ಸಂಬಂಧವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳದೇ ಅವುಗಳು ಸಹಜವಾಗಿ ನಿರೀಕ್ಷಿಸುವ ಗಮನಕೊಡುವುದು. ನಾವ್ಯಾವುದೋ ಕುಬೇರನ ಲೋಕದ ಕರೆನ್ಸಿಯನ್ನು ಬಲ್ಲವರೆಂದು ಕಂಡಕಂಡದ್ದನ್ನು ನಮ್ಮ 'ಮೌಲ್ಯ'ಗಳಲ್ಲಿ ಅಳೆಯದೆ, ವಸ್ತು-ವಿಷಯಗಳನ್ನು ಅವುಗಳು ಇರುವ ಎತ್ತರಕ್ಕೆ ಬಗ್ಗಿ ನೋಡುವುದು. ಕಂಡಕಂಡವರಲ್ಲಿ ನಮ್ಮ ಬಹುಪರಾಕನ್ನು ಕೊಚ್ಚದೇ ಇತರರ ನೋವು-ನಲಿವುಗಳನ್ನೂ ಕೇಳುವ ಸಂಯಮವನ್ನು ರೂಢಿಸಿಕೊಳ್ಳುವುದು.

ಒಬ್ಬ ರಸ್ತೆ ಬದಿಯ ಭಿಕ್ಷುಕನಿಂದ ಹಿಡಿದು ಮಹಾನ್ ಚಿಂತಕನವರೆಗೆ ನಮ್ಮ ಸಂಬಂಧಗಳು, ನಾವು ಅವುಗಳನ್ನು ಬೆಳೆಸಿ-ಉಳಿಸಿಕೊಳ್ಳುವ ರೀತಿ, ನಾವು ನಮ್ಮ ನೆಟ್‌ವರ್ಕ್ ಅನ್ನು ಹಿಗ್ಗಿಸಿಕೊಳ್ಳುವ ಸಾಮರ್ಥ್ಯ ಇವೆಲ್ಲವೂ ಬಹಳಷ್ಟನ್ನು ನಿರ್ಧರಿಸಬಲ್ಲವು. ಹೋದಲ್ಲಿ ಬಂದಲ್ಲಿ 'ನಮ್ಮವರನ್ನು' ನಾವು ಹುಟ್ಟು ಹಾಕಿಕೊಳ್ಳದೇ ನಾವೇ ಕಟ್ಟಿಕೊಂಡ ಗೂಡಿನಲ್ಲಿ ಎಷ್ಟು ದಿನವಾದರೂ ಇರುವುದಕ್ಕೆ ಸಾಧ್ಯವಿದೆ? ಈ ಎಲ್ಲ ದೃಷ್ಟಿಯಿಂದಲೇ ಮೊಟ್ಟ ಮೊದಲನೇ ಬಾರಿಗೆ ಆಫೀಸಿನ ಸಮಯದಲ್ಲಿ ತನ್ನ ಪ್ರೈವೇಟ್ ಕಾನ್‌ವರ್‌ಸೇಷನ್‌ನಲ್ಲಿ ತೊಡಗಿರೋ ಸಹೋದ್ಯೋಗಿಯೊಬ್ಬ ಅಪ್ಯಾಯಮಾನವಾಗುತ್ತಾನೆ. ತನ್ನ ಮಕ್ಕಳು ಹಾಗೂ ಗಂಡನ ಬಗ್ಗೆ ಯಾವಾಗಲು ಸಂಭ್ರಮದ ಕಣ್ಣುಗಳಲ್ಲಿ ವಿವರಿಸುವ ಸಹೋದ್ಯೋಗಿ ಕಾನಿ (Connie) ವಿಶೇಷವಾಗಿ ಕಾಣಿಸುತ್ತಾಳೆ. ಎಲ್ಲೋ ಅಪರೂಪಕ್ಕೊಮ್ಮೆ ಕಾಫೆಟೇರಿಯಾದಲ್ಲಿ ಸಿಗುವ, 'ಹಾಯ್' ಎನ್ನುವ, ಇನ್ನೂ ಹೆಸರೂ ತಿಳಿಯದ ಕೆಲಸದವನೊಬ್ಬ ಅತಿ ಹತ್ತಿರದ ಬಂಧುವಾಗಿ ಕಂಡುಬರುತ್ತಾನೆ. ನಾವುಗಳು ನಮ್ಮ-ನಮ್ಮ ಸಾಮಾಜಿಕ ಸಂಬಂಧಗಳನ್ನು 'ಮ್ಯಾನೇಜ್' ಮಾಡಿದ್ದರ ಪರಿಣಾಮ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಬಾಧಿಸಿಯೇ ತೀರುತ್ತದೆ - ಎಲ್ಲವನ್ನೂ ಮ್ಯಾನೇಜ್ ಮಾಡುತ್ತೇವೆ/ಮಾಡಬಹುದು ಎನ್ನುವ ಮಾತುಗಳು ಮೊಟ್ಟ ಮೊದಲ ಬಾರಿಗೆ ದೊಡ್ಡ ಸುಳ್ಳಿನ ಕಂತೆಗಳಾಗಿ ಕಾಣತೊಡಗುತ್ತವೆ. ನಿಸರ್ಗ ನಿಯಮಗಳಾದ ಸಮಯವನ್ನಾಗಲೀ, ಸಂಬಂಧವನ್ನಾಗಲಿ, ಸಮಾಜವನ್ನಾಗಲೀ ಮ್ಯಾನೇಜ್ ಮಾಡಲು ಅವುಗಳೇನು ಬಚ್ಚಲು ಮನೆಯ ಕಲ್ಲೇ?

***

ನಾವು ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಿ ನಮ್ಮತನವನ್ನು ಗುರುತಿಸಿಕೊಂಡು ಸಹಜವಾಗಿ ಬದುಕನ್ನು ನಡೆಸೋದಕ್ಕೆ ಸಾಧ್ಯವಿದೆ, ಬರಿ ವೀಕೆಂಡಿನಲ್ಲಿ ಮಾತ್ರ ಭಾರತದಲ್ಲಿದ್ದವರೊಡನೆ ಸ್ನೇಹಿತರೊಡನೆ ಮಾತನಾಡುವುದು ಸಾಲದು ಎನ್ನುವುದು ಆ ನಿಟ್ಟಿನಲ್ಲಿ ನಾವೆಲ್ಲರೂ ಇಡಬೇಕಾದ ಮೊದಲ ಹೆಜ್ಜೆ.

Tuesday, September 19, 2006

ಮಾನವ ನಿರ್ಮಿತ ಗಡಿ

ತಮ್ಮ ದೇಶದಿಂದ ಹೊರಕ್ಕೆ ವಲಸೆ ಬಂದವರಿಗೆ ತಮ್ಮ ಮಕ್ಕಳನ್ನು ಯಾವ ಪರಿಸರ-ಸಂಸ್ಕೃತಿಯಲ್ಲಿ ಬೆಳೆಸಬೇಕು ಎನ್ನುವ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡಿರುತ್ತದೆ. ಮಕ್ಕಳು ಇನ್ನೂ ಚಿಕ್ಕವರಿದ್ದಾಗ ಒಂದು ರೀತಿಯ ಆಲೋಚನೆಗಳು ಬಂದರೆ ಮಕ್ಕಳು ಶಾಲೆಗೆ ಹೋಗುವ ವಯಸ್ಸು ಬಂದಂತೆ, ಹಾಗೆ ಮುಂದೆ ಪ್ರತಿಯೊಂದು ಹಂತದಲ್ಲಿಯೂ ಪ್ರತಿಯೊಬ್ಬ ತಂದೆ-ತಾಯಂದಿರಿಗೂ ಎರಡು ಸಂಸ್ಕೃತಿಗಳ ಸಂಘರ್ಷ ಒಂದಲ್ಲ ಒಂದು ರೀತಿಯಿಂದ ಅನುಭವಕ್ಕೆ ಬಂದಿರುತ್ತದೆ. ಮಕ್ಕಳು ಅವರವರ ನೇಟಿವ್ ಸಂಪ್ರದಾಯದಲ್ಲಿ ಬೆಳೆಯಲಿ ಎನ್ನುವ ದೃಷ್ಟಿಕೋನದಿಂದ ಹಿಡಿದು ಪೋಷಕರ ಕಟ್ಟಾ ಸಂಪ್ರದಾಯ ನೆಲೆಗಟ್ಟಿನಲ್ಲಿಯೇ ಬೆಳೆಯಬೇಕು ಎನ್ನುವ ತನಕ ಹಲವಾರು ರೀತಿಯ ಮನಸ್ಥಿತಿಗಳು ನಮಗೆ ದೊರೆಯುತ್ತವೆ.

ನನ್ನ ಪರಿಚಯದವರೊಬ್ಬರು ಪಾಕೀಸ್ತಾನೀ ಮೂಲದ ಡಾಕ್ಟರು ಇತ್ತೀಚೆಗಷ್ಟೇ ಅಮೇರಿಕದಲ್ಲಿ ಎಂ.ಡಿ. ಪದವಿ ಮುಗಿಸಿ ಅಲ್ಲಿಲ್ಲಿ ಕೆಲಸ ಹುಡುಕುತ್ತಿದ್ದಾರೆ. ಅವರು ಮುಸ್ಲಿಮ್ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದವರು, ತಮ್ಮ ಮಕ್ಕಳನ್ನೂ ಸಹ ಅದೇ ನೆಲೆಗಟ್ಟಿನಲ್ಲಿಯೇ ಬೆಳೆಸಬೇಕು ಎಂದು ನಿರ್ಧರಿಸಿದವರು. ಅವರಿಗೆ ಕೆಲಸ ಹುಡುಕಲು ಇರುವ ತೊಂದರೆಗಳಲ್ಲಿ ತಾವು ಕೆಲಸ ಮಾಡುತ್ತಿರುವ ಊರಿನಲ್ಲಿ ಮಸೀದಿಯೂ ಇರಬೇಕು ಎನ್ನುವುದು ಅವರ ಅಗತ್ಯಗಳಲ್ಲಿ ಒಂದು. ಆದ್ದರಿಂದ ಹೆಚ್ಚು ಅವಕಾಶಗಳು ಕೈಗೆ ಬಂದರೂ ಬಾಯಿಗೆ ಬರುತ್ತಿಲ್ಲ ಎನ್ನುವಂತಾಗಿ ಇದ್ದುದರಲ್ಲಿಯೇ ಹೊಂದಿಕೊಂಡು ಹೋಗಲು ಅವರು ತೀರ್ಮಾನಿಸಿದ್ದಾರೆಂದು ತಿಳಿಯಿತು. ಅವರಿಗಿರುವ ಇಬ್ಬರು ಮಕ್ಕಳು, ಒಬ್ಬ ಹುಡುಗ, ಒಬ್ಬ ಹುಡುಗಿ - ಬಹಳ ಸೌಮ್ಯ ಮುಖಗಳು ಹಾಗೂ ಮನಸ್ಥಿತಿ - ಸುಮಾರು ಹತ್ತು ವರ್ಷದ ಆಜುಬಾಜು ಇರಬಹುದಾದ ವಯಸ್ಸು. ಈ ಡಾಕ್ಟರ್ ಕುಟುಂಬ ಯಾವುದೋ ಸಂಬಂಧಿಕರ ಮದುವೆಗೆಂದು ವರ್ಜೀನಿಯಾಕ್ಕೆ ಹೋಗಿದ್ದರಂತೆ, ಅಲ್ಲಿ ಪಕ್ಕಾ ದೇಸೀ ವಾತಾವರಣ ಇತ್ತೆಂದು ಈ ಡಾಕ್ಟರ್ ಮೂಲಕವೇ ನನಗೆ ತಿಳಿಯಿತು, ಅವರೇ ಹೇಳಿದ ಹಾಗೆ ಅವರ ಮಗಳು ಅಲ್ಲಿ ನಡೆಯುತ್ತಿದ್ದ ಆಚರಣೆಗಳನ್ನು ನೋಡಿ, ಕಾರಿನಲ್ಲಿ ಕುಳಿತು ಎಲ್ಲಿಂದ ಎಲ್ಲಿಗೆ ಬಂದೆವೊ ಎಂದುಕೊಂಡು, 'ಅಪ್ಪಾ ಇದು ಪಾಕಿಸ್ತಾನವೇ?' ಎಂದು ಕೇಳಿದ್ದಳಂತೆ. ನನಗೆ ಈ ವಿಷಯವನ್ನು ಡಾಕ್ಟರು ತಮಾಷೆಯಾಗಿ ಹೇಳಿದರೂ ಅದರಲ್ಲಿನ ತಮಾಷೆಯ ಜೊತೆಗೆ ಆ ಮುಗ್ಧ ಮನಸ್ಸಿನಲ್ಲಾಗುವ ವ್ಯಾಪಾರಗಳೂ ಸಹ ಸ್ಪಷ್ಟವಾದಂತೆನಿಸಿತು. ಬಹುಷಃ ಆ ಮಕ್ಕಳು ಅವರ ಜೀವನದಲ್ಲಿ ನೋಡಿದ ಮೊದಲನೇ ಮದುವೆ ಇರಬೇಕು, ಅಮೇರಿಕನ್ ನೆಲೆಗಟ್ಟಿನಲ್ಲಿ ಅವರಿಗೆ ಎಲ್ಲವೂ ಹೊಸದಾಗಿ ಕಂಡಿರಬೇಕು. ಈ ಡಾಕ್ಟರ್ ಕುಟುಂಬ ಇನ್ಯಾವತ್ತೂ ಹಿಂತಿರುಗಿ ಪಾಕಿಸ್ತಾನಕ್ಕೆ ಹೋಗುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ - ಅದಕ್ಕೆ ಕಾರಣ ಅವರ ಎಕ್ಸೈಲ್ ಸಿಚುವೇಷನ್ ಇರಬಹುದು, ಅಥವಾ ಪಾಕಿಸ್ತಾನ, ಅಫಘಾನಸ್ತಾನದ ಗಡಿಯಲ್ಲಿನ ಊರಿಗೆ ಹೋಗಿ ಅವರು ಮಾಡುವುದಾದರೂ ಏನು ಎಂಬುದಿರಬಹುದು. ಒಂದು ಕಡೆ ತಂದೆ-ತಾಯಿಗಳಿಗೆ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಲೇ ತಮ್ಮ ನೇರಕ್ಕೆ ತಕ್ಕ ವಾತಾವರಣವನ್ನು ಹುಟ್ಟುಹಾಕಿಕೊಳ್ಳುವ ಸವಾಲು, ಮತ್ತೊಂದು ಕಡೆ ಈ ಪರಿಸರದಲ್ಲಿ ಬೆಳೆದ ಮಕ್ಕಳು ಎರಡೂ ಕಡೆಯಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆ. ಹೀಗೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಈ ದ್ವಂದ್ವದ ಅನುಭವವಾಗುವುದು ಸಹಜ, ಈ ಅನುಭವ ನಾವು ಬೆಳೆದಂತೆಲ್ಲ ಹಲವಾರು ರೀತಿಯಲ್ಲಿ ಹರಡಿಕೊಳ್ಳುತ್ತದೆ, ಮೂಲಭೂತವಾಗಿ ನೋಡುವುದಕ್ಕೆ ಎರಡೇ ಎನ್ನುವಂತಿದ್ದರೂ ನಮ್ಮ ಮನಸ್ಸಿನ ವ್ಯಾಪಾರಗಳು ಹಲವಾರು ನೆಲೆಗಟ್ಟಿನಲ್ಲಿ ಕೆಲಸ ಮಾಡತೊಡುಗುತ್ತವೆ.

ಕಾಮಿಡಿ ಸೆಂಟ್ರಲ್‌ನಲ್ಲಿ ಒಬ್ಬರು ತಮಾಷೆ ಮಾಡುತ್ತಾ 'ಈ ಹರಿಕೇನ್, ಸುಂಟರಗಾಳಿಗಳು ಬರುವ ಊರಿನಲ್ಲಿ ಜನರು ಏಕಿರುತ್ತಾರೆ, ಅವರೆಲ್ಲರೂ ಬೇರೆ ಊರುಗಳಿಗೆ ಏಕೆ ಹೋಗೋದಿಲ್ಲ - ಒಂದು ವೇಳೆ ಊರು ಬಿಟ್ಟು ಹೋಗದಿದ್ದರೆ ಕೊನೆಗೆ ನೀರು ಬಂತು, ಗಾಳಿ ಬಂತು ಎಂದು ಬೊಬ್ಬೆ ಹಾಕುವುದು ಏಕೆ?' ಎನ್ನುವ ಮಾತುಗಳನ್ನು ಆಡಿದರು. ಅದಕ್ಕೆ ತಕ್ಕ ಮಟ್ಟಿಗೆ ನಗುವೂ ಹುಟ್ಟಿತು, ಚಪ್ಪಾಳೆ ಸದ್ದೂ ಕೇಳಿತು. ಆದರೆ, ನಿಜವಾಗಿಯೂ ಈ ಚಂಡಮಾರುತ, ಸುಂಟರಗಾಳಿ ಬರುವ ಪ್ರದೇಶದಿಂದ ಜನರು ಊರುಬಿಟ್ಟು ಹೊರಡಲು ಸಾಧ್ಯವೇ? ಹಾಗೆ ಯೋಚಿಸಲು ಸಾಧ್ಯವೇ ಇಲ್ಲ, ಊರು ಬಿಟ್ಟು ಎಲ್ಲರೂ ಹೋಗುವುದಾದರೂ ಎಲ್ಲಿಗೆ? 'ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ' ಎಂಬಂತೆ ಅಲ್ಲಿ ವಾಸಿಸುವ ಕುಟುಂಬಗಳು ತಲತಲಾಂತರದಿಂದ ನೆಲೆಸಿವೆ, ಇನ್ನು ಮುಂದೆಯೂ ಹಾಗೆಯೇ ಇರುತ್ತದೆ. ಬದಲಾಗಬೇಕಾದವರು ಅವರಲ್ಲ, ತಾವು ಸುರಕ್ಷಿತ ಸ್ಥಳದಲ್ಲಿ ಕುಳಿತುಕೊಂಡಿದ್ದೇವೆ ಎಂದುಕೊಂಡವರು ನಿಜವಾಗಿಯೂ ಮತ್ತೊಮ್ಮೆ ಯೋಚಿಸಬೇಕು. ನಮ್ಮ ನ್ಯೂ ಜೆರ್ಸಿ-ನ್ಯೂ ಯಾರ್ಕ್ ಏರಿಯಾಗಳಲ್ಲಿ ವಾಹನ ಅಫಘಾತಗಳಲ್ಲಿ ವರ್ಷಕ್ಕೆ ಸಾಯುವವರ ಸಂಖ್ಯೆ ಉಳಿದ ಪ್ರದೇಶಗಳಲ್ಲಿ ನೈಸರ್ಗಿಕ ಪ್ರಕೋಪಗಳಿಂದ ಸಾಯುವವರ ಸಂಖ್ಯೆಗಿಂತ ಹೆಚ್ಚಿರಬಹುದು. ನಮ್ಮಲ್ಲಿ ಅಗತ್ಯವಾಗಿ ಕಾಣೋ (pseudo) ಮಿಥ್ಯ-ಟೈಪ್ ಎ ಮೆಂಟಾಲಿಟಿಗಳು, ನಗರದ ಬದುಕಿಗೆ ಹೊಂದಿಕೊಂಡೇ ಬರುವ ಯಾಂತ್ರಿಕ ಜೀವನ ಇವೆಲ್ಲವೂ ನಮ್ಮನ್ನು ಅಸ್ವಸ್ಥರನ್ನಾಗಿ ಮಾಡಬಹುದು, ಅಥವಾ ಧೀರ್ಘಕಾಲ ಮಾನಸಿಕ ಒತ್ತಡದಲ್ಲಿ ಬದುಕುವಂತೆ ಮಾಡಿ ಸಮಾಧಾನದ ಬದುಕು ಎಂದರೇನು ಎಂದು ಆಲೋಚಿಸುವಂತೆ ಮಾಡಬಹುದು. ಹೀಗೆ ಪ್ರತಿಯೊಂದು ಪ್ರದೇಶಗಳಲ್ಲೂ ಅದರ ಅನುಕೂಲ-ಅನಾನುಕೂಲಗಳು ಇದ್ದೇ ಇರುತ್ತವೆ.

ನಾವು ನಮ್ಮದು ಎಂದುಕೊಂಡ ಊರುಗಳ ಬಗ್ಗೆ ಇರಲಿ, ನಾವು ನಮ್ಮದು ಎಂದುಕೊಂಡ ದೇಶದ ಬಗ್ಗೆಯೇ ಎಷ್ಟೋ ಸಾರಿ ಯೋಚಿಸತೊಡಗುತ್ತೇನೆ. ಇಲ್ಲೇ ಹುಟ್ಟಿದ ಮಕ್ಕಳನ್ನು ಯಾವ ಯಾವ ತಂದೆ-ತಾಯಂದಿರು ಯಾವ ರೀತಿ ಬೆಳೆಸುತ್ತಾರೆ, ಹೇಗೆ ಬೆಳೆಸಿದರೆ ಸರಿ ಎಂಬ ಜಿಜ್ಞಾಸೆಗೊಳಗಾಗಿದ್ದೇನೆ. ಈ ಮಕ್ಕಳು ಬೆಳೆಯುವ ಪರಿಸರ ಅವರ ನೈಸರ್ಗಿಕ ಹಕ್ಕೇ ಅಥವಾ ತಂದೆತಾಯಂದಿರ ವಿಚಾರ-ಆಯ್ಕೆಗಳಿಗೆ ಬಿಟ್ಟದ್ದೇ? ನಮ್ಮ ಮಕ್ಕಳು ಏಕೆ ನಮ್ಮ ಭಾಷೆ/ಪರಂಪರೆಯನ್ನು ಕಲಿಯಬೇಕು, ಹಾಗೆ ಕಲಿಯದಿದ್ದರೆ ಅದರ ಬದಲಿಗೆ ಇನ್ನೇನನ್ನು ಕಲಿಯಬೇಕು ಕಲಿಯುತ್ತಾರೆ ಎನ್ನುವುದು ಮತ್ತಷ್ಟು ಗೋಜಲಾದ ವಿಚಾರ. ಪೋಷಕತ್ವದ ಬಗ್ಗೆ ನಾನು ಓದಿರುವ ಪುಸ್ತಕಗಳಿಗೂ ನಾನು ಬೆಳೆದು ಬಂದ ಬಗೆಗೂ ಪೂರ್ವ-ಪಶ್ಚಿಮದಷ್ಟು ವ್ಯತ್ಯಾಸವಿರುವಾಗ ಯಾರೋ ಒಬ್ಬರು ಸ್ಟ್ಯಾಂಡರ್ಡ್ ಎಂದು ಕರೆದಿರುವ ನಿದರ್ಶನಗಳನ್ನು ಎಷ್ಟರ ಮಟ್ಟಿಗೆ ನನ್ನಂತಹವರು ಕೈಗೊಂಡು ಧೀರ್ಘಕಾಲೀನವಾಗಿ ನಡೆಸಿಕೊಂಡು ಬರಬಹುದು?

ನಮ್ಮ ಹುಟ್ಟೂರು, ಅದರ ನೆನಪು ನಮಗೆಲ್ಲರಿಗೂ ಒಂದು ಹಿತವಾದ ವಾತಾವರಣದ ಗುಂಗನ್ನು ಹುಟ್ಟಿಸುತ್ತದೆ. ಆ ಊರಿನ ಉದ್ದಗಲಗಳ ಅಪಾರವಾದ ಮಾಹಿತಿ ಯಾವಾಗ ಬೇಕೋ ಆಗ ಕಣ್ಣ ಮುಂದೆ ಬರುವಂತಹ ಅಪಾರವಾದ ಸ್ಟೋರೇಜ್ ಹಾಗೂ ರಿಟ್ರೀವಲ್ ಮಾಡಬಹುದಾದ ನರಮಂಡಲವನ್ನು ನಿಸರ್ಗ ನಮಗೆ ನೀಡಿದೆ. ಊರಿನ ನೆನಪು ಒಂದು ರೀತಿಯ ಅಕ್ಷಯ ಪಾತ್ರೆಯ ಹಾಗೆ, ಮೊಗೆದಷ್ಟೂ ಬರಿದಾಗುವ ಪ್ರಶ್ನೆಯೇ ಇಲ್ಲ. ಹೀಗಿರುವ ಊರನ್ನು ಬಿಟ್ಟು ಬಂದದ್ದಾಯಿತು, ದೇಶವನ್ನು ಬಿಟ್ಟು ಬಂದದ್ದಾಯಿತು - ನನ್ನ ಪಾಕಿಸ್ತಾನದಿಂದ ಬಂದ ಡಾಕ್ಟರ್ ಸ್ನೇಹಿತರ ಹಾಗೆ, ಕ್ಯೂಬಾ ಅಥವಾ ಚೈನಾದಿಂದ ಬಂದ ಕೆಲವರಿಗೆ ಇರುವ ಹಾಗೆ ಇನ್ಯಾವತ್ತೂ ಹಿಂತಿರುಗಿ ಹೋಗದ ಪರಿಸ್ಥಿತಿಯೇ ಹುಟ್ಟಿತೆನ್ನಿ, ಅದರ ಕಲ್ಪನೆ ಹೇಗಿದ್ದಿರಬಹುದು? ನಮ್ಮ ದೇಶಕ್ಕೇ ನಾವು ಹೋಗದೇ ಇರುವ ಹಾಗಿದ್ದರೆ ಅದರ ಊಹೆಯೇ ಬಹಳಷ್ಟು ಸಂಕಷ್ಟವನ್ನು ಹುಟ್ಟಿಸಬಲ್ಲದು ಇನ್ನು ನಿಜಸ್ಥಿತಿಯ ಮಾತೇ ದೂರ. ಅಥವಾ ಇದು ಕೇವಲ ನನ್ನ ಅನುಭವ, ಅನಿಸಿಕೆ ಅಥವಾ ಸ್ಪಂದನ ಮಾತ್ರ. ತಮ್ಮ ದೇಶದ ಮೂಲ ಪಾಸ್‌ಪೋರ್ಟನ್ನು ಬ್ಯಾಂಕ್ ಪಾಸ್‌ಬುಕ್ಕಿನ ಹಾಗೆ ಬಿಸಾಡಿ ಇನ್ನೊಂದು ದೇಶವನ್ನು ಅಪ್ಪಿ ಹಿಡಿದವರನ್ನೂ ಬಲ್ಲೆ, ತಮ್ಮ ದೇಶದ ನಾಗರಿಕತೆಯನ್ನು ಕಳೆದುಕೊಳ್ಳಲಿಚ್ಛಿಸದೇ ಹಲವಾರು ತೊಂದರೆಗಳಿಗೆ ಎಡೆ ಮಾಡಿಕೊಂಡ ಭಾವುಕರನ್ನೂ ನಾನು ಬಲ್ಲೆ. ಹಾಗಾದರೆ ನಮ್ಮ ಊರು, ರಾಜ್ಯ, ದೇಶ ಇವೆಲ್ಲವೂ ಒಂದು ಭೋಗೋಳಿಕ ಗೆರೆಗಳು ಮಾತ್ರವೇನು? ಅಥವಾ ನಾವೆಂದೂ ಹೃದಯದಲ್ಲಿ ಜಾಗವಿಟ್ಟುಕೊಂಡಿರುವ ಹಾಗೆ ಮಾಡುವ ನಮ್ಮ ನಂಬಿಕೆಗಳ ಒರತೆಗಳೇ?

ನಾಡು-ನುಡಿ, ದೇಶ-ಭಾಷೆಗಳನ್ನೆಲ್ಲ ಬಿಟ್ಟು ಬಂದ ಮೇಲೆ, ನಮಗೆ ವಯಸ್ಸಾದಂತೆಲ್ಲ ಅಲ್ಲಿನ ನಮ್ಮವರೆಲ್ಲ ಅತ್ತಿತ್ತ ಚದುರಿಯೋ ಇಲ್ಲಾ ಕಾಲನ ಆಜ್ಞೆಗೆ ಮಣಿದೋ ಮರೆಯಾಗಿ ಹೋದ ಮೇಲೆ ನಮ್ಮ ಪರಂಪರೆಯ ಸ್ಮರಣೆ ಏಕಿರಬೇಕು, ಎಷ್ಟಿರಬೇಕು? ಇಷ್ಟರ ಮೇಲೆ ನಮ್ಮ ಅಂಗಳದಲ್ಲಿ ಆಟವಾಡುವ ಚಿಣ್ಣರು ಗೋಲಿ, ಬುಗುರಿ, ಚಿಣ್ಣಿದಾಂಡುಗಳನ್ನು ಆಡಲಿ ಎನ್ನುವ ಯೋಚನೆ ಏಕಿರಬೇಕು? ಹಿಂದೆಲ್ಲಾ ಯೂರೋಪಿನಿಂದಲೋ ಮತ್ತೆಲ್ಲಿಂದಲೋ ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ನೆಲೆಗಟ್ಟನ್ನು ಕಳೆದುಕೊಂಡು ಬಂದವರ ಬಗ್ಗೆಯಾಗಲೀ, ಅಥವಾ ಕ್ಯೂಬಾದಿಂದಲೋ, ಚೀನಾದಿಂದಲೋ ಹಿಂದೆ ತಿರುಗಿ ಹೋಗದ ಹಾಗೆ ಬಂದವರ ಬಗ್ಗೆಯಾಗಲೀ ಹೇಳದೇ, ಕೇವಲ ವ್ಯಾಪಾರ ಹಾಗೂ ಉದ್ಯೋಗವನ್ನು ಅರಸಿಕೊಂಡು ಬಂದವರನ್ನು ಕುರಿತು ಯೋಚಿಸಿದರೆ ಸಮಸ್ಯೆ ಸ್ವಲ್ಪ ಹಗುರವಾದಂತೆ ಕಾಣಿಸಿದರೂ, ನಮಗೆ ಯಾವುದೋ ಗೊತ್ತಿಲ್ಲ ಎಂಬ ಕಾರಣ ಇನ್ಯಾರನ್ನೋ ನಮ್ಮ ನಂಬಿಕೆಗಳಿಗೆ ಸೀಮಿತವಾಗಿರುವಂತೆ ಇರಿಸುವ ಬಂಧನ ಇವರೆಡನ್ನೂ ತುಲನೆ ಮಾಡಿ ನೋಡಬೇಕಾದ ಅನಿವಾರ್ಯತೆ ಹುಟ್ಟುತ್ತದೆ.

***

ಮಾನವ ನಿರ್ಮಿತ ಗಡಿಗಳಿಗಿಂತ ನಿಸರ್ಗ ನಿರ್ಮಿತ ನಿಲುವುಗಳು ದೊಡ್ಡವು ಎಂದುಕೊಂಡು ಸುಮ್ಮನಿರುವುದೋ ಅಥವಾ ಬಹುದೊಡ್ಡ ಸಂದೇಶವನ್ನು ಸಾರುವ ಮುಖ ಮಾಡಿಕೊಳ್ಳುವುದೋ ಲೇಸು!

Saturday, September 16, 2006

ಭಕ್ತಿ ಸಂಗೀತದ ಪುನರುಜ್ಜೀವನ - Resurgence

ಕೆಲವು ತಿಂಗಳ ಹಿಂದೆ ದೂರದ ಮೆಂಫಿಸ್‌ನಿಂದ ವಿಶ್ವೇಶ್ ಮತ್ತು ಅಶ್ವಿನಿ ಅವರು ಕರೆ ಮಾಡಿ ನಮ್ಮ ಹೊಸ ಮ್ಯೂಸಿಕ್ ಆಲ್ಬಮ್ ಇನ್ನೇನು ಕೆಲವು ದಿನಗಳಲ್ಲೇ ಹೊರಬರುತ್ತದೆ, ಅದರಲ್ಲಿ ಒಂದು ಹೊಸ ಪ್ರಯೋಗವನ್ನು ಮಾಡುತ್ತಿದ್ದೇವೆ ಎಂದಾಗ ನನಗೇನು ಅತಿಶಯೋಕ್ತಿ ಎನ್ನಿಸಲಿಲ್ಲ. ಏಕೆಂದರೆ ವಿಶ್ವೇಶ್ ಅವರ ಮೊದಲ ಆಲ್ಬಮ್ 'ಘಮ ಘಮ'ವನ್ನು ಕೇಳಿದವರಿಗೆ ಅವರ ಸಂಗೀತದ ಬಗೆಗಿನ ಆಳವಾದ ಜ್ಞಾನದ ಅರಿವಿನ ಜೊತೆಗೆ ಹೊಸ ಪೀಳಿಗೆಯವರು ಮನಸ್ಸಿನಲ್ಲಿ ಯೋಚಿಸುವ ಇಲ್ಲಿನ-ಅಲ್ಲಿನ, ಹಳೆಯ-ಹೊಸ ಕಲ್ಪನೆಗಳಿಗೆ ಒಂದು ವಿಶಿಷ್ಟ ರೂಪವನ್ನು ಕೊಡುವ ಅವಿರತ ಪ್ರಯತ್ನದ ಅರಿವೂ ಇದೆ. ನಾನು ಮೊಟ್ಟ ಮೊದಲ ಬಾರಿ 'ಘಮ-ಘಮ'ದ ಟೈಟಲ್ ಸಾಂಗ್ ಕೇಳಿದಾಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಾಳಪ್ಪಾ ಹುಕ್ಕೇರಿಯವರು 'ಘಮಾ-ಘಮಾ ಘಮಾಡ್ತಿಸ್ತಾವ ಮಲ್ಲೀಗೆ...' ಎಂದು ಹಾಡಿದ ನೆನಪು ಬಂತು - ವಿಶ್ವೇಶ್ ಅವರ ಕಂಠದಲ್ಲಿ ಹುಕ್ಕೇರಿಯವರ ಕಂಠದ ಹಾಗೆಯೇ ಆಡುನುಡಿಗಳನ್ನು ಹಾಡುವ ಒರಿಜಿನಾಲಿಟಿಯನ್ನು ನಾನು ಗುರುತಿಸಿದ್ದೆ - ಸಾಮಾನ್ಯವಾಗಿ ಪಟ್ಟಣದವರಿಗೆ ಸೆರೆಹಿಡಿಯಲು ಸಾಧ್ಯವಿಲ್ಲದ ವಿಶೇಷ ಧ್ವನಿಗಳನ್ನು ವಿಶ್ವೇಶ್ ಅವರು ಆ ಹಾಡಿನಲ್ಲಿ ಸೆರೆಹಿಡಿದದ್ದು ಅವರ ಸಹಜ ಪ್ರತಿಭೆಗೆ ಹಿಡಿದ ಕನ್ನಡಿ ಎಂದು ಒಂದೇ ಮಾತಿನಲ್ಲಿ ಹೇಳಬಹುದು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದುಕೊಂಡು ತಾವು ಭಾರತದಿಂದ ಬಳುವಳಿ ತಂದ ತಮ್ಮ ಸಂಗೀತ ಸಾಧನೆಯನ್ನು ಸಮಯ ಸಿಕ್ಕಾಗಲೆಲ್ಲ ಒರೆಗೆ ಹಚ್ಚಿ ಅದರಿಂದ ಹೊಸ ಕಂಪನ್ನು ಹೊರ ತರುವ ಅವರ ಪ್ರಯತ್ನ ಶ್ಲಾಘನೀಯ. ತಾವು ಚಿಕ್ಕ ಹುಡುಗನಾಗಿದ್ದಾಗಿನಿಂದ ಆರಂಭಿಸಿದ್ದ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಹಾಗೂ ಬೆಳವಣಿಗೆಯನ್ನು ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಸಂಗೀತದಲ್ಲಿ ಸಾಧನೆ ಮಾಡಿದ ವಿಶ್ವೇಶ್ ಅವರ ಪ್ರತಿಭೆ ಕೇವಲ ಸಂಗೀತಕ್ಕಷ್ಟೇ ಸೀಮಿತವಾಗಿರದೇ ಚಿತ್ರಕಲೆ ಹಾಗೂ ಸಂಘಟನೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೯೯೭ರಿಂದ ೨೦೦೦ದ ವರೆಗೆ ಡೆಕ್ಕನ್ ಹೆರಾಲ್ಡ್‌ಗೆ ನೂರಾರು ಕಾರ್ಟೂನ್‌ಗಳನ್ನು ಬರೆದ ಪ್ರತಿಭೆ ಅವರದು. ಜೊತೆಯಲ್ಲಿ ತಾವು ಮೆಂಫಿಸ್‌ಗೆ ಬಂದ ಹೊಸದರಲ್ಲಿ ಅಲ್ಲಿನ ಕನ್ನಡಿಗರೊಡಗೂಡಿ 'ತರಂಗ' ಕನ್ನಡ ಸಂಘವನ್ನು ಹುಟ್ಟು ಹಾಕಿದ ಮೊದಲಿಗರೂ ಹೌದು. ತಾವಿರುವ ಮೆಂಫಿಸ್ ಪ್ರದೇಶದಲ್ಲಿ ಹಲವಾರು ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತಗಾರರನ್ನು ಕಲೆ ಹಾಕಿ ತಮ್ಮ ಮನೆಯಲ್ಲಿಯೇ ಒಂದು ರೆಕಾರ್ಡಿಂಗ್ ಸ್ಟುಡಿಯೋವನ್ನು ನಿರ್ಮಿಸಿ ಸಂಗೀತದ ಅಲೆಗಳನ್ನು ಹೊರಡಿಸಿ ಅಮೇರಿಕದ ಉದ್ದಗಲಕ್ಕೆ ಬೇಕಾದಷ್ಟು ಕಾರ್ಯಕ್ರಮಗಳನ್ನು ಕೊಟ್ಟಿರುವ ಕೀರ್ತಿ ಅವರದು. ವಿಶ್ವೇಶ್ ಅವರ ಛಲ ಮತ್ತು ಸಾಧನೆಯಲ್ಲಿ ಸಮಭಾಗಿಗಳಾಗಿರುವ ಅವರ ಧರ್ಮಪತ್ನಿ ಅಶ್ವಿನಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ವಿಶ್ವೇಶ್ ಅವರಂತೆ ಇವರೂ ಸಹ ಚಿಕ್ಕ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ವೀಣಾವಾದನದಲ್ಲಿ ಸಾಧನೆಯನ್ನು ಮಾಡಿ, ಭಾರತದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ವಿಶ್ವೇಶ್ ಅವರ ಹಾಡಿನಲ್ಲಿ ವೀಣೆಯ ಹಿಮ್ಮೇಳವನ್ನು ನೀಡುವುದರೊಂದಿಗೆ ತಾವೂ ಜೊತೆಯಲ್ಲಿ ದನಿಗೂಡಿಸಿರುವುದೂ ಅಲ್ಲದೇ ಈ ಧ್ವನಿ ಸುರುಳಿಗಳನ್ನು ಹೊರತರುವಲ್ಲಿ ಬೆಂಬಲಿಗರಾಗಿ ಸಾಕಷ್ಟು ಶ್ರಮಿಸಿದ್ದಾರೆ.

ಇವರ ಹೊಸ ಆಲ್ಬಮ್ "ರಿಸರ್ಜನ್ಸ್" ನಲ್ಲಿ ಐದು ಟ್ರ್ಯಾಕ್‌ಗಳಿವೆ, ಇದರಲ್ಲಿರುವ ಪ್ರಯೋಗದ ವಿಶೇಷವೆಂದರೆ ಭಕ್ತಿರಸವನ್ನು ಪ್ರಧಾನವಾಗಿಟ್ಟುಕೊಂಡು ಮರಾಠಿ, ಕನ್ನಡ, ಹಿಂದಿ ಹಾಗೂ ಸಂಸ್ಕೃತದಲ್ಲಿ ಆಯ್ದ ಗೀತೆಗಳಿಗೆ ವಿಶ್ವೇಶ್-ಅಶ್ವಿನಿಯವರೇ ಹೊಸ ರಾಗ ಸಂಯೋಜನೆ ಮಾಡಿರುವುದು. ಮೊದಲ ಟ್ರ್ಯಾಕ್‌ನಲ್ಲಿ ಡಾ. ಅಶೋಕ್ ರಾವ್ ಅವರ ಸುಂದರ ನಿರೂಪಣೆಯೊಂದಿಗೆ ದಿವ್ಯ ತಂಬೂರಿಯ ಮಧುರವಾದ ಹಿನ್ನೆಲೆ ಆರಂಭವನ್ನು ಮುದಗೊಳಿಸುತ್ತದೆ. ಡಾ. ಅಶೋಕ್ ರಾವ್ ಅವರು ಹೇಳಿದ ''There is a belief that Indian classical music is a divine vehicle that can help us reach a higher spiritual state...' ಎನ್ನುವ ಮಾತು ಅಕ್ಷರಷಃ ಸತ್ಯ. 'ರಿಸರ್ಜೆನ್ಸ್'ನಲ್ಲಿ ಹೊರ ಹೊಮ್ಮುವ ಸಂಗೀತ ಭಕ್ತಿ ರಸವನ್ನು ಪ್ರಧಾನವಾಗಿಟ್ಟುಕೊಂಡು ಕೇಳುಗರನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತದೆ. ಆಧುನಿಕ ಬದುಕಿನ ಮತ್ತೊಂದು ಮುಖವಾದ ವ್ಯಸ್ತ ಜಗತ್ತಿನಲ್ಲಿ ವಿಶ್ವೇಶ್ ಅವರ ಭಕ್ತಿರಸದ ಪ್ರಯೋಗ ನಿಜವಾಗಿಯೂ ಒಂದು ಹೊಸ ದಾರಿಯನ್ನು ತೋರಿಸುತ್ತದೆ.



ಮೊದಲ ಹಾಡು ಗುರುವಿಗೆ ಮೀಸಲಾಗಿದ್ದು, ಶ್ರೀಪಾದ ಶ್ರೀ ವಲ್ಲಭರ 'ಗುರು ವಿನಾ ನಾಹಿ ಕೋಣಿರೇ...' ಎಂದು ಗುರುವಿನ ಮಹತ್ವವನ್ನು ಹೊರ ಸೂಸುವ ಮಧುರವಾದ ಹಾಡನ್ನು ವಿಶ್ವೇಶ್ ಹಾಗೂ ಅಶ್ವಿನಿ ಅವರಿಬ್ಬರ ಸ್ವರದಲ್ಲಿ ಕೇಳಬಹುದು. ಮರಾಠಿ ಅರ್ಥವಾಗದಿದ್ದವರಿಗೂ ಗುರುವಿನ ಮಹತ್ವವನ್ನು ಸಾರಿ, ಗುರುವನ್ನು ಎಲ್ಲ ಬಂಧುಗಳಿಗಿಂತಲೂ ದೊಡ್ಡದಾಗಿ ಮಾಡುವ ತೋಡಿ-ಭಟಿಯಾರ ರಾಗಗಳಲ್ಲಿ ಹೊರ ಹೊಮ್ಮುವ ಸ್ವರಗಳು ಗುರುವನ್ನು ಎಂಥವರ ಮನದಲ್ಲೂ ಬಹಳ ಎತ್ತರದಲ್ಲಿ ನಿಲ್ಲಿಸುತ್ತದೆ. ಈ ಹಾಡಿನಲ್ಲಿರುವ ಇನ್ನೊಂದು ವಿಶೇಷವೆಂದರೆ ಎಲ್ಲೂ ಅತಿ ಎನಿಸದೇ ತಕ್ಕ ಪ್ರಮಾಣದಲ್ಲಿ ಮೂಡುವ ಹಿನ್ನೆಲೆ ಸಂಗೀತ. ತಮ್ಮ ಇತಿಮಿತಿಗಳಲ್ಲಿ, ಸಿಕ್ಕ ಅವಕಾಶಗಳಲ್ಲಿ ವಿಶ್ವೇಶ್-ಅಶ್ವಿನಿ ಅವರು ಸಾಕಷ್ಟು ಸ್ವರಗಳನ್ನು ಹೊರಡಿಸಿ ಗುರುವಿಗೆ ಒಂದು ಹೆಚ್ಚಿನ ಸ್ಥಾನವನ್ನು ವಿವಿಧ ರೀತಿಗಳಲ್ಲಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ತೋಡಿ ರಾಗಕ್ಕೆ ಪಾಶ್ಚಾತ್ಯ ಗಿಟಾರ್ ಧ್ವನಿಯನ್ನು ಹೊಂದಿಸುವಲ್ಲಿ ವಿಶ್ವೇಶ್ ಅವರ ಕೈಚಳಕ ಎದ್ದು ಕಾಣುತ್ತದೆ.



ಎರಡನೆಯ ಹಾಡು 'ನಿರಂತರ', ಹರಿ ಭಜನೆ ಮಾಡೋ ನಿರಂತರ... ಎನ್ನುವ ಶ್ರೀ ವಾದಿರಾಜರ ಕೃತಿಯನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಭೀಮ್‌ಪಲಾಸ್ ರಾಗದಲ್ಲಿ ಆರಂಭವಾಗುವ ವಿಶ್ವೇಶ್ ಅವರ ಆಲಾಪನೆ ಎಂಥವರ ಮನಸ್ಸಿನಲ್ಲೂ ಇರುವ ತಲ್ಲಣಗಳನ್ನು ಒಂದು ಕ್ಷಣ ದೂರ ಮಾಡಿ ಹರಿಭಜನೆಯ ನಿರಂತರ ಗಾನದಲ್ಲಿ ಧ್ಯಾನದ ಎತ್ತರವನ್ನು ಹುಟ್ಟುಹಾಕುತ್ತದೆ. 'ಪರಗತಿಗಿದು ಇದು ನಿರ್ಧಾರ ನೋಡೋ...' ಎನ್ನುವ ಒಂದೇ ಸಾಲಿನಲ್ಲಿ ವಿಶ್ವೇಶ್ ಪೂರ್ವ-ಪಶ್ಚಿಮದವರಿಗೆಲ್ಲ ಅಪ್ಯಾಯಮನವಾಗುತ್ತಾರೆ. ಈ ಹಾಡಿನ ಹಿನ್ನೆಲೆಯಲ್ಲಿ ಹತ್ತಾರು ವಯಲಿನ್‌ಗಳ ಮಾಧುರ್ಯವನ್ನು ಸೆರೆಹಿಡಿದು ಸಿಂಫನಿ ಎಫೆಕ್ಟ್ ಹುಟ್ಟಿಸುವ ಒಂದು ಹೊಸ ಪ್ರಯೋಗವಿದೆ. ಈ ಹಾಡಿನ ಕೊನೆಯಲ್ಲಿ 'ಹರಿ ಭಜನೆ-ಭಜನೆ...' ಅನ್ನೋದು ಹದಿನಾಲ್ಕು ಸಲ ಪುನರಾವರ್ತನೆಯಾಗುತ್ತದೆ, ಪ್ರತಿಯೊಂದು ಸಲ ಪುನರಾವರ್ತನೆಯಾದಾಗಲೂ ಹಾಗೂ ಭಜನೆ ಎನ್ನುವ ಪದವನ್ನು ವಿಶ್ವೇಶ್ ಅವರು ಭಿನ್ನವಾಗಿ ಮೂಡಿಸಿದ್ದಾರೆ, ಒಟ್ಟಿನಲ್ಲಿ ೨೮ ಸಲ ಬರುವ 'ಭಜನೆ' ನಿಜವಾಗಿಯೂ ಮನವನ್ನು ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ.

ಮೂರನೇ ಹಾಡು ಮೀರಾಬಾಯಿಯ 'ಗೋವರ್ಧನ್ ಗಿರಿಧಾರಿ' ಯನ್ನು ಅಶ್ವಿನಿಯವರು ಸಾಕ್ಷಾತ್ಕರಿಸಿದ್ಧಾರೆ. 'ತುಮ್ ಬಿನ್ ಮೋರಿ ಕೌನ್ ಖಬರಲೇ ಗೋವರ್ಧನ್ ಗಿರಿಧಾರಿ' ಎನ್ನುವಲ್ಲಿ ಮೀರಾಬಾಯಿ ಕೃಷ್ಣನನ್ನು ಪ್ರಶ್ನಿಸುವ ಆತ್ಮೀಯತೆಯನ್ನು ಪಲ್ಲವಿಯಲ್ಲೇ ಸಾಧಿಸಿಕೊಂಡಿದ್ದಾರೆ. ಯಮನ್ ರಾಗದಲ್ಲಿ ಹೊರಹೊಮ್ಮುವ ಸುಂದರ ಶೃತಿಯ ಜೊತೆಗೆ ಸುಂದರವಾದ ಗಿಟಾರ್ ಮತ್ತು ಕೊಳಲಿನ ಹಿನ್ನೆಲೆಯೂ ಇದೆ. ಸರಳವಾದ ರಾಗದಲ್ಲಿ ಹೊರ ಹೊಮ್ಮುವ ಅಶ್ವಿನಿಯವರ ಧ್ವನಿ ಶ್ರೀ ಕೃಷ್ಣನೊಂದಿಗೆ ತನ್ಮಯತೆಯನ್ನು ಸಾಧಿಸಿದ ಮೀರಾಬಾಯಿಯ ಮೊರೆಯನ್ನು ಕಣ್ಣಿಗೆ ಕಟ್ಟುತ್ತದೆ.

ನಾಲ್ಕನೆಯ ಹಾಡು ತುಲಸೀ ದಾಸರ 'ರಾಮ ಚರಣ ಸುಖದಾ' ವನ್ನು ವಿಶ್ವೇಶ್-ಅಶ್ವಿನಿಯವರಿಬ್ಬರ ಧ್ವನಿಯಲ್ಲಿ ಕೇಳಬಹುದು. ಭೈರವಿ ರಾಗದಲ್ಲಿ ಹೊರ ಹೊಮ್ಮುವ ಈ ಅದ್ಭುತ ಕೃತಿ ಎಂಥವರಿಗೂ ರಾಮ ಚರಣವನ್ನು ಭಜಿಸುವ ಮನಸ್ಥಿತಿಯನ್ನು ಮೂಡಿಸುತ್ತದೆ. ತುಲಸೀ ದಾಸರ ಚರಣಗಳಿಗೆ ಜಲತರಂಗದ ಹೊಸ ಅಲೆಗಳನ್ನು ಹೊಮ್ಮಿಸುವ ಪ್ರಯೋಗದಲ್ಲಿ ರಾಮ ಚರಣದ ಕಲ್ಪನೆ ಎಂಥವರಿಗೂ ಮುದನೀಡುತ್ತದೆ.

ಕೊನೆಯ ಹಾಡು ಶ್ರೀ ಜಯದೇವರ 'ನಾಥ ಹರೇ, ಜಗನ್ನಾಥ ಹರೇ' ಎನ್ನುವ ಹಾಡು ದರ್ಬಾರಿ ಕಾನಡಾ ರಾಗದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ವಿಶ್ವೇಶ್ ಅವರ ಸರಳ ಶೈಲಿ, ಜೊತೆಗೆ ಹದವಾದ ಮೃದಂಗದ ನಿನಾದ ಹಾಗೂ ಭಾವಪರವಶ ಸಂಗೀತ ಭಕ್ತಿಯ ಉತ್ತುಂಗಕ್ಕೆ ಕರೆದೊಯ್ಯುತ್ತದೆ. ಈ ಹಾಡಿನಲ್ಲಿ ಮೂಡುವ ವಿಶ್ವೇಶ್ ಅವರ ಆಲಾಪನೆಯನ್ನು ಕೇಳುವುದು ನಿಜವಾಗಿಯೂ ಒಂದು ಹೊಸ ಅನುಭವ. ಬಹಳ ಸರಳವಾಗಿ ಆರಂಭವಾಗುವ ಹಾಡು ಆಲಾಪನೆಗಳ ಸಾಂಗತ್ಯ ಜೊತೆಯಲ್ಲಿ ವೀಣೆಯ ಮಧುರವಾದ ಧ್ವನಿಯಲ್ಲಿ ಶ್ರೋತೃಗಳ ಮನಸ್ಸಿನಲ್ಲಿ ಬಹಳ ಎತ್ತರವನ್ನು ತಲುಪುತ್ತದೆ.

"ರಿಸರ್ಜೆನ್ಸ್" ಹೊರ ಬರಲು ಅಶ್ವಿನಿ-ವಿಶ್ವೇಶ್ ಅವರ ಜೊತೆಯಲ್ಲಿ ಹಲವಾರು ಸಹ ಕಲಾವಿದರೂ ದುಡಿದಿದ್ದಾರೆ: ಗಿಟಾರ್ ಸಹಗಾಯನವನ್ನು ನೀಡಿದವರು ಜಾನ್ ಓಮನ್ (John Oommen), ಮೃದಂಗದಲ್ಲಿ ಲಕ್ಷ್ಮಣ್, ತಬಲಾ ಸಾಥಿಗಳಾಗಿ ಯೋಗೇಶ್ ಹಾಗೂ ಶೇಖರ್, ಹಾರ್ಮೋನಿಯಮ್‌ನಲ್ಲಿ ಪ್ರಭಾಕರ್ ಪಾರೀಖ್, ಕೊಳಲಿನಲ್ಲಿ ಕೃಷ್ಣಾ ಪ್ರಸಾದ್, ವೀಣಾ ವಾದಕಿಯಾಗಿ ಅಶ್ವಿನಿ. ಈ ಆಲ್ಬಮ್‌ಗೆ ಸಂಗೀತ ಸಂಯೋಜಿಸಿರುವ ವಿಶ್ವೇಶ್ ತಮ್ಮ ಕೀ ಬೋರ್ಡಿನಿಂದ ಅದ್ಭುತವಾದ ಧ್ವನಿಗಳನ್ನು ಹೊರಡಿಸಿದ್ದಾರೆ. ತಾವಿರುವ ಮೆಂಫಿಸ್‌ನಲ್ಲಿ ನ್ಯೂ ಜೆರ್ಸಿ ಅಥವಾ ಕ್ಯಾಲಿಫೋರ್ನಿಯಾದಲ್ಲಿ ಸಿಕ್ಕ ಹಾಗೆ ಕಲಾವಿದರು ಸಿಕ್ಕೋದಿಲ್ಲ ಎನ್ನುವುದನ್ನು ಚೆನ್ನಾಗಿ ಮನಗಂಡಿರುವ ವಿಶ್ವೇಶ್-ಅಶ್ವಿನಿ, ಈ ಸಹ ಕಲಾವಿದರನ್ನು ಒಟ್ಟುಗೂಡಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ ಹಾಗೂ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ ಹೊಸವರ್ಷದ ಸಂದರ್ಭದಲ್ಲಿ ಸುಮಾರು ೫೦೦ ಮೈಲು ದೂರದ ಸೀಡರ್ ರಾಪಿಡ್ಸ್‌ನಿಂದ ಯೋಗೇಶ್ ಇವರ ಮನೆಗೆ ಬಂದಿದ್ದಾಗಲೇ ಅವರ ತಬಲಾವನ್ನು ರೆಕಾರ್ಡ್ ಮಾಡಿಕೊಂಡು ಮುಂದೆ ಅದನ್ನು ವಿಶ್ವೇಶ್ ಅವರು ಬಳಸಿಕೊಂಡಿದ್ದಾರೆ. ಸಾವಿರಾರು ಡಾಲರುಗಳನ್ನು ಸುರಿದು ದೊಡ್ಡ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಪ್ರೊಫೆಷನಲ್ ಆರ್ಟಿಸ್ಟುಗಳು ಮಾಡಿರುವ ಧ್ವನಿ ಮುದ್ರಣಕ್ಕೆ ಯಾವುದೇ ಕೊರತೆಯಿಲ್ಲದೇ ತಮ್ಮ ಮನೆಯಲ್ಲಿಯೇ ತಾವೇ ಹೊಂದಿಸಿಕೊಂಡ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್‌ಗಳನ್ನು ಬಳಸುವುದರ ಮೂಲಕ ನಮ್ಮೆಲ್ಲರ ನಡುವೆ ಎದ್ದು ಕಾಣುತ್ತಾರೆ. ತಮ್ಮ ಅವಿರತ ದುಡಿಮೆಯ ಜೊತೆಗೆ ಎಲ್ಲ ಕಲಾವಿದರೂ ಸಾಕಷ್ಟು ಶ್ರಮಿಸಿದ್ದಾರೆ, ಇಲ್ಲಿ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಕಲಾವಿದರೆಲ್ಲರೂ ಒಟ್ಟಿಗೆ ಸಿಡಿ ಬಿಡುಗಡೆಯ ಸಮಾರಂಭದಲ್ಲೇ ಸೇರಿದ್ದು ಎನ್ನುವುದನ್ನೂ ವಿಶ್ವೇಶ್ ಹೆಮ್ಮೆಯಿಂದ ಸ್ಮರಿಸುತ್ತಾರೆ.

ಈ ಧ್ವನಿ ಸುರುಳಿಯಲ್ಲಿ ಭಾರತೀಯ ಸಾಹಿತ್ಯ-ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನು ಎಷ್ಟು ಚೆನ್ನಾಗಿ ಬೆರೆಸಿದ್ದಾರೆಂದರೆ ಅದು ಭಕ್ತಿ ಸಂಗೀತ ಮಾಧುರ್ಯವನ್ನು ಹೆಚ್ಚಿಸಿದೆಯೇ ವಿನಾ ಎಲ್ಲೂ ಕರ್ಕಶವೆಂದೆನಿಸಿಲ್ಲ. ಜೊತೆಗೆ ವಿಶ್ವೇಶ್ ಅವರ ರಾಗಗಳ ಬಳಕೆ ಬೆಳಗಿನ ಜಾವದ ರಾಗಗಳಿಂದ ಆರಂಭವಾಗಿ ಸರಿ ರಾತ್ರಿಯ ರಾಗಗಳವರೆಗೆ ವಿಸ್ತರಿಸಿರುವುದೂ ಅವರ ಪ್ರಯೋಗಗಳಲ್ಲೊಂದು. ವಿಶ್ವೇಶ್-ಅಶ್ವಿನಿಯವರು ತಮ್ಮ ಪ್ರಯೋಗಗಳನ್ನು ಹೀಗೆಯೇ ಮುಂದುವರೆಸಿ, ಇನ್ನೂ ಹಲವಾರು ಧ್ವನಿ ಸುರುಳಿಗಳನ್ನು ಹೊರಗೆ ತಂದು ಸಂಗೀತದಲ್ಲಿ ಸಾಧನೆಯನ್ನು ಮಾಡುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಒಟ್ಟಿನಲ್ಲಿ "ರಿಸರ್ಜೆನ್ಸ್" ನಮ್ಮ ನಡುವಿನ ಕನ್ನಡದ ಧ್ವನಿಯಾಗಿ ಹೊರಬಂದಂತೆ ಕಂಡು ಬಂದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಜನರ ಮನ್ನಣೆಗಳಿಗೆ ಪಾತ್ರವಾಗಿರೋದು ಸತ್ಯದ ಸಂಗತಿ. ವಿಶ್ವಿನಿ.ಕಾಮ್ ವೆಬ್ ಸೈಟ್‌ನಲ್ಲಿ ತೋರಿಸಿದ ಎಷ್ಟೋ ಜನರ ಅನಿಸಿಕೆಗಳು ಅತಿಶಯೋಕ್ತಿ ಎಂದು ಎಲ್ಲೂ ಅನ್ನಿಸುವುದಿಲ್ಲ. ವಿಶ್ವೇಶ್-ಅಶ್ವಿನಿಯವರ ಸಾಧನೆಗಳ ಬಗ್ಗೆ ನೀವು http://www.vishwini.com/ ನಲ್ಲಿ ವಿವರವಾಗಿ ನೋಡಬಹುದು ಹಾಗೇ "ಘಮ-ಘಮ" ಗೀತೆಗಳನ್ನು Kannada Audio.com ನಲ್ಲಿ ಕೇಳಬಹುದು.

***

ಸೂಚನೆ: ಈ ಬಗ್ಗೆ ನಿನ್ನೆ ThatsKannada.com ದಲ್ಲಿ ಪ್ರಕಟವಾದ ಬರಹವನ್ನು ಹೆಚ್ಚು ಜನರು ನೋಡಲಿ ಎಂದು 'ಅಂತರಂಗ'ದಲ್ಲಿಯೂ ಹಾಕಿದ್ದೇನೆ.

Thursday, September 14, 2006

ಓದಿ ಬರೆಯುವ ಬಗ್ಗೆ - ಧ್ವನಿಗಳು

ಬಹಳ ದಿನಗಳಾದವು 'ಸಂವಾದ'ವನ್ನು ಬರೆದು ಎಂದು ಯೋಚಿಸತೊಡಗಿದಂತೆ ಧ್ವನಿಗಳು ಹೀಗೆ ತಮ್ಮಷ್ಟಕ್ಕೆ ತಾವೇ ಹೊರಬರತೊಡಗಿದವು...

***

ಹಾಗಾದ್ರೆ, ಬರೀ ಬೇಕು ಅಂದ್ರೆ ಎಷ್ಟು ಸಾಧ್ಯವೋ ಅಷ್ಟನ್ನ ಓದಬೇಕು ಅಂತ ಆಯ್ತು!

ಹೌದು, ಮೊದಲು ಓದಬೇಕು, ಹೇಗೇ ಅಂದ್ರೆ ಬಯಲಲ್ಲಿ ಒಳ್ಳೇ ದನಗಳು ಮೇಯೋ ಹಾಗೆ, ತಿನ್ನೋ ಹೊತ್ತಿನಲ್ಲಿ ಅದೂ-ಇದೂ ಅಂತ ನೋಡಬಾರದಂತೆ...

ತಡಿ, ಉಳಿದವರು ಬರೆದದ್ದನ್ನ ಓದಿ ನಾವು ಯಾಕೆ ಬರೀ ಬೇಕು, ಹಾಗೆ ಮಾಡಿದ್ರೆ ಒಂದು ರೀತಿ ಕೃತಿಚೌರ್ಯ ಆದಂಗಾಗಲ್ವಾ?

ಇಲ್ಲ. ಇನ್ನೊಬ್ರು ಬರೆದುದನ್ನ ಓದಿ ಅದನ್ನ ಒಂಚೂರೂ ಕ್ರೆಡಿಟ್ ಕೊಡ್ದೇ ಹಾಗೇ ಇಳಿಸಿದ್ರೆ ಅದು ಕೃತಿಚೌರ್ಯಾನೇ, ಆದ್ರೆ ಇನ್ನೊಬ್ರು ಬರೆದದ್ದನ್ನ ಓದಿ ನಮ್ಮ್ ಮನಸೊಳಗೆ ಹುಟ್ಟೋ ಸಂವೇದನೆಗಳಿಗೆ ಒಂದು ರೂಪಾ ಕೊಡೋದಿದೇ ನೋಡು ಅಲ್ಲೇ ಇರೋದು ನಿಜವಾದ ಬರಹ.

ಅದರಲ್ಲೇನಿದೆ ವಿಶೇಷಾ? ಒಂಥರಾ ಹಿಂದೀ ಸಿನೆಮಾಗಳ ಹಾಗೆ ಲವ್ವರ್ರ್‌ಗಳು ಮರಾ ಸುತ್ತೋದು ಬಿಡೋಲ್ಲ, "ತುಮ್ ಮೇರಾ ಭೇಟಾ ನಹೀ, ಮೈ ತೇರಾ ಬಾಪ್ ನಹೀ!" ಅಂತ ಕಿರುಚಾಡೋ ಅಪ್ಪಂದಿರೂ ಸಹ ಹೊಸಬರಲ್ಲ - ಅದೇ ಮಸಾಲೇನೇ ಅರೆದೂ-ಅರೆದೂ ಹಾಕೋ ಹಾಗೆ...

ಸುಮ್ನೇ ಕನ್‌ಕ್ಲೂಷನ್‌ಗೆ ಬರೋದು ಬೇಕಾಗಿಲ್ಲ, ಅವರ ಮಸಾಲೇನೋ, ಗ್ರೀಸೋ ಅವರ ಹತ್ರಾನೇ ಇರಲಿ, ನಾನು ಹೇಳಿದ್ದು ನಿಜವಾದ ಸೂಕ್ಷ್ಮ ಸಂವೇದನೆಗಳು ಎಲ್ಲರಲ್ಲೂ ಇರುತ್ವೆ, ಅದಕ್ಕೊಂದು ರೂಪ ಸಿಕ್ಕುತ್ತೆ ಬರಹದ ಮೂಲಕ, ಅಲ್ದೇ ಬರಹಾ ಅನ್ನೋದು ಒಂದು ಮುಖಾ ಅಷ್ಟೇ ಹೊರತೂ ಸಂವೇದನೆಗಳು ಹೊರಗೆ ಬರೋಕೆ ಹಲವಾರು ದಾರಿಗಳಿವೆ.

ಹಾಗಾದ್ರೆ ಎಲ್ರೂ ಬರೆದ್ರೆ ಓದೋರ್ ಯಾರು? ಒಂಥರಾ ಕನ್ನಡಾ ಬ್ಲಾಗ್‌ಗಳ ಕಥೆ ಆದಂಗಾಯ್ತಲ್ಲ, ಅವರವರೇ ಬರೆದು ಅವರವರ ಬೆನ್ನು ತಟ್ಟೋಕೆ...

ಹಾಗೇನಿಲ್ಲ, ಬ್ಲಾಗ್ ಪ್ರಪಂಚ ಈಗಷ್ಟೇ ಶುರುವಾಗಿದೆ, ಇನ್ನೊಂದ್ ಹತ್ತು ವರ್ಷಾ ಬಿಟ್ರೆ ಅದರಲ್ಲಿ ಇನ್ನೇನು ಬೆಳವಣಿಗೆ ಕಾಣ್ಸುತ್ತೋ ಯಾರಿಗ್ಗೊತ್ತು, ಕನ್ನಡಾ ಬ್ಲಾಗ್‌ಗಳ ಬೆಳಿತಾ ಇರೋ ಸಂಖ್ಯೆ ಬಗ್ಗೆ ಮಾತ್ರ ಹೇಳೋದಲ್ಲ, ಅದರಲ್ಲೂ ಕೆಲವರು ಕಾಯ್ದುಕೊಂಡಿರೋ ವಿಶೇಷಗಳು ಬೇಕಾದಷ್ಟಿವೆ. ನಮ್ಮವರಲ್ಲೂ ಎಷ್ಟೊಂದು ಭಿನ್ನತೆ ಇದೆ, ಒಂದರ ಹಾಗೆ ಮತ್ತೊಂದು ಇದ್ದ ಹಾಗಿಲ್ಲ.

ಇವರು ಎಷ್ಟು ಬೇಕಾದ್ರು ಬರೆದುಕೊಂಡ್ರೂ, ಅದೆಲ್ಲಾ ಬೆಳೆಯೋದು ಅಷ್ಟರಲ್ಲೇ ಇದೆ, ಕನ್ನಡಾ ಬ್ಲಾಗ್ ಅಂದ್ರೆ ಅವುಗಳಿಗೆ ಬರೋ ವಿಸಿಟರ್ಸೂ ಅಷ್ಟಕ್ಕಷ್ಟೇ...

ಹೋಗೀ-ಹೋಗಿ ಇಂಗ್ಲೀಷಿಗೆ ನಮ್ ಬರಹಗಳನ್ನ ಹೋಲಿಸ್‌ಕೋ ಬೇಕಾದ್ ಅಗತ್ಯ ಯಾರಿಗೂ ಇಲ್ಲ. ಹೆಚ್ಚು ಜನ ನೋಡ್ತಾರೆ ಅಂದ ಮಾತ್ರಕ್ಕೆ ಅದು ಬಹಳ ವಿಶೇಷವಾದ್ದೂ ಅಂತ ನನಗೇನೂ ಅನ್ನಿಸ್ಲಿಲ್ಲ, ಕನ್ನಡಕ್ಕೆ ಅದರದ್ದೇ ಆದ ಸ್ಥಾನ ಇದೆ, ನಮ್ ಭಾರತೀಯ ಭಾಷೆಗಳಿಗೆ ಕಂಪೇರು ಮಾಡಿದ್ರೆ ಅದನ್ನಾದ್ರೂ ಒಪ್ಪಬಹುದು.

ಹೌದು, ಯಾರಾದ್ರೂ ಪುಣ್ಯಾತ್ಮರು ಆ ರೀತಿ ಒಂದು ಸ್ಟಡಿ ಯಾಕೆ ಮಾಡೋದಿಲ್ವೋ?

ಮಾತು ಎಲ್ಲಿಂದ ಎಲ್ಲಿಗೋ ಹೋಯ್ತು, ನನ್ ಪ್ರಕಾರ ನಾವುಗಳು ಪ್ರತಿ ಒಬ್ರೂ ಚೆನ್ನಾಗಿ ಓದಬೇಕು, ಹಾಗೇ ಬರೀ ಬೇಕು. ಹುಡುಕಿ ನೋಡಿದ್ರೆ ಎಲ್ರಲ್ಲೂ ಬೇಕಾದಷ್ಟು ಅನುಭವಗಳು ಕಂತೆ-ಕಂತೆಯಾಗಿ ತುಂಬಿಕೊಂಡಿರ್ತವೆ, ಅವುಗಳಿಗೆಲ್ಲ ಒಂದು ರೂಪಾ ಕೊಡೋದೇ ಒಂದು ಹವ್ಯಾಸವಾಗಬೇಕು.

ಎಲ್ರೂ ಬರೀತಾರೆ ಅನ್ನೋ ಮಾತು ಸುಳ್ಳು, ಯಾಕಂದ್ರೆ ಓದೋದಕ್ಕೆ ಒಂದ್ ರೀತಿ ತಾಳ್ಮೆ, ಮೈಂಡ್‌ಸೆಟ್ ಬೇಕು, ಆದ್ರೆ ಬರಿಯೋದೂ ಅಂದ್ರೆ ಬಹಳ ತಲೇ ನೋವಿನ್ ಸಂಗತಿ.

ಅದು ನಿಜವಾದ ಮಾತೇ, ಹೆಚ್ಚು ಓದಿದ ಹಾಗೆ ನಮ್ಮಲ್ಲಿರೋ ಧ್ವನಿಗಳಿಗೂ ಒಂದ್ ರೂಪಾ ಅಂತ ಸಿಗುತ್ತೆ ಅಂತ ನನ್ನ ಅಭಿಪ್ರಾಯ, ಅವುಗಳಿಗೆ ಸಾಧ್ಯವಾದ್ರೆ ಒಂದು ಹೊರಮುಖ ಕೊಟ್ರಾಯ್ತು, ಇಲ್ಲಾಂದ್ರೆ ಬಿಟ್ರಾಯ್ತು...ನೂರು ಜನ ಓದುಗ್ರಿದ್ರೆ, ಹತ್ತು ಜನ ಬರೆಯೋರ್ ಇರಬೇಕು, ಕೊನೇಪಕ್ಷಾ ಓದೋರಿಗೆ ಬರಹಗಳಾದ್ರು ಸಿಕ್ಕಲಿ ಅಂತ.

ಯಾರ್ ಓದ್ತಾರೆ? ಸುಮ್ನೇ ಬರೆದು ಬಿಸಾಡಿದ್ದೇ ಬೇಕಾದಷ್ಟು ಇರುವಾಗ...ಬರೆಯೋದು, ಓದೋದು ಇವೆಲ್ಲ ನಮಗಾಗಲ್ಲಾ...

ಹಾಗಲ್ಲ, ಎಲ್ಲ ಬರಹಗಳೂ ಎಲ್ರಿಗೂ ಇಷ್ಟ ಆಗಬೇಕು ಅಂತೇನೂ ಇಲ್ಲ. ಓದೋರು ತಮಗಿಷ್ಟ ಬಂದದ್ದನ್ನ ಆಯ್ಕೆ ಮಾಡ್ಕೊಳ್ತಾರೆ, ಬರೆಯೋರು ಒಂದು ನೆಲೇನಾ ತಾವ್ ಕಂಡ್ಕೋ ಬೇಕು.

ನಮ್ ಕನ್ನಡ ಪುಸ್ತಕಗಳನ್ನ ಯಾರೂ ಕೊಳ್ಳೋಲ್ಲ, ಕ್ಯಾಸೆಟ್ಟು, ಸಿಡಿ, ಡಿವಿಡಿ ಗಳ ಕಥೆ ಹಾಗಿರಲಿ...ಇನ್ನು ಬರೆದು ಹೊಟ್ಟೇ ತುಂಬಿಸಿಕೊಳ್ತೀವಿ ಅನ್ನೋ ಮಾತಂತೂ ದೂರವೇ ಉಳೀತು!

ಕ್ವಾಲಿಟಿ ವಸ್ತುಗಳಿಗೆ ಬೇಡಿಕೆ ಇದ್ದೇ ಇದೆ, ಮೊನ್ನೆ ನಡೆದ ಸಮ್ಮೇಳನದಲ್ಲಿ ನನ್ನ ಎದುರೇ ಎಷ್ಟೋ ಜನ ಅದಿಲ್ವಾ ಇದಿಲ್ವಾ ಅಂತ ವಿಚಾರಿಸ್ತಾ ಇದ್ರು. ಸುಮ್ನೇ ಎಲ್ಲರೂ ಪ್ರಕಟಿಸ್ತಾರೆ ಅಂತ ಪ್ರಕಟಿಸೋ ಬದಲು ಒಂದಿಷ್ಟು ಕ್ವಾಲಿಟಿ ಬಗ್ಗೆ ಯೋಚನೆ ಮಾಡಿ ಪರಿಶ್ರಮದದಿಂದ ಒಳ್ಳೇ ಸತ್ವವನ್ನ ಪುಸ್ತಕಗಳಲ್ಲಿ ತುಂಬಿದ್ರೆ ಯಾರು ಬೇಕಾದ್ರೂ ಕೊಳ್ತಾರೆ ಅಂತ ನನ್ನ ಅಭಿಪ್ರಾಯ.

ಅದ್ಸರಿ, ಈ ವಿದ್ಯಾವಂತ ಜನ ಕನ್ನಡದಲ್ಲಿ ಮಾತನಾಡೋದೇ ಹೆಚ್ಚು, ಇನ್ನು ಅವರೆಲ್ಲ ಓದ್ತಾರೆ, ಬರಿತಾರೆ ಅನ್ನೋದು ಮರೀಚಿಕೆ ಅಲ್ವೇ?

ಕನ್ನಡ ಮಾತನಾಡೋರ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ಯೇ ವಿನಾ ಕಡಿಮೆ ಅಂತೂ ಆಗೋಲ್ಲ, ಹಿಂದೆಲ್ಲಾ ನಾವು ಯಾವುದೋ ಸಾಮಾಜಿಕ ಸ್ಥಿತಿಗತಿಗಳಲ್ಲಿದ್ದೆವು, ಈಗ ಇನ್ಯಾವುದೋ...ಆದರೆ ಮೂಲಭೂತ ಅವಶ್ಯಕತೆಗಳು ಮಾತ್ರ ಹಾಗೇ ಇವೆ ಎನ್ನಿಸುತ್ತೆ.

ಮೊದಲು ಓದೋಣ, ಬರೆಯೋರ್ ಸಂಖ್ಯೆಗಿಂತ್ಲೂ ಓದೋರ್ ಸಂಖ್ಯೆ ಮುಖ್ಯ, ಬರೀ ಓದೋದು ಅಷ್ಟೇ ಅಲ್ಲ, ಓದಿ ಬೆನ್ನು ತಟ್ಟೋದಕ್ಕಿಂತ್ಲೂ 'ಹೀಗಲ್ಲ-ಹಾಗೆ', 'ಹೀಗೂ ಇರಬಹುದೇ?', 'ನನಗನ್ನಿಸೋ ಪ್ರಕಾರ...' ಅಂತಾನಾದ್ರೂ ಒಂದಿಷ್ಟು ಬರೆದ್ರೆ ಒಂದು ಸಣ್ಣ ಪ್ರಪಂಚ ಹುಟ್ಟತ್ತೆ, ಇಲ್ಲಾ ಅಂದ್ರೆ ಬರೆಯೋರು ಬರೀತಾನೆ ಇರ್ತಾರೆ, ಅವರಿಗೂ ಒಂದು ಫೀಡ್‌ಬ್ಯಾಕ್ ಅನ್ನೋದು ಇರಬೇಕಲ್ವಾ?

ಕನ್ನಡ ಬ್ಲಾಗುಗಳ ಮಟ್ಟಿಗಂತೂ ಆ ಮಾತು ಸತ್ಯಾ...ಹೀಗೆ ಮುಂದೆ ಎಲ್ಲರೂ ಕಂಪ್ಯೂಟರ್‌ನಲ್ಲಿ ಕನ್ನಡ ಓದಿ-ಬರೆಯುವ ಹಾಗೆ ಆಗಲಿ, ಆಗುತ್ತೇ ಅನ್ನೋದು ನನ್ನ ಆಶಯ!

Wednesday, September 13, 2006

ಏನೋ ಓದಿ ಮತ್ತಿನ್ನೇನನ್ನೋ ಮಾಡೋ ಪರಿಸ್ಥಿತಿ

ನೀವೆಲ್ಲಾ ಹೈ ಸ್ಕೂಲು ಮುಗಿಸುವಾಗ ಪರಿಸ್ಥಿತಿ ಹೇಗಿತ್ತೋ ಗೊತ್ತಿಲ್ಲ, ನಾನು ಹೈ ಸ್ಕೂಲು ಮುಗಿಸುವ ಎಂಭತ್ತರ ದಶಕದ ಕೊನೆಯ ಹೊತ್ತಿಗೆ ಹತ್ತನೇ ತರಗತಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದರೆ ಪಿ.ಯು.ಸಿ. ಯಲ್ಲಿ ಸೈನ್ಸ್; ಸೆಕೆಂಡ್ ಕ್ಲಾಸಿನಲ್ಲಿ ಪಾಸಾದರೆ ಪಿ.ಯು.ಸಿ. ಕಾಮರ್ಸ್ ಹಾಗೂ ಥರ್ಡ್ ಕ್ಲಾಸ್ ಪಾಸಾದರೆ ಪಿ.ಯು.ಸಿ.ಯಲ್ಲಿ ಆರ್ಟ್ಸ್ ತೆಗೆದುಕೊಳ್ಳಬೇಕು ಎನ್ನುವುದು ಬಹಳ ಜನರ ಮಟ್ಟಿಗೆ ನಿರ್ಧಾರ ಮಾಡಲು ಮಾನದಂಡವಾಗಿತ್ತು. ನನ್ನ ಬ್ಯಾಚಿನಲ್ಲಾಗಲೀ ಅಥವಾ ನಾನು ನೋಡಿದಂತೆ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದೂ ಸ್ವ ಇಚ್ಛೆಯಿಂದ ಕಲಾ ವಿಭಾಗವನ್ನು ಆರಿಸಿಕೊಂಡವರನ್ನೂ ನೋಡಿದ್ದೇನೆ ಅಂತಹವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಪರಿಸ್ಥಿತಿ ಈಗ ಹೇಗಿದೆಯೋ ಗೊತ್ತಿಲ್ಲ, ಆಗಂತೂ ಎಲ್ಲ ತಂದೆ ತಾಯಿಯರು ತಮ್ಮ ಮಕ್ಕಳನ್ನು ಒಂದೇ ಡಾಕ್ಟರ್ ಅಥವಾ ಇಂಜಿನಿಯರರನ್ನಾಗಿ ಮಾಡಬೇಕು ಎಂದು ಪರದಾಡುತ್ತಿದ್ದುದನ್ನು ನಾನು ಬೇಕಾದಷ್ಟು ಸಾರಿ ನೋಡಿದ್ದೇನೆ. ಇನ್ನೇನಾದರೂ ರ್ಯಾಂಕ್ ಬಂದ ವಿದ್ಯಾರ್ಥಿಗಳೇನಾದರೂ ಕಲಾ ವಿಭಾಗವನ್ನು ಆರಿಸಿಕೊಂಡಿದ್ದಿದೆಯೆಂದಾದರೆ ಅದನ್ನು ನಂಬಲೂ ಕಷ್ಟವಾಗುತ್ತಿತ್ತು.

ಹತ್ತನೇ ತರಗತಿಯಲ್ಲಿ ತೆಗೆದ ಅಂಕಗಳನ್ನು ಬಹಳಷ್ಟು ಕಡೆ ಒಂದು ಅಳತೆಗೋಲಾಗಿ ಬಳಸಲ್ಪಡುತ್ತಿತ್ತು. ಒಂದರಿಂದ ಒಂಭತ್ತನೇ ತರಗತಿಯವರೆಗೆ ಇರದ ಪಬ್ಲಿಕ್ ಪರೀಕ್ಷೆಗಳು ಹತ್ತನೇ ತರಗತಿಯಲ್ಲಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ಮಟ್ಟದ ಪರೀಕ್ಷಾ ಪತ್ರಿಕೆಗಳನ್ನು ನೀಡಿ ಅದರಿಂದ ಪ್ರತಿಯೊಬ್ಬರ ಬುದ್ಧಿಮತ್ತೆಯನ್ನು ಅಳತೆ ಮಾಡಲಾಗುತ್ತಿತ್ತು. ಪಟ್ಟಣದಲ್ಲಿ ಓದಿದವರಿಗೆ ಫಸ್ಟ್ ಕ್ಲಾಸ್ ಬಂದರೆ ಅದೇನೂ ಅಂತಹ ಆಶ್ಚರ್ಯವನ್ನು ತರದಿರಬಹುದು ಆದರೆ ನಮ್ಮ ಹಳ್ಳಿಗಳಲ್ಲಿ ಫಸ್ಟ ಕ್ಲಾಸ್ ಬರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಅತಿ ಕಡಿಮೆ, ಹೆಚ್ಚಿನವರು ಫೇಲ್ ಆಗುತ್ತಿದ್ದರೆ, ಒಂದು ಹೈಸ್ಕೂಲಿಗೆ ಒಬ್ಬರೋ ಇಬ್ಬರೋ ಅರವತ್ತು ಪರ್ಸೆಂಟ್ ಅಂಕಗಳಿಗಿಂತ ಹೆಚ್ಚು ಅಂಕಗಳಿಸಿ ಫಸ್ ಕ್ಲಾಸ್ ವಿದ್ಯಾರ್ಥಿಗಳು ಎನ್ನಿಸಿಕೊಳ್ಳುತ್ತಿದ್ದರು. ಒಮ್ಮೆ ಫೇಲಾದ ವಿದ್ಯಾರ್ಥಿಗಳು 'ಕೆರೆ'ಯ ಅಥವಾ 'ಬಾವಿ'ಯ ಮೊರೆ ಹೋಗುತ್ತಿದ್ದರು...ಅಂದರೆ 'ಹಿರೇಕೆರೆ' (ಹಿರೇಕೇರೂರು) ಹಾಗೂ ಹಂಸಬಾವಿ ಇವೆರಡೂ ನಮ್ಮೂರಿನಿಂದ ಕೆಲವೇ ಮೈಲುಗಳ ದೂರದಲ್ಲಿರುವ ಧಾರವಾಡ ಜಿಲ್ಲೆಯಲ್ಲಿದ್ದ ಸೆಂಟರುಗಳು, ಅಲ್ಲಿ ಪರೀಕ್ಷೆಗಳಲ್ಲಿ ಕಾಪಿ ಹೊಡೆಸುವುದು ಎಲ್ಲರಿಗೂ ಗೊತ್ತಿದ್ದರಿಂದ ನಮ್ಮ ಊರಿನಲ್ಲಿ ಯಾರಾದರೂ ಫೇಲ್ ಆದರೆ 'ಅವನಿಗೇನು, ಒಂದೇ ಕೆರೇನೋ ಇಲ್ಲಾ ಬಾವೀನೋ ನೋಡಿಕೊಂಡರಾಯಿತು!' ಎಂದು ತಮಾಷೆ ಮಾಡುತ್ತಿದ್ದುದು ನೆನಪಿಗೆ ಬಂತು. ಆದರೆ ಕಾಪಿ ಹೊಡೆಸುತ್ತಾರೆ ಎಂದು ಹೋಗಿ ಎಷ್ಟೋ ಜನ ಡಿಬಾರ್ ಸ್ಕ್ವಾಡ್‌ಗಳಿಗೆ ಸಿಕ್ಕಿಬಿದ್ದ ಘಟನೆಗಳಿಗೇನೂ ಕಡಿಮೆ ಇಲ್ಲ - ಕಾಪಿ ಹೊಡೆಯುವ ಹಲವಾರು ವಿಧಾನಗಳ ಬಗ್ಗೆ ಬರೆದರೆ ಅದು ದೊಡ್ಡ ಲೇಖನವಾಗುವ ಹೆದರಿಕೆ ಇದೆ, ಜೊತೆಯಲ್ಲಿ ನಾನು ನನ್ನ ಪರೀಕ್ಷೆಗಳನ್ನು ಹೇಗೆ ಪಾಸು ಮಾಡಿರಬಹುದು ಎಂಬ ಅನುಮಾನ ನಿಮ್ಮ ಮನಸ್ಸಿನಲ್ಲಿ ಹುಟ್ಟೋ ಸಾಧ್ಯತೆ ಇರೋದರಿಂದ ಅದರ ಬಗ್ಗೆ ಇನ್ನೊಮ್ಮೆ ಬರೆದರಾಯಿತು!

ಹೀಗೆ ಕನ್ನಡ ಮೀಡಿಯಂ ನಲ್ಲಿ ಫಸ್ಟ್ ಕ್ಲಾಸ್ ಪಾಸಾಗಿ ಮುಂದೆ ಹೋಗ ಬಯಸೋ ವಿದ್ಯಾರ್ಥಿಗಳಿಗೆ ಎರಡು ಮಾರ್ಗಗಳನ್ನು ಸೂಚಿಸಲಾಗುತ್ತಿತ್ತು, ಒಂದೇ ಡಿಪ್ಲೋಮಾ (ಪ್ಲಾಲಿಟೆಕ್ನಿಕ್) ಮಾಡುವುದು ಅಥವಾ ಪಿಯುಸಿ ಸೈನ್ಸ್ ವಿಭಾಗವನ್ನು ಸೇರಿಕೊಳ್ಳುವುದು - ಅದರಲ್ಲೂ ಪಿ.ಸಿ.ಎಮ್.ಬಿ. (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ) ಕಾಂಬಿನೇಶನ್‌ಗೆ ಮುಗಿಬೀಳುತ್ತಿದ್ದವರು ಹೆಚ್ಚು. ಹೆಚ್ಚು ಜನ ಕನ್ನಡ ಮೀಡಿಯಂ ನಿಂದ ಹೋಗಿ ಪ್ರಥಮ ಪಿಯುಸಿಯನ್ನು ಪಾಸು ಮಾಡಲಾಗದೇ ಬಂದು ಮನೆ ಸೇರುತ್ತಿದ್ದ ನಿದರ್ಶನಗಳು ಹಲವಾರು. ಎಷ್ಟೋ ಅಡೆತಡೆಗಳ ನಡುವೆ ಪಿಯುಸಿ ಪಾಸಾದರೂ, ಆಗಷ್ಟೇ ಆರಂಭಿಸಿದ್ದ ಸಿ.ಇ.ಟಿ. (ಕಾಮನ್ ಎಂಟ್ರನ್ಸ್ ಟೆಸ್ಟ್) ಮುಗಿಸಿ ಅದರಲ್ಲಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಲಿಸ್ಟ್‌ನಲ್ಲಿ ಹೆಸರು ಕಾಣಿಸಿಕೊಳ್ಳುವಂತೆ ಮಾಡುವಷ್ಟರಲ್ಲಿ ಹಳ್ಳಿ ಕಡೆಗಳಿಂದ ಬಂದವರಲ್ಲಿ ಮತ್ತೊಂದಿಷ್ಟು ಜನ ಉದುರಿಹೋಗುತ್ತಿದ್ದರು. ಅಕಸ್ಮಾತ್ ಹಾಗೇನಾದರೂ ಉತ್ತಮ ಅಂಕಗಳು ಬಂದೂ ಸರ್ಕಾರಿ ಸೀಟು ಸಿಗದೇ ಹೋದರೆ ಖಾಸಗೀ ಅಥವಾ ಅರೆ ಖಾಸಗೀ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಅಥವಾ ಡೆಂಟಲ್ ಕೋರ್ಸುಗಳನ್ನು ತೆಗೆದುಕೊಂಡು ಅದಕ್ಕೆ ತಕ್ಕ ಶುಲ್ಕ (ಫೀ) ವನ್ನು ಕಟ್ಟಲು ಸಾಮರ್ಥ್ಯ ಇರದವರು ಒಂದಿಷ್ಟು ಜನ ಬಿ.ಎಸ್ಸಿ.,ಗೋ ಮತ್ತೊಂದಕ್ಕೋ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಸರಿಯಾದ ಮಾರ್ಗದರ್ಶನವಿರದೆಯೋ ಅಥವಾ ಬೇಕಾದ ಸೀಟುಗಳು ಸಿಗದೆಯೋ ಯಾವುದೋ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಲು ಇಚ್ಛೆ ಇದ್ದಂತಹವರು ಇನ್ಯಾವುದೋ ವಿಭಾಗದಲ್ಲಿ ಸೇರಿಕೊಂಡಿದ್ದನ್ನು ನೋಡಿದ್ದೇನೆ. ಮೊದಲ ವರ್ಷದ ನಂತರ ಬದಲಾಯಿಸಬಹುದು ಎಂದುಕೊಂಡರೂ ಹಾಗೆ ಬದಲಾಯಿಸುವವರು ಕಡಿಮೆ ಎನ್ನೋದು ಮತ್ತೊಂದು ವಿಷಯ. ಒಬ್ಬ ವಿದ್ಯಾರ್ಥಿ ಕೆಮಿಕಲ್ ಇಂಜಿನಿಯರಿಂಗ್ ಅನ್ನು ಆಸೆ ಪಟ್ಟು ತೆಗೆದುಕೊಂಡು ಓದುವುದಕ್ಕೂ ಇನ್ಯಾವುದೂ ಸಿಗದೇ ಸಿಕ್ಕಿದ್ದನ್ನು ಆರಿಸಿಕೊಂಡರಾಯಿತು ಎಂದು ವಿಷಯ-ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಹೇಳಲು ಈ ಮಾತನ್ನು ಹೇಳಬೇಕಾಯಿತು. ಹೀಗೆ ಪಾಲಿಟೆಕ್ನಿಕ್, ಪಿಯುಸಿ, ಇಂಜಿನಿಯರಿಂಗ್, ಮೆಡಿಕಲ್, ಬಿಎಸ್ಸಿ ಇತರ ಸೈನ್ಸ್ ಆಧಾರಿತ ಕೋರ್ಸುಗಳನ್ನು ಹಿಡಿದು ಹೊರಟವರದು ಒಂದು ಕಥೆಯಾದರೆ, ಕಾಮರ್ಸ್ ತೆಗೆದುಕೊಂಡು ಸಿ.ಎ. ಮಾಡುತ್ತೇವೆ ಎನ್ನುವವರ ಕಥೆಗಳಾಗಲೀ, ಆರ್ಟ್ಸ್ ತೆಗೆದುಕೊಂಡು ಎಮ್.ಎ., ಬಿ.ಎಡ್., ಮಾಡುತ್ತೇನೆ ಎನ್ನುವವರದು ಮತ್ತೊಂದು ಕಥೆ.

ನನ್ನ ಬ್ಯಾಚಿನ ಒಬ್ಬ ಹುಡುಗ ೧೫ ವರ್ಷಕ್ಕೆ ಹತ್ತನೇ ತರಗತಿಯನ್ನು ಮುಗಿಸಿ ೨೧-೨೨ ವರ್ಷಕ್ಕೆ ಪದವಿಯೊಂದನ್ನು ಗಳಿಸುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೊಂದು ಅಂಶಗಳು ಪರಿಣಾಮ ಬೀರುತ್ತವೆ ಎನ್ನುವುದನ್ನು ಹೀಗೆ ವಿವರಿಸಬೇಕಾಯಿತು. ನಮ್ಮ ಆಫೀಸಿನಲ್ಲಿ ಔಟ್‌ಸೋರ್ಸಿಂಗ್ ವಿಷಯಗಳು ಚಲಾವಣೆಗೆ ಬಂದಂತೆಲ್ಲಾ 'ನಿಮ್ಮ ದೇಶದಲ್ಲೇನು ಬೇಕಾದಷ್ಟು ಜನ ಇಂಜಿನಿಯರುಗಳು ಪ್ರತಿವರ್ಷ ಹೊರಗೆ ಬರುತ್ತಾರೆ!' ಎನ್ನುವ ಆಶ್ಚರ್ಯಸೂಚಕ ಮಾತುಗಳಿಗೆ ನಾನು 'ಅಲ್ವಾ?' ಅನ್ನೋ ಥರಾ ಮುಖ ಮಾಡಿ ನಕ್ಕು ಬಿಡುತ್ತೇನೆ. ನನ್ನ ಮನಸ್ಸಿನಲ್ಲಿರೋ ದ್ವಂದ್ವ ಎಂದರೆ ಒಬ್ಬ ಡಾಕ್ಟರ್ ಅನ್ನು ತೆಗೆದುಕೊಂಡರೆ ಆ ವೃತ್ತಿಗೆ ತಕ್ಕ ತರಬೇತಿ, ಅಧ್ಯಯನವನ್ನು ನಿರಂತರವಾಗಿ ಮಾಡಿ ಎಷ್ಟೋ ವರ್ಷಗಳ ನಂತರ ಒಂದು ಕಡೆ ಪ್ರಾಕ್ಟೀಸ್ ಮಾಡುವುದಕ್ಕೆ ಆಸ್ಪದವಿರುತ್ತದೆ. ಆದರೆ ಒಬ್ಬ ಕೆಮಿಕಲ್, ಏರೋನಾಟಿಕಲ್ಸ್, ಮೆಕ್ಯಾನಿಕಲ್, ಇತ್ಯಾದಿ ಇಂಜಿನಿಯರಿಂಗ್ ತರಬೇತಿ/ಅಧ್ಯಯನವನ್ನು ಮುಗಿಸಿದವರನ್ನು ವೈಲ್ಡ್ ಕಾರ್ಡ್ ಆಗಿ ಬಳಸಲಾಗುತ್ತಿದೆ. ಇಲ್ಲಿ ಹೀಗಾದಾಗ ಹಲವಾರು ಅಂಶಗಳನ್ನು ಗಮನಿಸುತ್ತೇನೆ: ಇಂಜಿನಿಯರಿಂಗ್ ಮುಗಿಸಿದ ವ್ಯಕ್ತಿ ನಿರ್ಧಿಷ್ಟ ಗುರಿಯನ್ನೇನೂ ಇಟ್ಟುಕೊಳ್ಳದೆ 'ಯಾವುದೋ ಒಂದು' ಇಂಜಿನಿಯರಿಂಗ್ ಮುಗಿಸಿದನೆಂದೋ, ಅಥವಾ ಆತನ ಆಶೋತ್ತರಗಳನ್ನು ಗಂಭೀರವಾಗಿ ಪರಿಗಣಿಸಲಾಗದ ಪರಿಸ್ಥಿತಿ ನಿರ್ಮಾಣವಾಗುವುದೆಂದೋ, ಅಥವಾ ಪ್ರತಿಯೊಬ್ಬ ಇಂಜಿನಿಯರ್‌ಗೆ ತನ್ನತನ್ನ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕಲು/ಸೃಷ್ಟಿಸಿಕೊಳ್ಳಲಾಗದೆಂದೋ; ಅಥವಾ ನಮ್ಮಲ್ಲಿನ ಮಿನಿಮಮ್ ಅಥವಾ ಬೇಸಿಕ್ ಎಜುಕೇಶನ್ ಮಟ್ಟ ಅಂದರೇ ಇಂಜಿನಿಯರಿಂಗ್ ಆಗಿದೆಯೆಂದೋ; ವೃತ್ತಿಪರ ಕೋರ್ಸುಗಳನ್ನು ಹೆಚ್ಚು ಹೆಚ್ಚು ಆಗಿ ಕಲಿಸೋದರ ಹಿಂದೆ ಬರೀ ಒಬ್ಬ 'ಪದವೀಧರ'ನನ್ನು ಸೃಷ್ಟಿಸುವ ಅನಿವಾರ್ಯತೆ ಇದೆಯೆಂದೋ; ಇವೆಲ್ಲವನ್ನೂ ಮೀರಿ 'ಒಂದು ನಿರ್ಧಿಷ್ಟ ಕ್ಷೇತ್ರದಲ್ಲೇ ನಾನು ಓದಿ, ದುಡಿಯುತ್ತೇನೆ' ಎಂದು ಗುರಿ ಅಥವಾ ಯೋಜನೆ ಇರದವರೇ ಹೆಚ್ಚಿದ್ದಾರೇನೋ ಎಂದು ಬೇಕಾದಷ್ಟು ಆಲೋಚನೆಗಳು ಬರತೊಡಗುತ್ತವೆ.

ನನಗ್ಗೊತ್ತು ಈ ಬರವಣಿಗೆಯಲ್ಲಿ ನನ್ನ ಆಲೋಚನೆಗಳು ಔಟ್ ಡೇಟೆಡ್ ಆಗಿವೆಯೆಂದು ಆದರೆ ನಾನು ಮುಖ್ಯವಾಗಿ ಚರ್ಚಿಸಲು ಹೊರಟ ಕೆಲವು ವಿಚಾರಗಳೆಂದರೆ:
- ಕೇವಲ ಅಂಕಗಳ ಆಧಾರಿತವಾಗಿ ಸೀಟುಗಳ ಹಂಚಿಕೆ
- ಪದೇ-ಪದೇ ಬದಲಾಗುವ ವೈಯುಕ್ತಿಕ ಗುರಿಗಳು ಅಥವಾ ನಿರ್ಧಿಷ್ಟ ಗುರಿ ಅನ್ನೋದಿರದೇ ಕಲೆಕ್ಟಿವ್ ಗುರಿ ಎಲ್ಲರ ಗುರಿಯಾಗಿ ಮಾರ್ಪಡುವುದು
- ಏನನ್ನೋ ಓದಿ, ಇನ್ನೇನನ್ನೋ ವೃತ್ತಿಯನ್ನಾಗಿ ಆರಿಸಿಕೊಳ್ಳುವುದು
- ಹ್ಯುಮಾನಿಟೀಸ್, ಭಾಷೆ, ಮುಂತಾದ ವಿಷಯಗಳನ್ನು ಆಯ್ಕೆಯಿಂದ ಆರಿಸಿಕೊಂಡವರಿರದೇ ಪರಿಸ್ಥಿತಿಯ ಒತ್ತಡ ಅಥವಾ ಕೈಗೊಂಬೆಯಾಗಿ ಆಯ್ದುಕೊಳ್ಳುವುದು
- ಸರಿಯಾದ ಸಮಯಕ್ಕೆ ಸಿಗದ ಮಾರ್ಗದರ್ಶನ

ಹೀಗೆ ಹಲವಾರು ವಿಷಯಗಳು ಕಣ್ಣ ಮುಂದೆ ಬಂದು ಹೋದವು. ಇವುಗಳನ್ನೆಲ್ಲ ಹೇಗೆ ನಿರೂಪಿಸಿದ್ದೇನೋ ಗೊತ್ತಿಲ್ಲ, ಒಟ್ಟಿನಲ್ಲಿ ಸ್ಥೂಲವಾಗಿ ನನ್ನ ಮನದ ವ್ಯಾಪಾರ ನಿಮಗೆ ಅರ್ಥವಾದರೆ ಸಾಕು!

Tuesday, September 12, 2006

ಹೀಗೊಬ್ಬ ಧನಂಜಯಣ್ಣ

ಸಾಗರ ಪಟ್ಣಾ ಬಿಟ್ಟು ಕಾರ್ಗಲ್-ಜೋಗಾದ್ ಕಡೆ ಹೋಗೋ ಬಿಎಚ್ ರಸ್ತೆ ಹಿಡಿದು ಹೊರಟರೆ, ಎಲ್.ಬಿ.ಕಾಲೇಜು, ಕುಗ್ವೆ, ತಾಳಗುಪ್ಪಾ, ಹಿರೇಮನೆ ಮುಂತಾದ ಸಣ್ಣ-ಪುಟ್ಟ ಹಳ್ಳಿಗಳನ್ನೆಲ್ಲ ದಾಟಿ ರಸ್ತೆಗಳ ಅಂಕು-ಡೊಂಕು ಹೆಚ್ಚುತ್ತಾ ಕೆಲವೊಮ್ಮೆ ನಾವು ಬಂದ ದಾರಿಯನ್ನು ತೋರಿಸುವಷ್ಟರ ಮಟ್ಟಿಗೆ ತಿರುವುಗಳು ಬರಬೇಕು ಎನ್ನುವಷ್ಟರಲ್ಲಿ ಇಡುವಾಣಿ ಎಂಬ ಪುಟ್ಟ ಗ್ರಾಮ ಇರುವ ಕುರುಹಿನಂತೆ ರಸ್ತೆಯ ಪಕ್ಕದಲ್ಲೊಂದು ತಂಗುದಾಣ, ಅದರ ಇಕ್ಕೆಲಗಳಲ್ಲಿ ಕೆಲವು ಮನೆಗಳು ಕಾಣಸಿಗುತ್ತವೆ. ಇಲ್ಲಿಂದ ಹೆಚ್ಚೇನಿಲ್ಲ, ಕೆಲವೇ ಕೆಲವು ಮೈಲಿಗಳ ಪ್ರಯಾಣದಲ್ಲೇ ವಿಶ್ವಪ್ರಸಿದ್ಧ ಜೋಗ ಜಲಪಾತ ಇರೋದು. ಆದರೆ ನಾನು ಬಹಳಷ್ಟು ಬಾರಿ ಇಡುವಾಣಿಗೆ ಹೋಗಿ ಅಲ್ಲೇ ಎಷ್ಟೋ ದಿನಗಳ ವಾಸ್ತವ್ಯವನ್ನು ಹೂಡಿ ಇದ್ದಾಗ ನನ್ನ ಕೈಗೆ ನಿಲುಕುವಷ್ಟು ತತ್ವವನ್ನು ಹಂಚಿ ನನ್ನ ಸಂಸ್ಕಾರಗಳನ್ನು ತಿದ್ದುತ್ತಿದ್ದ ನನ್ನ ಸ್ನೇಹಿತ ಸದಾನಂದ ಹಾಗೂ ಅವನ ಸ್ನೇಹಿತ ಧನಂಜಯ ಹೀಗೇ ಈ ದಿನ ಒಡನೆಯೇ ನೆನಪಾದರು. ಹೌದಲ್ಲ, ನಾನು ಇಷ್ಟು ದಿನ ಬರೆದರೂ ಒಮ್ಮೆಯೂ ಈ ಪುಣ್ಯಾತ್ಮರನ್ನು ನೆನಪಿಸಿಕೊಳ್ಳದ ನನ್ನ ಮರೆವಿನ ಮೇಲೆ ನನಗೆ ಅಸಮಧಾನವಾದರೂ ಸದ್ಯ ಈ ದಿನವಾದರೂ ನೆನಪಿಸಿಕೊಂಡೆನಲ್ಲ ಅನ್ನೋ ಸಮಾಧಾನ ಗೆದ್ದಂತೆನಿಸಿತು. ಪ್ರತೀಬಾರಿ ಅವರನ್ನು ಭೇಟಿಯಾಗಿ ಬಂದಾಗಲೂ ಒಂದು ರೀತಿ ಧ್ಯಾನದ ಶಾಲೆಗೆ ಹೋಗಿ ಮನಸ್ಸಿನ ಮಡಿವಂತಿಕೆಯನ್ನು ರಿಪ್ರೆಶ್ ಮಾಡಿಕೊಂಡ ಹಾಗೆ ಅನ್ನಿಸುತ್ತಿತ್ತು.

ಸದಾನಂದ ನನ್ನ ಎರಡನೇ ಅಣ್ಣನ ಸಹಪಾಠಿ, ಆದರೆ ನನ್ನ ಅವನ ಸ್ನೇಹ ಬಹಳ ವಿಶೇಷವಾದದ್ದು. ಹೀಗೆ ನಾನು ಇಡುವಾಣಿಗೆ ಹೋಗಿ ಇರುತ್ತಿದ್ದುದು ಸದಾನಂದನ ಮನೆಯಲ್ಲೇ. ಅವರದೂ ಮೇಷ್ಟ್ರರ ಕುಟುಂಬವಾದ್ದರಿಂದ ನನಗೆ ಹೊಂದಿಕೊಳ್ಳಲು ಯಾವ ಹಿಂಜರಿಕೆಯೂ ಇರುತ್ತಿರಲಿಲ್ಲ. ಸದಾನಂದನದು ತಾಳಮದ್ದಳೆ, ಪುರಾಣ ಶಾಸ್ತ್ರದಲ್ಲಿ ಎತ್ತಿದ ಕೈ, ಮಹಾವಾದಿ, ಇಂಗ್ಲೀಷ್ ಅಷ್ಟೊಂದು ಸರಿಯಾಗಿ ಬರುತ್ತಿರಲಿಲ್ಲ, ಆದರೆ ಕನ್ನಡ ಸಂಸ್ಕೃತದಲ್ಲಿ ಬಹಳ ಮೆರೆದವನು. ಅವನ ಮನೆಯಿಂದ ಒಂದು ಗಾವುದ ದೂರದ ತೋಟಗಳ ಮಧ್ಯೆ ತೋಟವನ್ನು ನೋಡಿಕೊಂಡು ಆರಾಮವಾಗಿ ಇದ್ದವನು ಧನಂಜಯ, ಇಡುವಾಣಿಯಲ್ಲಿ ದೊಡ್ಡವರು-ಚಿಕ್ಕವರಾದಿಯಾಗಿ ಎಲ್ಲರಿಗೂ ಆತ ಧನಂಜಯಣ್ಣ. ಆದರೆ ಧನಂಜಯನ ಕಥೆ, ಕಥೆಯಲ್ಲ ನಿಜಜೀವನ ಬಹಳ ಸ್ವಾರಸ್ಯಕರವಾದುದು.

ಹವ್ಯಕರ ಸಂಪ್ರದಾಯದಲ್ಲಿ 'ನಮ್ಮನೇಗೂ ಬನ್ನಿ' ಎಂದು ಪರಿಚಯವಾದವರನ್ನು ಕರೆಯೋ ವಿನಯವಿದೆ, ಈ ಮಾತಿನಂತೆಯೇ ನಾನು ಇಡುವಾಣಿಯಲ್ಲಿ ಇದ್ದಷ್ಟು ದಿನಗಳಲ್ಲಿ ಬೇಕಾದಷ್ಟು ಜನರ ಮನೆಗೆ ಹೋಗಿದ್ದೇನೆ. ಸದಾನಂದ ಧನಂಜಯನ ಪರಿಚಯ ಮಾಡಿಕೊಡುವಾಗಲೇ ಹೇಳಿದ್ದ - ಬಹಳ ವಿಶೇಷವಾದ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಡುತ್ತೇನೆಂದು, ಅಂತೆಯೇ ಅದು ನಿಜವೂ ಕೂಡಾ. ಧನಂಜಯ ತೋಟವನ್ನು ನೋಡಿಕೊಂಡು ಬದುಕನ್ನು ಕಳೆಯುವ ಬಗೆಯನ್ನು ಆರಿಸಿಕೊಳ್ಳುವ ಮೊದಲು ಬೆಂಗಳೂರಿನಲ್ಲಿದ್ದವನು. ಕನ್ನಡ, ಇಂಗ್ಲೀಷ್, ಹಾಗೂ ಸಂಸ್ಕೃತದಲ್ಲಿ ಬಹಳ ಚೆನ್ನಾಗಿ ಓದಿ-ಬರೆದು-ಮಾತನಾಡಬಲ್ಲವನು, ತತ್ವಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಪುರಾಣವನ್ನು ಅಸ್ಥೆಯಿಂದ ಅಭ್ಯಾಸಮಾಡಿದವನು. ಅವನ ಪಾಂಡಿತ್ಯಕ್ಕೆ ಎಂತಹವರೂ ಬೆರಗಾಗಬೇಕು, ಅವನ ಮುಖಾಂತರವೇ ನಾನು ಎಡ್ಗರ್ ಕೇಸಿಯ ಕರ್ಮ ಸಿದ್ಧಾಂತ, ಭಾಗವತ, ಅರ್ಥಶಾಸ್ತ್ರ ಮುಂತಾದವುಗಳನ್ನು ತಿಳಿದುಕೊಂಡಿದ್ದು. ಒಂದು ಸಣ್ಣ ವಿಷಯದ ಬಗ್ಗೆ ವೈಜ್ಞಾನಿಕವಾಗಿ ವಿವರಿಸುವುದರ ಜೊತೆಗೆ ಟಿವಿಯಲ್ಲೇನಾದರೂ ರಾಜ್‌ಕುಮಾರ್ ನಟಿಸಿದ 'ಎರಡು ಕನಸು' ಸಿನಿಮಾ ಬರುತ್ತಿದ್ದರೆ ಅದರಲ್ಲಿ ಕಲ್ಪನಾಳ ಪಾತ್ರಕ್ಕೆ ವಿಶೇಷವಾದ ವಿವರಣೆಗಳನ್ನು ಕೊಡುವವನು, ಹೀಗೆ ಬೇಕಾದಷ್ಟು ವಿಷಯಗಳ ಆಳವನ್ನು ಅರಿಯುವಲ್ಲಿ ನಾನು ಅವನೊಂದಿನ ಒಡನಾಟವನ್ನು ಸಂಭ್ರಮಿಸಿದ್ದಿದೆ. ಅವನ ಇಂಗ್ಲೀಷ್ ಓದು ಹಾಗೂ ಬರಹದ ಆಳವನ್ನು ಕಂಡರೆ ಎಂಥವರೂ ಮೂಗಿನ ಮೇಲೆ ಬೆರಳಿಡುವಂತಿತ್ತು.

ಒಂದು ದಿನ ಅವನೇ ಹೇಳಿದ ಹಾಗೆ 'ನಿಮಗ್ಗೊತ್ತಾ, ನಾನು ಒಂದ್ ಕಾಲದಲ್ಲಿ ಈ ಆಕ್ಸ್‌ಫರ್ಡ್ ಡಿಕ್ಷನರಿಯನ್ನು ಪೂರ್ತಿ ಕಂಠಪಾಟ ಮಾಡಿದ್ದೆ, ಅದರಿಂದ ಇಂಗ್ಲೀಷ್ ಚೆನ್ನಾಗಿಬರುತ್ತೆ ಅನ್ನೋ ಒಂದೇ ಕಾರಣದಿಂದ!' ಎಂದಾಗ ನನಗೆ ನಂಬಲಾಗಲಿಲ್ಲ, ಆತ ನಿಜವಾಗಿಯೂ ಡಿಕ್ಷನರಿಯ ಯಾವುದೇ ಪದವನ್ನು ಕೇಳಿದರೂ ಅರ್ಥವನ್ನು ಹೇಳಬಲ್ಲವನಾಗಿದ್ದನಂತೆ. ಅಷ್ಟೇ ಅಲ್ಲ, ಯಶವಂತ ಚಿತ್ತಾಲರ 'ಮೂರು ದಾರಿಗಳು' ಕಾದಂಬರಿಯನ್ನು ಆದರಿಸಿ ಮಾಡಿದ ಚಲನ ಚಿತ್ರದಲ್ಲಿ ಧನಂಜಯನೇ ಹೀರೋ ಕೂಡಾ. ಹೀಗೆ ಪಟ್ಟಣದ ಸಹಪಾಸ, ಚಿತ್ರಲೋಕದ ಬೆರಗು-ಮೆರುಗಳನ್ನು ಕಂಡೂ ಹಳ್ಳಿಯ ಹಾದಿ ಹಿಡಿದು ತೋಟವನ್ನು ನೋಡಿಕೊಂಡು ತಾನಾಯಿತು ತನ್ನ ಓದಾಯಿತು ಎಂದು ತತ್ವಶಾಸ್ತ್ರವನ್ನು ಮುಖ್ಯವಾಗಿ ಆಧರಿಸಿದ ಎಲ್ಲ ಹೊತ್ತಿಗೆಗಳನ್ನೂ ಕರತಾಮಲಕ ಮಾಡಿಕೊಳ್ಳುತ್ತಿದ್ದವನು. ಮನೆಗೆ ಯಾರೇ ಬಂದರೂ ಅವರನ್ನು ಫಿಲಾಸಫಿಯ ಸೌಂದರ್ಯವನ್ನು ಆಸ್ವಾದಿಸುವಂತೆ ಮಾಡುವ ಮಾತನಾಡುವ ಕಲೆ ಧನಂಜಯನದು, ಆದರೆ ಇಡುವಾಣಿಯಲ್ಲಿ ಕೆಲವರಿಗೆ ಅದು ಅತಿಯಾಗಿ ಕಂಡು ಬೇರೇನೋ ರಾದ್ಧಾಂತಗಳನ್ನು, ಊಹೆಗಳನ್ನೂ ಹುಟ್ಟಿಸಿದ್ದಿದೆ.

ಧನಂಜಯ ಒಂದು ಸಣ್ಣ ಪುಸ್ತಕವನ್ನು ಓದೋದಕ್ಕೂ ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಿದ್ದ, ಅವನು ಸಾಲಿನಿಂದ ಸಾಲಿಗೆ, ಪುಟಗಳಿಂದ ಪುಟಕ್ಕೆ ಓದಿ, ಅದರ ಕುರಿತು ಚಿಂತನವನ್ನು ನಡೆಸುವುದೋ ಅಥವಾ ಆ ಪುಸ್ತಕದಲ್ಲಿ ಉಲ್ಲೇಖಿಸಿದ ಪರಾಮರ್ಶೆಗಳನ್ನು ಹುಡುಕಿಕೊಂಡು ಹೋಗುವುದೋ, ಅಥವಾ ಒಟ್ಟಿಗೇ ಒಂದಿಷ್ಟು ವಿಷಯಗಳನ್ನು ಕಲೆಹಾಕಿಕೊಂಡು ಮನನ ಮಾಡಿಕೊಳ್ಳುವುದೋ ನಿರಂತರವಾಗಿ ನಡೆದೇ ಇರುತ್ತಿತ್ತು. ಅವನು ನನಗೆ ಓದಲು ಎಷ್ಟೋ ಪುಸ್ತಕಗಳನ್ನು ಕೊಟ್ಟು ನನ್ನಲ್ಲಿ ಭಾರತೀಯ ತತ್ವಶಾಸ್ತ್ರದ ಬಗ್ಗೆ ಹಾಗೂ ಪಾಶ್ಚಾತ್ಯ ತಿಳುವಳಿಕೆಯ ಬಗ್ಗೆ ಒಲವನ್ನು ಹುಟ್ಟಿಸಿದ ಕೀರ್ತಿ ಸದಾನಂದ ಹಾಗೂ ಧನಂಜಯಣ್ಣನಿಗೆ ಸೇರಬೇಕು. ನಾನು ರಜಾ ದಿನಗಳಲ್ಲಿ ಹೋದಾಗಲೆಲ್ಲ ನನ್ನನ್ನು ತಮ್ಮ ಮನೆಯವನಂತೆಯೇ ಸಾಕಿ ಸಲಹಿ ಜೊತೆಗೆ ನನಗೆ ಬೇಕಾದ ಎಲ್ಲ 'ಆಹಾರ'ಗಳನ್ನೂ ಒದಗಿಸಿ ನನ್ನಲ್ಲಿ ಸ್ವಲ್ಪವಾದರೂ ಓದುವ ತಿಳುವಳಿಕೆಯನ್ನು ಮೂಡಿಸಿ, ಇಡುವಾಣಿಯ ಡೊಂಕಿನ ರಸ್ತೆಗಳ ನಡುವೆ ಇರುವ ಹಳ್ಳಿಯ ಮನೆಗಳಲ್ಲಿ ಉದಾತ್ತ ಚಿಂತನೆಯ ಕಿಡಿಯನ್ನು ಹತ್ತಿಸಿದವರಿಬ್ಬರನ್ನು ಇಂದು ಎಷ್ಟು ನೆನೆದರೂ ಕಡಿಮೆಯೇ. 'ನೀವಿಲ್ಲಿ ಎಷ್ಟು ದಿನವಾದರೂ ಬೇಕಾದರೂ ಇರಿ' ಎಂದು ತೆರೆದ ಆಮಂತ್ರಣ ಕೊಟ್ಟವರನ್ನು ನಾನು ನೋಡದೇ ಅದೆಷ್ಟೋ ವರ್ಷಗಳಾದವು... ಇಲ್ಯಾರಾದರೂ ನನ್ನ ನಡುವೆ ಧನಂಜಯ ನಂತಹವರು ಇರಬಾರದಿತ್ತೇ ಎಂದು ಈಗ ಅನ್ನಿಸುತ್ತೆ. ಅಲ್ಲಿ ಅಂತಹ ಉತ್ತಮ ವ್ಯಾಖ್ಯಾನಗಳನ್ನು ಕೇಳಿದ ನನಗೆ ಇದುವರೆಗೂ ಯಾರೂ ತತ್ವಶಾಸ್ತ್ರದ ಮೇಲೆ ಅಷ್ಟೊಂದು ಅಥಾರಿಟಿಯಿಂದ ಮಾತನಾಡಿದವರು ಕಂಡಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ.

ಧನಂಜಯನ ಇನ್ನೊಂದು ಮುಖವೆಂದರೆ ಸಂಗೀತ ಪ್ರೇಮ - ಹಿಂದೂಸ್ತಾನೀ ಹಾಗೂ ಕರ್ನಾಟಕ ಸಂಗೀತ ಇವೆರಡರಲ್ಲೂ ಎತ್ತಿದ ಕೈ. ರೆಡಿಯೋದಲ್ಲಿ ಯಾವುದೇ ಹಾಡು ಬರಲಿ, ಇದು ಇಂತಹ ರಾಗ, ದಕ್ಷಿಣಾದಿಯಲ್ಲಿ ಇದನ್ನು ಈ ರಾಗದಿಂದಲು ಉತ್ತರಾದಿಯಲ್ಲಿ ಇದನ್ನು ಈ ರಾಗದಿಂದಲೂ ಹಾಡುತ್ತಾರೆ ಎಂದು ತಟ್ಟನೆ ಹೇಳಿಬಿಡೋನು. ಬರೀ ರಾಗದ ಹೆಸರಿನ ಪರಿಚಯವಷ್ಟೇ ಅಲ್ಲ, ಅದರ ಅರೋಹಣ-ಅವರೋಹಣಗಳನ್ನು ಹಾಡಿ ತೋರಿಸೋನು. ರಾಗದ ಹಿನ್ನೆಲೆಯನ್ನು ವಿವರಿಸೋನು. ರಾಗವನ್ನು ಅಭ್ಯಾಸ ಮಾಡಿದವರನ್ನು ನಾನು ಬೇಕಾದಷ್ಟು ಜನರನ್ನು ನೋಡಿದ್ದೇನೆ, ಆದರೆ ಧನಂಜಯನ ಸಂಗೀತ ಜ್ಞಾನದ ಆಳವನ್ನು ನಮ್ಮವರ ನಡುವೆ ಬದುಕುವವರಲ್ಲಿ ಬೇರೆಲ್ಲೂ ನೋಡಿಲ್ಲ. ಹೀಗೆ ಧನಂಜಯ ನನ್ನ ಕಾಲೇಜಿನ ದಿನಗಳಲ್ಲಿ ಸಾಕಷ್ಟು ಓದುವುದರ ಬಗ್ಗೆ, ಬಹಳಷ್ಟು ವಿಷಯಗಳ ಬಗ್ಗೆ ಕುತೂಹಲವನ್ನು ಹುಟ್ಟಿಸಿದ್ದ. ನಾನು ಚಾರ್ಜ್ ಕಳೆದುಕೊಂಡ ಬ್ಯಾಟರಿ ರೀ ಚಾರ್ಜ್ ಆಗಲು ಅದರ ಬೇಸ್ ಅನ್ನು ಹುಡುಕಿಕೊಂಡು ಬರುವಂತೆ ಸಾಗರದ ಕಾಲೇಜಿನಲ್ಲಿ ಓದುವಷ್ಟು ದಿನವೂ ಸಮಯ ಸಿಕ್ಕಾಗಲೆಲ್ಲ ಇಡುವಾಣಿಗೆ ಭೇಟಿಕೊಡುತ್ತಿದ್ದೆ. ಮುಂದೆ ನಾನು ಅಲ್ಲಿ-ಇಲ್ಲಿ ಅಲೆದಾಡಿ ಇಲ್ಲಿಗೆ ಬಂದರೂ ಧನಂಜಯನ ಹಾಗೆ ಸದಾನಂದನ ಹಾಗೆ ಮತ್ಯಾರೂ ಸಿಕ್ಕಿಲ್ಲ.

ಈ ಬಾರಿಯಾದರೂ ಊರಿಗೆ ಹೋದಾಗ ಧನಂಜಯ-ಸದಾನಂದರ ಭೇಟಿಯಾಗಬೇಕು ಅನ್ನೋ ಆಸೆ ಬರಿ ಯೋಜನೆಯಲ್ಲೇ ಉಳಿದುಹೋಗದಿರಲಿ ಅನ್ನೋದು ಆ ದೊಡ್ಡ ಶಕ್ತಿಗೆ ಈ ತಂಪಿನ ಹೊತ್ತಿನಲ್ಲಿ ನಾನಿಡುತ್ತಿರುವ ಮೊರೆ!

Sunday, September 10, 2006

ಕಟ್ಟಡಗಳು ಕುಸಿದು ಇಂದಿಗೆ ಐದು ವರ್ಷಗಳು ಸಂದವು

ಸೆಪ್ಟೆಂಬರ್ ೧೧, ೨೦೦೧ ನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡವರಿಗೆ ಅಬ್ಬಾ ಐದು ವರ್ಷಗಳು ಕಳೆದೇ ಹೋಯಿತೇ ಎಂದೆನಿಸಿರಲಿಕ್ಕೂ ಸಾಕು. ಈ ಐದು ವರ್ಷಗಳಲ್ಲಿ ಏನೇನೆಲ್ಲಾ ಆಗಿದೆ, ಎಷ್ಟೋ ಜನರ ಮನಸ್ಥಿತಿಗಳಲ್ಲಿ ಭಯೋತ್ಪಾದನೆ, ಯುದ್ಧದ ಭೀತಿ ಇನ್ನೂ ಹಸಿಹಸಿಯಾಗಿಯೇ ಇರುವಂತೆ, ಎಷ್ಟೋ ದೇಶಗಳ ವಿದೇಶಾಂಗ ಇಲಾಖೆಗಳು ಬಹಳಷ್ಟು ದುಡಿದು ಬದಲಾದ ಫಾರಿನ್ ಪಾಲಿಸಿಗಳನ್ನು ಮನದಟ್ಟು ಮಾಡಿಕೊಂಡಿವೆ.

೨೦೦೧ ರ ಸೆಪ್ಟೆಂಬರ್ ಹನ್ನೊಂದೂ ಒಂದು ಶುಭ್ರವಾದ ದಿನವಾಗಿತ್ತು. ಸಾಮಾನ್ಯವಾಗಿ ಈ ದಿನಗಳಲ್ಲಿ ಫಾಲ್ ಅನ್ನು ನೆನಪಿಸುವ ತಂಪು ಹವೆ ಬೆಳಗಿನ ಹೊತ್ತು ಇದ್ದರೂ ಅಂದು ಪಿಕ್ಚರ್ ಫರ್‌ಫೆಕ್ಟ್ ದಿನವಾಗಿತ್ತು, ಶುಭ್ರವಾದ ಬೆಳಗಿನಲ್ಲಿ ಎಷ್ಟೋ ಜನ ಅವರವರ ಕೆಲಸವನ್ನು ಅದಾಗಲೇ ಶುರು ಹಚ್ಚಿಕೊಂಡು ತಾವು ಹೀರಿದ ಕಾಫಿ ಅಥವಾ ತಾವು ಓದಿದ ನ್ಯೂಸ್ ಪೇಪರಿನ ಗುಂಗಿನಲ್ಲಿದ್ದರು. ಪುಣ್ಯಕ್ಕೆ ನಾನಂತೂ ಅಂದು ನ್ಯೂ ಯಾರ್ಕ್ ನಲ್ಲಿರಲಿಲ್ಲ, ಆಗ ನಾನು ಪೆಂಟಗನ್‌ಗೆ ಒಂದೈದು ಮೈಲು ದೂರದಲ್ಲಿರುವ ಆರ್ಲಿಂಗ್‌ಟನ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲ ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ್ದನ್ನು ಏನೋ ಅಫಘಾತ ಸಂಭವಿಸಿದೆ ಎಂದುಕೊಂಡು ಕೆಲಸವನ್ನು ಮುಂದುವರಿಸಿಕೊಂಡಿದ್ದವರಲ್ಲಿ ನಾನೂ ಒಬ್ಬ, ಆದರೆ ಕೆಲವೇ ನಿಮಿಷಗಳಲ್ಲಿ ನಾವಿದ್ದ ಹತ್ತನೇ ಮಹಡಿಯಿಂದ ಕಾಣಿಸುವಂತೆ ಯಾವಾಗ ಪೆಂಟಗನ್‌ನಿಂದ ದೊಡ್ಡದಾಗಿ ಹೊಗೆ ಕಾಣಿಸಿಕೊಂಡಿತೋ ಆಗ ಎಲ್ಲರ ಮನದಲ್ಲೂ ಒಂದು ರೀತಿ ಭೀತಿ ಸುಳಿದಾಡಿತ್ತು. ಇದ್ದ ಕೆಲಸಗಳನ್ನು ಇದ್ದಲ್ಲೇ ಬಿಟ್ಟು ಆಫೀಸ್ ಗರಾಜಿನಿಂದ ಕಾರ್ ತೆಗೆದು ಮನೆಯ ಕಡೆ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ವಾಷಿಂಗ್‍ಟನ್ ಬುಲವರ್ಡನ್ನು ಮುಚ್ಚಿ ಬಿಟ್ಟರು, ಬೇರೆ ಗತಿಯಿಲ್ಲದೇ ವಿಲ್ಸನ್ ಬುಲವರ್ಡ್ ಹತ್ತಿ ಕೇವಲ ಏಳು ಮೈಲು ದೂರದ ಮನೆಯನ್ನು ಸೇರುವಾಗ ಸುಮಾರು ನಾಲ್ಕು ಘಂಟೆಗಳಿಗಿಂತ ಹೆಚ್ಚು ಬೇಕಾಗಿತ್ತು. ಅಷ್ಟೊತ್ತಿಗಾಗಲೇ ಎಲ್ಲ ಕಡೆ ಅಲ್ಲೋಲ ಕಲ್ಲೋಲ ಆರಂಭವಾಗಿತ್ತು. ನಾನು ಇನ್ನೂ ಆಫೀಸಿನಿಂದ ಮನೆಗೆ ಬಂದಿದ್ದೇನೆಯೋ ಇಲ್ಲವೋ ಎಂದು ಒಂದಿಷ್ಟು ಸ್ನೇಹಿತರು ಮನೆಗೆ ಫೋನ್ ಮಾಡಿದ್ದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚಾಗಿತ್ತು. ಮನೆಗೆ ಬಂದು ಇನ್ನೇನು ಟಿವಿಗೆ ಮುಖ ಹಚ್ಚಿ ಏನೇನಾಗಿದೆ ಎಂದು ನೋಡುವಷ್ಟರಲ್ಲಿ ಭಾರತದಿಂದ ಕರೆಗಳು ಬರತೊಡಗಿದವು. ಎಲ್ಲರ ಧ್ವನಿಯಲ್ಲೂ ಆತಂಕ, ಎಲ್ಲರಿಗೂ ನಾವು ಸುರಕ್ಷಿತರಾಗಿದ್ದೇವೆ ಎಂದು ಸಮಾಧಾನ ಮಾಡುವುದೇ ನಮಗೊಂದು ಕೆಲಸವಾಗಿತ್ತು.

ಕೆಲವೇ ನಿಮಿಷಗಳಲ್ಲಿ ಆಗಬಹುದಾದುದೆಲ್ಲವೂ ಆಗಿ ಹೋಗಿತ್ತು. ಸ್ಥಳೀಯ ರಕ್ಷಣಾ ಪಡೆಯವರು ಎಚ್ಚೆತ್ತುಕೊಳ್ಳುವುದರೊಳಗೆ, ಹಾರಾಡುವ ಎಲ್ಲ ವಿಮಾನಗಳನ್ನು ಅನಿರ್ಧಿಷ್ಟ ಕಾಲ ನಿಲ್ಲಿಸಿ ತನಿಖೆ ಮಾಡುವುದರೊಳಗೆ ಶತ್ರು ಪಾಳ್ಯದಲ್ಲಿ ಗೆಲುವು ಅವರದು ಎನ್ನುವ ಸಂಭ್ರಮ ಹುಟ್ಟತೊಡಗಿತ್ತು. ಮುಂದಾಗುವ ಬದಲಾವಣೆಗಳಿಗೆಲ್ಲ ಇದೊಂದು ಬೆಂಕಿಯ ಕಿಡಿಯಾಗಿ ಅವತರಿಸುವುದನ್ನು ಹೆಚ್ಚು ಜನರು ಅಂದು ಊಹಿಸಿಕೊಂಡಿರಲಿಕ್ಕಿಲ್ಲ.

ಈ ದುರ್ಘಟನೆಯ ಹಿನ್ನೆಲೆಯಲ್ಲಿ ಅಮೇರಿಕದ ಬದಲಾದ ವಿದೇಶಾಂಗ ನೀತಿ ಹಾಗೂ ಹೊಸದಾಗಿ ಸೃಷ್ಟಿಸಿದ ಹಲವಾರು ಅಡೆತಡೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೋ ಜನರಿಗೆ ಸಾಕಷ್ಟು ಅನಾನುಕೂಲವಾಗಿದ್ದರೂ ನನ್ನಂತಹ ಕೆಲಸಗಾರರಿಗೆ ಅದರಲ್ಲೂ ವೀಸಾದಲ್ಲಿರುವವರಿಗೆ ಬೇಕಾದಷ್ಟು ತೊಂದರೆಗಳಾಗಿವೆ. ಇಲ್ಲಿನ ಲೀಡರುಗಳು ಪದೇಪದೇ ಹೇಳುವ " “the world is much better off today...” ಎನ್ನುವ ಮಾತಂತೂ ನನ್ನನ್ನು ಬಹಳವಾಗಿ ಬಾಧಿಸುತ್ತದೆ. ಅಮೇರಿಕದ ಮೇಲೆ ಧಾಳಿ ನಡೆಸಿದ ಕಾರಣ ಪುರುಷ ಇನ್ನೂ ಇವರ ಕೈಗೆ ಸಿಕ್ಕಿಲ್ಲ, ಇರಾಕಿನ ಜವಾಬ್ದಾರಿ ಅಮೇರಿಕದ ಹೆಗಲಿಗೆ ಭಾರವಾಗಿ ಕಂಡುಬರುತ್ತಿದೆ, ಇಲ್ಲಿನ ಮಾಧ್ಯಮಗಳು ನಮ್ಮೆಲ್ಲರನ್ನೂ ಏನೇನೋ ಕಥೆಗಳನ್ನು ಹೇಳಿ ನಂಬಿಸಿಕೊಳ್ಳುವಂತೆ ತೋರುತ್ತದೆ. ನಮ್ಮ ನೆರೆಹೊರೆ ಧರ್ಮ ಹಾಗೂ ಉಳ್ಳವರ ನೆರಳಿನಲ್ಲಿ ಹೊಸ ರೀತಿಯಲ್ಲಿ ಇಬ್ಬಾಗವಾದಂತೆ ತೋರುತ್ತದೆ.

೨೦೦೪ ರಲ್ಲಿ ಬುಷ್ ಮತ್ತೊಮ್ಮೆ ಅಧಿಕಾರಕ್ಕೆ ಬಂದಂತೆ, ಇರಾಕ್ ಧಾಳಿಯನ್ನು ಸಾಧಿಸಿಕೊಂಡ ಹಲವಾರು ಧುರೀಣರು ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಇವರು ತಮ್ಮ ತಮ್ಮ ಜನಗಳಿಗೆಲ್ಲ ಮೋಡಿ ಮಾಡಿದ್ದಾರೋ ಅಥವಾ ಇವರನ್ನು ಎದುರಿಸಿ ಗೆಲ್ಲಬಲ್ಲ ಸಾಮರ್ಥ್ಯದವರು ಇಲ್ಲವೇ ಎನ್ನುವ ಅನುಮಾನ ಒಮ್ಮೆ ಮೂಡುತ್ತದೆ. ಅಮೇರಿಕದವರು ತಮ್ಮ ತಪ್ಪುಗಳನ್ನು ಇಂಟಲಿಜೆನ್ಸ್ ತಪ್ಪು ಎಂದು ದೂರಿ ಜಾರ್ಜ್ ಟೆನೆಟ್‌ಗೆ ಗೂಬೆ ಕೂರಿಸಲು ನೋಡುತ್ತಾರೆ, ಯುದ್ಧ ಖೈದಿಗಳಿಗೆ ಕ್ರೂರ ಶಿಕ್ಷೆ ವಿಧಿಸಿದ ಘಟನೆಯನ್ನು ಕುರಿತು ರಮ್ಸ್‌ಫೆಲ್ಡ್‌ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ಕೊಡುವುದು ಕಷ್ಟವಾಗುತ್ತದೆ, ಹಾಗೆ ಕೊಟ್ಟಿದ್ದರೂ ಅದನ್ನು ಸ್ವೀಕರಿಸಲು ಆಡಳಿತದವರಿಗೆ ಸರಿ ಎನ್ನಿಸುವುದಿಲ್ಲ. ೨೦೦೪ರಲ್ಲಿ ಬುಷ್ ವಿರುದ್ಧದ ಅಭ್ಯರ್ಥಿ ಜಾನ್ ಕೆರ್ರಿಗೆ ಜನಗಳ ಕಣ್ಣನ್ನು ನೋಡಿ ಗೇ ಮದುವೆಗಳ ಬಗ್ಗೆ ಡಿಸೈಸಿವ್ ಆಗಿ ಹೇಳಲು ಬರದೇ ದೊಡ್ಡ ವಾಕ್ಯಗಳಲ್ಲಿ ತಿಣುಕಾಡುವುದನ್ನು ನೋಡಿ ಇವನು ಗೆಲ್ಲೋದಿಲ್ಲ ಅನ್ನೋದು ಎಂತಹವರಿಗೂ ಗ್ಯಾರಂಟಿ ಆಗುತ್ತದೆ, ಅದೇ ಪ್ರಶ್ನೆಗೆ ಬುಷ್ ಅಂತಹವರು ಪಟ್ಟನೇ ಉತ್ತರವನ್ನು ಕೊಡುವುದನ್ನು ನೋಡಿ ಆಶ್ಚರ್ಯವಾಗುತ್ತದೆ - ಎಷ್ಟೋ ಜನರು ಹೇಳಿದಂತೆ ಇದೊಂದೇ ಸನ್ನಿವೇಶ ಸಾಕು ಕೆರ್ರಿ ಸೆನೆಟರ್ ಆಗೇ ಉಳಿಯಲು.

ಅಫಘಾನಿಸ್ತಾನದವರು ಪ್ರಜಾಪ್ರಭುತ್ವದ ರುಚಿಯನ್ನು ಉಂಡದ್ದಾಯಿತು, ಊಟ ರುಚಿಸಲಿಲ್ಲವೆಂದು ಕಾಣಿಸುತ್ತೆ, ದಕ್ಷಿಣ ದಿಕ್ಕಿನಿಂದ ನಿಧಾನವಾಗಿ ಕ್ರೂರಿಗಳ ಆಟಾಟೋಪ ತಲೆ ಎತ್ತುತ್ತಿದೆ. After all, ಪ್ರಜಾಪ್ರಭುತ್ವವೇ ಜಗತ್ತಿನ ಬೆಳಕೇ? ಹಾಗಿದ್ದರೆ ಜಗತ್ತಿನಲ್ಲೇ ಹೆಚ್ಚು ಜನರಿರುವ ಚೀನಾದಂತಹ ದೇಶದಲ್ಲಿ ಪ್ರಜಾಪ್ರಭುತ್ವವೇಕಿಲ್ಲ? ಪ್ರಪಂಚದಲ್ಲಿರುವ ದೇಶಗಳೆಲ್ಲ ಭಯೋತ್ಪಾದಕರ ಸೊಲ್ಲಡಗಿಸಲು ಅಮೇರಿಕೆಯ ಜೊತೆ ಕೈ ಗೂಡಿಸಿದರೆ ಭಯೋತ್ಪಾದಕರುಗಳೇನು ಚಂದ್ರಲೋಕಕ್ಕೆ ಹೋಗೋದಿಲ್ಲವಲ್ಲ! ಪ್ರಜಾಪ್ರಭುತ್ವವನ್ನು ಆಧರಿಸಿದ, ಯುದ್ಧಕ್ಕೆ ಸನ್ನದ್ದವಾಗಿರುವ ಸೇನೆ ಯಾರ ಮೇಲೆ ಯುದ್ಧ ಮಾಡುತ್ತಿದೆ ಎನ್ನುವುದು ಇನ್ನೂ ನಿಗೂಢವೇ.

ಬುಷ್ ಆಡಳಿತದ ಇಲ್ಲೀವರೆಗಿನ ದಿನಗಳು ಬೆಂಕಿಯುನ್ನು ನಂದಿಸುವುದರಲ್ಲೇ ಕಳೆದವು. ಇತ್ತೀಚೆಗೆ ನಿವೃತ್ತರಾಗುತ್ತಿರುವವರಿಗೇನೋ ಸೋಷಿಯಲ್ ಸೆಕ್ಯುರಿಟಿ ಹಣ ಸಿಗುತ್ತಿದೆ, ಮುಂದೆ ಹೀಗೆ ಎಂದು ಯಾರೂ ಹೇಳುವವರಿಲ್ಲ. ಕಟ್ರೀನಾ ಅನ್ನೋ ಚಂಡಮಾರುತ ಈ ದೇಶದ ಎಮರ್ಜೆನ್ಸಿ ಪ್ರಿಪೇರ್ಡ್‌ನೆಸ್ಸನ್ನು ಧೂಳೀಪಟ ಮಾಡಿಹಾಕುತ್ತದೆ, ಇವರ ಹೆಚ್ಚು ಹೆಚ್ಚು ತಯಾರಿಯಲ್ಲೇ ಏನೋ ಕೊರತೆಯಾದಂತೆ ಅನ್ನಿಸುತ್ತದೆ.

... ಹೀಗೆ ಈ ಐದು ವರ್ಷಗಳಲ್ಲಿ ಜಗತ್ತು ಬಹಳ ಬದಲಾಗಿದೆ, ಅಂತಾರಾಷ್ಟ್ರೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಐದು ವರ್ಷಗಳು ಐವತ್ತು ವರ್ಷಗಳೇನೋ ಅನ್ನಿಸುವಷ್ಟು ಭಾರವಾಗಿ ಕಾಣಿಸುತ್ತವೆ.

***

ಈ ಐದು ವರ್ಷಗಳಲ್ಲಿ ಯುದ್ಧವನ್ನು ಆರಂಭಿಸಿದ ಎರಡೂ ಕಡೆಯವರು ಇನ್ನೂ ಚಲಾವಣೆಯಲ್ಲಿದ್ದು ಅವರಿಗೇನೂ ಅಂತಹ ಕೊರತೆಯಾದಂತೆ ಮೇಲ್ನೋಟಕ್ಕೆ ಕಾಣಿಸುವುದಿಲ್ಲ, ಆದರೆ ಅಮಾಯಕರಿಗೆ, ಸಾಮಾನ್ಯ ಜನರಿಗೆ ಬೇಕಾದಷ್ಟು ಅನಾನುಕೂಲಗಳಾಗಿವೆ ಎನ್ನೋದಂತೂ ನಿಜ.

Thursday, September 07, 2006

ಚಂದ್ರನ ಬೆನ್ನೇರಿ ಬಂತು...

ಇವತ್ತು ಆಫೀಸಿನಿಂದ ತಡವಾಗಿ ಹೋಯ್ತು ಅಂತ ಲಗುಬಗೆಯಿಂದ ಗಾಡಿ ಓಡಿಸಿಕೊಂಡು ಬರ್ತಾ ಇದ್ದೆ - ಸುಮ್ಮನೇ ತಲೇ ತುಂಬಾ ಏನೇನೋ ಆಲೋಚನೆಗಳು, ಎಲ್ಲರಿಗೂ ಬರೋ ಹಾಗೆ (ಕೆಲಸಕ್ಕೆ ಬಾರದ) ಕೆಲಸಕ್ಕೆ ಸಂಬಂಧಪಟ್ಟ ಯೋಚನೆಗಳೇ - ಇದೊಂದು ಥರ್ಡ್ ಕ್ಲಾಸ್ ದಿನಾ ಎಲ್ರೂ ಒಂಥರಾ ಆಡ್ತಾ ಇದ್ರಪ್ಪಾ ಇವತ್ತು ಅಂದುಕೊಂಡು ಇನ್ನೇನು ನೆವರ್ಕ್ ಏರ್‌ಪೋರ್ಟ್ ಹತ್ರ ಬರಬೇಕು ಆಗ ಇಷ್ಟೊತ್ತೂ ತೆರೆಯ ಮರೆಯಲ್ಲಿ ಇದ್ದ ಖಳನಾಯಕನಂತೆ ದುತ್ತನೆ ಮುಗಿಲಿನಲ್ಲಿ ದೊಡ್ಡ ಚಂದ್ರನ ಪ್ರತ್ಯಕ್ಷವಾಯಿತು. ಇನ್ನು ಸ್ವಲ್ಪ ದೂರ ಕ್ರಮಿಸೋದರಲ್ಲಿ ಒಂಥರಾ ಅರ್ಧ ಕಡಿದು ತಿಂದ ಮಾರಿ ಬಿಸ್ಕತ್ತಿನ ತರ ಮೋಡಗಳ ಮರೆಯಲ್ಲಿ ಕಂಸಾಕಾರದಲ್ಲಿ ಚ್ರಂದ್ರ ಕಾಣಿಸಿಕೊಳ್ಳುತ್ತಿದ್ದ. ಎಲ್ಲಿಗೋ ಹೊರಟ ಅವನನ್ನು ಸತಾಯಿಸೋರ ಹಾಗೆ ಮೋಡಗಳು ಅವನ ಮುಖದ ಮೇಲಿರೋ ಚಿತ್ರಗಳು ಸಾಲದು ಅಂತ ಏನೇನೋ ರೂಪರೇಶೆಗಳನ್ನು ಬರೆಯುತ್ತಿದ್ದಂತೆ ಕಂಡು ಬಂತು. ಏರ್‌ಪೋರ್ಟಿನಿಂದ ಹಾರೋ ವಿಮಾನಗಳೂ ಬಿಸ್ಕತ್ತನ್ನು ಕಚ್ಚಲು ಹೋಗೋ ಹಕ್ಕಿಯ ಹಾಗೆ ಕಂಡವು. ಸದ್ಯ ನಾಳೆ ಶುಕ್ರವಾರ ಅಂತ ಮನೆ ಹತ್ರ ಬರೋ ಹೊತ್ತಿಗೆ ಒಂದು ಸಣ್ಣ ಆಲೋಚನೆ ಹೊಕ್ಕಿತು.

ಸುಮಾರು ಒಂದು ತಿಂಗಳ ಹಿಂದೆ ನನ್ನಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳೋ ಕಾನಿ (Connie) ಅವತ್ತು ಅವಳು ಆಫೀಸಿಗೆ ಬಂದ ತಕ್ಷಣ ಅವಳ ಬಾಸು ಅವಳನ್ನು ಕೂಗಿ ಏನೋ ಹೇಳಿದ್ದನ್ನು ನೋಡಿ ನನ್ನ ಕಿವಿಯ ಹತ್ತಿರ ಬಂದು 'ಇವತ್ತು ಹುಣ್ಣಿಮೆ!' ಅಂತ ಪಿಸುಗುಟ್ಟಿದ್ದಳು, ನಾವಿಬ್ಬರೂ ಅದೇನೋ ಸತ್ಯ ಅರ್ಥವಾದವರ ಹಾಗೆ ಅಂದು ಜೋರಾಗಿ ನಕ್ಕಿದ್ದೆವು. ಪ್ರಾಜೆಕ್ಟಿನ ಮೈಲ್‌ಸ್ಟೋನ್‍ಗಳು, ಟೈಮ್‌ಲೈನ್‌ಗಳು ಮುಂತಾದವುಗಳಲ್ಲಿ ಏರುಪೇರು ಆದಂತೆಲ್ಲ ನಮ್ಮ ಮೀಟಿಂಗ್‌ಗಳಲ್ಲಿ ಸ್ವಲ್ಪ ಬಿಸಿ ಹೆಚ್ಚಾಗಿ ಹಬೆಯಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆಯಾದರೂ ಕಾನಿ ಹೇಳಿದಂತೆ ಸ್ವಲ್ಪ ಅಮಾವಾಸ್ಯೆ-ಹುಣ್ಣಿಮೆಗಳಲ್ಲಿ ನಮ್ಮ ತೊಯ್ದಾಟಗಳು ಸ್ವಲ್ಪ ಹೆಚ್ಚೇ ಎಂದು ನನಗನ್ನಿಸಿದೆ ಅಥವಾ ನಾನು ಸೈಕ್ ಆಗಿ ಹೋಗಿದ್ದೇನೆ. ನಿಜವಾಗಿಯೂ ಈ full moon-new moon ಗಳು ನಮ್ಮ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡುತ್ತವೆಯೇ ಎನ್ನೋ ಪ್ರಶ್ನೆಯ ಉತ್ತರವನ್ನು ಬಲ್ಲವರಿಗೆ ಬಿಡೋಣ. ಕೊನೇಪಕ್ಷ lunatic ಅನ್ನೋ ಪದಕ್ಕೆ ಚಂದ್ರನೇ ಮೂಲ ಅಂತಲೂ ಅನ್ನಿಸಿರೋದರಿಂದ ನನಗಾಗಿರೋದು ಸೈಕ್ ಅಲ್ಲ, ಒಂದು ರೀತಿಯ ಕೆಟ್ಟ ನಂಬಿಕೆ ಎಂದುಕೊಂಡು ಸುಮ್ಮನಿದ್ದುಬಿಡುವುದೇ ಒಳ್ಳೆಯದು.

ಯಾಕಿದ್ದಿರಬಾರದು? ಅಮಾವಾಸ್ಯೆ-ಹುಣ್ಣಿಮೆಗಳಲ್ಲಿ ಗುರುತ್ವಾಕರ್ಷಣೆಯ ಏರುಪೇರುಗಳಲ್ಲಿ ಸಮುದ್ರದಲ್ಲಿ ಉಬ್ಬರ-ಇಳಿತಗಳು ಹೆಚ್ಚಾಗೋದು ನಿಸರ್ಗ ನಿಯಮವಲ್ಲವೇ? ಹಾಗಿದ್ದ ಮೇಲೆ ನಮ್ಮ ಪ್ರತಿಯೊಬ್ಬರ ಮೈಯಲ್ಲೂ ಹೆಚ್ಚಾಗಿ ನೀರಿನ ಅಂಶವಿದೆ ಅದರ ಮೇಲೂ ಈ ಉಬ್ಬರ-ಇಳಿತಗಳ ಕಾರಣ ಒಂದಲ್ಲ ಒಂದು ರೀತಿಯಿಂದ ಪರಿಣಾಮ ಮಾಡಿರಲೇಬೇಕಲ್ಲ! ಈ ಚಂದ್ರನ ಚಲನವಲನ ಯಾರು ಯಾರ ಮೇಲೆ ಎಷ್ಟೆಷ್ಟು ಪ್ರಭಾವ ಬೀರುತ್ತದೆ, ಯಾರ ಯಾರ ಮನಸ್ಥಿತಿಯಲ್ಲಿ ಏನೇನು ಬದಲಾಗುತ್ತದೆ ಎನ್ನೋದು ನನ್ನ ಸೂತ್ರಕ್ಕೆ ಸಿಕ್ಕುವ ಸುಲಭ ಲೆಕ್ಕವೆನೂ ಅಲ್ಲ. ಅದನ್ನು ಲೆಕ್ಕ ಹಾಕಿಕೊಂಡು ಹೋಗಿ ಕೊನೆಗೆ ಜೀವನ ಪೂರ್ತಿ ಚಂದ್ರನಿಂದ ಪ್ರಭಾವಿತನಾಗೇ ಇರಬೇಕಾಗಿ ಬರುವ ಸಾಧ್ಯತೆಗಳಿರೋದರಿಂದ ಯಾರೂ ಆ ರೀತಿ ಮಾಡದೇ ಇರಲಿ ಎನ್ನುವುದು ನನ್ನ wishful thinking.

ಅಮೇರಿಕದೋರು ಈ ಚಂದ್ರನ ಮೇಲೆ ಕಾಲಿಟ್ಟು ನನ್ನ ಎರಡನೇ ಅಣ್ಣನಿಗಾದಷ್ಟು ವರ್ಷಗಳಾಗಿದ್ದರೂ ಇವತ್ತಿಗೂ ಮತ್ತೆ ಆ ಪ್ರಯತ್ನವನ್ನೂ ಯಾರೂ ಏಕೆ ಮಾಡುತ್ತಿಲ್ಲ ಅನ್ನೋದು ನಿಜವಾಗಿಯೂ ಮಿಲಿಯನ್ ಡಾಲರ್ ಪ್ರಶ್ನೆ. ಇತ್ತೀಚೆಗೆ ಯಾರಾದರೂ ಹಾಗೆ ಹೋಗುತ್ತಾರೆ ಎಂದರೆ ಅವರನ್ನಾದರೂ ಚಂದ್ರನ ಚಲನವಲನದ ಬಗ್ಗೆ ಕೇಳಿ ತಿಳಿದುಕೊಳ್ಳಬಹುದಾಗಿತ್ತು. ಚಂದ್ರ ಒಂಥರಾ ನಮ್ಮನೆ ಕನ್ನಡಿಯಲ್ಲಿ ಕಾಣೋ ಮುಖದ ಹಾಗೆ, ದಿನವೂ ಅವನ ಒಂದೇ ರೀತಿ ಮುಖವನ್ನು ಕಂಡೂ-ಕಂಡೂ ಯಾರಿಗೆ ತಾನೇ ಬೇಜಾರಾಗೋದಿಲ್ಲ! ಹಾಗೆ ಚಂದ್ರನ ಮೇಲೆ ಮುಂದೆ ಹೋಗೋರು ಒಂದು ಉದ್ದದ ಹಾರೇಕೋಲನ್ನ ತೆಗೆದುಕೊಂಡು, ಈ ಭೂಮಿಯನ್ನ ಮೀಟಿ ಚಂದ್ರನನ್ನು ಮತ್ತೊಂದು ಮಗ್ಗುಲಿಗೆ ಬದಲಾಯಿಸಿದ್ದರೆ...ಅಂತ ನನಗೆಷ್ಟೋ ಸಾರಿ ಅನ್ನಿಸಿದೆ (ನಿಲ್ಲೋಕೊಂದು ಜಾಗ ಇಲ್ಲದಿದ್ರೆ ಸ್ಪೇಸ್ ಷಟಲ್ ಇರೋದ್ ಯಾಕೆ?), ಇಲ್ಲಾ ಅಂದ್ರೆ ಆ ಆರ್ಕಿಮಿಡೀಸ ಬೆತ್ತಲೆಯಾಗಿ ಊರ ತುಂಬಾ ಯುರೇಕಾ ಎಂದು ಓಡಿದ್ದಕ್ಕಾದರೂ ಏನು ಬಂತು? ತೊಟ್ಟಿಗೆ ತುಂಬಿದ ನೀರಿನ ಬಗ್ಗೆ ಹೇಳಿದ, ಸನ್ನೆಗೆ ಸನ್ನಿಪಾತ ಹಿಡಿದಿದೆ ಎಂದ ಆದರೆ ಅವನು ಭೂಮಿಯನ್ನೇ ಮೀಟುತ್ತೇನೆ ಎಂದದ್ದನ್ನು ಇನ್ನೂ ಯಾರೂ ಗಂಭೀರವಾಗೇ ತೆಗೆದುಕೊಂಡಿಲ್ಲವಲ್ಲ!

ಚಂದ್ರನ್ ಕಥೆ ಕಲ್ ಹಾಕ್ತು, ಈಗ ನೀವು ಹೊಸ ಕೆಲ್ಸಕ್ಕೆ ಎಲ್ಲಾದ್ರೂ ಸೇರಿಕೊಳ್ಳೋದಾದ್ರೆ ನಿಮ್ಮಷ್ಟಕ್ಕೆ ನೀವೇ ಮನದಲ್ಲಿ ಮಾಡಬಹುದಾದ ಪ್ರಾರ್ಥನೆಯೊಂದರ ಬಗ್ಗೆ ಹೇಳಿ ಮುಗಿಸುತ್ತೇನೆ - 'ನನ್ನ ಬಾಸು ನನ್ನ ಅಪೋಸಿಟ್ ಸೆಕ್ಸ್‌ನವರಾಗಿರಲಿ!' ಎಂದು - ದಯವಿಟ್ಟು ನಿಮ್ಮ ಕೆಟ್ಟ ಆಲೋಚನೆಗಳನ್ನೆಲ್ಲ ನಿಮ್ಮನಿಮ್ಮಲ್ಲೇ ಇಟ್ಟುಕೊಳ್ಳಿ, ಈ ಪ್ರಾರ್ಥನೆಯ ಹಿಂದೆ ನನ್ನ ಉದ್ದೇಶ ಏನೂ ಅಂದ್ರೆ ದಿನವಿಡೀ 'ಅದಾಯ್ತಾ?' 'ಇದು ಮಾಡಿ ಆಯ್ತಾ?' ಎಂದು ಕಾಟ ಕೊಡುವ ಬಾಸು ಕೊನೇ ಪಕ್ಷ ನೀವು ರೆಸ್ಟ್‌ರೂಮಿಗೆ ಹೋದಾಗ ಅಲ್ಲಿ ಬರದೇ ನಿಮ್ಮ ಏಕಾಂತ ನಿಮಗೇ ಸೀಮಿತವಾಗಿರಲಿ ಎಂದು. ಇಲ್ಲಾ ಅಂದ್ರೆ ನೀವೇ ಯೋಚ್ನೇ ಮಾಡಿ - ಬಾತ್‌ರೂಮಿನಲ್ಲೂ ನಿಮ್ಮ ಪಕ್ಕದಲ್ಲೇ ನಿಂತು 'ಅದಾಯ್ತಾ?...' ಎಂದರೆ ನಿಮಗೆ ಅವರು ಯಾವುದಕ್ಕೆ ಪ್ರಶ್ನೆಯನ್ನು ಕೇಳುತ್ತಾರೆ ಎಂಬುದು ಗೊತ್ತಿಲ್ಲದೇ ನೀವು ಏನಾದರೂ ಅಸಂಬಂದ್ಧ ಉತ್ತರ ಕೊಡುವ ಸಂದರ್ಭವೇ ಹೆಚ್ಚು. ನಿಮಗೆ ಇನ್ನೇನು ಆದರೂ ನನಗೆ ಆದ ಈ ಅನುಭವವಾಗದಿರಲಿ - ನಾನು ನ್ಯೂ ಯಾರ್ಕ್‌ನಲ್ಲಿ ಕೆಲಸ ಮಾಡುತ್ತಿರುವಾಗ ಹದಿನಾರನೇ ಮಹಡಿಯಲ್ಲೇ ನಮ್ಮ ಬ್ರಾಡ್‌ಕ್ಯಾಸ್ಟ್ ಸೆಂಟರ್ ಇದ್ದದ್ದು, ಅಲ್ಲಿ ಆಗಾಗ್ಗೆ ನಮ್ಮ ಕಂಪನಿಯ ಅತಿರಥ-ಮಹಾರಥರೆಲ್ಲ ಬಂದು ಹೋಗುತ್ತಿದ್ದರು. ಒಂದು ದಿನ ಹೀಗೇ ಮೂತ್ರಾಲಯದಲ್ಲಿ ನನ್ನ ಕೆಲಸವನ್ನು ಮಾಡಿಕೊಂಡು ನಾನು ನಿಂತಿದ್ದಾಗ ಪಕ್ಕದಲ್ಲಿ ಯಾರೋ ನಿಂತಿದ್ದಾರೆ ಎನ್ನಿಸಿತು - ಯಾರು ಎಂದು ನೋಡುತ್ತೇನೆ ನಮ್ಮ ಕಂಪನಿಯ ಸಿಇಓ - ಅದೇ ವರ್ಷಕ್ಕೆ ೨೬ ಮಿಲಿಯನ್ ದುಡಿದು ದೊಡ್ಡ ಮಾತನಾಡೋ ದೊಡ್ಡ ಮನುಷ್ಯ - ನನಗಾದ ಮುಜುಗರ ಅಷ್ಟಿಷ್ಟಲ್ಲ - ಕೊನೆಗೆ ಅವನ ಹೆಸರು ಹೇಳಿ 'ಹಾಯ್' ಎಂದರೆ 'ಹಲೋ' ಎನ್ನುವ ಉತ್ತರ ಬಂತು! ಮುಂದೆ ನಮ್ಮ ನಮ್ಮ ಕೆಲಸವನ್ನು ನೋಡಿಕೊಂಡು ನಾವು ನಮ್ಮ ಪಾಡಿಗಿದ್ದವು.

ಪ್ರೇಯರ್‌ನಲ್ಲಿ ಶಕ್ತಿ ಇದೆಯೋ ಇಲ್ಲವೋ ನಾನು ಬಯಸಿದಂತೆ ನನಗೆ ಲೇಡಿ ಬಾಸುಗಳೇ ಸಿಗುತ್ತಿದ್ದಾರೆ, ನನ್ನ ಮುಜುಗರವನ್ನು ಇನ್ನಷ್ಟು ಹೆಚ್ಚು ಮಾಡಲು ನಾನು ಹೋದಲೆಲ್ಲಾ ತಲೆ ಕೂದಲನ್ನು ಕತ್ತರಿಸಲೂ ಇಲ್ಲಿ ಹೆಣ್ಣು ಮಕ್ಕಳೇ ಸಿಗುತ್ತಾರೆ, ಆದರೆ ಲೇಡೀಸ್ ಹೇರ್ ಕಟ್ ಮಾಡೋದನ್ನ ನಾನು ಸಹಿಸಿಕೊಂಡು ಎಷ್ಟೋ ವರ್ಷಾ ಆಗಿ ಹೋಗಿದೆಯಾದ್ದರಿಂದ ಈಗ ಗಂಡಸರು ತಲೆ ಕೂದಲನ್ನು ಕತ್ತರಿಸಿದರೆ ಅದರಿಂದ ಕೆಲವೊಮ್ಮೆ ಏನೋ ಬದಲಾವಣೆ ಆಗಿರೋ ಹಾಗೆ ಅನ್ನಿಸಿದೆ!

Tuesday, September 05, 2006

ವಿಶ್ವ ಕನ್ನಡ ಸಮ್ಮೇಳನ ೨೦೦೬ - ಭಾಗ ೩

ಶನಿವಾರದ ಕಾರ್ಯಕ್ರಮಗಳು ಎಸ್.ಪಿ.ಬಾಲಸುಬ್ರಮಣ್ಯಂ ಅವರ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗುವಾಗ ಭಾನುವಾರವಾಗಲೇ ಬಂದಿತ್ತು. ಭಾನುವಾರ ಮುಖ್ಯ ವೇದಿಕೆಯ ಮೇಲೆ ಏನೇ ಕಾರ್ಯಕ್ರಮಗಳಿದ್ದರು ದಿನವಿಡೀ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೋಡುವುದರಲ್ಲೇ ಕಾಲಕಳೆಯಬಹುದಾಗಿತ್ತು. ಮೊದಲು ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆಯ ಬಗ್ಗೆ ವಿಚಾರ ಸಂಕಿರಣ, ನಂತರ ಬಿಡುಗಡೆಯಾದ ಪುಸ್ತಕಗಳ ಕುರಿತು ಆಯ್ದ ಭಾಷಣಕಾರರು ಮಂಡಿಸಿದ ಕಿರು ಪರಿಚಯ ಅಥವಾ ಅನಿಸಿಕೆ, ಮಧ್ಯಾಹ್ನ ಕಾದಂಬರಿಕಾರ ಭೈರಪ್ಪನವರೊಂದಿಗೆ ಸಂವಾದ, ಇವೆಲ್ಲವೂ ಮನಸ್ಸಿನಲ್ಲಿದ್ದುದರಿಂದ ನನ್ನಂತೆ ಬೇಕಾದಷ್ಟು ಜನರಿಗೆ ಉಳಿದ ಕಾರ್ಯಕ್ರಮಗಳಿಗೆ ಹೋಗುವುದೋ ಬೇಡವೋ ಅನ್ನಿಸಿರಲಿಕ್ಕೂ ಸಾಕು.

ಭೈರಪ್ಪನವರೊಂದಿಗಿನ ಸಂವಾದವನ್ನು ಹೊರತುಪಡಿಸಿ ಮಿಕ್ಕೆಲ್ಲ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಬಹಳ ಕಡಿಮೆ ಜನರು ಸೇರಿದ್ದರು ಎಂಬುದು ಅತಿಶಯೋಕ್ತಿಯೇನಲ್ಲ. ಹಿಂದಿನ ದಿನದ ಹಾಸ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಸಭಾಂಗಣ ಕಿಕ್ಕಿರಿದು ತುಂಬಿದ್ದರೆ ಸಾಹಿತ್ಯ ಸಮಾರಂಭಗಳು ಸೊರಗಿದಂತೆ ಕಂಡುಬರುತ್ತಿದ್ದವು, ಎಷ್ಟೋ ಕಾರ್ಯಕ್ರಮಗಳಲ್ಲಿ ಸೇರಿದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮಕ್ಕೆ ನೇರವಾಗಿ ಸಂಬಂಧಿಸಿದವರೇ ಆಗಿದ್ದರು. ಸಮನಾಂತರ ವೇದಿಕೆಯ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳು ಹಾಗೂ ನಮ್ಮ ಜನರ ಅಭಿರುಚಿ ಇವೆರಡೂ ಕಾರಣವಾಗಿರಬಹುದು. ಏನೇ ಹೇಳಿ, ಪುತ್ತೂರಾಯರ ಹಾಗೂ ಅ.ರಾ.ಮಿತ್ರರ ಹಾಸ್ಯಗೋಷ್ಠಿಯಲ್ಲಿ ಜನರು ಪ್ರತಿಯೊಂದು ಜೋಕಿಗೂ ಪ್ರತಿಕ್ರಿಯಿಸಿದ ರೀತಿ ವಿಶೇಷವಾಗಿತ್ತು. ಕನ್ನಡದಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ನು ಇದೇ ಮೊದಲ ಸಲ ಹತ್ತಿರದಿಂದ ನೋಡಿದ ನನಗೆ, ನವಿರಾದ ಹಾಸ್ಯವನ್ನು ವಿಶೇಷವಾಗಿ ಹೇಳುವ ಅವರ ಶೈಲಿ ಹಲವಾರು ಜನರನ್ನು ಅಯಸ್ಕಾಂತದಂತೆ ಆಕರ್ಷಿಸುವ ಸಮೂಹ ಸನ್ನಿಯಂತೆ ಕಂಡುಬಂತು. ಪುತ್ತೂರಾಯರು ಹಾಗೂ ಮಿತ್ರರು ಈ ದಿಸೆಯಲ್ಲಿ ಬಹಳ ಕೌಶಲಪೂರ್ಣರೆಂದೇ ಹೇಳಬೇಕು.

ನಾನು ಇದೇ ಸಮ್ಮೇಳನದಲ್ಲಿ ಮೊಟ್ಟಮೊದಲ ಬಾರಿಗೆ ಭೈರಪ್ಪನವರನ್ನು ನೋಡುತ್ತಿರುವುದು. ಮೊಟ್ಟ ಮೊದಲು ನೋಡಿದಾಗ ಈ ಮನುಷ್ಯನಿಗೆ ನಗುವುದೇ ಗೊತ್ತಿಲ್ಲವೇ ಎನ್ನಿಸಿ ಬಿಟ್ಟಿತ್ತು, mostly ಜೀವನದ ಗಹನವಾದ ಸಮಸ್ಯೆಗಳಿಗೆ ಕಾದಂಬರಿಯ ರೂಪವನ್ನು ಕೊಡುವುದರಲ್ಲಿ ತಮ್ಮ ಮುಗುಳ್ನಗೆಯನ್ನೇ ಕಳೆದುಕೊಂಡುಬಿಟ್ಟರೇನೋ ಎಂದು ಅನುಮಾನವೂ ಆಗಿತ್ತು, ಆದರೆ ಸಂವಾದದಲ್ಲಿ ಕೆಲವು ಪ್ರಶ್ನೆಗಳಿಗೆ ಅವರು ನಕ್ಕು ಉತ್ತರಿಸುತ್ತಿದ್ದುದರಿಂದ ನನ್ನ ಅನುಮಾನ ತೊರೆದುಹೋಯಿತು. ಭೈರಪ್ಪನವರಿಗೆ 'ನಮಸ್ಕಾರ, ಚೆನ್ನಾಗಿದೀರ' ಎಂದು ಪರಿಚಯ ಹೇಳಿಕೊಂಡು ಮಾತನಾಡಿಸಿದಾಗ ಭೈರಪ್ಪನವರ ಪ್ರತಿಕ್ರಿಯೆ ಇತ್ತೀಚೆಗೆ ಅಮೇರಿಕಕ್ಕೆ ಬಂದ ಕನ್ನಡಿಗನೊಬ್ಬ ವಿಮಾನ ನಿಲ್ದಾಣದಲ್ಲಿ ಯಾರೋ ಒಬ್ಬರು ಕನ್ನಡಿಗರಂತೆ ಕಂಡುಬಂದರೆಂದು ಕನ್ನಡದಲ್ಲಿ ಮಾತನಾಡಿಸಿದಾಗ ಎದುರಿನವರು so what? ಎಂದು look ಕೊಟ್ಟ ಹಾಗೆ ಇತ್ತು! ಕಣವಿಯವರನ್ನಾಗಲೀ, ಚಂಪಾ, ಅಮೂರ, ಭಟ್ಟರನ್ನಾಗಲೀ ನನ್ನಂತಹ ಸಾಮಾನ್ಯರು ಮಾತನಾಡಿಸಿದಾಗ ಸಾಮಾನ್ಯರು ಕೊಡಬಹುದಾದ ಮುಗಳ್ನಗೆಯ ಉತ್ತರವೇ ಬಂತು.

ಭೈರಪ್ಪನವರ ಸಂವಾದದ ಬಗ್ಗೆ ಹಿಂದೆಲ್ಲೋ ಓದಿದ್ದೆ, ಆದರೆ ನನ್ನ ನಿರೀಕ್ಷೆಗೆ ಮೀರಿ ಭೈರಪ್ಪನವರ ವಾಗ್ಝರಿ ಸುಮಾರು ೯೦ ನಿಮಿಷಗಳಿಗಿಂತಲೂ ಮೀರಿ ಹರಿದಿತ್ತು. ಜನರು ತಮ್ಮೆಡೆಗೆ ಎಸೆದ ಪ್ರತಿಯೊಂದು ಪ್ರಶ್ನೆಯನ್ನೂ ನಿಧಾನವಾಗಿ ಕೇಳಿಕೊಂಡು ಅದಕ್ಕೆ ತಕ್ಕಂತೆ ಹಾಗೂ ಅದನ್ನು ವಿಸ್ತರಿಸಿ ಉತ್ತರವನ್ನು ಕೊಡುತ್ತಿದ್ದರು. ತಮ್ಮೆಲ್ಲ ಕಾದಂಬರಿಯ ಪಾತ್ರ, ನಿಲುವುಗಳನ್ನು ಸಮರ್ಥವಾಗಿ ವಿವರಿಸಿ ಪ್ರತಿಯೊಂದನ್ನು ವಿವರವಾಗಿ ತಿಳಿಸಿಕೊಡುತ್ತಿದ್ದ ರೀತಿ ಬಹಳ ಸೊಗಸಾಗಿತ್ತು. ಹಿಂದೆ ಎಷ್ಟೋ ವರ್ಷಗಳ ಹಿಂದೆ ಬಾಂಬೆಯಲ್ಲಿ ಭೈರಪ್ಪನವರಿಗೆ ಪ್ರಶ್ನೆಗಳನ್ನು ಎದುರಿಸೋದಕ್ಕೆ ಬರೋದಿಲ್ಲ ಎಂದು ಯಾರೋ ಬರೆದದ್ದನ್ನು ಓದಿ ಇನ್ನೇನನ್ನೋ ಅಂದುಕೊಂಡಿದ್ದ ನನ್ನ ಊಹೆ ಸುಳ್ಳಾಯಿತು. ಧರ್ಮಶ್ರೀಯಿಂದ ಹಿಡಿದು, ಮಂದ್ರದವರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆಯುವುದರ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಭೈರಪ್ಪನವರು ತಮ್ಮ ಹಲವಾರು ಗುಟ್ಟುಗಳನ್ನು ಹಂಚಿಕೊಂಡರು - ಭೈರಪ್ಪನವರು ಹಿರಿಯರು ಹೇಳಿದ 'ದೇಶವನ್ನು ನೋಡು, ಕೋಶವನ್ನು ಓದು' ಎಂಬ ಮಾತಿನಲ್ಲಿ ಅಕ್ಷರಷಃ ನಂಬಿಕೆಯುಳ್ಳವರು - ಅವರೇ ಈ ಸಂವಾದದಲ್ಲಿ ತಿಳಿಸಿದ ಹಾಗೆ ಸುಮಾರು ಹನ್ನೊಂದು ಬಾರಿ ಅಮೇರಿಕೆಗೆ ಬಂದುಹೋಗಿದ್ದಾರೆ, ಯೂರೋಪು, ಏಷ್ಯಾಗಳಲ್ಲಿ ಹೆಚ್ಚಾಗಿ ಪ್ರವಾಸಿ ತಿರುಗಾಡಿದ ಅವರು ದೂರದ ಅಂಟಾರ್ಟಿಕಾಕ್ಕೂ ಹೋಗಿಬಂದಿದ್ದಾರೆ ಎಂಬುದು ಎಷ್ಟೋ ಜನರಿಗೆ ಗೊತ್ತಿರಲಾರದು. ಜೊತೆಯಲ್ಲಿ ಅವರು ಸಾಕಷ್ಟು ಪುಸ್ತಕಗಳನ್ನು ಓದಿದ್ದಾರೆ - ಸಂಶೋಧಕನಾಗಿ, ವಿದ್ಯಾರ್ಥಿಯಾಗಿ, ಸಾಹಿತ್ಯಾರಾಧಕನಾಗಿ ಹಾಗೂ ಪ್ರವಾಸಿಯಾಗಿ ಅವರು ಓದಿದ ಪುಸ್ತಕಗಳನ್ನು ಮಾತು-ಮಾತಿಗೆ ಉದಾಹರಣೆಯಾಗಿ ನೀಡುತ್ತಿದ್ದರು. ಕೆಲವೊಂದು ಪುಸ್ತಕಗಳ ಬಗ್ಗೆ ಅದರ ಪ್ರಕಾಶಕರ ವಿಳಾಸವನ್ನು ತಿಳಿಸುವ ಮೂಲಕ ಪ್ರೇಕ್ಷಕರಲ್ಲಿ ಕೆಲವರನ್ನು ಬೆರಗುಗೊಳಿಸಿದರು.

ಇನ್ನು ಪ್ರಶ್ನೋತ್ತರಗಳಲ್ಲೂ ಸಹ ಲವಲವಿಕೆಯಿಂದ ಮಾತನಾಡಿದರು. ಧರ್ಮಶ್ರೀಯಿಂದ ಹಿಡಿದು ಮಂದ್ರದವರೆಗೆ ತಮ್ಮ ಕಾದಂಬರಿಗಳಲ್ಲಿ ಬರುವ ಪಾತ್ರಗಳ ಲೈಂಗಿಕತೆಯ ಬೆಳವಣಿಗೆಯ ಕುರಿತು ಪ್ರಶ್ನೆಯೊಂದನ್ನು ಉತ್ತರಿಸುತ್ತಾ ಸಂದರ್ಬೋಚಿತವಾಗಿ ಪಾತ್ರಗಳಿಗೆ ತಕ್ಕಂತೆ ಲೈಂಗಿಕತೆಯನ್ನು ಬಳಸಿದ್ದೇನೆಯೇ ಹೊರತು ಅದನ್ನು ಬಲವಂತವಾಗೆಲ್ಲೂ ಹೇರಿಲ್ಲ ಎಂದು ಸಾಧಿಸಿಕೊಂಡರು. ರಾಮಾಯಣದ ಬಗ್ಗೆ ತಾವೇಕೆ ಬರೆದಿಲ್ಲ ಎಂಬುದಕ್ಕೆ ಉತ್ತರವಾಗಿ ಮಹಾಭಾರತ ಇತಿಹಾಸವಿದ್ದ ಹಾಗೆ, ಆದರೆ ರಾಮಾಯಣ ಒಂದು ಮಹಾಕಾವ್ಯ, ಅದನ್ನು ಮರುಸೃಷ್ಟಿ ಮಾಡುವುದನ್ನು ಬಿಟ್ಟು ಹೆಚ್ಚಿನದೇನನ್ನೂ ಸಾಧಿಸಾಗುವುದಿಲ್ಲ, ಮಹಾಭಾರತದಲ್ಲಿನ ಪಾತ್ರಗಳಲ್ಲಿ ತಿರುಚಲು ಬೇಕಾದಷ್ಟು ಅವಕಾಶವಿದೆ ಎಂದರು.

ಧರ್ಮದಂತಹ ಕಟ್ಟುಪಾಡುಗಳು ಹುಟ್ಟಿಸಿದ ಹೊಯ್ದಾಟವನ್ನು ಭೈರಪ್ಪನವರು ವಿವರಿಸುವಾಗ ಮುಸ್ಲಿಮ್, ಕ್ರಿಶ್ಚಿಯನ್ ಧರ್ಮಗಳ ಬಗ್ಗೆ ಓದಿಕೊಂಡು, ಅದರ ವಿಸ್ತಾರವನ್ನು ತಿಳಿದುಕೊಂಡು ಮಾತನಾಡುತ್ತಿದ್ದರೂ ವಿಗ್ರಹ, ದೇವಸ್ಥಾನಗಳನ್ನು ಧ್ವಂಸಮಾಡುವುದರ ಬಗ್ಗೆ, ಹಿಂಸೆಯ ಬಗ್ಗೆ ಅವರ ಧರ್ಮಗಳಲ್ಲೇ ಹಾಗೆ ಹೇಳಿದೆ ಎಂದು ದೊಡ್ಡ ಹೇಳಿಕೆಯನ್ನು ನೀಡಿದ್ದು ನನ್ನಂತಹ ಕೆಲವರಿಗೆ ಅಷ್ಟು ರುಚಿಸಲಿಲ್ಲ. ಅವರು ಹೇಳಿದ ಹೇಳಿಕೆಗಳು ಹೇಗಿದ್ದವೆಂದರೆ ಭಾರತದಲ್ಲೇನಾದರೂ ಈ ರೀತಿ ಹೇಳಿದ್ದರೆ ಅದು ಕಮ್ಯೂನಲ್ ಹಿಂಸೆಯನ್ನು ಸೃಷ್ಟಿಸುವ ಹಾಗಿತ್ತು. ಕೆಲವೊಂದು ಪ್ರಚೋದನಕಾರಿ ಹೇಳಿಕೆಗಳಲ್ಲಿ ಅವರು ಮತಾಂತರಗೊಳಿಸುವ ತಂತ್ರ, ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಕೊಡುವ ಸ್ಥಾನಮಾನ ಹಾಗೂ ಒಂದು ದೇಶದವರು ಮತ್ತೊಂದು ದೇಶವನ್ನು ಧಾಳಿಮಾಡಿದಾಗ ಆಗಿಹೋಗುವ ವಿಷಯಗಳನ್ನು ಒಂದು ಜೆನರಲ್ ವ್ಯಾಖ್ಯಾನದಿಂದ ನೋಡಿದಂತಿತ್ತು. ಅವರು ಕುರ್ ಆನ್ ಅನ್ನು ಸಾಕಷ್ಟು ಅಧ್ಯಯನ ಮಾಡಿಕೊಂಡೂ ಪದೇ ಪದೇ 'ಅವರ ಧರ್ಮವೇ ಹಾಗೆ ಹೇಳುತ್ತೆ' ಎನ್ನುವ ವಿಚಾರದಲ್ಲಿ ನನಗೆ ಅವರೊಬ್ಬ ವಾದ ಮಾಡುವ ಹೈ ಸ್ಕೂಲ್ ವಿದ್ಯಾರ್ಥಿಯಂತೆ ಕಂಡುಬಂದರು. ಸಾಕಷ್ಟು ಸಾರಿ ಅಮೇರಿಕವನ್ನು ಪ್ರವಾಸಿಯಾಗಿ ನೋಡಿದ ಅವರಿಗೆ ಕಂಡ ಹಾಗೆ ಇಲ್ಲಿನ ಕಪ್ಪು ಜನರನ್ನು ಇಸ್ಲಾಮಿಗೆ ಮತಾಂತರ ಮಾಡಿಕೊಳ್ಳುವ ಹುನ್ನಾರ ನನಗೆ ತಿಳಿದಿಲ್ಲ, ಅದು ನನ್ನ ಮಿತಿ ಇದ್ದಿರಬಹುದು.

ಇನ್ನು ಪ್ರಶ್ನೆ ಕೇಳಿದ ಹೆಚ್ಚಿನವರು ಭೈರಪ್ಪನವರ ಕಾದಂಬರಿಗಳನ್ನು ವಿವರವಾಗಿ ಓದಿಕೊಂಡಿದ್ದು, ಹಲವಾರು ಪಾತ್ರ ಹಾಗೂ ಸನ್ನಿವೇಶಗಳನ್ನು ಮನನ ಮಾಡಿಕೊಂಡು ಆಸಕ್ತಿಕರವಾಗಿ ಉತ್ತಮವಾದ ಪ್ರಶ್ನೆಗಳನ್ನು ಕೇಳಿದ್ದು ನನಗೆ ಬಹಳ ಇಷ್ಟವಾಯಿತು.

***

ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ನೀವು ಓದಿದ್ದರೂ ನಿಮ್ಮ ಓದು "ಅಪೂರ್ಣ"ವಾಗಿರಬಹುದು ಎಂದು ನಿನ್ನೆ ಹೇಳಿದ್ದೆ - ಭೈರಪ್ಪನವರು ತಮ್ಮ ಸೀನಿಯರ್ ಇಂಟರ್‌ಮೀಡಿಯೆಟ್ ದಿನಗಳಲ್ಲಿ ಭೀಮಕಾಯ ಎನ್ನುವ ಕಾದಂಬರಿಯನ್ನು ಬರೆದು ಪ್ರಕಟಿಸಿದ್ದಾರಂತೆ. ಇದರ ಪ್ರತಿಯನ್ನು ನಾನೆಲ್ಲೂ ನೋಡಿಲ್ಲ, ಇದನ್ನು ಓದಿ ಮುಗಿಸುವವರೆಗೆ ನೀವು ಅವರ ಎಲ್ಲಾ ಕಾದಂಬರಿಗಳನ್ನೂ ಓದಿದಂತಾಗದು...ಆದ್ದರಿಂದಲೇ ನಿಮ್ಮ ಓದು "ಅಪೂರ್ಣ"ವಾಗಿದ್ದಿರಬಹುದು ಎಂದಿದ್ದು - ಭೀಮಕಾಯವನ್ನು ಓದುವುದರ ಜೊತೆಗೆ ಭೈರಪ್ಪನವರ ನಗು ಇರುವ ಫೋಟೋವನ್ನು ನೀವೆಲ್ಲಾದರೂ ನೋಡಿದ್ದರೆ ಅಲ್ಲಿಗೆ ನಿಮ್ಮ ಓದು "ಸಂಪೂರ್ಣ"ಎಂದುಕೊಳ್ಳಿ!

***

ಸಂಜೆ ಹತ್ತು ಘಂಟೆಗೆಲ್ಲಾ ಆರಂಭವಾಗಬೇಕಾಗಿದ್ದ ಗುರುಕಿರಣ್ ಸಂಗೀತಸಂಜೆ ರಾತ್ರಿ ಹನ್ನೊಂದಾದರೂ ಆರಂಭವಾಗದಿದ್ದುದು ಬಹಳ ಜನರಿಗೆ ನಿರಾಶೆ ಉಂಟುಮಾಡಿತ್ತು. ಸಮಯ ಕಡಿಮೆಯಾದ ಗಡಿಬಿಡಿಯಲ್ಲಿ ಭಾನುವಾರ ರಾತ್ರಿ ಒಂಭತ್ತರ ನಂತರದ ಕಾರ್ಯಕ್ರಮಗಳೆಲ್ಲಾ ಏರುಪೇರಾಗಿದ್ದವು. ರಾತ್ರಿ ಹನ್ನೊಂದು ಘಂಟೆಯಿಂದ ಬೆಳಗ್ಗಿನ ಜಾವ ಒಂದು ಘಂಟೆಯವರೆಗೆ ಗುರುಕಿರಣ್ ತಂಡದವರಿಂದ ಮನೋರಂಜನಾ ಕಾರ್ಯಕ್ರಮ ಸೊಗಸಾಗಿತ್ತು. ಕೆಲವು ಹಳೆಯ ಹಾಗೂ ಹೊಸ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು - ಸಂಗೀತಾ ಕಟ್ಟಿ, ಪಲ್ಲವಿ, ಮಾಲ್ಗುಡಿ, ಮುಂತಾದವರೊಂದಿಗೆ ಗುರುಕಿರಣ್ ಯಾವುದೇ ತೊಂದರೆಯಿಲ್ಲದೇ ಕಾರ್ಯಕ್ರಮ ಪ್ರಸ್ತುತಪಡಿಸಿದರು.

***

ನನ್ನ ಅನಿಸಿಕೆಯಂತೆ ಮುಂಬರುವ ಕನ್ನಡ ಸಮ್ಮೇಳನಗಳಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ಒಳ್ಳೆಯದು. ಸಮಯ ಪರಿಪಾಲನೆಯಂತಹ ಸರಳ ವಿಷಯವಿದ್ದಿರಬಹುದು, ಸುಮಾರು ನಾಲ್ಕು ಸಾವಿರ ಜನಕ್ಕೆ ಊಟ-ತಿಂಡಿ ಬಡಿಸುವುದಿರಬಹುದು, ಎಲ್ಲದಕ್ಕೂ ಒಂದು ದೂರದೃಷ್ಟಿ, ಯೋಜನೆ ಹಾಗೂ ಶಿಸ್ತು ಬಹಳ ಮುಖ್ಯ. ಈ ವರ್ಷದ ಸಮ್ಮೇಳನದಲ್ಲಿ ಇವುಗಳಿಗೆ ಕೊರತೆ ಇರಲಿಲ್ಲವೆಂದಲ್ಲ, ಆದರೂ ಮುಂದೆ ಹೇಗೆ ನಾವು ಸುಧಾರಿಸಬಹುದು ಎಂಬುದಕ್ಕೆ ನನ್ನ ಕೆಲವು ಅನಿಸಿಕೆಗಳು:

- ಲೇಬರ್ ಡೇ (ಸೆಪ್ಟೆಂಬರ್) ವೀಕೆಂಡ್‌ಗಿಂತಲೂ ಮೆಮೋರಿಯಲ್ ಡೇ (ಮೇ) ವೀಕೆಂಡ್‌ನಲ್ಲಿ ಸಮ್ಮೇಳನವನ್ನಿಟ್ಟುಕೊಂಡರೆ ಮುಂಬರುವ ಚಂಡಮಾರುತಗಳಿಂದ ತಪ್ಪಿಸಿಕೊಳ್ಳಬಹುದು
- ಪ್ಯಾರಲಲ್ ವೇದಿಕೆಯನ್ನು ನಿರ್ಮಿಸಲಿ, ಆದರೆ ಎರಡು ಹೆಚ್ಚೆಂದರೆ ಮೂರಕ್ಕಿಂತ ಹೆಚ್ಚು ವೇದಿಕೆಗಳನ್ನು ನಿರ್ಮಿಸಿ ಹಲವಾರು ಕಾರ್ಯಕ್ರಮಗಳನ್ನು ಒಟ್ಟೊಟ್ಟಿಗೇ ನಡೆಸಿದರೆ ಪ್ರೇಕ್ಷಕರು ತಮ್ಮನ್ನು ತಾವು ಕಳೆದುಕೊಳ್ಳುವುದೇ ಹೆಚ್ಚು
- ಸುಮಾರು ನಾಲ್ಕು-ಐದು ಸಾವಿರ ಜನರು ಸೇರುವಲ್ಲಿ ಕಾರ್ಯಕ್ರಮಗಳನ್ನು ಆಸ್ವಾದಿಸುವುದರ ಜೊತೆಗೆ socialization ಮಾಡಿಕೊಳ್ಳುವುದಕ್ಕೂ ಆಸ್ಪದವಿರಲಿ, ಅಥವಾ ಬ್ಯಾಕ್ ಟು ಬ್ಯಾಕ್ ಪ್ರೋಗ್ರಾಮ್ ಇಟ್ಟು ಜನರು ಬೆರೆಯದೇ ಇರುವಂತಾಗದಿರಲಿ
- ಕನ್‌ವೆನ್‌ಷನ್ ಸೆಂಟರ್ ಇರುವಲ್ಲಿಯೇ ಊಟ-ಉಪಚಾರದ ವ್ಯವಸ್ಥೆ ಇರಲಿ, ನಾಲ್ಕು ಸಾವಿರ ಜನ ಬೇರೆ ಕಡೆಗೆ ಊಟಕ್ಕೆ ಹೋಗಿ-ಬಂದು ಮಾಡುವುದು ಅನವಶ್ಯಕವಾಗಿ ಜನರ ಸಮಯವನ್ನು ಹಾಳುಮಾಡುತ್ತದೆ
- ಮುಂದಿನ ಸಮ್ಮೇಳನ ಎಲ್ಲಾದರೂ ನಡೆಯಲಿ ಅದಕ್ಕಿಂತ ಮೊದಲು ಊಟ-ತಿಂಡಿ ವ್ಯವಸ್ಥೆ ಮಾಡುವವರು ಬಂದು ಹೋಗುವ ಜನರನ್ನು triage ಮಾಡಿ, ಒಬ್ಬೊಬ್ಬ ವ್ಯಕ್ತಿ ಊಟ ಬಡಿಸಿಕೊಂಡು, ಊಟ ಮುಗಿಸಿ ಹೋಗುವುದಕ್ಕೆ ಎಷ್ಟು ಸಮಯವಾಗುತ್ತದೆ ಎನ್ನುವ dry run ಅಭ್ಯಾಸ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಹಾರ, ಮೇಜು, ಖುರ್ಚಿ, ನೀರು-ನಿಡಿಗಳನ್ನು ಹೊಂದಿಸಿಕೊಳ್ಳಲಿ
- ಸ್ಥಳೀಯ ಪೋಲೀಸ್ presence ಇರಲಿ, ಜನರಿಗೆ ಅದರಿಂದ ನೆಮ್ಮದಿ ಇರುತ್ತದೆ, ಸಾವಿರಾರು ಜನರು ಸೇರುವಲ್ಲಿ ಹೊರಗಿನ ಒಂದಿಷ್ಟು ಕಣ್ಣುಗಳು ಜನರ ಸುರಕ್ಷತೆಯನ್ನು ಕಾಯ್ದುಕೊಂಡಿರಲಿ
- ಎಲ್ಲಾ ತರಹದ ಕಾರ್ಯಕ್ರಮಗಳಿಗೂ ಸರಿಯಾದ representation ಸಿಗಲಿ, ನಾಟ್ಯ, ಯಕ್ಷಗಾನ, ಸಂಗೀತ, ಇತ್ಯಾದಿಗಳಿಗೆ ಸಮನಾದ ಅವಕಾಶ ಸಿಗಲಿ
- ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳನ್ನು ವೇಷ್ಟ್ ಮಾಡದಿರುವಂತೆ ನೋಡಿಕೊಳ್ಳಲಿ, ನಾನು ನೋಡಿದಂತೆ ೨೦೦೬ ರ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಾಂಸಾಹಾರಿ ಖಾದ್ಯಗಳನ್ನು ಹೆಚ್ಚು ಜನರು ಬಡಿಸಿಕೊಳ್ಳುತ್ತಿರಲಿಲ್ಲ
- ಕರ್ನಾಟಕದಿಂದ ಬಂದ ಕಲಾವಿದರನ್ನು ಮುಖ್ಯ ವೇದಿಕೆಯಲ್ಲಿ ಕರೆದು ಪರಿಚಯಿಸಿ, ಸನ್ಮಾನಿಸುವ ಸೌಜನ್ಯವಿರಲಿ
- ಒಂದು ಕಾರ್ಯಕ್ರಮ ಸಮಯವನ್ನು ಮೀರಿ ನಡೆದರೆ ಅದಕ್ಕೆ ಶಿಕ್ಷೆ ಕೊಡಬೇಕೇ ವಿನಾ ಮುಂದಿನ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದು ಸರಿಯಲ್ಲ
- ಹಗಲೂ-ರಾತ್ರಿ ದುಡಿಯುವ ಕಾರ್ಯಕರ್ತರಿಗೆ ಒಳ್ಳೆಯ ಸಪೋರ್ಟ್ ವ್ಯವಸ್ಥೆ ಇರಲಿ, ಇಲ್ಲವೆಂದಾದರೆ ದುಡಿಯುವವರು ದುಡಿಯುತ್ತಲೇ ಇರಬೇಕಾದೀತು.
- ತಿಂಡಿ, ಊಟಗಳನ್ನು ಬಿಟ್ಟು ಮಧ್ಯೆ ಅಂದರೆ ಮುಂಜಾನೆ ಊಟದ ಸ್ವಲ್ಪ ಹೊತ್ತಿನ ಮೊದಲು (ಸುಮಾರು ಹನ್ನೊಂದು ಘಂಟೆ ಹೊತ್ತಿಗೆ), ಮಧ್ಯಾಹ್ನ ಊಟದ ನಂತರ (ಸಂಜೆ ನಾಲ್ಕು ಅಥವಾ ಐದು ಘಂಟೆಯ ಹೊತ್ತಿಗೆ) ಲಘು ಪಾನೀಯ (ಕಾಫಿ, ಟೀ) ಸರಬರಾಜು ಆಗಲಿ
- ವೇದಿಕೆಯ ಮೇಲೆ ಒಬ್ಬರು ಮಾತನಾಡುತ್ತಾ ನಿಂತಿದ್ದರೆ ಅವರ ಪಕ್ಕದಲ್ಲಿ ಜನರು ಸುಮ್ಮನೇ ನಿಲ್ಲುವುದು ತಪ್ಪಲಿ

***

ಹೀಗೆ ಸೆಪ್ಟೆಂಬರ್ ಒಂದರಿಂದ ಮೂರರವರೆಗೆ ನಡೆದ ೨೦೦೬ ರ ಕಾರ್ಯಕ್ರಮಗಳು ನನಗಂತು ಖುಷಿಯನ್ನು ತಂದುಕೊಟ್ಟಿವೆ, ಹಲವಾರು ಸ್ನೇಹಿತರನ್ನು ಮಾಡಿಕೊಟ್ಟಿವೆ, ಮುಖ್ಯವಾಗಿ ಒಂದಿಷ್ಟು ಕನ್ನಡತನವನ್ನು ಬೆಳೆಸಿವೆ. ಮುಂಬರುವ ಸಮ್ಮೇಳನಗಳಲ್ಲಿ ಕನ್ನಡಿಗರ ಉದಾರತೆ, ನಿಪುಣತೆ ಹಾಗೂ ದೂರದೃಷ್ಟಿಗಳ ಧ್ಯೋತಕವಾದ ಯಶಸ್ವೀ ಕಾರ್ಯಕ್ರಮವನ್ನು ಎದುರು ನೋಡುತ್ತಿರುತ್ತೇನೆ. ೨೦೦೬ ಸಮ್ಮೇಳನವನ್ನು ಅದ್ದೂರಿಯಾಗಿ ನೆರವೇರಿಸಿ, ಪೂರೈಸಿದ ಕಾವೇರಿ-ಅಕ್ಕಾದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು.

Monday, September 04, 2006

ವಿಶ್ವ ಕನ್ನಡ ಸಮ್ಮೇಳನ ೨೦೦೬ - ಭಾಗ ೨

ಒಂದು ಕಡೆ ಸರಿ ಮಧ್ಯರಾತ್ರಿಯವರೆಗೆ ಹಮ್ಮಿಕೊಂಡ ಕಾರ್ಯಕ್ರಮಗಳು, ಮತ್ತೊಂದು ಕಡೆ ಮುಂಜಾನೆ ಏಳೂವರೆಗೆಲ್ಲ ಆರಂಭವಾಗುವ ಇತರ ಕಾರ್ಯಕ್ರಮಗಳ ಆಕರ್ಷಣೆ, ಹಾಗೂ ಕನ್‌ವೆನ್‌ಷನ್ ಸೆಂಟರ್ ತುಂಬೆಲ್ಲಾ ನಾನಾ ತೆರನ ಕಾರ್ಯಕ್ರಮಗಳು - ಇವುಗಳಲ್ಲಿ ಯಾವುದನ್ನು ನೋಡುವುದು, ಎಷ್ಟು ಹೊತ್ತಿಗೆ ನೋಡುವುದು? ಈ ಪ್ರಶ್ನೆ ನನಗೊಬ್ಬನಿಗೇ ಅಲ್ಲ, ಸಮ್ಮೇಳನಕ್ಕೆ ಬಂದವರಲ್ಲಿ ಬೇಕಾದಷ್ಟು ಜನರಿಗೂ ಹೀಗೆಯೇ ಆಗಿರಬಹುದು. ಆದರೆ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲಿನ ಶೋತೃಗಳಲ್ಲಿ ಲವಲವಿಕೆ ಕಡಿಮೆಯಾದಂತೆ ನನಗೆ ಎಂದೂ ಕಂಡುಬರಲಿಲ್ಲ. ಪ್ರತಿಯೊಂದು ಕಾರ್ಯಕ್ರಮಕ್ಕೂ ಜನರು ತಮ್ಮ ಕಷ್ಟ ಸುಖಗಳ ನಡುವೆ ಸಾಧ್ಯವಾದಷ್ಟು ಭಾಗವಹಿಸುತ್ತಿದ್ದುದು ನಿಜಕ್ಕೂ ಶ್ಲಾಘನೀಯ.

ಮುಂಜಾನೆ ನಾನು ಪ್ರತಿ ಜಿಲ್ಲೆಯ ಮೆರವಣಿಗೆ ಹಾಗೂ ಸ್ತಬ್ಧ ಚಿತ್ರಗಳನ್ನು ನೋಡಲಾಗಲಿಲ್ಲ. ನಾನು ಸಮ್ಮೇಳನಕ್ಕೆ ಹೋಗುವ ಹೊತ್ತಿಗಾಗಲೇ ಕಾರ್ಯಕ್ರಮಗಳು ಆರಂಭವಾಗಿ ಎಷ್ಟೋ ಹೊತ್ತು ಆಗಿ ಹೋಗಿತ್ತು. ಒಂದು ಕಡೆ ಸಾಹಿತ್ಯ ಗೋಷ್ಠಿಯಲ್ಲಿ ಮುಂಜಾನೆ ಹತ್ತು ಘಂಟೆಗೆ ಆರಂಭವಾಗಿ ಹಲವಾರು ಮುಖ್ಯ ಕಾರ್ಯಕ್ರಮಗಳು ಜರುಗಿದರೆ, ಅದೇ ವೇದಿಕೆಯ ಎಡಮಗ್ಗುಲಿನಿಂದ ಇಂಪಾದ ಕರ್ನಾಟಕ ಶಾಸ್ತ್ರೀಯ ಸಂಗೀತ ಹೊಮ್ಮಿ ಬರುತ್ತಿತ್ತು. ಸಾಹಿತ್ಯ ಗೋಷ್ಠಿಯ ಬಲಭಾಗದ ವೇದಿಕೆಯಲ್ಲಿ ಆಧ್ಯಾತ್ಮ ಗೋಷ್ಠಿ ನಡೆಯುತ್ತಿತ್ತು. ಹತ್ತೂವರೆಯಿಂದ ಮುಖ್ಯ ವೇದಿಕೆ - ರಾಜ್‌ಕುಮಾರ್ ಸಭಾಂಗಣದಲ್ಲಿ ಎಂ.ಡಿ. ಪಲ್ಲವಿ ತಂಡದವರಿಂದ ಸುಗಮ ಸಂಗೀತ ಬೇರೆ. ನಾನು ಸಾಹಿತ್ಯ ಗೋಷ್ಠಿಯಲ್ಲಿ ಲಕ್ಷ್ಮೀ ನಾರಾಯಣ ಭಟ್ಟರ 'ತೀನಂಶ್ರೀ ಮತ್ತು ಡಿ.ಎಲ್.ಎನ್. ಶತಾಬ್ಧಿಯ ಸ್ಮರಣೆ', ಸರೋಜಾ ನಾರಾಯಣ ರಾವ್ ಅವರ 'ಟಿ. ಸುನಂದಮ್ಮ ನೆನಪು', ಹಾಗೂ ಉಷಾದೇವಿ ಅವರ 'ಆಧುನಿಕ ಕನ್ನಡ ಕವಯಿತ್ರಿಯರು' ಭಾಷಣಗಳನ್ನು ಕೇಳಿಕೊಂಡು ಆಧ್ಯಾತ್ಮ ವೇದಿಕೆಯಲ್ಲಿ ಸೋಮಯಾಜಿಯವರ 'ಆಧ್ಯಾತ್ಮ ಮತ್ತು ವಾಸ್ತು'ವಿನ ಬಗ್ಗೆ, ಲಕ್ಷ್ಮೀದೇವಿಯವರ 'ದಾಸ ಸಾಹಿತ್ಯ'ದ ಬಗ್ಗೆ ಹಾಗೂ ಅಶ್ವಥ್ ನಾರಾಯಣರವರ 'ಕರ್ನಾಟಕದಲ್ಲಿ ಜೈನ ಧರ್ಮ' ದ ಬಗ್ಗೆ ಮಾತನ್ನು ಕೇಳಿಕೊಂಡು ಮುಖ್ಯ ವೇದಿಕೆಯ ಬಳಿ ಓಡುವಷ್ಟರಲ್ಲಿ ಆಗಲೇ ಎಂ.ಡಿ. ಪಲ್ಲವಿ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಮುಗಿದುಹೋಗಿತ್ತು. ಸಂಗೀತ ಕಾರ್ಯಕ್ರಮದ ನಂತರ ಮುಖ್ಯವೇದಿಕೆಯಲ್ಲಿ 'ಕುಜದೋಶವೋ ಶುಕ್ರದೆಸೆಯೋ' ಎಂಬ ನಾಟಕ ಹೆಚ್ಚಿನವರನ್ನು ಹಾಸ್ಯದಲ್ಲಿ ತೇಲಿಸಿತು.

ಹೀಗೆ ಹಲವಾರು ಪ್ಯಾರಲಲ್ ವೇದಿಕೆಗಳ ಮೇಲೆ ನಡೆಯುತ್ತಿದ್ದ ಸಮಾರಂಭಗಳಲ್ಲಿ ಶ್ರೋತೃಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ತಾವು ನೋಡಬೇಕಾದ ಕಾರ್ಯಕ್ರಮಗಳನ್ನು ಆರಿಸಿಕೊಳ್ಳುತ್ತಿದ್ದರು. ಕನ್‌ವೆನ್‌ಷನ್ ಸೆಂಟರ್ ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೇ ದೊಡ್ಡ ಪರದೆಯ ಮೇಲೆ ಆಯಾ ದಿನಗಳ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಿದ್ದೂ ಅಲ್ಲದೇ, ಮೈಕಿನಲ್ಲಿ ನಿರಂತರವಾಗಿ ಮುಂಬರುವ ಕಾರ್ಯಕ್ರಮಗಳನ್ನೂ, ಯಾವುದೇ ಬದಲಾವಣೆಗಳನ್ನೂ, ಹಾಗೂ ಇತರ ಪ್ರಕಟಣೆಗಳನ್ನೂ ತಿಳಿಸುವ ವ್ಯವಸ್ಥೆಯನ್ನು ಮಾಡಿರುವುದರ ಜೊತೆಗೆ ಪ್ರತಿದಿನದ ಕಾರ್ಯಕ್ರಮಗಳ ಸಮಯ ಹಾಗೂ ವೇದಿಕೆಯ ಹೆಸರಿನ ಕೋಷ್ಟಕದಲ್ಲಿ ಮುದ್ರಿಸಿ ಜನರಿಗೆ ಹಂಚಲಾಗುತ್ತಿತ್ತು. ಈ ದಿಸೆಯಲ್ಲಿ ನಿರಂತರವಾಗಿ ಕಾರ್ಯಕ್ರಮದ ಉದ್ದಕ್ಕೂ ಶ್ರಮಿಸಿದ ಕಾರ್ಯಕರ್ತರ ಕೆಲಸವನ್ನು ಮೆಚ್ಚಲೇ ಬೇಕು.

ಶುಕ್ರವಾರದ ದಿನದಂದು ಮುನಿಸಿಕೊಂಡಿದ್ದ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದರಿಂದಲೂ, ಹಿಂದಿನ ದಿನದ ಕಾರ್ಯಕ್ರಮಗಳ ಅನುಭವ ಹಾಗೂ ಜನರ ಅಭಿಪ್ರಾಯಗಳಿಂದ ಆಯೋಕರು ಅಗತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಬದಲಾವಣೆಗಳನ್ನು ಮಾಡಿದ್ದರಿಂದಲೂ ಶನಿವಾರದ ಕಾರ್ಯಕ್ರಮಗಳು ಹೆಚ್ಚು ಸಹನೀಯವಾಗಿದ್ದವು.

ಶನಿವಾರ ಮುಂಜಾನೆ ನಾನು ನೋಡಿದ ಅಥವಾ ನನಗೆ ಇಷ್ಟವಾದ ಕಾರ್ಯಕ್ರಮವೆಂದರೆ ನ್ಯೂ ಯಾರ್ಕ್ ಕನ್ನಡ ಕೂಟದವರು ಪ್ರಸ್ತುತ ಪಡಿಸಿದ 'ಎತ್ತಲೋ ಮಾಯವಾದ "ಮುತ್ತು" ರಾಜ್‌ಕುಮಾರ್'. ಇದರಲ್ಲಿ ರಾಜ್ ಅವರು ನಟಿಸಿದ ಹಲವಾರು ಹಾಡು ಹಾಗೂ ಸನ್ನಿವೇಶಗಳ ಹಿನ್ನೆಲೆಗೆ ರಂಗದ ಮೇಲೆ ಅಭಿನಯಿಸಿ ರಾಜ್‌ಕುಮಾರ್ ಅವರ ನಟನೆಯ ಹಲವಾರು ಮುಖಗಳನ್ನು ಶ್ರೋತೃಗಳಿಗೆ ನೆನಪಿಸಿಕೊಟ್ಟ ಹೆಗ್ಗಳಿಕೆ ಇದರಲ್ಲಿ ಭಾಗವಹಿಸಿದ ಕಲಾವಿದರದು. ನಿಜವಾಗಿಯೂ ಈ ಕಾರ್ಯಕ್ರಮ ರಾಜ್‌ಕುಮಾರ್ ಅವರನ್ನು ನಾವೆಲ್ಲರೂ ಎಷ್ಟು ಕಳೆದುಕೊಂಡಿದ್ದೇವೆ ಎಂದು ತೋರಿಸಿಕೊಟ್ಟಿತಲ್ಲದೇ, ಹಳೆಯ ಚಿತ್ರಗಳ ಎಷ್ಟೋ ಗೀತೆ-ಸನ್ನಿವೇಶಗಳನ್ನು ಆರಿಸಿ ಅದಕ್ಕೆ ತಕ್ಕ ಅಭಿನಯವನ್ನು ನೀಡಿದ ಕಲಾವಿದರ ಕೌಶಲ್ಯ ಹಾಗೂ ತಯಾರಿಯನ್ನು ಮೆಚ್ಚಬೇಕಾದದ್ದೇ.

ಶನಿವಾರ ಸಂಜೆಯ ಎರಡು ಮುಖ್ಯ ಕಾರ್ಯಕ್ರಮಗಳೆಂದರೆ ಸಂಗೀತಾ ಕಟ್ಟಿ ಹಾಗೂ ನಾಗವಲ್ಲಿ ನಾಗರಾಜ್ ಅವರ ಜುಗಲ್‌ಬಂದಿ ಸಂಗೀತ ಹಾಗೂ ಅದರ ನಂತರ ಎಸ್.ಪಿ. ಬಾಲಸುಬ್ರಮಣ್ಯಂ ಅವರ ರಸಮಂಜರಿ. ಸಂಗೀತಾ ಕಟ್ಟಿ ಅವರ ಸಂಗೀತವನ್ನು ನಾನು ಈ ಹಿಂದೆ ಹಲವಾರು ಬಾರಿ ಕೇಳಿದ್ದರೂ ವಿಸ್ತಾರವಾದ ರಾಜ್‌ಕುಮಾರ್ ಹಾಲ್‌ನಲ್ಲಿ ಅವರ ಧ್ವನಿ ತರಂಗಗಳು ಎಂತಹವರಿಗೂ ತನ್ಮತೆಯನ್ನು ಮೂಡಿಸಿ, ಆಯಾ ರಾಗದ ಉತ್ತುಂಗಕ್ಕೆ ಕರೆದೊಯುತ್ತಿದ್ದವು. ಕಣ್ಣುಮುಚ್ಚಿಕೊಂಡು ಸಂಗೀತ ಆಸ್ವಾದಿಸಿದ ನನ್ನಂತಹ ಕೆಲವರಿಗೆ ಇದೊಂದು ಬಹಳ ವಿಶೇಷವಾದ ಅನುಭವವಾಗಿತ್ತು. ನಂತರ ಪ್ರೇಕ್ಷಕರನ್ನು ಹೆಚ್ಚಾಗಿ ಕಾಯಿಸದೇ ಎಸ್.ಪಿ. ಶೈಲಜಾ, ಮಲ್ಲಿಕಾರ್ಜುನ್ ಅವರ ಸಹಾಯದೊಂದಿಗೆ ಜನರನ್ನು ರಂಜಿಸಿದವರು ಬಾಲಸುಬ್ರಮಣ್ಯಂ. ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಹಾಡುಗಳನ್ನು ಆಯ್ದುಕೊಂಡು ಬಂದು, ಒಂದು ಚೂರೂ ಸಮಯವನ್ನು ವ್ಯಯಿಸದೇ ಪ್ರೇಕ್ಷಕರಿಗೆ ತಮ್ಮ ಸಿರಿಕಂಠದ ಸವಿಯನ್ನು ಉಣಬಡಿಸಿದವರು ಎಸ್.ಪಿ.ಬಿ. ಅವರ ಧ್ವನಿ ಎಷ್ಟು ಆಳವಾಗಿದೆಯೆಂದರೆ ಈ ಮೂರ್ನಾಲ್ಕು ದಶಕಗಳಲ್ಲಿ ಅವರು ಬಹಳಷ್ಟು ಬೆಳೆದಿದ್ದಾರೆ ಎನಿಸಿತು. ತಮ್ಮ ಮೇಲೆ ವಿಶೇಷ ಪ್ರೀತಿಯನ್ನು ತೋರಿಸಿದ ಕನ್ನಡಿಗರನ್ನು ಘಳಿಗೆ-ಘಳಿಗೆಗೆ ನೆನೆಸಿಕೊಳ್ಳುತ್ತಿದ್ದ ಅವರು, ಎಷ್ಟೋ ಜನ ಹಿನ್ನೆಲೆ ಸಂಗೀತ ನಿರ್ದೇಶಕರನ್ನೂ ನಟ-ನಟಿಯರನ್ನೂ ಸ್ಮರಿಸಿದರು. ಜೊತೆಗೆ ಪ್ರತಿಯೊಂದು ಹಾಡಿಗೂ ತಮ್ಮ ವಿಶೇಷವಾದ ನಿರೂಪಣೆಯಿಂದ ರಂಜಿಸಿದರು. ಕನ್ನಡ ಹಿನ್ನೆಲೆಗಾಯನಕ್ಕೆ ಎಸ್.ಪಿ.ಬಿ. ಅವರ ಕೊಡುಗೆಯನ್ನು ನೆನೆದು ಇದೆ ಸಮಾರಂಭದಲ್ಲಿ ಅವರಿಗೆ 'ಸಂಗೀತ ಸೌರಭ' ಎಂಬ ಬಿರುದನ್ನು ಪ್ರದಾನ ಮಾಡಲಾಯಿತು.

***

ಕಾರ್ಯಕ್ರಮದ ಸುಧೀರ್ಘ ವಿವರವನ್ನು ಇಲ್ಲಿ ಕೊಡಲಾಗದಿದ್ದುದಕ್ಕೆ ಹಾಗೂ ಪ್ರತಿಯೊಂದು ಕಾರ್ಯಕ್ರಮವನ್ನೂ ಇಲ್ಲಿ ನಿಖರವಾಗಿ ವಿವರಿಸಲಾಗದಿದ್ದುದಕ್ಕೆ ಕ್ಷಮೆ ಇರಲಿ.

ನಾಳೆ ಮೂರನೇ ಹಾಗೂ ಕೊನೆಯ ಭಾಗವನ್ನು ಬರೆಯುವಾಗ ಅದರಲ್ಲಿ ನಾನು ನೋಡಿದ ಇತರ ಮುಖ್ಯ ಕಾರ್ಯಕ್ರಮಗಳ ಪರಿಚಯ ಮಾಡಿಕೊಡುವುದರೊಂದಿಗೆ ಮುಂದಿನ ಸಮ್ಮೇಳನ ಹೇಗಿರಬೇಕು, ನಾವು ಏನನ್ನು ಮಾಡಬಹುದು ಎಂಬುದರ ಬಗ್ಗೆ ಸೂಚ್ಯವಾಗಿ ಬರೆಯಲು ಪ್ರಯತ್ನಿಸುತ್ತೇನೆ. ನಾಳೆ ನಾನು ತೆಗೆದ ಒಂದಿಷ್ಟು ಚಿತ್ರಗಳ ಪೈಕಿ ಉತ್ತಮವಾದದ್ದನ್ನು ಆರಿಸಿ ಹಾಕುವುದರ ಜೊತೆಗೆ ನೀವು ಭೈರಪ್ಪನವರ ಕಾದಂಬರಿಗಳೆಲ್ಲವನ್ನೂ ಈವರೆಗೆ ಓದಿದ್ದರೆ ನಿಮ್ಮ ಓದು ಏಕೆ "ಅಪೂರ್ಣ"(ವಾಗಿದ್ದಿರಬಹುದು)ಎಂಬುದನ್ನೂ ತಿಳಿಸುತ್ತೇನೆ...ಕಾದು ನೋಡಿ!

Saturday, September 02, 2006

ವಿಶ್ವ ಕನ್ನಡ ಸಮ್ಮೇಳನ ೨೦೦೬ - ಭಾಗ ೧

ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಬೇಕು ಎನ್ನುವುದಕ್ಕೆ ಬುಧವಾರದಿಂದಲೇ ತಯಾರಿ ನಡೆಸಿದರೂ ಕೊನೆಯಲ್ಲಿ ತರಾತುರಿ ಆಗುವುದು ತಪ್ಪಲಿಲ್ಲ - ವಾರಕ್ಕಿಂತ ಮೊದಲೇ ಹವಾಮಾನ ವರದಿಗಳನ್ನು ನೋಡಿ ಈ ಬಾರಿ ಹೇಗಿರುತ್ತೋ ಎಂದುಕೊಂಡವನಿಗೆ ಅಕ್ಕ ಸಮ್ಮೇಳನಕ್ಕೂ-ಮಳೆಗೂ ಎಲ್ಲೋ ಹೊಂದಿಕೆಯಾದಂತೆ ಕಂಡುಬರುವಂತೆ ಎರಡು ವರ್ಷದ ಹಿಂದೆ ಆರ್‌ಲ್ಯಾಂಡೋದಲ್ಲಿ ಆದಷ್ಟು ಜೋರಾಗಿ ಅಲ್ಲದಿದ್ದರೂ ಈ ಸಾರಿ ಸಾಕಷ್ಟು ಬಿದ್ದ ವರ್ಷಧಾರೆ, ಈ ಲೇಬರ್ ಡೇ ವೀಕೆಂಡ್ ಪೂರ್ತಿ ಆಕಾಶವನ್ನು ಕವಚಿಕೊಂಡಿರೋ ಹಾಗೆ ಒಪ್ಪಂದ ಮಾಡಿಕೊಂಡಿರೋ ಹಾಗಿನ ಕಪ್ಪು ಮೋಡಗಳು ಇವೆಲ್ಲಾ ಸೇರಿಕೊಂಡು ಬೇಕಾದಷ್ಟು ತೊಂದರೆಗಳನ್ನು ತೂರಿಸುತ್ತಿದ್ದವು.

ಸಾವಿರಾರು ಜನ ಕನ್ನಡಿಗರನ್ನು ದೂರದಲ್ಲಿ ಒಮ್ಮೆಲೇ ನೋಡಿದರೆ ಏನನ್ನಿಸಬಹುದು? ನಾವು ಅಪರೂಪಕ್ಕೊಮ್ಮೆ ಎಲ್ಲಾದರೂ ಶಾಪ್ಪಿಂಗ್ ಮಾಡುತ್ತಿದ್ದಾಗ ಯಾರಾದರೂ ಕನ್ನಡ ಮಾತನಾಡುತ್ತಿದ್ದುದನ್ನು ಕೇಳಿದರೇ ನಮಗೆ ಎಷ್ಟೊಂದು ಖುಷಿಯಾಗುತ್ತದೆ, ಅಂತಹದರಲ್ಲಿ ಸಾವಿರಾರು ಜನರನ್ನು ಒಂದು ದೊಡ್ಡ ಕನ್‌ವೆನ್ಷನ್‌ನಲ್ಲಿ ನೋಡಿದಾಗ ಹಿಂದೆಂದೂ ಆಗಿರದ ಮಹಾನ್ ಅನುಭವವಾಗುತ್ತದೆ. ಅಲ್ಲಿ ಯಾರನ್ನು ನೋಡಿದರೂ 'ನಿಮಗೆ ಕನ್ನಡಾ ಬರುತ್ತಾ?' ಎಂದೇನೂ ಕೇಳಿಕೊಳ್ಳಬೇಕೆಂದೇನೂ ಇಲ್ಲ, ಯಾರ ಜೊತೆಯಲ್ಲಿ ಬೇಕಾದರೂ ಒಂದು ಮುಗುಳ್ನಗೆಯನ್ನು ಎಸೆದು ಮನಪೂರ್ತಿ ಕನ್ನಡವನ್ನು ಮಾತನಾಡಬಹುದು! ಅದರಲ್ಲೂ ನಮ್ಮ ಕನ್ನಡ ಜನರ ನಡೆ-ನುಡಿಗಳೇ ಚೆಂದ, ಉಳಿದೆಲ್ಲ ಭಾಷೆಗಳಲ್ಲಿ ಹೇಗಿವೆಯೋ ಯಾರಿಗೆ ಗೊತ್ತು, ನಮ್ಮ ಕನ್ನಡದ ಬಳಕೆಯಲ್ಲಂತೂ ಹಲವಾರು ಥರವಿದೆ, ಎರಡು ವರ್ಷಕ್ಕೊಮ್ಮೆ ಬರುವ ಈ ರೀತಿಯ ಸಮ್ಮೇಳನಗಳು ನನ್ನಂಥವರನ್ನು ನಮ್ಮ ನಾಡಿಗೆ ಸ್ವಲ್ಪ ಹತ್ತಿರ ಕೊಂಡೊಯ್ದಂತೆ ಕಂಡುಬರುತ್ತವೆ.

ಇದು ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನ. ನಾನು ೨೦೦೦ ದಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ಮೊದಲನೇ ಸಮ್ಮೇಳನಕ್ಕೆ ಹೋಗಿದ್ದನ್ನು ಬಿಟ್ಟರೆ ಇದು ನನಗೆ ಎರಡನೇ ಸಮ್ಮೇಳನ. ಡೆಟ್ರಾಯಿಟ್ ಸಮ್ಮೇಳನ ಸದ್ದಿಲ್ಲದೇ ಬಂದು ಹೋದಂತಾದರೂ ಅದರ ಬಗ್ಗೆ ಬಹಳ ಸುದ್ದಿಯನ್ನು ಅಲ್ಲಲ್ಲಿ ಓದಿದ್ದೆ. ಚಂಡಮಾರುತಕ್ಕೆ ಹೆದರಿಯೋ ಮತ್ಯಾವುದೋ ಕಾರಣಗಳಿಂದಾಗಿ ಆರ್‌ಲಾಂಡೋ ಸಮ್ಮೇಳನಕ್ಕೆ ಹೋಗಿರಲಾಗಲಿಲ್ಲ. I-95 ನಲ್ಲಿ ಯಾವತ್ತೂ ಹಾದು ಹೋಗುವ ಪುಟಾಣಿ ನಗರ ಬಾಲ್ಟಿಮೋರ್ ಇಂದು ಕನ್ನಡ ಸಮ್ಮೇಳನವನ್ನು ಅಯೋಜಿಸಿಕೊಳ್ಳುವುದರೊಂದಿಗೆ ದೊಡ್ಡದಾಗಿದೆ. ಸಮ್ಮೇಳನಕ್ಕೆ ಎಲ್ಲೆಲ್ಲಿಂದಲೋ ಬಂದ ಕನ್ನಡಿಗರನ್ನು ಸ್ವಾಗತಿಸಲು ನಗರವೇನೂ ಸಿದ್ಧವಾಗಿದ್ದಂತೆ ಕಂಡುಬಂದಿರಲಿಲ್ಲ, ಸುಮಾರು ಹೊತ್ತಿನಿಂದಲೂ ಜಿಟಿಪಿಟಿ ಸುರಿಯುತ್ತಿದ್ದ ಮಳೆಯಿಂದ ಬಿಡುಗಡೆಗೆ ಕಾದಿರುವಂತೆ ಕಂಡುಬಂತು. ಜೊತೆಗೆ ಕನ್ನಡದ ಕಂಪನ್ನು ಸ್ವಲ್ಪ ಜೋರಾಗೇ ಪಸರಿಸಿರಿ ಎಂದು ಹುಮ್ಮಸ್ಸು ಕೊಡುತ್ತಿರುವಂತೆ ಬೀಸುತ್ತಿದ್ದ ಗಾಳಿ ಬೇರೆ. ಹೀಗೆ ತೊಂದರೆ ಕೊಡುತ್ತಿದ್ದ ಮಳೆಯ ನಡುವೆ ಜನರು ಕನ್‍ವೆನ್‍ಷನ್ ಸೆಂಟರ್‌ಗೆ ದೌಡಾಯಿಸುತ್ತುರಿವುದು ಯಾವುದೋ ಕೋಟೆಯನ್ನು ರಕ್ಷಿಸುವ ಸೈನಿಕರ ಗುಂಪಿನಂತೆ ಕಂಡುಬಂತು.

ಮೆಟ್ಟುಲು ಏರಿ ಬರುತ್ತಿದ್ದಂತೆ ರಿಜಿಸ್ಟ್ರೇಷನ್ ಡೆಸ್ಕ್‌ಗಳನ್ನು ಅಮೇರಿಕೆಯ ರಾಜ್ಯಾವಾರು ವಿಂಗಡನೆ ಮಾಡಿ ಬಂದವರಿಗೆ ತಮ್ಮ ಹೆಸರಿನ ಬ್ಯಾಡ್ಜು, ಕೂಪನ್ನು, ಸ್ಮರಣ ಸಂಚಿಕೆ ಇತ್ಯಾದಿ ವಿವರಗಳಿದ್ದ ಒಂದು ಬ್ಯಾಗನ್ನು ಕೊಡುವುದು ಅಯೋಜಕರು ಪಟ್ಟ ಶ್ರಮವನ್ನು ಪ್ರತಿಬಿಂಬಿಸುತ್ತಿತ್ತು, ಈ ರೀತಿ ಮಾಡಿದ್ದು ಬಹಳ ಒಳ್ಳೆಯದಾಯಿತು. ನಾವು ಆರು ಘಂಟೆಯ ಹೊತ್ತಿಗೆ ಹೋಗುವಾಗ ಮುಖ್ಯವೇದಿಕೆಯಲ್ಲಿ ಕಾರ್ಯಕ್ರಮಗಳು ಅದಾಗಲೇ ಪ್ರಾರಂಭವಾಗಿದ್ದವು, ಮುಖ್ಯವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಎಡೆಯೂರಪ್ಪ, ಕವಿ ಚನ್ನವೀರಕಣವಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮುಂತಾದವರಾಗಲೇ ಉಪಸ್ಥಿತರಿದ್ದು, ಕೆಲವು ನಿಮಿಷಗಳಲ್ಲಿ ಸಮ್ಮೇಳನವನ್ನು ವೇದಿಕೆಯಲ್ಲಿನ ಮುಖ್ಯಸ್ಥರು ದೀಪ ಹಚ್ಚುವುದರ ಮೂಲಕ ಆರಂಭಿಸಲಾಯಿತು. ಮುಂದೆ ಎಡೆಯೂರಪ್ಪನವರು ಮಾತನಾಡಿದನಂತರ ಕರ್ನಾಟಕದಿಂದಲೇ ಕುಮಾರಸ್ವಾಮಿ ಅವರು ಶುಭ ಕೋರಿದ ವಿಡಿಯೋವನ್ನು ತೋರಿಸಲಾಯಿತು. ಅಷ್ಟೊತ್ತಿಗೆ ಆಗಲೇ ಊಟಕ್ಕೆ ತಡವಾಗಬಹುದು ಎಂದು ಯಾರೋ ಸೂಚಿಸಿದ್ದರಿಂದ ಊಟಕ್ಕೆ ಹೊರಟೆವು - ಆದರೆ ನಮಗೆ ಆಶ್ಚರ್ಯವಾಗುವಂತೆ ಕನ್‍ವೆನ್‍ಷನ್ ಸೆಂಟರ್‍ನಲ್ಲೇ ಊಟಕ್ಕೆ ವ್ವವಸ್ಥೆ ಮಾಡದೇ ಅಲ್ಲೇ ಹತ್ತಿರದ ವಿಂಡಮ್ ಹೋಟೇಲಿನಲ್ಲಿ ಊಟಕ್ಕೆ ವ್ವವಸ್ಥೆ ಮಾಡಿದ್ದಾರೆ ಎಂದು ಗೊತ್ತಾಯಿತು. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ಸಂಜೆ ಊಟಗಳಿಗೆ ಸಾವಿರಾರು ಜನ ಈ ಮಳೆಯಲ್ಲಿ ಅದು ಹೇಗೆ ಹೋಗಿ ಬರುತ್ತಾರೋ ಎಂದು ಖೇದವಾಯಿತು. ಮುಖ್ಯವಾಗಿ ನಾವು ಊಟಕ್ಕೆ ಹೋಗಿ ಬರಲು ಸುಮಾರು ೨ ಘಂಟೆಗಳಿಗೂ ಮೇಲ್ಪಟ್ಟು ಹಿಡಿಯಿತು - ದಿನದ ಕಾರ್ಯಕ್ರಮ ನಿಲ್ಲದೆ ನಡೆಯುತ್ತಿದ್ದಾರಿಂದ ಮೊದಲ ದಿನ ಹೆಚ್ಚು ಕಾರ್ಯಕ್ರಮಗಳನ್ನು ನೋಡಲಾಗಲಿಲ್ಲ. ಸುಮಾರು ಹತ್ತು ಘಂಟೆಯಿಂದ ಮಧ್ಯರಾತ್ರಿವರೆಗೆ ನೃತ್ಯ, ಹಾಗೂ ಸಂಗೀತ ಕಾರ್ಯಕ್ರಮಗಳಿದ್ದವು. ನಾವು ದಿನದ ಕಾರ್ಯಕ್ರಮದ ಕೊನೆವರೆಗೂ ಇದ್ದೆವು - ಕೊನೆಯಲ್ಲಿ ೭೦ ಹಾಗೂ ೮೦ ರ ದಶಕ ಸಿನಿಮಾ ಹಾಡುಗಳು ಪ್ರೇಕ್ಷರನ್ನು ರಂಜಿಸಿದವು. ದೊಡ್ಡ ಕನ್‌ವೆನ್‌ಷನ್ ಸೆಂಟರ್‌ನ ಹಾಲ್ ನಲ್ಲಿ ಎಲ್ಲಿ ಕುಳಿತರೂ ದೊಡ್ಡ ಪರದೆಯ ಮೇಲೆ ಕಾರ್ಯಕ್ರಮವನ್ನು ಸೈಮಲ್‌ಕ್ಯಾಸ್ಟ್ ಮಾಡುತ್ತಿದ್ದುರಿಂದ ಕಾರ್ಯಕ್ರಮವನ್ನು ನೋಡು/ಕೇಳುವಲ್ಲಿ ಯಾರಿಗೂ ಏನೂ ತೊಂದರೆ ಆದಂತಿರಲಿಲ್ಲ - ಕನ್‌ವೆನ್‌ಷನ್ ಹಾಲ್‌ನ ಆರ್ಕಿಟೆಕ್ಚರ್‌ನ್ನು ಹೊಗಳಿಬರೆಯುವುದಕ್ಕೆ ಒಂದು ಬರಹ ಸಾಲದು - ಬಹಳ ಭವ್ಯವಾಗಿದೆ.

ನನಗಂತೂ ಮೊದಲ ದಿನದ ಕಾರ್ಯಕ್ರಮಗಳು ಮುದ ನೀಡಿದವು. ಈ ರೀತಿಯ ಸಮ್ಮೇಳನ ಎಲ್ಲಿದ್ದರೂ ಹೋಗಬೇಕೆನ್ನುವ ಆಸೆ ಮತ್ತಷ್ಟು ಬಲವಾಯಿತು.

***

ನಮ್ಮ ಕನ್ನಡಿಗರ ಭಾಷೆ, ಭಾವ, ಮಾತು, ಮನಸ್ಸು, ಔದಾರ್ಯ ಇವುಗಳು ಬಹಳ ವಿಶೇಷವಾದದ್ದು. ದೂರದಿಂದ ಬಂದವರಿಗೆ ಸ್ಥಳೀಯರು ಸಹಾಯ ಮಾಡುತ್ತಿದ್ದುದು, ಎಲ್ಲರೂ ಎಲ್ಲರ ಜೊತೆಯಲ್ಲಿ ಕಲೆತು ಬೆರೆಯುತ್ತಿದ್ದುದು ನನಗಂತೂ ಹೊಸ ಉತ್ಸಾಹವನ್ನು ತುಂಬಿತು.