Tuesday, October 31, 2006

ನಮ್ಮ ಹಾಡು ನಮ್ಮದು!

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ ಪರಿಪಾಲಿಸೈ!


ಐವತ್ತು ವರ್ಷಗಳ ನಂತರವೂ 'ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ...' ಎನ್ನುವ ಈ ಹಾಡಿನ ಮೇಲಿನ ವಾಕ್ಯಗಳು ತಮ್ಮ ಸತ್ವವನ್ನೇನೂ ಕಳೆದುಕೊಂಡಂತೆನಿಸಿವುದಿಲ್ಲ. ಹುಯಿಲುಗೋಳರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು...' ಎಂಬುದು ಇಂದಿಗೂ ಪ್ರಚಲಿತದಲ್ಲಿರುವ ಮತ್ತೊಂದು ಗೀತೆಯೇ. ಹೀಗೆ ಎರಡು ಹಾಡುಗಳ ಮೇಲೆ ನಮ್ಮ ಪರಂಪರೆಯನ್ನು ಅಳೆದು ತೀರ್ಮಾನ ಮಾಡಲಾಗುವುದೇ ಎಂದು ಯಾರು ಬೇಕಾದರೂ ಹುಬ್ಬೇರಿಸಬಹುದು. ಆದರೆ ನನಗಂತೂ ನಾಡಿನ ಐಕ್ಯತೆಯಲ್ಲಿ ದಿನೇದಿನೇ ವಿಶ್ವಾಸ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚೇನೂ ಆಗುತ್ತಿಲ್ಲ.

ನಾವು ಈ ಹಿಂದಿನ ದಶಕಗಳನ್ನು ಒಂದು ಅರ್ಧ ಶತಮಾನವನ್ನು ಕಳೆದು ಬಂದಿದ್ದನ್ನು ಹಿಂತಿರುಗಿ ನೋಡಲೇ ಬೇಕು, ಅದರಿಂದ ಕಲಿಯುವುದಂತೂ ಬೇಕಾದಷ್ಟಿದೆ. ಅರ್ಧ ಶತಮಾನದ ಬಳಿಕವೂ 'ಕನ್ನಡವನ್ನು ಉಳಿಸಿ...' ಎಂದು ರಿಕ್ಷಾ, ಬಸ್ಸುಗಳ ಹಿಂದೆ ಬರೆಸಿಕೊಂಡು ಓಡಾಡುವ ಸ್ಥಿತಿಯಿಂದೆಂದೂ ಹೊರಬಂದಂತೆ ನಾವು ಕಾಣುವುದೇ ಇಲ್ಲ. ಒಂದು ಕಡೆ ಕಾಸರಗೋಡಿನಂತಹ ಪ್ರಾಂತ್ಯವನ್ನು ಕನ್ನಡನಾಡಿನ ಭಾಗವನ್ನಾಗಿ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಂಡಂತೆ ಬೆಳಗಾವಿ ಮತ್ತಿತರ ಗಡಿಪ್ರದೇಶಗಳು ಎಂದಿಗಿಂತ ಹೆಚ್ಚಿನ ಪ್ರಾಂತೀಯ ಅಸ್ಥಿರತೆಯಿಂದ ಒದ್ದಾಡುತ್ತಿವೆ, ನವೆಂಬರ್ ಒಂದರ ಏಕೀಕರಣ ದಿನವನ್ನು ಎಷ್ಟೋ ಕಡೆಗೆ ಕರಾಳದಿನವನ್ನಾಗಿ ಆಚರಿಸಲಾಗುತ್ತಿದೆ, ಕನ್ನಡತನವೆನ್ನುವುದು ಪ್ರಶ್ನಾರ್ಥಕವಾಗಿ ಹೋಗಿದೆ.

ಶಾಲೆಗಳಲ್ಲಿ ಕನ್ನಡವನ್ನು (ಮಾಧ್ಯಮವಾಗಿ)ಕಲಿಸಬೇಕೆ ಬಿಡಬೇಕೆ, ಇಂಗ್ಲೀಷ್ ಅನ್ನು ಯಾವ ವರ್ಷದಿಂದ ಭಾಷೆ ಹಾಗೂ ಮಾಧ್ಯಮವಾಗಿ ಆರಂಭಿಸಬೇಕು ಎನ್ನುವುದಕ್ಕೆ ನಾವಿನ್ನೂ ಉತ್ತರವನ್ನು ಕಂಡುಕೊಂಡಂತಿಲ್ಲ. ಒಂದು ಕಡೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಶಹರಗಳು ಬೆಳವಣಿಗೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದರೆ ಎಷ್ಟೋ ಹಳ್ಳಿಗಳಲ್ಲಿ ಸಾಕಷ್ಟು ಮೂಲಭೂತ ಅನುಕೂಲಗಳಿಲ್ಲದೇ ಇನ್ನೂ ಮುಖ್ಯವಾಹಿನಿಯಿಂದ ದೂರವೇ ಉಳಿದಿವೆ. ಕರ್ನಾಟಕದಲ್ಲೇ ಉತ್ತರ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ವ್ಯತ್ಯಾಸವಿರುವುದು ಬಲ್ಲವರ ಚಿಂತೆಗೆ ಮತ್ತೊಂದು ಕಾರಣ - ಹೀಗೆ ದೊಡ್ಡದಾಗುತ್ತಿರುವ ಕಂದಕ, ಅದರಲ್ಲೂ ಕರ್ನಾಟಕವೆಂದರೆ ಬೆಂಗಳೂರು ಎನ್ನುವ ಮನೋಭಾವನೆ ಹಲವಾರು ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿರ್ಮಿಸಿದೆ.

ರಾಜಕೀಯವಾಗಿಯೂ ಸಾಕಷ್ಟು ಸ್ಥಿರತೆಯನ್ನೇನೂ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಕಂಡಂತಿಲ್ಲ. ಭಿನ್ನ-ಭಿನ್ನ ಆಡಳಿತಗಳು, ಪಕ್ಷಗಳು-ನಾಯಕರ ಧೋರಣೆ, ಮುಂದಾಲೋಚನೆ ಹಾಗೂ ಪ್ರಗತಿಯ ದೃಷ್ಟಿಯಿಂದ ರಾಜ್ಯದ ಹಿತದೃಷ್ಟಿಯಿಂದ ಏನೇನು ಕಾರ್ಯಗಳು ಆಗಬೇಕಿತ್ತೋ ಅವುಗಳೆಲ್ಲವೂ ಅಸ್ಥಿರ ಆಡಳಿತ ವ್ಯವಸ್ಥೆಯಿಂದ ಸೊರಗಿವೆ. ಆಡಳಿತದಲ್ಲಿ ಹುಟ್ಟುವ ಅಸ್ಥಿರತೆ ರಾಜ್ಯದ ನಾಯಕರುಗಳಿಗೆ ತಮ್ಮ ಪಕ್ಷದ ಶಾರ್ಟ್ ಟರ್ಮ್ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿ ಕಂಡುಬರುತ್ತದೆಯೇ ವಿನಾ ದೆಹಲಿಯಲ್ಲಿ ಧ್ವನಿಯನ್ನು ಏರಿಸಿ ಮಾತನಾಡಿ ಕರ್ನಾಟಕದ ಒಳಿತನ್ನು ಸಾಧಿಸಿಕೊಳ್ಳುವುದಾಗಲೀ, ದೂರದೃಷ್ಟಿಯಿಂದ ಯೋಚಿಸಿ ಉತ್ತಮ ಯೋಜನೆಗಳನ್ನು ಸಿದ್ಧಪಡಿಸುವುದಾಗಲೀ ದೂರವೇ ಉಳಿಯುತ್ತದೆ.

ನಮ್ಮ ಹಾಡು ನಮ್ಮದು, ಆ ಹಾಡು ಐಕ್ಯಗಾನವಾಗಲಿ, ಆದರೆ ಕನ್ನಡವನ್ನು ಉಳಿಸಿಕೊಂಡು ಹೋಗುವುದೇ ನಮ್ಮ ಮುಖ್ಯ ಸಮಸ್ಯೆಯಾಗದಿರಲಿ. ಮುಂಬರುವ ದಿನಗಳಲ್ಲಿ ಈಗಾಗಲೇ ಬೇಕಾದಷ್ಟನ್ನು ತೆರೆದುಕೊಂಡಿರುವ ಕನ್ನಡಿಗರ ಔದಾರ್ಯವನ್ನು ಕೆಣಕುವ ಮತ್ಯಾವ ಘಟನೆಗಳೂ ಘಟಿಸದಿರಲಿ. ಹಳೆಯದನ್ನು ಐತಿಹಾಸಿಕವಾಗಿ ನೋಡಿ ಮುಂದುವರಿದು, ನಾವು ಎಡವಿದಲ್ಲೆಲ್ಲ ಪಾಠವನ್ನು ಕಲಿತು ಪ್ರಗತಿಯ ಕಡೆಗೆ ಸಾಗುವ ಕೆಚ್ಚೆದೆ ನಮಗೆ ಬರಲಿ. ದೇಶದಲ್ಲಿ ಕರ್ನಾಟಕ ಮತ್ತೆ ಮೊದಲಿನದಾಗಲಿ. ಕನ್ನಡ ನಮ್ಮ ಶಕ್ತಿಯಾಗಲಿ.

***

ರಾಜ್ಯೋತ್ಸದ ಶುಭಾಶಯಗಳು.

No comments: