Sunday, September 10, 2006

ಕಟ್ಟಡಗಳು ಕುಸಿದು ಇಂದಿಗೆ ಐದು ವರ್ಷಗಳು ಸಂದವು

ಸೆಪ್ಟೆಂಬರ್ ೧೧, ೨೦೦೧ ನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡವರಿಗೆ ಅಬ್ಬಾ ಐದು ವರ್ಷಗಳು ಕಳೆದೇ ಹೋಯಿತೇ ಎಂದೆನಿಸಿರಲಿಕ್ಕೂ ಸಾಕು. ಈ ಐದು ವರ್ಷಗಳಲ್ಲಿ ಏನೇನೆಲ್ಲಾ ಆಗಿದೆ, ಎಷ್ಟೋ ಜನರ ಮನಸ್ಥಿತಿಗಳಲ್ಲಿ ಭಯೋತ್ಪಾದನೆ, ಯುದ್ಧದ ಭೀತಿ ಇನ್ನೂ ಹಸಿಹಸಿಯಾಗಿಯೇ ಇರುವಂತೆ, ಎಷ್ಟೋ ದೇಶಗಳ ವಿದೇಶಾಂಗ ಇಲಾಖೆಗಳು ಬಹಳಷ್ಟು ದುಡಿದು ಬದಲಾದ ಫಾರಿನ್ ಪಾಲಿಸಿಗಳನ್ನು ಮನದಟ್ಟು ಮಾಡಿಕೊಂಡಿವೆ.

೨೦೦೧ ರ ಸೆಪ್ಟೆಂಬರ್ ಹನ್ನೊಂದೂ ಒಂದು ಶುಭ್ರವಾದ ದಿನವಾಗಿತ್ತು. ಸಾಮಾನ್ಯವಾಗಿ ಈ ದಿನಗಳಲ್ಲಿ ಫಾಲ್ ಅನ್ನು ನೆನಪಿಸುವ ತಂಪು ಹವೆ ಬೆಳಗಿನ ಹೊತ್ತು ಇದ್ದರೂ ಅಂದು ಪಿಕ್ಚರ್ ಫರ್‌ಫೆಕ್ಟ್ ದಿನವಾಗಿತ್ತು, ಶುಭ್ರವಾದ ಬೆಳಗಿನಲ್ಲಿ ಎಷ್ಟೋ ಜನ ಅವರವರ ಕೆಲಸವನ್ನು ಅದಾಗಲೇ ಶುರು ಹಚ್ಚಿಕೊಂಡು ತಾವು ಹೀರಿದ ಕಾಫಿ ಅಥವಾ ತಾವು ಓದಿದ ನ್ಯೂಸ್ ಪೇಪರಿನ ಗುಂಗಿನಲ್ಲಿದ್ದರು. ಪುಣ್ಯಕ್ಕೆ ನಾನಂತೂ ಅಂದು ನ್ಯೂ ಯಾರ್ಕ್ ನಲ್ಲಿರಲಿಲ್ಲ, ಆಗ ನಾನು ಪೆಂಟಗನ್‌ಗೆ ಒಂದೈದು ಮೈಲು ದೂರದಲ್ಲಿರುವ ಆರ್ಲಿಂಗ್‌ಟನ್ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲ ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ್ದನ್ನು ಏನೋ ಅಫಘಾತ ಸಂಭವಿಸಿದೆ ಎಂದುಕೊಂಡು ಕೆಲಸವನ್ನು ಮುಂದುವರಿಸಿಕೊಂಡಿದ್ದವರಲ್ಲಿ ನಾನೂ ಒಬ್ಬ, ಆದರೆ ಕೆಲವೇ ನಿಮಿಷಗಳಲ್ಲಿ ನಾವಿದ್ದ ಹತ್ತನೇ ಮಹಡಿಯಿಂದ ಕಾಣಿಸುವಂತೆ ಯಾವಾಗ ಪೆಂಟಗನ್‌ನಿಂದ ದೊಡ್ಡದಾಗಿ ಹೊಗೆ ಕಾಣಿಸಿಕೊಂಡಿತೋ ಆಗ ಎಲ್ಲರ ಮನದಲ್ಲೂ ಒಂದು ರೀತಿ ಭೀತಿ ಸುಳಿದಾಡಿತ್ತು. ಇದ್ದ ಕೆಲಸಗಳನ್ನು ಇದ್ದಲ್ಲೇ ಬಿಟ್ಟು ಆಫೀಸ್ ಗರಾಜಿನಿಂದ ಕಾರ್ ತೆಗೆದು ಮನೆಯ ಕಡೆ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ವಾಷಿಂಗ್‍ಟನ್ ಬುಲವರ್ಡನ್ನು ಮುಚ್ಚಿ ಬಿಟ್ಟರು, ಬೇರೆ ಗತಿಯಿಲ್ಲದೇ ವಿಲ್ಸನ್ ಬುಲವರ್ಡ್ ಹತ್ತಿ ಕೇವಲ ಏಳು ಮೈಲು ದೂರದ ಮನೆಯನ್ನು ಸೇರುವಾಗ ಸುಮಾರು ನಾಲ್ಕು ಘಂಟೆಗಳಿಗಿಂತ ಹೆಚ್ಚು ಬೇಕಾಗಿತ್ತು. ಅಷ್ಟೊತ್ತಿಗಾಗಲೇ ಎಲ್ಲ ಕಡೆ ಅಲ್ಲೋಲ ಕಲ್ಲೋಲ ಆರಂಭವಾಗಿತ್ತು. ನಾನು ಇನ್ನೂ ಆಫೀಸಿನಿಂದ ಮನೆಗೆ ಬಂದಿದ್ದೇನೆಯೋ ಇಲ್ಲವೋ ಎಂದು ಒಂದಿಷ್ಟು ಸ್ನೇಹಿತರು ಮನೆಗೆ ಫೋನ್ ಮಾಡಿದ್ದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚಾಗಿತ್ತು. ಮನೆಗೆ ಬಂದು ಇನ್ನೇನು ಟಿವಿಗೆ ಮುಖ ಹಚ್ಚಿ ಏನೇನಾಗಿದೆ ಎಂದು ನೋಡುವಷ್ಟರಲ್ಲಿ ಭಾರತದಿಂದ ಕರೆಗಳು ಬರತೊಡಗಿದವು. ಎಲ್ಲರ ಧ್ವನಿಯಲ್ಲೂ ಆತಂಕ, ಎಲ್ಲರಿಗೂ ನಾವು ಸುರಕ್ಷಿತರಾಗಿದ್ದೇವೆ ಎಂದು ಸಮಾಧಾನ ಮಾಡುವುದೇ ನಮಗೊಂದು ಕೆಲಸವಾಗಿತ್ತು.

ಕೆಲವೇ ನಿಮಿಷಗಳಲ್ಲಿ ಆಗಬಹುದಾದುದೆಲ್ಲವೂ ಆಗಿ ಹೋಗಿತ್ತು. ಸ್ಥಳೀಯ ರಕ್ಷಣಾ ಪಡೆಯವರು ಎಚ್ಚೆತ್ತುಕೊಳ್ಳುವುದರೊಳಗೆ, ಹಾರಾಡುವ ಎಲ್ಲ ವಿಮಾನಗಳನ್ನು ಅನಿರ್ಧಿಷ್ಟ ಕಾಲ ನಿಲ್ಲಿಸಿ ತನಿಖೆ ಮಾಡುವುದರೊಳಗೆ ಶತ್ರು ಪಾಳ್ಯದಲ್ಲಿ ಗೆಲುವು ಅವರದು ಎನ್ನುವ ಸಂಭ್ರಮ ಹುಟ್ಟತೊಡಗಿತ್ತು. ಮುಂದಾಗುವ ಬದಲಾವಣೆಗಳಿಗೆಲ್ಲ ಇದೊಂದು ಬೆಂಕಿಯ ಕಿಡಿಯಾಗಿ ಅವತರಿಸುವುದನ್ನು ಹೆಚ್ಚು ಜನರು ಅಂದು ಊಹಿಸಿಕೊಂಡಿರಲಿಕ್ಕಿಲ್ಲ.

ಈ ದುರ್ಘಟನೆಯ ಹಿನ್ನೆಲೆಯಲ್ಲಿ ಅಮೇರಿಕದ ಬದಲಾದ ವಿದೇಶಾಂಗ ನೀತಿ ಹಾಗೂ ಹೊಸದಾಗಿ ಸೃಷ್ಟಿಸಿದ ಹಲವಾರು ಅಡೆತಡೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೋ ಜನರಿಗೆ ಸಾಕಷ್ಟು ಅನಾನುಕೂಲವಾಗಿದ್ದರೂ ನನ್ನಂತಹ ಕೆಲಸಗಾರರಿಗೆ ಅದರಲ್ಲೂ ವೀಸಾದಲ್ಲಿರುವವರಿಗೆ ಬೇಕಾದಷ್ಟು ತೊಂದರೆಗಳಾಗಿವೆ. ಇಲ್ಲಿನ ಲೀಡರುಗಳು ಪದೇಪದೇ ಹೇಳುವ " “the world is much better off today...” ಎನ್ನುವ ಮಾತಂತೂ ನನ್ನನ್ನು ಬಹಳವಾಗಿ ಬಾಧಿಸುತ್ತದೆ. ಅಮೇರಿಕದ ಮೇಲೆ ಧಾಳಿ ನಡೆಸಿದ ಕಾರಣ ಪುರುಷ ಇನ್ನೂ ಇವರ ಕೈಗೆ ಸಿಕ್ಕಿಲ್ಲ, ಇರಾಕಿನ ಜವಾಬ್ದಾರಿ ಅಮೇರಿಕದ ಹೆಗಲಿಗೆ ಭಾರವಾಗಿ ಕಂಡುಬರುತ್ತಿದೆ, ಇಲ್ಲಿನ ಮಾಧ್ಯಮಗಳು ನಮ್ಮೆಲ್ಲರನ್ನೂ ಏನೇನೋ ಕಥೆಗಳನ್ನು ಹೇಳಿ ನಂಬಿಸಿಕೊಳ್ಳುವಂತೆ ತೋರುತ್ತದೆ. ನಮ್ಮ ನೆರೆಹೊರೆ ಧರ್ಮ ಹಾಗೂ ಉಳ್ಳವರ ನೆರಳಿನಲ್ಲಿ ಹೊಸ ರೀತಿಯಲ್ಲಿ ಇಬ್ಬಾಗವಾದಂತೆ ತೋರುತ್ತದೆ.

೨೦೦೪ ರಲ್ಲಿ ಬುಷ್ ಮತ್ತೊಮ್ಮೆ ಅಧಿಕಾರಕ್ಕೆ ಬಂದಂತೆ, ಇರಾಕ್ ಧಾಳಿಯನ್ನು ಸಾಧಿಸಿಕೊಂಡ ಹಲವಾರು ಧುರೀಣರು ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಇವರು ತಮ್ಮ ತಮ್ಮ ಜನಗಳಿಗೆಲ್ಲ ಮೋಡಿ ಮಾಡಿದ್ದಾರೋ ಅಥವಾ ಇವರನ್ನು ಎದುರಿಸಿ ಗೆಲ್ಲಬಲ್ಲ ಸಾಮರ್ಥ್ಯದವರು ಇಲ್ಲವೇ ಎನ್ನುವ ಅನುಮಾನ ಒಮ್ಮೆ ಮೂಡುತ್ತದೆ. ಅಮೇರಿಕದವರು ತಮ್ಮ ತಪ್ಪುಗಳನ್ನು ಇಂಟಲಿಜೆನ್ಸ್ ತಪ್ಪು ಎಂದು ದೂರಿ ಜಾರ್ಜ್ ಟೆನೆಟ್‌ಗೆ ಗೂಬೆ ಕೂರಿಸಲು ನೋಡುತ್ತಾರೆ, ಯುದ್ಧ ಖೈದಿಗಳಿಗೆ ಕ್ರೂರ ಶಿಕ್ಷೆ ವಿಧಿಸಿದ ಘಟನೆಯನ್ನು ಕುರಿತು ರಮ್ಸ್‌ಫೆಲ್ಡ್‌ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ಕೊಡುವುದು ಕಷ್ಟವಾಗುತ್ತದೆ, ಹಾಗೆ ಕೊಟ್ಟಿದ್ದರೂ ಅದನ್ನು ಸ್ವೀಕರಿಸಲು ಆಡಳಿತದವರಿಗೆ ಸರಿ ಎನ್ನಿಸುವುದಿಲ್ಲ. ೨೦೦೪ರಲ್ಲಿ ಬುಷ್ ವಿರುದ್ಧದ ಅಭ್ಯರ್ಥಿ ಜಾನ್ ಕೆರ್ರಿಗೆ ಜನಗಳ ಕಣ್ಣನ್ನು ನೋಡಿ ಗೇ ಮದುವೆಗಳ ಬಗ್ಗೆ ಡಿಸೈಸಿವ್ ಆಗಿ ಹೇಳಲು ಬರದೇ ದೊಡ್ಡ ವಾಕ್ಯಗಳಲ್ಲಿ ತಿಣುಕಾಡುವುದನ್ನು ನೋಡಿ ಇವನು ಗೆಲ್ಲೋದಿಲ್ಲ ಅನ್ನೋದು ಎಂತಹವರಿಗೂ ಗ್ಯಾರಂಟಿ ಆಗುತ್ತದೆ, ಅದೇ ಪ್ರಶ್ನೆಗೆ ಬುಷ್ ಅಂತಹವರು ಪಟ್ಟನೇ ಉತ್ತರವನ್ನು ಕೊಡುವುದನ್ನು ನೋಡಿ ಆಶ್ಚರ್ಯವಾಗುತ್ತದೆ - ಎಷ್ಟೋ ಜನರು ಹೇಳಿದಂತೆ ಇದೊಂದೇ ಸನ್ನಿವೇಶ ಸಾಕು ಕೆರ್ರಿ ಸೆನೆಟರ್ ಆಗೇ ಉಳಿಯಲು.

ಅಫಘಾನಿಸ್ತಾನದವರು ಪ್ರಜಾಪ್ರಭುತ್ವದ ರುಚಿಯನ್ನು ಉಂಡದ್ದಾಯಿತು, ಊಟ ರುಚಿಸಲಿಲ್ಲವೆಂದು ಕಾಣಿಸುತ್ತೆ, ದಕ್ಷಿಣ ದಿಕ್ಕಿನಿಂದ ನಿಧಾನವಾಗಿ ಕ್ರೂರಿಗಳ ಆಟಾಟೋಪ ತಲೆ ಎತ್ತುತ್ತಿದೆ. After all, ಪ್ರಜಾಪ್ರಭುತ್ವವೇ ಜಗತ್ತಿನ ಬೆಳಕೇ? ಹಾಗಿದ್ದರೆ ಜಗತ್ತಿನಲ್ಲೇ ಹೆಚ್ಚು ಜನರಿರುವ ಚೀನಾದಂತಹ ದೇಶದಲ್ಲಿ ಪ್ರಜಾಪ್ರಭುತ್ವವೇಕಿಲ್ಲ? ಪ್ರಪಂಚದಲ್ಲಿರುವ ದೇಶಗಳೆಲ್ಲ ಭಯೋತ್ಪಾದಕರ ಸೊಲ್ಲಡಗಿಸಲು ಅಮೇರಿಕೆಯ ಜೊತೆ ಕೈ ಗೂಡಿಸಿದರೆ ಭಯೋತ್ಪಾದಕರುಗಳೇನು ಚಂದ್ರಲೋಕಕ್ಕೆ ಹೋಗೋದಿಲ್ಲವಲ್ಲ! ಪ್ರಜಾಪ್ರಭುತ್ವವನ್ನು ಆಧರಿಸಿದ, ಯುದ್ಧಕ್ಕೆ ಸನ್ನದ್ದವಾಗಿರುವ ಸೇನೆ ಯಾರ ಮೇಲೆ ಯುದ್ಧ ಮಾಡುತ್ತಿದೆ ಎನ್ನುವುದು ಇನ್ನೂ ನಿಗೂಢವೇ.

ಬುಷ್ ಆಡಳಿತದ ಇಲ್ಲೀವರೆಗಿನ ದಿನಗಳು ಬೆಂಕಿಯುನ್ನು ನಂದಿಸುವುದರಲ್ಲೇ ಕಳೆದವು. ಇತ್ತೀಚೆಗೆ ನಿವೃತ್ತರಾಗುತ್ತಿರುವವರಿಗೇನೋ ಸೋಷಿಯಲ್ ಸೆಕ್ಯುರಿಟಿ ಹಣ ಸಿಗುತ್ತಿದೆ, ಮುಂದೆ ಹೀಗೆ ಎಂದು ಯಾರೂ ಹೇಳುವವರಿಲ್ಲ. ಕಟ್ರೀನಾ ಅನ್ನೋ ಚಂಡಮಾರುತ ಈ ದೇಶದ ಎಮರ್ಜೆನ್ಸಿ ಪ್ರಿಪೇರ್ಡ್‌ನೆಸ್ಸನ್ನು ಧೂಳೀಪಟ ಮಾಡಿಹಾಕುತ್ತದೆ, ಇವರ ಹೆಚ್ಚು ಹೆಚ್ಚು ತಯಾರಿಯಲ್ಲೇ ಏನೋ ಕೊರತೆಯಾದಂತೆ ಅನ್ನಿಸುತ್ತದೆ.

... ಹೀಗೆ ಈ ಐದು ವರ್ಷಗಳಲ್ಲಿ ಜಗತ್ತು ಬಹಳ ಬದಲಾಗಿದೆ, ಅಂತಾರಾಷ್ಟ್ರೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಐದು ವರ್ಷಗಳು ಐವತ್ತು ವರ್ಷಗಳೇನೋ ಅನ್ನಿಸುವಷ್ಟು ಭಾರವಾಗಿ ಕಾಣಿಸುತ್ತವೆ.

***

ಈ ಐದು ವರ್ಷಗಳಲ್ಲಿ ಯುದ್ಧವನ್ನು ಆರಂಭಿಸಿದ ಎರಡೂ ಕಡೆಯವರು ಇನ್ನೂ ಚಲಾವಣೆಯಲ್ಲಿದ್ದು ಅವರಿಗೇನೂ ಅಂತಹ ಕೊರತೆಯಾದಂತೆ ಮೇಲ್ನೋಟಕ್ಕೆ ಕಾಣಿಸುವುದಿಲ್ಲ, ಆದರೆ ಅಮಾಯಕರಿಗೆ, ಸಾಮಾನ್ಯ ಜನರಿಗೆ ಬೇಕಾದಷ್ಟು ಅನಾನುಕೂಲಗಳಾಗಿವೆ ಎನ್ನೋದಂತೂ ನಿಜ.

No comments: