Wednesday, August 23, 2006

ಗಣಿ ಹಗರಣ

೨೦೦೧ ರಲ್ಲಿ ತೆಹೆಲ್ಕಾ ದವರು ಬಂಗಾರು ಲಕ್ಷ್ಮಣ್ ಹಾಗೂ ಜಾರ್ಜ್ ಫರ್ನಾಂಡಿಸ್ ಅವರನ್ನು ಹಗರಣಗಳನ್ನು ಬಯಲು ಮಾಡುವುದರ ಮೂಲಕ ಮನೆಗೆ ಕಳಿಸಿದ ಸನ್ನಿವೇಶವನ್ನು ನೆನಪಿಸುವ ಹಾಗಿತ್ತು ಇಂದಿನ ಜನಾರ್ಧನ ರೆಡ್ಡಿ ಏಕ ವ್ಯಕ್ತಿ ಹೋರಾಟ. ಏನಾದರೂ ಮಾಡಿ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿಯೇ ತೀರುತ್ತೇನೆ ಎಂದು ಹಠ ಹೊತ್ತ ರೆಡ್ಡಿಗೆ ಸಿಕ್ಕಿದ್ದು ಮೇಲಿಂದ ಮೇಲೆ ಒಂದಿಷ್ಟು ಮಾನನಷ್ಟ ಮೊಕದ್ದಮೆಗಳು ಮಾತ್ರ. ಇತ್ತ ಅವರು ಗಣಿ ಹಗರಣದ ಆಧಾರವಾಗಿ ವಿಡಿಯೋವನ್ನು, ವಿವರವನ್ನು ಬಿಡುಗಡೆಮಾಡುತ್ತಿದ್ದಂತೆ ಅತ್ತ ಗೌಡರ ಗುಂಪಿನಲ್ಲಿ 'ಇದೆಲ್ಲಾ ಬರೀ ಸುಳ್ಳು' ಎಂದು ಕಾಲರ್ ಕೊಡಗಿಕೊಳ್ಳುವ ಕ್ರಿಯೆಗಳು ಒಟ್ಟೊಟ್ಟಿಗೆ ನಡೆದು ಆಶ್ಚರ್ಯದ ಮೇಲೆ ಆಶ್ಚರ್ಯ ಮೂಡಿಸಿತು.

ಈ ಗಣಿ ಹಗರಣ, ರೆಡ್ಡಿಯ ಏಕ ವ್ಯಕ್ತಿ ಶೋಧನೆ ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಂತೆ ಕೆಲವೊಂದು ಅಂಶಗಳು ಪ್ರಶ್ನಾತೀತವಾದವು - ವಿಡಿಯೋಗಳನ್ನು ರೆಡ್ಡಿಯವರು ಪಡೆದುಕೊಂಡಿದ್ದು ಹೇಗೆ? ಇನ್ನೊಬ್ಬರ ಬ್ಯಾಂಕ್ ಸಂಬಂಧಿ ಲೆಕ್ಕ ಪತ್ರಗಳ ನಕಲನ್ನು ಅವರು ಪಡೆಯಲು ಸಾಧ್ಯವಿದೆಯೇ? ಈ ರೀತಿ ಆಧಾರಗಳನ್ನು ಸಂಗ್ರಹಿಸಲು ಕಾನೂನು ಬಾಹಿರವಾದ ಕ್ರಮವನ್ನೇನಾದರೂ ಬಳಸಲಾಗಿದೆಯೇ? ಈಗಾಗಲೇ ಪಕ್ಷದಿಂದ ಅಮಾನತುಗೊಂಡಿರುವ ಜನಾರ್ಧನ ರೆಡ್ಡಿಯವರ ಆಶೋತ್ತರಗಳೇನು? ಅಕಸ್ಮಾತ್ ನೂರಾ ಐವತ್ತು ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ಹಗರಣ ನಡೆದೇ ಇದೆ ಎನ್ನೋದಾದರೆ ಹಣಕಾಸನ್ನು ಟ್ಯಾಕ್ ಮಾಡಿದರೆ 'ಸುಲಭ'ವಾಗಿ ಸಿಗಬಹುದಾದ ನೆಲೆಯನ್ನು ಹುಡುಕಲು ಸರ್ಕಾರ ಏನು ಮಾಡಿದೆ - ಅಥವಾ ಕಪ್ಪು ಹಣದ ನೆರಳಿನಲ್ಲಿ ನೂರಾ ಐವತ್ತು ಕೋಟಿಯೂ ಯಾವುದೇ ಟ್ರೇಸ್ ಇಲ್ಲದೇ ನುಂಗಿ ನೀರು ಕುಡಿಯಬಹುದಾದ ಪರಿಸ್ಥಿತಿ ಇವತ್ತಿಗೂ ಇದೆಯೇ?

ರೆಡ್ಡಿಯವರ ಧ್ಯೋತಕ ಏನಾದರೂ ಇರಲಿ ಅವರ ಮಾತಿನುದ್ದಕ್ಕೂ ಅವ್ಯಾಹತವಾಗಿ ಸರ್ಕಾರವನ್ನು ಬೀಳಿಸುವ ಹಲವಾರು ಅಂಶಗಳು ಸೂಚ್ಯವಾಗಿ ಗೊತ್ತಾದವು. ಸತ್ಯವನ್ನು ಆಗ್ರಹಿಸಿ ನಾಡಿಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚಾದ ನಿರೀಕ್ಷೆಯೇನಾದರೂ ಇದೆಯೇನೋ ಎಂದು ಒಮ್ಮೆ ಅನ್ನಿಸದೇ ಇರಲಿಲ್ಲ. ಮೊದಲೇ ದೋಸ್ತೀ ಸರ್ಕಾರ, ಆಡಳಿತಕ್ಕೆ ಬಂದ ಆರು ತಿಂಗಳಿನಲ್ಲಿಯೇ ಹಲವಾರು ಜನರನ್ನು ಎದುರು ಹಾಕಿಕೊಂಡಿದೆ, ಕೊನೇಪಕ್ಷ ಏನಿಲ್ಲವೆಂದರೂ ಹನ್ನೆರಡು ಜನ ಶಾಸಕರು ವಿರೋಧದ ಧ್ವನಿ ಎತ್ತಿದ್ದಾರೆ. ಆ ನಿಟ್ಟಿನಲ್ಲಿಯೇ ಸರ್ಕಾರ ಇಂದೋ ನಾಳೆ ಎನ್ನುವ ಸ್ಥಿತಿಯಲ್ಲಿದೆ. ಇಷ್ಟೆಲ್ಲಾ ಅಡೆತಡೆಗಳನ್ನು ಹೊಟ್ಟೆ ಒಳಗೇ ಇಟ್ಟುಕೊಂಡು ಪ್ರಗತಿಪರ ಚಟುವಟಿಕೆಗಳ ಮೇಲೆ ಗಮನ ಇಡುತ್ತಿರುವ ಶಾಸನಕ್ಕೆ ಪದೇಪದೇ ಒಂದಲ್ಲ ಒಂದು ರೀತಿಯ ಪೆಟ್ಟು ಬೀಳುತ್ತಿರುವುದು ನಾಡಿನ ಹಿತದೃಷ್ಟಿಯಿಂದ ಅಷ್ಟೊಂದು ಕ್ಷೇಮವಲ್ಲ. ಸರ್ಕಾರದ ವಿರುದ್ಧ ಏಳಬಹುದಾದ ಪ್ರತಿಯೊಂದು ಅಲೆಯೂ ಏಳಿಗೆಯೆನ್ನುವ ದಡಕ್ಕೆ ಬಂದಪ್ಪಳಿಸುತ್ತಲೇ ಇರುತ್ತದೆ, ಇದರ ಸಮಗ್ರ ಬೆಳವಣಿಗೆ ಕುಂಠಿತವಾಗುತ್ತದೆ. ಗೌಡರ ಬಳಗದಲ್ಲೂ ಅಷ್ಟೇ, ಅವರಾದರೂ ಈ ಗಣಿ ಸಂಬಂಧಿ ಆರೋಪಗಳನ್ನು ಸರಿಯಾಗಿ ಎದುರಿಸಿದ್ದಾರೆ ಎಂದು ನನಗನ್ನಿಸುವುದಿಲ್ಲ - ಕಾನೂನಿನ ಪ್ರಕಾರ ಕ್ರಮವನ್ನೇನೋ ಕೈಗೊಳ್ಳಲು ಚಾಲನೆ ನೀಡಿದ್ದಾರೆ ಅದೂ ಬಹಳ ತಡವಾಗಿ ಆರಂಭವಾಯಿತು. ಹೆಚ್ಚಿನವು ಎಮೋಷನಲ್ ಪ್ರತಿಕ್ರಿಯೆಯಾಗಿ ಕಂಡುಬಂದವೇ ವಿನಾ ಒಂದು 'ಸುಳ್ಳಿನ' ಹುಟ್ಟಡಗಿಸುವ ಜಾಣತನದ ಧ್ಯೋತಕವಾಗಿ ನನಗೆಂದೂ ಕಂಡುಬಂದಿಲ್ಲ.

ಒಂದು ಕಡೆ ರೆಡ್ಡಿಯವರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ತಪ್ಪು/ಸರಿ ಎನ್ನುವುದನ್ನು ನಿಗದಿ ಮಾಡುವುದಕ್ಕಾಗಲೀ ಮತ್ತೊಂದು ಕಡೆ ಅವ್ಯವಹಾರ ನಡೆದಿದ್ದರೆ ಹಣಕಾಸಿನ ಜಾಲವನ್ನು ಪತ್ತೆ ಹಚ್ಚುವುದರ ಮೂಲಕ ಸತ್ಯವನ್ನು ಬಹಿರಂಗಪಡಿಸುವುದಕ್ಕಾಗಲಿ ಇಷ್ಟೊಂದು ಸಮಯ ಏಕೆ ಹಿಡಿದೀತು ಎನ್ನುವುದು ನನ್ನನ್ನು ಮೀರಿದ ಮಾತು. ಆದರೆ ಕ್ಷುಲ್ಲಕ ಆಪಾದನೆಗಳ ಬೆನ್ನು ಹತ್ತಿ ಮಾಡುವ ವಾದಗಳಲ್ಲಿ ಹಾಗೂ ನಿಜವಾದ ಹಗರಣ ನಡೆದಿದೆಯೋ ಇಲ್ಲವೋ ಎನ್ನುವ ವಿಷಯದಿಂದ ದೂರ ಹೋಗುವ ಉಳಿದೆಲ್ಲ ಪ್ರಕ್ರಿಯೆಗಳಲ್ಲಿ ನಾಡಿನ ಪ್ರಗತಿಯನ್ನು ಬಲಿಕೊಡಲಾಗುತ್ತಿದೆ ಎನ್ನಿಸಿತು. ಸತ್ಯವನ್ನು ಆಗ್ರಹಿಸುವವರಿಗೆ ಸತ್ಯಕ್ಕಿಂತಲೂ ಮತ್ತೇನೋ ವಿಧವಿಧವಾದ ಮೋಟಿವೇಶನ್‌ಗಳಿರೋದು ಅವರು ಪ್ರದರ್ಶಿಸುವ "ಸತ್ಯ"ವನ್ನೇ ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.

No comments: