Sunday, October 29, 2006

ಓದಿ, ಬರೆದು, ಮಾತನಾಡುವ ಅನಿವಾರ್ಯತೆ

ಯಾವುದೇ ಒಂದು ಹವ್ಯಾಸ ಬೆಳೆಯೋದಕ್ಕೆ ಕೊನೆಪಕ್ಷ ಏನಿಲ್ಲವೆಂದರೂ ಇಪ್ಪತ್ತೊಂದು ದಿನಗಳು ಬೇಕಾಗುತ್ತವಂತೆ, ಹೀಗೆ ದಿನಾಲು ಬರೆಯಬೇಕು ಎನ್ನೋದು ನನಗೂ ಒಂದು ಹವ್ಯಾಸವಾಗಿ ಬೆಳೆಯಬೇಕಾದರೆ ನನಗಂತೂ ತಿಂಗಳುಗಳೇ ಬೇಕಾದವು. ನಾಗಾಲೋಟದಲ್ಲಿ ಓಡೋ ಮನಸ್ಸು ಒಂದುಕಡೆ, ನಿಧಾನವಾಗಿ ಓಡೋ ಕೈ ಬೆರಳುಗಳು ಮತ್ತೊಂದು ಕಡೆ; ನಮ್ಮ ಸುತ್ತಲೂ ಇಂಗ್ಲೀಷ್‌ಮಯವಾಗಿರೋದು ಒಂದುಕಡೆ, ಇರೋ ಒಂದಿಷ್ಟು ಕನ್ನಡ ಪದಗಳೂ ನಿಧಾನವಾಗಿ ಆವಿಯಾಗ್ತಾ ಇರೋ ಸಂಕಟ ಮತ್ತೊಂದು ಕಡೆ. ಹೀಗೆ ಹಲವಾರು ವ್ಯತ್ಯಾಸಗಳ ನಡುವೆಯೂ ಇಷ್ಟೊಂದು ದಿನ ಏನಾದರೊಂದು ಬರೆದದ್ದಾಯಿತು ಎಂದು ಒಂದಿಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡರೆ ಯೋಚನೆಗಳು ಯಾಚನೆಗಳಾಗಿ ಕಾಡತೊಡಗಿದವು. ಮನಸ್ಸಿಗೆ ಅನ್ನಿಸಿದ್ದನ್ನು ಎಷ್ಟು ನಿಧಾನವಾಗಿಯಾದರೂ ಆಗಲಿ, ಎಷ್ಟು ತಡವಾಗಿಯಾದರೂ ಆಗಲಿ ಬರೆದೇ ತೀರಬೇಕು ಎಂದು ಹಟ ತೊಟ್ಟಿರುವವರಲ್ಲಿ ನಾನೂ ಒಬ್ಬ. ಒಂದು ರೀತಿ ಹೊರಗಿನ ಆಗುಹೋಗುಗಳಿಗೆ ಪ್ರತಿಯೊಬ್ಬರೂ ಸ್ಪಂದಿಸುತ್ತಾರೆ, ನನ್ನ ಸ್ಪಂದನ ಈ ರೀತಿ ಬರಹದ ಮೂಲಕವಾದರೂ ಇರಲಿ ಎನ್ನೋದು ದೂರದಾಸೆ.

ಇತ್ತೀಚೆಗಂತೂ ನನ್ನೊಳಗೆ ಇನ್ನೊಂದು ರೀತಿಯ ಗೊಣಗಾಟ ಆರಂಭವಾಗಿದೆ - ಯಾರೇ ಕನ್ನಡಿಗರು ಸಿಕ್ಕರೂ ನಮ್ಮ ನಡುವಿನ ಸಂಭಾಷಣೆ ಹೆಚ್ಚೂ ಕಡಿಮೆ ಇಂಗ್ಲೀಷಿನಲ್ಲೇ ನಡೆಯೋದು. ಇದನ್ನು ಸ್ವಲ್ಪ ಬಿಡಿಸಿ ನೋಡಿದಾಗ ಎರಡು ಅಂಶಗಳು ಸ್ಪಷ್ಟವಾದವು: ಒಂದು, ನನಗೆ ದೊರೆಯುವ ಕನ್ನಡಿಗರು ನನ್ನ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಲಾರದವರು, ಮತ್ತಿನ್ನೊಂದಿಷ್ಟು ಮಂದಿ ಹೇಳೋದಕ್ಕೆ ಮಾತ್ರ ಕನ್ನಡಿಗರು, ಮಿಕ್ಕೆಲ್ಲದಕ್ಕೂ ಇಂಗ್ಲೀಷನ್ನೇ ಆಧರಿಕೊಂಡಿರುವವರು. ಎಲ್ಲೋ ಅಪರೂಪಕ್ಕೆ ಸಭ್ಯ ಕನ್ನಡಿಗರು ಸಿಗುತ್ತಾರೆಂದರೆ ಅಂದು ಒಂದು ರೀತಿಯ ಹಬ್ಬದೂಟವಿದ್ದ ಹಾಗೆ, ಆ ರೀತಿಯ ಅವಕಾಶಗಳು ಬರೋದು ಕಡಿಮೆ, ಬಂದಾಗಲೆಲ್ಲ ಮನಬಿಚ್ಚಿ ಘಂಟೆಗಟ್ಟಲೆ ಹರಟಿ, ಕಥೆ ಹೊಡೆದದ್ದು ಇದ್ದೇ ಇದೆ. ನಾವು ಇಲ್ಲಿಗೆ ಬಂದು ಎಷ್ಟೇ ಕನ್ನಡ ಸಂಘಗಳನ್ನು ಯಾವುಯಾವುದೋ ಕಾರಣಗಳಿಗಾಗಿ ಕಟ್ಟಿಕೊಂಡರೂ, ಒಂದು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕನ್ನಡದಲ್ಲೇ ನಡೆಸಿಕೊಡಲಾಗದವರು, ಒಂದು ವೇಳೆ ಹಾಗೇನಾದರೂ ಪ್ರಯತ್ನಿಸಿದರೂ ನಮ್ಮ ಮಾತುಗಳಲ್ಲಿ ಇಂಗ್ಲೀಷ್ ಪದಗಳು ನುಸುಳಿಯೋ ಅಥವಾ ಪೂರ್ಣ ವಾಕ್ಯವೇ ಇಂಗ್ಲೀಷಿನಲ್ಲಿರುವುದೇ ಸಹಜವಾಗುತ್ತೆ. ಒಮ್ಮೊಮ್ಮೆ ಹೀಗೆ ಆಗುವುದು, ಆಗುತ್ತಿರುವುದು ಸರಿಯಲ್ಲವೇ ಎಂದು ಯೋಚಿಸುತ್ತೇನೆ - ಉದಾಹರಣೆಗೆ ಐವತ್ತು ವರ್ಷಗಳ ಹಿಂದೆ ಕನ್ನಡವನ್ನು ಮಾತನಾಡುತ್ತಿದ್ದವರು, ಬರೆಯುತ್ತಿದ್ದವರು ತಮ್ಮ ಮಾತು/ಬರವಣಿಗೆಗಳಲ್ಲಿ ಸಂಸ್ಕೃತದ ಪದಗಳನ್ನು ಧಾರಾಳವಾಗಿ ಬಳಸುತ್ತಿರಲಿಲ್ಲವೇ? ಆಗ ಬಳಸುತ್ತಿದ್ದ ಸಂಸ್ಕೃತ ಪದಗಳಿಗೆ ಇಂದು ನಾವು ಇಂಗ್ಲೀಷ್ ಪದಗಳನ್ನು ಬಳಸಿದರೆ ತಪ್ಪೇನು? 'ನಮ್ಮ ಕಂಪ್ಯೂಟರ್ ಕೆಟ್ಟು ಹೋಗಿದೆ' ಎನ್ನುವ ವಾಕ್ಯವನ್ನು 'ನಮ್ಮ ಗಣಕಯಂತ್ರ ಕೆಟ್ಟುಹೋಗಿದೆ' ಎಂದೂ ಹೇಳಬಹುದು ಆದರೆ ಮೊದಲಿನ ವಾಕ್ಯ ಹೆಚ್ಚು ಜನರಿಗೆ ಅರ್ಥವಾಗುವುದರ ಜೊತೆಗೆ ಮೊದಲಿನ ವಾಕ್ಯದಲ್ಲಿ ಬಳಸುವ 'ಗಣಕಯಂತ್ರ' ಪದದ ಬಳಕೆ ಅಸಹಜ ಎನ್ನಿಸೋದಿಲ್ಲ. ಹಿಂದೆಲ್ಲಾ ಕೊಂಬುಕೊಟ್ಟು ಕನ್ನಡಕ್ಕೆ ತರುತ್ತಿದ್ದ ಪದಗಳನ್ನು (ಉದಾಹರಣೆಗೆ: ಬಸ್ - ಬಸ್ಸು, ಟೇಬಲ್ - ಟೇಬಲ್ಲು, ಚೇರ್ - ಚೇರು, ಇತ್ಯಾದಿ) ಯಥೇಚ್ಛವಾಗಿ ಬಳಸುತ್ತಿದ್ದ ಕಾಲದಲ್ಲಿ ಎಷ್ಟೇ ಪ್ರತಿರೋಧವಿದ್ದರೂ ಅದನ್ನು ತಡೆಯಲಾಗಲಿಲ್ಲ, ಬಂಡಿ, ಮೇಜು, ಕುರ್ಚಿ ಮೊದಲಾದ ಪದಗಳ ಬಳಕೆ ನಿಧಾನವಾಗಿ ಮರೆಯಾಗುತ್ತಿದೆ, ಅವುಗಳ ಸ್ಥಳದಲ್ಲಿ ಅನ್ಯದೇಶೀಯ ಪದಗಳು ಆಕ್ರಮಿಸಿಕೊಳ್ಳುತ್ತಿವೆ ಎಂದು ಸುಲಭವಾಗಿ ಹೇಳಬಹುದಾದರೂ, ಈ ಬಗೆಗೆ ನಿರ್ಧಾರಪೂರ್ವಕವಾಗಿ ಹೇಳಲು ಭಾಷಾತಜ್ಞರನ್ನೇ ಆದರಿಸಬೇಕಾದೀತು.

ಮಾತಿನ ಬಗೆಗೆ ಹೇಳುವ ಹೊತ್ತಿಗೆ ಬರವಣಿಗೆ ಹಾಗೂ ಓದಿನ ಬಗ್ಗೆ ಹೇಳದಿದ್ದರೆ ಹೇಗೆ? ನನ್ನ ಹಾಗೆ ಕಂಪ್ಯೂಟರ್ ಬಳಸಿ ಕನ್ನಡವನ್ನು ಬರೆದು ಓದಬಲ್ಲವರದೆಲ್ಲಾ ಒಂದೇ ಹಾಡು - ಬರವಣಿಗೆ ನಿಧಾನ, ಅದರ ಜೊತೆಗೆ ಓದುವುದಕ್ಕೆ ಸಿಗುವ ವಸ್ತುಗಳೂ ಅತಿಕಡಿಮೆಯೇ. ಹಾಸ್ಯವಾಗಲೀ, ಗಂಭೀರ ವಿಷಯಗಳಾಗಲೀ ಯಾವುದನ್ನು ತೆಗೆದುಕೊಂಡರೂ ಅಂತರ್ಜಾಲದಲ್ಲಿ ಸಿಗುವ ವಸ್ತುಗಳು ಕಡಿಮೆಯೇ ಎನ್ನಬೇಕು. ಹಿಂದೆಲ್ಲಾ ಬಿಡುವಿನಲ್ಲಿ ಓದುತ್ತಿದ್ದ ಪುಸ್ತಕ, ಪತ್ರಿಕೆಗಳು ಇಂದು ಕೆಲಸದ ಮಧ್ಯೆಯೇ ತಮ್ಮನ್ನು ಓದಿಸಿಕೊಂಡುಹೋಗುತ್ತವೆ. ಓದುಗರ ಅಟೆಂಷನ್ ಸ್ಪ್ಯಾನ್ ಕಡಿಮೆ, ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚನ್ನು ಓದುವ ಕಾರ್ಯತತ್ಪರತೆ ಎಲ್ಲರದೂ. ಹಲವಾರು ಸಂಸ್ಥೆಗಳು ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಪ್ರಕಟಿಸುವ ಮಹಾಕಾರ್ಯವನ್ನು ಮಾಡುತ್ತಿದ್ದರೂ ಪುಸ್ತಕ/ಪೇಪರ್ ಮಾಧ್ಯಮದಲ್ಲಿ ಓದುತ್ತಿರುವ ಸಂವೇದಿಸುತ್ತಿರುವ ಕನ್ನಡಿಗರಿಗೂ ಕೇವಲ ಕಂಪ್ಯೂಟರ್‌ನಲ್ಲಿ ಮಾತ್ರ ಕನ್ನಡವನ್ನು ಓದುವ ನನ್ನಂಥವರಿಗೂ ನಡುವೆ ದೊಡ್ಡ ಕಂದಕವೇ ಇದೆ. 'ದೂರದಲ್ಲಿರೋ ನಿಮಗ್ಗೊತ್ತಾಗಲ್ಲ' ಅನ್ನೋದು ನಾನು ಒಡನಾಡುವ ಪೇಪರ್/ಪುಸ್ತಕ ಓದುಗರ ಅಂಬೋಣ, ಅವರಿಗೆಲ್ಲ ನನ್ನಂತಹ ಓದುಗರು ಹೈಟೆಕ್ ಓದುಗರಾಗಿ ಕಂಡುಬರುತ್ತಾರೆಯೇ ವಿನಾ ಹೆಚ್ಚು ಆಳವನ್ನು ಶೋಧಿಸುವವರಾಗಿಯಾಗಲೀ, ವಿಷಯಗಳಿಗೆ ಒತ್ತುಕೊಟ್ಟು ನೋಡುವವರಾಗಿಯಾಗಲೀ ಖಂಡಿತವಾಗಿ ಕಂಡುಬರೋದಿಲ್ಲ. ಅಲ್ಲಿಯ ಮಾಧ್ಯಮಗಳು ಒಂದೇ ಹಗುರವಾಗಿ ಕಂಡೋ ಅಥವಾ ಅಲ್ಲಿ ಪ್ರಕಟವಾದ ವರದಿಗಳು ನಮ್ಮ ಎತ್ತರಕ್ಕೆ ನಿಲುಕದವುಗಳು ಎಂದುಕೊಂಡೋ ಸುಮ್ಮನಿದ್ದರೆ, ಇಲ್ಲಿನ ಆಗುಹೋಗುಗಳಿಗೆ, ಸಂವೇದನಗಳಿಗೆ ಕನ್ನಡೇತರ ಮಾಧ್ಯಮಗಳಿಗೆ ಶರಣುಹೋಗುವುದು ಅನಿವಾರ್ಯವಾಗುತ್ತದೆ. ಹೀಗೆ ಕನ್ನಡೇತರ ಮಾಧ್ಯಮಗಳ ಸಾಂಗತ್ಯದಲ್ಲಿ ಹುಟ್ಟುವ ನಮ್ಮ ಆಲೋಚನೆಗಳನ್ನು ಕನ್ನಡದಲ್ಲಿ ಬರೆದುಕೊಂಡು ಹೋಗುವುದಕ್ಕೆ ತಿಣುಕಾಡಬೇಕಾಗುತ್ತದೆ.

ಓದು, ಓದಿನ ವೇಗ, ಬರವಣಿಗೆ, ಬರೆಯುವ ಶೈಲಿ ಇವುಗಳು ಕಾಲಕ್ರಮೇಣ ಬದಲಾಗುವಂತೆ, ಒಂದು ಭಾಷೆಯನ್ನು ಬಹಳ ದಿನ/ವರ್ಷಗಳ ಆಡದೇ ಹೋದರೆ ಪದಸಂಪತ್ತಿನ ದೃಷ್ಟಿಯಿಂದ ಮರೆಯಾಗಿಹೋಗಬಹುದು. ಬೇರೆ ಯಾರಾದರೂ ಮಾತನಾಡಿದಾಗ ಆಯಾ ಪದಗಳು ನಮ್ಮ ಮನಸ್ಸಿನಲ್ಲಿ ಮರುಕಳಿಸಿದರೂ ನಾವು ಅವೇ ಪದಗಳನ್ನು ಬಳಸಿ ಹೊಸ ವಾಕ್ಯಗಳನ್ನು ಸಂಭಾಷಣೆಯ ಅಂಗವಾಗಿ ಹೊಸದಾಗಿ ಹುಟ್ಟಿಸಬೇಕಾದಲ್ಲಿ ಕಷ್ಟಪಡಬೇಕಾಗುತ್ತದೆ. ಈ ರೀತಿಯ ಹಲವಾರು ವರ್ಷಗಳ ಭಾಷಾ ಬವಣೆಯೇ ಹೊರನಾಡ ಕನ್ನಡಿಗರು ಕನ್ನಡವನ್ನು ಹೆಚ್ಚು ಹೆಚ್ಚು ತಮ್ಮ ಮಾತಿನಲ್ಲಿ ಬಳಸದಿರುವಂತೆ ಮಾಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ವಿದೇಶಕ್ಕೆ ಹೋಗಿ ಇಪ್ಪತ್ತು ವರ್ಷ ಕಳೆದವರೆಲ್ಲ ಬರೀ ಹಮ್ಮು-ಬಿಮ್ಮು ಎಂಬ ಕಾರಣಕ್ಕೆ ಮಾತಿನುದ್ದಕ್ಕೂ ಇಂಗ್ಲೀಷನ್ನೇ ಮಾತನಾಡಲಾರರು, ಹಾಗೆ ಮಾತನಾಡುವುದು ವರ್ಷಾನುಗಟ್ಟಲೆ ಹಾಗೆ ಮಾಡಿದ ಅವರಿಗೆ ಸಹಜ, ಅದು ಬೇರೊಂದು ನೆಲೆಗಟ್ಟಿನಿಂದ ನಿಂತು ನೋಡಿದಾಗ ಕೃತಕವಾಗಿ ಕಂಡುಬರಬಹುದು. ನಮ್ಮತನವನ್ನು ನಾವು ಉಳಿಸಿ, ಬೆಳೆಸಿ, ರೂಢಿಸಿಕೊಂಡು ಹೋಗುವಲ್ಲಿ ಸ್ವಲ್ಪ ಮೊಂಡುತನ ಹಾಗೂ ನಮ್ಮದು ಎನ್ನುವ ಭಾವೋದ್ವೇಗ ಅನಿವಾರ್ಯ, ನಮಗೂ ನಮ್ಮ ಭಾಷೆಗೂ ಒಂದು ರೀತಿಯ ಸಂಬಂಧ ಬೆಳೆದರೆ ಮಾತ್ರ ನಮ್ಮ ಭಾಷೆ ನಮ್ಮಲ್ಲಿ ಉಳಿಯುತ್ತದೆಯೇ ವಿನಾ ಹೋದಲ್ಲಿ ಬಂದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೆರೆದುಕೊಂಡು ಅಲ್ಲಿಯವರೊಳಗೊಂದಾಗಿ ಹೋಗುತ್ತೇವೆ ಎಂದುಕೊಂಡವರಲ್ಲಿ ಭಾಷೆ ಉಳಿಯುವುದು ಕಡಿಮೆ.

ಇತ್ತೀಚೆಗೆ ಡಿ. ಆರ್. ನಾಗರಾಜ್ ಅವರ ಬರಹಗಳಿಂದ ಪ್ರಭಾವಿತನಾದ ನಾನು ಹಲವಾರು ಕೃತಿಗಳನ್ನು ಓದಿ, ಒಂದು ಉತ್ತಮ ಲೇಖನವನ್ನು ಬರೆಯುವುದು ಎಷ್ಟು ಕಷ್ಟ ಎಂಬುದನ್ನು ಅರಿತುಕೊಂಡಿದ್ದೇನೆ. ತಾವು ಓದಿದ ಪ್ರತಿಯೊಂದು ಕೃತಿಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುವುದೂ ಅಲ್ಲದೇ ಮುಂದೆ ತಾವು ಓದಿ, ಅದರ ಬಗ್ಗೆ ಬರೆಯುತ್ತಿರುವಾಗ ಪರಾಮರ್ಶೆಯ ರೂಪದಲ್ಲೋ ಅಥವಾ ತುಲನಾತ್ಮಕವಾಗಿಯೋ ಇತರ ಕೃತಿ-ಕರ್ತೃಗಳನ್ನು ನೆನೆದು ಅವುಗಳನ್ನು ಅಲ್ಲಲ್ಲಿ ಗುರುತಿಸಿಕೊಳ್ಳುವುದು ವಿಶ್ವವಿದ್ಯಾನಿಲಯದ ಪ್ರಾಂಗಣದಲ್ಲಿ ಮಾಮೂಲಿಯಾಗಿ ಕಂಡುಬರಬಹುದು, ಆದರೆ ನನ್ನಂತಹ ಸಾಮಾನ್ಯ ಓದುಗರಿಗೆ ಬಹಳ ಹೆಚ್ಚಿನದಾಗುತ್ತದೆ. ಇಂತಹ ಪ್ರೌಢ ಪ್ರಬಂಧಗಳು ಹೆಚ್ಚು ಹೆಚ್ಚು ಬಂದಲ್ಲಿ, ಅವುಗಳನ್ನು ವಿವರವಾಗಿ ಓದಿ, ಅವುಗಳಲ್ಲಿ ಹುದುಗಿರುವ ಪರಾಮರ್ಶೆಗಳನ್ನು ಹುಡುಕಿ ತೆಗೆದು ಪುಟಗಳನ್ನು ತಿರುವಿಹಾಕಿದಲ್ಲಿ ಅಂತಹ ಪ್ರಯತ್ನ ಬಹಳ ಹೆಚ್ಚಿನ ಮೌಲ್ಯವನ್ನು ದೊರಕಿಸಿಕೊಡುವುದರಲ್ಲಿ ಯಾವುದೇ ಸಂಶಯವಂತೂ ಇಲ್ಲ. ಹೀಗೆ ಹೆಚ್ಚು ಪ್ರೌಢ ಪ್ರಬಂಧಗಳನ್ನಾಗಲೀ, ಬರಹಗಳನ್ನಾಗಲೀ ಹುಡುಕಿಕೊಂಡಲೆಯುವ ನನ್ನಂತಹವರಿಗೆ ಅಂತರ್ಜಾಲದಲ್ಲಿ ಸಾಕಷ್ಟು ಅಡೆತಡೆಗಳು ಹುಟ್ಟಿಬರುತ್ತವೆ. ಇವುಗಳನ್ನೆಲ್ಲ ಮೀರಿ ಓದುಗರ ಒಂದು ಗುಂಪೋ, ಅಥವಾ ಇಂತಹ ಸಮಾನ ಮನಸ್ಕರ ಜೊತೆಗೆ ಬೆರೆಯೋಣವೆಂದರೆ ಅಲ್ಲೂ ತೊಂದರೆಗಳು ಹಲವಾರು.

ಈ ರೀತಿಯ ಓದು ಕನ್ನಡಕ್ಕೇ ಸ್ಥೀಮಿತವಾಗಬೇಕೆಂದೇನೂ ಇಲ್ಲ, ಆದರೆ ಕನ್ನಡದಲ್ಲಿ ಓದಿ, ಬರೆದು ಮಾತನಾಡಿದಾಗ ಸಿಗುವ ಖುಷಿ ನನಗಂತೂ ಬೇರೆ ಇನ್ಯಾವ ಭಾಷೆಯಲ್ಲೂ ದೊರೆಯದಾದ್ದರಿಂದ ನನ್ನ ಓದು ಅಥವಾ ಅದರ ಮಿತಿ ಹೆಚ್ಚು ಹೆಚ್ಚು ಕನ್ನಡದ ಸುತ್ತಲೇ ಗಿರಿಕಿ ಹೊಡೆಯತೊಡಗುತ್ತದೆ, ಬೇಡವೆಂದರೂ ಸುತ್ತಲಿನಲ್ಲಿ ನನ್ನ ಕಿವಿ-ಕಣ್ಣುಗಳನ್ನು ತುಂಬುವ ಇಂಗ್ಲೀಷು ಅದರಷ್ಟಕ್ಕೆ ಅದು ಮಾಹಿತಿಯನ್ನೊದಗಿಸುವ ಕೆಲಸವನ್ನು ಮಾಡುತ್ತಲೇ ಇರುವುದು ದಿನನಿತ್ಯದ ಭಾಗವಾಗಿ ಹೋಗಿಬಿಟ್ಟಿದೆ.

No comments: